ಮಂಗಳವಾರ, ಮಾರ್ಚ್ 21, 2023

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ
ಹೊಸ ಹರುಷದ ಹೊಳೆಯ ಹರಿಸಿ
ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ...
ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ
ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂರಣ !...

ಹಚ್ಚಹಸಿರ ಸೀರೆ ಉಟ್ಟು, ಕಾದಿಹಳು ವಸುಂಧರೆ
ರವಿಯ ಹೊಂಗಿರಣವ ಬಿಗಿದಪ್ಪಲು ಬಲು ಅಕ್ಕರೆ
ಚೈತ್ರದ ಪ್ರೇಮಾಂಜಲಿಯ ಈ ಸುಂದರ ಸರಿಗಮವ
ಅಚ್ಚರಿಯಿಂದ ಕಣ್ತುಂಬಿಕೊಂಡರೆ ಅಷ್ಟೇ ಸಾಕೆ?...

ಜೀವನದ ಮಜಲುಗಳ ರೂಪಕವೇ ಬೇವು - ಬೆಲ್ಲ 
ಖುಷಿಯಿಂದ ಸವಿಯುವ ಅದ ಮನೆಮಂದಿಯೆಲ್ಲ...
ನವ ಯುಗದ ಆದಿಯಿದು ತರಲಿ ಸಂತಸದ ಬುನಾದಿ
ಹಳೆ ನೆನಪುಗಳ ಹೊಸತಾಗಿಸುತ ಮತ್ತೆ ಬಂತು ಯುಗಾದಿ..!!

- R.R.B.




ಶನಿವಾರ, ಜನವರಿ 28, 2023

ಅವಳು - ಆಸೆಗಳ ಚಪ್ಪರ...!


                    ನಿಮಗೆ "ಸ್ತ್ರೀ" ಎಂದಾಕ್ಷಣ ಏನು ನೆನಪಾಗುತ್ತದೆ? ಅಮ್ಮ, ತಂಗಿ, ಮಗಳು, ಪತ್ನಿ, ಮೃದುತ್ವ, ಸೌಂದರ್ಯ, ಶಾಪಿಂಗ್, ಕೊನೆಯಿಲ್ಲದ ಮಾತುಕತೆ?... ಮತ್ತೆ?!ಅದೇನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಗುಣ-ಸ್ವಭಾವದ ಒಂದು ವ್ಯಕ್ತಿತ್ವವಿದೆ. ಪುರುಷ - ಸ್ತ್ರೀ ಎಂಬುದು ಬರೀ ಲಿಂಗದ ವಿಧಗಳಷ್ಟೇ. ಅದರಾಚೆಗೆ ಪ್ರತಿ ವ್ಯಕ್ತಿಗೂ ತನ್ನದೇ ಆದ "ವ್ಯಕ್ತಿತ್ವ" ವಿದೆ, "ತನ್ನತನ" ವಿದೆ, ಮಹತ್ವಾಕಾಂಕ್ಷೆಗಳಿವೆ. ಅದು ಲಿಂಗವನ್ನಾಧರಿಸಿ ಬಂದಿದ್ದಲ್ಲ. ವ್ಯಕ್ತಿಯ ಬಾಲ್ಯ, ಅವರು ಬೆಳೆದು ಬಂದ ಪರಿಸರ, ಅವರ ಬದುಕಿನ ಗುರಿ, ಗುರಿಯೆಡೆಗೆ ಸಾಗುವ ದೃಢ ನಿಷ್ಠೆಯ ಮೇಲೆ ನಿರ್ಧರಿತವಾಗುತ್ತದೆ. ಒಬ್ಬರಿಗೆ ಹೂವೆತ್ತಿದಂತೆ ಸುಲಭವಿರುವ ಕೆಲಸ, ಮತ್ತೊಬ್ಬರಿಗೆ ಕಬ್ಬಿಣದ ಕಡಲೆಯಾಗಿರಬಹುದು. ಒಬ್ಬರಿಗೆ ಅಸಾಧ್ಯವಾದದ್ದು ಇನ್ನೊಬ್ಬರಿಗೆ ಸಾಧ್ಯವಾಗಬಹುದು.  ಇಂಜಿನಿಯರೊಬ್ಬನಿಗೆ ಇನ್ಕಂ ಟ್ಯಾಕ್ಸ್ ಲೆಕ್ಕಮಾಡಲು ಕೊಟ್ಟು, ಸಿಎಗಳಿಗೆ ಕೋಡಿಂಗ್ ಬರೆಯಲು ಕೊಟ್ಟರೆ ಏನಾಗಬಹುದು? ಕವಿಯೋರ್ವನಿಗೆ ಚಿತ್ರ ಬರೆಯಲು ಕೊಟ್ಟು, ಚಿತ್ರಕಾರನಿಗೆ ಕತೆ ಬರೆಯಲು ಹೇಳಿದರೆ ಏನಾಗಬಹುದು?...ಕೇವಲ ನಮ್ಮ ಕಣ್ಣಿಗೆ ಕಂಡದ್ದನ್ನಷ್ಟೇ ನೋಡಿ ಇನ್ನೊಬ್ಬರ ವ್ಯಕ್ತಿತ್ವ ಅಳೆಯಲು ಹೋಗುವ ನಮ್ಮ ದಡ್ಡತನಕ್ಕೆ ಏನೆನ್ನಬೇಕು? ಅಲ್ಲವಾ? ಇಲ್ಲಿ ಯಾರೂ ಪರಿಪೂರ್ಣರಲ್ಲಾ. ಹಾಗೆಯೇ ಪರಿಪೂರ್ಣತೆ ಎಂಬುದು ಅಸಾಧ್ಯವೇನೂ ಅಲ್ಲ. 

                    ತಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಮೇರಿಕೋಂ, ಮೈಥಾಲಿರಾಜ್, ಕಲ್ಪನಾಚಾವ್ಲಾ, ಪ್ರಿಯಾಂಕಾ ಚೋಪ್ರಾ, ಫಲ್ಗುನಿ ನಾಯರ್, ನಿರ್ಮಲಾ ಸೀತಾರಾಮನ್, ಸರೋಜಿನಿ ನಾಯ್ಡು, ಲತಾ ಮಂಗೇಶ್ಕರ್, ಸುಧಾಮೂರ್ತಿ, ಅನುಪಮಾ ನಿರಂಜನ್... ಹೀಗೆ ಹಲವಾರು ಮಹಿಳೆಯರು ಇಂದಿಗೂ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ.  ಆದರೆ ಆ ಹಂತ ತಲುಪುವ ಅವರ ಪಯಣ ಸುಲಭವಾಗಿತ್ತೇ?! ಒಮ್ಮೆ ಯೋಚಿಸಿ ನೋಡಿ. ನಾವು ಸುಲಭ ಎಂದುಕೊಂಡಿರಬಹುದು ಆದರೆ ಅವರ ಪಾಲಿಗದು  ಖಂಡಿತಾ ಸುಲಭವಲ್ಲ !! ಸಾಧನೆಯ ಹಾದಿಯಲ್ಲಿ ಪ್ರತಿಯೊಂದು ಮೆಟ್ಟಿಲು ಏರುವಾಗಲೂ ಹಲವು ಅಡೆತಡೆಗಳು ಸಹಜ. ಅವುಗಳನ್ನು ಎದುರಿಸಿ, ಗೆಲ್ಲುವುದು ಅನಿವಾರ್ಯ. ಆದರೆ ಈ ನಿಟ್ಟಿನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಅಡೆತಡೆಗಳು ತುಸು ಹೆಚ್ಚೇ.. ! ನೀವು ನಂಬಿ ಬಿಡಿ, ಕಾಲಿನ ಸಂಕೋಲೆಗಳನ್ನು ಕಡಿಯಲೂ ಆಗದೇ, ತೊಡಲೂ ಆಗದೇ ತಡವರಿಸುತ್ತಲೇ ತುದಿಗೇರುವ ಹವಣಿಕೆ ಮಹಿಳೆಯದ್ದು. ಇದಕ್ಕೆ ದೇಶ, ಭಾಷೆಗಳ ಬೇಧವೂ ಇಲ್ಲ, ಭಾವ, ಬಣ್ಣಗಳ ಹಂಗೂ ಇಲ್ಲ. ಇನ್ನು ಅವರವರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಪಾಲಕರು, ಹೊಂದಿಕೊಳ್ಳುವ ಮನೋಭಾವದ ಜೀವನ ಸಂಗಾತಿ ಸಿಕ್ಕರೆ ದಾರಿ ಸುಗಮ. ಇಲ್ಲವಾದರೆ ಬದುಕು,  ಬಹು ಕಷ್ಟಪಟ್ಟು ಎಳೆಯುವ ಹೊರೆ ತುಂಬಿದ ಬಂಡಿಯೇ ಹೊರತು, ಹೂವಿನ ಹಾದಿಯಂತೂ ಆಗಲಾರದು. ಅದರಲ್ಲೂ ಮಹಿಳೆಯರಿಗೆ ವಯಸ್ಸು ಹೆಚ್ಚಿದಂತೆ ಜವಾಬ್ದಾರಿಗಳು ಹೆಚ್ಚುತ್ತವೆ. ಹೊಸ ತಲೆಬಿಸಿಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಜನ ಏನೆಂದುಕೊಳ್ಳುತ್ತಾರೋ ಎಂಬ ಯೋಚನೆ ಕೂಡಾ. ಬೇಡದ ಸಾವಿರ ಆಲೋಚನೆಗಳು ತಲೆಯನ್ನು ಹೊಕ್ಕು, ಮೆದುಳನ್ನು ಗೆದ್ದಲಿನಂತೆ ಕೊರೆಯುತ್ತಿದ್ದರೆ ಶ್ರದ್ಧೆ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇವೆಲ್ಲದರ ಗದ್ದಲಗಳ ಮಧ್ಯೆಯೂ , ಮನಸ್ಸನ್ನು ಏಕಾಗ್ರಗೊಳಿಸಿ, ಗುರಿಯೆಡೆಗೆ ಹೆಜ್ಜೆಯಿಡುವ ದೃಢಸಂಕಲ್ಪ ಹೊಂದಿದ ಕೆಲವರು ಸಾಧನೆಯ ಶಿಖರವನ್ನೇರುತ್ತಾರೆ. ಸಂತುಷ್ಟ ಭಾವ ಪಡೆಯುತ್ತಾರೆ. ಇನ್ನು ಕೆಲವರು ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ. ಅನೇಕರು ಎಲ್ಲ ಬಯಕೆಗಳ ತುಡಿತಕ್ಕೆ ಬೇಲಿ ಹಾಕಿ ಬದುಕುತ್ತಾರೆ. ಇದೆಲ್ಲದರ ನಡುವೆ ಈ ಸಾಧಿಸಿದವರ ಕಥೆ ಇದೆಯಲ್ಲಾ, ಅದೇ ಅನೇಕರಿಗೆ ಪ್ರೇರಣೆಯಾಗೋದು. ಇವೆಲ್ಲ ಹೇಗೆ ಸಾಧ್ಯ? ಅವಳು ಕಾಣುವ ಕನಸುಗಳಿಂದ, ಏನಾದರೂ ಸಾಧಿಸಬೇಕೆಂಬ ಅತೀವ ಬಯಕೆಯಿಂದ, ಸಮಯದ ಸದ್ಭಳಕೆ ಮಾಡುವ ಆಸೆಯಿಂದ. ತನ್ನತನವನ್ನು ಜಗಕ್ಕೆ ತೋರಿಸುವ ಉತ್ಕಟೇಚ್ಛೆಯಿಂದ.

