ಭಾನುವಾರ, ಜುಲೈ 23, 2017

ಚಹ - ಜೀವನ

ಸುತ್ತ ಕತ್ತಲಾವರಿಸಿರೋ ವೇಳೆ 
ಜೀವಸೂರ್ಯ ಅಸ್ತಮಿಸೋ ಹೊತ್ತು 
ಒಲೆಯ ಮೇಲೆ ಉರಿವ ಬೆಂಕಿ 
ಧಗಿಸುತಿಹ ಜ್ವಾಲೆ ಮನದೊಳಗೂ.... 

ಮೊದಲ ಚಹ ಮಾಡಿದಾ ಅನುಭವ 
ಪ್ರಥಮ ಪ್ರೇಮದ ಸವಿ ಅನುಭಾವ 
ಎರಡರಲೂ ಕೈಸುಟ್ಟುಕೊಂಡ ಆ ಕ್ಷಣ 
ಎಲ್ಲಾ ಇದ್ದೂ ಮನದಿ ಶೂನ್ಯ ಭಣಭಣ....  

ಸೋಸುವಿಕೆಯಲಿ ಹೊಗೆಯಾಡಿಹ ಚಹ 
ಬಾಹ್ಯದಿ ತಂಪೆನಿಸಿದರೂ ವಾತಾವರಣ 
ಆಂತರ್ಯದಿ ಅಗ್ನಿಪುಷ್ಪದ ಕಾವು 
ದೂರ ಸರಿಸಿದ ತನ್ನವರ ಬಗೆಗಿನ ನೋವು.... 

ಮನಮೆಚ್ಚಿದ ಸಂಗಾತಿ ಜೊತೆಯಾಗಿರಲು 
ಬದುಕು ಕಂಡಿದೆ ತೃಪ್ತಿಯಾ ಸೂರು 
ಇಳಿವಯಸ್ಸಲೂ ಚಹದಲಿ ದುಡಿಮೆ 
ಕಿಂಚಿತ್ತೂ ಇಳಿದಿಲ್ಲ ಮಡದಿಯಾ ಒಲುಮೆ.... 

ಕ್ಷೀರಶರ್ಕರದ ಮಿಶ್ರಣವೇ ಬಾಳು 
ಕುದಿಯಬೇಕಿದೆ ಹದ ಬರುವ ತನಕ 
ಚಹಪುಡಿಯ ನವರಸವು ಬೆರೆತರೆ 
ಜೀವನದ ಪೇಯ ಸವಿದವನೇ ಧನ್ಯ 

 - R. R. B.

ಪಯಣ..

ಮರಳಬೇಕೇ ಮನೆಯ ಮಸಣಕೆ? 
ಅದೆಂದೋ ಸ್ವರ್ಗ ಸೇರಿದ ಮಡದಿ 
ಅಕಾಲ ಮರಣವನಪ್ಪಿದ ಮಗಳು 
ಪತ್ನಿಯ ಸೆರಗಲಿ ಮರೆಯಾಗೋ ಸು(ಕು)ಪುತ್ರ 
ಬಾಯಾರಿದಾಗ ನೀರೂ ನೀಡದ ಸೊಸೆ... 

ಪ್ರೀತಿ, ನೆಮ್ಮದಿಯಿಲ್ಲದ ಗೂಡಿಗಿಂತ 
ಪ್ರಶಾಂತ ಪಾಳುಮಂಟಪವೇ ಸುಂದರ 
ಪಲ್ಲವಿಸೆ ಚೆಂದ ನೆನಪುಗಳಾ ಹಂದರ.... 

ಹಾದಿಗುಂಟ ಹಾಸಿದ ಕಡುಕಪ್ಪು ಡಾಂಬರು 
ವೇಗದಿ ಸಂಚರಿಸೋ ಬಣ್ಣಬಣ್ಣದ ಕಾರು 
ಗಗನದ ಚಂಬನಕೆ ಕಾದಿರೋ ಕಟ್ಟಡ... 
ಎಲ್ಲಾ ಬರೀ ಅಕ್ಷಿಗಳಿಗಷ್ಟೇ ತಂಪು 
ಅಲ್ಲೂ ಇರಬಹುದು ಅಸಂತೃಪ್ತಿಯ ಧಗೆ 
ಶಾಂತವಾಗಿ ತಂತಿಯಲಿ ಹರಿವ ವಿದ್ಯತ್ತಿನಂತೆ..... 

ಮಾಸಿಲ್ಲವಿನ್ನೂ ಹೆಜ್ಜೆ ಮೂಡಿದ ಆ ಕಾಲುದಾರಿ 
ಕಷ್ಟಕೋಟಲೆಗಳಿಂದಾದ ಬದಕ ರಹದಾರಿ  
ಬೆವರನೇ ನೀರಾಗಿಸಿ ನಿರ್ಮಿಸಿದಾ ಮನೆ 
ಬದುಕ ಬದಲಿಸಿದ ಭಾವನೆಯ ಕರೆ 

ಅಸ್ತಮಿಸೋ ಆಸೆಯ ಹೊತ್ತ ಅರ್ಕ 
ಸರ್ವವನು ತ್ಯಜಿಸೋ ಸಣ್ಣ ಬಯಕೆ 
ಅದೇಕೋ ಹಿಂದಿರುಗೋ ಆಸೆಯಿಲ್ಲ 
ಮನಕೆ ಗೊಂದಲದಲೇ ನಿಲ್ಲದೇ ಸಾಗಿಬಿಡಲೇ?.. 
ಎಂದೂ ಊಹಿಸದ ಆ ಅಸಂಕಲ್ಪಿತ ಗಮ್ಯದೆಡೆಗೆ.... 

 - R. R. B.

ಅಪೇಕ್ಷೆಯೊಡನೆ..

ಚರಿತಾಥ೯ವು ಆಕಾಂಕ್ಷೆಗಳ ಹಂದರ 
ಕರಿಬಾನಲಿ ನಗುತಿಹನು ಚಂದಿರ 
ಮನದಲಿ ಬಯಕೆಗಳು ಸಹಸ್ರಾರು 
ಶಿರದಿ ಆಲೋಚನೆಗಳದೇ ಕಾರುಬಾರು 

ಏರಲು ಸಾಧನೆಯೆಂಬ ಗಿರಿಶಿಖರ 
ಬಾರದಿರಲಿ ದೃಢ ಇಚ್ಛೆಗಳಿಗೆ ಬರ 
ನಭದೆತ್ತರಕೆ ಹಾರಾಡುವ ಇಚ್ಛೆ 
ಪೃಥ್ವಿಯ ಆಳಕೆ ಇಳಿಯುವ ಇಚ್ಛೆ 

ಎಲ್ಲರೊಳಗೂಡಿ ಬಾಳುವ ಇಚ್ಛೆ... 
ಅನಂತಾನಂತವಾದ ಅಂತರಿಕ್ಷದಂತೆ 
ಇಚ್ಛಾಶಕ್ತಿಗಿಲ್ಲ ಯಾವ ಇತಿಮಿತಿ.... 

ತನಗಿಂತ ಭಾರವನೆ ಹೊರುವ ಇರುವೆ 
ಇಚ್ಛೆಯೆಂಬ ಪ್ರೇರಣೆಗೆ ಸಾದೃಶ್ಯ 
ಸಾಧಿಸಬೇಕೆಂಬ ತುಡಿತ ಕನಸಾಗಿ, 
ಆಕಾಂಕ್ಷೆಯಾಗಿ, ಪ್ರೇರಕಶಕ್ತಿಯಾಗೆ 
ಏರಬಹುದು ಪರ್ವತದೆತ್ತರಕ್ಕೆ... 
ಸಾಧಿಸಬಹುದು ಜೀವನದ ಉದ್ದಕ್ಕೆ .. 
ಅಪೇಕ್ಷೆಯೊಡನೆ ಪರಿಶ್ರಮವು ಕೂಡೆ 
ಸಂಪ್ರಾಪ್ತವಾಗುವುದು ಕಾರ್ಯಸಿದ್ಧಿ ! 

 - R. R. B.

ಶೃಂಗಾರ

ಕಾದಿರುವ ಇಳೆಗೆ ಮಳೆಹನಿಯ ಸ್ಪರ್ಷ 
ಸಂಚಯನವೀಗ ಮನದಿ ನವಹರ್ಷ 
ಆಗಸದಿ ಮೇಘಗಳ ಸುಂದರ ಚಿತ್ತಾರ 
ನಿರಂತರ ಸಾಗುತಿವೆ ಕಲ್ಪನಾವಿಹಾರ.... 

ಸೊಗಸಾದ ಹಳ್ಳಿಯ ಹೆಂಚಿನಾ ಮನೆ 
ಪಲ್ಲವಿಸಿ ನಿಂತಿಹ ನೆನಪಿನಾ ಅಂಗಳ 
ಕಥೆ ಹೇಳಲಾರಂಭಿಸಿದ ಆರ್ದೃವಿತ ಕಂಬ 
ನವೋಲ್ಲಾಸಕೆ ನವಿರಾದ ಭಾಷ್ಯ ಲಿಖಿತ.... 

ಮುಂಗಾರಲಿ ಮೈಯೊಡ್ಡಿ ನೆನೆವ ಸಂಭ್ರಮ 
ಹರೆಯದಾ ತನುವಿಗೆ ಬಯಕೆಗಳ ಸಂಗಮ 
ಹನಿ - ಹನಿಯಲೂ ಸೊಬಗ ಸುರಿವ ವರ್ಷಧಾರೆ 
ತೊಟ್ಟಿರುವ ಉಡುಪಿಗೂ ಒದ್ದೆಯಾಗುವ ಕಾತುರ.... 

ಅಲ್ಲಲ್ಲಿ ಫಲಬಿಟ್ಟ ಕಲ್ಪ ವೃಕ್ಷಗಳ ಸಾಲು 
ಮನೆಯಂಗಳದಿ ಹುಲುಸಾಗಿ ಚಿಗುರಿದಾ ಚಪ್ಪರ 
ವರುಣನ ಬಿಂದುಗಳಲಿ ತೊಯ್ದ ಮುಗ್ಧಜೀವ 
ಅಕ್ಷಿಗಳಿಗೀಗ ಅಮೂರ್ತ ಆನಂದದ ಅನುಭಾವ.... 

ಮಳೆಗೆ ಮಣ್ಣಿಂದ ಒಸರುವಾ ಪರಿಮಳ 
ಛಾವಣಿಯಿಂದ ಪಟಪಟನೆ ಬೀಳುವ ಧಾರೆ 
ಕಿಟಕಿ ದಾಟಿ ಒಳಸೇರುವ ಮಳೆಹನಿಗಳ ಯತ್ನ 
ಗ್ರೀಷ್ಮದಿ ವಾತಾವರಣಕೆ ವರ್ಷದಾ ಶೃಂಗಾರ... 

 - R. R. B.

ಅದ್ಭುತ

ಹೆಗಲ ಮೇಲೆ ಹೊತ್ತು ಸಾಗುವ 
ತೊಡೆ ಮೇಲೆ ಕೂರಿಸಿ ಕಥೆ ಹೇಳುವ 
ಕಣ್ಣಂಚಿನಲಿ ನೀರು ತುಂಬಿದಾಗೆಲ್ಲ 
ಕಂಬನಿ ಕೆಳಜಾರುವಾ ಮುನ್ನ ಒರೆಸುವ 
ಆ ಕೈಗಳು ಪ್ರೀತಿಯ ಅಪ್ಪನದೇ....

ಬೇಸರವಾದಾಗೆಲ್ಲ ನಕ್ಕು ನಗಿಸುವ 
ತಂಗಿಗೆಂದು ವಿವಿಧ ಉಡುಗೊರೆ ತರುವ 
ಆಗಾಗ ರೇಗಿಸುತ ಕಾಡಿಸಿದರೂ 
ಸಮಸ್ಯೆಗಳಿಗೆ ಸಮಪ೯ಕವಾಗಿ ಸ್ಪಂದಿಸುವ 
ಆ ಮನ ಅಕ್ಕರೆಯ ಅಣ್ಣನದೇನೆ.... 

ಒಂದು ಚಾಕಲೇಟಿಗಾಗಿ ಕಾದಾಡುತ್ತ 
ನಿತ್ಯ ಮನೆಯಲಿ ಮಹಾಯುದ್ಧ ಮಾಡುತ್ತ 
ಆಗಾಗ ಮುನಿಸಿನಿಂದ ಮೌನವಾಗುತ್ತ 
ಮತ್ತರೆಕ್ಷಣಕೆ ನಗುತ ಜೊತೆಯಾಗುವ 
ಆ ಮುಗ್ಧ ಜೀವ ಮುದ್ದು ತಮ್ಮನದೇ.... 

ಸ್ನೇಹಸೌರಭಕೆ ಸಾಕ್ಷಿಯಾಗಿ 
ಭಾವಗಳ ಹಂಚಿಕೆಗೆ ವೇದಿಕೆಯಾಗಿ 
ಕಿತ್ತಾಡುತ, ರೇಗಾಡುತ ಕಾಲಕಳೆದರೂ 
ಕಷ್ಟಕಾಲಕೆ ಸಹಾಯ ಹಸ್ತ ಚಾಚುವ 
ಆ ಮಿತ್ರ ಹೃದಯ ಗೆಳೆಯನದೇನೆ.... 

ಭಾವಗಳ ಸಪ್ತಪದಿಗೆ ಜೊತೆಯಾಗಿ 
ಸುಖ-ದುಃಖಗಳಲಿ ಸಮಭಾಗಿಯಾಗಿ 
ಸರಸ-ವಿರಸಗಳೆಷ್ಟೇ ಒಳಗಿರಲಿ 
ಕೊನೆವರೆಗೂ ಸಂಗಾತಿಯಾಗಿ 
ಹೆಜ್ಜೆಹಾಕುವ 
ಬಾಳ ಬೆಳಗುವ ಸೂರ್ಯ ಗಂಡನೇನೆ.... 

ಬದುಕಿನ ವಿವಿಧ ಸ್ತರಗಳಲಿ 
ವಿಭಿನ್ನವಾದ ಸಂಬಂಧಗಳಲಿ 
ವನಿತೆಯ ಜೊತೆಯಾಗುವ 
ಸೃಷ್ಟಿಯ ಒಂದು ಅದ್ಭುತ - ಪುರುಷ...  

-R. R. B.

ಸಂಪ್ರೀತಿ

ಗಾಳಿಗೊಲೆವ ಎಲೆಗಳಿಂದ 
ಬಿರಿದು ಅರಳುವ ಪುಷ್ಪಗಳಿಂದ 
ಗುಟುಕ ತರುವ ಹಕ್ಕಿಗಳಿಂದ 
ಹಾರಾಡುವ ಪಾತರಗಿತ್ತಿಗಳಿಂದ 
ಮಳೆಗೆ ಕಾಯ್ವ ಮಂಡೂಕದಿಂದ 
ಕಾಳ ತರುವ ಇರುವೆರಾಯನಿಂದ 
ಮಕರಂದ ಕೂಡುವ ಜೇನಿನಿಂದ 
ಶ್ರಮಜೀವಿಯಾದ ಅನ್ನದಾತನಿಂದ 
ಬೆಳಕ ಕೊಡುವ ಅಕ೯ನಿಂದ 
ತಂಪನೆರೆಯುವ ಶಶಾಂಕನಿಂದ 
ನಿಲ್ಲದೇ ಬೀಸುವ ಪವನದಿಂದ 
ಅವಕಾಶ ಹೊಂದಿದ ಆಕಾಶದಿಂದ 
ಸಹನಾಮಯಿ ವಸುಂಧರೆಯಿಂದ 
ಸಾವ೯ಕಾಲಿಕದ್ರವ ಉದಕದಿಂದ 
ಕೆಡುಕ ನಾಶಗೈವ ಅಗ್ನಿದೇವನಿಂದ 
ಕರುಣಾಳು ಪ್ರಕೃತಿ ಮಾತೆಯಿಂದ 
ಮಮತಾಮಯಿ ತಾಯಿಯಿಂದ 
ಪ್ರತಿಯೊಂದು ಚರಾಚರಗಳಿಂದ 
ಕಲಿಯಬಹುದು ಒಂದೊಂದು ನೀತಿ 
ಜೀವನದ ಬಗೆಗಿನ ಸಂಪ್ರೀತಿ... 

 - R. R. B.

ನೆನಪಿನಂಗಳದಿಂದ..

ಗತಕಾಲದ ಆ ದಿನಗಳು 
ಕಳೆದ ಮಧುರ ಕ್ಷಣಗಳು 
ಬರೀ ಪದಗಳಲಿ ಹೇಳಲಾದೀತೆ? 
ಭಾವಗಳ ಅಭಿವ್ಯಕ್ತಗೊಳಿಸಲಾದೀತೆ?.. 

ರಸ್ತೆಯ ತುಂಬೆಲ್ಲಾ ಓಡಾಡಿ 
ಹುಣಸೆಕಾಯಿಗಾಗಿ ಕಿತ್ತಾಡಿ 
ಶಾಲೆ ಬಿಡುವುದೇ ಕಾಯುತ್ತ 
ಮನದಿ ಮಂಡಿಗೆ ತಿನ್ನುತ್ತಿದ್ದ ಕಾಲ..... 

ತರಗತಿಯನ್ನೇ ವಿಭಾಗಿಸಿ 
ನಮಗಿಷ್ಟು - ನಿಮಗಿಷ್ಟೆಂದು 
ಶಿಕ್ಷಕರ ಮುಂದೇ ಕಚ್ಚಾಡಿ 
ಬೈಸಿಕೊಂಡೂ, ನಗುತ್ತಿದ್ದ ಸಮಯ...

ನಾವೇ ಸಾಧಕರು ಎಂಬಂತೆ 
ಪಾಥೇ೯ನಿಯಂ ಗಿಡದ ಕೋಲು ತಂದು 
ಇಂಗ್ಲೀಷ್ ನ ಪ್ರಶ್ನೆಗಳಿಗೆ ಉತ್ತರಿಸದೇ 
ತಂದ ಕೋಲಿಂದ ಏಟು ತಿಂದ ಘಳಿಗೆ..... 

ಪ್ರತಿಭಾ ಕಾರಂಜಿ ನೆಪ ಹೇಳಿ 
ತರಗತಿಗಳ ತಪ್ಪಿಸುತ್ತ 
ಆಟಕೆ ಬಿಡಿ ಸರ್.. ಎಂದು 
 ಗುರುಗಳ ಒತ್ತಾಯಿಸುತ್ತಿದ್ದ ಅವಧಿ...

ಹಿರಿಯರು ಕೊಟ್ಟ ಹಣ ಕೂಡಿಡುತ್ತ 
ಜಾತ್ರೆಯ ಬರುವಿಕೆಗಾಗಿ ಕಾಯುತ್ತ 
ಏನು ಕೊಳ್ಳೋಣವೆಂದು ಆಲೋಚಿಸುತ್ತ 
ಕನಸು ಕಾಣುತ್ತಿದ್ದ ದಿನಗಳು....

ಕಳೆದ ಒಂದೊಂದು ರಸನಿಮಿಷ 
ತನ್ನೊಳಗಡಗಿಸಿಕೊಂಡಿತ್ತು ಹರುಷ 
ಬೇಕಾಗಿದೆ ಅಂತಹ ದಿನಗಳು 
ಮುಗ್ಧತೆಯೇ ತುಂಬಿಹ ಮನಗಳು.....

 - R. R. B.

ಕನಸ ನನಸಾಗಿಸಲು..

ಮುಂಜಾನೆಯ ಮಂಜಿನಲಿ 
ಅಂತರಂಗದಿ ನೂತನ ಕನಸು 
ನವಿರಾದ ಭಾವದಲಿ ಮನಸು 
ಹದವಾಗಿಹೆ ಹೃದಯ ಬಡಿತ 
ಸಾಧಿಸಬೇಕೆಂಬ ತೀವ್ರ ತುಡಿತ 
ಏರುಪೇರಿದ್ದರೂ ಜೀವನದ ದಾರಿ 
ದಿಟ್ಟತನದಿ ಮೂಡುವ ಸ್ಪಷ್ಟ ಗುರಿ 
ಉಜ್ಜೀವನದ ಕನಸಿನ ಪಥದಲ್ಲಿ 
ಅವಸರಗಳೇನೂ ಇಲ್ಲವಿಹುದಿಲ್ಲಿ 
ಪ್ರತಿಕ್ಷಣವೂ ಬಹಳ ಸುಂದರ 
ಅನುದಿನವೂ ಆಕಾಂಕ್ಷೆಗಳ ಹಂದರ 
ಹಗಲಿನ ಸಪ್ತಾಶ್ವರೂಢನೂ ಅಂದ 
ಇರುಳಿನ ಕ್ಷೀರೋದತನಯನೂ ಚೆಂದ 
ಲಭಿಸುವವರೆಲ್ಲ ಪ್ರೀತಿಪಾತ್ರರು 
ಮನದಂಗಳಕೆ ಬಲು ಸಾಮೀಪ್ಯರು 
ಕನಸನು ನನಸಾಗಿಸುವತ್ತ 
ಮೆಲ್ಲಮೆಲ್ಲನೆ ಇಡುತಿರೆ ಹೆಜ್ಜೆ 
ಪ್ರಶಾಂತವಾದ ವಾತಾವರಣದಿ 
ಘಲ್ಲು ಘಲ್ಲೆನುತಿದೆ ಗೆಜ್ಜೆ 
ಹೆಜ್ಜೆಯ ಗೆಜ್ಜೆಯ ಸಪ್ಪಳ 
ದೂರಾಗಿಸುತಿಹೆ ತಳಮಳ 
ಮಾಗ೯ವೀಗ ಬಲು ಸ್ಪಷ್ಟ 
ಉಪಕ್ರಮಿಸಲು ಇಲ್ಲ ಯಾವ ಕಷ್ಟ. 

 - R. R. B.

ಕವಲೊಡೆದ ದಾರಿಯಲಿ..

 ಭಾವವೀಣೆಯ ಮಿಡಿತದಿ 
ನೂರಾರು ಸ್ವರಗಳು ಸಹಸ್ರಾರು ಭಾವನೆಗಳು 
ಒಮ್ಮೆ ಸಂತಸದ ಹಾಡು 
ಇನ್ನೊಮ್ಮೆ ಸಂತಾಪದ ಪಾಡು... 

ಜೀವವೀಣೆಯ ಮೇಲೆ 
ಅರಿಷಡ್ವಗ೯ಗಳ ಕುಣಿತ 
ಅನೇಕ ಕಡೆಗಳಿಂದ ಸೆಳೆತ 
ಒಂದು ಗುರಿಯಾದರೆ ತೆಂಕಣ 
ಮತ್ತೊಂದು ಬಹುದೂರ ಬಡಗಣ... 

ಆ ಕನಸನು ಬಿಡಲಸಾಧ್ಯ 
ಇನ್ನೊಂದು ಭಾವಗಳಿಗೆ ಅತಿವೇದ್ಯ 
ಮಾಗ೯ಮಧ್ಯೆ ಒಡೆದಿದೆ ಕವಲು 
ಮನಮಕ೯ಟವು ಬಲು ಚಂಚಲ 
ಶಿರದಲ್ಲೀಗ ಹಲವು ಗೊಂದಲ... 

ಮನಕೆ ಅರಿವಿಲ್ಲದಂತೆಯೇ 
ಬೆಸೆದಿಹುದು ಗಟ್ಟಿಯಾದ ನಂಟು 
ಅದೀಗ ಬಿಡಿಸಲಾಗದ ಕಗ್ಗಂಟು 
ವಿಭಿನ್ನ ದಾರಿಗಳ ನಡುವೆ 
ನಿಮಿ೯ಸಬೇಕಿದೆ ಸುಂದರ ಸೇತುವೆ. 

- R. R. B.

ಭಾವಗಳ ಮಿಲನ

 ಈ ನಾಲ್ಕು ದಿನದ ಬಾಳಲಿ 
ಮುಳುಗಿದ್ದೆ ಹಲವು ಗೋಳಲಿ 
ಗೆಳೆಯ, ನೀನು ಅನಿರೀಕ್ಷಿತ 
ಈಗ ಆದೆ ಚಿರಪರಿಚಿತ 

ಎರಡೇ ಎರಡು ದಿನ 
ಆಯಿತು ಭಾವಗಳ ಮಿಲನ 
ಹೃದಯದಿ ಹೊಸ ಸಂಚಲನ 
ಕಲ್ಲಾಗಿತ್ತು ನನ್ನ ಈ ಮನ 

ಹೂವಾಗಿಸಿತು ನಿನ್ನಾಗಮನ 
ಹಂಚಿಕೊಂಡೆ ಅನೇಕ ಅನುಭವ 
ಭಾವಲಹರಿಯ ಅನುಭಾವ 
ಕಳೆದ ಕೆಲವೇ ಕ್ಷಣಗಳು 
ಬದುಕಿನ ಸ್ವಣ೯ನಿಮಿಷಗಳು 

ನಿನ್ನ ನಿಷ್ಕಲ್ಮಷ ಪ್ರೇಮ 
ಮುಗ್ಧಗೊಳಿಸಿತು ನನ್ನ... 
ನಿನ್ನ ಆಗಮನಕೆ ತಪನೆ 
ಕಾಯುತಿರುವೆ ಒಂದೇ ಸಮನೆ 

ದೂರವಾಗದಿರು ಸ್ನೇಹಿತ 
ಸನಿಹವೇ ಇರು ಜೀವಿತ... 
ನಿನಗೆ ಭಾವನೆಗಳ ಅಘ್ಯ೯ 
ಮನದಂಗಳವೀಗ ಹಚ್ಚಹಸಿರು 
ಇದ್ದರೆ ನಿನ್ನ ಪರಿಶುದ್ಧ ಒಲುಮೆ 
ನಾನೆಂದೂ ಉತ್ಸಾಹದ ಚಿಲುಮೆ 

 - R. R. B.

ಹೊಂಗನಸು

ಕನಸು ಕಾಣಬೇಕಿದೆ 
ಸಿಹಿನಿದ್ದೆಯೊಳಗಲ್ಲ. 
ಪ್ರಜ್ಞೆಯಲ್ಲಿ ಇರುವಾಗ 
ಮನಸು ಶಾಂತವಾದಾಗ. 
ಸ್ವಪ್ನವೆಂದರೆ ಬೆನ್ನಿಗೆ ರೆಕ್ಕೆ ಕಟ್ಟಿ 
ಹಾರುವುದಲ್ಲ ಕನಸೆಂದರೆ.......... 
ಉಜ್ಜೀವನ ನಡೆಸುವತ್ತ 
ಬದುಕಿನ ಸತ್ಯ ಅರಿಯುವತ್ತ 
ಉತ್ತಮ ನಾಳೆಯ ಗಳಿಸುವತ್ತ 
ಸುರಕ್ಷತೆಯ ಶೋಧಿಸುತ್ತ 
ಒಲುಮೆಯ ಒಲವಿನತ್ತ 
ಸಾಧನೆಯ ಶಿಖರದತ್ತ 
ಅಹಮಿಕೆಯ ದೂರಾಗಿಸುತ್ತ 
ಸಾಗುವ ಹಾದಿಯ ಸುಂದರ ಕಲ್ಪನೆ.. 
ಹಲವು ತೊಂದರೆಗಳೆಡೆಯಲಿ 
ಗುರಿಯ ಸ್ಮರಿಸುವಂಥಹ 
ಮನದಾಳದ ತುಮುಲವದು.. 
ತನು ಪಡೆಯುವಾಗ ವಿಶ್ರಾಂತಿ 
ಮನಕೆ ಹೊಂಗನಸಿನ ಹೊಸ ಕಾಂತಿ. 
ನಾನೂ ಕನಸು ಕಾಣುತ್ತಿದ್ದೇನೆ - 
ಸಿಹಿನಿದ್ದೆಯಲ್ಲಲ್ಲ, 
ಹಗಲುಗನಸೂ ಅಲ್ಲ. 

 - R. R. B.

ಕಾಲೆಳೆಯುವವರು

ಎಲ್ಲರೂ ಕಾಲೆಳೆಯುವಾಗ 
ಮನದಿ ಏನೋ ತಲ್ಲಣ... 
ಎಲ್ಲರೆಂದರೆ ಸವ೯ರಲ್ಲ 
ಬಹುಸಂಖ್ಯಾತರಷ್ಟೆ. 
ಕಾಲೆಳೆವವರೇ ಹೆಚ್ಚಾದರೆ 
ಕೈ ಹಿಡಿದು ನಡೆಸುವರಾರು? 
ದಾರಿ ತೋರುವವರಾರು? 
ಗುರುವಿಲ್ಲದೇ ಕಲಿಯಲು 
ಎಲ್ಲರೂ ಏಕಲವ್ಯರಲ್ಲ. 
ಸಾಮಾನ್ಯರೊಳ ಸಾಮಾನ್ಯೆ ನಾನು 
ಪ್ರೇರಣೆ ನೀಡದಿರೆ ಓ.ಕೆ. 
ಆದರೆ ಭಯಪಡಿಸುವುದೇಕೆ? 
ವಿಶಾಲವಾದ ಈ ಜಗದಲಿ 
ಯಾರನ್ನೆಂದು ನಂಬಲಿ? 
ಬೇಕು ಪ್ರೀತಿಯ ಅಂಬಲಿ 
ಸಿರಿವಂತಿಕೆಯ ದಪ೯ ಸಾಕು 
ನಿಷ್ಕಲ್ಮಷ ಪ್ರೀತಿ ಬೇಕು. 
ಅದನು ನೀಡುವರಾರು? 
ಹಾದಿಗೆ ಜೊತೆಯಾಗುವರಾರು? 
ಮನ ಬಯಸಿದೆ ಸಾಂತ್ವನ 
ಅದ ನೀಡಲು ಆಹ್ವಾನ... 
ಏನೇ ಕಷ್ಟಗಳಿರಲಿ..... 
ಎಲ್ಲ ಕಾಲೆಳೆಯುವಾಗಲೂ 
ಮುಂದೆ ಸಾಗುತಿರಬೇಕು. 
ಅದೇ ನಿಜವಾದ ಜೀವನ 
ಆಗಲೇ ಬದುಕು ಪಾವನ 
ಮನವಾಗುವುದು ನಂದನವನ 

 - R. R. B.

ಸಂದಿಗ್ಧತೆ

 ಮುಂದೊಂದು ಕನಸು 
 ಇಲ್ಲೊಂದು ಮನಸು 
 ಒಂದು ತಪ್ಪಾದ ಆಯ್ಕೆ 
 ನೆರವೇರುವುದೇ ಕಾಣ್ಕೆ?.. 

 ವೃತ್ತಿಗೇ ಒಂದು ದಾರಿ 
 ಪ್ರವೃತ್ತಿಗೆ ಬೇರೆಯೇ ಹಾದಿ 
 ಬದುಕೀಗ ಎರಡು ದೋಣಿಗಳ 
 ಮಧ್ಯೆ ಕಾಲಿಟ್ಟ ಮನುಜನಂತೆ.. 
 ತಲೆಯಲ್ಲಿ ನೂರಾರು ಚಿಂತೆ.. 

 ಕ್ಷಣಿಕ ಕಾಲದ ಸುಖಗಳೋ? 
ಇಲ್ಲಾ ಸುದೀಘ೯ ಕಷ್ಟಗಳೋ? 
ಮನವೀಗ ಗೊಂದಲದ ಗೂಡು 
ಕೇಳಬೇಕಿದೆ ಜೋಗುಳದ ಹಾಡು.. 

ಹತ್ತಿರದವರಿಂದ ದೂರಾಗಿ 
ದೂರದಲ್ಲೆಲ್ಲೋ ಮರೆಯಾಗಿ 
ಅಸ್ತಿತ್ವವೇ ಕಳೆದುಕೊಂಡ ಭಾವ 
ತೊಳಲಾಡುತಿದೆ ಈ ಜೀವ... 

ಎಲ್ಲೊ ಒಂದೆಡೆ ಭರವಸೆಯ ಬೆಳಕು 
ಕಣ್ಣಲ್ಲಿ ಕಂಡೂ ಕಾಣದ ಹೊಳಪು 
ಉತ್ತೇಜಿಸುತ್ತಲೇ ಇದೆ..... 
ಹಾಕು ಮುಂದೆ ಹೆಜ್ಜೆ ಹಾಕು ಎಂದು. 

 - R. R. B.

ಶನಿವಾರ, ಜುಲೈ 22, 2017

ಅಂತ್ಯ

                    ಮುಸ್ಸಂಜೆಯ ಕೆಂಪಡರಿದ ಬಾನಲಿ ಮುಳುಗಲಾರಂಭಿಸಿದ ರವಿತೇಜ, ಗೂಡು ಸೇರಲು ಕಾತರಿಸಿರುವ ಹಕ್ಕಿಗಳ ಗುಂಪು, ವೇಗವಾಗಿ ಚಲಿಸುತಿರುವಂತೆ ಕಾಣುವ ಹೊಲ - ಗದ್ದೆಗಳು, ಗಿಡ - ಮರಗಳ ಸಾಲು, ಏಕತಾನತೆ ಕಾಯ್ದುಕೊಳ್ಳುವ ರೈಲಿನ ಚುಕುಬುಕು ಸದ್ದು...ಎಲ್ಲ ಬೆರೆತು ಒಂದು ಹೊಸ ತೆರನಾದ ವಾತಾವರಣ ಸೃಷ್ಟಿಯಾಗಿತ್ತು. ಆ ಬೋಗಿಯಲ್ಲಿದ್ದವರೆಲ್ಲ ತಮ್ಮದೇ ಆದ ಆಲೋಚನಾ ಸಾಗರದಲ್ಲಿ ಈಜಾಡುತ್ತಿದ್ದರು. ಹಲವರ ಮೊಗದಲ್ಲಿ ಸಂತಸದ ಕಳೆ ಮನೆ ಮಾಡಿತ್ತು. ರೈಲು ಮಾತ್ರ ಅದಾವದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ವೇಗವಾಗಿ ಚಲಿಸುತ್ತಲೇ ಇತ್ತು. ಅದರೊಂದಿಗೆ ಕುಳಿತವರ ಯೋಚನಾಲಹರಿಯೂ ಕೂಡಾ..... 

                   " ಹಲೋ " ಎಂದು ಸನಿಹದಲ್ಲೇ ತೇಲಿಬಂದ ಇಂಪಾದ ಸ್ವರ ಮೌನದ ಅಭೇದ್ಯ ಕೋಟೆಯನ್ನು ಸೀಳುವಲ್ಲಿ ಯಶಸ್ವಿಯಾಯಿತು. ಸುಮಾರು ಇಪ್ಪತ್ತೈದು ವರ್ಷದ ಸುಂದರ ಯುವತಿಯೊಬ್ಬಳು ತನ್ನ ಪಕ್ಕದಲ್ಲಿ ಕುಳಿತಿದ್ದವಳನ್ನು ಮಾತಿಗೆ ಕರೆದಳು. ಮೊಬೈಲ್ ನಲ್ಲೇ ಮುಳುಗಿಹೋಗಿದ್ದ ಯುವತಿ ನಿಧಾನವಾಗಿ ಕತ್ತೆತ್ತಿ " ಹಾಯ್.. " ಎಂದುತ್ತರಿಸಿದಳು. ನಿಧಾನವಾಗಿ ಮಾತುಕತೆ ಆರಂಭವಾಯಿತು. ಬಾನಂಚಿನಿಂದ ಸೂರ್ಯ ಅದಾಗಲೇ ಮರೆಯಾಗಿ ಹೋಗಿದ್ದ. ಗಮ್ಯದತ್ತ ಪಯಣ ಸಾಗುತ್ತಲಿತ್ತು. ವಿಚಾರ ವಿನಿಮಯಗಳು ಇದೀಗ ತಾನೇ ಆರಂಭವಾಗಿತ್ತು. ಇಪ್ಪತ್ತೈದರ ಸುಂದರ ತರುಣಿಯ ಮುದ್ದಾದ ಹೆಸರು ಸ್ಪಂದನಾ. ಇನ್ನೊಬ್ಬಳ ಹೆಸರು ಪ್ರಕೃತಿ. ಮಾತು ಆರಂಭಿಸಿದ್ದು ಸ್ಪಂದನಾ ಆದರೂ ಹೆಚ್ಚು ಮಾತನಾಡತೊಡಗಿದ್ದು ಮಾತ್ರ ಪ್ರಕೃತಿ. ಪ್ರಕೃತಿಗೆ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದ್ದರಿಂದ ಆಕೆ ಪಾಟ್ನಾಕ್ಕೆ ಹೊರಟಿದ್ದಳು. ಆಕೆಯೇ ಮೊದಲು ತನ್ನ ಕತೆಯನ್ನು ಪಟಪಟನೆ ಹೇಳಲಾರಂಭಿಸಿದಳು. 

