" ಹೊರಟುಬಿಟ್ಟೆಯಾ ಸೌಮಿತ್ರಿ ನನ್ನ ಏಕಾಂಗಿಯಾಗಿಸಿ, ಹಲವು ಪ್ರಶ್ನೆಗಳನು ನಿರುತ್ತರಗೊಳಿಸಿ, ಭಾವಗಳ ಬೇಲಿಯಲಿ ಬಂಧಿಸಿ... ಹೊರಡುವ ಮುನ್ನ ನೆನಪಾಗಲಿಲ್ಲವೇ ನಾನು? ಈ ಊರ್ಮಿಳೆಯ ನೆನಪು ಆಗಲೇ ಇಲ್ಲವೇ?... ಹೀಗೆ ವಿಚಿತ್ರ ಸಂಕಟ ಅನುಭವಿಸಲು ನಾನು ಮಾಡಿದ ತಪ್ಪಾದರೂ ಏನು?...ಈ ದೊಡ್ಡ ಅರಮನೆಯಲ್ಲಿ ಸಂಪತ್ತಿದೆ.ವೈಭವವಿದೆ. ವೈಭೋಗವಿದೆ.ಆಳು - ಕಾಳುಗಳಿವೆ. ಬದುಕಲು ಬೇಕಾದ ಎಲ್ಲವೂ ಇದೆ. ಆದರೆ...ಆದರೆ ನೀನೇ ಇಲ್ಲವಲ್ಲಾ ಇನಿಯಾ... ಹೋದೆಯಾ ಮತ್ತೆ ಬಾರೆನೆಂಬಷ್ಟು ದೂರಕ್ಕೆ..ಯಾರೂ ತಲುಪಲಾಶಿಸದ ಗಮ್ಯಕ್ಕೆ...
ಜನಕ ಪುತ್ರಿಯರ ಬದುಕ ಬಂಡಿ ಹೀಗೆ ಸಾಗುತ್ತದೆಯೆಂದು ನಾನು ಹಿಂದೆಂದೂ ಭಾವಿಸಿರಲಿಲ್ಲ. ಒಂದೇ ದಿನ ಅಕ್ಕ ಸೀತೆ ಶ್ರೀರಾಮನ ಮಡದಿಯಾಗಿ, ನಾನು ನಿನ್ನವಳಾಗಿ ಹೊಸ ಜೀವನ ಆರಂಭಿಸಿದೆವು. ಆಗ ಮುಂದೆರಗುವ ಕಷ್ಟಗಳ ಕುರಿತು ಕಿಂಚಿತ್ತೂ ಅರಿವಿರಲಿಲ್ಲ ನಮಗೆ. ಒಳ್ಳೆಯದೇ ಆಯ್ತು ಬಿಡು. ಮೊದಲೇ ಎಲ್ಲ ಆಗು - ಹೋಗುಗಳ ಅರಿತಿದ್ದರೆ ಆ ಕ್ಷಣದ ಸಂತಸವನ್ನು ಅನುಭವಿಸುವ ಭಾಗ್ಯವೂ ನಮಗಿರುತ್ತಿರಲಿಲ್ಲವೇನೋ....
ಜೀವನ ಒಂದು ಸುಂದರ ಕನಸು ಎಂದು ನಂಬಿದ್ದೆ ನಾನು. ಅಯೋಧ್ಯೆಯ ಅರಮನೆಯಲ್ಲಿ ಅಸಂಖ್ಯ ಖುಷಿಯ ಕ್ಷಣಗಳನ್ನು ಕಳೆಯಬೇಕು. ಕಳೆದ ರಸನಿಮಿಷಗಳನ್ನು ಸವಿನೆನಪಿನ ತೋಟದಲಿ ನೆಡಬೇಕು. ಆಗಾಗ ನೀರೆರೆದು ಸಂತಸ ಪಡಬೇಕು. ನೆನಪಿನ ಗಿಡದಲ್ಲರಳುವ ಬಣ್ಣಬಣ್ಣದ ಹೂವ ಜೋಪಾನವಾಗಿ ಕೊಯ್ದು ಮನದಂಗಳದಿ ಮಾಲೆ ಕಟ್ಟಬೇಕು....... ಇನ್ನೂ ಏನೇನೋ ಕನಸು ಕಂಡಿದ್ದೆ ನಾನು.ಅದೆಲ್ಲ ನನಸಾಗುವ ಪರಿಯ ಅಚ್ಚರಿಯಿಂದ ಕಾಣಲು ಕಾತರಿಸಿದ್ದೆ. ನೀನು ಬಳಿ ಬಂದಾಗಲೆಲ್ಲ ಎದೆಬಡಿತದಲಿ ಏನೋ ಹಿತವೆನಿಸುವ ಏರಿಳಿತ. ಮೈ ಸೋಕಿದರೆ ಸಾಕು ಹೃದಯವೀಣೆಯ ತಂತಿಯನು ಮೀಟಿದಾ ಭಾವ. ನಿನ್ನ ಶೌರ್ಯ, ಗಾಂಭೀರ್ಯಗಳ ಕಂಡಾಗ ಇವನ ಪಡೆದ ನಾ ಧನ್ಯ ಎಂದು ಮನ ಕುಣಿದಾಡಿದ್ದಿದೆ. ಆದರೆ....ಆ ಎಲ್ಲ ಸುಖಗಳು ಕೇವಲ ಕೆಲ ದಿನಗಳಿಗಷ್ಟೇ ಸೀಮಿತವಾಗಿದ್ದು ನನ್ನ ದುರಾದೃಷ್ಟ !...
ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸದ ಕೊಡುಗೆ ಕೊಟ್ಟಾಗ ರಾಮ - ಸೀತೆಯರೊಡನೆ ನೀನೂ ಹೊರಟೆ. ನಿನ್ನ ಜೊತೆ ನಾನೂ ಬರುತ್ತೇನೆಂದರೆ ಕೇಳಲೇ ಇಲ್ಲ.. ನಿನಗೇನೋ ಸೀತಾರಾಮರ ಸೇವೆಯಲ್ಲಿ ಸಮಯ ಸರಿದದ್ದು ಗೊತ್ತಾಗಲಿಲ್ಲ. ಆದರೆ ನನಗೆ? ನೀನಿಲ್ಲದೇ ನನ್ನ ಬದುಕು ಬೇಸರದ ಗೂಡಾಗಿತ್ತು, ಒಂಟಿ ಹಕ್ಕಿಯ ಪಾಡಾಗಿತ್ತು, ಮನ ವಿರಹವೇದನೆಯ ಕಡಲಾಗಿತ್ತು.... ನಿದ್ರಾದೇವಿ ನಿನ್ನ ಭಾಗದ ನಿದ್ದೆಯನ್ನೂ ನನಗೇ ಕರುಣಿಸಿದ್ದು ಒಂದು ಅದೃಷ್ಟವೇನೋ. ಇಲ್ಲವಾದರೆ ಹದಿನಾಲ್ಕು ವರ್ಷಗಳ ಕಳೆಯುವುದು ಕಷ್ಟವಾಗುತ್ತಿತ್ತು. ಆ ತಣ್ಣನೆಯ ರಾತ್ರಿಗಳು ನಿನ್ನ ಸಾಮೀಪ್ಯ ಬಯಸುತ್ತಿತ್ತು. ಆದರೆ ನಿದ್ದೆಯಲ್ಲೇ ದಿನದ ಹೆಚ್ಚಿನ ಸಮಯ ಜಾರಿ ಹೋಗುತ್ತಿದ್ದರಿಂದ ನಾನು ಸಮಾಧಾನದಿಂದ ನಿನ್ನ ಆಗಮನಕಾಗಿ ಕಾದಿದ್ದು. ಚಾತಕ ಪಕ್ಷಿಯಂತೆ ನಿರೀಕ್ಷೆಯಲಿ ಕುಳಿತಿದ್ದು. ಆ ಮಾಯಾವಿ ಇಂದ್ರಜಿತುವನ್ನು ಕೊಂದ ನೀನು ' ಪರಾಕ್ರಮಿ ' ಎನಿಸಿದೆ. ಆದರೆ ನಾನು? ಯಾರ ಗಮನಕ್ಕೂ ಬಾರದಂತ ವನಸುಮವಾದೆ.