                    ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸ್ತ್ರೀಯರಿಗೆ ತುಸು ಕಷ್ಟ. ಇನ್ನು ಕಷ್ಟಪಟ್ಟು ಉದ್ಯೋಗ ಪಡೆದರೆ, ಪ್ರಮೋಷನ್ ಮತ್ತಷ್ಟೂ ಕಷ್ಟ. ಕೇವಲ 'ಮಹಿಳೆ' ಎಂಬ ಕಾರಣಕ್ಕಾಗಿ ಕೆಲವು ಉನ್ನತ ಮಟ್ಟದ ಹುದ್ದೆಗಳು, ಪ್ರಮೋಷನ್ ಗಳು ಸಿಗುವುದಿಲ್ಲ. ಇದು ವಾಸ್ತವ! ಇನ್ನು ಕೆಲಸದಲ್ಲಿ ಹುಡುಗಿಯೊಬ್ಬಳು ಬೇಗ ಪ್ರಮೋಷನ್ ಪಡೆದುಕೊಂಡರೆ "ಅಯ್ಯೋ ಅವಳಾ? ಮ್ಯಾನೇಜರ್ ನಾ ಬುಟ್ಟಿಗೆ ಹಾಕೊಂಡಿದಾಳೆ, ಅದ್ಕೇ ಪ್ರಮೋಷನ್ ಸಿಕ್ಕಿದೆ" ಎಂದು ಎಲ್ಲರಿಂದ ಮಾತು. ಇನ್ನು ವಿವಾಹಿತ ಸ್ತ್ರೀಯರ ಅನಾನುಕೂಲಗಳ ಪಟ್ಟಿ ಹನುಮಂತನ ಬಾಲದಂತೆ ! ಒಂದೆಡೆ ಮನೆಯನ್ನು ಸಂಭಾಳಿಸಬೇಕು, ಇನ್ನೊಂದೆಡೆ ಆಫೀಸಿನ ಕೆಲಸ,  ಮೇಲ್ವಿಚಾರಕರ ಒತ್ತಡ ನಿಭಾಯಿಸಬೇಕು. ಅದರಲ್ಲೂ ವಯಸ್ಸಾದ ಅತ್ತೆ ಮಾವ, ಎಳೆಯ ಮಕ್ಕಳು ಇದ್ದರೆ ಜವಾಬ್ದಾರಿಯ ಪಟ್ಟಿ ಇನ್ನೂ ಉದ್ದವಾಗುತ್ತದೆ. ಇಲ್ಲೊಂದು ಘಟನೆ ನೆನಪಾಯಿತು, ೮-೯ ಗಂಟೆಗಳ ಕಾಲ ನಿರಂತರವಾಗಿ ಟೀಮ್ಸ್ ಮೀಟಿಂಗ್ ನಲ್ಲಿ ಟ್ರೇನಿಂಗ್ ಕೊಡುವ ಸೀನಿಯರ್ ಮಹಿಳೆಯೊಬ್ಬರು ಸಡನ್ನಾಗಿ "ಒಂದೇ ಒಂದು ನಿಮಿಷ.." ಎಂದು ವಿರಾಮ ತೆಗೆದುಕೊಂಡು, ಮತ್ತೆ ಬಂದು "ಸಾರಿ... ನನ್ನ ಎರಡೂವರೆ ವರ್ಷದ ಮಗಳು ಆಡುತ್ತಾ ಬಿದ್ದುಬಿಟ್ಲು, ತುಂಬಾ ಅಳ್ತಾ ಇದ್ಲು, ಸಮಾಧಾನ ಮಾಡಿ ಬರೋಕೆ ತಡ ಆಯ್ತು.." ಎಂದು ಮತ್ತೆ ಟ್ರೇನಿಂಗ್ ಮುಂದುವರೆಸಿದರು. ನನಗಂತೂ ಆಕೆಯ ಮ್ಯಾನೇಜ್ಮೆಂಟ್ ಸ್ಕಿಲ್ ಬಗ್ಗೆ ಬಹಳ ಹೆಮ್ಮೆಯಾಯ್ತು. ಎಷ್ಟೇ ತಾಪತ್ರಯಗಳಿದ್ದರೂ ನಗುನಗುತ್ತ ತಮ್ಮ ಕೆಲಸವನ್ನು ನಿಷ್ಠೆಯಿಂದ ಸಮರ್ಪಕವಾಗಿ ಮಾಡುವ ಅವಳಿಗೆ ಪ್ರೇರಣೆ - ವೃತ್ತಿ ಜೀವನದಲ್ಲಿ ಒಳ್ಳೆಯ ಸ್ಥಾನ ಪಡೆಯುವ ಆಸೆ. 

                 ಇನ್ನು ಕಲೆ, ಸಾಹಿತ್ಯ, ಚಲನಚಿತ್ರಗಳಂತಹ ಕ್ಷೇತ್ರಕ್ಕೆ ಬಂದರೆ ಮಹಿಳೆಯರ ಪರಿಸ್ಥಿತಿ ಇನ್ನೂ ಕಷ್ಟ. ಒಂದೋ, ಪ್ರತಿಭಾವಂತ ಮಹಿಳೆಯರು ತಮ್ಮ "ಮರ್ಯಾದೆ" ಗೆ ಹೆದರಿ, ತಮ್ಮ ಕೌಶಲ್ಯವನ್ನು ಪ್ರದರ್ಶಿಸದೇ ಎಲೆಮರೆಯ ಕಾಯಿಯಂತಾಗುತ್ತಾರೆ. ಇಲ್ಲವೇ, ಧೈರ್ಯ ಮಾಡಿ, ಸಾಮಾಜಿಕ ತಾಣದಲ್ಲಿ ತನ್ನ ಇರುವಿಕೆ ಗುರುತಿಸಿಕೊಂಡ ಹೆಣ್ಣು ಮಗಳೊಬ್ಬಳು ಸುಖಾಸುಮ್ಮನೆ ಯಾವುದೋ ಒಂದು ವಿಷಯಕ್ಕೆ "ಟ್ರೋಲ್" ಆಗುತ್ತಾಳೆ. ಪುರುಷರು ತೆರೆದುಕೊಂಡಷ್ಟು ದಾಷ್ಟ್ಯದಿಂದ ಮಹಿಳೆ ಕೆಲವೊಮ್ಮೆ ತೆರೆದುಕೊಳ್ಳಲು ಆಗದು.  ಸಾಮಾಜಿಕ ಜಾಲತಾಣಗಳಲ್ಲಿ ಕತೆ, ಕವಿತೆ ಪ್ರಕಟಿಸುವ ಹುಡುಗಿಯರು ಜನಪ್ರಿಯತೆ ಪಡೆದರೆ, "ಅವಳ ಪಾದದ ಚಿತ್ರಕ್ಕೂ ಅಷ್ಟೇ ಕಾಮೆಂಟ್ ಗಳು ಬರ್ತವೆ. ಅವಳೇನು ಅಂಥಾ ದೊಡ್ಡ ಬರಹಗಾರ್ತಿಯಲ್ಲ ಬಿಡು.." ಎಂಬ ಜಡ್ಜ್ಮೆಂಟಲ್ ಫೀಡ್ ಬ್ಯಾಕ್. ಇನ್ನು ಸಿನಿರಂಗದಲ್ಲಿ 'ಕಾಸ್ಟಿಂಗ್ ಕೌಚ್' ನಂತಹ ಅಸಹ್ಯ ಸುಳಿಗಳಿಂದಾಗಿ ಹಲವಾರು ಪ್ರತಿಭಾವಂತ ಸ್ತ್ರೀಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ತಾನು 'ಹುಡುಗಿ' ಎಂಬುದನ್ನೇ ಅಸ್ತ್ರವಾಗಿಸಿಕೊಂಡು ಬಿಟ್ಟಿ ಜನಪ್ರಿಯತೆ ಗಳಿಸುವ, ಪರಿಸ್ಥಿತಿಯ ಲಾಭ ಪಡೆಯುವ ಕೆಲವರಿಂದಾಗಿ, ಉಳಿದ ಸ್ತ್ರೀಯರಿಗೂ ಕೆಟ್ಟ ಹೆಸರು. ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿರಲಿ ಮಹಿಳೆ ಇರಲಿ ಅವಳನ್ನು ಕಾಲೆಳೆಯದಿದ್ದರೆ ಸುದ್ದಿಗೆ ಜೀವವೇ ಇರುವುದಿಲ್ಲ. ಹೆಣ್ಣು ಏನು ಮಾಡಿದರೂ ತಪ್ಪು? ಗಂಡಿಗೆ ಈ ನಿಬಂಧನೆಗಳು ಏಕಿಲ್ಲವೋ?!
ಇಷ್ಟಾದರೂ ಅವಳು ಕನಸಿನ ಗೋಪುರ ಕಟ್ಟುತ್ತಾಳೆ. ಬಯಕೆಯ ಮಾಲೆಗೆ ಒಂದೊಂದೇ ಆಸೆಯ ಹೂಗಳನ್ನು ಪೋಣಿಸುತ್ತಾ ಸಾಗುತ್ತಾಳೆ. ಕಂಗಳಲಿ ಹೊಸ ಹೊಳಪು ತುಂಬಿ ಸುಂದರ ನಾಳೆಗಾಗಿ ಕಾಯುತ್ತಾಳೆ.

