ನಿಮಗೆ "ಸ್ತ್ರೀ" ಎಂದಾಕ್ಷಣ ಏನು ನೆನಪಾಗುತ್ತದೆ? ಅಮ್ಮ, ತಂಗಿ, ಮಗಳು, ಪತ್ನಿ, ಮೃದುತ್ವ, ಸೌಂದರ್ಯ, ಶಾಪಿಂಗ್, ಕೊನೆಯಿಲ್ಲದ ಮಾತುಕತೆ?... ಮತ್ತೆ?!ಅದೇನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಗುಣ-ಸ್ವಭಾವದ ಒಂದು ವ್ಯಕ್ತಿತ್ವವಿದೆ. ಪುರುಷ - ಸ್ತ್ರೀ ಎಂಬುದು ಬರೀ ಲಿಂಗದ ವಿಧಗಳಷ್ಟೇ. ಅದರಾಚೆಗೆ ಪ್ರತಿ ವ್ಯಕ್ತಿಗೂ ತನ್ನದೇ ಆದ "ವ್ಯಕ್ತಿತ್ವ" ವಿದೆ, "ತನ್ನತನ" ವಿದೆ, ಮಹತ್ವಾಕಾಂಕ್ಷೆಗಳಿವೆ. ಅದು ಲಿಂಗವನ್ನಾಧರಿಸಿ ಬಂದಿದ್ದಲ್ಲ. ವ್ಯಕ್ತಿಯ ಬಾಲ್ಯ, ಅವರು ಬೆಳೆದು ಬಂದ ಪರಿಸರ, ಅವರ ಬದುಕಿನ ಗುರಿ, ಗುರಿಯೆಡೆಗೆ ಸಾಗುವ ದೃಢ ನಿಷ್ಠೆಯ ಮೇಲೆ ನಿರ್ಧರಿತವಾಗುತ್ತದೆ. ಒಬ್ಬರಿಗೆ ಹೂವೆತ್ತಿದಂತೆ ಸುಲಭವಿರುವ ಕೆಲಸ, ಮತ್ತೊಬ್ಬರಿಗೆ ಕಬ್ಬಿಣದ ಕಡಲೆಯಾಗಿರಬಹುದು. ಒಬ್ಬರಿಗೆ ಅಸಾಧ್ಯವಾದದ್ದು ಇನ್ನೊಬ್ಬರಿಗೆ ಸಾಧ್ಯವಾಗಬಹುದು. ಇಂಜಿನಿಯರೊಬ್ಬನಿಗೆ ಇನ್ಕಂ ಟ್ಯಾಕ್ಸ್ ಲೆಕ್ಕಮಾಡಲು ಕೊಟ್ಟು, ಸಿಎಗಳಿಗೆ ಕೋಡಿಂಗ್ ಬರೆಯಲು ಕೊಟ್ಟರೆ ಏನಾಗಬಹುದು? ಕವಿಯೋರ್ವನಿಗೆ ಚಿತ್ರ ಬರೆಯಲು ಕೊಟ್ಟು, ಚಿತ್ರಕಾರನಿಗೆ ಕತೆ ಬರೆಯಲು ಹೇಳಿದರೆ ಏನಾಗಬಹುದು?...ಕೇವಲ ನಮ್ಮ ಕಣ್ಣಿಗೆ ಕಂಡದ್ದನ್ನಷ್ಟೇ ನೋಡಿ ಇನ್ನೊಬ್ಬರ ವ್ಯಕ್ತಿತ್ವ ಅಳೆಯಲು ಹೋಗುವ ನಮ್ಮ ದಡ್ಡತನಕ್ಕೆ ಏನೆನ್ನಬೇಕು? ಅಲ್ಲವಾ? ಇಲ್ಲಿ ಯಾರೂ ಪರಿಪೂರ್ಣರಲ್ಲಾ. ಹಾಗೆಯೇ ಪರಿಪೂರ್ಣತೆ ಎಂಬುದು ಅಸಾಧ್ಯವೇನೂ ಅಲ್ಲ.
ತಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಮೇರಿಕೋಂ, ಮೈಥಾಲಿರಾಜ್, ಕಲ್ಪನಾಚಾವ್ಲಾ, ಪ್ರಿಯಾಂಕಾ ಚೋಪ್ರಾ, ಫಲ್ಗುನಿ ನಾಯರ್, ನಿರ್ಮಲಾ ಸೀತಾರಾಮನ್, ಸರೋಜಿನಿ ನಾಯ್ಡು, ಲತಾ ಮಂಗೇಶ್ಕರ್, ಸುಧಾಮೂರ್ತಿ, ಅನುಪಮಾ ನಿರಂಜನ್... ಹೀಗೆ ಹಲವಾರು ಮಹಿಳೆಯರು ಇಂದಿಗೂ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ. ಆದರೆ ಆ ಹಂತ ತಲುಪುವ ಅವರ ಪಯಣ ಸುಲಭವಾಗಿತ್ತೇ?! ಒಮ್ಮೆ ಯೋಚಿಸಿ ನೋಡಿ. ನಾವು ಸುಲಭ ಎಂದುಕೊಂಡಿರಬಹುದು ಆದರೆ ಅವರ ಪಾಲಿಗದು ಖಂಡಿತಾ ಸುಲಭವಲ್ಲ !! ಸಾಧನೆಯ ಹಾದಿಯಲ್ಲಿ ಪ್ರತಿಯೊಂದು ಮೆಟ್ಟಿಲು ಏರುವಾಗಲೂ ಹಲವು ಅಡೆತಡೆಗಳು ಸಹಜ. ಅವುಗಳನ್ನು ಎದುರಿಸಿ, ಗೆಲ್ಲುವುದು ಅನಿವಾರ್ಯ. ಆದರೆ ಈ ನಿಟ್ಟಿನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಅಡೆತಡೆಗಳು ತುಸು ಹೆಚ್ಚೇ.. ! ನೀವು ನಂಬಿ ಬಿಡಿ, ಕಾಲಿನ ಸಂಕೋಲೆಗಳನ್ನು ಕಡಿಯಲೂ ಆಗದೇ, ತೊಡಲೂ ಆಗದೇ ತಡವರಿಸುತ್ತಲೇ ತುದಿಗೇರುವ ಹವಣಿಕೆ ಮಹಿಳೆಯದ್ದು. ಇದಕ್ಕೆ ದೇಶ, ಭಾಷೆಗಳ ಬೇಧವೂ ಇಲ್ಲ, ಭಾವ, ಬಣ್ಣಗಳ ಹಂಗೂ ಇಲ್ಲ. ಇನ್ನು ಅವರವರ ಪ್ರತಿಭೆಗೆ ಪ್ರೋತ್ಸಾಹ ನೀಡುವ ಪಾಲಕರು, ಹೊಂದಿಕೊಳ್ಳುವ ಮನೋಭಾವದ ಜೀವನ ಸಂಗಾತಿ ಸಿಕ್ಕರೆ ದಾರಿ ಸುಗಮ. ಇಲ್ಲವಾದರೆ ಬದುಕು, ಬಹು ಕಷ್ಟಪಟ್ಟು ಎಳೆಯುವ ಹೊರೆ ತುಂಬಿದ ಬಂಡಿಯೇ ಹೊರತು, ಹೂವಿನ ಹಾದಿಯಂತೂ ಆಗಲಾರದು. ಅದರಲ್ಲೂ ಮಹಿಳೆಯರಿಗೆ ವಯಸ್ಸು ಹೆಚ್ಚಿದಂತೆ ಜವಾಬ್ದಾರಿಗಳು ಹೆಚ್ಚುತ್ತವೆ. ಹೊಸ ತಲೆಬಿಸಿಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಜನ ಏನೆಂದುಕೊಳ್ಳುತ್ತಾರೋ ಎಂಬ ಯೋಚನೆ ಕೂಡಾ. ಬೇಡದ ಸಾವಿರ ಆಲೋಚನೆಗಳು ತಲೆಯನ್ನು ಹೊಕ್ಕು, ಮೆದುಳನ್ನು