                       " ಅಪ್ಪ - ಅಮ್ಮನ ಮುದ್ದು ಮಗಳು ನಾನು. ಮನೆಯಲ್ಲಿ ಬಡತನವಿದ್ದರೂ ಮನಸಲ್ಲಿ ಪ್ರೀತಿಗೆ ಎಂದೂ ಬಡತನವಿರಲಿಲ್ಲ. ಅತಿಯಾದ ಅಕ್ಕರೆಯಲ್ಲಿ ಬೆಳೆದ ನನಗೆ ಕಷ್ಟಗಳೆಂದರೆ ಏನೆಂದು ಅಷ್ಟಾಗಿ ಅರ್ಥವಾಗಿರಲಿಲ್ಲ. ಸರ್ಕಾರಿ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಮುಗಿಸಿದೆ. ಅಪ್ಪನ ಆರೋಗ್ಯ ಸರಿಯಿರಲಿಲ್ಲ. ಕೆಲಸ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿ. ಹಾಗಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದೆ. ಅಲ್ಲಿ ಕೆಲಸ ಹುಡುಕಲಾರಂಭಿಸಿದೆ. ಕಷ್ಟ ಎಂದರೇನು ಅಂತ ಆಗ ಅರಿವಿಗೆ ಬಂತು. ಎಷ್ಟೋ ಬಾರಿ ಇಂಟರ್ ವ್ಯೂಗಳಲ್ಲಿ ಕೊನೆಯ ರೌಂಡ್ ನಲ್ಲಿ ಹೊರಬಂದೆ. ಉಳಿದುಕೊಂಡ ಪಿ.ಜಿ.ಯ ಬಾಡಿಗೆ ಕಟ್ಟಲು ಮನೆಯಲ್ಲಿ ಹಣ ಕೇಳುವಂತಿರಲಿಲ್ಲ. ಹೇಗೋ ಪಾರ್ಟ್ ಟೈಮ್ ಕೆಲಸ ಮಾಡಿ ಸಂಪಾದಿಸಿ ದಿನದೂಡುತ್ತಿದ್ದೆ. ಅಂತೂ ಐದು ತಿಂಗಳ ನಂತರ ಈಗ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಮೂವತ್ತೈದು ಸಾವಿರ ಸಂಬಳ. ನಾಡಿದ್ದಿನಿಂದ ಕೆಲಸ ಶುರು. ಕೊನೆಗೂ ನನ್ನ ಕಾಲ ಮೇಲೆ ನಾನು ನಿಂತ ನೆಮ್ಮದಿ. ಜೊತೆಗೆ ಮನೆಗೂ ಹಣ ಕಳಿಸಿ ಅವರನ್ನು ನೋಡಿಕೊಳ್ಳುವ ಅವಕಾಶ. ತುಂಬಾ ಖುಷಿಯಾಗುತ್ತದೆ. ನಂಬಿದ ದೇವರು ಎಂದೂ ಕೈಬಿಡಲಾರ ಅನಿಸ್ತಿದೆ. ರೈಲು ಮುಂದಿನ ನಿಲ್ದಾಣಕ್ಕೆ ಸಾಗಿದಂತೆ ನನ್ನ ಬದುಕೂ ಮುಂದೆ ಸಾಗುತ್ತಿದೆ ಎಂಬ ಭಾವನೆಯೇ ನನ್ನ ಖುಷಿಯನ್ನು ದುಪ್ಪಟ್ಟು ಮಾಡುತ್ತಿದೆ ಸ್ಪಂದನಾ... ಅಯ್ಯೋ ಉತ್ಸಾಹದಲ್ಲಿ ನಿನಗೆ ಮಾತಾಡಲೂ ಅವಕಾಶ ಕೊಡದೇ ನನ್ನ ಕತೆಯೆಲ್ಲಾ ಹೇಳಿಬಿಟ್ಟೆ. ನಿಜವಾಗಿ ಹೇಳಬೇಕೆಂದರೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ನನಗೆ ಒಬ್ಬ ವ್ಯಕ್ತಿ ಬೇಕಿತ್ತು. ಅದು ಯಾರಾದರೂ ಸರಿ ಎಂದು ಮನ ಹೇಳುತ್ತಿತ್ತು. ಅದಕ್ಕೆ ಏನೋ ಒಂದರ್ಧ ಗಂಟೆಯಲ್ಲೇ ನೀನು ನನಗೆ ಹತ್ತಿರದವಳು ಎನಿಸಲಾರಂಭಿಸಿದ್ದು. ಥಾಂಕ್ಯೂ ಸ್ಪಂದನಾ ನನ್ನ ಮಾತುಗಳನ್ನ ಕೇಳಿದ್ದಕ್ಕೆ. ಈಗ ನಿನ್ನ ಬಗ್ಗೆ ಹೇಳು. ಇಷ್ಟ ಇದ್ರೆ ಮಾತ್ರ.... " ಎಂದು ಪ್ರಕೃತಿ ಮಾತು ಮುಗಿಸಿದಳು. ಸ್ಪಂದನಾಗೆ ಪ್ರಕೃತಿಯ ಮಾತುಗಳಿಂದಲೇ ಅವಳ ವ್ಯಕ್ತಿತ್ವದ ಬಗ್ಗೆ ಒಂದು ಕಲ್ಪನೆ ಮೂಡಿತ್ತು. ಪ್ರಕೃತಿ ಭಾವಜೀವಿ. ತನ್ನನ್ನು ತಾನು ಬೇಗನೆ ತೆರೆದುಕೊಳ್ಳುತ್ತಾಳೆ. ಮಾತು ಸ್ಪಷ್ಟ ಹಾಗೂ ನಿರರ್ಗಳ. ಆಕೆಯ ಮಾತೇ ಒಂದು ಕಾವ್ಯ... ಸ್ಪಂದನಾ ತನ್ನ ಬಳಿ ಕುಳಿತವಳನ್ನು ಹೆಮ್ಮೆಯಿಂದ ನೋಡಿ, ಮುಗಳ್ನಕ್ಕಳು. 

                   ಮುಖದಲ್ಲಿ ಸ್ವಲ್ಪ ನಾಚಿಕೆಯ ಭಾವ ತೋರುತ್ತಾ, " ಮುಂದಿನ ವಾರ ನನ್ಮ ಮದುವೆ ಇದೆ. ಅದಕ್ಕೇ ಊರಿಗೆ ಹೊರಟಿದ್ದೇನೆ. ಅಷ್ಟೇ. " ಎಂದು ಸುಮ್ಮನಾಗಿಬಿಟ್ಟಳು. ಪ್ರಕೃತಿ ಮತ್ತೇನೂ ಕೇಳಲಿಲ್ಲ. ಓ ಮನದಿನಿಯನ ಕನಸು ಕಾಣುತ್ತಿರಬೇಕು ಎಂದು ಮೌನವಾದಳು. ಅದೇ ಬೋಗಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅತ್ತಿತ್ತ ಓಡಾಡುತ್ತ ಆಟವಾಡುತ್ತಿದ್ದಳು. ಆಕೆ ಪ್ರಕೃತಿಯ ಬಳಿ ಬಂದಳು. ಪ್ರಕೃತಿ ಆ ಹುಡುಗಿಯನ್ನು ಎತ್ತಿ ತನ್ನ ಕಾಲಮೇಲೆ ಕುಳ್ಳಿರಿಸಿಕೊಂಡಳು. " ಹಾಯ್ ಪುಟ್ಟಾ.. ತುಂಬಾ ಖುಷಿಲಿರೋ ಹಾಗಿದೆ. ನನ್ನತ್ರ ಚಾಕೊಲೇಟ್ ಇದೆ ಬೇಕಾ? " ಎಂದು ಕೇಳಿದಳು. " ಆಂಟೀ ನಾನು ಅಪ್ಪನ ಹತ್ರ ಹೋಗ್ತಿದೀನಿ. ತುಂಬಾ ದಿನ ಆಗಿತ್ತು ಡ್ಯಾಡಿ ಜೊತೆ ಮಾತಾಡಿ..." ಎಂದು ಮುದ್ದಾಗಿ ಹೇಳಿ ಚಾಕೊಲೇಟ್ ತೆಗೆದುಕೊಂಡು ಓಡಿದಳು. ಆ ಎಳೆಯ ಕಂಗಳಲಿ ಸಂತಸದ ಹೊನಲಿತ್ತು. ಸ್ಪಂದನಾ ತನ್ನದೇ ಆದ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು. ಪ್ರಕೃತಿ ಕಿಟಕಿಯ ಬಳಿ ಹೋಗಿ ಕುಳಿತು ಹೊರನೋಡತೊಡಗಿದಳು. ಕತ್ತಲಾಗಿದ್ದರಿಂದ ಏನೂ ಕಾಣಿಸಲಿಲ್ಲ. ಸುಮ್ಮನೆ ಅತ್ತಿತ್ತ ನೋಡುತ್ತ ಕುಳಿತಳು. ಅದಾಗಲೇ ರಾತ್ರಿ ಒಂಭತ್ತು ದಾಟಿತ್ತು. ಪ್ರಯಾಣಿಕರೆಲ್ಲ ತಮ್ಮ ಪಾಡಿಗೆ ತಾವು ಊಟ ಮುಗಿಸಿ ಮಲಗಿದರು. ಕೆಲವರಲ್ಲಿ ಹೊಸ ಜೀವನದ ಕನಸಿತ್ತು, ಕೆಲವರಲ್ಲಿ ಕನಸು ನನಸಾದ ಸಂತೃಪ್ತಿಯಿತ್ತು, ಕೆಲವರಲ್ಲಿ ಕುಟುಂಬವನ್ನು ಸೇರುವ ತವಕವಿತ್ತು, ಇನ್ನು ಕೆಲವರಲ್ಲಿ ಜೀವನದ ತಿರುವುಗಳನ್ನು ನೋಡುವ ಹಂಬಲವಿತ್ತು. ಇನ್ನೂ ಏನೇನೋ..... ಭಾವಗಳು ಅಪರಿಮಿತ, ಅಲೋಚನೆಗಳೋ ಎಂದೂ ಅನಂತ... ಯಾಕಂದ್ರೆ ಹಾಕೋದು ಬಿತ್ತೋದು ನಮ್ಮಿಷ್ಟ..... 

                  ಮಧ್ಯರಾತ್ರಿಯ ವೇಳೆ. ಹನ್ನೆರಡು ದಾಟಿರಬಹುದು. ವೇಗವಾಗಿ ಚಲಿಸುತ್ತಿದ್ದ ರೈಲು ಒಮ್ಮೆಲೇ ಹಳಿ ತಪ್ಪಿತ್ತು. ದುರಂತ ಸಂಭವಿಸಿತ್ತು. ಹಳಿ ತಪ್ಪಿದ ಬೋಗಿಗಳಲ್ಲಿನ ಪ್ರಯಾಣಿಕರು ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ನೂರಾರು ಕಣ್ಣಲ್ಲಿ ಕಟ್ಟಿದ್ದ ಕನಸಿನ ಗೋಪುರ ಧರೆಗುರುಳಿತ್ತು. ಊಹಿಸಲಾರದಂತದ ಘಟನೆಯೊಂದು ಜರುಗಿ ಹೋಗಿತ್ತು. ಸಿಹಿನಿದ್ರೆಯಲ್ಲಿದ್ದ ಕೆಲ ಪ್ರಯಾಣಿಕರು ಈಗ ಚಿರನಿದ್ರೆಗೆ ಜಾರಿದ್ದರು. ಯಮದೂತನ ಸೇವಕರು ಸದ್ದಿಲ್ಲದಂತೆ ತಮ್ಮ ಕೆಲಸ ಮುಗಿಸಿದ್ದರು. ವಿಧಿಲಿಖಿತಕ್ಕೆ ಹೊಣೆ ಯಾರು?..... ಹೊಸ ಕೆಲಸ ಸಿಕ್ಕ ಖುಷಿಯಲ್ಲಿ ಹಾರಾಡುತ್ತಿದ್ದ ಪ್ರಕೃತಿ ಶವವಾಗಿ ಪ್ರಕೃತಿಯ ಮಡಿಲಲ್ಲಿ ಮಲಗಿದ್ದಳು. ಮದುವೆಯ ಕನಸು ಕಂಡ ಸ್ಪಂದನಾ ಕೈ - ಕಾಲುಗಳೆರಡನ್ನೂ ಕಳೆದುಕೊಂಡು ಜೀವ ಹೋಗುವ ಸ್ಥಿತಿಯಲ್ಲಿದ್ದಳು. ಅಪ್ಪನ ಕಾಣಲು ಹೊರಟ ಪುಟ್ಟ ಹುಡುಗಿ ದೇವರ ಪಾದ ಸೇರಿದ್ದಳು.... ಏನೂ ತಪ್ಪೇ ಮಾಡದ ಅದೆಷ್ಟೋ ಜೀವಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಅವರೆಲ್ಲರ ಬದುಕಿಗೆ ಮುಂದಿನ ನಿಲ್ದಾಣ ಬರಲೇ ಇಲ್ಲ...! ಪಯಣ ಪೂರ್ಣಗೊಳ್ಳಲೂ ಇಲ್ಲ...! ರೈತ ಕಷ್ಟಪಟ್ಟು ಹೊಲವನ್ನು ಉತ್ತಿ, ಬೀಜ ಬಿತ್ತಬಹುದು. ಕ್ರಿಮಿ ಕೀಟಗಳು ಬರದಂತೆ ಔಷಧಿ ಸಿಂಪಡಿಸಬಹುದು. ಆದರೆ ಮಳೆಯೇ ಬಾರದಿದ್ದರೆ ಅಥವಾ ಅಕಾಲಿಕ ಮಳೆ ಬಂದರೆ ಬೆಳೆ ಬರಲು ಸಾಧ್ಯವೇ? ಹಾಗೆಯೇ ಜೀವನದ ಬಗ್ಗೆ ಕನಸು ಕಾಣುವುದು, ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸುವುದು ಮಾತ್ರ ನಮ್ಮ ಕೈಯಲ್ಲಿದೆ. ಉಳಿದಿದ್ದೆಲ್ಲ ದೈವೇಚ್ಛೆ... ಅದಕ್ಕೇ ಬಹುಶಃ ದೊಡ್ಡವರ ಮಾತು ನಿಜ - ಹಾಕೋದು ಬಿತ್ತೋದು ನನ್ನಿಚ್ಛೆ. ಆಗೋದು ಹೋಗೋದು ಅವನಿಚ್ಛೆ....! 

( ನಮ್ಮ ಕನ್ನಡ ತಂಡದವರು ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಕತೆ) 

 - R. R. B.

ಹೆಸರಿಡದ ಸಾಲುಗಳು -2


ಬರಹ ನಿಲ್ಲಿಸಿದ ಖ್ಯಾತ ಕಥೆಗಾರನೊಬ್ಬ 
ಭಾವಗಳ ಪ್ರಸವ ನಿಂತಿದೆಯೆಂದು 
ಪಾರ್ಕಲ್ಲಿ ಕುಳಿತು ನಿಟ್ಟುಸಿರು ಬಿಟ್ಟ... 
ಕೋಟ್ಯಂತರ ಕಥೆಗಳ ಅರಗಿಸಿಕೊಂಡ 
ಪ್ರಾಚೀನ ಕಲ್ಲುಬೆಂಚೊಂದು ಸದ್ದಾಗದಂತೆ 
ಕಥೆಗಾರನ ನೋಡಿ ನಕ್ಕಿತ್ತಂತೆ‌...ನಿಜವೇ?
******************************** 

ಬಹುಶಃ ಅಂದಿನ ಇಂದಿನ ನಡುವೆ 
ಹೆಚ್ಚೇನೂ ಗಹನವಾದ ವ್ಯತ್ಯಾಸವಿಲ್ಲ 
ಅದೇ ಪಾರ್ಕು, ಅದೇ ಚಂದದ 
ಕಲ್ಲುಬೆಂಚು ಮತ್ತದೇ ಸ್ವಲ್ಪವೂ 
ಬದಲಾಗದ ಅವನು... 
ಆಗ - ಅವಳೊಂದಿಗಿನ ಭವಿತವ್ಯದ ಕನಸು 
ಈಗ‌ - ಮಣ್ಣಾದ ಅವಳ ಕೊನೆಕ್ಷಣಗಳ ನೆನಪು... 
******************************** 

ಬೆಂಚಿನ ಮೇಲೆ ಕುಳಿತ ಒಬ್ಬಂಟಿಯೊಬ್ಬ 
ಗಾಢವಾಗಿ ಜೀವನದ ಸತ್ಯ ಹುಡುಕುತ್ತಿದ್ದ 
ಸಂಬಂಧಗಳೆಲ್ಲಾ ತಾತ್ಕಾಲಿಕ ಮಾತ್ರ ಎಂದು... 
ಎದ್ದು ಹೋದವರನ್ನು ಲೆಕ್ಕವಿಡಲಾಗದ 
ಆ ಕಲ್ಲುಬೆಂಚಿನ ಅಂಚಲ್ಲೊಂದು ಕಿರುನಗು... 

 - R. R. B.

The day when everything went WRONG!...

                  A sunny morning. I came from home after the burial of my beloved grand father. I was very sad because I lost a wonderful person in my life. I came back with a half heart as I got a call from my office saying " You have to come immediately ". The journey from my hometown to room was very different from other times. I was totally down. After reaching my room I took bath and prayed to Jesus. My heart was saying " You are going to get another bad news soon... " I closed my eyes and stopped my thinking and came to office. 

                  Alas!....I had another bad news waiting for me. I was removed from my job as our process got closed. The company people fired me without giving a minimum period notice !! Not only me, 20 others who are in the same process. Everybody were in shock. We had a rumors that our process is going to close soon. But our 'The great Process Manager' didn't respond to our queries properly. Uff... I came back from my world of thoughts and returned to room.

              I was depressed and slowly opened my cupboard to get my lucky ring. I searched a lot but I didn't find my " Lucky ring " I started calling that as lucky ring when my mom gifted that to me. Now I lost that too.... I have lost my Daada, I have lost my job and now, the lucky ring which my mother presented me one week before her death..... Oops.. I think nothing will be with me till the end. I cried and cried... Only my pillow know my situation. So many thoughts were coming to mind. 

                  Suddenly I came in front of window with tears in my eyes. I started looking down from the window. The road and that line of shops were looking like life and difficulties to me. So without difficulties, without tears life can't move. To reach a destination, we have to suffer frustration first. To create a History we should do some Mystery.... May be I am an introvert. I won't talk to people. But I thinks a lot.... To find the real 'ME'...My eyes were stopped producing tears. I came in front of a mirror to see my face. I was looking totally different. Every time while looking at the mirror I feel happy because of my outer beauty. Now I am not.... This time I tried to look at my soul.... Am I strong enough to face these situations? Can I move on?..... Something came into my mind. I thanked Jesus from the bottom of my heart. I came back to room and laid down on my bed. 

           Stomach remembered me that I didn't had anything since morning. I got up. I was about to take my plate... At that time another plate fallen down from the table. The plate became so many pieces of glass. Exactly at that time my roommate came and she screamed, " Hey you have broken my new...." I stopped her words. I smiled at her and said, " I will get a new one for you ". 

- R.R.B.

ಹೆಸರಿಲ್ಲದ ಭಾವಗಳಲಿ..

ಕತ್ತಲಾಗುತ್ತದೆ ಇಲ್ಲೆಲ್ಲ 
ಬೆಳಕು ಅತ್ತ ಸರಿದಾಗ 
ಬೆತ್ತಲಾಗುತ್ತದೆ ಮನಗಳು 
ಮಾತುಗಳ ರೂಪ ಪಡೆದು... 

ಬೀದಿದೀಪಗಳ ಕಣ್ಣುಗಳಲಿ 
ವಾಚಿಸಿರದ ಅದೆಷ್ಟೋ ಕವನ 
ಸಾಗುವ ರಸ್ತೆಯ ಉದ್ದಗಲಕ್ಕೂ 
ಮೂಡಿದ ಭಾವಗಳ ಮಥನ... 

ಆ ಗಗನಚುಂಬಿ ಕಟ್ಟಡಗಳಲಿ 
ಇಣುಕುವುದು ಅಟ್ಟಹಾಸದ ನಗೆಯೇ? 
ಅಥವಾ ವೈಭೋಗದ ಕುರುಹೇ? 

ಕೊಳಗೇರಿಯ ಪುಟ್ಟ ದೀಪದಲಿ 
ಕಾಣುವುದು ನಿಟ್ಟುಸಿರ ಬಿಸಿಯೇ? 
ಇಲ್ಲಾ ನಾಳಿನ ಊಟದ ಕನಸೇ?...

ಕಳೆದುಹೋಗುತ್ತೇನೆ ನಾನು 
ಇವೆಲ್ಲರ ಹುಡುಕಾಟದಲ್ಲಿ... 
ಹೌದು, ಮತ್ತೆ ಮತ್ತೆ ಕಳೆದುಹೋಗಬೇಕು 
ಹೊಸ ಬದುಕ ಪಡೆಯಲು 
ಹೊಸ ಕನಸ ಹಣೆಯಲು... ‌ 

- R. R. B.

ಮೀಸಲು

ಮುಗ್ಧ ಮಾತುಗಳಾಗಲೇ ಮರೆಯಾಗಿ 
ಭಾವನೆಗಳು ಬಂಧಿಯಾಗಿವೆ ಒಳಗೆ 
ಕಾಲಚಕ್ರದ ಹಲವು ಸುತ್ತುಗಳಲಿ 
ಮನವು ಸದ್ದಿಲ್ಲದೇ ಏಕಾಂಗಿಯಾಗಿದೆ.... 

ಹುಚ್ಚೆದ್ದು ಕುಣಿಯುವಂತಹ ಅದೆಷ್ಟೋ 
ಭಾವಗಳು ಕಾಲ್ಮುರಿದುಕೊಂಡು ಕುಳಿತಿವೆ 
ಅಕ್ಕರೆಯ ಮಾತುಗಳೋ ಕಣ್ಮರೆಯಾಗಿವೆ 
ನಡುವೆ ಇದ್ದರೂ ಅತಿಯಾದ ಸಲುಗೆ 
ಅನುಭಾವಗಳ ಹಂಚಿಕೆಗೆ ಬೇಕಲ್ಲ ಘಳಿಗೆ... 

ದಿನನಿತ್ಯದ ಬದುಕ ಜಂಜಾಟದಲಿ 
ಏನೋ ಕಳೆದುಹೋದ ಖಾಲಿ ಭಾವ 
ಸ್ನೇಹದ ಕಡಲಲ್ಲಿ ಸಂತಸದಲೆಗಳಲಿ 
ತೇಲಬಯಸುವ ಸಾವಿರಾರು ಜೀವ... 

ಕಡಿಮೆಯಾಯಿತೇನೋ ಕಂಗಳಾ ಹೊಳಪು 
ಕಳೆದು ಹೋಯಿತೇನೋ 
ಹೇಳಬಯಸಿದ ಕತೆಗಳಾ ತುಣುಕು.. 
ಕಾರಣ ಸಮಯದ ಅಭಾವವೇ ಇಲ್ಲಾ 
ದಿನವಿಡೀ ದುಡಿದು ದಣಿದ ದೇಹವೇ?... 

ಏನೋ ಒಂದು ಉತ್ತರಿಸಿ 
ನಿರುತ್ತರನಾಗುವ ಬದಲು 
ಇಡಬಹುದಲ್ಲವೇ ಒಂಚೂರು 
ಸಮಯ ಅವರಿಗಾಗಿ ಮೀಸಲು... 

 - R. R. B.

ಹೆಸರಿಡದ ಸಾಲುಗಳು - 1


ನಡುರಾತ್ರಿಯಲ್ಲಿ ಕಾಡುಮಲ್ಲಿಗೆಯು ಒಂಟಿ 
ಆತ ಕೇಳಿದ - ಬರುತ್ತೀಯಾ? ಎಂದು 
ಅಲ್ಲಿಂದ ಬಿರಬಿರನೆ ಹಾಕಿದ ಅವಳ ಹೆಜ್ಜೆಗೆ 
ಕಣ್ಣಂಚಿನ ನೀರೇ ಜೊತೆಯಾಗಿತ್ತು... 
******************************** 

ಬೊಗಸೆ ಪ್ರೀತಿಗಾಗಿ ಹಾತೊರೆವ ಬದುಕು 
ರಾತ್ರಿ ಹನ್ನೆರಡರಲೂ ಸ್ಟಡಿಲ್ಯಾಂಪಿನ ಬೆಳಕು 
ವಾರ್ಡನ್ ಕಾರಣವಿಲ್ಲದೇ ಬೈದಾಗಲೆಲ್ಲ 
ಮನ ಹಿಡಿದದ್ದು ಮನೆಯ ದಾರಿಯೇ?... 
********************************* 

ದೇವಸ್ಥಾನಕ್ಕೆ ಹೋಗೋಣ ಎಂದನಾತ 
ತುಸು ನಿಧಾನಕ್ಕೆ ಅವಳುತ್ತರ - ಇಲ್ಲ 
ನೀನು ಮಾತ್ರ ಅಲ್ಲ, ನಾನೂ ಬ್ಯುಸಿನೇ..
ಎಂದು ಕಾಲ್ ಕಟ್ಟಾದಾಗ ಅತ್ತಿದ್ದು 
ಅವನ ಮಾತಿಗೋ? ಇಲ್ಲಾ ಹೊಟ್ಟೆನೋವಿಗೋ ?... 
******************************** 

ಎಷ್ಟೇ ಕಲಾತ್ಮಕವಾಗಿದ್ದರೂ ಹೂದಾನಿ 
ಹೂಗಳಿಲ್ಲದೇ ಸುರಿಸುತಿದೆ ಕಂಬನಿ ಎಷ್ಟೇ 
ಆಳುಕಾಳುಗಳಿದ್ದರೂ ಮನೆಯಲಿ 
ಸಂಗಾತಿ ನೀ ಇಲ್ಲದಿರೆ ಮನ - ಖಾಲಿ ಖಾಲಿ... 
******************************** 

ಮುಂಜಾನೆಯಿಂದ ಮುಸ್ಸಂಜೆ ತನಕ 
ಮಲ್ಲಿಗೆಯ ಮಾಲೆ ಮಾರುತ್ತ ಕುಳಿತ 
ಹರೆಯದ ಹುಡುಗಿಯ ಒಲವ ಮಲ್ಲಿಗೆ 
ಬಾಡಿಹೋಗಿ ಅದಾಗಲೇ ವರ್ಷ ಕಳೆದಿತ್ತು... 
******************************* 

 - R. R. B.

ಸ್ಮೃತಿಪಟಲದಲಿ ಕಾಲೇಜ್ ಕ್ಯಾಂಟೀನ್...

                           ' ಕಾಲೇಜ್ ' ಎಂದಾಕ್ಷಣ ಏನೋ ಒಂಥರಾ ಖುಷಿ, ಕುತೂಹಲ, ತಳಮಳ, ಒಂಥರಾ ಉಲ್ಲಾಸ, ಉತ್ಸಾಹ, ಮನದಲಿ ಸಾವಿರಾರು ಭಾವಗಳ ತೇರಿನ ಅನಾವರಣ.... ಹೌದು, ಕಾಲೇಜ್ ಕ್ಯಾಂಪಸ್ ನ ಮೆಟ್ಟಿಲುಗಳಿಂದ ಹಿಡಿದು ಕ್ಲಾಸ್ ರೂಮಿನ ಬ್ಲ್ಯಾಕ್ ಬೋರ್ಡಿನವರೆಗಿನ ಪ್ರತಿ ಅಣು ಅಣುವೂ ಲಕ್ಷ - ಲಕ್ಷ ನವಿರಾದ ಭಾವನೆಗಳ ಸರಮಾಲೆಯನ್ನೇ ಧರಿಸಿದೆ. ಗಾರ್ಡನ್ ನಲ್ಲಿರುವ ಕಾರಂಜಿಯಿಂದ ಸೆಮಿನಾರ್ ಹಾಲಿನಲ್ಲಿರುವ ಕುರ್ಚಿಗಳೂ ತಮ್ಮ ಮೌನದಲ್ಲೇ ಅಸಂಖ್ಯಾತ ಕತೆ ಹೇಳುತ್ತವೆ. ಹರೆಯದ ಭಾವಗಳ ಹರಿವಿಗೆ ಅನುವು ಮಾಡಿಕೊಡುತ್ತವೆ. ಇವೆಲ್ಲದರ ನಡುವೆ ಕಾಲೇಜ್ ಕ್ಯಾಂಟೀನ್ ತನ್ನ ಮಡಿಲಲ್ಲಿ ಸದ್ದಿಲ್ಲದೆ ಅನುಭಾವಗಳಿಗೆ ಹೊಸಭಾಷ್ಯ ಬರೆಯುತ್ತ ಕೂತಿದೆ. ಬರೆಯುತ್ತಲೇ ಇರುತ್ತದೆ - ವರ್ಷ ವರ್ಷ ವಿದ್ಯಾರ್ಥಿಗಳು, ಅಧ್ಯಾಪಕರು ಬದಲಾದರೂ, ಆಧುನಿಕತೆಯ ಗಾಳಿ ಬೀಸುತ್ತಿದ್ದರೂ, ಕಾಲಚಕ್ರ ಉರುಳುತ್ತಲೇ ಇದ್ದರೂ...... 

                         ಕಾಲೇಜ್ ಕ್ಯಾಂಟೀನ್ ಹಲವು ಭಾವದ ಹೊಂಬಾಳೆಗಳ ಆಗರ, ಸಾವಿರಾರು ಸವಿ ಕನಸುಗಳ ಸಾಗರ.. ಕಾಲೇಜು ಸೇರಿದ ಮೊದಲ ದಿನದ ವಿನೂತನ ಅನುಭವ, ಕ್ಲಾಸ್ ಮುಗಿದ ನಂತರ ಬಂದು ಕುಡಿದ ಬೈಟು ಕಾಫಿ / ಟೀ, ನಾಲ್ಕೈದು ಜನರ ನಡುವೆ ಶೇರ್ ಆಗುವ ಒಂದು ಪ್ಲೇಟ್ ಪಾನಿಪುರಿ, ಮಸಾಲಪುರಿ, ಮಧ್ಯಾಹ್ನದ ಊಟ, ಬಿಡುವಿದ್ದಾಗ ಗಂಟೆಗಟ್ಟಲೇ ಕುಳಿತು ಹೊಡೆದ ಹರಟೆ, ಆಗಾಗ ನಡೆಸುವ ಬರ್ತಡೇ ಪಾರ್ಟಿ - ಇವೆಲ್ಲಕ್ಕೂ ಕ್ಯಾಂಟೀನ್ ನ ಕುರ್ಚಿ, ಟೇಬಲ್ಲುಗಳು ಸಾಕ್ಷಿಯಾಗುತ್ತವೆ. ಪ್ಲೇಟು, ಲೋಟಗಳೇ ವೀಕ್ಷಕರಾಗುತ್ತವೆ. ಸ್ವಲ್ಪ ಸ್ಟ್ರಿಕ್ಟಾಗಿರೋ ಕಾಲೇಜುಗಳಲ್ಲಾದರೆ ಹುಡುಗ ಹುಡುಗಿಯರ ಭೇಟಿಗೆ, ಪ್ರೇಮ ನಿವೇದನೆಗೆ ಕ್ಯಾಂಟೀನೇ ಮಧ್ಯವರ್ತಿ. ಮೊಬೈಲ್ ಬಳಕೆ ಕಡಿಮೆ ಇದ್ದ ಹಿಂದಿನ ಕಾಲದಲ್ಲಿ ಪತ್ರಗಳ ವ್ಯವಹಾರ ನಡೆಯುತ್ತಿದ್ದುದು ಕ್ಯಾಂಟೀನ್ ನ ಮೂಲೆಗಳಲ್ಲಿಯೇ ! ಈಗಾದರೋ ಒಂದು ವಾಟ್ಸಪ್ ಸಂದೇಶದಲ್ಲೇ ಕ್ಯಾಂಟೀನ್ ನಲ್ಲಿ ಭೇಟಿಯಾಗುವ ಕಾರ್ಯಕ್ರಮ ಫಿಕ್ಸ್ ಆಗಿಬಿಟ್ಟಿರುತ್ತದೆ... ಕ್ಲಾಸಿನಲ್ಲಿ ನಡೆದ ' ಬೋರಿಂಗ್ ' ಎನಿಸುವ ತರಗತಿಗಳು, ಲೆಕ್ಚರರ್ ಗಳ ಬಗ್ಗೆ ಸವಿಸ್ತಾರವಾದ ವಿಮರ್ಷೆ ನಡೆಯುವುದು ಇಲ್ಲೇ ! ಯಾವುದೋ ಕಾಂಪಿಟೇಷನ್ನೋ, ಸೆಮಿನಾರೋ ಇದ್ದರೆ ಅದರ ಸಂಪೂರ್ಣ ನೀಲಿ ನಕ್ಷೆ ತಯಾರಾಗುವುದು ಕ್ಯಾಂಟೀನ್ ನ ಮೂಲೆಯ ಯಾವುದೋ ಮೇಜಿನ ಮುಂದೆಯೇ ! ಪರೀಕ್ಷೆಗಳ ಸಮಯದಲ್ಲಿ ಅರ್ಥವಾಗಿರದ ವಿಷಯಗಳನ್ನು ಸ್ನೇಹಿತರು ಎರಡೇ ನಿಮಿಷದಲ್ಲಿ ಅರ್ಥ ಮಾಡಿಸುವುದೂ ಇಲ್ಲೇ !.. ಮಳೆಗಾಲದಲ್ಲಿ ತುಂತುರು ಹನಿಗಳು ಇಳೆಗಿಳಿಯುವಾಗ ಐಸ್ ಕ್ರೀಂ ತಿನ್ನುವ ಮನಸಾದಾಗ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ಕರೆದಂತೆ ಭಾಸ.. ಬರೀ ವಿದ್ಯಾರ್ಥಿಗಳಷ್ಟೇ ತುಂಬಿರುವಾಗ ಗೆಜ್ಜೆ ಕಟ್ಟಿದ ಪುಟ್ಟ ಹುಡುಗಿಯಂತೆ ಸದ್ದು ಮಾಡುವ ಕ್ಯಾಂಟೀನ್ ಲೆಕ್ಚರರ್ ಗಳ ಸಮ್ಮುಖದಲ್ಲಿ ಮೌನಗೌರಿಯ ಮಾರುವೇಷ ಧರಿಸುತ್ತದೆ. ಪ್ರನ್ಸಿಪಾಲರು ಬಂದರಂತೂ ಪ್ಲೇಟು ಲೋಟಗಳೂ ಬಾಯ್ಮುಚ್ಚಿ ಕುಳಿತಿರುತ್ತವೆ. ಬಹುಶಃ ತಮ್ಮ ಯಾವ ಗುಟ್ಟೂ ರಟ್ಟಾಗದಿರಲಿ ಎಂದಿರಬಹುದೇನೋ..... 