                      ನಿಜ ಹೇಳಬೇಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ಆಸೆ-ಕನಸುಗಳು ಹೆಚ್ಚು. ಒಬ್ಬಳಿಗೆ ಡಾಕ್ಟರ್ ಆಗುವ ಕನಸು, ಇನ್ನೊಬ್ಬಳಿಗೆ ಪ್ರಸಿದ್ಧ ನಟಿ/ನಿರೂಪಕಿ ಆಗುವ ಕನಸು, ಮತ್ತೊಬ್ಬಳಿಗೆ ದೊಡ್ಡ ಕಂಪೆನಿಯ ಡೈರೆಕ್ಟರ್ ಹುದ್ದೆ ಅಲಂಕರಿಸುವ ಗುರಿ, ಇನ್ನೊಬ್ಬಳಿಗೆ ತನ್ನ ಗಂಡ- ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುವ ಬಯಕೆ. ಹೀಗೆ ಒಬ್ಬೊಬ್ಬರದು ಒಂದೊಂದು ಆಸೆ, ಕನಸು. ಬಿಡುವಾದಾಗ ನಿಮ್ಮ ಸನಿಹದಲ್ಲಿರುವ ಗೆಳತಿ/ಸಹೋದ್ಯೋಗಿಗೆ ನಿನ್ನ ಆಸೆಗಳೇನೆಂದು ಕೇಳಿ ನೋಡಿ. ಅವರ ಆಸೆಗಳ ಪಟ್ಟಿ ಮುಗಿಯುವುದೇ ಇಲ್ಲ !! ಕೈಗೆಟುಕದ ಅನಂತ ಆಸೆಗಳಿಗೂ ಕನವರಿಸುತ್ತಾ ತಡಕಾಡುವ ಅವಳ ಪಾಲಿಗೆ ಕೆಲವೊಮ್ಮೆ ಕನಸುಗಳು ಕೈಗೂಡುವುದು ಸುಲಭವಾದರೂ ಅದನ್ನು ಅನುಭವಿಸುವಾಗ ಮಾತ್ರ  ಮೃಗಜಲವನರಸಿ ಬಂದ ಆಯಾಸದಂತೆ ಭಾಸವಾಗುತ್ತದೆ. 

                ಒಂದು ಮಾತು ನೆನಪಿಡಬೇಕಿದೆ.  ಬದುಕಿನಲ್ಲಿ ಬಯಕೆಗಳ ಬೋಗುಣಿ ಹಿಡಿದು ನಿಲ್ಲುವುದು ತಪ್ಪೇನಲ್ಲ. ಆದರೆ ಕನಸನ್ನು ನನಸಾಗಿಸುವಲ್ಲಿ ಅನುಸರಿಸುವ 'ಕ್ರಮ'ದ ಬಗ್ಗೆ ಗಮನ ಹರಿಸಿದರೆ ಒಳಿತು. ಒಬ್ಬ ಸ್ತ್ರೀ 'ಮಾಡಬೇಕಾದ' ಹಾಗೂ 'ಮಾಡಬಹುದಾದ' ಚಟುವಟಿಕೆಗಳ ಮಧ್ಯೆ ಒಂದು ಸಣ್ಣಗೆರೆಯಿದೆ. ಅದನ್ನು ಅರ್ಥೈಸಿಕೊಂಡು ನಮ್ಮ ಚೌಕಟ್ಟಿನಲ್ಲಿ ನಾವಿದ್ದರೆ ಜೀವನ ಸುಲಭ, ಹಾಗೇ ಸುಂದರ ಕೂಡಾ. ನೀವು ಸರಿದಾರಿಯಲ್ಲಿ ನಿಮ್ಮ ಗುರಿ ತಲುಪಿದರೆ ಯಾರೊಬ್ಬರ ಮಾತಿಗೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಆಸೆ, ಕನಸುಗಳು ಸಣ್ಣದಿರಲಿ, ದೊಡ್ಡದಿರಲಿ, ಅವು ನಿಮ್ಮವು. ಅದನ್ನು ಸಾಕಾರಗೊಳಿಸುವ ಕರ್ತವ್ಯ ಕೂಡ ನಿಮ್ಮದೇ. ಅಂಗೈಯಲ್ಲಿ ಮಿಣುಕುಹುಳ ಹಿಡಿದು ಸಂಭ್ರಮಿಸುವ ಪಕ್ಕದ ಮನೆಯ ಪುಟ್ಟಿಯಂತೆ, ಸಣ್ಣ-ಪುಟ್ಟ ಖುಷಿಗಳನ್ನು ಸಂಭ್ರಮಿಸಿ. ಬದುಕಿಬಿಡಿ ಒಮ್ಮೆ. ಮುಂಜಾವಿನ ತಂಬೆಲರ ಅಪ್ಪುಗೆಯ ಆಸ್ವಾದಿಸುತ್ತಾ, ಮುಸ್ಸಂಜೆಯ ನೇಸರನ ಸೊಬಗ ಕಣ್ತುಂಬಿಕೊಳ್ಳುತ್ತಾ. ಮತ್ತೆ ಮನದಂಗಳದಲ್ಲಿ ಸುಂದರ ನಾಳೆಗಳ ಬಗ್ಗೆ ಕನಸಿನ ಬೀಜ ಬಿತ್ತುತ್ತಾ. ಆಸೆಗಳ ಬಳ್ಳಿಗೆ ನೀರೆರೆದು ಸಾಕಾರದ ಮೊಗ್ಗರಳಿಸುತ್ತಾ, ಬೇಡವೆಂದರೂ ಬಿಡದೇ ಹೊಸೆವ ಬಂಧವಾಗಿ ಮನೆಗೂ ಮನಕ್ಕೂ ಚಪ್ಪರವಾಗುತ್ತಾ...

- R.R.B.

*ಫೇಸ್‌ಬುಕ್‌ ನಲ್ಲಿರುವ "ಸೌರಭ" ಪುಟದ "ನಾವು-ನೀವು-ಕನ್ನಡ" ಮಾಲಿಕೆ-೧ ಕ್ಕಾಗಿ ಬರೆದ ಲೇಖನ.

ಕಾರ್ಪೊರೇಟ್ ಲೋಕದಲ್ಲಿ ಕನ್ನಡ

                    ಪ್ರತೀವರ್ಷ ನವೆಂಬರ್ ೧ ಬಂತೆಂದರೆ ಸಾಕು. ಕನ್ನಡ ರಾಜ್ಯೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡುತ್ತದೆ. ನವೆಂಬರ್ ತಿಂಗಳು ಪೂರ್ತಿ ಹಲವೆಡೆ, ವಿವಿಧ ರೀತಿಯಲ್ಲಿ ನಮ್ಮ ಕನ್ನಡ ನಾಡಿನ ಏಕೀಕರಣದ ದಿನವನ್ನು ಆಚರಿಸುತ್ತಾರೆ. ಬೆಂಗಳೂರಿನ ಮಲ್ಟಿ ನ್ಯಾಷನಲ್ ಕಂಪನಿಗಳೂ ಸಹ 'ಒಂದು ದಿನ' ತಮ್ಮ ಕನ್ನಡ ಪ್ರೇಮನ್ನು ತೋರಿಸಿ, ಉದ್ಯೋಗಿಗಳನ್ನು ಸಮಾಧಾನ ಪಡಿಸಿ, ಇನ್ನಷ್ಟು ಕೆಲಸ ಹಂಚಲು ಮುಂದಾಗುತ್ತವೆ. ಬೆಳಿಗ್ಗೆ ಕಛೇರಿಯ ಮುಂದೆ ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಡೊಳ್ಳುಕುಣಿತ, ಯಕ್ಷಗಾನ, ವೀರಗಾಸೆಗಳ ಪ್ರದರ್ಶನದಿಂದ ಆರಂಭವಾಗುವ ಕಾರ್ಯಕ್ರಮವು ಭಾವಗೀತೆ, ಭರತನಾಟ್ಯ, ಕನ್ನಡ ಪ್ರೇಮ ಬಿತ್ತರಿಸುವ ಸೊಗಸಾದ ಹಾಡುಗಳಿಂದ ಮನಕ್ಕೆ ರಸದೌತಣ ಬಡಿಸುವುದಲ್ಲದೇ, ನಮ್ಮ ರಾಜ್ಯದ ಪ್ರಸಿದ್ಧ ಖಾದ್ಯಗಳ ಸವಿಯನ್ನು ರಸನಕ್ಕೆ ಒದಗಿಸುವ ಮೂಲಕ ಅದ್ದೂರಿಯ ಕನ್ನಡಹಬ್ಬ ನೆರವೇರುತ್ತದೆ. ಈ ಕಂಪೆನಿಗಳು ನಡೆಸುವ ಕನ್ನಡ ರಾಜ್ಯೋತ್ಸವವು ಕೇವಲ ತೋರಿಕೆಗಷ್ಟೇ ಆದರೂ, ಆ ದಿನ - ಆ ಕ್ಷಣದ ವಾತಾವರಣವು ಕನ್ನಡ ಮನಸ್ಸುಗಳಲ್ಲಿ ಒಂದು ಆಪ್ತಭಾವವನ್ನು ಹುಟ್ಟುಹಾಕುತ್ತದೆ. "A sense of Belonging" ಎಂಬುದನ್ನು ಉದ್ಯೋಗಿಗಳಲ್ಲಿ ಹುಟ್ಟುಹಾಕುವ ಪ್ರಯತ್ನಗಳಲ್ಲಿ ನಮ್ಮ ರಾಜ್ಯೋತ್ಸವ ಆಚರಣೆಯೂ ಒಂದು ಎಂದರೆ ಅತಿಶಯೋಕ್ತಿಯಾಗಲಾರದು. 