ಗೆದ್ದಲಿನಂತೆ ಕೊರೆಯುತ್ತಿದ್ದರೆ ಶ್ರದ್ಧೆ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇವೆಲ್ಲದರ ಗದ್ದಲಗಳ ಮಧ್ಯೆಯೂ , ಮನಸ್ಸನ್ನು ಏಕಾಗ್ರಗೊಳಿಸಿ, ಗುರಿಯೆಡೆಗೆ ಹೆಜ್ಜೆಯಿಡುವ ದೃಢಸಂಕಲ್ಪ ಹೊಂದಿದ ಕೆಲವರು ಸಾಧನೆಯ ಶಿಖರವನ್ನೇರುತ್ತಾರೆ. ಸಂತುಷ್ಟ ಭಾವ ಪಡೆಯುತ್ತಾರೆ. ಇನ್ನು ಕೆಲವರು ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ. ಅನೇಕರು ಎಲ್ಲ ಬಯಕೆಗಳ ತುಡಿತಕ್ಕೆ ಬೇಲಿ ಹಾಕಿ ಬದುಕುತ್ತಾರೆ. ಇದೆಲ್ಲದರ ನಡುವೆ ಈ ಸಾಧಿಸಿದವರ ಕಥೆ ಇದೆಯಲ್ಲಾ, ಅದೇ ಅನೇಕರಿಗೆ ಪ್ರೇರಣೆಯಾಗೋದು. ಇವೆಲ್ಲ ಹೇಗೆ ಸಾಧ್ಯ? ಅವಳು ಕಾಣುವ ಕನಸುಗಳಿಂದ, ಏನಾದರೂ ಸಾಧಿಸಬೇಕೆಂಬ ಅತೀವ ಬಯಕೆಯಿಂದ, ಸಮಯದ ಸದ್ಭಳಕೆ ಮಾಡುವ ಆಸೆಯಿಂದ. ತನ್ನತನವನ್ನು ಜಗಕ್ಕೆ ತೋರಿಸುವ ಉತ್ಕಟೇಚ್ಛೆಯಿಂದ.
ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸ್ತ್ರೀಯರಿಗೆ ತುಸು ಕಷ್ಟ. ಇನ್ನು ಕಷ್ಟಪಟ್ಟು ಉದ್ಯೋಗ ಪಡೆದರೆ, ಪ್ರಮೋಷನ್ ಮತ್ತಷ್ಟೂ ಕಷ್ಟ. ಕೇವಲ 'ಮಹಿಳೆ' ಎಂಬ ಕಾರಣಕ್ಕಾಗಿ ಕೆಲವು ಉನ್ನತ ಮಟ್ಟದ ಹುದ್ದೆಗಳು, ಪ್ರಮೋಷನ್ ಗಳು ಸಿಗುವುದಿಲ್ಲ. ಇದು ವಾಸ್ತವ! ಇನ್ನು ಕೆಲಸದಲ್ಲಿ ಹುಡುಗಿಯೊಬ್ಬಳು ಬೇಗ ಪ್ರಮೋಷನ್ ಪಡೆದುಕೊಂಡರೆ "ಅಯ್ಯೋ ಅವಳಾ? ಮ್ಯಾನೇಜರ್ ನಾ ಬುಟ್ಟಿಗೆ ಹಾಕೊಂಡಿದಾಳೆ, ಅದ್ಕೇ ಪ್ರಮೋಷನ್ ಸಿಕ್ಕಿದೆ" ಎಂದು ಎಲ್ಲರಿಂದ ಮಾತು. ಇನ್ನು ವಿವಾಹಿತ ಸ್ತ್ರೀಯರ ಅನಾನುಕೂಲಗಳ ಪಟ್ಟಿ ಹನುಮಂತನ ಬಾಲದಂತೆ ! ಒಂದೆಡೆ ಮನೆಯನ್ನು ಸಂಭಾಳಿಸಬೇಕು, ಇನ್ನೊಂದೆಡೆ ಆಫೀಸಿನ ಕೆಲಸ, ಮೇಲ್ವಿಚಾರಕರ ಒತ್ತಡ ನಿಭಾಯಿಸಬೇಕು. ಅದರಲ್ಲೂ ವಯಸ್ಸಾದ ಅತ್ತೆ ಮಾವ, ಎಳೆಯ ಮಕ್ಕಳು ಇದ್ದರೆ ಜವಾಬ್ದಾರಿಯ ಪಟ್ಟಿ ಇನ್ನೂ ಉದ್ದವಾಗುತ್ತದೆ. ಇಲ್ಲೊಂದು ಘಟನೆ ನೆನಪಾಯಿತು, ೮-೯ ಗಂಟೆಗಳ ಕಾಲ ನಿರಂತರವಾಗಿ ಟೀಮ್ಸ್ ಮೀಟಿಂಗ್ ನಲ್ಲಿ ಟ್ರೇನಿಂಗ್ ಕೊಡುವ ಸೀನಿಯರ್ ಮಹಿಳೆಯೊಬ್ಬರು ಸಡನ್ನಾಗಿ "ಒಂದೇ ಒಂದು ನಿಮಿಷ.." ಎಂದು ವಿರಾಮ ತೆಗೆದುಕೊಂಡು, ಮತ್ತೆ ಬಂದು "ಸಾರಿ... ನನ್ನ ಎರಡೂವರೆ ವರ್ಷದ ಮಗಳು ಆಡುತ್ತಾ ಬಿದ್ದುಬಿಟ್ಲು, ತುಂಬಾ ಅಳ್ತಾ ಇದ್ಲು, ಸಮಾಧಾನ ಮಾಡಿ ಬರೋಕೆ ತಡ ಆಯ್ತು.." ಎಂದು ಮತ್ತೆ ಟ್ರೇನಿಂಗ್ ಮುಂದುವರೆಸಿದರು. ನನಗಂತೂ ಆಕೆಯ ಮ್ಯಾನೇಜ್ಮೆಂಟ್ ಸ್ಕಿಲ್ ಬಗ್ಗೆ ಬಹಳ ಹೆಮ್ಮೆಯಾಯ್ತು. ಎಷ್ಟೇ ತಾಪತ್ರಯಗಳಿದ್ದರೂ ನಗುನಗುತ್ತ ತಮ್ಮ ಕೆಲಸವನ್ನು ನಿಷ್ಠೆಯಿಂದ ಸಮರ್ಪಕವಾಗಿ ಮಾಡುವ ಅವಳಿಗೆ ಪ್ರೇರಣೆ - ವೃತ್ತಿ ಜೀವನದಲ್ಲಿ ಒಳ್ಳೆಯ ಸ್ಥಾನ ಪಡೆಯುವ ಆಸೆ.
ಇನ್ನು ಕಲೆ, ಸಾಹಿತ್ಯ, ಚಲನಚಿತ್ರಗಳಂತಹ ಕ್ಷೇತ್ರಕ್ಕೆ ಬಂದರೆ ಮಹಿಳೆಯರ ಪರಿಸ್ಥಿತಿ ಇನ್ನೂ ಕಷ್ಟ. ಒಂದೋ, ಪ್ರತಿಭಾವಂತ ಮಹಿಳೆಯರು ತಮ್ಮ "ಮರ್ಯಾದೆ" ಗೆ ಹೆದರಿ, ತಮ್ಮ ಕೌಶಲ್ಯವನ್ನು ಪ್ರದರ್ಶಿಸದೇ ಎಲೆಮರೆಯ ಕಾಯಿಯಂತಾಗುತ್ತಾರೆ. ಇಲ್ಲವೇ, ಧೈರ್ಯ ಮಾಡಿ, ಸಾಮಾಜಿಕ ತಾಣದಲ್ಲಿ ತನ್ನ ಇರುವಿಕೆ ಗುರುತಿಸಿಕೊಂಡ ಹೆಣ್ಣು ಮಗಳೊಬ್ಬಳು ಸುಖಾಸುಮ್ಮನೆ ಯಾವುದೋ ಒಂದು ವಿಷಯಕ್ಕೆ "ಟ್ರೋಲ್" ಆಗುತ್ತಾಳೆ. ಪುರುಷರು ತೆರೆದುಕೊಂಡಷ್ಟು ದಾಷ್ಟ್ಯದಿಂದ ಮಹಿಳೆ ಕೆಲವೊಮ್ಮೆ ತೆರೆದುಕೊಳ್ಳಲು ಆಗದು. ಸಾಮಾಜಿಕ ಜಾಲತಾಣಗಳಲ್ಲಿ ಕತೆ, ಕವಿತೆ ಪ್ರಕಟಿಸುವ ಹುಡುಗಿಯರು ಜನಪ್ರಿಯತೆ ಪಡೆದರೆ, "ಅವಳ ಪಾದದ ಚಿತ್ರಕ್ಕೂ ಅಷ್ಟೇ ಕಾಮೆಂಟ್ ಗಳು ಬರ್ತವೆ. ಅವಳೇನು ಅಂಥಾ ದೊಡ್ಡ ಬರಹಗಾರ್ತಿಯಲ್ಲ ಬಿಡು.." ಎಂಬ ಜಡ್ಜ್ಮೆಂಟಲ್ ಫೀಡ್ ಬ್ಯಾಕ್. ಇನ್ನು ಸಿನಿರಂಗದಲ್ಲಿ 'ಕಾಸ್ಟಿಂಗ್ ಕೌಚ್' ನಂತಹ ಅಸಹ್ಯ ಸುಳಿಗಳಿಂದಾಗಿ ಹಲವಾರು ಪ್ರತಿಭಾವಂತ ಸ್ತ್ರೀಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ತಾನು 'ಹುಡುಗಿ' ಎಂಬುದನ್ನೇ ಅಸ್ತ್ರವಾಗಿಸಿಕೊಂಡು ಬಿಟ್ಟಿ ಜನಪ್ರಿಯತೆ ಗಳಿಸುವ, ಪರಿಸ್ಥಿತಿಯ ಲಾಭ ಪಡೆಯುವ ಕೆಲವರಿಂದಾಗಿ, ಉಳಿದ ಸ್ತ್ರೀಯರಿಗೂ ಕೆಟ್ಟ ಹೆಸರು. ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿರಲಿ ಮಹಿಳೆ ಇರಲಿ ಅವಳನ್ನು ಕಾಲೆಳೆಯದಿದ್ದರೆ ಸುದ್ದಿಗೆ ಜೀವವೇ ಇರುವುದಿಲ್ಲ. ಹೆಣ್ಣು ಏನು ಮಾಡಿದರೂ ತಪ್ಪು? ಗಂಡಿಗೆ ಈ ನಿಬಂಧನೆಗಳು ಏಕಿಲ್ಲವೋ?!
ಇಷ್ಟಾದರೂ ಅವಳು ಕನಸಿನ ಗೋಪುರ ಕಟ್ಟುತ್ತಾಳೆ. ಬಯಕೆಯ ಮಾಲೆಗೆ ಒಂದೊಂದೇ ಆಸೆಯ ಹೂಗಳನ್ನು ಪೋಣಿಸುತ್ತಾ ಸಾಗುತ್ತಾಳೆ. ಕಂಗಳಲಿ ಹೊಸ ಹೊಳಪು ತುಂಬಿ ಸುಂದರ ನಾಳೆಗಾಗಿ ಕಾಯುತ್ತಾಳೆ.
ನಿಜ ಹೇಳಬೇಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ಆಸೆ-ಕನಸುಗಳು ಹೆಚ್ಚು. ಒಬ್ಬಳಿಗೆ ಡಾಕ್ಟರ್ ಆಗುವ ಕನಸು, ಇನ್ನೊಬ್ಬಳಿಗೆ ಪ್ರಸಿದ್ಧ ನಟಿ/ನಿರೂಪಕಿ ಆಗುವ ಕನಸು, ಮತ್ತೊಬ್ಬಳಿಗೆ ದೊಡ್ಡ ಕಂಪೆನಿಯ ಡೈರೆಕ್ಟರ್ ಹುದ್ದೆ ಅಲಂಕರಿಸುವ ಗುರಿ, ಇನ್ನೊಬ್ಬಳಿಗೆ ತನ್ನ ಗಂಡ- ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುವ ಬಯಕೆ. ಹೀಗೆ ಒಬ್ಬೊಬ್ಬರದು ಒಂದೊಂದು ಆಸೆ, ಕನಸು. ಬಿಡುವಾದಾಗ ನಿಮ್ಮ ಸನಿಹದಲ್ಲಿರುವ ಗೆಳತಿ/ಸಹೋದ್ಯೋಗಿಗೆ ನಿನ್ನ ಆಸೆಗಳೇನೆಂದು ಕೇಳಿ ನೋಡಿ. ಅವರ ಆಸೆಗಳ ಪಟ್ಟಿ ಮುಗಿಯುವುದೇ ಇಲ್ಲ !! ಕೈಗೆಟುಕದ ಅನಂತ ಆಸೆಗಳಿಗೂ ಕನವರಿಸುತ್ತಾ ತಡಕಾಡುವ ಅವಳ ಪಾಲಿಗೆ ಕೆಲವೊಮ್ಮೆ ಕನಸುಗಳು ಕೈಗೂಡುವುದು ಸುಲಭವಾದರೂ ಅದನ್ನು ಅನುಭವಿಸುವಾಗ ಮಾತ್ರ ಮೃಗಜಲವನರಸಿ ಬಂದ ಆಯಾಸದಂತೆ ಭಾಸವಾಗುತ್ತದೆ.
