ಮರಣದಂಡನೆ ರದ್ದಾಗಬೇಕೆಂಬ ಮಹತ್ತ್ವಾಕಾಂಕ್ಷೆ ಹೊತ್ತು, ಅದಕ್ಕಾಗಿ ಜೀವವನ್ನೇ ಪಣಕ್ಕಿಡುವ ಸಾಮಾನ್ಯ ಯುವಕನೋರ್ವನ ಬದುಕ ಕಥನವೇ 'ಅಭಿಲಾಷೆ'ಯ ಜೀವಾಳ. ಅಂದ ಹಾಗೆ 'ಅಭಿಲಾಷೆ' ಎಂಬುದು ನನ್ನ ನೆಚ್ಚಿನ ಲೇಖಕರಾದ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿ. (ಕನ್ನಡಕ್ಕೆ ಅನುವಾದ - ಸಂಡೂರು ವೆಂಕಟೇಶ್) ಹಿಂದೆಯೇ ಇದನ್ನು ಓದಿದ್ದೆನಾದರೂ ಇದರ ಕುರಿತು ಹೇಳುವ ಮನಸ್ಸಾಗಿದ್ದು ಮಾತ್ರ ಈಗ...
ಬೆಳಿಗ್ಗೆ ಓದಲು ಕುಳಿತವಳು ಪೂರ್ತಿ ಓದಿ ಮುಗಿಸಿದ ಮೇಲೆಯೇ ಊಟ ಮಾಡಿದ್ದು. ಯಂಡಮೂರಿಯವರ ಬರಹಗಳೇ ಹಾಗೆ. ಆರಾಮಾಗಿ ಓದಿಸಿಕೊಂಡು ಹೋಗುತ್ತವಲ್ಲದೇ ಕಿಂಚಿತ್ತೂ ಬೋರೆನಿಸುವುದಿಲ್ಲ - ಕಡಲಕಿನಾರೆಯಲ್ಲಿ ಅಲೆಗಳೊಂದಿಗೆ ಆಟವಾಡಿದ ಹಾಗೆ !!...
ಹಲವಾರು ದೇಶಗಳು ಮರಣದಂಡನೆಯನ್ನು ರದ್ದುಮಾಡಿವೆ. ಆದರೆ ನಮ್ಮ ಭಾರತದಲ್ಲಿನ್ನೂ ಸ್ಟೇ ಆರ್ಡರ್ ಗಳ ಹಂತದಲ್ಲೇ ಇದೆ. ಈ ಕಠೋರ ಶಿಕ್ಷೆಯಿಂದಾಗಿ ಎಷ್ಟೋ ಅಮಾಯಕರು ತಾವು ಮಾಡಿರದ ತಪ್ಪಿಗೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರನ್ನೇ ನಂಬಿ ಜೀವನ ನಡೆಸುತ್ತಿದ್ದ ಬಡಕುಟುಂಬಗಳೆಷ್ಟೋ ದಿಕ್ಕಾಪಾಲಾಗಿ ಹೋಗಿವೆ. ಅದಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ಓಡಾಡಿಕೊಂಡಿದ್ದ ಮನೆಯ ಸದಸ್ಯನೊಬ್ಬ ತನ್ನದಲ್ಲದ ತಪ್ಪಿಗೆ ಈ ಲೋಕದಿಂದಲೇ ಕಣ್ಮರೆಯಾದಾಗ ಅವನ ಕುಟುಂಬದ ನೋವನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ?? ಕೊಲೆ ಮಾಡುವುದು ಘೋರ ಅಪರಾಧ ಎಂಬುದು ಸರಿ. ಆದರೆ ಅದೇ ಕಾರಣಕ್ಕೆ ತಪ್ಪಿತಸ್ಥನನ್ನು ಸಾಯಿಸುವುದೆಷ್ಟು ಸರಿ? ತಿದ್ದಿಕೊಳ್ಳಲು ಅವಕಾಶವೇ ಇಲ್ಲದಂತೆ ಮಾಡುವುದು ಎಷ್ಟು ಸಮಂಜಸ? ಅಷ್ಟಕ್ಕೂ ಒಬ್ಬರ ಜೀವತೆಗೆಯಲು ಇನ್ನೊಬ್ಬರಿಗೆ ಅನುಮತಿ ಕೊಟ್ಟವರ್ಯಾರು?...ಹೀಗೆ ಆಲೋಚನಾಸರಣಿ ಕಾದಂಬರಿ ಓದಿ ಮುಗಿಸಿದ ಮೇಲೆ ನಮ್ಮನ್ನು ಕಾಡತೊಡಗುತ್ತದೆ...