                     ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ನಮ್ಮ ನಾಡಭಾಷೆ ಹೇಳ ಹೆಸರಿಲ್ಲದಂತೆ ಮರೆಯಾಗುತ್ತಿದೆ. ಅದರಲ್ಲೂ ಈ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕನ್ನಡವು ಮೂಲೆಗುಂಪಾಗುತ್ತಿದೆ. ನಾವು ಸಂವಹನ ನಡೆಸುತ್ತಿರುವಾಗ ಎದುರಿನ ವ್ಯಕ್ತಿಗೆ ಕನ್ನಡ ಬರುತ್ತದೆ ಎಂದು ತಿಳಿದಿದ್ದರೂ ಸಹ, ಇಲ್ಲಿ ಕನ್ನಡದಲ್ಲಿ ಮಾತನಾಡಲು ಹಲವರಿಗೆ "ಅಹಂ" ಅಡ್ಡ ಬರುತ್ತದೆ. ಇನ್ನು ಕೆಲವರಿಗೆ ಕೀಳರಿಮೆ ಕಾಡುತ್ತದೆ. ಮತ್ತಷ್ಟು ಜನರಿಗೆ ಕನ್ನಡ ಮಾತನಾಡಿದರೆ ತಮ್ಮ "ಪ್ರೊಫೆಷನಲಿಸಂ" ಕಳೆದುಹೋಗುತ್ತದೆಂಬ ಭಯ. ಬಹುಶಃ ಈ ಭಯ ಹಲವರನ್ನು ಕಾಡುತ್ತಿದೆ. ಹೀಗಾಗಿ ಬೆಂಗಳೂರಿನ ಹೆಚ್ಚಿನ ಆಫೀಸುಗಳಲ್ಲಿ, ವೈಯಕ್ತಿಕ ಮಾತುಕತೆಗೂ ಸಹ ಕನ್ನಡಕ್ಕಿಂತ ಬೇರೆ ಭಾಷೆಗಳೇ ಹೆಚ್ಚು ಬಳಸಲ್ಪಡುತ್ತವೆ. ನಾನು ಗಮನಿಸಿದ ಪ್ರಕಾರ, ಒಂದೇ ಕಂಪೆನಿಯಲ್ಲಿ, ಹೈದರಾಬಾದ್ ಶಾಖೆಯ ಉದ್ಯೋಗಿಗಳು ಧೈರ್ಯವಾಗಿ ತೆಲುಗುವಿನಲ್ಲೇ ವ್ಯವಹರಿಸುತ್ತಾರೆ, ಇನ್ನು ತಮಿಳರ ಭಾಷಾಪ್ರೇಮದ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ. ಆದರೆ ಬೆಂಗಳೂರಿನ ಶಾಖೆಯ ಉದ್ಯೋಗಿಗಳು ಮಾತ್ರ ಇಂಗ್ಲೀಷ್ ಜೊತೆಗೆ ಹಿಂದಿಯಲ್ಲೇ ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಕನ್ನಡದಲ್ಲಿ ಮಾತನಾಡುವುದು ಅವಿದ್ಯಾವಂತರ ಲಕ್ಷಣ ಎಂದು ಭಾವಿಸುವ ಮೂರ್ಖರೂ ಇದ್ದಾರೆ. ಹೀಗಾಗಿ, ಅನೇಕ ಬಾರಿ, ಆಫೀಸಿನಲ್ಲಿ ಹಿಂದಿಯಲ್ಲಿ "ಶಾಯರಿ" ಬರೆದವ "ಕೂಲ್ ಗಾಯ್" ಎನಿಸಿಕೊಂಡರೆ, ಕನ್ನಡದಲ್ಲಿ ಕವಿತೆ ಬರೆಯುವವ "ಔಟ್ ಡೇಟೆಡ್" ಆಗುತ್ತಾನೆ. ಇನ್ನು ಕೆಲವೇ ಕಛೇರಿಗಳಲ್ಲಿ ಕನ್ನಡ ಪ್ರಮುಖ ಸ್ಥಾನ ಹೊಂದಿರುವ ಉದಾಹರಣೆಗಳಿವೆ. ಸದ್ಯದ ಮಟ್ಟಿಗೆ, ಅದೇ ಕನ್ನಡಿಗರಿಗೆ ಖುಷಿಪಡುವ ವಿಚಾರ ಬಿಡಿ. 

                        ಪ್ರಸ್ತುತ ಕಾರ್ಪೊರೇಟ್ ಲೋಕದಲ್ಲಿ ನಮ್ಮ ಕನ್ನಡದ ಪರಿಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ಒಳಹೊಕ್ಕು ನೋಡಿದರೆ ಮಾತ್ರ ಅರ್ಥವಾಗುತ್ತದೆ. ದಿನೇ ದಿನೇ ಬದುಕು ಯಾಂತ್ರಿಕವಾಗುತ್ತಿರುವ ಈ ಕಾಲದಲ್ಲಿ ಭಾವನೆಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ಹಾಗೆಯೇ, ಹಲವರಲ್ಲಿ ಭಾಷಾಪ್ರೇಮ ಕೂಡ ಕಡಿಮೆಯಾಗುತ್ತಿದೆ. ಮೊದಲೆಲ್ಲ ಕನ್ನಡ ಬರೀ ಸಂವಹನದ ಮಾಧ್ಯಮವಷ್ಟೇ ಆಗಿರಲಿಲ್ಲ. ಕನ್ನಡ ಕರುನಾಡಿನ ಉಸಿರಾಗಿತ್ತು. ಕನ್ನಡಮ್ಮನ ಮನೆಯಂಗಳ ಹಸಿರಾಗಿತ್ತು. ಕನ್ನಡ - ಕನ್ನಡಿಗರ ತಾಯಿ. ಹಲವು ಬಂಧಗಳ ಬೆಸೆಯುವ ಕೊಂಡಿ. ಮಮತೆಯ ಸೆಲೆ, ಭಾವಗಳ ಉಕ್ಕಿಸೋ ಅಲೆ, ಸವಿನೆನಪುಗಳನ್ನು ಅಕ್ಷರದ ದಾರದಲಿ ಪೋಣಿಸೋ ಮಾಲೆ, ನಮ್ಮ ಕಲೆ- ಸಂಸ್ಕೃತಿಯನ್ನುಳಿಸುವ ಚೇತನ.... ಮನಮುಟ್ಟುವ ಚಲನಚಿತ್ರಗಳು, ಎದೆತಟ್ಟುವ ಗೀತೆಗಳು, ಅದ್ಭುತವಾದ ಸಾಹಿತ್ಯಕೃತಿಗಳು, ಜನತೆಯಲ್ಲಿ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸುವ ನಾಟಕಗಳು, ಪೌರಾಣಿಕ ಕಥೆಗಳ ಬಿತ್ತರಿಸೋ ಯಕ್ಷಗಾನ ಪ್ರಸಂಗಗಳು‌... ಹೀಗೆ ಇವೆಲ್ಲವೂ ಸೇರಿ "ಕನ್ನಡ" ವೆಂಬುದು ನಮ್ಮೊಳಗೆ ಸೇರಿ, ಬಿಡಿಸಲಾರದ ಒಂದು ನಂಟಾಗಿತ್ತು… ಆದರೆ ಈಗ? ಓಟದ ಬದುಕಿನ ಜಂಜಡದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ?... 
                    ಕಾರ್ಪೋರೇಟ್ ಕಾಲದಲ್ಲಿ ಕಾಣೆಯಾಗುತ್ತಿರುವ ನಮ್ಮ ಕನ್ನಡವನ್ನು ಉಳಿಸಲು ನಾವೇನು ಮಾಡಬಹುದು? ಎಂಬ ಪ್ರಶ್ನೆಗೆ ನಮ್ಮ ಬಳಿ ಎಷ್ಟು ಸಮರ್ಪಕವಾದ ಉತ್ತರವಿದೆಯೋ ಗೊತ್ತಿಲ್ಲ. ಆದರೆ ಯೋಚಿಸಿದಷ್ಟೂ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ‌ಮೊದಲು ನಾವು ನಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆಯನ್ನು ಬಿಡಬೇಕು. ಕಚೇರಿಯಲ್ಲಿ ವೈಯಕ್ತಿಕ ಮಾತುಕತೆಗೆ ಕನ್ನಡವನ್ನು ಬಳಸಲು ಆರಂಭಿಸಬೇಕು. ಯಾರಾದರೂ ಆಫೀಸಿನಲ್ಲಿ ಅನಾವಶ್ಯಕವಾಗಿ ನಮ್ಮ ಭಾಷೆಯನ್ನು ಹೀಯಾಳಿಸುತ್ತಿದ್ದರೆ, "ನಂಗ್ಯಾಕೆ ಬಿಡು? ಅವರೇನು ನಂಗೆ ಬೈತಾ ಇಲ್ವಲ್ಲಾ..." ಎನ್ನುವ ಧೋರಣೆ ಬಿಟ್ಟು, ಮೃದುವಾಗಿ ತಿಳಿಸಿ ಹೇಳಬೇಕು. ಸಾಹಿತ್ಯದ ಬಗ್ಗೆ ಅಲ್ಪಸ್ವಲ್ಪವಾದರೂ ತಿಳಿವಳಿಕೆ ನೀಡಬೇಕು. ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ "ಕಾಂತಾರ" ದಂತಹ ಹಲವಾರು ಒಳ್ಳೆಯ ಚಲನಚಿತ್ರಗಳು, ನಾಟಕಗಳನ್ನು ನಮ್ಮ ಕೈಲಾದಷ್ಟು ಪ್ರೋತ್ಸಾಹಿಸಬೇಕು. ಇಲ್ಲವಾದರೆ, ಕನಿಷ್ಠ ಪಕ್ಷ ಅದರ ಬಗ್ಗೆ ಹೀಯಾಳಿಸುವುದನ್ನು ನಿಲ್ಲಿಸಬೇಕು. ಆಫೀಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಟೀಂ ಬಿಲ್ಡಿಂಗ್ ನಂತಹ ಚಟುವಟಿಕೆಗಳಲ್ಲಿ ಸಾಧ್ಯವಾದರೆ ಕನ್ನಡವನ್ನೇ ಬಳಸಬೇಕು. ವ್ಯಾವಹಾರಿಕವಾಗಿ ಇಂಗ್ಲೀಷ್ ಅನಿವಾರ್ಯ. ಆದರೆ, ಅದರಾಚೆಗೆ ಕಚೇರಿಯಲ್ಲಿ ಕನ್ನಡ ಬಳಸಬಾರದು ಎಂಬ ಯಾವ ಲಿಖಿತ ನಿಯಮವೂ ಇಲ್ಲವಲ್ಲ! - ಇದನ್ನೊಂದು ಗಮನದಲ್ಲಿಟ್ಟುಕೊಂಡರೆ ಸಾಕು. ಕಾರ್ಪೊರೇಟ್ ಕ್ಯೂಬಿಕಲ್ ಗಳಲ್ಲಿ ಕನ್ನಡದ ಬಾವುಟವಷ್ಟೇ ಅಲ್ಲ, ಕನ್ನಡ ಭಾಷೆಯೂ ಮೆರೆಯುತ್ತದೆ. ತನ್ನದೇ ಆದ ಸ್ಥಾನ ಪಡೆಯುತ್ತದೆ. ಲಕ್ಷಾಂತರ ಕನ್ನಡಿಗರ ಭಾವನೆಗಳ ಹಂಚಿಕೆಗೆ ರೂವಾರಿಯಾಗುತ್ತದೆ. 
                   ಇತ್ತೀಚಿಗೆ ಕನ್ನಡದ ಬಗ್ಗೆ ಕೆಲವರಿಗೆ ಒಲವು ಕಡಿಮೆಯಾಗಿದ್ದರೆ, ಇನ್ನೂ ಕೆಲವು ಯುವಜನತೆಗೆ ಕನ್ನಡ ಅಂದು ಎಷ್ಟು ಆಪ್ತವಾಗಿತ್ತೋ, ಇಂದಿಗೂ ಅಷ್ಟೇ ಆಪ್ತ, ಅಷ್ಟೇ ಪ್ರಸ್ತುತ ! ಕನ್ನಡ ಬರೀ ಭಾಷೆಯಷ್ಟೇ ಅಲ್ಲ, ಅದು ಕನ್ನಡಿಗರ ವ್ಯಕ್ತಿತ್ವದ ಒಂದು ಅವಿಭಾಜ್ಯ ಅಂಗ… "ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು" ಎಂಬ ಡಿವಿಜಿ ಯವರ ಮಾತಿನಂತೆ, ಹಿರಿಯ ಕನ್ನಡಾಭಿಮಾನಿಗಳ ಮಾರ್ಗದರ್ಶನ ಮತ್ತು ಯುವ ಜನತೆಯ ಉತ್ಸಾಹ ಎರಡೂ ಸೇರಿ ಕನ್ನಡದಲ್ಲಿ ಹೊಸಹೊಸ ಪ್ರಯತ್ನಗಳು ನಡೆದರೆ, ನವೀನ ಭಾಷ್ಯವೊಂದಕ್ಕೆ ಮುನ್ನುಡಿಯಾದರೆ, ಅದಕ್ಕಿಂತ ಖುಷಿಪಡುವ ವಿಚಾರ ಇನ್ನೊಂದಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಭದ್ರ ಬುನಾದಿ ಇದೆ. ಶತಮಾನಗಳ ಇತಿಹಾಸವಿದೆ. ಒಂದು ಭಾಷೆ ಒಳಗೊಳ್ಳಬೇಕಾದ ಸಾರಾಸಾರಗಳುಳ್ಳ ಸಕಲ ಅಂಶಗಳೂ ಇದರಲ್ಲಿ ಅಡಕವಾಗಿದೆ. ಇಂಥಹ ಕನ್ನಡ ನಮ್ಮ ಎದೆಯ ಭಾಷೆಯಾಗಬೇಕು. ಕನ್ನಡ 'ಬದುಕಿನ' ಭಾಷೆಯೂ ಆಗಬೇಕು. ಕವಲುದಾರಿಯಲ್ಲಿ ನಿಂತ ಸಂಕರದ ಈ ಸ್ಥಿತಿಯಲ್ಲಿ ಕನ್ನಡ ಉಳಿಯಲು ಬೆಳೆಯಲು ಆಧುನಿಕ ಬದುಕಿನ ಸಕಲವೂ ಪೂರಕವಾಗಬೇಕು, ಪ್ರೇರಕವೂ ಆಗಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಕಾರ್ಪೋರೇಟ್ ಜಗತ್ತಿನಲ್ಲೂ ಕನ್ನಡದ ಕಲರವ ಕೇಳಿ ಬಂದರೆ ಅದಕ್ಕಿಂತ ಮಿಗಿಲಾದ ಸಾಧನೆ ಇನ್ನೇನಿದೆ?... ಹೀಗೆ ಎಲ್ಲ ಚಿಂತನೆಗಳು ಮನದಲ್ಲಿ ಭಾವ ತರಂಗಗಳನ್ನು ಸೃಷ್ಟಿಸಿದಾಗ, ನನಗೆ ಡಿ.ಎಸ್‌. ಕರ್ಕಿಯವರ ಈ ಗೀತೆ ನೆನಪಾಗುತ್ತದೆ… 
 "ಹಚ್ಚೇವು ಕನ್ನಡದ ದೀಪ, 
 ಕರುನಾಡ ದೀಪ ಸಿರಿನುಡಿಯ ದೀಪ
 ಒಲವೆತ್ತಿ ತೋರುವ ದೀಪ...." 
ಈ ಸಾಲುಗಳು ಮನದಲ್ಲಿ ಸದಾ ಅನುರಣಿಸುತ್ತದೆ. ಕನ್ನಡದ ಒಲವೆತ್ತಿ ತೋರುವ ದೀಪವನ್ನು ಇನ್ನಾದರೂ ಬೆಳಗಿಸಬೇಕಿದೆ… 

