ಶನಿವಾರ, ಜುಲೈ 22, 2017

ಪ್ರೀತಿ

               ಒಂದು ಅವರ್ಣನೀಯ ಅನುಭೂತಿ... ಪ್ರೀತಿ ಭಾವಲಹರಿಯ ಒಂದು ಚಿತ್ತಾರ. ವರ್ಣನಾತೀತ ಕಾವ್ಯ. ಮನಸು - ಮನಸುಗಳ ಮಿಲನ. ಪರಸ್ಪರ ನಂಬಿಕೆಯೇ ಪ್ರೀತಿ. ಅದು ಬಣ್ಣಿಸಲಾಗದ್ದು. ಬರೀ ಅನುಭವಕ್ಕೆ ಎಟುಕುವಂಥದ್ದು. 

         ಪ್ರೀತಿ ಎಂದರೆ ಬರೀ ಗಂಡು - ಹೆಣ್ಣಿನ ಆಕರ್ಷಣೆಯೇ? ಖಂಡಿತಾ ಅಲ್ಲ. ತಾಯಿ ಮಗುವಿಗೆ ತೋರಿಸುವ ನಿಷ್ಕಲ್ಮಷ ಅಕ್ಕರೆ, ಮಮತೆ, ಕಾಳಜಿಯೇ ಪ್ರೀತಿ. ಸೋದರ - ಸೋದರಿಯರ ನಡುವಿನ ಅವಿನಾಭಾವ ಬಾಂಧವ್ಯವೇ ಪ್ರೀತಿ. ಕುಟುಂಬದವರೊಂದಿಗಿನ ಸೌಹಾರ್ದ ಸಂಬಂಧವೇ ಪ್ರೀತಿ. ಸಾಧಿಸಲೇಬೇಕೆಂಬ ತುಡಿತದಿಂದ ಹೋರಾಡುವುದು ಆ ಗುರಿಯ ಬಗೆಗಿನ ಪ್ರೀತಿ.ಇನ್ನು ವ್ಯಕ್ತಿ ಕೇಂದ್ರೀಕರಣದಿಂದ ತುಸು ಹೊರಬಂದು ಸಮಾಜವನ್ನು ಗಮನಿಸಿದರೆ ಸಿಗುವ ದೃಷ್ಟಾಂತಗಳು ಹಲವು. ಹಸಿದ ಭಿಕ್ಷುಕರನ್ನು ಕಂಡು ಮನಕರಗಿ, ಅವರಿಗೆ ಊಟಕೊಡಿಸುವುದು, ರಸ್ತೆ ದಾಟಲು ಕಷ್ಟಪಡುತ್ತಿರುವ ವೃದ್ಧರಿಗೆ ಕೈಹಿಡಿದು ರಸ್ತೆ ದಾಟಿಸುವುದು ಕೂಡಾ ಪ್ರೀತಿಯ ಒಂದು ಭಾಗವಾದ ಕಾಳಜಿಯಿಂದಲೇ. ನಮ್ಮ ಸನಿಹದಲ್ಲಿರುವ ಪ್ರತಿಯೊಬ್ಬರನ್ನೂ ಚೆನ್ನಾಗಿ ಮಾತನಾಡಿಸುತ್ತ, ಖುಷಿಯಿಂದ ಬಾಳುವುದೂ ಪ್ರೀತಿಯಿಂದಲೇ. ಸ್ನೇಹಿತರೊಂದಿಗೆ ಅತಿಯಾಗಿ ಬೆರೆತು ಚಿಕ್ಕ ಪುಟ್ಟ ಕಾರಣಗಳಿಗೆಲ್ಲ ಕೋಪಿಸಿಕೊಳ್ಳುವುದೂ ಅವರ ಮೇಲಿನ ಪ್ರೀತಿಯ ಕಾರಣದಿಂದಲೇ... 

