ಶುಕ್ರವಾರ, ಸೆಪ್ಟೆಂಬರ್ 15, 2017

ಅನಾಮಧೇಯ

ಬಾಲ್ಯಕೆ ಮೆರುಗು ಹಚ್ಚಿದ ಅಡಿಕೆಹಾಳೆಯ ಬಂಡಿ 
ರೈಲುಹಳಿಗಳ ನಡುವಿಟ್ಟು ಉಬ್ಬಿಸಿದ ಆ ನಾಣ್ಯ 
ಉಯ್ಯಾಲೆಯೇ ನೆಪವಾಗಿ ನಡೆಯುತ್ತಿದ್ದ ಜಗಳ 
ತಪ್ಪು ತಿದ್ದುವ ಅಜ್ಜಿಯ ಪ್ರೀತಿಯಾ ಬೈಗುಳ 
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ ! 

ತೋಟದ ಕಾಲುದಾರಿಯ ತುದಿಯ ಜಾರು 
ಮರುಕಳಿಸುವ ಸವಿನೆನಪುಗಳ ಪಟ್ಟಿ ನೂರು 
ದಿನವಿಡೀ ಗದ್ದೆಯಲಿ ದುಡಿವ ಹಳೆ ಜೀವ 
ಕೂಡಿಬಾಳುವ ಹಿರಿಯರ ಸುಮಧುರ ಭಾವ 
ಎಲ್ಲವೂ ಮೊದಲಿದ್ದ ಹಾಗೆಯೇ..... 
ಬದಲಾಗಿದ್ದು 'ನಾನು' ಮಾತ್ರ ! 

ಅಂಗಳದಿ ತಂಗಿಯ ಅಕ್ಕರೆಯ ಗುಲಾಬಿಗಿಡ 
ಅಟ್ಟದ ಮೇಲಿನ ಗೋಣಿಯ ಕೆಳಗಿನ ತುಂಡು ಹಾಳೆ 
ಪ್ರೀತಿಯ ಗೆಳತಿ ಕೊಟ್ಟ ಮೊದಲ ನವಿಲುಗರಿ 
ಅತ್ತುಕರೆದು ಜಾತ್ರೆಯಲಿ ಕೊಂಡ ಬಣ್ಣದ ಬುಗುರಿ 
ಎಲ್ಲವೂ ಮೊದಲಿದ್ದ ಹಾಗೆಯೇ..... 
ಬದಲಾಗಿದ್ದು 'ನಾನು' ಮಾತ್ರ ! 

ಖಾಲಿ ವರಾಂಡದಲಿ ಗೋಡೆಗಡಿಯಾರದ ಸದ್ದು 
ಮನೆ ಮುಂದೆ ಮಕ್ಕಳ ಕುಂಟೆಬಿಲ್ಲೆಯ ಆಟ 
ಹಿತ್ತಲಲಿ ಹೆಂಗಸರ ಮುಗಿಯದ ಮಾತುಕತೆ 
ಅದ್ಯಾರದೋ ಮಗಳು ದೊಡ್ಡವಳಾದಳೆಂಬ ಸುದ್ದಿ 
ಎಲ್ಲವೂ ಮೊದಲಿದ್ದ ಹಾಗೆಯೇ..... 
ಬದಲಾಗಿದ್ದು 'ನಾನು' ಮಾತ್ರ ! 

ಊರ ಕೆರೆಯಂಚಲಿ ಗಂಡಸರ ಗುಸುಗುಸು 
ನೆರಳಾಗುತ್ತಿದ್ದ ರಸ್ತೆಯಂಚಿನ ಮಾವಿನ ಮರ 
ಬದುಕಮೆನೆಗೆ ತಂದ ನೆನಪ ಹೊಯ್ಗೆ ರಾಶಿ 
ನನ್ನಾಕೆಯ ಮುಖದಿ ಮಾಸದ ಮುಗುಳ್ನಗು 
ಎಲ್ಲವೂ ಮೊದಲಿದ್ದ ಹಾಗೆಯೇ..... 
ಬದಲಾಗಿದ್ದು 'ನಾನು' ಮಾತ್ರ ! 

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...