 - R.R.B.

* ಫೇಸ್‌ಬುಕ್‌ ನಲ್ಲಿರುವ "ಸೌರಭ" ಪುಟದ "ನಾವು-ನೀವು-ಕನ್ನಡ" ಮಾಲಿಕೆ - ೧ ಕ್ಕಾಗಿ ಬರೆದ ಲೇಖನ.

ಭಾನುವಾರ, ಮೇ 2, 2021

ಸಾವು


ತಿಳಿದಿರಬಹುದು ನಿನಗೆ ಸಾವಿನ ರಹಸ್ಯ
ಆದರೆ ಬದುಕಿನ ಹೃದಯದೊಳಗಿಳಿಯದೇ‌ ಅದು  ಕಾಣುವುದಾದರೂ ಹೇಗೆ?
ರಾತ್ರಿಪೂರ ಕಾಣುವ ಗೂಬೆಗೆ ಬೆಳಕಿನ ಸತ್ಯ ಗೋಚರಿಸದಂತಹ ಕುರುಡು.
ವಾಸ್ತವದಲ್ಲಿ ನೀನು ಸಾವಿನ ಶಕ್ತಿ ನೋಡಬೇಕೆಂದರೆ 
ಹೃದಯ ತೆರೆದು ಬದುಕಿನ ಶರೀರವನೊಮ್ಮೆ ನೋಡು.
ಬದುಕು - ಸಾವುಗಳೆರಡೂ ಒಂದೇ, ನದಿ - ಸಮುದ್ರಗಳು ಒಂದೇ ಆದ ಹಾಗೆ.

ಭರವಸೆ ಮತ್ತು ಬಯಕೆಗಳ ಆಳದಲ್ಲಿಹುದು 
- ಅದರಾಚೆಗಿನ ಜಗದ ಮೌನ ಅರಿವು.
ಮಂಜಿನಡಿಯ ಬೀಜ ವಸಂತದ ಕನಸು ಕಾಣುವಂತೆ, ನಿನ್ನ ಹೃದಯದ ತುಂಬೆಲ್ಲ ಶಾಶ್ವತತೆಯ ಸ್ವಪ್ನ.
ನಂಬಿಕೆಯಿಡು ಕನಸುಗಳಲಿ, ಅವೇ ಅಮರತೆಯ ಕಡೆಗಿನ ಗುಪ್ತದ್ವಾರ.
ಸಾವಿನೆಡೆಗೆ ನಿನ್ನ ಭಯ - ಅರಸನ ಮುಂದೆ ಕಂಪಿಸುವ ಕುರುಬನ ಕೈಯಂತೆ.
ಆ ನಡುಗುವಿಕೆಯ ಜೊತೆಗೆ ರಾಜನ ಕಂಡ ಖುಷಿಯಿಲ್ಲವೇ?
ಆ ಸಂತಸದಲ್ಲಿ ಕಂಪನದ ಕಡೆ ಗಮನ ಹರಿಸಲಿಲ್ಲವೇ?

ಸಾವೆಂದರೇನು, ಗಾಳಿಯಲಿ ಬೆತ್ತಲಾಗಿ ಸೂರ್ಯನಲಿ ಕರಗಿಹೋಗುವುದೇ?
ಉಸಿರಾಟ ನಿಲ್ಲುವುದೆಂದರೇನು, ಅವಿಶ್ರಾಂತ ಉಸಿರ ಅಲೆಗಳ ನಿಲ್ಲಿಸಿ, ಅದನು ಹೆಚ್ಚಿಸಿ, ವಿಸ್ತರಿಸಿ ಅಡಚಣೆಯಿಲ್ಲದೇ ದೇವರ ಸೇರುವ ಬಗೆಯೇ?

ಮೌನದ ನದಿಯಿಂದ ನೀರು ಕುಡಿದಾಗ ಮಾತ್ರ, ನಿಜವಾಗಿ ಹಾಡಬಹುದು ನೀನು
ಪರ್ವತದ ತುತ್ತತುದಿ ತಲುಪಿದಾಗ ಮಾತ್ರ, ಹತ್ತಲು ಶುರು ಮಾಡಬಹುದು ನೀನು
ಮತ್ತು ನಿನ್ನ ಕಾಲು ಭೂಮಿಯ ಸಂಪರ್ಕ ಸೇರಿದಾಗ ಮಾತ್ರ ನಿಜವಾಗಿ ನರ್ತಿಸಬಹುದು ನೀನು !

Note: ಖಲೀಲ್ ಗಿಬ್ರಾನ್ ಅವರ "On Death" ಕವಿತೆಯನ್ನು ಅನುವಾದಿಸುವ ಸಣ್ಣ ಪ್ರಯತ್ನ. ತಪ್ಪಿದ್ದಲ್ಲಿ ಕ್ಷಮಿಸಿ. ಉತ್ತಮ ಸಲಹೆಗಾಗಿ ನಿರೀಕ್ಷೆಯಲ್ಲಿ
- R. R. B.