                       ಕಾಲೇಜ್ ಕ್ಯಾಂಟೀನನ್ನು ಬೇರೆ ಹೋಟೆಲ್ ಗಳಂತೆ ಕೇವಲ ಉಪಹಾರ ಗೃಹದಂತೆ ಕಾಣುವುದು ಒಂಥರಾ ಅಪರಾಧವೇನೋ ಎನಿಸುವಷ್ಟು ಅದು ಯುವ ಮನಗಳಿಗೆ ಹತ್ತಿರವಾಗಿರುತ್ತದೆ. ' ಬಿಡುವಿನ ಸಮಯದಲ್ಲಿ ಇತ್ತ ಬಾ..' ಎಂದು ತನ್ನ ಮೌನದ ಮಾತಿನಲ್ಲೇ ಕರೆಯುತ್ತಿರುತ್ತದೆ. ಹುಡುಗಿಯರ ತರಹೇವಾರಿ ಹರಟೆಗಳು, ಹುಡುಗರ ತರಲೆ ತುಂಟಾಟಗಳು ಎಂದರೆ ಕ್ಯಾಂಟೀನ್ ನಲ್ಲಿ ಕುಳಿತ ಬಿಲ್ ಕೊಡುವ ವ್ಯಕ್ತಿಗೂ ಅಚ್ಚುಮೆಚ್ಚೇ.. ಕೆಲವು ಖಾಯಂ ಗಿರಾಕಿಗಳಿಗಂತೂ ಆತ ರಕ್ತ ಸಂಬಂಧ ಇಲ್ಲದೆಯೇ ಅಣ್ಣನಾಗಿರುತ್ತಾನೆ. ಅಷ್ಟೊಂದು ಬಾಂಧವ್ಯ ಅರಿವಿಲ್ಲದೆಯೇ ಬೆಳೆದು ಬಿಟ್ಟಿರುತ್ತದೆ. " ಆ ಮ್ಯಾಮ್ ಅಂತೂ ಯಾವಾಗ್ಲೂ ಬೈತಾನೇ ಇರ್ತಾರೆ ಕಣೇ. ಕೇಳಿ ಕೇಳಿ ಸಾಕಾಯ್ತು. " , " ಹೋಗ್ಲಿಬಿಡೇ, ಅವ್ರು ಬೈತಾರೆ ಅಂತ ಯಾರಾದ್ರೂ ಕ್ಲಾಸಲ್ಲಿ ಮಾತಾಡ್ದೇ ಸೈಲೆಂಟಾಗಿ ಕೂರ್ತಾರಾ? " , " ಇವತ್ತು ಇಂಡಿಯಾ - ಪಾಕಿಸ್ತಾನ ಮ್ಯಚ್ ಇದೆ ಮಗಾ.. ಮಿಸ್ ಮಾಡ್ದೇ ನೋಡ್ಬೇಕು. " , " ಹೌದು. ಇವತ್ತಿಡೀ ನಮ್ಮನೆ ಟಿ.ವಿ. ರಿಮೋಟ್ ಗೆ ನಾನೇ ವಾರಸ್ದಾರ..." ಎಂಬಂತಹ ಲಕ್ಷಾಂತರ ಮಾತುಗಳಿಗೆ ಕ್ಯಾಂಟೀನ್ ನ ಗೋಡೆಗಳು, ಸೂರುಗಳು ಕದ್ದು ಕೇಳುವ ಕಿವಿಯಾಗಿರುತ್ತವೆ. ಗುಟ್ಟನ್ನು ಬಿಟ್ಟುಕೊಡದ ಆಪ್ತರಾಗುತ್ತವೆ. ಕ್ಯಾಂಟೀನ್ ನಲ್ಲಿ ಹಸಿದ ಹೊಟ್ಟೆ ತಣಿಸಲು ಹೇಗೆ ತಿಂಡಿ ತಿನಿಸುಗಳಿವೆಯೋ ಹಾಗೇ ಮನದ ಭಾವಗಳ ಅಬ್ಬರವನ್ನಿಳಿಸಲು ಜಾಗವಿದೆ. ಯಾಕೋ ಮನಸಿಗೆ ತುಂಬಾ ಬೇಜಾರಾಗಿದ್ದರೆ ಏಕಾಂಗಿಯಾಗಿ ಕೂತು ನಿಟ್ಟುಸಿರುಬಿಡಲೂ ಸಾಧ್ಯವಿದೆ. ಹಾಗಂತ ಗಂಟೆಗಟ್ಟಲೇ ಒಬ್ಬರೇ ಕುಳಿತರೆ ಗೆಳೆಯರು ಬಂದು ಕಾಡಿಸುವ ಸವಿಯಾದ ಅಪಾಯವೂ ಇದೆ..ಕ್ಲಾಸ್ ರೂಮಿನಲ್ಲಿ ಹಂಚಿಕೊಳ್ಳದೇ ಉಳಿದ ಭಾವಜೇನಿನ ಹಂಚಿಕೆಗೆ ಕ್ಯಾಂಟೀನ್ ಅತಿ ಪ್ರಶಸ್ತ ತಾಣ !.... 

                           ವರ್ಷ ಮುಗಿದು ಪರೀಕ್ಷೆಗಳು ಬಂದಾಗ ಕ್ಯಾಂಟೀನ್ ನ ಹವಾ ತುಸು ಕಡಿಮೆಯಾದರೂ ಪರೀಕ್ಷೆ ಬರೆದು ಹೊರಬಂದ ನಂತರ ಕ್ಯಾಂಟೀನ್ ತುಸು ಹೆಚ್ಚೇ ಗದ್ದಲವನ್ನು ಹೊದ್ದುಕೊಳ್ಳುತ್ತದೆ. ಆಡುವ ಯಾವ ಮಾತುಗಳಿಗೂ ಅಲ್ಲಿ ಲೆಕ್ಕದ ಲೇಪನವಿಲ್ಲ, ಸರಿ - ತಪ್ಪುಗಳ ಅನುಪಾತವಿಲ್ಲ, ಯಾರೇನು ಅಂದುಕೊಳ್ಳುತ್ತಾರೆಯೋ ಎಂಬ ಮುಜುಗರದ ಮುಖವಾಡವಿಲ್ಲ... ಮನದೊಳಗೆ ಹುದುಗಿರುವ ಭಾವಗಳ ಪ್ರಸವಕ್ಕೆ ಮುಕ್ತ ವೇದಿಕೆ ಕಾಲೇಜ್ ಕ್ಯಾಂಟೀನ್... ಅಲ್ಲಿರುವ ವಸ್ತುಗಳು ನಿರ್ಜೀವವಾದರೂ ಅಲ್ಲಿನ ಜೀವಂತಿಕೆಗೆ ಬಹುಕಾಲ ಬಾಳುವ ಅಗಾಧ ಶಕ್ತಿಯಿದೆ. ಕಾಲೇಜ್ ಕ್ಯಾಂಟೀನ್ ನಲ್ಲಿ ಎಲ್ಲವೂ ಇಲ್ಲ, ಆದರೆ ವರ್ಣನೆಗೆ ಸಿಗದ ಏನೋ ಇದೆ. ಮತ್ತದು ಯುವಮನಗಳಿಗೆ ತುಂಬ ಸನಿಹ.. ಕಾಲೇಜು ಲೈಫಿನ ನೆನಪಿನ ಪುಸ್ತಕ ಬಿಚ್ಚಿಟ್ಟು ಓದಲು ಕುಳಿತರೆ ಕಾಲೇಜ್ ಕ್ಯಾಂಟೀನ್ ಅದರಲ್ಲೊಂದು ಮುದ್ದಾದ ಅಧ್ಯಾಯ !.... 

 - R. R. B.

ಕಂಪೆನಿಗಳ ಮಸೂದೆ 2013

ಭಾರತೀಯ ಕಂಪೆನಿಗಳ ಮಸೂದೆ 2013 ನಿಮಗೆಷ್ಟು ಗೊತ್ತು?.... 

                    ನಾವು ಪ್ರತಿದಿನ ರಸ್ತೆಯಲ್ಲಿ ಓಡಾಡುತ್ತೇವೆ. ನಿಮಗೆ ಇಷ್ಟವಿದೆಯೋ ಇಲ್ಲವೋ ಎಂಬ ಪ್ರಶ್ನೆ ಬೇರೆ. ಆದರೆ ಪ್ರತಿಯೊಬ್ಬರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇಬೇಕು. ಅಂತೆಯೇ ಭಾರತದಲ್ಲಿ ಲಕ್ಷಾಂತರ ಕಂಪೆನಿಗಳಿವೆ. ನಮ್ಮ ಬೆಂಗಳೂರಿನಲ್ಲೇ ಐದು ಸಾವಿರಕ್ಕೂ ಮಿಕ್ಕಿ ಕಂಪೆನಿಗಳಿವೆ. ಇವೆಲ್ಲವೂ ಕೆಲವು ನೀತಿ ನಿಯಮಗಳನ್ನು ಪಾಲಿಸಬೇಕು. ಅದೇ ಭಾರತೀಯ ಕಂಪೆನಿಗಳ ಮಸೂದೆ (Indian Companies Act). ಮೊದಲಿದ್ದ ಭಾರತೀಯ ಕಂಪೆನಿಗಳ ಮಸೂದೆ 1956 ಹಲವು ವಿರೋದಾಭಾಸಗಳಿಂದ ಕೂಡಿದ್ದು, ಅದರಲ್ಲಿನ ನೀತಿ ನಿಯಮಗಳು ಕ್ಲಿಷ್ಟಕರವಾಗಿತ್ತು. ಅವನ್ನೆಲ್ಲ ಬದಿಗೆ ಸರಿಸಿ ಉದ್ಯಮಿಗಳಿಗೆ ಅನುಕೂಲವಾಗುವಂತೆ ಭಾರತೀಯ ಕಂಪೆನಿಗಳ ಮಸೂದೆ 2013 (Indian Companies Act 2013) ಜಾರಿಗೆ ಬಂತು. ಕಾರ್ಪೋರೇಟ್ ಜಗತ್ತಿನಲ್ಲೊಂದು ಹೊಸ ಸಂಚಲನವನ್ನೇ ಮೂಡಿಸಿತು. ಅದರ ಬಗ್ಗೆ ಕೆಲವೇ ಕೆಲವು ಮಾಹಿತಿಗಳು ಇಲ್ಲಿವೆ..... 

                           ಜಾಗತಿಕ ಮಟ್ಟದಲ್ಲಿನ ಅರ್ಥ ವ್ಯವಸ್ಥೆ ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಹಾಗೆ ಆಗುವ ಬದಲಾವಣೆಗೆ ಒಗ್ಗಿಕೊಳ್ಳಲು ಮತ್ತು ಭಾರತದ ಅರ್ಥ ವ್ಯವಸ್ಥೆಯನ್ನು ವಿಸ್ತರಿಸಲು ಹಳೆಯ ಮಸೂದೆಯನ್ನು ಬದಲು ಮಾಡಲು ಕೇಂದ್ರ ಸರ್ಕಾರ ತೀರ್ಮಾನಕ್ಕೆ ಬಂತು. ಅಗಸ್ಟ್ 30, 2013ರಂದು ಈ ಮಸೂದೆ ಅಧಿಕೃತವಾಗಿ ಜಾರಿಗೆ ಬಂತು. ಹಳೆಯ ಮಸೂದೆಯಲ್ಲಿದ್ದ 700 ಸೆಕ್ಷನ್ ಗಳನ್ನು 470ಕ್ಕೆ ತಗ್ಗಿಸಲಾಯಿತು. ಪ್ರಸ್ತುತ ಮಸೂದೆಯಲ್ಲಿ 29 ಅಧ್ಯಾಯಗಳು, 7 ಶೆಡ್ಯೂಲ್ ಗಳಿವೆ. 

                      ಸಾಮಾನ್ಯವಾಗಿ ನಾವು ಎಲ್ಲ ಉದ್ಯಮಕ್ಕೂ ಕಂಪೆನಿ ಎಂದುಬಿಡುತ್ತೇವೆ. ಆದರೆ ಈ ಮಸೂದೆಯ ಪ್ರಕಾರ ಯಾವ ಸಂಸ್ಥೆಗಳು ಈ ಮಸೂದೆಯಡಿ (ಹಳೆಯ ಅಥವಾ ಹೊಸ) ನೋಂದಣಿ ಮಾಡಿಸಿಕೊಂಡಿರುತ್ತವೆಯೋ ಅವು ಮಾತ್ರ ಕಂಪೆನಿಗಳೆಂದು ಪರಿಗಣಿಸಲ್ಪಡುತ್ತದೆ. ಯಾವಾಗ ಕಂಪೆನಿಯು ರಿಜಿಸ್ಟರ್ ಆಗುತ್ತದೆಯೋ ಆಗ ಅದು ಕಾನೂನಿನ ವ್ಯಕ್ತಿತ್ವ ಪಡೆಯುತ್ತದೆ. 

          ಈ ಕಂಪೆನಿಗಳನ್ನು ಹಲವಾರು ವಿಧವಾಗಿ ವಿಂಗಡಿಸಬಹುದು. ಅವುಗಳೆಂದರೆ - ೧. ಹೊಣೆಗಾರಿಕೆಯ ಆಧಾರಿತವಾಗಿ - 1. ಸೀಮಿತ ಪಾಲಿನ ಕಂಪೆನಿ (Company Limited by shares) 2.ಸೀಮಿತ ಗ್ಯಾರಂಟಿ ಕಂಪೆನಿ (Company limited by guarantee) 3.ಅನಿಯಮಿತ ಕಂಪೆನಿ (Unlimited company) ೨. ಸದಸ್ಯರ ಆಧಾರಿತವಾಗಿ 1. ಏಕೈಕ ನಿರ್ದೇಶಕ ಕಂಪೆನಿ (One Person Company) 2. ಖಾಸಗಿ ಕಂಪೆನಿ (Private Company) 3. ಸಾರ್ವಜನಿಕ ಕಂಪೆನಿ (Public Company) ೩. ನಿಯಂತ್ರಣದ ಆಧಾರಿತವಾಗಿ - 1. ಹಿಡುವಳಿ ಮತ್ತು ಅಂಗಸಂಸ್ಥೆ (Holding and Subsidiary Company) 2. ಸಹಾಯಕ ಕಂಪೆನಿ (Associate Company) ೪. ಬಂಡವಾಳದ ಆಧಾರಿತವಾಗಿ - 1.ದಾಖಲಿತ ಕಂಪೆನಿ (Listed Company) 2. ಪಟ್ಟಿ ಮಾಡದ ಕಂಪೆನಿ (Unlisted Company) ಇನ್ನೂ ಸರ್ಕಾರಿ ಕಂಪೆನಿ, ವಿದೇಶಿ ಕಂಪೆನಿ...ಹೀಗೆ ಹಲವಾರು ವಿಧದ ಕಂಪೆನಿಗಳಿವೆ. 

                       ಯಾವುದೇ ಕಂಪೆನಿ ಮೊದಲು ತನ್ನನ್ನು ತಾನು ರಿಜಿಸ್ಟ್ರಾರ್ ಆಫ್ ಕಂಪನೀಸ್ ನೊಂದಿಗೆ ದಾಖಲಿಸಿಕೊಳ್ಳಬೇಕು. ಆಗ ಅದು CIN (Corporate Identity Number) ಎಂಬ ವಿಶಿಷ್ಟ ಸಂಖ್ಯೆಯನ್ನು ಕೊಡುತ್ತದೆ. ಇದು ಪ್ರತಿ ಕಂಪೆನಿಗೂ ಭಿನ್ನವಾಗಿರುತ್ತದೆ. ಹಾಗೆಯೇ ಕಂಪೆನಿಗಳು MOA (Memorandum of Association) ಹಾಗೂ AOA (Articles of Association) ಗಳನ್ನು ತಯಾರಿಸಬೇಕಾಗುತ್ತದೆ. ಇವೆರಡೂ ಕಂಪೆನಿಯ ಅತ್ಯಂತ ಪ್ರಮುಖ ದಾಖಲೆಗಳು. ಸಂಸ್ಥೆಯ ಬೆನ್ನೆಲುಬೆಂದರೂ ತಪ್ಪಿಲ್ಲ. ಇವನ್ನು ಅಗತ್ಯವಿದ್ದಲ್ಲಿ ತಿದ್ದುಪಡಿ ಕೂಡ ಮಾಡಬಹುದು. ಕಂಪೆನಿಗಳು ಆರಂಭಗೊಳ್ಳುವ ಪೂರ್ವದಲ್ಲಿ ಜನರಿಗೆ ನೀಡುವ ವಿವರಣಪತ್ರ (Prospectus) ಹೇಗಿರಬೇಕು, ಏನನ್ನು ಒಳಗೊಂಡಿರಬೇಕು, ಯಾವ ನಿಗದಿತ ಸಮಯದಲ್ಲಿ ಹಂಚಬೇಕು ಎಂಬುದನ್ನು ಮಸೂದೆ ಹೇಳುವುದಲ್ಲದೇ ಅದರಲ್ಲಿ ಏನಾದರೂ ದೋಷಗಳಿದ್ದರೆ ಅದಕ್ಕೆ ಜವಾಬ್ದಾರಿಯಾದವರಿಗೆ ನೀಡುವ ಶಿಕ್ಷೆ (Criminal Liability Sec 34, Civil Liability Sec 35) ಯನ್ನೂ ಸಹ ತಿಳಿಸುತ್ತದೆ. ಕಂಪೆನಿಯು ಆರಂಭದಲ್ಲಿ ತನ್ನ ಶೇರುಗಳನ್ನು ಜನರಿಗೆ ಹಂಚಿರುತ್ತದೆ. ಯಾವುದೇ ಸಮಯದಲ್ಲಿ ಅದರ ಅಧಿಕಾರಯುತ ಬಂಡವಾಳ (Authorised Capital) ವನ್ನು ಕಡಿಮೆಗೊಳಿಸಲು ಬಯಸಿದರೆ ಅದು ತನ್ನದೇ ಶೇರುಗಳನ್ನು ಹಿಂಪಡೆಯಬಹುದು. ಇದಕ್ಕೆ ' Buy back ' ಎನ್ನುತ್ತಾರೆ. ಹಾಗೆ ಮಾಡಲು ಕಂಪೆನಿಯು ಅನೇಕ ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳೆಲ್ಲವನ್ನು ಈ ಮಸೂದೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಜೊತೆಗೆ ಶೇರುಗಳನ್ನು ಸ್ಟಾಕುಗಳಾಗಿ ಅಥವಾ ಸ್ಟಾಕುಗಳನ್ನು ಶೇರುಗಳಾಗಿ ಪರಿವರ್ತಿಸಲು ಅನುಸರಿಸಬೇಕಾದ ಕ್ರಮಗಳೂ ಈ ಮಸೂದೆಯಲ್ಲಿ ಸ್ಪಷ್ಟ ಹಾಗೂ ನಿಖರವಾಗಿದೆ. ಕಂಪೆನಿಗಳು ನೀಡುವ ಬೋನಸ್ ಶೇರುಗಳು, ಸಾಲಪತ್ರ (Debentures) ಗಳ ಬಗ್ಗೆ ವಿವರವಾದ ಮಾಹಿತಿಯೂ ಇದರಲ್ಲಿದೆ. ಎಲ್ಲಾ ಕಂಪೆನಿಗಳು ಕೆಲವು ದಾಖಲೆ ಅಥವಾ ಕಾಗದಪತ್ರಗಳನ್ನು ಕಾಪಿಡಬೇಕು. ಅದರ ಬಗೆಗಿನ ನಿಬಂಧನೆಗಳನ್ನೂ ಮಸೂದೆಯಲ್ಲಿ (Sec 88 to 91 and Sec 94 to 95) ಹೇಳಲಾಗಿದೆ. 

                         ಪ್ರತಿ ಕಂಪೆನಿಯೂ ತನ್ನ ವಾರ್ಷಿಕ ಆದಾಯದ ವರದಿಯನ್ನು ಕಡ್ಡಾಯವಾಗಿ ತಯಾರಿಸಬೇಕು. ಅದನ್ನು ಲೆಕ್ಕ ಪರಿಶೋಧನಾಧಿಕಾರಿ (Chartered Accountant) ಬಳಿ ಆಡಿಟ್ ಮಾಡಿಸಬೇಕು. ಜೊತೆಗೆ 10 ವರ್ಷದ ನಂತರ ತನ್ನ ಆಡಿಟರ್ ಗಳನ್ನು ಕಡ್ಡಾಯವಾಗಿ ಬದಲಿಸಬೇಕು. ಹಾಗೆಯೇ ಕಂಪೆನಿಗಳು ಏರ್ಪಡಿಸುವ ಸಾಮಾನ್ಯ ಸಭೆ (General Meeting), ಹೆಚ್ಚುವರಿ ಸಭೆ (Extra ordinary Meeting) ಗಳ ವಿಧಾನ, ಪಾಲಿಸಬೇಕಾದ ನಿಯಮಗಳು, ಎರಡು ಸಾಮಾನ್ಯ ಸಭೆಗಳ ನಡುವಿನ ಗರಿಷ್ಠ ಕಾಲಾವಧಿ ಹೀಗೆ ಎಲ್ಲದರ ಕುರಿತು ಈ ಮಸೂದೆ ಮಾಹಿತಿ ಒದಗಿಸುತ್ತದೆ. ಅಲ್ಲದೇ ಷೇರುಪೇಟೆಯಲ್ಲಿ ನೋಂದಣಿಯಾದಾಗ ಪಾಲಿಸಬೇಕಾದ ಸೆಬಿ (Securities and Exchange Board of India)ಯ ನಿಯಮಗಳ ಬಗ್ಗೆಯೂ ಉಲ್ಲೇಖವಿದೆ. 

                ಭಾರತೀಯ ಕಂಪೆನಿಗಳ ಕಾಯ್ದೆ 2013 ರ ಒಂದು ಉತ್ತಮ ಅಂಶವೆಂದರೆ ' ಏಕೈಕ ನಿರ್ದೇಶಕ ಕಂಪೆನಿ' (One Person Company) ಯ ಸ್ಥಾಪನೆಗೆ ಅವಕಾಶ ನೀಡಿದ್ದು. ಹಳೆಯ ಕಾಯ್ದೆಯಡಿ ಇದ್ದ ಕನಿಷ್ಠ ನಿರ್ದೇಶಕರ ಮಿತಿ ಎರಡು. ಆದರೆ ಹೊಸ ಕಾಯ್ದೆಯಡಿ ಓರ್ವ ನಿರ್ದೇಶಕನಿದ್ದರೂ ಆತ ಕಂಪೆನಿ ಆರಂಭಿಸಬಹುದು. ಪಾಲುದಾರಿಕೆ ಸಂಸ್ಥೆ(Partnership Firms) ಮತ್ತು ಕಂಪೆನಿ - ಇವೆರಡರ ಉತ್ತಮ ಅಂಶಗಳನ್ನು ಒಳಗೊಂಡ ಏಕೈಕ ನಿರ್ದೇಶಕ ಕಂಪೆನಿ ಒಂದು ಹೊಸ ಪರಿಕಲ್ಪನೆಯೇ ಸರಿ. 

                ಇದಲ್ಲದೇ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (Corporate Social Responsibility , in short CSR) ಇನ್ನೊಂದು ನವಿರಾದ ಕಲ್ಪನೆ. ಇದರಂತೆ 5 ಕೋಟಿಗೂ ಹೆಚ್ಚು ನಿವ್ವಳ ಲಾಭ (Net profit) ಇರುವ ಅಥವಾ 1000 ಕೋಟಿಗೂ ಹೆಚ್ಚು ವಹಿವಾಟು (Turnover) ನಡೆಸುವ ಅಥವಾ 500 ಕೋಟಿಗೂ ಹೆಚ್ಚಿನ ನಿವ್ವಳ ಮೌಲ್ಯ (Net worth) ಇರುವ ಕಂಪೆನಿಗಳು ತಮ್ಮ ಲಾಭದಲ್ಲಿ 2 ಶೇಕಡರಷ್ಟು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಇದರಿಂದ ಕಂಪೆನಿಗಳು ಬೆಳೆಯುವುದರ ಜೊತೆಗೆ ಸಮಾಜದ ಉದ್ಧಾರವೂ ಆಗುತ್ತದೆ. ಮೈಕ್ರೋಸಾಫ್ಟ್, ಗೂಗಲ್, ಐ.ಟಿ‌.ಸಿ., ಏಪಲ್, ಸೋನಿ ಇವೆಲ್ಲ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಂಪೆನಿಗಳು. ಕ್ಲಾಸ್ ಮೇಟ್ ನೋಟ್ ಬುಕ್ ಗಳು ಎಲ್ಲರಿಗೂ ಗೊತ್ತೇ ಇರುತ್ತದೆ. ಪ್ರತಿ ನೋಟ್ ಬುಕ್ ನ ಹಿಂಭಾಗದಲ್ಲಿ ಇದರ ಮಾರಾಟದಿಂದ ಬರುವ ಒಂದು ರೂಪಾಯಿಯನ್ನು ಬಡಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತೇವೆಂದಿರುತ್ತದೆ. ಇದನ್ನು ಕಂಡಾಗ ಕೊಳ್ಳಲು ನಮಗೂ ಹೆಮ್ಮೆಯೆನಿಸುತ್ತದೆ. ಅವರಿಗೂ ಹೆಚ್ಚು ಮಾರಾಟವಾಗುತ್ತದೆ. ಅಲ್ಲಿಗೆ ಸ್ವಾಮಿಕಾರ್ಯವೂ ಆಯ್ತು. ಸ್ವಕಾರ್ಯವೂ ಆದಂತಾಯ್ತು. ಕಂಪೆನಿಗಳಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು, ವಹಿವಾಟುಗಳನ್ನು ಗಮನಿಸಿ ಮಾಡಿದ ಕಾನೂನು ಭಾರತೀಯ ಕಂಪೆನಿಗಳ ಮಸೂದೆ 2013. ಏನೇ ಆದರೂ ಇದು ಉದ್ಯಮ ಸ್ನೇಹೀ ಕಾಯ್ದೆ. ಇದರ ಪ್ರಯೋಜನಗಳನ್ನು ಪಡೆಯಲು ಕಂಪೆನಿಗಳು ಮುಂದಾಗುತ್ತಿವೆ. ಇದರ ಮುಖ್ಯ ಧನಾತ್ಮಕ ಅಂಶವೆಂದರೆ ಸರಳತೆ ಮತ್ತು ನಿಖರತೆ. ಈ ಮಸೂದೆಯನ್ನು ಸಮರ್ಪಕವಾಗಿ ಪಾಲಿಸಿದಲ್ಲಿ ಅಭಿವೃದ್ಧಿ ಖಚಿತ. ಭಾರತದ ಆರ್ಥಿಕತೆಯಲ್ಲಿ ಒಂದು ಹೊಸ ಛಾಪನ್ನೇ ಮೂಡಿಸಿದ ಮಸೂದೆಯಿದು. 

                  ಇದರಲ್ಲಿ ದೋಷಗಳೇ ಇಲ್ಲವೆಂದಲ್ಲ. ಇಲ್ಲೂ ಹಲವು ಹುಳುಕುಗಳಿವೆ. 
 1. ಈ ಮಸೂದೆಯ ಪ್ರಕಾರ ಕಂಪೆನಿಯು ಮೂರನೆಯ ಒಂದು ಭಾಗದಷ್ಟು ಸ್ವತಂತ್ರ ನಿರ್ದೇಶಕ (Independent Director) ರನ್ನು ಹೊಂದಿರಬೇಕು. ಮೇಲ್ನೋಟಕ್ಕೆ ಒಳಿತೆನಿಸಿದರೂ ಇಲ್ಲಿ ತೊಂದರೆಗಳಿವೆ. ಪ್ರವರ್ತಕರಿಂದಲೇ (Promoters) ನೇಮಿಸಲ್ಪಡುವ ನಿರ್ದೇಶಕರು ಸ್ವತಂತ್ರರಾಗಲು ಹೇಗೆ ಸಾಧ್ಯ ? ಆರ್ಥಿಕವಾಗಿ, ಸಾಮಾಜಿಕವಾಗಿ ಸಂಬಂಧವೇ ಇಲ್ಲದವರನ್ನು ನಿಜವಾಗಿಯೂ ಪ್ರವರ್ತಕರು ತಮ್ಮ ಕಂಪೆನಿಯ ಡೈರೆಕ್ಟರ್ ಆಗಿ ನೇಮಿಸುತ್ತಾರೆಯೇ? ಜೊತೆಗೆ ಸ್ವತಂತ್ರ ನಿರ್ದೇಶಕರಾಗಲು ಹಲವಾರು ಯೋಗ್ತತೆಗಳಿರಬೇಕು. ಅವೆಲ್ಲವೂ ಇದ್ದರೂ ಅವರ ಜವಾಬ್ದಾರಿಗಳನ್ನು ಕೇಳಿದ ನಂತರ ಸಾಮಾನ್ಯರಾದವರಾರೂ ಆ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ. 
2. ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆಯ ಪ್ರಕಾರ 2 ಶೇಕಡ ಎಂದರೂ " ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ " ಎಂದರೇನೆಂದು ಎಲ್ಲಿಯೂ ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಜೊತೆಗೆ ಹಲವಾರು ಕಂಪೆನಿಗಳು (ONGC ಯೂ ಸೇರಿದಂತೆ) ಅಷ್ಟು ಮೊತ್ತವನ್ನು ಖರ್ಚುಮಾಡಿಲ್ಲ. 
3. ಇದು ವಿಪರೀತ ಆಡಳಿತಶಾಹಿಯಾಗಿದೆ. ಈ ಮಸೂದೆಯ ಪ್ರಕಾರ ಎಲ್ಲ ನಿರ್ದೇಶಕರೂ DIN (Director Identification Number)ನ್ನು ಪಡೆಯಬೇಕು. ಇದು PAN (Permanent Account Number) ನಂತೆಯೇ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಹೀಗಾಗಿ ಸರ್ಕಾರದ ಹದ್ದಿನ ದೃಷ್ಟಿಗೆ ಬೀಳುವುದು ಯಾರಿಗೂ ಇಷ್ಟವಿಲ್ಲ. 
4. ಲಿಂಗಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಕಂಪೆನಿಯ ಆಡಳಿತ ಮಂಡಳಿಯಲ್ಲಿ ಕನಿಷ್ಠ ಒಂದು ಮಹಿಳಾ ನಿರ್ದೇಶಕಿಯ ನೇಮಕ ಕಡ್ಡಾಯವಾಗಿದೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಅಂತಹ ನಿರ್ದೇಶಕತ್ವಕ್ಕೆ ಯೋಗ್ಯ ಮಹಿಳೆಯರು ನಮ್ಮ ದೇಶದಲ್ಲಿ ಬಹು ವಿರಳ ಸಂಖ್ಯೆಯಲ್ಲಿದ್ದಾರೆಂಬುದು ವಿಷಾದನೀಯ ಸಂಗತಿ. 

                 ಭಾರತೀಯ ಕಂಪೆನಿಗಳ ಮಸೂದೆ 2013 ತನ್ನದೇ ಆದ ಇತಿ ಮಿತಿಗಳನ್ನು ಹೊಂದಿದೆ. ಆದರೂ ನಿಬಂಧನೆಗಳನ್ನು ಕಟ್ಟುನಿಟ್ಟುಗೊಳಿಸಿ ಬೇನಾಮಿ ಕಂಪೆನಿಗಳ ಸೃಷ್ಟಿಯನ್ನು ತಡೆಯುವ ಪ್ರಯತ್ನ ಇಲ್ಲಿದೆ. ಹಳೆಯ ಮಸೂದೆಯಲ್ಲಿದ್ದ ಹಲವಾರು ಸಂಗತಿಗಳ ಸ್ಪಷ್ಟೀಕರಣವಿದೆ. ಈ ದೃಷ್ಟಿಯಿಂದ ಇದು ಒಂದು ಹೊಸ ಬದಲಾವಣೆ ತರಬಲ್ಲ ಮಸೂದೆಯಾಗಿದೆ. ಲೋಪ ದೋಷಗಳು, ಕುಂದು ಕೊರತೆಗಳು ಎಲ್ಲೆಡೆ ಸ್ವಲ್ಪವಾದರೂ ಇದ್ದೇ ಇರುತ್ತದೆ. ಪರಿಪೂರ್ಣತೆ ಎಂಬುದು ತಲುಪಲಾಗದ ಗಮ್ಯ. ಅದರತ್ತ ಹೆಜ್ಜೆ ಹಾಕಬಹುದಷ್ಟೇ... 

- R. R. B.

ನೆನಪುಗಳ ಬುತ್ತಿಯಿಂದ..

                                   ಸ್ಮೃತಿಪಟಲದಲಿ ನವಿರಾದ ಛಾಪು ಮೂಡಿಸಿದ ಕಾಲವದು. ಕಪಟತೆಯ ವಾಸನೆಯೂ ಸೋಕದ ಮುಗ್ಧ ಮನಗಳ ಕಾಲ. ಜೀವನದ ಪ್ರತಿ ಕ್ಷಣವನ್ನೂ ಕುತೂಹಲದಿಂದ ಎದೆಗಪ್ಪಿ ಸಂಭ್ರಮಿಸುತ್ತಿದ್ದ ಕಾಲ..ಅಂಬೆಗಾಲಿಡಲು ಆರಂಭಿಸಿದಾಗಿನಿಂದ ' ಪ್ರೌಢತೆ'ಯ ಮೆಟ್ಟಿಲು ಹತ್ತುವವರೆಗಿನ ಕಾಲ.... 

                ಯಾವ ನೋವು - ಚಿಂತೆಗಳಿಲ್ಲದೇ ಅಮ್ಮನ ಮಡಿಲಲ್ಲಿ ಹಾಯಾಗಿ ನಿದ್ರಿಸುತ್ತಿದ್ದ ದಿನಗಳು, ನಿಧಾನವಾಗಿ ತೆವಳುತ್ತ ಅಕ್ಕನದೋ ಇಲ್ಲಾ ಅಣ್ಣನದೋ ಪುಸ್ತಕದ ಹಾಳೆ ಹರಿದು ಕಿಲಕಿಲನೆ ನಗುತ್ತಿದ್ದ ಘಳಿಗೆ, ಮನೆಯಂಗಳದಲ್ಲಿ ಹೊರಳಾಡಿ, ಮಣ್ಣಿನ ಘಮ ಹೀರುತ್ತ ತುಸು ತುಸುವೇ ಬಾಯಿಗೆ ಹಾಕಿಕೊಂಡ ಸಮಯ, ಮೂರು ಗಾಲಿಗಳ ಸೈಕಲ್ ಓಡಿಸುವಾಗ ಏನೋ ಸಾಧಿಸಿದ ಸಂಭ್ರಮ, ಕೆಲದಿನಗಳ ಬಳಿಕ ಅಂಗನವಾಡಿಗೆ ಹೋಗುವ ಹಬ್ಬ, ಅಲ್ಲಿ ದಿನವಿಡೀ ಆಟವಾಡಿ ನೆಪಮಾತ್ರಕ್ಕೆ ಒಂದೆರಡು ಹಾಡು ಕಲಿತು, ಕೊಡುವ ಚಿತ್ರಾನ್ನವನ್ನೋ, ಉಂಡೆಯನ್ನೋ ತಿಂದು, ಕುಣಿಯುತ್ತ ಮನೆಗೆ ಬರುವುದು, ಮನೆಯಲ್ಲಿ ಅಜ್ಜ ಅಜ್ಜಿಯರ ಪ್ರೀತಿಯ ಕಡಲಲ್ಲಿ ತೇಲಿಹೋಗುವ ಅನುಭವ, ಕತೆ ಕೇಳುವ ಪರ್ವ, ಪ್ರಥಮ ಬಾರಿಗೆ ಶಾಲೆಯ ಮೆಟ್ಟಿಲು ಹತ್ತಿದ ವಿಭಿನ್ನ, ವಿಶಿಷ್ಟ, ವಿನೂತನ ಕ್ಷಣ , ಮೊದಲ ಗುರುಗಳು, ಮೊದಲ ಪಾಠ, ಮೊದಲ ಸ್ನೇಹದ ಸವಿ... 
         
           ಹುಡುಗ - ಹುಡುಗಿ ಎಂಬ ಭೇದವಿಲ್ಲದೇ ಸಣ್ಣ ಬಳಪಕ್ಕೋ, ಇನ್ನೊಂದಕ್ಕೋ ಕಿತ್ತಾಡುತ್ತಿದ್ದ ಬಾಲ್ಯದ ರಸನಿಮಿಷಗಳು, ವಾರಕ್ಕೊಮ್ಮೆ ಮಾತ್ರವಿದ್ದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯೋಗ, ವ್ಯಾಯಾಮದ ತರಗತಿಗಳು, ಚಾತಕಪಕ್ಷಿಯಂತೆ ಸಂಜೆ ಆಟಕ್ಕೆ ಬಿಡುವುದನ್ನೇ ಕಾಯುತ್ತಿದ್ದ ಪುಟ್ಟ ಜೀವಗಳು, ಶಾಲೆಯ ಪುಟ್ಟ ಅಂಗಳದಲ್ಲೇ ಲಗೋರಿಯೋ, ಖೋಖೋವೋ ಆಡಿ ನಲಿದಾಡುವ ಖುಷಿ, ಪ್ರತಿವರ್ಷ ಅಗಸ್ಟ್ 15ಕ್ಕೋ, ಜನವರಿ 26ಕ್ಕೋ ಕಾಯುವುದು, ಊರ ತುಂಬ ಘೋಷಣೆ ಕೂಗುತ್ತ ಜಾಥಾ ಹೋಗಿ, ಧೂಳೆಬ್ಬಿಸಿ ಬರುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೊನೆಯಲ್ಲಿ ಕೊಡುವ ಚಾಕಲೇಟಿಗಾಗಿ ಕಾಯುತ್ತ ಕುಳಿತುಕೊಳ್ಳುವ ಸರಳ ಮನಗಳು... 

                      ಸಂಜೆ ಶಾಲೆ ಮುಗಿಸಿ ನೇರವಾಗಿ ಮನೆಗೆ ಹೋದ ದಿನಗಳೇ ಇಲ್ಲವೇನೋ. ಅಲ್ಲೇ ಪಕ್ಕದಲ್ಲಿದ್ದ ಹುಣಸೇಮರದಿಂದ ಹುಣಸೇಕಾಯಿ ಕಿತ್ತುಕೊಡಲು ಹುಡುಗರನ್ನು ಪೀಡಿಸುವುದು, ಅತ್ತ ಅವರು ಮರಕ್ಕೆ ಕಲ್ಲು ಹೊಡೆಯುತ್ತ ನಿಂತರೆ ಇತ್ತ ನಮ್ಮದು ಪಕ್ಕದ ಬೆಟ್ಟಕ್ಕೆ ಹೋಗಿ ಬಿಳಿ ಮುಳ್ಳೇಹಣ್ಣು, ಕುಸುಮಾಲೆ ಹಣ್ಣು, ಕರಿಸೂಜಿ ಹಣ್ಣುಗಳ ಕೊಯ್ದು ತರುವ ಸಾಧನಾ ಕಾರ್ಯ, ಎಲ್ಲವನ್ನು ಹಂಚಿ ತಿನ್ನುವ ಸುಸಮಯ, ಸೈಲೆಂಟಾಗಿ ಯಾರ್ಯಾರದೋ ಮನೆಯ ತೋಟಕ್ಕೆ ಹೋಗಿ ಮಾವಿನಹಣ್ಣು ಕದಿಯುವ ತುಂಟತನ, ಸಂಜೆ ಗದ್ದೆಯಂಚಿಗೆ ಹೋಗಿ ರೈಲು ಹಳಿಗಳ ಮೇಲೆ ಒಂದು ರೂಪಾಯಿ ನಾಣ್ಯವನ್ನಿಟ್ಟು, ರೈಲು ಹೋದಮೇಲೆ ದೊಡ್ಡದಾಗಿ ಬಿದ್ದಿರುವ ಆ ನಾಣ್ಯವನ್ನು ಹೆಕ್ಕಿ ತರುತ್ತಿದ್ದ ಕ್ಷಣ... 

                  ಮಳೆಗಾಲದಲ್ಲಂತೂ ನಮ್ಮ ತರಲೆ - ತುಂಟಾಟಗಳು ತುಸು ಹೆಚ್ಚೇ !!... ಬೇಕೆಂದೇ ಮಳೆ ಬರುವಾಗ ಛತ್ರಿ ಇದ್ದರೂ ಬೀಳುವ ಹನಿಗಳೊಡನೆ ಪುಟ್ಟ ಜೀವಗಳ ಸಂಭಾಷಣೆ, ಪೂರ್ತಿ ಒದ್ದೆಯಾಗಿ ಮನೆ ತಲುಪುವ ತವಕ, ಮನೆಯಲ್ಲಿ ಎಲ್ಲ ಬೈಯ್ಯುವಾಗ ತಲೆ ತಗ್ಗಿಸಿ ನಿಂತು, ಅವರು ಅತ್ತ ಹೋದಾಕ್ಷಣ ಮುಖದಲ್ಲಿ ತಟ್ಟನೆ ಮೂಡುವ ಮುಗುಳ್ನಗೆ..., ಪುಸ್ತಕದ ಹಾಳೆಗಳಿಗಂತೂ ಆಗ ಕಾಗದದ ದೋಣಿಯ ರೂಪ... ಮಳೆ ನಿಂತ ಮೇಲೆ ರಸ್ತೆಯ ಹೊಂಡಗಳಲ್ಲೆಲ್ಲ ನಾವು ಬಿಟ್ಟ ಕಾಗದದ ದೋಣಿಯ ಅವಶೇಷಗಳು... (ನಮ್ಮೂರ ರಸ್ತೆಯ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳುವುದು ಇಲ್ಲಿ ಅಪ್ರಸ್ತುತ). ಕೆರೆಯ ನೀರಿಗೆ ಕಲ್ಲೆಸೆದು ಅದು ಒಂದೆರಡು ಬಾರಿ ನೀರಮೇಲ್ಮೈಯನ್ನು ಸ್ಪರ್ಷಿಸಿ ಕಡೆಗೆ ಮುಳುಗಿದರೆ ಅದನ್ನೇ ದೊಡ್ಡ ಚಾಕಚಕ್ಯತೆ ಎಂಬಂತೆ ಮೆರೆಯುವ ಆ ಘಳಿಗೆಗಳು, ಐಸ್ ಕ್ರೀಮ್ ತಿನ್ನಲೆಂದೇ ಜಾತ್ರೆಗೆ ಹೋಗಲು ಪರಿತಪಿಸುವ ಆ ಪುಟ್ಟ ಮನಗಳು, ಹಬ್ಬಗಳಲ್ಲಿ ಹೊಸ ಅಂಗಿ ಹಾಕಿ ಕುಣಿದು ಕುಪ್ಪಳಿಸುತ್ತಿದ್ದ ಆ ಕ್ಷಣ.. 

            ಪ್ರತಿ ಕ್ಷಣಗಳೂ ಪ್ರತಿ ನಿಮಿಷಗಳೂ, ಪ್ರತಿ ಅನುಭವಗಳೂ ಅಮೋಘ, ಅದ್ಭುತ, ಅವರ್ಣನೀಯ... ಆ ಸುಂದರ ಅನುಭೂತಿಯನ್ನು ಹೇಳಲು ಪದಗಳೇ ಸಾಲದು...ಕೆಲವು ಸುಮಧುರ ಅನುಭವಗಳನ್ನು ವಿವರಿಸುವ ಗೋಜಿಗೆ ಹೋಗಬಾರದು. ಸುಮ್ಮನೆ ಹೃದಯ ತುಂಬಿ ಅನುಭವಿಸಬೇಕಷ್ಟೇ, ಆಸ್ವಾದಿಸಬೇಕಷ್ಟೇ...! 

 - R. R. B.

ಅಲಿಖಿತ ಕವನ..


ನಿನ್ನ ನವಿರಾದ ಈ ಕಂಗಳ ಕೊಳದಿ 
ಈಜಾಡೋ ಮೀನು ನಾನಾಗುವಾಸೆ 
ಪ್ರಶಾಂತ ರಾತ್ರಿಯ ಪೌರ್ಣಿಮೆ ಚಂದ್ರನ 
ಮೊಗದಲೇ ತೋರುವ ನಿನ್ನ ಹೊಸ ವರಸೆ.... 

ಕಾಲುದಾರಿಯಲಿ ಜೊತೆಯಾಗಿಸು ಹೆಜ್ಜೆ 
ಘಲ್ಲು ಘಲ್ಲೆನುತಿರಲಿ ನಿನ್ನ ಕಾಲ್ಗೆಜ್ಜೆ 
ಮರೆಯಾದ ಮಾತೀಗ ಮುದ್ದಾದ ಮೌನ 
ಎದೆಗೂಡಲ್ಲಿ ಮಧುರ ಆಲಾಪದ ತನನ.... 

 ತುಸುಕೆಂಪಾಗಿ ನಾಚಿಹುದು ಆ ಪಡುವಣ 
ಮುಸ್ಸಂಜೆಯ ರಾಗದಲಿ ಸ್ವರಗಳಾ ಪಯಣ 
ಸಂಪ್ರೀತಿಯಾ ಕೃಷಿಗೆ ನೀಡು ಸಹಕಾರ 
ಎಂದೆಂದೂ ನೆನಪಿಡುವೆ ನಿನ್ನ ಉಪಕಾರ.... 

 ಒಡಲ ಕಡಲಲಿ ನಿನ್ನದೇ ಅಲೆಗಳಬ್ಬರ 
ಕಿನಾರೆಯ ಮರಳಲಿ ಅಕ್ಕರೆಯ ಚಿತ್ತಾರ 
ನಿನ್ನ ಬಾಳದೋಣಿಗೆ ನಾ ಸಹನಾವಿಕ 
ಇತ್ತೀಚಿಗಂತೂ ಯಾಕೋ ಬಲುಭಾವುಕ.... 

 ತೀರದಾ ಬಯಕೆಗಳ ಸಣ್ಣ ಸಂಗ್ರಾಮ 
ಇಟ್ಟುಬಿಡು ಅದಕೊಂದು ಅಲ್ಪವಿರಾಮ 
ಮನದಲಿ ನಿನ್ನದೇ ನೆನಪುಗಳ ಮನನ 
ಕೈಗೆಟುಕದಾ ನೀನೊಂದು ಅಲಿಖಿತ ಕವನ.... 

 - R. R. B.

ನೀನಾಗಬೇಕು...

              ಇನ್ನೂ ಚಿತ್ತಾರಗಳೇ ಮೂಡಿರದ ಖಾಲಿ ಹಾಳೆ ನಾನು. ಅದರಲಿ ಬರೆವ ಲೇಖನಿ ನೀನಾಗಬೇಕು. ನನ್ನಲ್ಲಿರುವ ಭಾವನೆಗಳು ಬತ್ತಿ ಬಾಡಿಹೋಗುವ ಮುನ್ನ ನವಭಾವ ಪಲ್ಲವಿಸುವಂತೆ ಮಾಡುವ ಜೀವಜಲ ನೀನಾಗಬೇಕು. ತಲೆಬುಡವೇ ಇಲ್ಲದಂತಹ ನನ್ನ ಹುಚ್ಚು ಮಾತಿಗೆ ಅರ್ಥ ನೀನಾಗಬೇಕು. ನನ್ನಲ್ಲಿನ 'ನ'ಕಾರಗಳ ಅಳಿಸಿ ಆತ್ಮವಿಶ್ವಾಸ ತುಂಬುವ ಚೇತನ ನೀನಾಗಬೇಕು. 
                ನನ್ನೆಲ್ಲ ಕನಸುಗಳ ಸಾಕಾರರೂಪ ನೀನಾಗಬೇಕು. ನಾ ಮಾಡುವ ತರಲೆ - ತುಂಟಾಟಗಳಿಗೆ ಜೊತೆಗಾರ ನೀನಾಗಬೇಕು. ಹರೆಯದ ಧುಮ್ಮಿಕ್ಕುವ ಭಾವಗಳಿಗೆ ಹರಿವಿನ ಮಾರ್ಗ ನೀನಾಗಬೇಕು. ನನ್ನೆಲ್ಲಾ ಬಯಕೆಗಳ ಮೂರ್ತ ರೂಪ ನೀನಾಗಬೇಕು. ಮಾತುಗಳೇ ಇಲ್ಲದ ನೀರವ ಮೌನದಲ್ಲಿ ಅನುರಕ್ತಿಯ ಅಭಿವ್ಯಕ್ತಿ ನೀನಾಗಬೇಕು. ನನ್ನ ಕಾಲುದಾರಿಯ ಪಯಣಕೆ ಗಮ್ಯ ನೀನಾಗಬೇಕು. ನೋಡುವ ಕಣ್ಣುಗಳು ನನ್ನದಾದರೆ ನೋಟ ನೀನಾಗಬೇಕು. ಹಾಡು ನಾನಾದರೆ ರಾಗ ನೀನಾಗಬೇಕು. ಅನುರಾಗದ ಭಾವ ನೀನಾಗಬೇಕು. ನನ್ನಲ್ಲಿನ ' ನಾನು ' ಕಳೆದು ನೀನಾಗಬೇಕು. ಕೇವಲ ನೀನಾಗಬೇಕು... 

- R. R. B.

ಭೂಮಿಜೆಯ ಆಂತರ್ಯದಿ..

 ಕರಗದೇ ಈ ದಟ್ಟ ಕಾನನದ ಕಾರಿರುಳು 
ಭಾವಗಳ ಸ್ತಬ್ಧಗೊಳಿಸಿ ನಿರ್ವಾಣವಾಗಿಹ ಕಲ್ಲು ? 
ಅಲ್ಲೆಲ್ಲೋ ಕೇಳುತಿಹ ಜೀರುಂಡೆಯ ಸದ್ದು 
ಮರಗಳಿಂದ ಇಳಿಬಿದ್ದ ಹಲವಾರು ಬಿಳಲು 
ಕಣ್ಣಳತೆಯ ದೂರಕೂ ವಿಪಿನವೇ ದಾರಿ 
ರೋದನವೇ ಈಗ ನೋವ ತಿಳಿಸುವ ವೈಖರಿ?... 
 
ಅದೆಷ್ಟೋ ತುಂಬು ಹರೆಯದ ಹೊಂಗನಸುಗಳು 
ಬಾಳಪಯಣಕೆ ಎಂದು ಬುತ್ತಿಯಾಗಿಸಿದ ಬಯಕೆಗಳು 
ಉದ್ಯಾನದಿ ಸಖಿಯೊಡನೆ ತೀರದ ತುಂಟಾಟ 
ಅರೆಕ್ಷಣದಿ ಮರೆಯಾಗೋ ಮೆಚ್ಚುಗೆಯ ಕುಡಿನೋಟ 
ಮೊಗೆದಷ್ಟೂ ಉಕ್ಕುವ ಆ ಮಮತಾಮಯಿ ಪ್ರೇಮ 
ತನು - ಮನವ ತಣಿಸುವಾ ವಿಹಂಗಮ ವಿದೇಹ.... 

ಹೆಜ್ಜೆಯ ಗೆಜ್ಜೆಗೆ ದನಿಯಾದ ಶ್ರೀರಾಮ 
ಮನದಂಗಳದಿ ಅನುಕ್ಷಣವೂ ಅವನದೇ ನಾಮ 
ತೊಡುವ ಕಾಲುಂಗುರ, ಸಿಂಧೂರಕೆ ಆತನೇ ಒಡೆಯ 
ಒಲವ ಪ್ರತಿದನಿಗೂ ಪ್ರತಿಧ್ವನಿಯಾಗೋ ಇನಿಯ 
ಜೀವಕೆ ಜೀವ ಬೆಸೆಯಲು ರಾಘವನಿದ್ದಾಗ 
ಭಯ ಹುಟ್ಟಿಸಲೇ ಇಲ್ಲ ಆ ದಂಡಕಾರಣ್ಯ...
 
ಕಣ್ಣಂಚಿನಲೇ ಸಾವಿರ ಸಂದೇಶಗಳ ರವಾನೆ 
ಬೇಕಿಲ್ಲ ಪ್ರತಿ ಚಲನೆಗೂ ಯಾರ ಅನುಮೋದನೆ 
ತನು ಹೂವಾಗುತ್ತಿತ್ತು ಅವನಪ್ಪುಗೆಯಲಿ 
ತೇಲಾಡುವ ಅನುಭವ ಆನಂದದ ಅಲೆಯಲಿ 
ಕನಸುಗಳ ಗಿಡದಲಿ ನೂರಾರು ನವಪಲ್ಲವ 
ಸಂತೃಪ್ತಿಯ ಮಳೆಯಲಿ ತೊಯ್ದಿತ್ತು ಈ ಜೀವ.... 

ಬದುಕ ಪುಟದಲಿ ಸವಿನೆನಪ ರಂಗೋಲಿ 
ಪ್ರಸವಿಸೋ ಭಾವಗಳೋ ಜೀಕೋ ಜೋಕಾಲಿ 
ಸಿಗಬಹುದೇ ಮತ್ತೆ ಗತಿಸಿದ ಆ ದಿನಗಳು? 
ಶ್ರೀರಾಮನ ಸನಿಹದಿ ಎಲ್ಲ ಮರೆವ ಕ್ಷಣಗಳು ? 
 
ವಾಯುವೇಗದಲಿ ಯೋಚನಾಲಹರಿಯ ವಿಹಾರ 
ಲಭಿಸುವುದೇ ನನ್ನ ಈ ಪರಿಸ್ಥಿತಿಗೆ ಪರಿಹಾರ ? 
ನಿರ್ಮಾನುಷ ಅರಣ್ಯದಲಿ ವಿಚಿತ್ರ ಏಕಾಂತ 
ಒಬ್ಬಳೆ ಎನ್ನಲು ಬಿಡದ ಒಡಲಲಿಹ ಕಂದಮ್ಮ 
 ಏನೂ ತೋಚದಾ ವೈದೇಹಿಯ ಆಂತರ್ಯದ ಪ್ರಶ್ನೆ 
ಮುಂದೆ ಹಾದಿ ಯಾವುದೋ
 ಪಯಣ ಎಲ್ಲಿಗೋ ?...
 - R. R. B.

ಭಿನ್ನ

ಕಾಡುಮಲ್ಲಿಗೆಯು ಪಸರಿಸುವ ಘಮಕೂ 
ಕಾಡುವಾ ಕಲ್ಪನೆಗಳ ಕೌತುಕದ ಲೇಪ 
 ಶ್ವೇತವರ್ಣೆಯ ಕೋಮಲ ದಳಗಳೂ 
ಶೇಖರಿಸಿರಬಹುದು ಸಾವಿರ ಸಂತಾಪ.... 

ಹೋಳಿಯ ಬಣ್ಣಗಳ ಸರಿಗಮದ ಹಿಂದೆ 
ಇದೆಯೇ ಅವ್ಯಕ್ತಭಯದ ಚರಮಗೀತೆ?... 
ಮನಕೆ ಹತ್ತಿದ ಬಣ್ಣ ಮಾಸುವಾ ಮುನ್ನ 
ತೊಳೆದು ಆಗಬೇಕು - ನಿರ್ಭಾವ, ನಿರಾಳ... 

ಸಂತೆಯ ಗೌಜಿ ಗದ್ದಲದ ನಡುವೆಯೂ 
ಕೂಡಿರುವ ಏಕಾಂಗಿಯ ತೀರದ ರೋದನ 
ದೂರದಿ ನಿಂತ ಆಕೆಯಲಿ ಅಸೂಯೆಯ ಛಾಯೆ ! 
ಎಂಥಹ ವಿಲಾಸೀ ಬದುಕು ಇವರದೆಂದು... 

ಜೀವನ ವಿಲಾಸಿಯದೋ ? ಇಲ್ಲಾ ವಿರಾಗಿಯದೋ? 
ತಿಳಿವೆಂದರೆ ತಿಳಿಯದ ಮನಕೂ ತಿಳಿವ ಹಂಬಲ 
ಇಳೆಯಲಿ ಆದಿ - ಅಂತ್ಯಗಳ ನಡುವಣ ದೂರ... 

ಆಸೆ - ಕನಸುಗಳ ನಿರಂತರ ಘರ್ಷಣೆಯಲಿ 
ಅಪಾರ ಗೊಂದಲವೆಂಬ ಶಾಖದಾ ಉತ್ಪತ್ತಿ ! 
ನೋಡಿದಾತ ನಗುತ್ತಿದ್ದಾನೆ - ಗಹಗಹಿಸಿ 
ಹುಚ್ಚುತನದ ಪರಮಾವಧಿ ಅಂದರೆ ಇದೇ‌.. ಎಂದು 
ಅವರಿವರ ಹಲುಬಾಟ - ಬಾಯಿಗೆ ಬಂದಂತೆ 
ತಾವಂದುಕೊಂಡಿದ್ದೇ ಅಪ್ಪಟ ಸತ್ಯದಂತೆ 
ನುಣ್ಣಗೇ ಅಲ್ಲವೇ ದೂರದ ಆ ಬೆಟ್ಟಗಳು ?... 

ಜೊತೆಯಿರಲು ನಡುಗಿತಿದೆ ನೆರಳೂ ಸಹ 
ಕೊಡುವ ಕಠಿಣ ತೀರ್ಮಾನಕೆ ಬೆಚ್ಚಿರಬಹುದೇ ? 
ಅಥವಾ ಒಂಟಿತನವ ಅತಿಯಾಗಿ ನೆಚ್ಚಿರಬಹುದೇ ? 

ನಗಣ್ಯವಾದ ' ನ ' ಕಾರಗಳ ಬದಿಗೆ ಸರಿಸಿ 
ಸಾಗಬೇಕೆ ಸಂಕಲಿತ ಸಂಪದದ ಕಡೆಗೆ? 
ಕ್ಷಣ ಕ್ಷಣಕೂ ಯೋಚನೆಯ ಸ್ವರೂಪ 
ವಿಚ್ಛಿನ್ನ ಮನದಿ ಮೂಡುವ ಭಾವಗಳೆಂದೂ ವಿ'ಭಿನ್ನ'... 

 - R. R. B.

ಗಾಂಧಾರಿ

ಹೊಳಪು ಕಂಗಳಲಿ ನೂರಾರು ಬಯಕೆ 
ವದನದಿ ಕಂಡೂ ಕಾಣದಂತಹ ನಾಚಿಕೆ 
ಹಾಕುವಾಗಲೆಲ್ಲ ಸೀರೆಯಾ ನೆರಿಗೆ 
 ಮನದಿ ಕಾಡುವ ನಲ್ಲನ ಕಾಣುವಾ ಘಳಿಗೆ... 

 ಉಕ್ಕಿ ಬರುವ ಹರೆಯದ ಭಾವಗಳ ಮಿಡಿತ 
ಜೀವಕೆ ಗೆಣೆಕಾರನ ತಲುಪುವಾ ತುಡಿತ 
ಅರಳಲು ಸಿದ್ಧವಾದ ಶುದ್ಧ ಪಾರಿಜಾತ 
ಬಹುಬೇಗ ಆಗುವ ಕನಸು ಪರಿಣೀತಾ.... 

ರಮ್ಯ ನಗರಿಯ ಅದ್ಭುತ ವೈಭೋಗ 
ಬೆಳೆಸೀತೆ ಪ್ರೀತಿಪಾತ್ರನ ಸಹಯೋಗ ? 
ಕಂಡ ಕನಸುಗಳಿಗೆ ಒಮ್ಮೆ ಅಲ್ಪ ವಿರಾಮ 
'ಧೃತರಾಷ್ಟ್ರ' ಎಂಬವನು ಹುಟ್ಟು ಕುರುಡ....

ಬಾಳು ದಾರ ತುಂಡಾದ ಗಾಳಿಪಟ 
ಆಂತರ್ಯದಿ ಹೇಳಲಾಗದಂತ ಸಂಕಟ 
ಸತ್ಯವ ಮಡಿಕೆಯಲಿ ಮುಚ್ಚಿಟ್ಟ ಕುರುವಂಶ 
ಮಾಡಿತೇ ನನ್ನೆಲ್ಲ ಸವಿಸ್ವಪ್ನಗಳ ಧ್ವಂಸ ?... 

 ಬಹುಶಃ ಸಾಕಿನ್ನು ಜಗವ ಕಾಣೋ ತವಕ 
ಕನಸುಗಳಿಗೆ ಅಡ್ಡವಾಗಿರಿಸೆ ಕಣ್ಣ ಪಟ್ಟಿ 
ಎಲ್ಲರ 'ಬಾಯಲ್ಲಿ' ನಾ ಮಹಾಪತಿವ್ರತೆ 
ಯಾರಿಗೆ ಗೊತ್ತು ಸುಬಲಜೆಯ ಒಡಲ ವ್ಯಥೆ?....

ಅರಿವೆಯಲಿ ಅಕ್ಷಿಯ ಅರಿವ ಮರೆಮಾಡಿದ್ದು 
'ಗಂಡ' ನಾಗುವವನ ಮೇಲಿನ ಅತೀವ ಪ್ರೀತಿಗೋ ? 
ಸಬಲ ಸುಬಲೆಯ ದಿಟ್ಟತನದ ಪ್ರತಿಕ್ರಿಯೆಯೋ ? 
ಸತ್ಯ ಮುಚ್ಚಿಟ್ಟಿದ್ದಕ್ಕಾಗಿನ ತೀವ್ರ ಕೋಪಕ್ಕೋ ? 
ಇಲ್ಲಾ ತಾತ್ಸಾರದಲೇ ತತ್ವ ಹೇಳುವ ಪರಿಯೋ ?.... 

 - R. R. B.

ಗಾಂಧೀಬಜಾರಿನಲ್ಲೊಂದು ಸುತ್ತು...

                        ಗಾಂಧೀಬಜಾರ್ ಎಂದಾಕ್ಷಣ ಕಣ್ಮುಂದೆ ಬರುವುದು ಸಾಲು ಸಾಲು ಅಂಗಡಿಗಳ ಚಿತ್ರಣ. ಈಗಂತೂ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಸ್ವಾತಂತ್ರ್ಯೋತ್ಸವ ಮುಂತಾದ ಹಬ್ಬಗಳ ಪ್ರಯುಕ್ತ ಅಂಗಡಿಗಳು ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿವೆ. ವರ್ತಕರು ಗಿರಾಕಿಗಳ ಆಗಮನಕ್ಕೆ ಕಾದು ಕುಳಿತಿದ್ದಾರೆ. ಎಲ್ಲಿ ನೋಡಿದರೂ ವೈವಿಧ್ಯಮಯ ರಾಖಿಗಳು, ಕೇಸರಿ, ಬಿಳಿ, ಹಸಿರು ಬಣ್ಣದ ಉಡುಪುಗಳು, ವೈವಿಧ್ಯಮಯ ಪೂಜಾ ಮತ್ತು ಅಲಂಕಾರಿಕ ಸಾಮಗ್ರಿಗಳಿಂದ ಡಿ.ವಿ.ಜಿ. ರಸ್ತೆಯ ಇಕ್ಕೆಲಗಳೂ ಕಂಗೊಳಿಸುತ್ತಿವೆ. ಅದನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಮನಕೆ ಏನೋ ಆನಂದ. 

             ಯಯಒಮ್ಮೆ ಸುತ್ತ ಕಣ್ಣಾಡಿಸಿದರೆ ಸಾಕು. ಒಂದಕ್ಕಿಂತ ಒಂದು ಅಂದದ, ವೈವಿದ್ಯಮಯ ರಾಶಿ ರಾಶಿ ರಾಖಿಗಳು, ಕಣ್ಣು ಕುಕ್ಕುವ ಬಟ್ಟೆಗಳು, ಅಲ್ಲಲ್ಲಿ ಗೋಲಗಪ್ಪಾ ಮಾರುವ ಹುಡುಗ, ಮಲ್ಲಿಗೆಯ ಮಾಲೆ ಮಾಡಿ ಮಾರುವ ಹುಡುಗಿ, ಬಲೂನಿನ ಮಾರಾಟಕ್ಕೆ ಕಾದು ನಿಂತಿಹ ಬಾಲಕ, ಬೇಯಿಸಿದ ಮೆಕ್ಕೆಜೋಳ, ಶೇಂಗಾ ಅಥವಾ ಕಡಲೆಕಾಯಿ ಗಾಡಿಗಳೊಡನೆ ಗ್ರಾಹಕರ ನಿರೀಕ್ಷೆಯಲ್ಲಿರುವವರು, ಅಮೇರಿಕನ್ ಸ್ವೀಟ್ಕಾರ್ನ್, ಎಳನೀರು ಮಾರುತ್ತಿರುವವರು, ತಳ್ಳುಗಾಡಿಯಲ್ಲಿ ತಾಜಾ ತಾಜಾ ಹೂವು, ಹಣ್ಣು, ತರಕಾರಿಯ ಮಾರಿ ಜೀವನ ತಳ್ಳುತ್ತಿರುವವರು, ರಸ್ತೆಯಲ್ಲಿ ಓಡಾಡುವ ಬೈಕು, ಸ್ಕೂಟಿ, ಕಾರು, ರಿಕ್ಷಾಗಳು, ಸಣ್ಣ ಪುಟ್ಟ ಸೌಂದರ್ಯವರ್ಧಕಗಳಿಂದ ಆರಂಭಿಸಿ ಚಿನ್ನಾಭರಣಗಳ ಶೋರೂಂ ಗಳವರೆಗೆ ಎಲ್ಲ ದೈನಂದಿನ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳ ಅಂಗಡಿಗಳು, ಯಾವಾಗಲೂ ಜನರಿಂದ ತುಂಬಿ ತುಳುಕುವ ವಿದ್ಯಾರ್ಥಿಭವನ್, ರೋಟಿಘರ್ ನಂತಹ ಹೋಟೆಲ್ಗಳು, ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿ, ಚಾಟ್ ಸೆಂಟರ್ ಗಳು, ಅಂಕಿತ ಪ್ರಕಾಶನದಂತಹ ಪುಸ್ತಕದಂಗಡಿಗಳು, ಪರಿಮಳ ಬೀರುವ ಹೂವು, ಹಣ್ಣುಗಳ ಅಂಗಡಿಯ ಸಾಲು...ಒಂದು ಹೊಸ ಲೋಕವೇ ಅನಾವರಣಗೊಂಡ ಅನುಭವ..... 

                     ಶನಿವಾರ, ರವಿವಾರಗಳಲ್ಲಂತೂ ಫುಟ್ಪಾತಿನಲ್ಲಿ ಓಡಾಡುವುದೇ ಕಷ್ಟ. ವೀಕೆಂಡ್ ಎಂದು ಸುತ್ತಾಡಲು, ಖರೀದಿ ಮಾಡಲು ಬರುವ ಜನರಿಂದ ನಮ್ಮ ಗಾಂಧೀಬಜಾರು ಮತ್ತಷ್ಟು ಸೊಬಗನ್ನು ಪಡೆಯುತ್ತದೆ. ಸಂಧ್ಯಾಕಾಲದಲ್ಲಿ ಹೊಸ ರಂಗೇರುತ್ತದೆ. ' ಅದು ಬೇಕು, ಇದು ಬೇಕು ' ಎಂದು ಹಠ ಹಿಡಿಯುವ ಮುದ್ದು ಮಕ್ಕಳನ್ನು ನೋಡುವುದೇ ಖುಷಿ. ಅವರನ್ನು ಸಮಾಧಾನಗೊಳಿಸಲು ಯತ್ನಿಸುವ ಅಪ್ಪ ಅಮ್ಮಂದಿರು, ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಬರುವ ಹಿರಿಯರು, ಚೌಕಾಶಿ ಮಾಡುವುದರಲ್ಲಿ ಬ್ಯುಸಿಯಾಗಿರುವ ಕಾಲೇಜು ಹುಡುಗಿಯರು, ಕಣ್ತಂಪು ಮಾಡಿಕೊಳ್ಳಲು ಬರುವ ಹುಡುಗರು, ಇದ್ಯಾವುದೂ ಸಂಬಂಧವೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಆಫೀಸಿನಿಂದ ಬಿರಬಿರನೆ ಕಾರಿನತ್ತ ಹೆಜ್ಜೆ ಹಾಕುವ ಸೂಟುಬೂಟುಧಾರಿಗಳು, ಯಾವ ಗೊಡವೆಯೂ ಇಲ್ಲದೇ ಫುಟಪಾತಿನ ಮೇಲೇ ಆಟವಾಡಿಕೊಂಡು ನಗುವ ಹೂ ಮಾರುವವಳ ಪುಟ್ಟ ಮಗು, ಅದರ ಮುದ್ದಾದ ನಗು...

                  ನೋಡುವ ಮನಸ್ಸಿದ್ದರೆ ಸಾಕು, ಸುತ್ತಲಿನ ವಾತಾವರಣ ಅದರದ್ದೇ ಆದ ಸೌಂದರ್ಯವನ್ನು ಪಡೆಯುತ್ತಾ ಹೋಗುತ್ತದೆ. ಮನಪಟಲದಲ್ಲಿ ನವಿರಾದ ಪದರಗಳು ತೆರೆದು ಕೊಳ್ಳುತ್ತಾ ಹೋಗುತ್ತವೆ..... ಹೀಗೆ ಸುಮ್ಮನೆ ಫುಟ್ ಪಾತಿನಲ್ಲಿ ನಡೆಯುತ್ತಿದ್ದರೆ ಕಣ್ಣುಗಳಂತೂ ಅಂಗಡಿಗಳ ಮುಂದೆ ಗೊಂಬೆಗೆ ತೊಡಿಸಿರುವ ಸುಂದರ ವಿನ್ಯಾಸದ ಉಡುಪುಗಳನ್ನು ಇಣುಕಿ ನೋಡದೇ ಸುಮ್ಮನಿರುವುದಿಲ್ಲ. ಕೈಯಲ್ಲಿ ದುಡ್ಡಿದ್ದರೆ ಅದು ಖಾಲಿಯಾಗುವವರೆಗೆ ನೆಮ್ಮದಿಯೇ ಇಲ್ಲ. ಹಾಗೇ ನಡೆದು ಹೋಗುವಾಗಲೆಲ್ಲ ತಲೆ ಹಲವು ಯೋಚನೆಗಳಲ್ಲಿ ಮುಳುಗುತ್ತದೆ. ರಸ್ತೆಯಲ್ಲಿ ಹೋಗುವ ಆಡಿ, ಬೆಂಜ್ ನಂತಹ ದುಬಾರಿ ಬೆಲೆಯ ಕಾರನ್ನು ನೋಡಿದಾಗ ಒಂದು ಕ್ಷಣ ಕಾಲ್ನಡಿಗೆಯಲ್ಲಿ ಸಾಗುವ ನಾವು ಅವರಂತಿಲ್ಲವಲ್ಲಾ ಎನ್ನಿಸಬಹುದು. ಅದೇ ಫುಟ್ಪಾತಿನಲ್ಲಿ ಕುಳಿತು ಆಡುತ್ತಿರುವ ಮುಗ್ಧ ಮಗುವನ್ನು ಕಂಡಾಗ ಅವರಿಗಿಂತ ನಾವು ಅನುಕೂಲಕರ ಸ್ಥಿತಿಯಲ್ಲಿದ್ದೇವೆ ಎಂದೂ ಅನ್ನಿಸದೇ ಇರದು. ವಯಸ್ಸಾದ ಮುದುಕಿಯೂ ಮಂಡಕ್ಕಿ ಮಾರುವುದನ್ನು ಕಂಡಾಗ ದುಡಿದು ತಿನ್ನಬೇಕೆಂಬ ಅವರ ಛಲ ಮಾದರಿ ಎನಿಸುವುದು. ಸ್ವಲ್ಪವೂ ಅತ್ತಿತ್ತ ನೋಡದೇ ಮದನಾರಿಯ ಕೈಯಲ್ಲಿ ಮದರಂಗಿಯ ಚಿತ್ತಾರ ಮೂಡಿಸುವ ಹುಡುಗರನ್ನು ಕಂಡಾಗ ತಾಳ್ಮೆ, ಏಕಾಗ್ರತೆಯ ಅರ್ಥದ ಅರಿವಾಗುವುದು. ಚಿಕ್ಕ ಚಿಕ್ಕ ಮಕ್ಕಳೂ ಬಲೂನು, ಗೋಲಗಪ್ಪಾ ಮಾರುವುದನ್ನು ಕಂಡಾಗೆಲ್ಲ ಈ ವಯಸ್ಸಿನಲ್ಲೇ ಅವರಲ್ಲಿ ಸಂಚಯನಗೊಂಡ ಅತೀವ ಜೀವನೋತ್ಸಾಹ, ಬದುಕಲೇಬೇಕೆಂಬ ಹಂಬಲ ಎದ್ದು ಕಾಣುತ್ತದೆ. ಈ ಗೌಜಿ ಗದ್ದಲದ ನಡುವೆಯೂ ಪ್ರಶಾಂತವಾಗಿ ಮನೆಯ ಟೆರೆಸಿನ ಮೇಲೆ ಪ್ರತಿದಿನ ಎರಡು ಬಾರಿ ನೀರು ಹಾಕಿ ಹೂವಿನ ಗಿಡಗಳನ್ನು ಬೆಳೆಸುವ ಗೃಹಿಣಿಯನ್ನು ಕಂಡಾಗೆಲ್ಲ ಜೀವನದ ಹೊಸ ಭಾಷ್ಯ ಓದಿದ ಸಂತಸ...... 