ಕಥೆಯಲ್ಲಿ ಬರುವ ಸರ್ವೋತ್ತಮರಾವ್, ಚಿರಂಜೀವಿ, ಅರ್ಚನಾ, ಪ್ರಕಾಶ್, ಸ್ಪೂರ್ತಿ, ದಾರಾಸಿಂಗ್, ಓಬಳೇಶ, ವಿಷ್ಣು ಶರ್ಮ, ಸುಶೀಲಾ....ಹೀಗೆ ಎಲ್ಲ ಪಾತ್ರಗಳೂ ಕಾದಂಬರಿಯ ಆಳಕ್ಕೆ ಕರೆದೊಯ್ಯುತ್ತವೆ. ಓದುವ ಪ್ರತಿಕ್ಷಣವೂ "ಮುಂದೇನು?.." ಎಂಬ ಆಸಕ್ತಿ, ಉದ್ವೇಗವನ್ನು ಹುಟ್ಟು ಹಾಕುತ್ತವೆ. ಒಬ್ಬರಿಗಿಂತ ಒಬ್ಬರು ಚಾಣಾಕ್ಷರಂತೆ ಕಾಣುತ್ತಾ ಹೋಗುತ್ತಾರೆ. ದೊಡ್ಡ ಸಾಹಸಕ್ಕೆ ಕೈ ಹಾಕಲು ಹೋಗುವಾಗ ಸಣ್ಣ ಪುಟ್ಟ ತಪ್ಪುಗಳೇ ಮುಳುವಾಗಿ ಜೀವನವೇ ಬಹುದೊಡ್ಡ ಪ್ರಶ್ನೆಯಾಗುತ್ತದೆ. ಕೆಲವೊಮ್ಮೆ ಅದರಿಂದ ಹೊರಬರುವ ದಾರಿಗಳೇ ಮುಚ್ಚಿಹೋಗಿವೆ ಎಂಬ ಅಭದ್ರತಾ ಭಾವ ಮೂಡುತ್ತದೆ.... ನಮ್ಮ ದೇಶದ ಕಾನೂನಿನ ಲೋಪಗಳ ಮೇಲೆ ಬೆಳಕು ಬೀರುತ್ತಲೇ ಮರಣದಂಡನೆಗೊಳಗಾದ ಖೈದಿಯ ಮನಸ್ಥಿತಿಯನ್ನು ಯಂಡಮೂರಿಯವರು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ನಾಳೆ ಸಾಯುತ್ತೇನೆಂದು ತಿಳಿದಾಗ ವ್ಯಕ್ತಿಯೊಬ್ಬನಲ್ಲಿ ಮೂಡುವ ವಿಚಿತ್ರ ಭಾವನೆಗಳು, ಗೊಂದಲಗಳು, ಪ್ರಶ್ನೆಗಳು, ಕೊನೆಯಾಸೆ, ನಿರಾಸೆ, ಜಿಗುಪ್ಸೆ, ಬದುಕಿನ ಬಗ್ಗೆ ನಿಲುವು, ತತ್ತ್ವಜ್ಞಾನದ ಕಡೆಗಿನ ಒಲವು, ಹೇಳಿಕೊಳ್ಳಲಾಗದಂಥ ತಳಮಳ, ಸಂಕಟ ಎಲ್ಲವೂ ಹೃದಯಸ್ಪರ್ಶಿ!!
ಹೋಟೇಲಿನಲ್ಲಿ ಎಲ್ಲರ ಮುಂದೆ ಜೋರಾಗಿ ಸೀನಲೂ ಭಯಪಡುತ್ತಿದ್ದ ಅಂಜಿಕೆಯ ಯುವಕ ತನ್ನ ಬದುಕಿನ ಬಹುಮುಖ್ಯ ಗುರಿಸಾಧನೆಗಾಗಿ ಸಂಪೂರ್ಣವಾಗಿ ಬದಲಾಗುವ ಆ ಪಯಣ ನಿಜಕ್ಕೂ ಕಥೆಯ ಮೆರುಗೆನ್ನಬಹುದು. ಎಲ್ಲ ಕಾದಂಬರಿಯಂತೆ ಇದರಲ್ಲೂ ಪ್ರೀತಿ, ಪ್ರೇಮ ಇದೆಯಾದರೂ ಕೊಂಚ ವಿಭಿನ್ನ ಎನಿಸುತ್ತದೆ. ಏನೋ ಊಹಿಸಿಕೊಂಡರೆ ಕೊನೆಯಲ್ಲಿ ಕಥೆ ಮಹತ್ತರ ಬದಲಾವಣೆ ಪಡೆದುಕೊಳ್ಳುತ್ತದೆ. ಕೊನೆಯಲ್ಲಿ ಹಣ, ಕೀರ್ತಿಯ ಬೆನ್ನತ್ತುವ ಜನ ಹೀಗೂ ಇರುತ್ತಾರಾ?... ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತದೆ. "ಸೆಕ್ಷನ್ ೩೦೨ ರದ್ದಾಗಬೇಕು..." ಎಂಬ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ. ಕೊನೆಯ ಸಾಲು ಓದಿಮುಗಿಸಿ ಪುಸ್ತಕ ಮುಚ್ಚುವಾಗ ಒಂದರೆ ಕ್ಷಣ ತಲೆ ಖಾಲಿ ಖಾಲಿ..
ಮರುಕ್ಷಣವೇ ಹಲಾವಾರು ಪ್ರಶ್ನೆಗಳ ಉದ್ಭವ !!...
ಯೋಚಿಸುತ್ತಾ ಹೋದರೆ ಆಲೋಚನಾಲಹರಿಗೆ ಹತ್ತು ಹಲವು ಮುಖಗಳು - ಹರಿಯುವ ನದಿಯ ತಿರುವಿನ ಹಾಗೆ!! ಅದೇನೇ ಇರಲಿ, 'ಅಭಿಲಾಷೆ'ಯನ್ನು ಓದಿ ನಂಗಂತೂ ಖುಷಿ ಆಯ್ತು. ಸಾಧ್ಯವಾದರೆ ನೀವೂ ಓದಿ ಹೇಗಿದೆ ಅಂತ ಹೇಳಿ... :) :)
- R.R.B.