ಮಂಗಳವಾರ, ಏಪ್ರಿಲ್ 6, 2021

ಕತ್ತಲೆಯೊಂದು ಜಿನುಗಬೇಕು...

ಕತ್ತಲೆಯೊಂದು ಜಿನುಗಬೇಕು 
ಹೊತ್ತಲ್ಲದ ಹೊತ್ತಿನ ಚಡಪಡಿಕೆ, 
ಖಾಸಗೀ ಕನಸುಗಳ ಹಂಬಲಿಕೆ 
ಮುತ್ತಿನ ಮತ್ತಿನ ರಾತ್ರಿಗಳ ಮರುಕಳಿಸಿ
ಇದ್ದೂ ಇಲ್ಲದ ವಿಚಿತ್ರ ಭಾವಗಳನೆಲ್ಲ 
ಒಟ್ಟುಪೇರಿಸಿ ಒಂದೆಡೆ ಚಪ್ಪರ ಹಾಕಲು ಕಡುಗತ್ತಲೆಯೊಂದು ಜಿನುಗಬೇಕು !!

ಗುಲ್ಮೋಹರ್ ಮರದ ಕೆಳಗಿನ ನೆನಪ ರಾಶಿ 
ಕೊಳೆತೆಲೆಯ ಜೊತೆಸೇರಿ ಕಳೆಯುವಾ ಮುನ್ನ 
ಸರಿವ ಸಮಯಕೆ ತಿರುಗೋ ಬಾನ ಬಣ್ಣ 
ಪೂರ್ತಿ ಮುಪ್ಪಾಗುವ ಮುನ್ನ 
ಒಂಟಿಬಾನಲಿ ಚಂದ್ರ - ತಾರೆಗಳ ಜಂಟಿಯಾಗುವಾಗ 
ವಸಂತದ ಕಡುಗತ್ತಲೆಯೊಂದು ಜಿನುಗಬೇಕು !! 

ಕನಸಕೋಣೆಗೆ ನಿನ್ನ ನೆನಪುಗಳದೇ ಬೀಗ
ಲಯ ತಪ್ಪಿದೆಯೇಕೋ ನನ್ನ ಬದುಕಿನಾ ಓಘ 
ಧೂಳು ಹಿಡಿದ ಮನದ ಮನೆಯ ಚಾವಡಿಯೀಗ 
ಮತ್ತೆ ಹೊಳಪಾಗುವಂತೆ, ಚಿತ್ತ ನವಿರಾಗುವಂತೆ 
ತಂಬೆಲರ ಬೀಸಿ, ಕಡುಗತ್ತಲೆಯೊಂದು ಜಿನುಗಬೇಕು !! 

 ಸರಿತಪ್ಪಿನ ಸಮಬೆಸದ ಲೆಕ್ಕದ ಪಟ್ಟಿ ಪಕ್ಕಕಿಟ್ಟು 
ಕೊರಗಿ ಕಳೆದ ನೂರು ನೋವ - ಮರೆವಿನಾ ಮಡಿಲಲಿಟ್ಟು 
ಅನುರಾಗದ ಅನುಭಾವಕೆ ಹೊಸ ಭಾಷ್ಯವನಿತ್ತು 
ಸಮಾಗಮದ ಸರಿಗಮಕೆ ಚಾಲ್ತಿ ನೀಡುವಂಥ 
ಕಡುಗತ್ತಲೆಯೊಂದು ಜಿನುಗಬೇಕು !! 

- R. R. B.

ಭಾನುವಾರ, ಆಗಸ್ಟ್ 23, 2020

ಕಾಮರ್ಸ್_ಕವಿತೆಗಳು_36

ಹಬ್ಬ ಹರಿದಿನಕ್ಕೂ ಸರಿಯಾಗಿ ರಜೆ ಸಿಗದೇ
ಕೆಲ ರವಿವಾರವೂ ಕೆಲಸ ಮಾಡುತ್ತಿದ್ದವನಿಗೆ
ಪ್ರತೀ ದೀಪಾವಳಿಯ ಸ್ವೀಟಿನ ಖರ್ಚು 
ಟ್ಯಾಲಿಗಿಳಿಸುವಾಗ 'ಇಷ್ಟೆಲ್ಲವಾ?' ಎಂಬ ಸಂದೇಹ !

- R. R. B.

ಶುಕ್ರವಾರ, ಆಗಸ್ಟ್ 21, 2020

ಮಳೆ ಕವಿತೆ


ಕೆಂಪು ಮಣ್ಣು ಹಸಿರು ತೋಟ
ಮನವ ಸೆಳೆವ ಅವಳ ನೋಟ
ಧರೆಯ ಕೊರಳ ಸೊಬಗ ಮಾಟ
ಆಕಾಶಕೆ ಸಿಹಿ‌ ಹಬ್ಬದೂಟ !

ಕುಣಿವ ಮಳೆ ನಗುವ ಇಳೆ
ಹರಿವ ಹೊಳೆ ತೊಳೆವ ಕೊಳೆ
ಅವನಿ'ಗೆ ಶೃಂಗಾರದ ಬಳೆ
ಹೊಚ್ಚ ಹೊಸ ಗರತಿ ಕಳೆ !

ಸೂರ್ಯ ಚಂದ್ರ ಜಂಟಿ ಹಕ್ಕಿ
ಮನದಿ ಒಲವ ಧಾರೆ ಉಕ್ಕಿ
ಸೇರಬಹುದೇ ಬಾನ ಚುಕ್ಕಿ
ಭುವಿಯ ಭಾವ ಹೆಕ್ಕಿ ಹೆಕ್ಕಿ !

ನೀಲ ಗಗನ ದಿವ್ಯ ಭವನ
ಸ್ಪರ್ಷ ಸ್ಮರಣ ಭಾವ ಸ್ಫುರಣ
ಬಾನು ಭೂಮಿ ನೋಡುತ ಕುಳಿತು
ಬಂತು ಕವನ ಸಮಯ ಮರೆತು !!

- R. R. B.


ಸೋಮವಾರ, ಆಗಸ್ಟ್ 17, 2020

ನಾನು ಸತ್ತರೆ?

ನಾನು ಸತ್ತರೆ ಏನಾಗಬಹುದು?
ಹೆಚ್ಚೆಂದರೆ ಒಂದು ತಿಂಗಳು 
ಮನೆಯಲಿ ಮಸಣದ ಮೌನ
ಭಾವುಕರಾಗಬಹುದು ಕೆಲವರು...
ಅಕಾಲಿಕ ಸಾವಿನ ಗಾಢಭಾವ
ಸ್ಮಶಾನದಿ ಸುಟ್ಟ ಹೆಣದ ಘಾಟು
ಅನಾಥವಾಗಿ ಬೀಳುವ ಬಟ್ಟೆಬರೆ
ಒಡೆದ ಮಡಕೆ, ಸಿಡಿದ ಮೂಳೆ
ಮನೆಮಂದಿಗೆಲ್ಲ ಸೂತಕದ ಛಾಯೆ...

ಸಾಲುಗಳು ಹೆಚ್ಚೇನಿಲ್ಲ ಬದುಕಿದರೂ?
ಒಟ್ಟಿಗೆ ಕಳೆದ ಖುಷಿಯ ಕ್ಷಣ
ತುಂಬ ಉತ್ಸಾಹದಿ ಕುಣಿವ ಮನ
ಸಾಗಿದ ಕಾಲುದಾರಿಯ ಹೆಜ್ಜೆ
ಕಪಾಟಲಿ ಅನಾಥವಾದ ಗೆಜ್ಜೆ
ಆಗಾಗ್ಗೆ ತಮ್ಮನೊಟ್ಟಿಗೆ ಪುಟ್ಟ ಕದನ
ಕಡೆಗೆ ಸದ್ದಿಲದ ಒಬ್ಬಂಟಿ ಪಯಣ
ಎಲ್ಲ ನೆನಪಿರಬಹುದೇ ಯಾರಿಗಾದರೂ?...

ಅರ್ಧಕ್ಕೆನಿಂತ ಓದುತ್ತಿದ್ದ ಪುಸ್ತಕದ ಹಾಳೆ
ಮುಗಿಯದೇ ಉಳಿದ ತರಲೆ, ಮಾತುಕತೆ
ಬರೆಯಬೇಕೆಂದಿದ್ದ ಕವನದ ಸಾಲು
ಸಂಜೆ ಮಾಡಬೇಕಿದ್ದ ಕುರುಕಲು ತಿಂಡಿ
ಎಲ್ಲವೂ ಮುಂದೆ ಏನಾಗಬಹುದು? 
ಅಯ್ಯೋ ನನಗೇಕೆ ಇದೆಲ್ಲ ತಲೆಬಿಸಿ...
ಇವೆಲ್ಲದರ ಗೊಡವೆ ಬದುಕಿದ್ದವರಿಗೇ ಸರಿ
ನಾನಾಗಲೇ ಸತ್ತು ಅರ್ಧ ಗಂಟೆ ಈಗ !!

- R. R. B.


ಭಾನುವಾರ, ಆಗಸ್ಟ್ 16, 2020

ಪಿಕಾಸಿ

        ಅತಿ ಆಸೆಯು ಮನುಷ್ಯನನ್ನು ಹೇಗೆಲ್ಲಾ ವರ್ತಿಸುವಂತೆ ಮಾಡುತ್ತದೆಯೆಂದು ಮನಮುಟ್ಟುವಂತೆ ಚಿತ್ರಿಸಿದ ಕಿರುಚಿತ್ರ - 'ಪಿಕಾಸಿ'. ಹಳ್ಳಿಯ ವಾತಾವರಣದ ಸೊಬಗಿನ ಅನಾವರಣದ ಜೊತೆ ಜೊತೆಗೆ ದುರಾಸೆಯಿಂದ ಒಬ್ಬ ವ್ಯಕ್ತಿ ತನ್ನ ಬದುಕನ್ನು ಹೇಗೆ ನಾಶಮಾಡಿಕೊಳ್ಳುತ್ತಾನೆ ಎಂಬ ಸಂದೇಶ ನೀಡುವ ಚಿತ್ರ. 