                    ಮೇಲ್ನೋಟಕ್ಕೆ ಗಾಂಧೀಬಜಾರ್ ಬೆಂಗಳೂರಿನ ಒಂದು ಸಣ್ಣ ವಾಣಿಜ್ಯ ಬೀದಿಯಷ್ಟೇ. ಆದರೆ ಅಕ್ಕಪಕ್ಕದಲ್ಲೇ ಹಲವಾರು ಪ್ರವಾಸೀಯೋಗ್ಯ ತಾಣಗಳನ್ನು ಹೊಂದಿರುವುದರಿಂದ ಆಕರ್ಷಣೆಯ ಕೇಂದ್ರವಾಗಿದೆ. ಪ್ರಸಿದ್ಧವಾದ ಬಿ.ಎಂಎಂ.ಎಸ್ ಇಂಜಿನಿಯರಿಂಗ್ ಕಾಲೇಜು, ಐತಿಹಾಸಿಕ ಕಡಲೇಕಾಯಿ ಪರಿಷೆಯಿಂದ ಹೆಸರಾದ ಬಸವನಗುಡಿ, ದೊಡ್ಡ ಗಣಪತಿ ದೇವಸ್ಥಾನ, ಕಹಳೆ ಬಂಡೆ ಉದ್ಯಾನವನ ( ಬ್ಯೂಗಲ್ ರಾಕ್ ಗಾರ್ಡನ್), ಲಾಲ್ ಬಾಗ್ ಉದ್ಯಾನವನ, ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಗಿರಿನಗರದ ಪ್ರಸಿದ್ಧ ಕಾರ್ಯಸಿದ್ಧಿ ಆಂಜನೇಯನ ದೇವಸ್ಥಾನ....ಹೀಗೆ ಹಲವಾರು ನೋಡುವಂತಹ ಸ್ಥಳಗಳು ಇದರ ಸನಿಹದಲ್ಲೇ ಇವೆ. ಇದು ಕೂಡ ಗಾಂಧೀಬಜಾರ್ ನ ಒಂದು ವೈಶಿಷ್ಟ್ಯತೆ. ಕೇವಲ ಕಣ್ಣಿಗೆ ತೃಪ್ತಿ ನೀಡುವ ಅಂಗಡಿ, ಹೋಟೆಲ್ ಗಳಷ್ಟೇ ಅಲ್ಲ, ನೊಂದ ಮನಕ್ಕೆ ಸಾಂತ್ವನ ನೀಡುವ ಅಬಲಾಶ್ರಮ, ಸಾಯಿ ವೃದ್ಧಾಶ್ರಮಗಳೂ ಇಲ್ಲಿವೆ. ಇನ್ನು ಅದರೊಳಗೆ ಪ್ರವೇಶಿಸಿ, ಅವರ ಬದುಕು - ಬವಣೆಗಳನ್ನು ಗಮನಿಸಿದರೆ ಅಲ್ಲೂ ಒಂದು ಹೊಸಲೋಕ ಪ್ರತ್ಯಕ್ಷ....
               ಯಈ ಪುಟ್ಟ ಗಾಂಧೀಬಜಾರೇ ಪ್ರಪಂಚವಲ್ಲ ನಿಜ. ಆದರೆ ಇಲ್ಲೂ ಒಂದು ಸುಂದರ ಜಗತ್ತಿದೆ. ಇದೇ ಗಾಂಧೀಬಜಾರ್ ಸಾವಿರಾರು ಜನಕ್ಕೆ ಜೀವನಾಧಾರವಾಗಿದೆ. ಇಲ್ಲಿ ನಗುವ, ಅಳುವ ಮನೆ - ಮನಗಳಿವೆ. ಉಲ್ಲಾಸ - ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ವಾತಾವರಣವಿದೆ. ಹಲವರ ಸಂತೃಪ್ತಿಯ ಮುಗುಳ್ನಗು ಇದೆ. ಸಾರ್ಥಕ್ಯದ ಭಾವವಿದೆ. ಮನೆಯ ಮನಸಿನ ನವಭಾವಗಳಿವೆ, ತುಡಿತ - ಮಿಡಿತಗಳಿವೆ, ಬದುಕಿನ ಏರಿಳಿತಗಳಿವೆ, ನಿರೀಕ್ಷೆಯಿದೆ, ನಿರಾಸೆಯಿದೆ, ಆಸೆ - ಆಕಾಂಕ್ಷೆಗಳಿವೆ, ಗುರಿ ಸಾಧಿಸುವ ದೃಢವಿಶ್ವಾಸವಿದೆ, ಆಕರ್ಷಣೆಯಿದೆ, ನವರಾಗದ ಆಲಾಪವಿದೆ ಇನ್ನೂ ಏನೇನೋ... ಪ್ರತಿನಿತ್ಯ ಸಾವಿರಾರು ಜನರ ಪಾದಧೂಳಿಯನ್ನು ತನ್ನ ಮೈಗಂಟಿಸಿಕೊಳ್ಳುವ ಪಾದಚಾರಿಗಳ ಮಾರ್ಗವಂತೂ ಲಕ್ಷಾಂತರ ಕಥೆ - ವ್ಯಥೆಗಳನ್ನು ಬಿಚ್ಚಿಡದೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಹೊಸ ತಲೆಮಾರಿಗೆ ಹೊಸ ಕತೆಗಳ ಸೃಷ್ಟಿಗೆ ಕಾದು ಕುಳಿತಿದೆ... ನಮ್ಮ ಸುತ್ತಲಿನ ಪರಿಸರ, ವಾತಾವರಣ ಯಾವಾಗಲೂ ಅದರದ್ದೇ ಆದ ಸೌಂದರ್ಯ, ಧನಾತ್ಮಕ ಅಂಶಗಳನ್ನು ಹೊಂದಿರುತ್ತದೆ. ಆದರೆ ನಾವು ನಮ್ಮ ಪೂರ್ವಾಗ್ರಹವನ್ನು ಕಿತ್ತೆಸೆದು ನಿತ್ಯನೂತನವೆನಿಸುವ ಪ್ರಪಂಚವನ್ನು ಕಣ್ತೆರೆದು ನೋಡಿ ಆಸ್ವಾದಿಸಬೇಕಷ್ಟೆ.... 

 - R. R. B.

ಸಶೇಷ

ಕಾಡುವ ಯಾಂತ್ರಿಕತೆಯ ಮಡಿಲ ಸೇರಿದ ಮಗು 
ಅಲ್ಲೆಲ್ಲೋ ಕಾಣೆಯಾದ ನಿಷ್ಕಲ್ಮಷ ಮುಗ್ಧ ನಗು 
ಎಷ್ಟು ಕಟ್ಟಿದರೂ ಮುಗಿಯದಾ ವಾಯಿದೆ 
ಅನುಸಂಧಾನವನೂ ಮುಚ್ಚಿದ ಸ್ವಾರ್ಥದಾ ಪರದೆ.... 

ಮನವ ಸೆಳೆದರೂ ಗಾರುಡಿಗನಾ ಹೊದಿಕೆ 
ಅಂತರ್ಮುಖಿಯೀಗ ಹೃದಯದಾ ತಡಿಕೆ 
ಆಂತರ್ಯದಲೋ ವಿರೋಧಾಭಾಸಗಳ ಹಾವಳಿ 
ಬಾಹ್ಯದಿ ಮಾತ್ರ ಹೊಳೆವ ಚಿತ್ತಾರದಾ ರಂಗೋಲಿ.... 

ಸ್ತಬ್ಧವಾಗಿರೆ ಅನುರಾಗವೀಣೆಯ ನಾದ 
ಮೇಘವನಗಲಿದ ನೀಲಾಕಾಶವೂ ವಿಶದ 
ಅಮೂರ್ತದಲೇ ಅಂತರ್ಧಾನವಾದ ಲಹರಿ 
ನುಚ್ಚುನೂರಾದ ಬಣ್ಣ ಬಣ್ಣದ ಕಲಾಕುಸುರಿ.... 

 ಅದಾಗಲೇ ಬತ್ತಿಹೋದ ಭಾವಗಳಿಗೆ 
ಅಳಿದುಳಿದ ನೆನಪುಗಳ ಸವಿ ಆಶ್ಲೇಷ 
ಪ್ರಸವಿತ ಭಾವನೆಗಳಾಗಲೇ ಪರಿಣೀತ 
ಕಲ್ಪನೆಯ ಹರಿವಿಗೆ ತಾತ್ಪರ್ಯದ ಸೇತುಬಂಧ.... 

 ಸುರಿವ ಜಡಿಮಳೆಗೆ ಪಲ್ಲವಿಸಿತೇ ಶಿಲಾಲತೆ? 
ಮಾಸಿಹೋದೀತೆ ಸುಂದರ ಬದುಕ ಬಣ್ಣಗಳು? 
ಕಾಲಚಕ್ರದಿ ಸಿಲುಕಿ ನಲುಗಿಹೋದರೂ 
ಉದಯಿಸುವ ಆಲೋಚನೆಗಳೆಂದೂ ಸಶೇಷ.... 
 - R. R. B.

ಬಯಕೆ


ಅಲ್ಲೆಲ್ಲೋ ಕೆಲವರ ನಿಲ್ಲದ ಸಿರಿತನದ ದರ್ಪ 
ಕಿರುಚಾಟ-ಧೂಳು ತಾಕಿದರೆ ಆ ಹೊಸ ಶೂಗಳಿಗೆ 
ಸಿಡುಕಾಟ-ಕೊಂಡಂತಹ ಬರೆವ ಪೆನ್ನು ಅಗ್ಗದ್ದಾದರೆ 
ತೀರದ ಕೋಪ-ಸಂಜೆಹೊತ್ತಲಿ ಪಿಜ್ಜಾ ತಿನದಿದ್ದರೆ.... 

ಅನಾಥವಾಗಿವೆ ಇಲ್ಲಿ ದಾರಿಯ ಮೇಲೆ 
ಅಂಥವರೇ ಯಾರೋ ಎಸೆದ ಹಾಳೆ ಪೆನ್ನುಗಳು 
ನನಗೋ ಅವೇ ಇದೀಗದೊರೆತ ದೊಡ್ಡ ಭಾಗ್ಯ 
ಕುಳಿತು ಓದುವಾಸೆ ನನಗೂ ಅವರಂತೆಯೇ.... 

 ಹರಿದ ಹಾಳೆಯಲಿ ಅಕ್ಷರಗಳಾ ಲಿಖಿತ 
ಬದಲಿಸುವ ಬಯಕೆ ಬ್ರಹ್ಮನಾ ವಿಧಿಲಿಖಿತ 
ಇರಲು ಮಣ್ಣ ಕಣ ಕಣದಲೂ ಶಕ್ತಿ 
ಎಂದೂ ಬತ್ತದು ನನ್ನಲಿ ಕಲಿವ ಆಸಕ್ತಿ.... 

ಮುಳ್ಳುಗಳಿವೆ ಬದುಕ ಪಯಣದಲೂ 
ಸದ್ಯಕೆ ಸಂಗಾತಿಯಾಗಿವೆ ಈ ಕರುಗಳು 
ಜೊತೆಯಾಗಲಿ ಇಂತಹದೇ ಹಸುಮನಗಳು 
ಅವರೊಡನೆ ಹೋಗೇ ತೀರುತ್ತೇನೆ ಶಾಲೆಗೆ... 

 ಬಡತನದ ಬೇಗೆಯ ಬದಿಗೆ ಸರಿಸಿ 
ಛಲ, ಪ್ರಯತ್ನಗಳ ಒಂದುಗೂಡಿಸಿ 
ನನಸಾಗಿಸುತ್ತೇನೆ-ಮನದಿ ಮನೆಮಾಡಿಹ 
ಓದುವ, ಬರೆಯುವ, ಕಲಿಯುವಾ ಆ ಆಸೆಗಳ... 

 - R. R. B.

ಗಮ್ಯ

        " ಮಗಳೇ, ಊಟ ಮಾಡೋಣ ಬಾ." ಕೃಷ್ಣರಾಯರ ಅಕ್ಕರೆಯ ಕರೆ. " ಅಪ್ಪಾ ನಂಗೆ ಹಸಿವಿಲ್ಲ. ನೀವು ಊಟ ಮಾಡಿ." ಬೆಳಿಗ್ಗೆಯಿಂದ ಏನೂ ತಿಂದಿಲ್ಲ. ಹಸಿವಾಗ್ತಿಲ್ಲ ಅಂದ್ರೆ ನಂಬಬೇಕಾ? ಎಂದ ತಂದೆಯ ಪ್ರಶ್ನೆಗೆ ಅವಳಲ್ಲಿ ಉತ್ತರವಿರಲಿಲ್ಲ. ಉತ್ತರ ಕೊಡಲು ಸಾಧ್ಯವೂ ಇಲ್ಲ! " ನೀವು ಊಟ ಶುರು ಮಾಡಿ. ಬಂದೆ " ಎಂದು ಕಳಿಸಿದಳು. ರೂಮಿನಲ್ಲೀಗ ಆಕೆ ಮತ್ತೆ ಏಕಾಂಗಿ. ಒಮ್ಮೊಮ್ಮೆ ಶಿಕ್ಷೆ ಅನಿಸೋ ಒಬ್ಬಂಟಿತನ ಕೆಲವೊಮ್ಮೆ ಬೇಕೆನಿಸುತ್ತದೆ. ಯೋಚನಾಕೋಟೆಯೊಳಗೆ ಅವಳೀಗ ಬಂಧಿ. ಹೊರಬರಲಾಗುತ್ತಿಲ್ಲ. ಆದರೆ ಹೊರಬರಲೇಬೇಕಿದೆ. ಗೊಂದಲಗಳಲ್ಲಿ ತಲೆ ಕೆಟ್ಟಂತಾಗಿದೆ. ಜೀವನದಲ್ಲಿ ಅತಿಮುಖ್ಯ ಆಯ್ಕೆಯೊಂದನ್ನು ಆಕೆ ಈಗ ಮಾಡಬೇಕಿದೆ. ಆದರೆ ತನ್ನ ಗೊಂದಲಗಳಿಂದ ತಂದೆ ತಾಯಿಯ ಮನ ನೋಯಿಸುವುದು ಕೂಡ ಆಕೆಗೆ ಇಷ್ಟವಿಲ್ಲ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಬಂದಳು. ಕೃಷ್ಣರಾಯರು ಊಟ ಆರಂಭಿಸಿದ್ದರು. ಮೌನವಾಗಿ ಊಟ ಮುಗಿಸಿ ಮತ್ತೆ ತನ್ನ ರೂಮಿಗೆ ಬಂದು ಹಾಸಿಗೆಯ ಮೇಲೆ ಒರಗಿದಳು. ಜೀವನವು ಎಷ್ಟೊಂದು ತಿರುವುಗಳನ್ನು ಪಡೆಯುತ್ತದಲ್ಲವೆ? ಎಂದೆನಿಸಿತವಳಿಗೆ. 

                 ಅಪ್ಪ, ಅಮ್ಮ, ಅಣ್ಣನ ಪ್ರೀತಿಯ ಮಳೆಯಲ್ಲಿ ನೆನೆದರೂ ನಾನೇಕೆ ಒದ್ದೆಯಾಗಲಿಲ್ಲ? ಒದ್ದೆಯಾಗಲು ಜಡಿಮಳೆಯೇ ಬರಬರಬೇಕೆ? ' ಇರುವುದೆಲ್ಲವ ಬಿಟ್ಟು ಇರದುದರ ನೆನೆವುದೇ ಜೀವನ......' ಎಂಬುದು ನನ್ನ ಬದುಕಿಗೆ ಸರಿಯಾಗಿ ಹೊಂದುತ್ತದೆ. ಚಿಕ್ಕಂದಿನಿಂದಲೂ ಉಜ್ಜೀವನದ ಕನಸು ಕಂಡವಳು ನಾನು. ಪ್ರತಿ ಕ್ಲಾಸಿನಲ್ಲೂ ಉತ್ತಮ ಅಂಕಗಳೊಡನೆ ಪಾಸಾಗುತ್ತಿದ್ದೆ. ಹಿಂದುಸ್ಥಾನಿ ಸಂಗೀತದಲ್ಲಿ ಸೀನಿಯರ್ ಎಕ್ಸಾಂ ಕೂಡ ಮುಗಿದಿದೆ. ಜನರ ಮುಂದೆ ಧೈರ್ಯವಾಗಿ ಮಾತನಾಡಿ, ಮನಗೆಲ್ಲುವ ಕಲೆ ನನಗೊಲಿದಿದೆ. ಇದನ್ನೆಲ್ಲ ಸಾಧಿಸುವಾಗ ನನ್ನ ಮನ ಕಲ್ಲಾಗಿತ್ತು. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿತ್ತು. ಅಗಾಧ ಪ್ರೀತಿಯಿತ್ತು..... ಈಗ? ಯಾವುದರಲ್ಲೂ ಮನಸಿಲ್ಲ. ಮನಸ್ಸು ಇರುವುದಾದರೂ ಹೇಗೆ? ಅದನ್ನೇ ಇನ್ನೊಬ್ಬರಿಗೆ ಕೊಟ್ಟರೆ.... ಇದು ನನ್ನ ಜೀವನದ ಪ್ರಶ್ನೆ. ಅಲ್ಲ, ನನ್ನ ಕನಸಿನ, ಭವಿಷ್ಯದ ಪ್ರಶ್ನೆ. ನಿಧಾ೯ರ ನಿಧಾನವಾದರೂ ಪಕ್ವವಾಗಿರಬೇಕು. ನಂತರ ಪಶ್ಚಾತ್ತಾಪ ಪಡಬಾರದು. ಅಷ್ಟಕ್ಕೂ ಒಂದು ಆಯಾಮದಲ್ಲಿ ನೋಡಿದರೆ ನಾನೇನೂ ಯಾರೂ ಮಾಡಿರದ ಘೋರ ಅಪರಾಧವನ್ನೇನೂ ಮಾಡಿಲ್ಲ. ವಯೋಸಹಜ ಕಾಮನೆಗಳನ್ನು ಹತ್ತಿಕ್ಕಲು ಸಾಧ್ಯವಾಗದ ಸಮಯದಲ್ಲೇ ನನಗೆ ಚೇತನ್ ಪರಿಚಯವಾಗಿದ್ದು. ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಮರೆಯಲಾದರೂ ಹೇಗೆ ಸಾಧ್ಯ? 

                  " ರೀ ಮೇಡಂ, ಸ್ವಲ್ಪ ಪೆನ್ ಕೊಡ್ತೀರಾ? " ಯುವಕನ ಕೋರಿಕೆಯ ದನಿ. ಯೋಚನಾಕೋಟೆಯಿಂದ ಹೊರಬಂದ ನಾನು ಒಮ್ಮೆ ಧ್ವನಿ ಬಂದತ್ತ ತಿರುಗಿದೆ. ಸುಂದರ ಹುಡುಗನೊಬ್ಬ ಪಕ್ಕದಲ್ಲೇ ನಿಂತಿದ್ದಾನೆ. ಮುಖದಲ್ಲಿ ಬೇಡಿಕೆಯ ಚಹರೆಯಿದೆ. ಅವನನ್ನು ಒಮ್ಮೆ ವಿಚಿತ್ರವಾಗಿ ನೋಡಿದೆ. " ಒಂದು ಸಣ್ಣ ಪೆನ್ ತರಲಾಗದವರು ಕಾಲೇಜಿಗೆ ಯಾಕೆ ಬರ್ತೀರಾ? " ಬಾಯಿಂದ ಹೊರಬರಬೇಕೆಂದಿದ್ದ ಮಾತು ಯಾಕೋ ಮೌನದ ಮೊರೆ ಹೊಕ್ಕಿತ್ತು. ಅವಸರದಲ್ಲಿ ಬ್ಯಾಗಿಂದ ಒಂದು ಪೆನ್ ತೆಗೆದು, ಅವನ ಕೈಗಿತ್ತೆ. ಬಳಿಕ ಕ್ಲಾಸಿನಲ್ಲಿ ಬಂದು ಕುಳಿತೆ. ನೆಚ್ಚಿನ ಗೆಳತಿ ಸುರಭಿಯ ಬಳಿ ಮಾತುಕತೆ ಶುರುವಾಯಿತು. ಮಧ್ಯೆ " ಸುರು, ಅಣ್ಣ ಕಳಿಸಿದ ಪೆನ್ ತೋರಿಸ್ತೀನಿರು. " ಎನ್ನುತ್ತಾ ಬ್ಯಾಗಿನಲ್ಲಿ ತಡಕಾಡಿದೆ. ಆದರೆ ಆ ಪೆನ್ ಸಿಗಲಿಲ್ಲ. ಏನೋ ನೆನಪಾದಂತೆ ಥಟ್ಟನೆ ಹಿಂತಿರುಗಿ ನೋಡಿದೆ. ಪ್ರೀತಿಯ ಅಣ್ಣ ತಂಗಿಗಾಗಿ ಇಂಗ್ಲೆಂಡಿಂದ ಕಳಿಸಿದ ಪೆನ್ ಆ ಹುಡುಗನ ಕೈಯಲ್ಲಿ ! ಛೇ... ಅವಸರದಲ್ಲಿ ಆ ಪೆನ್ ಕೊಟ್ಟುಬಿಟ್ಟೆ. ಹೋಗುವಾಗ ವಾಪಸ್ ಕೊಡ್ಲಿ ದೇವರೇ.. ಎಂದು ಪ್ರಾಥಿ೯ಸಿದ್ದೆ. ಕ್ಲಾಸ್ ಮುಗಿಯುವುದನ್ನೇ ಕಾಯುತ್ತಿದ್ದೆ ಎನ್ನಬಹುದು. ಕ್ಲಾಸ್ ಮುಗಿಯಿತು. ದೇವರು ನನ್ನ ಮೊರೆಯನ್ನಾಲಿಸಿದ್ದ. ಆತ ನೇರವಾಗಿ ನನ್ನ ಬಳಿ ಬಂದು " ಥ್ಯಾಂಕ್ಯೂ ಮೇಡಂ ನಿಮ್ಮ ಹೆಸರು? " ಎಂದು ಪೆನ್ ಕೊಟ್ಟ. " ಅನಘಾ " ಎಂದೆ. " ಅಥ೯ಪೂಣ೯ ಹೆಸರು. ನಾನು ಚೇತನ್ " ಎಂದು ಹೊರನಡೆದಿದ್ದ. ನಾನು ಸುಮ್ಮನೆ ಆತ ಹೋಗುವುದನ್ನೇ ನೋಡುತ್ತ ನಿಂತೆ. ಆತನ ಕಣ್ಣುಗಳಲ್ಲಿ ಏನೋ ಒಂದು ಬಗೆಯ ಸೆಳೆತವಿತ್ತು. ನನಗೇ ತಿಳಿಯದೇ ಪ್ರತಿದಿನ ಕ್ಲಾಸಿನಲ್ಲಿ ಆತನ ಚಟುವಟಿಕೆ ಗಮನಿಸಲಾರಂಭಿಸಿದ್ದೆ. ಆತ ಬಡವ. ಓದುವುದರಲ್ಲಿ ಆಸಕ್ತಿಯಂತೂ ಇರಲಿಲ್ಲ. ತಂದೆ ತಾಯಿಗಳ ಒತ್ತಾಯಕ್ಕೆ ಕಾಲೇಜಿಗೆ ಬರುತ್ತಿದ್ದ. ಬಡವನಾದರೂ ಚೇತನ್ ಗೆ ದುಡ್ಡಿನ ಬೆಲೆ ತಿಳಿದಿರಲಿಲ್ಲ. ದುಂದುವೆಚ್ಚ ಮಾಡುತ್ತಿದ್ದ. ಹೀಗಿದ್ರೂ ನನಗೆ ಆತನ ಸ್ನೇಹ ಯಾಕೋ ಇಷ್ಟವಾಗತೊಡಗಿತ್ತು. ಸಲುಗೆ ಅತಿಯಾಗಿ ಸ್ನೇಹ ಪ್ರೇಮವಾಯಿತು. ಚೇತನ್ ಇದೀಗ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ನಾನೂ ಅಷ್ಟೇ. ಅವನೊಂದಿಗೆ ಕೈ ಹಿಡಿದುಕೊಂಡು ಪಾಕ್೯ನಲ್ಲಿ ಓಡಾಡುತ್ತಿದ್ದೆ. ಅವನ ಜೊತೆ ಒಂದೇ ಪ್ಲೇಟಿನಲ್ಲಿ ತಿಂಡಿ ತಿಂದಿದ್ದೆ. ಪ್ರೇಮದ ಅಬ್ಬರದಲ್ಲಿ ಜೀವನಪೂತಿ೯ ನಿನ್ನ ಮುದ್ದಿನ ಮಡದಿಯಾಗಿರುತ್ತೇನೆಂದು ಮಾತು ಕೊಟ್ಟೂ ಆಗಿತ್ತು. ಇಷ್ಟೆಲ್ಲಾ ಮಾಡುವಾಗ ನನ್ನ ಬುದ್ಧಿ ಎಲ್ಲಿ ಹೋಗಿತ್ತೋ? ಆದರೆ ಈಗ ಅಪ್ಪ - ಅಮ್ಮನನ್ನು ಕಂಡಾಗಲೆಲ್ಲ ನಾನು ಅವರಿಗೆ ಮೋಸ ಮಾಡುತ್ತಿದ್ದೇನೆ ಅನಿಸುತ್ತಿದೆ. ನನ್ನ ಮೇಲೆ ಬೆಟ್ಟದಷ್ಟು ಕನಸುಗಳನ್ನು ಕಂಡಿದ್ದಾರೆ ಅಪ್ಪ. ಮಗಳು ವಿದೇಶದಲ್ಲಿ ಎಂ.ಎಸ್ ಮಾಡಬೇಕು, ಸಂಗೀತವನ್ನು ಮುಂದುವರಿಸಬೇಕು, ಮನೆತನದ ಕೀತಿ೯ ಹೆಚ್ಚಿಸಬೇಕು..... ಇನ್ನೂ ಏನೇನೋ... ಅವರಿಗೆ ಚೇತನ್ ವಿಷಯ ಹೇಳಿದರೆ ಆಘಾತವಾಗುವುದಂತೂ ನಿಜ. ಇಷ್ಟು ದಿನ ಕಾಪಾಡಿಕೊಂಡು ಬಂದ ನಂಬಿಕೆಯೆಲ್ಲ ಬಿರುಗಾಳಿಗೆ ತೂರಿ ಹೋಗುತ್ತದಷ್ಟೆ ! 

                     ಇಲ್ಲಾ..... ಹಾಗಾಗಬಾರದು. ಅದಕ್ಕಾಗಿ ಚೇತನ್ ಗೆ ವಿಷಯ ತಿಳಿಸಿ, ನನ್ನನ್ನು ಮರೆತುಬಿಡು ಎನ್ನಲಾಗುತ್ತದೆಯೇ? ನೋ..ಅದೂ ಕಷ್ಟ. "ಇಷ್ಟು ದಿನ ನನ್ನೊಂದಿಗೆ ಸುತ್ತಿದ್ದು, ಮದುವೆಯಾಗುತ್ತೇನೆಂದಿದ್ದು ಎಲ್ಲಾ ಬರೀ ನಾಟಕನಾ? ನಿಮ್ಮಂಥ ಶ್ರೀಮಂತ ಹುಡುಗಿಯರಿಗೆ ನಾವೇನು ಆಟದ ಗೊಂಬೆಗಳಾ? ಬೇಕು ಅಂದಾಗ ಪ್ರೀತಿಸೋಕೆ ಬೇಡ ಅಂದಾಗ ಮರೆಯೋಕೆ. ಈಗ ಅಪ್ಪ ಅಮ್ಮನ ಬಗ್ಗೆ ಮಾತನಾಡುವವಳಿಗೆ ಮಾತು ಕೊಡುವಾಗ ನೆನಪಿರಲಿಲ್ವಾ? " ಎಂದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಯಾವುದಕ್ಕೂ ಸ್ವಲ್ಪ ಯೋಚಿಸೋಣವೆಂದರೆ ಅದಕ್ಕೂ ಸಮಯವಿಲ್ಲ. ಇನ್ನೊಂದು ವಾರದಲ್ಲಿ ಕ್ಲಾಸ್ ಮುಗಿಯುತ್ತದೆ. ಅದಾದ ಮೇಲೆ ಪರೀಕ್ಷೆ. ಅಲ್ಲಿಗೆ ಈ ಕಾಲೇಜಿನ ಋಣ ತೀರುತ್ತದೆ. ಏನು ಮಾಡಲಿ???? ಇದು ಭಾವನೆಗಳ ತಾಕಲಾಟದ ಪ್ರಶ್ನೆ . ಉತ್ತರ ಹುಡುಕಲೇ ಬೇಕು. ಕೇವಲ ನನ್ನ ಒಳಿತನ್ನು ಪರಿಗಣಿಸುವುದರ ಜೊತೆ ಚೇತನ್ ಅಭಿಪ್ರಾಯ, ಅವನ ಒಳಿತು ಕೂಡಾ ಅಷ್ಟೇ ಮುಖ್ಯ. ಚೇತನ್ ನಾನು ಹೇಳಿದರೆ ಏನು ಮಾಡಲೂ ಬೇಸರಿಸಿಕೊಳ್ಳುವುದಿಲ್ಲ. ಹೇಗೋ ಕಳೆದ ಎಲ್ಲಾ ಸೆಮಿಸ್ಟರ್ ನಲ್ಲಿ ಪಾಸಾಗಿದ್ದಾನೆ. ಅವನಿಗೆ ದುಡ್ಡಿನ ಮಹತ್ವ, ಬದುಕಿನ ರೀತಿ ನೀತಿಗಳು ತಿಳಿದಿಲ್ಲವಷ್ಟೆ. ಒಂದು ರೀತಿಯ ಜವಾಬ್ದಾರಿ ಇಲ್ಲದ ಹುಡುಗ. ಆದರೆ ಪರಿವರ್ತನೆ ಜಗದ ನಿಯಮ. ಇಂದು ಹೀಗಿರುವ ಚೇತನ್ ಮುಂದೆಯೂ ಹೀಗೇ ಇರುತ್ತಾನೆ ಎನ್ನಲಾಗದು. ಆ ಬದಲಾವಣೆ ತರುವ ಹೆಣ್ಣು ನಾನಾದರೆ? ಹೌದು ಆ ಹೆಣ್ಣು ನಾನಾಗಬೇಕು. ಈಗ ಇರುವ ಚೇತನ್ ನ ನಡತೆಯನ್ನು ಬದಲಾಯಿಸಬೇಕು. ಒಳ್ಳೆಯ ಮಾತುಗಾರಿಕೆ ಕಲಿತ ನಾನು ಅವನೆಲ್ಲ ಮೌನಗಳಿಗೆ , ಅವನೆಲ್ಲ ಕನಸುಗಳಿಗೆ ನುಡಿಯಾಗಬೇಕು, ಮುನ್ನುಡಿಯಾಗಬೇಕು. ಸಂಗೀತ ಕಲಿತ ನಾನು ಅವನ ಬದುಕಿನ ಸಾಲುಗಳಿಗೆ ರಾಗ ತುಂಬಬೇಕು. ಹಾಡಾಗಬೇಕು. ವಿದೇಶಕ್ಕೆ ಹೋಗಿ ಸಾಧಿಸುವ ಬದಲು ಸ್ವದೇಶದಲ್ಲೇ ಅದನ್ನು ಮಾಡಬಹುದಲ್ಲವೇ? ನಿಜಕ್ಕೂ ನನ್ನ ಆಲೋಚನೆಗಳು ಶ್ಲಾಘನೀಯವೇ... ಯೋಚನೆಗಳು ಆಲೋಚನೆಗಳಾಗುವುದು ಸುಲಭ. ಆದರೆ ಆ ಆಲೋಚನೆಗಳು ಯೋಜನೆಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಕಷ್ಟ. ನಾನೇನೋ ಕೇವಲ ಚೇತನ್ ಬಗ್ಗೆ ಯೋಚಿಸುತ್ತೇನೆ. ಆದರೆ ಕೊನೆಯ ಕ್ಷಣದಲ್ಲಿ ಅವನ ಮನೆಯಲ್ಲಿ ಅಪ್ಪ ಅಮ್ಮ ನಮ್ಮ ಮದುವೆಗೆ ಒಪ್ಪದಿದ್ದರೆ? ಇಲ್ಲಾ ಮದುವೆಗೆ ಒಪ್ಪಿಗೆ ನೀಡಬಹುದು. ನಂತರ ವರದಕ್ಷಿಣೆ ಎಂದರೆ? ಕೊಡುವುದು ಕಷ್ಟವೇ ಅಲ್ಲ. ಆದರೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬಹುದಾದ ಹುಡುಗಿ ನಾನು ಅಂತ ಎಲ್ಲರೂ ಹೇಳುತ್ತಿದ್ದುದು ಸುಳ್ಳಾಗುತ್ತದೆ. ಅಷ್ಟೇ ಅಲ್ಲ, ಅಕಸ್ಮಾತ್ ಅತ್ತೆ ಮಾವ ಎಲ್ಲರೂ ನನ್ನಲ್ಲಿ ತಪ್ಪುಗಳನ್ನೇ ಹುಡುಕಲಾರಂಭಿಸಿದರೆ? ಶ್ರೀಮಂತ ಮನೆತನದ ಹುಡುಗಿ ಎಂದು ಪದೇ ಪದೇ ಮನೆಯಿಂದ ಹಣ ತರಲು ಹೇಳಿದರೆ? ಮದುವೆಯಾದ ಹೆಣ್ಣು ಅಲ್ಲಿ ಇಲ್ಲಿ ಒಬ್ಬಳೇ ಸ್ಪರ್ಧೆಗಳಿಗೆ ಹೋಗೋದು ಬೇಡ ಎಂದರೆ? ಹೌದು. ಚೇತನ್ ಗೂ ಸಂಗೀತದಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಇದ್ದಿದ್ದರೆ ನಾನು ಸ್ಟೇಜ್ ನಲ್ಲಿ ಹಾಡುವಾಗ ಎದ್ದು ಹೋಗುತ್ತಿದ್ದನೇ? ಓ ದೇವರೇ...... ನನ್ನ ಮನದಲ್ಲಿ ಯಾಕಿಷ್ಟು ದ್ವಂದ್ವ? ಈ ಅನಂತ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು? ಅನಘಾಳ ಯೋಚನಾಲಹರಿ ಗತಿ ಬದಲಿಸಿತ್ತು. ದೈವಬಲ ಅವಳ ಜೀವನದ ಗುರಿಯನ್ನು ಬದಲಾಯಿಸಿತ್ತು. 