ವರ್ಷಾನುಗಟ್ಟಲೇ ನಿದ್ರಿಸದ ಪುರುಷನಿಂದ ಮಾತ್ರ ಮೇಘನಾದನ ಸಾವು ಎಂಬ ವಿಷಯ ನಿನಗೆ ತಿಳಿದಿರಲಿಲ್ಲವೇ ಲಕ್ಮಣಾ ?... ನಿನ್ನ ನಿದ್ರೆಯನ್ನೆಲ್ಲ ನನ್ನದಾಗಿಸಿ, ಹದಿನಾಲ್ಕು ವರ್ಷ ನೀನು ಸೀತಾರಾಮರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದರಲ್ಲಿ ನನ್ನ ಸಹಕಾರ ಸ್ವಲ್ಪವಾದರೂ ಇತ್ತಲ್ಲವೇ ? ಅದಕ್ಕೆ ಪ್ರತಿಯಾಗಿ ಏನೂ ಕೇಳುವವಳಲ್ಲ ನಾನು. ಒಂದು ಬೆಚ್ಚನೆಯ ಅಪ್ಪುಗೆ ಸಾಕಿತ್ತು ನಾ ಕರಗಿ ಹೋಗಲು. ನಾಲ್ಕು ಅಕ್ಕರೆಯ ಮಾತು ಸಾಕು ಹೃದಯದ ಹೂ ಅರಳಲು.... ಕಡೆಯ ಪಕ್ಷ ವನವಾಸ ಮುಗಿಸಿ ಬಂದ ಮೇಲಾದರೂ ನೆಮ್ಮದಿಯಿಂದ ಇರಬಹುದೆಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ ! ಮೊದಲೇ ನಿನ್ನ ಮನ ವನವಾಸದಲ್ಲಾದ ಕಹಿ ಘಟನೆಗಳು, ಯುದ್ಧದ ಸಮಯದಲ್ಲಾದ ಸಾವು - ನೋವುಗಳಿಂದ ತುಂಬಿಹೋಗಿತ್ತು. ಅದರಲ್ಲೂ ರಾಮನ ವಿರಹ, ಸೋದರಿ ಸೀತೆಗೆ ಆದ ಅಗ್ನಿ ಪರೀಕ್ಷೆ ನಿನ್ನ ಮನಸಿನಲ್ಲಿ ಒಂದು ವಿಚಿತ್ರ ಭಾವವನ್ನು ಹುಟ್ಟುಹಾಕಿತ್ತೆನಿಸುತ್ತದೆ. ಜೊತೆಗೆ ತುಂಬು ಗರ್ಭಿಣಿಯಾದ ನನ್ನಕ್ಕನನ್ನು ಆ ದಟ್ಟ ಕಾನನದ ನಟ್ಟ ನಡುವೆ ಬಿಟ್ಟು ಬರುವಾಗ ನಿನಗಾದ ಸಂಕಟ, ರಾಜಾಜ್ಞೆಯನ್ನು ಪಾಲಿಸುವಾಗಿನ ದ್ವಂದ್ವ ನನಗರ್ಥವಾಗುತ್ತಿತ್ತು ಸೌಮಿತ್ರಿ.... ಆದರೆ ನನ್ನ ಭಾವನೆಗಳನ್ನು ನೀನು ಅರಿತಿಯೋ ಇಲ್ಲವೋ ತಿಳಿಯದು. ಈ ಹೆಣ್ಮನವೇ ಹೀಗೆ. ಅರ್ಥಕ್ಕೆ ನಿಲುಕದ್ದು. ವಿಚಿತ್ರ ಆಲೋಚನೆಗಳು, ವಿಭಿನ್ನ ಯೋಚನೆಗಳ ತಾಣ.. ಇರಲಿ ಬಿಡು. ನಿನಗೆ ಇದ್ದ ಸನ್ನಿವೇಶಗಳೇ ಅಂಥದ್ದು. ಹದಿನಾಲ್ಕು ವರ್ಷ ಸೇವೆ ಮಾಡಿದ ನಿನಗೆ ಅಣ್ಣನಿಂದ ದೊರೆತದ್ದು ' ಪರಿತ್ಯಾಗ ' ಎಂಬ ದೊಡ್ಡ ಪದ. ನೀನೋ ಎಲ್ಲವ ಬಿಟ್ಟು ಖಾಲಿಯಾಗಿ ಹೊರಟುಹೋದೆ. ಆದರೆ ನಾನು...? ನಿನ್ನಷ್ಟು ಪ್ರಬುದ್ಧ ವಾದ, ಪಕ್ವವಾದ ಮನ ನನ್ನದಲ್ಲ ಇನಿಯಾ.. ನೀನಿರದೇ ನಾ ಇರಲಾರೆ. ಸಾಕಾಗಿದೆ ಈ ವಿಚಿತ್ರ ಜೀವನ. ಹೇಳಿಕೊಳ್ಳಲಾಗದಂತಹ ತಲ್ಲಣ.... ಈಗ ನನ್ನ ಮುಂದಿರುವ ಆಯ್ಕೆಯಾದರೂ ಏನು ?..... " ಯೋಚನಾಲಹರಿ ಸಾಗುತಲಿತ್ತು. "ಊರ್ಮಿಳಾ.." ಎಂದು ಯಾರೋ ಕರೆದ ಸದ್ದು. ನಿಟ್ಟುಸಿರು ಬಿಟ್ಟ ಊರ್ಮಿಳೆ ದನಿ ಬಂದತ್ತ ತಿರುಗಿದಳು.
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