               " ಪ್ರೀತಿಯಿಲ್ಲದ ಮೇಲೆ ಹೂ ಅರಳೀತು ಹೇಗೆ? ಮೋಡಕಟ್ಟಿ ಮಳೆ ಸುರಿದೀತು ಹೇಗೆ? ಪ್ರೀತಿಯಿಲ್ಲದ ಮೇಲೆ......" ಎಂಬ ಜಿ.ಎಸ್.ಎಸ್.ರವರ ಕವನದ ಸಾಲುಗಳು ನೆನಪಾಗುತ್ತವೆ. ಪ್ರೀತಿ ಇಲ್ಲವಾದರೆ ಬಹುಶಃ ಈ ಜಗತ್ತೇ ಶೂನ್ಯ. ಪ್ರೀತಿಯಿಲ್ಲದ ಬದುಕನ್ನು ಕಷ್ಟ ಅಲ್ವಾ ಸ್ನೇಹಿತರೇ?... ಪ್ರೀತಿಯಿಲ್ಲದೇ ಬರೆದ ಕವಿಯಿಲ್ಲ. ಮನದಿ ಮೂಡುವ ಭಾವನೆಗಳು ಕವನದ ಸಾಲಾಗಲೂ ಪ್ರೀತಿ ಬೇಕೇ ಬೇಕು. ಪ್ರೀತಿ ಅಂಗೈಬೊಗಸೆಯಲ್ಲಿ ಹಿಡಿದ ನೀರಿನಂತೆ. ಜಾಗರೂಕತೆ ಅತ್ಯಗತ್ಯ. ಕೈ ಸ್ವಲ್ಪ ಅಲುಗಿದರೂ, ಸಡಿಲಿಸಿದರೂ ನೀರು ದಾರಿಪಾಲೇ ಸರಿ! ಸಮಯ ಜಾರಿದಂತೆ ಬೊಗಸೆಯೊಳಗಿನ ನೀರು ಹನಿ ಹನಿಯಾಗಿ ಬೀಳಲಾರಂಭಿಸುತ್ತದೆ. ಎಷ್ಟೋ ಹೊತ್ತಿನ ಬಳಿಕ ಅದು ಇಲ್ಲವಾಗುತ್ತದೆ. ಆಗ ಕೈ ಖಾಲಿ !!! ಪ್ರೀತಿಯನ್ನು ಬೊಗಸೆಯ ನೀರಿಗೆ ಸಮೀಕರಿಸಿದರೆ ಅಂತ್ಯದಲ್ಲಿ ಪ್ರೀತಿ ಮಾಯವಾಗುತ್ತದೆಯೇ? ಆರಂಭದಲ್ಲಿ ಬಹಳ ಒಲವು ತೋರಿಸುವ ಯುವಪ್ರೇಮಿಗಳಲ್ಲಿ ದಿನ ಕಳೆದಂತೆ ಪ್ರೀತಿ ಕಮ್ಮಿಯಾಗುತ್ತದೆಯೇ? ( ಹೌದು ಅಥವಾ ಇಲ್ಲ ಎಂಬ ಉತ್ತರ ನಿಮ್ಮ ಆಲೋಚನೆಗೆ ಬಿಟ್ಟಿದ್ದು. ಇಲ್ಲಿ ಪ್ರಶ್ನೆ ಮಾತ್ರ ನನ್ನದು) ಆದರೆ ಎಂದಿಗೂ ಬತ್ತದ ಮಮತಾಮಯಿ ಆ ತಾಯಿಯ ಪ್ರೀತಿ ಮಾತ್ರ ಶರಧಿಯ ಉದಕದಂತೆ. ಅದು ಖಾಲಿಯಾಗುವುದೇ ಇಲ್ಲ!.... 

            ಈ ನಾಲ್ಕು ದಿನದ ಜೀವನದಲ್ಲಿ ಎಷ್ಟೊಂದು ಭಾವನೆಗಳು, ತುಮುಲಗಳು, ಯೋಚನೆಗಳು, ಚಿಂತನೆಗಳು, ಆಲೋಚನೆಗಳು...... ಕೆಲವರು ಅದನ್ನು ಸಶಕ್ತವಾಗಿ ಅಭಿವ್ಯಕ್ತಿಗೊಳಿಸುತ್ತಾರೆ. ಕವಿ ಬರೆಯುತ್ತಾನೆ. ಕಲಾಕಾರ ಚಿತ್ರಿಸುತ್ತಾನೆ. ಶಿಲ್ಪಿ ಕಲ್ಲಿಗೆ ಸುಂದರ ಪ್ರತಿಮೆಯ ರೂಪ ನೀಡುತ್ತಾನೆ. ಇವೆಲ್ಲವೂ ಅವರ ಕಾರ್ಯದ ಮೇಲಿನ ಒಲವಿನಿಂದಲೇ.... ಪ್ರತಿ ಚರಾಚರಗಳಿಗೂ, ಲೋಕದ ಸಮಸ್ತ ಜೀವಾತ್ಮಗಳಿಗೂ ಪ್ರೀತಿ ಎಂಬ ಒಂದು ವಿವರಿಸಲಾಗದ ಅನುಭೂತಿ ಇದ್ದೇ ಇರುತ್ತದೆ. " ಕಾಣಿಸದ ಕಾವ್ಯ ಅದು..." ಎಂಬ ನೆನಪಿರಲಿ ಚಿತ್ರದ ಹಾಡು ಸ್ಮೃತಿಪಟಲದಲ್ಲಿ ಮೂಡಿ ಮರೆಯಾಗುತ್ತದೆ. ಪ್ರೀತಿಯ ಬಗ್ಗೆ ಅದೆಷ್ಟೋ ಸಹಸ್ರ ಸಹಸ್ರ ಕವನಗಳು, ಲೇಖನಗಳು ಮೂಡಿಬಂದಿವೆ. ಬರುತ್ತಲೇ ಇವೆ. ಎಲ್ಲವೂ ವಿಶೇಷ, ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ......ಪ್ರೀತಿಯ ಬಗ್ಗೆ ಪ್ರತಿಯೊಬ್ಬರ ಧೋರಣೆ ಬೇರೆ ಬೇರೆಯೇ... ಈ ಪ್ರೀತಿ ಎಂಬ ವಿಷಯವೇ ಅಂಥದ್ದು. ಸುಳಿಯಂತೆ ಸೆಳೆಯುವ, ಕೋಲ್ಮಿಂಚಿನಂತೆ ಅರೆಕ್ಷಣದಲ್ಲೇ ಮರೆಯಾಗುವ ಕಣ್ಣಿಗೆ ಕಾಣದ ಅನುಭವ....ಭಾವಲಹರಿಯ ಅನುಭಾವ....ಕಲ್ಪನೆಯೆಂಬ ಕುದುರೆಗೆಟುಕದ ನವಕಾವ್ಯ....ಬಹುಶಃ ಪ್ರೀತಿಯೆಂದರೆ ಯೋಚಿಸುತ್ತಾ ಸಾಗಿದಂತೆಲ್ಲ ಹೊಸ ಹೊಸ ಎಳೆಗಳೊಂದಿಗೆ ಎದುರಾಗುವ ಅಕ್ಷಯಪಾತ್ರೆಯ ಧಾತುವಿರಬಹುದೇನೋ..... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...