                           ಹದಿನೈದು ವಷ೯ಗಳ ನಂತರ..... ಅನಘಾ ತವರುಮನೆಗೆ ಬಂದಿದ್ದಾಳೆ. ಅವಳೊಂದಿಗೆ ಪುಟ್ಟ ಅನಘಾ ಶಾರಿ ಕೂಡಾ ಬಂದಿದ್ದಾಳೆ. ಆಕೆಗೀಗ ಹತ್ತು ವಷ೯. ಮುದ್ದು ಮುದ್ದಾಗಿರುವ ಆಕೆ ಅಜ್ಜ - ಅಜ್ಜಿಯರ ನೆಚ್ಚಿನ ಕೂಸು. " ಅಳಿಯಂದಿರು ಯಾವಾಗ ಬರ್ತಾರೆ? " ಕೃಷ್ಣರಾಯರು ಕೇಳಿದರು. " ಅಪ್ಪಾ, ಅವರಿಗೀಗ ಕೆಲಸದ ಒತ್ತಡ ಜಾಸ್ತಿ ಇದೆ. ಇನ್ನೊಂದು ತಿಂಗಳಲ್ಲಿ ಬರುತ್ತಾರೆ. " ಅನಘಾ ಉತ್ತರಿಸಿದಳು. " ಅಪ್ಪಾ, ನಿಮ್ಮ ಮುದ್ದಿನ ಮೊಮ್ಮಗಳಿಗೆ ಮಂತ್ರಿ ಸ್ಕ್ವೇರ್ ನೋಡಬೇಕಂತೆ. ಸಂಜೆ ನಿಮ್ಮ ಕಾರು ಫ್ರೀ ಇದೆಯಲ್ವಾ ? ಇದ್ರೆ ನಾವು ಹೋಗಿ ಬರ್ತೀವಿ. " ಕೃಷ್ಣರಾಯರು ಆಗಲಿ ಎಂದರು. ಅನಘಾ ವೀಡಿಯೋ ಕಾಲ್ ಮಾಡಿ ಕ್ಯಾಲಿಫೋರ್ನಿಯಾದಲ್ಲಿರುವ ಗಂಡನಿಗೆ ತಾವು ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದರ ಬಗ್ಗೆ ಹೇಳಿದಳು. ಆತ ಇನ್ನೆರಡು ವಾರದಲ್ಲಿ ನಾನೂ ಬರುತ್ತೇನೆಂಬ ಸುದ್ದಿ ಅತ್ತೆ ಮಾವನಿಗೆ ತಿಳಿಸಿದ. ಪ್ರದೀಪ್ ಜೊತೆ ಮಾತಾಡಿ ಎಲ್ಲರಿಗೂ ಸಂತೋಷವಾಯಿತು. ಸಂಜೆ ಅನಘಾ ಮಗಳನ್ನು ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದಳು. ಅಲ್ಲೆಲ್ಲ ಸುತ್ತಾಡಿ, ಹಲವು ವಸ್ತುಗಳನ್ನು ಖರೀದಿಸಿದರು. ಪುಟ್ಟ ಹುಡುಗಿ ಅಮ್ಮನ ಕೈ ತಪ್ಪಿಸಿಕೊಂಡು ಓಡತೊಡಗಿದಳು. ಅವಳನ್ನು ಹಿಡಿಯುವ ಭರದಲ್ಲಿ ಅನಘಾ ಯಾರಿಗೋ ಢಿಕ್ಕಿ ಹೊಡೆದಳು. " ಅಯಾಂ ಸಾರಿ " ಎನ್ನುತ್ತಾ ಆ ವ್ಯಕ್ತಿಯನ್ನು ನೋಡಿದಳು. ಸೂಟು ಬೂಟು ಧರಿಸಿದ್ದ, ನೀಟಾಗಿ ಶೇವ್ ಮಾಡಿದ್ದ ಗಂಭೀರ ವದನ. " ನೀನು... ನೀನು...." ಅನಘಾಗೆ ಆಶ್ಚರ್ಯದಿಂದ ಮಾತು ಮುಂದುವರಿಸಲಾಗಲಿಲ್ಲ. " ನಾನೇ ಚೇತನ್. ಒಂದು ಕಾಲದಲ್ಲಿ ನಿನ್ನ ಪ್ರೀತಿಯ ಗೆಳೆಯನಾಗಿದ್ದವ. ಈಗ ನಿನ್ನ ಜೀವನದಲ್ಲಿ ಅನಾಮಿಕ..ಅದಿರಲಿ ಹೇಗಿದೀಯಾ? " ಎಂದು ಅನಘಾಳನ್ನು ನೋಡಿದ. ಅದೇ ಸ್ನಿಗ್ಧ ಸೌಂದರ್ಯ ಅವಳದು. ಮದುವೆಯಾಗಿದೆಯೆಂದು ಗೊತ್ತೇ ಆಗುವಂತಿರಲಿಲ್ಲ. " ಒನ್ ಸೆಕೆಂಡ್ " ಎಂದು ಅನಘಾ ಶಾರಿ..ಎಂದು ಕರೆದಳು. ಅಮ್ಮ ಯಾರದೋ ಬಳಿ ಮಾತನಾಡುತ್ತಿದ್ದಾರೆಂದು ಶಾರಿ ಕರೆದ ತಕ್ಷಣ ಬಂದು ನಿಂತಳು. " ಚೇತನ್ ಫ್ರೀ ಇದೀಯಾ? " ಅನಘಾ ಗಂಭೀರವಾಗಿ ಕೇಳಿದಳು. " ಹಾ. ಇಲ್ಲೇ ಎಲ್ಲಾದರೂ ಕುಳಿತು ಮಾತನಾಡೋಣ. ನಿನ್ನ ನೋಡದೇ ಹದಿನೈದು ವಷ೯ಗಳೇ ಆಯ್ತು. " ಎಂದ. ಮೂವರೂ ಒಂದು ಟೇಬಲ್ ಮುಂದೆ ಕುಳಿತರು. ಎರಡು ನಿಮಿಷ ನೀರವ ಮೌನ. ಅನಘಾಳೇ ಮಾತಿಗಾರಂಭಿಸಿದಳು. " ಚೇತನ್ ನನ್ನ ಜೀವನದ ಕಥೆ ಆಮೇಲೆ ಹೇಳುತ್ತೇನೆ. ಈಗ ನೀನು ಹದಿನೈದು ವಷ೯ ಕಳೆದ ವಿಷಯ ತಿಳಿಸು. " ಎಂದಳು. ಚೇತನ್ ಮೆಲುವಾಗಿ ನಿಟ್ಟುಸಿರು ಬಿಟ್ಟು ಹೇಳಲಾರಂಭಿಸಿದ... 

                   ನಿನ್ನನ್ನು ಎಕ್ಸಾಂ ದಿನ ನೋಡಿದ್ದಷ್ಟೆ. ಆಮೇಲೆ ಪತ್ತೆಯೇ ಇಲ್ಲ. ಕಾಲ್ ಮಾಡಿದರೆ ಹೋಗ್ತಾ ಇರಲಿಲ್ಲ. ನಿನ್ನ ಫ್ರೆಂಡ್ಸ್ ಹತ್ರ ಕೇಳ್ದೆ. ಅವರು ಗೊತ್ತಿಲ್ಲ, ಆದರೆ ಅವಳು ಅಮೇರಿಕಾಗೆ ಹೋಗ್ತಿದಾಳೆ. ಇನ್ನು ನಿನಗೆ ಸಿಗೋದು ಕನಸಿನ ಮಾತು. ಅವಳನ್ನು ಮರೆತುಬಿಡೋದು ಒಳ್ಳೆಯದು ಅಂದ್ರು. ಒಂದು ಸಲ ಎದೆಬಡಿತ ನಿಂತಂತಾಯ್ತು. ಭಾರವಾದ ಹೆಜ್ಜೆ ಹಾಕುತ್ತಾ ಮರಳಿ ಮನೆಗೆ ಬಂದೆ. ಎದೆಗೂಡಿನಲ್ಲಿ ಜ್ವಾಲಾಮುಖಿಯೊಂದು ಸಿಡಿದಂತಾಗಿತ್ತು. ಒಂದೆರಡು ದಿನ ಕುಳಿತು ಯೋಚಿಸಿದೆ. ಸುಮ್ಮನೆ ನೆನಪುಗಳ ಸುಳಿಯಲ್ಲಿ ಬೇಯುತ್ತಾ ಬೇಸರದ ಜೀವನ ನಡೆಸುವುದರ ಬದಲು ಏನಾದರೊಂದು ಸಾಧಿಸಬೇಕೆಂಬ ಬಯಕೆ ಮೊಟ್ಟಮೊದಲ ಬಾರಿ ಮೂಡಿದ್ದು ಆಗಲೇ ಅನಘಾ.... ಕಷ್ಟಪಟ್ಟು ಒಂದು ಕಂಪನಿಯಲ್ಲಿ ಕೆಲಸ ಪಡೆದೆ. ದುಡ್ಡಿನ ಬೆಲೆ ಏನೆಂದು ಅರಿವಾಯಿತು. ಒಂದೊಂದು ರೂಪಾಯನ್ನೂ ಉಳಿಸಿ, ಕೆಲವು ಶೇರ್ ಗಳನ್ನು ಖರೀದಿಸಿದೆ. ಹೆಚ್ಚು ಬೆಲೆಗೆ ಮಾರಿದೆ. ಸ್ಟಾಕ್ ಎಕ್ಸಛೇಂಜ್ ನ ವಹಿವಾಟುಗಳ ಬಗ್ಗೆ ಅರಿತೆ. ಒಳ್ಳೆಯ ಲಾಭ ಬರಲಾರಂಭಿಸಿತು. ಜೊತೆಗೆ ಕಷ್ಟಪಟ್ಟು ದುಡಿದು ಪ್ರಮೋಷನ್ ಗಿಟ್ಟಿಸಿಕೊಂಡೆ. ಬಂದ ಹಣವನ್ನೆಲ್ಲ ಜೋಪಾನವಾಗಿ ಹೆಚ್ಚಾಗಿಸುತ್ತ ನಡೆದೆ. ಹತ್ತು ವಷ೯ದಲ್ಲಿ ಆ ಹಣ ಸುಮಾರಾಗಿತ್ತು. ಬ್ಯಾಂಕಿನಿಂದ ಲೋನ್ ಪಡೆದು ನನ್ನದೇ ಆದ ಒಂದು ಕಂಪನಿ ಆರಂಭಿಸಿದೆ. ಐದು ವಷ೯ಗಳಲ್ಲಿ ಲಾಭ ಹೆಚ್ಚಾಗುತ್ತಿದೆ. ತಂದೆ ತಾಯಿಗೂ ಇದರಿಂದ ಸಂತೋಷವಾಗಿದೆ ಎಂದು ಚೇತನ್ ಮಾತು ಮುಗಿಸಿದ. 

                   " ಚೇತನ್ ಮದುವೆ? " ಅನಘಾ ಪ್ರಶ್ನಿಸಿದಳು. "ಅನಘಾ ನಾನು ಜೀವನದಲ್ಲಿ ಪ್ರೀತಿಸಿದ ಮೊದಲ ಹುಡುಗಿ ನೀನು. ಕೊನೆಯವಳೂ ನೀನೆ. ಮದುವೆಯಾದರೆ ನಿನ್ನೊಂದಿಗೇ ಎಂದು ಕನಸು ಕಂಡವನು ನಾನು. ಕಳೆದ ಹದಿನೈದು ವಷ೯ಗಳಲ್ಲಿ ಯಾವ ಹುಡುಗಿಯನ್ನೂ ಇಷ್ಟಪಟ್ಟಿಲ್ಲ. ಹಾಗಾಗಿ ಮದುವೆಯಾಗಿಲ್ಲ."ಚೇತನ್ ನ ಕೊನೆಯ ಮಾತು ಅನಘಾಳ ಹೃದಯಕ್ಕೆ ನಾಟಿತು. ಅದರ ಫಲವಾಗಿ ಕಣ್ಣಿಂದ ಎರಡು ಹನಿಗಳು ತನಗರಿವಿಲ್ಲದಂತೆಯೇ ಜಾರಿತು. ಅದು ಚೇತನ್ ನ ಅರಿವಿಗೆ ಬರುವ ಮುನ್ನ ಕಣ್ಣೊರೆಸಿಕೊಂಡು ಮುಗುಳ್ನಕ್ಕಳು. ಆತನೇ ಕೇಳುವ ಮುನ್ನ ಹೇಳುವುದು ಒಳಿತು ಎಂದು ಮಾತಿಗಾರಂಭಿಸಿದಳು. 

                  ಎಕ್ಸಾಂ ಮುಗಿದ ಮೇಲೆ ನಿನ್ನ ಭೇಟಿಯಾಗೋಣವೆಂದಿದ್ದೆ. ಆದರೆ ಊರಿನಲ್ಲಿ ತಾತ ತೀರಿಕೊಂಡ ವಿಷಯ ತಿಳಿಯಿತು. ಅಲ್ಲಿಗೆ ಹೋದೆವು. ಅದು ಸಂಪೂಣ೯ ಹಳ್ಳಿ. ಮೊಬೈಲ್ ಗೆ ಸಿಗ್ನಲ್ ಕೂಡ ಸಿಗುವುದಿಲ್ಲ ಅಲ್ಲಿ. ಬೆಂಗಳೂರಿಗೆ ಮರಳಿ ಬಂದ ಮರುದಿನವೇ ನನಗೆ ಅಮೇರಿಕಾಗೆ ಟಿಕೆಟ್ ಬುಕ್ ಆಗಿತ್ತು. ನಾನು ಹೊರಡಲೇಬೇಕಿತ್ತು. ಗಡಿಬಿಡಿಯಲ್ಲಿ ನನ್ನ ಮೊಬೈಲ್ ಇಲ್ಲೇ ಬಿಟ್ಟುಹೋಗಿತ್ತು. ಅಲ್ಲಿಗೆ ಹೋದ ಆರಂಭದಲ್ಲಿ ಒಂದು ವಾರ ನಿನ್ನದೇ ನೆನಪಾಗುತ್ತಿತ್ತು. ನಿನಗೆ ಮೋಸ ಮಾಡಿದೆ ಎಂಬ ಅಪರಾಧೀಭಾವ ಕಾಡುತ್ತಿತ್ತು. ರಾತ್ರಿಯಿಡೀ ಕುಳಿತು ಅಳುತ್ತಿದ್ದೆ ಚೇತನ್. ಇದು ಸುಳ್ಳಲ್ಲ.... ಅನಘಾಳ ಕಣ್ಣಲ್ಲಿ ನೀರು ತುಂಬಿತ್ತು. ಆದರೂ ಅನುಕಂಪ ಗಿಟ್ಟಿಸಿಕೊಳ್ಳುವುದು ಅವಳಿಗೆ ಬೇಕಿರಲಿಲ್ಲ. ಅದಕ್ಕಾಗಿ ಗಂಭೀರವಾಗಿ ಮಾತು ಮುಂದುವರಿಸಿದಳು. ಆಮೇಲೆ ನಾನು ನನ್ನ ಓದಿನಲ್ಲಿ ಬ್ಯುಸಿಯಾದೆ. ಜೊತೆಗೆ ನನ್ನಿಷ್ಟದ ಸಂಗೀತವನ್ನು ಅಲ್ಲಿರುವ ಹೊಸ ಗೆಳೆಯ ಗೆಳತಿಯರಿಗೆ ಕಲಿಸಲು ಯತ್ನಿಸಿದೆ. ಚೆನ್ನಾಗಿ ಮಾತನಾಡುತ್ತೀಯ ಅಂತ ಎಲ್ಲರೂ ಕಾರ್ಯಕ್ರಮದ ನಿರೂಪಣೆಗೆ ಕರೆಯುತ್ತಿದ್ದರು. ಚಿಕ್ಕದರಿಂದ ಆರಂಭವಾಗಿ ಈಗ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೂ ನಾನೊಬ್ಬಳು ನಿರೂಪಕಿ. ಅಷ್ಟರಲ್ಲಿಯೇ ಅಪ್ಪ ಅಮ್ಮ ಒಂದು ಹುಡುಗನನ್ನು ನೋಡಿ ಮದುವೆಗೆ ಗೊತ್ತು ಮಾಡಿದರು. ನನಗೂ ಪ್ರದೀಪ್ ನನ್ನು ನೋಡಿದ ಮೇಲೆ ಇಲ್ಲವೆನ್ನಲಾಗಲಿಲ್ಲ. ಮದುವೆಯಾದೆ. ನಮ್ಮಿಬ್ಬರ ದಾಂಪತ್ಯದ ಕುರುಹೇ ಈ ಶಾರಿ ಎಂದು ಅನಘಾ ಮಗಳಿಗೆ ಮುತ್ತಿಟ್ಟಳು.

                    ಚೇತನ್ ಗೆ ಮಾತಾಡಲು ಇನ್ನೇನೂ ಉಳಿದಿರಲಿಲ್ಲ. ಅನಘಾ ಅವನಿಗೀಗ ಗಗನಕುಸುಮವಾಗಿದ್ದಳು. ಅನಘಾಳೇ ಮಾತು ಮುಂದುವರಿಸಿದಳು. ಚೇತನ್ ಈಗ ನಿನ್ನ ಜೀವನದ ಗಮ್ಯ ಬೇರೆ. ನನ್ನ ಜೀವನದ ಗಮ್ಯ ಬೇರೆ. ಆದರೂ ಜೀವನವೆಂಬ ಪುಸ್ತಕದಲ್ಲಿ ನಿನ್ನೊಂದಿಗೆ ಕಳೆದ ಪುಟಗಳು ನೆನಪಿನ ಪೆಟ್ಟಿಗೆಯಲ್ಲಿ ಜೋಪಾನವಾಗಿರುತ್ತವೆ. ಪುಣ್ಯವಿದ್ದರೆ ಮುಂದೊಂದು ದಿನ ಮತ್ತೆ ಸಿಗೋಣ. ಈಗ ಲೇಟಾಯ್ತು. ಬಾಯ್. ಎಂದಳು. ಶಾರಿ ಅಂಕಲ್ ಗೆ ಬಾಯ್ ಮಾಡು ಎಂದಳು. ಶಾರಿ ಮುದ್ದಾಗಿ ಬಾಯ್ ಅಂಕಲ್ ಎಂದಳು. ಚೇತನ್ ಶಾರಿಯ ಹಣೆಗೆ ಮುತ್ತನಿಟ್ಟು ‘ ಬಾಯ್ ‘ ಎಂದ. ಅನಘಾ ಮಗಳೊಂದಿಗೆ ಹೊರಟಳು. ಚೇತನ್ ಆಕೆ ಹೋದ ದಾರಿಯನ್ನೇ ನೋಡುತ್ತ ನಿಂತ. 

 - R.R.B.

ಅವಳಾ? ಪಿ.ಜಿ.ಲಿರೋದು..

‌‍‌                 ಅವಳಾ?...ಪಿ.ಜಿ.ಲಿರೋದು... 
ಹೀಗೊಂದು ಹದಿಹರೆಯದ ಮನದ ತಾಕಲಾಟ..ಪೀಕಲಾಟ... 

                    " ಏಯ್ ಉಜ್ವಲಾ ಎಲ್ಲಿರೋದು? " " ಓ ಅವಳಾ? ಯಾವುದೋ ಪಿ.ಜಿ.ಲಿರೋದು ಕಣೇ " ಎನ್ನುವಾಗ ಮಾನಸಾ ಮುಖದಲ್ಲಿ ವ್ಯಂಗ್ಯ ನಗು. ಕೆಲವರಿಗೆ ಪಿ.ಜಿ.ಗಳಲ್ಲಿರುವವರನ್ನು ಕಂಡರೆ ಏನೋ ಒಂಥರಾ ಅಸೂಯೆ, ತಾತ್ಸಾರ... ಎಷ್ಟೋ ಜನ ಹುಡುಗಿಯರು ತಮ್ಮ ಓದಿಗಾಗಿ, ಕೆಲಸದ ಶೋಧನೆಗಾಗಿ, ಆಫೀಸ್ ಗೆ ಸಮೀಪ ಎಂದೋ ಪಿ.ಜಿ, ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಭಾವನೆಗಳೇ ಇಲ್ಲವೆಂದಲ್ಲ. ಹಾಸ್ಟೆಲ್, ಪಿ.ಜಿ.ಗಳಲ್ಲಿರುವ ಹುಡುಗಿಯರ ಚಾರಿತ್ರ್ಯ ಸರಿಯಿರುವುದಿಲ್ಲವೆಂಬ ತಕ೯ರಹಿತ ತೀಮಾ೯ನ ಕೆಲವು ಹಿರಿಯರಿಗಿದೆ. ಕೆಲ ಯುವಕರಿಗೆ ಅವರು ಸುಲಭದಲ್ಲಿ ತಮ್ಮ ಪ್ರೇಮಪಾಶಕ್ಕೆ ಸಿಗುವರೆಂಬ ಭಾವನೆಯಿದೆ. ಇನ್ನು ಕೆಲವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ರೋಡು, ಪಾಕು೯ಗಳಲ್ಲಿ ಕಿರುಚಾಡುತ್ತ ಓಡಾಡುವವರು, ಗಂಟೆಗಟ್ಟಲೇ ಮೊಬೈಲ್ ನಲ್ಲಿ ಮಾತನಾಡುತ್ತ ಕಾಲಹರಣ ಮಾಡುವವರು, ಹುಡುಗರೊಂದಿಗೆ ಸುತ್ತಾಡುವವರು, ಸಂಸ್ಕೃತಿಯ ಗಂಧ ಗಾಳಿ ಅರಿಯದವರು ಎಂದುಕೊಂಡವರೆಷ್ಟೋ... 

                          ನಮಗೂ ಒಂದು ಮನಸ್ಸಿದೆ.ಕನಸ್ಸಿದೆ. ನಮ್ಮದೇ ಆದ ಭಾವನೆಗಳ ಪ್ರಪಂಚವಿದೆ. ಅಪ್ಪ ಅಮ್ಮನ ಪ್ರೀತಿಯಲ್ಲಿ ಕರಗಬೇಕೆಂಬ ಆಕಾಂಕ್ಷೆ ಯಿದೆ. ಅಣ್ಣ - ತಮ್ಮ, ಅಕ್ಕ - ತಂಗಿಯರೊಡನೆ ಕಿತ್ತಾಡುತ್ತಾ, ಹುಸಿ ಮುನಿಸು ತೋರುತ್ತ, ಪ್ರೀತಿಯ ತುತ್ತ ಹಂಚಿಕೊಳ್ಳುತ್ತ ಕಾಲಕಳೆಯಬೇಕೆಂಬ ಬಯಕೆಯಿದೆ. ಮನೆಯ ಎಲ್ಲ ಮನಗಳೊಂದಿಗೆ ಬೆರೆತು ಬದುಕ ಹಸನಾಗಿಸುವ ಆಸೆಯಿದೆ, ಅಭಿಲಾಷೆಯಿದೆ. ಸಂಬಂಧಗಳ ಬೆಸುಗೆಯ ಗಟ್ಟಿ ಗೊಳಿಸಿಕೊಂಡು ಮನೆಯ ಪ್ರಶಾಂತ ವಾತಾವರಣದಲ್ಲಿ ಜೀವಿಸಬೇಕೆಂಬ ತುಡಿತವಿದೆ. ಸಿಹಿ ಮಿಡಿತವಿದೆ. ಗೂಡಿನಲ್ಲಿನ ಹಕ್ಕಿಗಳನ್ನು ಕಂಡಾಗೆಲ್ಲ ಅದರಂತೆಯೇ ಬೆಚ್ಚಗೆ ಮನೆಯೆಂಬ ಗೂಡಿನಲ್ಲಿ, ಅಕ್ಕರೆಯ ಅಲೆಯಲ್ಲಿ ತೇಲಿಹೋಗಬೇಕೆಂಬಾಸೆಯಿದೆ. 

                             ನೂರಾರು ಟೊಮೆಟೊಗಳಿರುವ ಬುಟ್ಟಿಯಲ್ಲಿ ಮೇಲಿನ ಒಂದೆರಡು ಟೊಮೆಟೊಗಳು ಕೆಟ್ಟಿದ್ದರೆ ಬುಟ್ಟಿಯಲ್ಲಿರುವ ಎಲ್ಲವೂ ಹಾಳಾಗಿವೆಯೆಂಬ ತೀಮಾ೯ನಕ್ಕೆ ಬಂದುಬಿಡುತ್ತೇವೆ. ಪರೀಕ್ಷಿಸಿ ನೋಡುವ ಗೋಜಿಗೆ ಹೋಗುವುದಿಲ್ಲ. ಅದೇ ರೀತಿ ಹಾಸ್ಟೆಲ್ ಗಳಲ್ಲಿನ ಹುಡುಗಿಯರೆಲ್ಲ ಕೆಟ್ಟವರೆಂಬ ವಾದವೂ ಅಥ೯ಹೀನ. ಒಂದು ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ತಂದೆ - ತಾಯಿಗಳಿಂದ ದೂರಾಗಿ ಪಿ.ಜಿ, ಹಾಸ್ಟೆಲ್ ಗಳಲ್ಲಿ ಇರುವ ನಿರ್ಧಾರ ತೆಗೆದುಕೊಳ್ಳುವುದು ಅಷ್ಟೊಂದು ಸುಲಭವೇನಲ್ಲ. ಆಳ್ವಾಸ್ ನಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದರೂ ಹಾಸ್ಟೆಲ್, ಅದರ ನಿಯಮಗಳು, ಅಪ್ಪ ಅಮ್ಮನ ಬಿಟ್ಟಿರಲಾರದ ಕಾರಣದಿಂದ ಅರ್ಧಕ್ಕೆ ಕಾಲೇಜು ಬಿಟ್ಟವರೆಷ್ಟೋ..ಇದು ಅತಿಶಯೋಕ್ತಿಯೇನಲ್ಲ, ನಾನೇ ಕಣ್ಣಾರೆ ಕಂಡ ಸಾಕ್ಷಿಯಿದ್ದೇನೆ. ಮನೆ ಬಿಟ್ಟಿರುವುದೇ ಒಂದು ಸಾಧನೆಯೇನಲ್ಲ ಎಂದು ನಿಮಗನಿಸುತ್ತಿರಬಹುದು. ಒಪ್ಪಿಕೊಳ್ಳೋಣ. ಆದರೆ ಮಾನಸಿಕವಾಗಿ, ದೈಹಿಕವಾಗಿ ಅನೇಕ ಬದಲಾವಣೆಗಳಾಗುವ ಈ ಹದಿಹರೆಯದ ಸಮಯದಲ್ಲಿ ನಮ್ಮ ಪ್ರೀತಿಪಾತ್ರರನ್ನು ಅಗಲಿರುವುದು ತುಸು ಕಷ್ಟವೇನೇ.... 

                      ಅದರಲ್ಲೂ ಹುಡುಗಿಯರಿಗೆ ಅಪ್ಪ - ಅಮ್ಮನ ಸೆಳೆತ ಜಾಸ್ತಿಯೇ.. ಪಿ.ಜಿ. ಅಥವಾ ಹಾಸ್ಟೆಲ್ ನಲ್ಲಿರುತ್ತೇನೆಂದಾಗ ಮೊದಲು ಆ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜೊತೆಗಿರುವ ಹುಡುಗಿಯರ ಜೊತೆ ಅನುಸರಿಸಿಕೊಂಡುಹೋಗುವ ಗುಣವಿರಬೇಕು. ಇಲ್ಲವಾದರೆ ಪ್ರತಿದಿನ ಜಗಳ ಗ್ಯಾರಂಟಿ !! ಅದರಲ್ಲೂ ವಿಶೇಷವಾಗಿ ನಾವು ಹುಡುಗಿಯರು ಚಿಕ್ಕ ಪುಟ್ಟ ವಿಷಯಗಳನ್ನೂ ಹಿಡಿದು ಎಳೆದಾಡುವುದು ಜಾಸ್ತಿ. ( ಕಹಿಯಾದರೂ ಸತ್ಯ‌) ಕೊಡುವ ಊಟ, ತಿಂಡಿ ಸೇರುತ್ತದೋ ಇಲ್ಲವೋಇಲ್ಲವೋ ಆದರೂ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ( ಎಷ್ಟು ದಿನವೆಂದು ಹೋಟೆಲ್ ದಾರಿ ಹಿಡಿಯುತ್ತೀರಿ?) ಕೆಲವೊಮ್ಮೆ ಮನಸ್ಸಿಗೆ ಬೇಜಾರಾದಾಗ ರೂಮಿನಲ್ಲಿರುವವರೊಡನೆ ಹಂಚಿಕೊಳ್ಳಲಾಗುವುದಿಲ್ಲ. ಅದೇ ಸಮಯಕ್ಕೆ ಅಪ್ಪನಿಗೋ, ಅಮ್ಮನಿಗೋ ಕಾಲ್ ಮಾಡಿ, ಅವರೂ ಬ್ಯುಸಿ ಇದ್ದರೆ ಆ ಕ್ಷಣಕ್ಕೆ ಏನೋ ಕಳೆದುಕೊಂಡ ಭಾವ ಬರುವುದಂತೂ ಸತ್ಯ ! 

                    ನಮ್ಮದು ಸಂಜೆ ಕಾಲೇಜು. ಕ್ಲಾಸ್ ಮುಗಿಯೋದು ರಾತ್ರಿ ಒಂಭತ್ತಕ್ಕೆ. ಎಲ್ಲರೂ ತಮ್ಮ ಮಕ್ಕಳನ್ನು " ಸೇಫಾಗಿ " ಮನೆಗೆ ಕರೆದೊಯ್ಯಲು ಹತ್ತು ನಿಮಿಷ ಬೇಗನೆಯೇ ಬಂದು ಕಾಯುತ್ತಿರುತ್ತಾರೆ. ಅವರನ್ನೊಮ್ಮೆ ನೋಡಿ ಹೊರಬರುತ್ತೇನೆ. ಆ ಹೊತ್ತಲ್ಲಿ ಒಬ್ಬಳೇ ಫುಟಪಾತಿನಲ್ಲಿ ನಡೆದು ಬರುವಾಗೆಲ್ಲ ನಾನೂ ಮನೆಯಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆನಿಸುತ್ತದೆ. ಇದೇನು ಕಾಡುಮಲ್ಲಿಗೆಯ ಜೀವನವೇ? ಎಂಬ ಪ್ರಶ್ನೆ ಕಾಡುತ್ತದೆ. ಆಗ ಕಣ್ಣಲ್ಲಿ ನೀರು ಜಾರದಿದ್ದರೂ ಮೌನದ ನಿಟ್ಟುಸಿರೊಂದು ಹೊರಬರುವುದಂತೂ ಖಂಡಿತ. ದೀಪಾವಳಿ, ಗಣೇಶ ಚತುರ್ಥಿ ಮತ್ತು ಇತರ ಹಬ್ಬದ ದಿನಗಳಲ್ಲಿ ಮನೆ ಅಲಂಕರಿಸಿವ ಸಡಗರ, ಅಮ್ಮ ಮಾಡಿದ ರುಚಿ - ರುಚಿಯಾದ ತಿಂಡಿ ತಿನಿಸುಗಳ ಬಗ್ಗೆ ಗೆಳತಿಯರು ಹೇಳುವಾಗ ಮುಗುಳ್ನಕ್ಕು ಸುಮ್ಮನಾದರೂ ಮನ ಅದಾಗಲೇ ಮನೆಯ ಹಾದಿ ಹಿಡಿದಿರುತ್ತದೆ.... 

                     ಜೀವನ ನಿಂತ ನೀರಲ್ಲ. ಅದು ಹರಿವ ನದಿಯಿದ್ದಂತೆ. ಅಗಲುವಿಕೆ ಅನಿವಾರ್ಯ ಎಂದು ಪುಟ್ಟ ಮನ ತನ್ನನ್ನು ತಾನೇ ಸಂತೈಸಿಕೊಳ್ಳುತ್ತದೆ. ಮನೆಯಲ್ಲಿ ಹೇಗೆ ಬೇಕೋ ಹಾಗೇ ಅಂದರೆ ನಮ್ಮಿಷ್ಟದಂತೆ ಇರುವ ನಾವು ಪಿ.ಜಿ., ಹಾಸ್ಟೆಲ್ ಗಳಲ್ಲಿ ಎಲ್ಲಕ್ಕೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅಮ್ಮನ ಅಡುಗೆಯಲ್ಲಿ ಏನಾದರೊಂದು ತಪ್ಪು ಹುಡುಕಿ ದೂರುತ್ತಿದ್ದ ನಾವು ಇಲ್ಲಿ ಮೌನ ತಾಳುತ್ತೇವೆ. ಇರುವುದರಲ್ಲೇ ಒಳ್ಳೆಯದನ್ನು ಹುಡುಕುತ್ತೇವೆ. ಅದೂ ಇಷ್ಟಪಟ್ಟಲ್ಲ. ಅನಿವಾರ್ಯವಾಗಿ.... 

                    ಮೊನ್ನೆ ಟೈಮ್ ಪಾಸ್ ಗೆಂದು " ಮೊಗ್ಗಿನ ಮನಸ್ಸು " ಚಿತ್ರ ನೋಡುತ್ತಿದ್ದೆ. ಹದಿಹರೆಯದ ಹುಡುಗಿಯರ ಭಾವನೆ, ಕಾಮನೆಗಳನ್ನು ಎಷ್ಟು ಸುಂದರವಾಗಿ ಸೆರೆಹಿಡಿದಿದ್ದಾರಲ್ಲವೇ ಅನ್ನಿಸಿತು. ತುಸು ಉತ್ಪ್ರೇಕ್ಷೆ ಎನಿಸಿದರೂ ಅದರಲ್ಲಿನ ಹಲವಾರು ಅಂಶಗಳು ನಿಜಜೀವನಕ್ಕೆ ತಾಳೆಯಾಗುತ್ತವೆ. ನನ್ನನ್ನು ಬಹಳವಾಗಿ ಕಾಡಿದ ಚಿತ್ರವದು. ಯಾರಿಗೆ ಇಷ್ಟವಾಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಸ್ಟೆಲ್ ಗಳಲ್ಲಿರುವ ಹುಡುಗಿಯರಿಗಂತೂ ಇಷ್ಟವಾಗುತ್ತದೆ.ಅದನ್ನು ನೋಡಿದಾಗ ನನಗೂ ತಕ್ಷಣಕ್ಕೆ ಅಮ್ಮನ ಕೈತುತ್ತು ತಿನ್ನಬೇಕೆನಿಸಿತು. ಒಮ್ಮೊಮ್ಮೆ ಬೇಜಾರಾದಾಗ ಅಮ್ಮನ ಮಡಿಲಲ್ಲಿ ಮಗುವಾಗಿ ಮಲಗುವಾಸೆ, ಬಿಕ್ಕಿ ಬಿಕ್ಕಿ ಅತ್ತು ಅಮ್ಮನ ಬಳಿ ಸಮಾಧಾನ ಮಾಡಿಸಿಕೊಳ್ಳುವ ಹಂಬಲ... ಅಮ್ಮನ ಕೈತುತ್ತಿಗಾಗಿ ಅಕ್ಕ, ತಮ್ಮರೊಡನೆ ಕಾದಾಡಿ ಕೊನೆಗೂ ಮೊದಲ ತುತ್ತ ದಕ್ಕಿಸಿಕೊಳ್ಳುವಾಗಿನ ಆ ಖುಷಿ ಎಷ್ಟೇ ಹಣ ಕೊಟ್ಟರೂ, ಏನೇ ಆದರೂ ಸಹ ಖಂಡಿತಾ ಸಿಗಲಾರದು.... 

                    ಅತ್ತ ತಮ್ಮವರಿಂದ ದೂರವಾದ ಭಾವ, ಇತ್ತ ಹೊಸ ತೆರನಾದ ವಾತಾವರಣ, ಸಾಂತ್ವನವ ಬೇಡುವ ಹೃದಯ, ಇವೆಲ್ಲದರ ಪರಿಣಾಮವಾಗಿ ಸ್ನೇಹದ ಮೊರೆ ಹೋಗುವ ಮನ. ಪರಸ್ಪರ ಹೊಂದಾಣಿಕೆ ಚೆನ್ನಾಗಿದ್ದರೆ ಸ್ನೇಹ ಗಟ್ಟಿಯಾಗುತ್ತದೆ. ಸಂತೋಷದ ದಾರಿ ಅರಸುವುದರ ಬದಲು ಇರುವುದರಲ್ಲೇ ತೃಪ್ತಿ ಪಡಬೇಕೆಂಬ ಸತ್ಯ ಅರಿವಾದಂತೆಲ್ಲ ಬೇಸರ ಕಡಿಮೆಯಾಗುತ್ತದೆ. ಆದರೂ ಬೆಳಿಗ್ಗೆ ಬೆಳಿಗ್ಗೆ ಯಾರಾದರೂ ಚಿಕ್ಕ ಚಿಕ್ಕ ವಿಷಯಗಳಿಗೆ ಕಿತ್ತಾಡುವುದನ್ನ ನೋಡಿದಾಗೆಲ್ಲ ಅಬ್ಬಾ, ಯಾಕಾದರೂ ಇಲ್ಲಿದ್ದೇನೋ ಅನಿಸುತ್ತದೆ. 