ಒಂದು ಮಾತು ನೆನಪಿಡಬೇಕಿದೆ. ಬದುಕಿನಲ್ಲಿ ಬಯಕೆಗಳ ಬೋಗುಣಿ ಹಿಡಿದು ನಿಲ್ಲುವುದು ತಪ್ಪೇನಲ್ಲ. ಆದರೆ ಕನಸನ್ನು ನನಸಾಗಿಸುವಲ್ಲಿ ಅನುಸರಿಸುವ 'ಕ್ರಮ'ದ ಬಗ್ಗೆ ಗಮನ ಹರಿಸಿದರೆ ಒಳಿತು. ಒಬ್ಬ ಸ್ತ್ರೀ 'ಮಾಡಬೇಕಾದ' ಹಾಗೂ 'ಮಾಡಬಹುದಾದ' ಚಟುವಟಿಕೆಗಳ ಮಧ್ಯೆ ಒಂದು ಸಣ್ಣಗೆರೆಯಿದೆ. ಅದನ್ನು ಅರ್ಥೈಸಿಕೊಂಡು ನಮ್ಮ ಚೌಕಟ್ಟಿನಲ್ಲಿ ನಾವಿದ್ದರೆ ಜೀವನ ಸುಲಭ, ಹಾಗೇ ಸುಂದರ ಕೂಡಾ. ನೀವು ಸರಿದಾರಿಯಲ್ಲಿ ನಿಮ್ಮ ಗುರಿ ತಲುಪಿದರೆ ಯಾರೊಬ್ಬರ ಮಾತಿಗೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಆಸೆ, ಕನಸುಗಳು ಸಣ್ಣದಿರಲಿ, ದೊಡ್ಡದಿರಲಿ, ಅವು ನಿಮ್ಮವು. ಅದನ್ನು ಸಾಕಾರಗೊಳಿಸುವ ಕರ್ತವ್ಯ ಕೂಡ ನಿಮ್ಮದೇ. ಅಂಗೈಯಲ್ಲಿ ಮಿಣುಕುಹುಳ ಹಿಡಿದು ಸಂಭ್ರಮಿಸುವ ಪಕ್ಕದ ಮನೆಯ ಪುಟ್ಟಿಯಂತೆ, ಸಣ್ಣ-ಪುಟ್ಟ ಖುಷಿಗಳನ್ನು ಸಂಭ್ರಮಿಸಿ. ಬದುಕಿಬಿಡಿ ಒಮ್ಮೆ. ಮುಂಜಾವಿನ ತಂಬೆಲರ ಅಪ್ಪುಗೆಯ ಆಸ್ವಾದಿಸುತ್ತಾ, ಮುಸ್ಸಂಜೆಯ ನೇಸರನ ಸೊಬಗ ಕಣ್ತುಂಬಿಕೊಳ್ಳುತ್ತಾ. ಮತ್ತೆ ಮನದಂಗಳದಲ್ಲಿ ಸುಂದರ ನಾಳೆಗಳ ಬಗ್ಗೆ ಕನಸಿನ ಬೀಜ ಬಿತ್ತುತ್ತಾ. ಆಸೆಗಳ ಬಳ್ಳಿಗೆ ನೀರೆರೆದು ಸಾಕಾರದ ಮೊಗ್ಗರಳಿಸುತ್ತಾ, ಬೇಡವೆಂದರೂ ಬಿಡದೇ ಹೊಸೆವ ಬಂಧವಾಗಿ ಮನೆಗೂ ಮನಕ್ಕೂ ಚಪ್ಪರವಾಗುತ್ತಾ...
- R.R.B.
*ಫೇಸ್‌ಬುಕ್ ನಲ್ಲಿರುವ "ಸೌರಭ" ಪುಟದ "ನಾವು-ನೀವು-ಕನ್ನಡ" ಮಾಲಿಕೆ-೧ ಕ್ಕಾಗಿ ಬರೆದ ಲೇಖನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