          ಚಿತ್ರದ ಸನ್ನಿವೇಶವನ್ನು ನೋಡುತ್ತಾ ಸಾಗಿದಂತೆ ನನಗೆ ಅನಿಸಿದ ಕೆಲವು ಭಾವನೆಗಳನ್ನು ನಿಮ್ಮ ಮುಂದಿಡುತ್ತೇನೆ... ಜೀವನದ ಬಿರುಸಿನ ಓಟದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸುತ್ತಲೇ ಬಂದಿದ್ದೇವೆ. ಎಷ್ಟು ದುಡಿದರೂ, ಎಷ್ಟು ಗಳಿಸಿದರೂ ನೆಮ್ಮದಿ ಎಂಬುದೇ ಇಲ್ಲ. "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ  ತುಡಿವುದೇ ಜೀವನ" ಎಂದು ಅಡಿಗರು ಸುಮ್ಮನೇ ಹೇಳಿದ್ದಾರೆಯೇ?... ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡದೇ ಬೇರೆ ದಾರಿಯೇ ಇಲ್ಲವೇನೋ ಎನಿಸಿಬಿಟ್ಟಿದೆ. ಓಡದೇ ಹಿಂದುಳಿದುಬಿಟ್ಟರೆ ನಾವು ಸುಮ್ಮನಿದ್ದರೂ ನಮ್ಮ 'ಈಗೋ' ಸುಮ್ಮನಿರುತ್ತದೆಯೇ? ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಭಯದಿಂದ ಓಡುತ್ತಲೇ ಇದ್ದೇವೆ - ಯಾಕಾಗಿ ಓಡುತ್ತಿದ್ದೇವೆಂಬ ಸ್ಪಷ್ಟತೆ ಕೂಡ ಇಲ್ಲದೆಯೇ !!

        90% , 95% ಗಳು ಕಡಿಮೆ ಎನ್ನಿಸುವ ಕಾಲವಿದು. ಹಿಂದೊಂದು ಕಾಲವಿತ್ತು - ಪಾಸಾದರೆ ಖುಷಿಯಿಂದ ಸಿಹಿ ಹಂಚುತ್ತಿದ್ದ ಕಾಲ. ದುಡ್ಡಿಲ್ಲದಿದ್ದರೂ ಪ್ರೀತಿ, ನೆಮ್ಮದಿಯಿದ್ದ ಕಾಲ. ಕಷ್ಟಗಳ ಮಳೆಗೆ ಸಹನೆಯೆಂಬ ಕೊಡೆ ಹಿಡಿದಿದ್ದ ಕಾಲ. ಆಧುನಿಕತೆಯ ಗಂಧವಿಲ್ಲದಿದ್ದರೂ "ಡಿಪ್ರೆಷನ್" ಎಂಬ ಪದದ ಅರಿವಿಲ್ಲದ ಕಾಲ. ದೇಶ - ಸಂಸ್ಕೃತಿಯನ್ನು ಪ್ರೀತಿಸಿದ ಕಾಲ. ಹಬ್ಬ-ಹರಿದಿನಗಳನ್ನು ಮನೆಯವರೆಲ್ಲ ಸೇರಿ ಖುಷಿಯಿಂದ ಆಚರಿಸುತ್ತಿದ್ದ ಕಾಲ. ಎರಡು ಹೊತ್ತು ಊಟ ಸಿಕ್ಕರೆ ತೃಪ್ತಿ ಪಡುತ್ತಿದ್ದ ಕಾಲ... ಆ ಕಾಲದಲ್ಲಿ ಅತ್ಯಾಸೆ ಪಡುವವರ ಸಂಖ್ಯೆ ಕಡಿಮೆಯಿತ್ತು. ಈಗ ಹೆಚ್ಚಾಗಿದೆ ಅಷ್ಟೇ... 

    ಚಿತ್ರದಲ್ಲಿ ಎಲ್ಲೆಡೆ ಕೆಂಪು ಬಾವುಟ ನೆಡುವ ರಾಜಣ್ಣನ ಕ್ರಿಯೆ ನಂಗಂತೂ ಬಹಳ ಆಪ್ತವಾಯ್ತು. ನಾವು ಕೂಡ ನಮಗೇ ತಿಳಿಯದಂತೆ ಬದುಕಲ್ಲಿ ಎಲ್ಲಕಡೆ 'ಕೆಂಪು ಬಾವುಟ' ನೆಡಲು ಪ್ರಯತ್ನಿಸುತ್ತಿರುತ್ತೇವೆ. ಅದು ಮಕ್ಕಳಿಗೆ 'ನೂರಕ್ಕೆ ನೂರು ಬರಲಿ' ಎಂದು ಒತ್ತಡ ಹೇರುವುದಿರಬಹುದು, ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದೇವೆಂದು ಸುಳ್ಳೇ ನಂಬಿಸುವುದಾಗಿರಬಹುದು, ಎಲ್ಲವೂ ಇದ್ದೂ ಸರ್ಕಾರದಿಂದ ಏನೆಲ್ಲ ಫ್ರೀಯಾಗಿ ಸಿಗುತ್ತದೋ ಅದನ್ನೆಲ್ಲ ಪಡೆಯುವ ಹವಣಿಕೆ ಇರಬಹುದು... ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಸಹಜವೇ ಎನ್ನಿಸಿದರೂ ಯಾವುದೂ ಅತಿಯಾಗಬಾರದು ಅಷ್ಟೇ ! ಒಂದು ನಿಮಿಷವೂ ವಿಶ್ರಾಂತಿ ತೆಗೆದುಕೊಳ್ಳದ ರಾಜಣ್ಣನಂತಾದರೆ, ಇಳಿವಯಸ್ಸಿನಲ್ಲಿ ಸವಿಯಲು ನೆನಪುಗಳ ಬುತ್ತಿಯೇ ಇರುವುದಿಲ್ಲ ! ಒಟ್ಟಿನಲ್ಲಿ "ವರ್ಕ್ ಲೈಫ್" ಮತ್ತು "ಪರ್ಸನಲ್ ಲೈಫ್" ಗಳೆರಡನ್ನೂ ಸಮರ್ಪಕವಾಗಿ ನಿಭಾಯಿಸುವ ಛಾತಿಯಿದ್ದರೆ ಬದುಕು ಸುಂದರ...

     ಇನ್ನು 'ಪಿಕಾಸಿ'ಯ ಬಗ್ಗೆ ಹೇಳುವುದಾದರೆ ವಿನೋದ್ ಕುಲಶೇಖರನ್ ನಿರ್ದೇಶನದ, 26 ನಿಮಿಷದ ಈ ಕಿರುಚಿತ್ರ BISFF  - 2020 (ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರ ಪ್ರದರ್ಶನ)ಗೆ ಆಯ್ಕೆಯಾದ ಚಿತ್ರ. ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಯಾಮೆರಾವರ್ಕ್, ಎಡಿಟಿಂಗ್ ಎಲ್ಲವೂ ಚಂದ. ಹಿನ್ನೆಲೆ ಸಂಗೀತ ತುಂಬ ಇಷ್ಟವಾಯ್ತು... ಸಾಧ್ಯವಾದರೆ ಒಮ್ಮೆ ಕಣ್ತುಂಬಿಕೊಳ್ಳಿ.

ಒಂಟಿ ಟೊಂಗೆಯ ಲಾಂದ್ರ


            ಶ್ರೀಧರ್ ಭಟ್ ತಲಗೇರಿಯವರ ಚೊಚ್ಚಲ ಇ - ಕವನಸಂಕಲನ. ಈ ಕೊರೋನಾ ಗಲಾಟೆ ಇಲ್ಲವಾಗಿದ್ದರೆ "ಹರಿದ ಜೇಬಿನ ಹೂವು" ಇವರ ಮೊದಲ ಕವನಸಂಕಲನವಾಗಿ ನಮ್ಮ ಕೈಸೇರುತ್ತಿತ್ತು. ಇರಲಿ, ಈಗ ಮೊಬೈಲ್ ನಲ್ಲೇ "ಒಂಟಿ ಟೊಂಗೆಯ ಲಾಂದ್ರ"ದ  ಬೆಳಕ ನೋಡುವ ಸಂಭ್ರಮ... 

            ಕವಿತೆಗಳ ಕುರಿತು ಹೇಳುವ ಮೊದಲು ಕವಿಯ ಬಗ್ಗೆ ಒಂದಿಷ್ಟು : 
"ಕಣ್ಣಿನಲ್ಲೇ ಕಣ್ಣ ತೀಡಿ ಕವಿತೆ ಹೆಕ್ಕಿ, ಬಣ್ಣ ಅದ್ದಿದ ಕುಂಚಕಿಲ್ಲಿ ಫ್ರೇಮ್ ಹಾಕಿ, ಎಲ್ಲ ಋತುವಿಗೂ ಇರಬಹುದಾದವ..‌." ಫೇಸ್ಬುಕ್ಕಿನ ಬಯೋ ಓದುವಾಗಲೇ ಇವನ ಪರಿಚಯ ಹಲವರಿಗೆ ಆಗಿರಬಹುದು. ಭಾವನೆಗಳನ್ನು ಪದಗಳಲ್ಲಿ ಹಿಡಿದಿಡುವುದು ಜಾಗರೂಕತೆಯಿಂದ ಕಸೂತಿ ನೇಯ್ದಂತೆಯೇ... ಅದರಲ್ಲಿ ಈತ ಪರಿಣಿತ. ಅದ್ಭುತ ಮಾತುಗಾರ. ಕುಂಚ ಹಿಡಿದರೆ ಸುಂದರ ಚಿತ್ರಗಳ‌ ಸುರಿಮಳೆ ಸುರಿಸುವವ. ಇನ್ನು ಈತನ ಫೋಟೋಗ್ರಫಿಯ ಬಗ್ಗೆ ನಾನು ವಿವರಿಸುವುದಕ್ಕಿಂತ ಒಮ್ಮೆ ನೀವೇ "Stories in a Frame" ಪುಟಕ್ಕೆ ಭೇಟಿ ಕೊಟ್ಟರೆ ಒಳಿತು. 
                   