                ಒಂದು ಸನ್ನಿವೇಶ. ಅವತ್ತು ಹೋಳಿ ಹಬ್ಬದ ದಿನ. ಸಂಜೆ ಸುಮಾರು ಎಂಟರ ಸಮಯ. ಏಳೆಂಟು ಜನ ಹಾಸ್ಟೆಲ್ ಹುಡುಗಿಯರು ಪಾರ್ಕಿನಲ್ಲಿ ನಗುತ್ತಾ, ಬಣ್ಣಗಳನ್ನು ಎರಚಾಡುತ್ತಾ, ಓಡಾಡುತ್ತಿದ್ದರು. ಬಹಳ ಖುಷಿಯಲ್ಲಿದ್ದರು. ಒಂದೈದು ನಿಮಿಷವಷ್ಟೇ. ಅಷ್ಟರಲ್ಲಿ ಅಲ್ಲಿಗೆ ಬಂದ ಯಾರೋ ಕೆಲವು ಹಿರಿಯರ ಪ್ರತಿಕ್ರಿಯೆ ಕಂಡಾಗ ಆ ಕ್ಷಣದ ಆನಂದವೆಲ್ಲ ಗಾಳಿಗೆ ಹಾರಿಹೋಗಿತ್ತು. ಕಣ್ಣಲ್ಲಿದ್ದ ಖುಷಿಯ ಹೊಳಪು ಕ್ಷೀಣಿಸಿತ್ತು... ಈ ಸನ್ನಿವೇಶವನ್ನು ಎರಡು ವಿಭಿನ್ನ ದೃಷ್ಟಿಕೋನದಿಂದ ನೋಡಬಹುದು. ಮೊದಲನೆಯದಾಗಿ ಬೈದುಹೋದ ಹಿರಿಯರ ಕೋನದಿಂದ. ಸಂಜೆ ಹೊತ್ತು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಗಲಾಟೆ ಮಾಡುತ್ತ, ಬಣ್ಣಗಳನ್ನು ಎರಚಾಡುತ್ತಾ ಪಾರ್ಕಿನಲ್ಲಿ ಓಡಾಡುವುದು ತಪ್ಪು. ಸುಸಂಸ್ಕೃತರಾದವರ ಲಕ್ಷಣವಲ್ಲ. ಒಪ್ಪಿಕೊಳ್ಳಬಹುದೇ ಆದ ವಾದ. ಎರಡನೆಯದು ಆಟವಾಡುತ್ತಿದ್ದ ಹುಡುಗಿಯರ ದೃಷ್ಟಿಯಿಂದ. ಎಲ್ಲರಂತೆ ಮನೆಯಲ್ಲಿ ಹಬ್ಬವನ್ನಾಚರಿಸಲು ಅವರಿಗೆ ಸಾಧ್ಯವಿಲ್ಲ. ಕೊನೇ ಪಕ್ಷ ತಮ್ಮ ಪಾಡಿಗೆ ತಾವು ( ಅದೂ ಬೇರೆಯವರಿಗೆ ತೊಂದರೆಯಾಗದಂತೆ ) ಪಾರ್ಕಿನಲ್ಲಿ ಆಚರಿಸುವುದೂ ತಪ್ಪೇ? ಅಷ್ಟೂ ಸ್ವಾತಂತ್ರ್ಯ ಇಲ್ಲವೇ ಅವರಿಗೆ? ಕೇವಲ ಹುಡುಗಿಯರೆಂಬ ಕಾರಣ ಹೇಳಿ ಅವರನ್ನು ಆ ರೀತಿ ನೋಡುವುದು ಸರಿಯೇ? ಅವರಿಗೂ ಅವರದೇ ಆದ ಭಾವನೆಗಳಿಲ್ಲವೇ? ಅದನ್ನೂ ನಾವು ಗೌರವಿಸಬೇಕಲ್ಲವೇ? ಈ ಸನ್ನಿವೇಶವನ್ನು ಯಾರು ಹೇಗಾದರೂ ಅರ್ಥೈಸಿಕೊಳ್ಳಬಹುದು. ನಿಮ್ಮ ಭಾವನೆಗಳಿಗೆ ತಕ್ಕಂತೆ ಒಂದು ಘನ ತೀರ್ಪನ್ನೂ ನೀಡಬಹುದು. ಆದರೆ ಅದಕ್ಕೂ ಮುನ್ನ ಒಮ್ಮೆ ಯೋಚಿಸಿ - ನೀವೇ ಆ ಹುಡುಗಿಯರ ಸ್ಥಾನದಲ್ಲಿದ್ದಿದ್ದರೆ?.... ಕೊನೆಯಲ್ಲಿ ನಾನು ಹೇಳುವುದಿಷ್ಟೇ - ನಿಮ್ಮ ಪ್ರೀತಿ, ಅನುಕಂಪಗಳನ್ನು ನಮ್ಮ ಮೇಲೆ ತೋರಿಸದೇ ಇದ್ದರೂ ಪರವಾಗಿಲ್ಲ. ಆದರೆ ಚುಚ್ಚುಮಾತುಗಳಿಂದ ನೋಯಿಸಲು ಬರಬೇಡಿ ಅಷ್ಟೇ. 

 - R. R. B.

ನಾನೂ ಗಂಭೀರವಾಗಬೇಕಿದೆ..

ಗಂಭೀರವಾಗಬೇಕಿದೆ ನಾನೂ 
ಉಳಿದ 'ಆ' ಎಲ್ಲರಂತೆಯೇ 
ಹರೆಯದ ಮನದ ತುಂಟಾಟ ಚೆಲ್ಲಾಟ, 
ಹುಡುಗಾಟಗಳ ಮೀರಿ 
ಕಾಣದ ಕನಸಿನ ತಡಕಾಟವ ಬಿಟ್ಟು 
ಹುಚ್ಚೆನಿಸುವ ಮತ್ತೊಮ್ಮೆ ಪಿಚ್ಚೆನಿಸುವ 
ನೂರಾರು ಆಸೆಗಳ ಮಂಟಪವ ತೊರೆದು 
ಗಂಭೀರವಾಗಬೇಕಿದೆ ನಾನೂ.... 

ಮುಖವಾಡದ ಮರೆಯಲ್ಲಿ 
ಕಳೆದುಹೋದರೂ ಸರಿಯೇ 
ಚಿತ್ತದ ಅಪಾರ ಸ್ಥಿರತೆಯಲಿ 
ಮಾಯವಾದರೂ ಆ ನನ್ನ ಸ್ವಂತಿಕೆ 
ಸ್ತಬ್ಧಗೊಂಡರೂ ಭಾವಗಳ ಹಂಚಿಕೆ 
ಚಿಂತೆಯಿಲ್ಲ, ಏನಾದರಾಗಲಿ 
ಗಂಭೀರವಾಗಬೇಕಿದೆ ನಾನೂ 
ಉಳಿದ 'ಆ' ಎಲ್ಲರಂತೆಯೇ.. 

ಚಿತ್ತಾರದ ಚಕ್ರಬಂಧದಲಿ ಸಿಲುಕಿ, 
ಅದರಲೇ ಸೆರೆಯಾಗಿ ಕಳೆದುಹೋಗಲು 
ಸಮಯವಿದೆ ಇನ್ನೂ... 
ಅನುಸಂಧಾನದ ಅಲೆಗಳು 
ಉಬ್ಬರವಿಳಿತದ ಅಬ್ಬರದಲ್ಲೇ ಇವೆ 
ಪ್ರವಾಹದಾಗಮನಕೆ ತಡವಿದೆ 
ಆದರೂ ಪುಟ್ಟ ಮನದ ಕೂಗೊಂದೇ 
ಗಂಭೀರವಾಗಬೇಕಿದೆ ನಾನೂ 
ಉಳಿದ 'ಆ' ಎಲ್ಲರಂತೆಯೇ... 

 - R. R. B.

ಪ್ರೀತಿ

               ಒಂದು ಅವರ್ಣನೀಯ ಅನುಭೂತಿ... ಪ್ರೀತಿ ಭಾವಲಹರಿಯ ಒಂದು ಚಿತ್ತಾರ. ವರ್ಣನಾತೀತ ಕಾವ್ಯ. ಮನಸು - ಮನಸುಗಳ ಮಿಲನ. ಪರಸ್ಪರ ನಂಬಿಕೆಯೇ ಪ್ರೀತಿ. ಅದು ಬಣ್ಣಿಸಲಾಗದ್ದು. ಬರೀ ಅನುಭವಕ್ಕೆ ಎಟುಕುವಂಥದ್ದು. 

         ಪ್ರೀತಿ ಎಂದರೆ ಬರೀ ಗಂಡು - ಹೆಣ್ಣಿನ ಆಕರ್ಷಣೆಯೇ? ಖಂಡಿತಾ ಅಲ್ಲ. ತಾಯಿ ಮಗುವಿಗೆ ತೋರಿಸುವ ನಿಷ್ಕಲ್ಮಷ ಅಕ್ಕರೆ, ಮಮತೆ, ಕಾಳಜಿಯೇ ಪ್ರೀತಿ. ಸೋದರ - ಸೋದರಿಯರ ನಡುವಿನ ಅವಿನಾಭಾವ ಬಾಂಧವ್ಯವೇ ಪ್ರೀತಿ. ಕುಟುಂಬದವರೊಂದಿಗಿನ ಸೌಹಾರ್ದ ಸಂಬಂಧವೇ ಪ್ರೀತಿ. ಸಾಧಿಸಲೇಬೇಕೆಂಬ ತುಡಿತದಿಂದ ಹೋರಾಡುವುದು ಆ ಗುರಿಯ ಬಗೆಗಿನ ಪ್ರೀತಿ.ಇನ್ನು ವ್ಯಕ್ತಿ ಕೇಂದ್ರೀಕರಣದಿಂದ ತುಸು ಹೊರಬಂದು ಸಮಾಜವನ್ನು ಗಮನಿಸಿದರೆ ಸಿಗುವ ದೃಷ್ಟಾಂತಗಳು ಹಲವು. ಹಸಿದ ಭಿಕ್ಷುಕರನ್ನು ಕಂಡು ಮನಕರಗಿ, ಅವರಿಗೆ ಊಟಕೊಡಿಸುವುದು, ರಸ್ತೆ ದಾಟಲು ಕಷ್ಟಪಡುತ್ತಿರುವ ವೃದ್ಧರಿಗೆ ಕೈಹಿಡಿದು ರಸ್ತೆ ದಾಟಿಸುವುದು ಕೂಡಾ ಪ್ರೀತಿಯ ಒಂದು ಭಾಗವಾದ ಕಾಳಜಿಯಿಂದಲೇ. ನಮ್ಮ ಸನಿಹದಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಮಾತನಾಡಿಸುತ್ತ, ಖುಷಿಯಿಂದ ಬಾಳುವುದೂ ಪ್ರೀತಿಯಿಂದಲೇ. ಸ್ನೇಹಿತರೊಂದಿಗೆ ಅತಿಯಾಗಿ ಬೆರೆತು ಚಿಕ್ಕ ಪುಟ್ಟ ಕಾರಣಗಳಿಗೆಲ್ಲ ಕೋಪಿಸಿಕೊಳ್ಳುವುದೂ ಅವರ ಮೇಲಿನ ಪ್ರೀತಿಯ ಕಾರಣದಿಂದಲೇ... 

               " ಪ್ರೀತಿಯಿಲ್ಲದ ಮೇಲೆ ಹೂ ಅರಳೀತು ಹೇಗೆ? ಮೋಡಕಟ್ಟಿ ಮಳೆ ಸುರಿದೀತು ಹೇಗೆ? ಪ್ರೀತಿಯಿಲ್ಲದ ಮೇಲೆ......" ಎಂಬ ಜಿ.ಎಸ್.ಎಸ್.ರವರ ಕವನದ ಸಾಲುಗಳು ನೆನಪಾಗುತ್ತವೆ. ಪ್ರೀತಿ ಇಲ್ಲವಾದರೆ ಬಹುಶಃ ಈ ಜಗತ್ತೇ ಶೂನ್ಯ. ಪ್ರೀತಿಯಿಲ್ಲದ ಬದುಕನ್ನು ಕಷ್ಟ ಅಲ್ವಾ ಸ್ನೇಹಿತರೇ?... ಪ್ರೀತಿಯಿಲ್ಲದೇ ಬರೆದ ಕವಿಯಿಲ್ಲ. ಮನದಿ ಮೂಡುವ ಭಾವನೆಗಳು ಕವನದ ಸಾಲಾಗಲೂ ಪ್ರೀತಿ ಬೇಕೇ ಬೇಕು. ಪ್ರೀತಿ ಅಂಗೈಬೊಗಸೆಯಲ್ಲಿ ಹಿಡಿದ ನೀರಿನಂತೆ. ಜಾಗರೂಕತೆ ಅತ್ಯಗತ್ಯ. ಕೈ ಸ್ವಲ್ಪ ಅಲುಗಿದರೂ, ಸಡಿಲಿಸಿದರೂ ನೀರು ದಾರಿಪಾಲೇ ಸರಿ! ಸಮಯ ಜಾರಿದಂತೆ ಬೊಗಸೆಯೊಳಗಿನ ನೀರು ಹನಿ ಹನಿಯಾಗಿ ಬೀಳಲಾರಂಭಿಸುತ್ತದೆ. ಎಷ್ಟೋ ಹೊತ್ತಿನ ಬಳಿಕ ಅದು ಇಲ್ಲವಾಗುತ್ತದೆ. ಆಗ ಕೈ ಖಾಲಿ !!! ಪ್ರೀತಿಯನ್ನು ಬೊಗಸೆಯ ನೀರಿಗೆ ಸಮೀಕರಿಸಿದರೆ ಅಂತ್ಯದಲ್ಲಿ ಪ್ರೀತಿ ಮಾಯವಾಗುತ್ತದೆಯೇ? ಆರಂಭದಲ್ಲಿ ಬಹಳ ಒಲವು ತೋರಿಸುವ ಯುವಪ್ರೇಮಿಗಳಲ್ಲಿ ದಿನ ಕಳೆದಂತೆ ಪ್ರೀತಿ ಕಮ್ಮಿಯಾಗುತ್ತದೆಯೇ? ( ಹೌದು ಅಥವಾ ಇಲ್ಲ ಎಂಬ ಉತ್ತರ ನಿಮ್ಮ ಆಲೋಚನೆಗೆ ಬಿಟ್ಟಿದ್ದು. ಇಲ್ಲಿ ಪ್ರಶ್ನೆ ಮಾತ್ರ ನನ್ನದು) ಆದರೆ ಎಂದಿಗೂ ಬತ್ತದ ಮಮತಾಮಯಿ ಆ ತಾಯಿಯ ಪ್ರೀತಿ ಮಾತ್ರ ಶರಧಿಯ ಉದಕದಂತೆ. ಅದು ಖಾಲಿಯಾಗುವುದೇ ಇಲ್ಲ!.... 

            ಈ ನಾಲ್ಕು ದಿನದ ಜೀವನದಲ್ಲಿ ಎಷ್ಟೊಂದು ಭಾವನೆಗಳು, ತುಮುಲಗಳು, ಯೋಚನೆಗಳು, ಚಿಂತನೆಗಳು, ಆಲೋಚನೆಗಳು...... ಕೆಲವರು ಅದನ್ನು ಸಶಕ್ತವಾಗಿ ಅಭಿವ್ಯಕ್ತಿಗೊಳಿಸುತ್ತಾರೆ. ಕವಿ ಬರೆಯುತ್ತಾನೆ. ಕಲಾಕಾರ ಚಿತ್ರಿಸುತ್ತಾನೆ. ಶಿಲ್ಪಿ ಕಲ್ಲಿಗೆ ಸುಂದರ ಪ್ರತಿಮೆಯ ರೂಪ ನೀಡುತ್ತಾನೆ. ಇವೆಲ್ಲವೂ ಅವರ ಕಾರ್ಯದ ಮೇಲಿನ ಒಲವಿನಿಂದಲೇ.... ಪ್ರತಿ ಚರಾಚರಗಳಿಗೂ, ಲೋಕದ ಸಮಸ್ತ ಜೀವಾತ್ಮಗಳಿಗೂ ಪ್ರೀತಿ ಎಂಬ ಒಂದು ವಿವರಿಸಲಾಗದ ಅನುಭೂತಿ ಇದ್ದೇ ಇರುತ್ತದೆ. " ಕಾಣಿಸದ ಕಾವ್ಯ ಅದು..." ಎಂಬ ನೆನಪಿರಲಿ ಚಿತ್ರದ ಹಾಡು ಸ್ಮೃತಿಪಟಲದಲ್ಲಿ ಮೂಡಿ ಮರೆಯಾಗುತ್ತದೆ. ಪ್ರೀತಿಯ ಬಗ್ಗೆ ಅದೆಷ್ಟೋ ಸಹಸ್ರ ಸಹಸ್ರ ಕವನಗಳು, ಲೇಖನಗಳು ಮೂಡಿಬಂದಿವೆ. ಬರುತ್ತಲೇ ಇವೆ. ಎಲ್ಲವೂ ವಿಶೇಷ, ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ......ಪ್ರೀತಿಯ ಬಗ್ಗೆ ಪ್ರತಿಯೊಬ್ಬರ ಧೋರಣೆ ಬೇರೆ ಬೇರೆಯೇ... ಈ ಪ್ರೀತಿ ಎಂಬ ವಿಷಯವೇ ಅಂಥದ್ದು. ಸುಳಿಯಂತೆ ಸೆಳೆಯುವ, ಕೋಲ್ಮಿಂಚಿನಂತೆ ಅರೆಕ್ಷಣದಲ್ಲೇ ಮರೆಯಾಗುವ ಕಣ್ಣಿಗೆ ಕಾಣದ ಅನುಭವ....ಭಾವಲಹರಿಯ ಅನುಭಾವ....ಕಲ್ಪನೆಯೆಂಬ ಕುದುರೆಗೆಟುಕದ ನವಕಾವ್ಯ....ಬಹುಶಃ ಪ್ರೀತಿಯೆಂದರೆ ಯೋಚಿಸುತ್ತಾ ಸಾಗಿದಂತೆಲ್ಲ ಹೊಸ ಹೊಸ ಎಳೆಗಳೊಂದಿಗೆ ಎದುರಾಗುವ ಅಕ್ಷಯಪಾತ್ರೆಯ ಧಾತುವಿರಬಹುದೇನೋ..... 

 - R. R. B.

ಬಿಡಿಕೆಯ ಮಿಡಿತಗಳಲಿ

ಕಾಲಚಕ್ರದ ಸುಳಿಯಲಿ ಸಿಲುಕಿ 
ಶೃಂಗಾರದ ಮೊರೆ ಹೊಕ್ಕ ಈ ತನು 
ಯಾವುದೋ ಪುರುಷನ ಕ್ಷಣಿಕ ಸುಖಕ್ಕಾಗಿ 
ತನ್ನದೆಲ್ಲವನು ಸುಮ್ಮನೆ ಒಪ್ಪಿಸುವ ಕಾಯ 
ಖಂಡಿತಾ ಹೀಗಿರಲಿಲ್ಲ ನಾನು..... 

ಅದೆಷ್ಟು ಕನಸುಗಳು ಆ ನನ್ನ ಕಣ್ಣಲಿ 
ಬದುಕಿನ ಅರ್ಥ ತಿಳಿವ ಕುತೂಹಲ 
ಇಂದೋ, ನನ್ನವರೆನ್ನುವರಿಲ್ಲದ ತಬ್ಬಲಿ 
ನಿರೀಕ್ಷೆಯ ಬೆಳಕಿಲ್ಲ ಕಣ್ಣಲಿ.... 

 ನಾನೇ ಜಡೆ ಹೆಣೆದುಕೊಳ್ಳುವಾಗಲೆಲ್ಲ 
ಕಾಡುತ್ತಲೇ ಇರುತ್ತವೆ ಅಮ್ಮನಾ ನೆನಪು 
ಅಪರಿಚಿತನಾಸೆಗೆ ಸದ್ದಿಲ್ಲದೆ ಸರಿವ ಉಡುಪು 
ಮುಳ್ಳುಗಳಿವೆ ಮೆತ್ತನೆಯ ಹಾಸಿಗೆಯಲ್ಲೂ..... 

ಕಣ್ಣೀರನು ಇಳಿಜಾರಲಿ ಜಾರಿಬಿಟ್ಟು 
ಬೇರೆ ಕೆಲಸ ಬೇಕೆನುವ ಪಾಪಿ ಕೈಗಳು 
ಕಲ್ಲಾಗಿ ಹೋದ ಅಂಗೈ ಅಗಲದ ಹೃದಯ 
ಹೊತ್ತೇ ಹೋಗದ ಆ ಕರಾಳ ರಾತ್ರಿಗಳು...... 

ಬಣ್ಣದಸೀರೆಯಲಿನ ಕುಸುರಿನಾ ಚಿತ್ತಾರ 
ರಸಿಕರಿಗೇನೋ ರಸದೌತಣದ ತೃಪ್ತಿ. 
ನನಗೋ ಅವುಗಳ ಕಂಡರೆ ತೀರದ 
ತಾತ್ಸಾರ ಬೆತ್ತಲಾಗುವ ಮುನ್ನ ಬರಿದಾಗುವ ಬಯಕೆ.... 

 ಆ ಉಬ್ಬು ತಗ್ಗುಗಳಲಿ ಏನಿದೆಯೋ ಏನೋ 
ಅಮೂರ್ತ ಆನಂದಕ್ಕಾಗಿ ತಡಕಾಡುವಿಕೆ 
ಈ ಪಾಪಿಕಾರ್ಯಕೆ ಮೀಸಲೆಂಬಂತೇನೋ 
ಹದಿನಾರರ ಹೊಸ್ತಿಲಲೇ ನೆರೆತೆ ನಾನು.... 

ಮಿಸುಕಾಡಿದಾಗೆಲ್ಲ ಸದ್ದು ಮಾಡುವ ಬಳೆಗಳು 
ಸುಮ್ಮನಾಗುತ್ತವೆ ತುಸುಹೊತ್ತಿನ ಬಳಿಕ 
ಎಳೆದಾಟದಲ್ಲಿ ಜಾರುವ ಸೀರೆಯ ನೆರಿಗೆಗಳೂ 
ಬೇಸತ್ತುಹೋಗಿವೆ ತನ್ನ ಪಾಡು ನೆನೆದು.... 

ಹೊರನೋಟಕೆ ನಾ ಬಿನ್ನಾಣದ ಬಿಡಿಕೆಯಷ್ಟೇ 
ನನ್ನ ತುಡಿತ ಮಿಡಿತಕ್ಕಿಲ್ಲ ಕಿಂಚಿತ್ತೂ ಬೆಲೆ 
ಮೌಲ್ಯ ಇರುವುದು ಈ ಸುಂದರ ದೇಹಕ್ಕಷ್ಟೇ
ಖಾಲಿಯಾಗಬೇಕಿದೆ ಬಣ್ಣ ಮಾಸುವ ಮುನ್ನ.... 

ಇಷ್ಟವಿಲ್ಲದ ಕೆಲಸ ತುಸು ಕಷ್ಟವೇನೇ.. 
ಉದರಪೋಷಣೆಗಾಗಿನ ಹೋರಾಟದಲಿ 
ಬತ್ತಿಹೋಗಿವೆ ಕಣ್ಣೀರು ತಲೆದಿಂಬಿನೊಳಗೆ 
ಬಿಕರಿಯಾಗಿವೆ ಭಾವನೆಗಳು ಬಾಜಾರಿನೊಳಗೆ..... 

 - R. R. B.

ಸಂಪದ

ಕೆಂಪಾಗಿಹ ಬಾನಿನ ಸವಿ ಸಂಧ್ಯಾರಾಗ 
ತನುವ ಸೋಕಿರೆ ತಂಬೆಲರ ಆಹ್ಲಾದ 
ಮನದಲಿ ನವೋಲ್ಲಾಸದ ನವಚೇತನ 
ಕಲ್ಪನಾಲೋಕಕೆ ನವಿರಾದ ಆಮಂತ್ರಣ....  

ಮಾಗ೯ದಂಚಿನಲಿ ಹೂವ ಮಾರುವ ಹುಡುಗಿ 
ಬಲೂನಿನ ಮಾರಾಟಕೆ ಕಾದುಕುಳಿತಿಹ ಯುವಕ 
ಗಮ್ಯದೆಡೆಗೆ ಸಂಚರಿಪ ವಾಹನಗಳ ಸಾಲು 
ಜೀವನದ ವಿವಿಧ ಮಜಲುಗಳಿಗೆ ಸಾಕ್ಷಿ ....  

ವಸುಂಧರೆಗೆ ಮುತ್ತಿಡುತಲಿರೆ ವಷ೯ಧಾರೆ 
ತರುಲತೆಗಳಿಂದ ತೊಟ್ಟಿಕ್ಕುವ ಆ ಹನಿಗಳು 
ಗೂಡಸೇರಲು ಹೊರಟ ಹಕ್ಕಿಗಳ ಪಂಕ್ತಿ 
ಭಾವಭಿತ್ತಿಗೆ ಒಂದು ಹೊಸ ಸ್ಪಂದನ .... 

ಅಲ್ಲೆಲ್ಲೋ ಕೇಳುತಿರುವ ಗುಡುಗಿನಾ ಸದ್ದು 
ಅರೆಕ್ಷಣದಿ ಮಾಯವಾಗುವ ಆ ಕೋಲ್ಮಿಂಚು 
ಹಸಿರಸೀರೆಯುಟ್ಟು ಮುದಗೊಂಡಿಹ ಇಳೆ 
ಸಡಗರಕಿದೀಗ ಹೊಸ ಭಾಷ್ಯದಾ ಲಿಖಿತ.... 

 ಮೋಡಗಳ ಪರದೆಯಲಿ ಮರೆಯಾದ ಚಂದಿರ 
ಬೆಚ್ಚಗಿನ ಗೂಡಿನಲಿ ಗುಟುಕಹೀರುವ ಗುಬ್ಬಿ 
ಅಮ್ಮನಾ ಮಡಿಲಲಿ ಸಿಹಿನಿದ್ದೆಯಲಿಹ ಹಸುಳೆ 
ಅನುಸಂಧಾನಕೊಂದು ಅಂತರಾಳದ ಸ್ಪಶ೯.... 

 ನೈಜತೆಯೇ ಅಂತಧಾ೯ನವಾಗಿರುವ 
ವೇಳೆಯಲಿ ಬದುಕಿನ ಬಕ೯ರ - ಕಕ೯ರಗಳನೆಲ್ಲವನು 
ಸಹಕರಿಸಿ, ಸ್ವೀಕರಿಸಿ, ಸಂಯಮದಿ ವತಿ೯ಸಿರೆ 
ಹೃದಯದಿ ಸಂಚಯ - ಆತ್ಮತೃಪ್ತಿಯಾ ಸಂಪದ....

 - R. R. B.

ನೆನಹು

ಅರುಣ ಅಪರಾತ್ರಿ ಉದಿಸಿದರೂ 
ಅಂಶುಧರ ಅಮವಾಸ್ಯೆ ಕಂಡರೂ 
ಅಂಬುಧಿಯಲ್ಲರಳದು ಅಂಬುಜ.... 

ಎಡೆಬಿಡದೆ ಬಲ್ಸೋನೆ ಸುರಿದರೂ 
ಕೆರೆ - ಕಾಲುವೆಗಳು ತುಂಬಿ ಹರಿದರೂ 
ಅಸಂಗ್ರಹಿತ ಪದ್ಮಪತ್ರದ ಮೇಲಿನಾ ಹನಿ... 
ಮನದಲ್ಲಿನ ಚಿಂತನ - ಮಂಥನಗಳಿಗೆ 
ಹೊಂಬಾಳೆಯ ಹೊದಿಕೆ ಹೊದೆಸಿದರೂ 
ಯೋಚನಾಲಹರಿ ಅಮೂತ೯, ಅನಂತ ... 

 ಬದುಕೆಂಬ ಸುಂದರ ಅಂಗಳದಿ ನಿತ್ಯ 
ಅರಳುವ ಶಂಖಪುಷ್ಪದ ಪ್ರೀತಿ 
ಎಂದಿಗೂ ಬಾಡದು ಸ್ಮೃತಿಪಟಲದಲಿ... 

ಮನದ ನವಿರಾದ ತೋಟದಲಿ 
ಭಾವಲಹರಿ ನಿರಂತರ ನತಿ೯ಸಿದರೂ 
ಹೃದಯದಿ ಮಾತ್ರ ಮಸಣದಾ ಮೌನ.... 

ಕಡುಕಾನನದ ಝರಿ ತೊರೆಗಳಲಿ 
ಧುಮ್ಮಿಕ್ಕುವ ಜಲಪಾತದ ಉದಕದಲಿ 
ಸಂಚಯಿತ ಶಕ್ತಿಯು ಅಮೋಘ, ಅಗಾಧ... 
 ಕಲ್ಪನೆಗಳು ಅಶ್ವವೇಗದಲಿ ಓಡುತಿರೆ 
ಸಿಂಹಾವಲೋಕನಕೆ ಬೇಕಾಗಿದೆ 
ಗತವೈಭವಗಳ ನಲ್ಮೆಯಾ ನೆನಹು...

 - R. R. B.

ಅಭಿಸರಣ

ಮನದಂಗಳದಿ ಮೂಡಿರೆ ನೂರಾರು ಪ್ರೇಮಪುಷ್ಪ 
 ಅಂಗೈಯಲ್ಲಿ ಅರೆಬಿರಿದ ಕುಸುಮಾಂಜಲಿ 
ತಂಬೆಲರಿನಲೂ ಈಗ ಒಲವಿನಾ ಸುವಾಸನೆ 
ಅನುದಿನವೂ ನಿರಂತರ ಅಕ್ಕರೆಯ ಉಪಾಸನೆ... 

 ದುಗುಡ ಕಳೆವ ಉತ್ಪಲಮಿತ್ರನಿಂದ 
ಮಿಣುಕುಹುಳಕೂ ನವಿರಾದ ಬದುಕು 
ಸಂಚಿಯ ತುಂಬ ಕಸವರದ ಸಂಚಯ 
ಅವಕಾಶಕೆ ಕಾದುಕುಳಿತ ಸಂಚುಗಾರ.... 

ಭಾವನೆಗಳ ಸರಿಗಮದಿ ನವಪಲ್ಲವಿ 
ಏಕತಾನತೆ ಮುರಿವ ಹೊಸ ವ್ಯಕ್ತಿತ್ವ 
ಸ್ವರವೀಣೆಯಲಿ ಅವ್ಯಕ್ತ ರಾಗದಾ ಸಂಚಲನ 
ಅಂತಧಾ೯ನವಾದ ಚೂರುಗಳ ಏಕೀಭಾವ.... 

 ಚರಿತಾಥ೯ದ ಸುದೀರ್ಘ ಯಜ್ಞದಲಿ ಅ
ತ್ಯಾನಂದದಿ ಹವಿಯಾದ ಆಜ್ಯ 
ನಡೆವ ಹೋಮದಲಿ ಆಹುತಿಯಾದ ವ್ಯಾಜ್ಯ 
ಭಸ್ಮದಲಿ ಲಭಿಸುವುದೆಲ್ಲ ನೆನಪುಗಳಾ ಪುಡಿ.. 

 ನಿಜ೯ನವಾದ ವಿಪಿನದಿ ಸಾಗುವ ಹೆಜ್ಜೆ 
ಕಾಲುದಾರಿಯಲಿ ಕಲ್ಲು ಮುಳ್ಳುಗಳ ಪಯಣ 
ಗಮ್ಯದೆಡೆಗೆ ಒಂದು ಸಣ್ಣ ಪಕ್ಷಿನೋಟ 
ಅನಾಮಿಕನೊಬ್ಬನ ಅದ್ಭುತ ಅಭಿಸರಣ...  
- R. R. B.

ಮರ್ಯಾದೆ

ಉಕ್ಕಿಬರುವ ಅಬ್ದಿಯ ಅಲೆಗಳೂ 
ಒಮ್ಮೊಮ್ಮೆ ದಾಟಿ ಬರುತ್ತವೆ 
ಕಾದ ಉಸುಕಿನ ತೀರದ ಬೇಲಿ... 

ಜೀವಜಲ ನೀಡುವ ನದಿಯೂ 
ಅಪರೂಪಕ್ಕೆ ಬದಲಿಸುತ್ತದೆ 
ತನ್ನ ದಿನನಿತ್ಯ ಸಾಗುವ ಹರಿವ... 

ಜಗದ ಅಂಧಕಾರ ತೊಡೆವ 
ಅಂಬುಜಮಿತ್ರನೂ ಕೆಲವೊಮ್ಮೆ 
ಉದಯವಾಗುವುದು ವಿಳಂಬ... 

ಸಹನಾಮಯಿಯಾದ ಧರಿತ್ರಿಯೂ 
ಮುನಿಸಿಕೊಂಡರೆ ನಡೆದಾಡುವ 
ನೆಲದಲ್ಲಿ ನಿಲ್ಲದ ಭೂ ಕಂಪನ... 

 ಇಳೆಯ ಗೆಳೆಯ ವರುಣನಾದರೂ 
ಕೆಲವೆಡೆ ಅನಾವೃಷ್ಟಿಯ ತಾಂಡವ 
ಇನ್ನೆಲ್ಲೋ ಭಾರೀ ಜಲಪ್ರಳಯ... 

ಸವ೯ಸಂಗವ ಪರಿತ್ಯಜಿಸಿದರೂ 
ಸ್ವನಿಯಂತ್ರಣ ಕಳೆದುಕೊಂಡರೆ 
ಸಹನೆ, ತಾಳ್ಮೆಯು ಮರೀಚಿಕೆ... 

ಚರಿತಾಥ೯ದ ಇಳಿತ ಭರತಗಳಲಿ 
ಲಕ್ಷೋಪಲಕ್ಷ ಅನಿಯಂತ್ರಿತ 
ಭಾವನೆಗಳ ನಿರಂತರ ಪ್ರಸವ... 
ಚಿಂತನ ಮಂಥನಗಳಲಿ ಮನಸು 
ಕ್ರಾಂತಿಯ ಕಾಂತಿಬೀರಲಾರಂಭಿಸುತ 
ಮೀರಲಿ ಕುಂದುಕೊರತೆಗಳ ಮಯಾ೯ದೆ.... 
 - R. R. B.

ಆಹ್ವಾನ

ಅಪಾರ ಭಾವನೆಗಳ ಅಥ೯ 
ಪದಗಳಲಿ ಅರಿಯಬಹುದೇ? 
ಅಥ೯ವೋ ಅಕ್ಷಯಪಾತ್ರೆ.... 

ಮನದ ಹಲವು ತೊಳಲಾಟಗಳಲಿ 
ಮಾತು ಮೌನದ ಮೊರೆ ಹೊಕ್ಕಾಗ 
ಮಾಯವಾಯಿತು ಮನದ ದನಿ 
ನಿಶ್ಶಬ್ಧವೇ ಪ್ರಶ್ನೆಗಳಿಗೆಲ್ಲ ಉತ್ತರ...? 

ಒಮ್ಮೊಮ್ಮೆ ಭಾವನೆಗಳೆಂಬ ಚಿಲುಮೆ 
ಭರದಿಂದ ಎಡೆಬಿಡದೇ ಧುಮ್ಮಿಕ್ಕುತ್ತದೆ 
ಆಲಿಸಲು ಕಣ೯ಗಳು ಇಲ್ಲದಿರುವಾಗ 
ಸ್ಪಂದಿಸುವ ಮನಗಳು ದೂರವಾದಾಗ... 

ಚಿಂತನೆಗಳು ಮೃತ್ಯುಕೂಪದ ಸುಳಿಯಲ್ಲಿ 
ಅನುಭಾವಗಳು ಕಹಿಯಾದ ಅನುಭವದಲ್ಲಿ 
ಗಾಢವಾಗಿ ಸಿಲುಕಿ ನಲುಗಿ ನಶಿಸುತಿರುವಾಗ 
ಶರಧಿಯ ಕಿನಾರೆಯಲಿ ರೋದಿಸುವ ಮನ... 

 ಮರಳು ದಾರಿಯ ಮೇಲೆ ಏಕಾಂಗಿ ನಡಿಗೆ 
ತಿರುವುಗಳ ಸಂತೆಯಲಿ ಒಂಟಿ ಪಯಣ.. 
ಕರಿಕಾನನವಾಗಿಹ ನಶ್ವರ ಬದುಕಿನಲಿ 
ಸುಂದರ ಸುರುಚಿರ ಶಶಾಂಕನಿಗೆ ಆಹ್ವಾನ.. 