            "ಹೊಂಬಣ್ಣ"ದ ಕನಸ ನನಸಾಗಿಸಲು ಹೊರಟಿರುವ "ಯಾತ್ರಿಕ"ನೀತ... ಭಾವಗಳ ಉಸಿರ ಬಣ್ಣದ ಬಲೂನುಗಳಲ್ಲಿ ತುಂಬಿ ಓದುಗರತ್ತ ಅಕ್ಕರೆಯಿಂದ ಹಾರಿಬಿಡುವವ... ಯಾವಾಗಲೂ ಲವಲವಿಕೆಯಿಂದ ಹೊಸದೇನಾದರೂ ಓದುತ್ತ, ಬರೆಯುತ್ತ, ಒಳ್ಳೆಯ ಚಲನಚಿತ್ರಗಳ ಕಣ್ತುಂಬಿಸಿಕೊಳ್ಳುತ್ತ, ಹಳ್ಳಿಯ ಹಳೆಯ ನೆನಪುಗಳ ಜೊತೆಗೆ  ಬೆಂಗಳೂರಿನ ಪ್ರತೀ ಮಳೆಯನ್ನು, ಬಿಸಿಲನ್ನು, ಮತ್ತೆ ಮತ್ತೆ ಕಾಡುವ ಸಂಜೆಗಳನ್ನು ಆಪ್ತವಾಗಿ ಅನುಭವಿಸುತ್ತ ಖುಷಿಯಿಂದ ಬದುಕುವವ... 

      'ಒಂಟಿ ಟೊಂಗೆಯ ಲಾಂದ್ರ'ದಲ್ಲಿ :
ಒಟ್ಟೂ ಮೂವತ್ತನಾಲ್ಕು ಕವನಗಳಿವೆ. ಒಂದಕ್ಕಿಂತ ಒಂದು ಚೆನ್ನ. ಒಮ್ಮೆ ಹಳ್ಳಿಯ ಸೊಬಗು ಕಣ್ಮುಂದೆ ಬಂದರೆ ಮುಂದಿನ ಕವಿತೆಯಲ್ಲಿ ನಗರದ ಬೃಹತ್ ಕಟ್ಟಡಗಳಲ್ಲಿ ಕಾಣೆಯಾಗುವ ಮನಸ್ಸುಗಳ ಹುಡುಕಾಟವಿದೆ. "ನಿನ್ನ ಬಗ್ಗೆಯೇ ಬರೆದೆ 
ನನ್ನ ಒಳಗೆಲ್ಲೂ ಇಳಿಯದೇ..." ಎಂದು ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ, ಭಾವುಕರಾಗಿ 'ಕವಿಯಾಗಬಾರದಿತ್ತು ನಾನು' ಎನ್ನುತ್ತಾರೆ ಕವಿ. ನಾಗರಿಕ ಬದುಕಿನ ಸೂಕ್ಷ್ಮಗಳ ನಡುವಿನ ಗೆರೆಯ ಬಗ್ಗೆ ಸೂಚ್ಯವಾಗಿ ಹೇಳುತ್ತ "ರಾವಣ ಮಾರುವೇಷದಲ್ಲಿದ್ದಾನೆ" ಎಂದು ಇಂದಿನ ವಾಸ್ತವದ ಚಿತ್ರಣ ನೀಡುತ್ತಾರೆ. ಮಹಾನಗರದಲ್ಲಿ ಸಿಕ್ಕ ಸಿಕ್ಕಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತುವಾಗ "ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ" ಎಂದು ಖುಷಿ(?) ಪಡುತ್ತಾರೆ. ಯಾಂತ್ರಿಕ ಬದುಕಿಗೆ ಬೇಸತ್ತು "ಮತ್ತೆ ಎಲ್ಲರೂ ಒಮ್ಮೆ ಬಾಲ್ಯಕ್ಕೆ ಮಗುಚಿಕೊಳ್ಳುವಂಥ ಒಂದು ಮಳೆ ಬರಬೇಕು" ಎನ್ನುತ್ತಾರೆ. ಓದುತ್ತ ಓದುತ್ತ ನಿಜಕ್ಕೂ ಅಂಥಾ ಮಳೆಯೊಂದು ಬಂದಿದ್ದರೆ ಎಷ್ಟು ಒಳ್ಳೆಯದಿತ್ತು ಎನಿಸಿಬಿಡುತ್ತದೆ !  "ಅದು ನನ್ನದೇ ತಿಥಿ ಯಾಕೆಂದರೆ ನಾನು ಮಾತ್ರ ಸತ್ತಿದ್ದು ಅವನ ಪಾಲಿಗೆ..." ಎಂಬ ಸಾಲುಗಳಲ್ಲಿ ಅದೆಷ್ಟು ಭಾವ ತೀವ್ರತೆಯಿದೆಯೋ... ನನಗಂತೂ ಅಚಾನಕ್ಕಾಗಿ ಹುಟ್ಟಿ ವಿಚಿತ್ರವಾಗಿ ಕೊನೆಗೊಂಡ ಕೆಲವು ಸ್ನೇಹಗಳ, ಸ್ನೇಹಿತರ/ತೆಯರ ನೆನಪಾಯಿತು... 

          "ನಾಗರಿಕತೆ ಬೆಳೆಯುತ್ತದೆ ಅವಳ ಬೆವರಿನಲಿ, ಎದೆಯ ಬಿಸಿಯಲಿ, ಮೃದು ಉಸಿರಲಿ, ಅವಳೇ ಕೊಂದ ಕನಸಿನಲಿ" ಎಂಬ ಸಾಲುಗಳ ಓದುವಾಗ ವಿಷಾದವೊಂದು ಮೂಡುತ್ತದೆ. ಜೊತೆಗೆ ಎದೆಯಲ್ಲಿ ಬೆಳೆಯುವ ಕವಿತೆಗೆ ಇಂಥದ್ದೇ ವಿಷಯವಾಗಬೇಕೆಂಬ ಹಂಗಿಲ್ಲ ಎನಿಸುತ್ತದೆ... "ಮತ್ತೆ ಅಪರಿಚಿತರಾದೆವು ಅದೇ ರಸ್ತೆಯಲ್ಲಿ... ಒಂದು ಸಣ್ಣ ವಿದಾಯದ ಮಾತೂ ಇಲ್ಲದಂತೆ..." ಎಂಬ ಕವಿಯ ಸಾಲುಗಳು ಜೀವನದ ಪಯಣದಲ್ಲಿ ಸಿಕ್ಕೂ ಸಿಕ್ಕದಂತಿರುವವರ, ಅತಿ ಕಡಿಮೆ ಅವಧಿಯಲ್ಲಿ ಮಾತಿಲ್ಲದೇ ಹತ್ತಿರವಾದವರ ನೆನಪು ಮಾಡಿಸುತ್ತದೆ. 
ಇವರ ಎಲ್ಲ ಕವಿತೆಯಲ್ಲಿ ಪದಗಳ ಬಳಕೆ ಬಲು ಚಂದ... ಸಂದೇಶವೊಂದನ್ನು ಸೂಕ್ಷ್ಮವಾಗಿ ಹೇಳುತ್ತ, ಏನೂ ಹೇಳೇ ಇಲ್ಲವೇನೋ ಎನ್ನಿಸುವಂತೆ ಹೇಳಿ ಮುಗಿಸುವ ಛಾತಿ ಅದ್ಭುತ...‌ ಒಮ್ಮೆ ಓದಿದ ಕವಿತೆ ಇನ್ನೊಮ್ಮೆ ಓದುವಾಗ ಹೊಸ ಆಯಾಮ ಪಡೆಯುವ ರೀತಿ ಅಚ್ಚರಿ ತರಿಸುವಂತಿದೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ ಇವರ ಕೆಲವು ಕವನಗಳು ನನಗೆ ಕೈಗೆಟುಕದ ನಕ್ಷತ್ರ. ಎರಡು ಬಾರಿ ಓದಿದರೂ ಪಕ್ಕನೆ ಭಾವಾರ್ಥ ತಲೆಗೆ ಹೋಗುವುದಿಲ್ಲ... ಅಥವಾ ಅರ್ಥವಾಗದ ಇನ್ನೂ ಏನೋ ಇದೆಯೆಂಬ ಭಾವ ನನ್ನಲ್ಲಿ ಉಳಿದುಬಿಟ್ಟಿರುತ್ತದೆ‌. ಅಷ್ಟಕ್ಕೂ  2+2=4 ಎಂದು ಓದಿ ಮುಗಿಸಲು ಕವಿತೆ ಗಣಿತವಲ್ಲ !! ಅದನ್ನು ಆಸ್ವಾದಿಸುವ ರೀತಿಯೇ ಬೇರೆ... !

           ಇನ್ನು ಈಗಾಗಲೇ ಹಲವರು ಫೇಸ್ಬುಕ್ ನಲ್ಲಿ ಇವರ ಕವಿತೆಗಳನ್ನು ಓದಿಯೇ ಇರುತ್ತೀರಾ.. ಅವರಿಗೆಲ್ಲ ನಾನು ಹೇಳುವುದೇನೆಂದರೆ 'ಒಂಟಿ ಟೊಂಗೆಯ ಲಾಂದ್ರ'ದಲ್ಲಿನ ಕವಿತೆಗಳು ಅವೆಲ್ಲಕ್ಕಿಂತ ಬಹಳ ವಿಭಿನ್ನ. ಸಂಜೆ ಐದರ ಮಳೆಯ ವಿಳಾಸದಲ್ಲಿ ಕವಿತೆಗಳು ನಿಮಗಾಗಿ ಕಾದು ಕುಳಿತಿದೆ. ಒಮ್ಮೆ MyLang ಗೆ ಹೋಗಿ ಓದಿಬಿಡಿ 😍😍

(ಇವಳೇನು ಒಮ್ಮೆ ಏಕವಚನದಲ್ಲಿ, ಒಮ್ಮೆ ಬಹುವಚನದಲ್ಲಿ ಬರೆದಿದ್ದಾಳೆ ಎಂದು ಯಾರೂ ತಲೆಕೆರೆದುಕೊಳ್ಳಬೇಡಿ... ಕವಿಯ ಬಗ್ಗೆ ಹೇಳುವಾಗ ಸ್ನೇಹಿತನೆಂಬ ಸಲುಗೆಯಿಂದ ಏಕವಚನ ಬಳಸಿ, ಕವಿತೆಗಳ ಬಗ್ಗೆ ಹೇಳುವಾಗ ಕವಿ/ಸಾಹಿತಿಯೆಂದು ಗೌರವಸೂಚಕವಾಗಿ ಬಹುವಚನ ಬಳಸಿದ್ದೇನೆ... 😀)

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...