 - R.R.B.

ಸಂಕ್ರಮಣ

 
ಮಕರಕೆ ಅಕ೯ನ ಆಗಮನ 
ಉತ್ತರಾಯಣದ ಈ ಪವ೯ದಿನ 
ಶುಭ ಘಳಿಗೆಗಳ ಸಂಚಯ 
ಹಷ೯ವೀ ಮನವೆಂಬಾಲಯ 
 ಮನೆ ಮನೆಗಳಲಿ ತಿಲ - ಬೆಲ್ಲ 
ಜೊತೆಯಲಿ ಸಿಹಿಯಾದ ಕಬ್ಬು 
ಮರೆಸುತ್ತ ಕಹಿ ಘಟನೆಗಳನೆಲ್ಲ 
ನೀಡುವುದು ಮನಕೆ ಆನಂದ 
 ಎಳ್ಳು - ಬೆಲ್ಲವನು ಹಂಚುತ 
ಒಳ್ಳೊಳ್ಳೆಯ ಮಾತನಾಡುತ 
ದುಃಖ, ನೋವನು ಮರೆಯುತ 
ಸಂತಸವಾಗಿರಿ ಸಂತತ 
 ಬಿತ್ತರಿಸುತ ಸಂಕ್ರಾಂತಿ ಕಾಳು 
ಹಸನಾಗಿಸೋಣ ಈ ಬಾಳು 
ಅನುಭವಗಳ ಬುತ್ತಿಯೊಡನೆ 
ನವ ಗಮ್ಯಗಳೆಡೆಗೆ ಈ ಸಂಕ್ರಮಣ. 

 - R. R. B.

ಮಸಣದೊಳಗಿನ ಮರಣ

 ಜಗವೆಂಬ ಮಾಯೆಯೊಳಗೆ 
ಜನವೆಂಬ ಜೀವಗಳೊಡನೆ 
ನಾಲ್ಕು ದಿವಸಗಳ ಬದುಕು 
ಹೊಳೆಯ ತೀರದಲಿಹ ಉಸುಕು 

ಭಾವನೆಗಳ ಬಂಡಿಯಲಿ 
ಸಂಬಂಧಗಳ ಮಡಿಲಿನಲಿ 
ಧನ್ಯಭಾವದ ಈ ಜೀವನ 
ಸಾಗುತಲೇ ಇರುವ ಪಯಣ 

ಕಡಲ ಸೇರುವ ನದಿಯಂತೆ 
ಸಂಧ್ಯಾಕಾಲದ ಸೂರ್ಯನಂತೆ 
ನಡೆಯುತಿರುವ ಚರಿತಾಥ೯ 
ಆವತ೯ಗೊಳುತಿರುವ ಕಾಲಚಕ್ರ 

ನೆನಪುಗಳ ಪ್ರತಿ ಶಿಲೆಗಳಲಿ 
ಅನುಭವಗಳ ಪ್ರತಿಮೆ ಮಾಡಿ 
ಸಂಪ್ರೀತಿಗಾಗಿ ಪರಿತಪನೆ 
ಸುಖ ದುಖಃಗಳ ಮಿಶ್ರಣದಿ 
ಅಲಭ್ಯ ಕ್ಷಣಗಳನೆ ನೆನೆದು 
ಹಲವು ಚಿಂತನೆಗಳೊಡನೆ 
ಬದುಕಿನ ಅಂತ್ಯ ಕಲ್ಪನಾತೀತ... 

ಸವ೯ವ ತೊರೆವ ಆತ್ಮಕೆ ಸಾವಿಲ್ಲ 
ಆದರೆ ದೇಹವೆಂಬ ನಶ್ವರಕೆ 
ಘೋರ ಮಸಣದೊಳಗೆ ಮರಣ 
ಕೊನೆಗೂ ನಿಶ್ಚಿತ ಜೀವದ ಹರಣ...

 - R. R. B.

ಅಮೂರ್ತದೆಡೆಗೆ

ಶೂನ್ಯದಿಂದ ಅನಂತದ ಕಡೆಗೆ 
ಭುವಿಯಿಂದ ನೀಲಾಕಾಶದೆಡೆಗೆ 
ತೀರದಿಂದ ಶರಧಿಯಾಳದತ್ತ 
ಓಡುತಿರುವ ಭಾವಯಾನ..... 

ಕಲ್ಪನೆಗಳೆಂಬ ಕುದುರೆಗೆ 
ದೃಢವಾದ ರೆಕ್ಕೆ ಬಲಿತು 
ಪವನ ವೇಗದಲಿ ವಿಹಾರ... 

ಸುವಾಸನೆಯ ಸುಂದರ ಸುಮಗಳೋ 
ಚುಚ್ಚಲು ಕಾದುಕುಳಿತ ಮುಳ್ಳುಗಳೋ 
ದೃಷ್ಟಿಕೋನದ ಮೇಲೆ ಅವಲಂಬಿತ 
ಸವೆಯುತಿರುವ ಕಾಲ ನಿರೀಕ್ಷಿತ 

ಆದಶ೯ - ವಾಸ್ತವಗಳ ಮಧ್ಯೆ 
ನೋವು - ನಲಿವುಗಳ ಜೊತೆಗೆ 
ಅನುಭವಗಳ ಸಂಗ್ರಹಕೆ ಚೀಲ 
ಅಥ೯ಕೆಟುಕದ ಮನ ನಿಗೂಢ ಬಿಲ 
ಹಲವು ಚಿಂತನೆಗಳ ನಡುವೆ 
ಕಲ್ಪನಾಲೋಕವು ಗತಿ ಬದಲಿಸಿದೆ 
ಮೂತ೯ದಿಂದ ಅಮೂತ೯ದೆಡೆಗೆ..... 

 - R. R. B.

ಪರಿಶೋಧ

 ಗಾಜಿನಾ ಮನೆಯೊಳಗೆ 
ಅಮೂತ೯ ಕಲ್ಪನೆಯೊಡನೆ 
ಸಾಗುತಿಹ ಈ ಬದುಕು 
ಚಿಂತನೆಗಳೇ ಚುಟುಕು 

ಮನದಾಳದಿ ಉದ್ಭವಿಸುವ 
ಭಾವನೆಗಳು ಅತಿವೇದ್ಯ 
ನಿದಿ೯ಷ್ಟ ನಿಧಾ೯ರವಿಲ್ಲ ಸದ್ಯ 
ಕಳೆದುಕೊಂಡ ಭಾವದಿ ಮನ 
ಹುಡುಕುತಿದೆ ಪ್ರತಿದಿನ, ಕ್ಷಣ 

ಸಾಗರದಾಳದಿ ಕಳೆದಿಹ 
ರತ್ನಗಳಿಗೆ ಇಲ್ಲಾದರೆ ಶೋಧ 
ಏಕೀಭವಿಸುವುದೇ ಗಮನ? 
ದೊರಕೀತೆ ಕಳೆದಂತಹ ರತುನ? 
ಫಲಶ್ರುತಿಯಂತೂ ಮರೀಚಿಕೆ... 

ಏಕಾಗ್ರತೆಯೇ ಮಾಯವಾದರೆ 
ಕಾರ್ಯಕ್ಕೆಲ್ಲಿಯ ಗೌರವ? 
ಜೀವಜಲವೇ ಇಲ್ಲದಿರೆ 
ಶಿಲಾಲತೆಗೆಲ್ಲಿಯ ಪಲ್ಲವ? 
ವಾತಾವರಣ ಪ್ರಕ್ಷುಬ್ಧವಾದರೆ
ಕೇಳುವುದೇ ಹಕ್ಕಿಗಳ ಚಿಲಿಪಿಲಿ ? 

ಎಲ್ಲವೂ ಬರಿ ಅಯೋಮಯ 
ಎಲ್ಲಿಹುದೋ ಶಾಂತಿ,ಪ್ರೀತಿಗಳ 
ಸಂತಸಭರಿತ ನಿಲಯ? 
ದ್ವಂದ್ವಪೂಣ೯ ಈ ಜೀವನದಿ 
ಅಂಧಕಾರ ನೀಗಿಸಿ ಬೆಳಕಾಗುವ, 
ಸಂತಸದ ಹೊಂಗಿರಣ ಬೀರುವ 
ದಿನಕರನಿಗಾಗಿ ಪರಿಶೋಧ..... 

 - R. R. B.

ದೀಪಗಳ ಪರ್ವದಿ..

ಹಣತೆಯಿಂದ ಹಣತೆಯ 
ಬೆಳಗುವ ದೀಪಾವಳಿಯ ಸುದಿನ 
ಭಕ್ತಿ ಭಾವದಿ ತನು - ಮನ 
ಸೌಹಾರ್ದತೆಯ ಸಮ್ಮಿಲನ 
ಸಂಭ್ರಮ, ಸಡಗರಭರಿತ 
ಸುಂದರ ದಿನ, ಆಪ್ತತೆಯ ಕ್ಷಣ 
ಚಿನಕುರುಳಿಗಳ ನಗೆಯೇ ಪಟಾಕಿ 
ತರಬೇಕಿಲ್ಲ ಅಂಗಡಿಯಿಂದ ಹುಡುಕಿ 
ಗಿರಗಿರನೆ ತಿರುಗುವ ನೆಲಚಕ್ರಕೆ ಪರ್ಯಾಯ, 
ನೆನಪುಗಳ ಸರಣಿಯ ಸುತ್ತುವ 
ಗತ - ಪ್ರಸ್ತುತ ಜೀವನಚಕ್ರ 
ಡಾಂಭಿಕತೆಯ ನೆರಳಿಲ್ಲದೇ 
ಆಚರಿಸುವ ಶುಭ ಪವ೯ 
ಅಂತಧಾ೯ನವಾಗಿಸುವುದು ಗವ೯ 
ಪ್ರಜ್ವಲಿಸುವ ಜ್ಯೋತಿಯು 
ಸವ೯ರ ಮನೆ - ಮನೆಗೆ
 ಜ್ಞಾನವೆಂಬ ಸುಜ್ಯೋತಿಯು 
ಎಲ್ಲರ ಮನ - ಮನಕೆ 
ನೆಲ್ಮೆಯ ಬೆಳಕು ನೀಡಲಿ
 ದ್ವೇಷ, ಕೋಮು ಗಲಭೆಗಳು ಅಳಿದು 
ಸಂಪ್ರೀತಿ ಮೂಡಲಿ ಸಾಮರಸ್ಯವು ನೆಲೆಸಲಿ... 

 - R. R. B.

ಮಿಂಚಿನ ಬೆಳಕಿನಲಿ..

 ಬಾನಲಿ ಸುಳಿಮಿಂಚೊಂದು 
ಫಕ್ಕನೆ ಮೂಡಿ ಮಾಯವಾಯಿತು 
ಹಾಗೆಯೇ ಹೃದಯಾಕಾಶದಿ 
ಭರವಸೆಯ ಸುಳಿಮಿಂಚು....

 ಆ ಮಿಂಚು ಮಾಯವಾದಂತೆ 
ಭರವಸೆಯು ಅದೃಶ್ಯವಾಗದಿರಲಿ 
ಗಾಡಾಂಧಕಾರದಿ ಬೆಳಕ ನೀಡುವ ಮಿಂಚದು 
ಬೇಸತ್ತ ಜೀವನಕೆ ರಸತುಂಬುವ ಮಿಂಚಿದು 
ಆತ್ಮವಿಶ್ವಾಸವೆಂಬ ಕೋಲ್ಮಿಂಚು.... 

ಭಾವಗಳ ವಷ೯ಧಾರೆ ಸುರಿವಾಗ 
ಮಾತು ಧ್ವನಿಯಾಗುವ ಮುನ್ನ 
ಉದ್ಭವಿಸುವ ಮೌನ - ಮಿಂಚು 
ಪ್ರತಿಕ್ಷಣದಿ ಅನುದಿನದಿ ಮನಕೆ 
ಸಾಂತ್ವನ ನೀಡುವ ಅಶರೀರ ಶಕ್ತಿಯದು 

ಏಕಾಂಗಿತನ ಕಾಡುವಾಗ ಸಂಗಾತಿಯಾಗಿ 
ಕತ೯ವ್ಯ, ಹವ್ಯಾಸಗಳ ಹಂಬಲಿಸುತ 
ಅಸಂಖ್ಯಾತ ನೋವುಗಳಿದ್ದರೂ ಇತರರ 
ಮೇಲೆ ಅವಲಂಬಿಸದೆ ಸುಪ್ತವಾಗಿರುವ 
ಅಗಾಧ ಸಾಮರ್ಥ್ಯಗಳ ನೆನಪಿಸುತ್ತ, 
ಕ್ರೋಢೀಕರಿಪ ಕಾಂತಿಯದು 

ಹಗಲಿನಲಿ ಸಪ್ತಾಶ್ವರೂಢನ ತೀಕ್ಷ್ಣ ಬೆಳಕು 
ಇರುಳಿನಲಿ ಶಶಿಗಿಂತ ಪ್ರಖರ ಮಿಂಚಿನ ಬೆಳಕು
 ನಶ್ವರವಾದ ಈ ಬಾಳಿಗೆ ಭರವಸೆಯೇ ಬೆಳಕು. 

 - R. R. B.

ಅಗ್ನಿಪುಷ್ಪ

ನಿಗಿನಿಗಿಸುವ ಕೆಂಡದಲಿ 
ಅತೀವವಾದ ತಾಪದಲಿ
ಊಹಿಸಲಾಗದ ರೀತಿಯಲಿ 
ಸುಮವೊಂದು ಅರಳಿದರೆ 
ಅಸಾಮಾನ್ಯವದು ಅಗ್ನಿಪುಷ್ಪ 
ಎಲ್ಲ ಸುಟ್ಟುಕರಕಲಾಗುವ ಧಗೆಗೆ 
ಅದರಸ್ತಿತ್ವ ಉಳಿದರೆ 
ಅಸಾಧಾರಣವದು ಅಗ್ನಿಪುಷ್ಪ 
ಹಲವು ಕಷ್ಟಗಳೆಡೆಯಲಿ 
ಪರಿಶ್ರಮವ ಆಹಾರವಾಗಿಸಿಕೊಂಡ ಹೂವದು 
ಪಕಳೆಗಳಲಿ ಬಿಸಿಉಸಿರಿದೆ
 ಹಗಲು-ರಾತ್ರಿಗಳ ನೋವಿದೆ 
ಸಹಸ್ರ ಪ್ರಯತ್ನಗಳ ಸಾಲಿದೆ 
ಮನ ಅಶ್ರುಧಾರೆ ಸುರಿಸುತ್ತಿದ್ದರೂ 
ಮೊಗದಿ ಮಾತ್ರ ನಸುನಗು..... 
ಸಂತಸದ ಕಡಲಿನಿಂದಲ್ಲ 
ಕೇವಲ ಇತರರಿಗೋಸ್ಕರ 
ಅವರಿವರ ಮನಃಶಾಂತಿಗಾಗಿ 
ಹೊಗೆಯ ಧಗೆಗೆ ಬೇಸತ್ತರೂ
 ಹೊರಗೆ ಮಾತ್ರ ತಂಪಾಗಿ 
ನೋಡುಗರ ಕಣ್ಮನಗಳಿಗೆ 
ರಸದೂಟ ಬಡಿಸುತ್ತಲಿದೆ... 
ಅತೀವ ಕಷ್ಟಗಳ ಸಹಿಸಿ 
ಅಸ್ತಿತ್ವವುಳಿಸಿಕೊಂಡ ಕುಸುಮ 
ಅಸಾಧಾರಣವದು ಅಗ್ನಿಪುಷ್ಪ 
ಬೆಂಕಿಯಲ್ಲರಳಿದ ಹೂವು. 

 - R. R. B.

ವ್ಯರ್ಥ

ಜೀವಜಲವೇ ಇಲ್ಲದಿರೆ 
ಆ ಕೆರೆ ಬಾವಿಗಳೇಕೆ? 
ಬೆಳಕನ್ನೇ ನೀಡದಿದ್ದರೆ 
ಆರಿದ ಹಣತೆಯಿನ್ನೇಕೆ? 
ಮಾಗ೯ದಶ೯ನವೇ ನೀಡದಿದ್ದರೆ 
ಆ ಗುರುವಿನ ಅಸ್ತಿತ್ವವೇಕೆ? 
ಭಾವನೆಗಳೇ ಇಲ್ಲವಾದರೆ 
ಆ ಮನುಜನಿರುವುದೇಕೆ? 
ವಾತ್ಸಲ್ಯವೇ ತೋರದಿರೆ 
ಆ ಸಂಬಂಧಗಳೇಕೆ? 
ತಂಗಾಳಿಯೇ ಲಭಿಸದಿರೆ 
ಆ ಗಾಳಿಪಂಕವಿನ್ನೇಕೆ? 
ನೆಮ್ಮದಿಯೇ ದೂರವಾದರೆ 
ಸೌಕರ್ಯಗಳಿಂದೇನು ಫಲ? 
ಪ್ರತಿಫಲವೇ ಮರೀಚಿಕೆಯಾಗೆ 
ಪ್ರಯತ್ನಕ್ಕಿನ್ನೆಲ್ಲಿ ಬೆಲೆ? 
ಕಾಳಜಿಯೇ ಇಲ್ಲವಾದರೆ 
ಆ ಹುಸಿನುಡಿಗಳೇಕೆ? 
ಅನುಭವಗಳೇ ಇಲ್ಲದಿರೆ 
ಇಷ್ಟು ದಿನ ಜೀವಿಸಿದ್ದೇನು? 
ಆಸಕ್ತಿಯೇ ಇಲ್ಲವಾದರೆ 
ಆ ಕಾರ್ಯ ಮಾಡುವುದೇಕೆ? 
ಸಾಧಿಸುವ ಹಂಬಲವೇ ಇರದಿರೆ 
ಜೀವಿಸುವುದಾದರೂ ಏಕೆ??? 

 - R. R. B.

ಬಯಕೆ ಬಾಣೆಲೆಯಲ್ಲಿ..

ಬಯಕೆಗಳ ಬಾಣೆಲೆಯಲಿ 
ಬಳಲಿ ಬೆಂಡಾಗಿರುವೆ 
ಆಸೆಗಳು ಕಮರುತ್ತಿವೆ 
ಕನಸುಗಳೆಲ್ಲ ಮಣ್ಣಾಗಿ 
ಅದರ ಮೇಲೆ ಹೊಸ ಸಸಿ ತಳಿರೊಡೆಯುತ್ತಲಿದೆ... 
ಗತಕಾಲದ ನೋವುಗಳು 
ಪುನಃ ಮರುಕಳಿಸುತಿವೆ
 ಮನ ಮುದುಡುತಲಿದೆ...
 ಹೃದಯ ಬೃಂದಾವನದಿ ನೀರಿಲ್ಲ, 
ಅರಳಿದ ಸುಮವಿಲ್ಲ 
ಎಲ್ಲಾ ಬರೀ ಒಣಗಿದೆಲೆಗಳು 
ಬಾಡಿಹೋದ ಬಳ್ಳಿಗಳು... 
ನೀರೆರೆಯುವರಾರು? 
ಅದ ಚಿಗುರಿಸುವರಾರು?.. 
ಕಾದು ಕಾದು ಬೆಂದಿರುವೆ 
ತಾಪವ ತಾಳಲಾಗದೆ... 
ಮನದ ಬೇಗೆ ತಣಿವುದೆಂತು?
 ಎಲ್ಲಿ ಅಕ್ಕರೆಯ ಸಾಂತ್ವನ?.. 
ಅತ್ಯಗತ್ಯ ಮಾಗ೯ದಶ೯ನ 
ಭಾವಗಳಿಗೆ ಸಮಪ೯ಕ ಸ್ಪಂದನ.. 
ಬಯಕೆಗಳ ಬಾಣೆಲೆಯಲಿ
 ಬಳಲಿ ಬೆಂಡಾಗುತಲಿರುವೆ...

 - R. R. B.

ಶೋಧ

 ನನ್ನೊಳಗಿನ ನಾನೆಂಬ ನಾನು 
ನಿಜವಾಗಿಯೂ ಈಗ ನಾನೇ? 
ಮೊದಲಿದ್ದ ನಾನು ಈಗೆಲ್ಲಿ ಹೋಗಿದೆ? 
ಬಾರನೆಂಬಷ್ಟು ದೂರದ ಮಸಣಕೆ ಇಲ್ಲಾ, 
ಹುದುಗಿ ಹೋಗಿದೆಯೇ ಅನಂತ 
ಕಡಲಿನಾಳದ ಕಪ್ಪೆ ಚಿಪ್ಪುಗಳೊಳಗೆ? 

ಅಂತರಾತ್ಮಕ್ಕೊಂದು ಕಟುವಾದ ಪ್ರಶ್ನೆ 
ಬಡಗಣದಲ್ಲೆಲ್ಲೊ ಕಳೆದುಹೋಗಿದೆ ಉತ್ತರ 
ಉತ್ತರಕ್ಕಾಗಿ ಉತ್ತರ ದಿಕ್ಕಿನಲ್ಲಿ ಪಯಣ 
ಎಲ್ಲೆಡೆ ಶೋಧಿಸುತ್ತಿದೆ ಈ ಪುಟ್ಟ ನಯನ 
ಚರಾಚರಗಳ ವೀಕ್ಷಿಸಲು ಅದಕ್ಕಿಲ್ಲ ಗಮನ 

ಈ 'ನನ್ನತನ' ಎಂಬುದರ ಹುಡುಕಾಟದಲಿ 
ವಸುಂಧರೆಯಲಿ, ಪಾತಾಳ ಲೋಕದಲಿ 
ಚಂದ್ರ-ಅಕ೯ರಲಿ, ನಕ್ಷತ್ರ ಪುಂಜದಲಿ.... 
ನಾನೆಂಬ 'ನ' ಕಾರದ ಪರಿಶೋಧನೆ 
ಅವಕಾಶದಲ್ಲಿಲ್ಲವೀ 'ನ' ಕಾರ 
'ನಾನು' ಎಂಬ ಕಲ್ಪನಾತೀತ ಪದಕೆ 
'ನನ್ನತನ'ವೆಂಬ ಕಪ್ಪುಚಾದರದ ಹೊದಿಕೆ 
ಅಂತ್ಯದಲೂ ಲಭಿಸದೆ ಈ 'ನಾನು'? 
ಹೋಗುವಾಗ ಒಯ್ಯಲಾಗದು ಯಾವ ಹೊನ್ನು 
ಜೀವನದ ಗಹನವಾದ ಅಂಶ ತಿಳಿವವರೆಗೆ 
'ನನ್ನತನ'ದ ಶೋಧದ ಹೋಮ ನದಿಯ ಒಳಗೆ..

 - R.R.B.

ಭಾವಗಳ ನಾವೆಯಲಿ..

           " ಹೊರಟುಬಿಟ್ಟೆಯಾ ಸೌಮಿತ್ರಿ ನನ್ನ ಏಕಾಂಗಿಯಾಗಿಸಿ, ಹಲವು ಪ್ರಶ್ನೆಗಳನು ನಿರುತ್ತರಗೊಳಿಸಿ, ಭಾವಗಳ ಬೇಲಿಯಲಿ ಬಂಧಿಸಿ... ಹೊರಡುವ ಮುನ್ನ ನೆನಪಾಗಲಿಲ್ಲವೇ ನಾನು? ಈ ಊರ್ಮಿಳೆಯ ನೆನಪು ಆಗಲೇ ಇಲ್ಲವೇ?... ಹೀಗೆ ವಿಚಿತ್ರ ಸಂಕಟ ಅನುಭವಿಸಲು ನಾನು ಮಾಡಿದ ತಪ್ಪಾದರೂ ಏನು?...ಈ ದೊಡ್ಡ ಅರಮನೆಯಲ್ಲಿ ಸಂಪತ್ತಿದೆ.ವೈಭವವಿದೆ. ವೈಭೋಗವಿದೆ.ಆಳು - ಕಾಳುಗಳಿವೆ. ಬದುಕಲು ಬೇಕಾದ ಎಲ್ಲವೂ ಇದೆ. ಆದರೆ...ಆದರೆ ನೀನೇ ಇಲ್ಲವಲ್ಲಾ ಇನಿಯಾ... ಹೋದೆಯಾ ಮತ್ತೆ ಬಾರೆನೆಂಬಷ್ಟು ದೂರಕ್ಕೆ..ಯಾರೂ ತಲುಪಲಾಶಿಸದ ಗಮ್ಯಕ್ಕೆ...

          ಜನಕ ಪುತ್ರಿಯರ ಬದುಕ ಬಂಡಿ ಹೀಗೆ ಸಾಗುತ್ತದೆಯೆಂದು ನಾನು ಹಿಂದೆಂದೂ ಭಾವಿಸಿರಲಿಲ್ಲ. ಒಂದೇ ದಿನ ಅಕ್ಕ ಸೀತೆ ಶ್ರೀರಾಮನ ಮಡದಿಯಾಗಿ, ನಾನು ನಿನ್ನವಳಾಗಿ ಹೊಸ ಜೀವನ ಆರಂಭಿಸಿದೆವು. ಆಗ ಮುಂದೆರಗುವ ಕಷ್ಟಗಳ ಕುರಿತು ಕಿಂಚಿತ್ತೂ ಅರಿವಿರಲಿಲ್ಲ ನಮಗೆ. ಒಳ್ಳೆಯದೇ ಆಯ್ತು ಬಿಡು. ಮೊದಲೇ ಎಲ್ಲ ಆಗು - ಹೋಗುಗಳ ಅರಿತಿದ್ದರೆ ಆ ಕ್ಷಣದ ಸಂತಸವನ್ನು ಅನುಭವಿಸುವ ಭಾಗ್ಯವೂ ನಮಗಿರುತ್ತಿರಲಿಲ್ಲವೇನೋ....

           ಜೀವನ ಒಂದು ಸುಂದರ ಕನಸು ಎಂದು ನಂಬಿದ್ದೆ ನಾನು. ಅಯೋಧ್ಯೆಯ ಅರಮನೆಯಲ್ಲಿ ಅಸಂಖ್ಯ ಖುಷಿಯ ಕ್ಷಣಗಳನ್ನು ಕಳೆಯಬೇಕು. ಕಳೆದ ರಸನಿಮಿಷಗಳನ್ನು ಸವಿನೆನಪಿನ ತೋಟದಲಿ ನೆಡಬೇಕು. ಆಗಾಗ ನೀರೆರೆದು ಸಂತಸ ಪಡಬೇಕು. ನೆನಪಿನ ಗಿಡದಲ್ಲರಳುವ ಬಣ್ಣಬಣ್ಣದ ಹೂವ ಜೋಪಾನವಾಗಿ ಕೊಯ್ದು ಮನದಂಗಳದಿ ಮಾಲೆ ಕಟ್ಟಬೇಕು....... ಇನ್ನೂ ಏನೇನೋ ಕನಸು ಕಂಡಿದ್ದೆ ನಾನು.ಅದೆಲ್ಲ ನನಸಾಗುವ ಪರಿಯ ಅಚ್ಚರಿಯಿಂದ ಕಾಣಲು ಕಾತರಿಸಿದ್ದೆ. ನೀನು ಬಳಿ ಬಂದಾಗಲೆಲ್ಲ ಎದೆಬಡಿತದಲಿ ಏನೋ ಹಿತವೆನಿಸುವ ಏರಿಳಿತ. ಮೈ ಸೋಕಿದರೆ ಸಾಕು ಹೃದಯವೀಣೆಯ ತಂತಿಯನು ಮೀಟಿದಾ ಭಾವ. ನಿನ್ನ ಶೌರ್ಯ, ಗಾಂಭೀರ್ಯಗಳ ಕಂಡಾಗ ಇವನ ಪಡೆದ ನಾ ಧನ್ಯ ಎಂದು ಮನ ಕುಣಿದಾಡಿದ್ದಿದೆ. ಆದರೆ....ಆ ಎಲ್ಲ ಸುಖಗಳು ಕೇವಲ ಕೆಲ ದಿನಗಳಿಗಷ್ಟೇ ಸೀಮಿತವಾಗಿದ್ದು ನನ್ನ ದುರಾದೃಷ್ಟ !...

           ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸದ ಕೊಡುಗೆ ಕೊಟ್ಟಾಗ ರಾಮ - ಸೀತೆಯರೊಡನೆ ನೀನೂ ಹೊರಟೆ. ನಿನ್ನ ಜೊತೆ ನಾನೂ ಬರುತ್ತೇನೆಂದರೆ ಕೇಳಲೇ ಇಲ್ಲ.. ನಿನಗೇನೋ ಸೀತಾರಾಮರ ಸೇವೆಯಲ್ಲಿ ಸಮಯ ಸರಿದದ್ದು ಗೊತ್ತಾಗಲಿಲ್ಲ. ಆದರೆ ನನಗೆ? ನೀನಿಲ್ಲದೇ ನನ್ನ ಬದುಕು ಬೇಸರದ ಗೂಡಾಗಿತ್ತು, ಒಂಟಿ ಹಕ್ಕಿಯ ಪಾಡಾಗಿತ್ತು, ಮನ ವಿರಹವೇದನೆಯ ಕಡಲಾಗಿತ್ತು.... ನಿದ್ರಾದೇವಿ ನಿನ್ನ ಭಾಗದ ನಿದ್ದೆಯನ್ನೂ ನನಗೇ ಕರುಣಿಸಿದ್ದು ಒಂದು ಅದೃಷ್ಟವೇನೋ. ಇಲ್ಲವಾದರೆ ಹದಿನಾಲ್ಕು ವರ್ಷಗಳ ಕಳೆಯುವುದು ಕಷ್ಟವಾಗುತ್ತಿತ್ತು. ಆ ತಣ್ಣನೆಯ ರಾತ್ರಿಗಳು ನಿನ್ನ ಸಾಮೀಪ್ಯ ಬಯಸುತ್ತಿತ್ತು. ಆದರೆ ನಿದ್ದೆಯಲ್ಲೇ ದಿನದ ಹೆಚ್ಚಿನ ಸಮಯ ಜಾರಿ ಹೋಗುತ್ತಿದ್ದರಿಂದ ನಾನು ಸಮಾಧಾನದಿಂದ ನಿನ್ನ ಆಗಮನಕಾಗಿ ಕಾದಿದ್ದು. ಚಾತಕ ಪಕ್ಷಿಯಂತೆ ನಿರೀಕ್ಷೆಯಲಿ ಕುಳಿತಿದ್ದು. ಆ ಮಾಯಾವಿ ಇಂದ್ರಜಿತುವನ್ನು ಕೊಂದ ನೀನು ' ಪರಾಕ್ರಮಿ ' ಎನಿಸಿದೆ. ಆದರೆ ನಾನು? ಯಾರ ಗಮನಕ್ಕೂ ಬಾರದಂತ ವನಸುಮವಾದೆ.
        
              ವರ್ಷಾನುಗಟ್ಟಲೇ ನಿದ್ರಿಸದ ಪುರುಷನಿಂದ ಮಾತ್ರ ಮೇಘನಾದನ ಸಾವು ಎಂಬ ವಿಷಯ ನಿನಗೆ ತಿಳಿದಿರಲಿಲ್ಲವೇ ಲಕ್ಮಣಾ ?... ನಿನ್ನ ನಿದ್ರೆಯನ್ನೆಲ್ಲ ನನ್ನದಾಗಿಸಿ, ಹದಿನಾಲ್ಕು ವರ್ಷ ನೀನು ಸೀತಾರಾಮರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದರಲ್ಲಿ ನನ್ನ ಸಹಕಾರ ಸ್ವಲ್ಪವಾದರೂ ಇತ್ತಲ್ಲವೇ ? ಅದಕ್ಕೆ ಪ್ರತಿಯಾಗಿ ಏನೂ ಕೇಳುವವಳಲ್ಲ ನಾನು. ಒಂದು ಬೆಚ್ಚನೆಯ ಅಪ್ಪುಗೆ ಸಾಕಿತ್ತು ನಾ ಕರಗಿ ಹೋಗಲು. ನಾಲ್ಕು ಅಕ್ಕರೆಯ ಮಾತು ಸಾಕು ಹೃದಯದ ಹೂ ಅರಳಲು.... ಕಡೆಯ ಪಕ್ಷ ವನವಾಸ ಮುಗಿಸಿ ಬಂದ ಮೇಲಾದರೂ ನೆಮ್ಮದಿಯಿಂದ ಇರಬಹುದೆಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ ! ಮೊದಲೇ ನಿನ್ನ ಮನ ವನವಾಸದಲ್ಲಾದ ಕಹಿ ಘಟನೆಗಳು, ಯುದ್ಧದ ಸಮಯದಲ್ಲಾದ ಸಾವು - ನೋವುಗಳಿಂದ ತುಂಬಿಹೋಗಿತ್ತು. ಅದರಲ್ಲೂ ರಾಮನ ವಿರಹ, ಸೋದರಿ ಸೀತೆಗೆ ಆದ ಅಗ್ನಿ ಪರೀಕ್ಷೆ ನಿನ್ನ ಮನಸಿನಲ್ಲಿ ಒಂದು ವಿಚಿತ್ರ ಭಾವವನ್ನು ಹುಟ್ಟುಹಾಕಿತ್ತೆನಿಸುತ್ತದೆ. ಜೊತೆಗೆ ತುಂಬು ಗರ್ಭಿಣಿಯಾದ ನನ್ನಕ್ಕನನ್ನು ಆ ದಟ್ಟ ಕಾನನದ ನಟ್ಟ ನಡುವೆ ಬಿಟ್ಟು ಬರುವಾಗ ನಿನಗಾದ ಸಂಕಟ, ರಾಜಾಜ್ಞೆಯನ್ನು ಪಾಲಿಸುವಾಗಿನ ದ್ವಂದ್ವ ನನಗರ್ಥವಾಗುತ್ತಿತ್ತು ಸೌಮಿತ್ರಿ.... ಆದರೆ ನನ್ನ ಭಾವನೆಗಳನ್ನು ನೀನು ಅರಿತಿಯೋ ಇಲ್ಲವೋ ತಿಳಿಯದು. ಈ ಹೆಣ್ಮನವೇ ಹೀಗೆ. ಅರ್ಥಕ್ಕೆ ನಿಲುಕದ್ದು. ವಿಚಿತ್ರ ಆಲೋಚನೆಗಳು, ವಿಭಿನ್ನ ಯೋಚನೆಗಳ ತಾಣ.. ಇರಲಿ ಬಿಡು. ನಿನಗೆ ಇದ್ದ ಸನ್ನಿವೇಶಗಳೇ ಅಂಥದ್ದು. ಹದಿನಾಲ್ಕು ವರ್ಷ ಸೇವೆ ಮಾಡಿದ ನಿನಗೆ ಅಣ್ಣನಿಂದ ದೊರೆತದ್ದು ' ಪರಿತ್ಯಾಗ ' ಎಂಬ ದೊಡ್ಡ ಪದ. ನೀನೋ ಎಲ್ಲವ ಬಿಟ್ಟು ಖಾಲಿಯಾಗಿ ಹೊರಟುಹೋದೆ. ಆದರೆ ನಾನು...? ನಿನ್ನಷ್ಟು ಪ್ರಬುದ್ಧ ವಾದ, ಪಕ್ವವಾದ ಮನ ನನ್ನದಲ್ಲ ಇನಿಯಾ.. ನೀನಿರದೇ ನಾ ಇರಲಾರೆ. ಸಾಕಾಗಿದೆ ಈ ವಿಚಿತ್ರ ಜೀವನ. ಹೇಳಿಕೊಳ್ಳಲಾಗದಂತಹ ತಲ್ಲಣ.... ಈಗ ನನ್ನ ಮುಂದಿರುವ ಆಯ್ಕೆಯಾದರೂ ಏನು ?..... " ಯೋಚನಾಲಹರಿ ಸಾಗುತಲಿತ್ತು. "ಊರ್ಮಿಳಾ.." ಎಂದು ಯಾರೋ ಕರೆದ ಸದ್ದು. ನಿಟ್ಟುಸಿರು ಬಿಟ್ಟ ಊರ್ಮಿಳೆ ದನಿ ಬಂದತ್ತ ತಿರುಗಿದಳು.

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...