ಶನಿವಾರ, ಜುಲೈ 22, 2017

ಸ್ಮೃತಿಪಟಲದಲಿ ಕಾಲೇಜ್ ಕ್ಯಾಂಟೀನ್...

                           ' ಕಾಲೇಜ್ ' ಎಂದಾಕ್ಷಣ ಏನೋ ಒಂಥರಾ ಖುಷಿ, ಕುತೂಹಲ, ತಳಮಳ, ಒಂಥರಾ ಉಲ್ಲಾಸ, ಉತ್ಸಾಹ, ಮನದಲಿ ಸಾವಿರಾರು ಭಾವಗಳ ತೇರಿನ ಅನಾವರಣ.... ಹೌದು, ಕಾಲೇಜ್ ಕ್ಯಾಂಪಸ್ ನ ಮೆಟ್ಟಿಲುಗಳಿಂದ ಹಿಡಿದು ಕ್ಲಾಸ್ ರೂಮಿನ ಬ್ಲ್ಯಾಕ್ ಬೋರ್ಡಿನವರೆಗಿನ ಪ್ರತಿ ಅಣು ಅಣುವೂ ಲಕ್ಷ - ಲಕ್ಷ ನವಿರಾದ ಭಾವನೆಗಳ ಸರಮಾಲೆಯನ್ನೇ ಧರಿಸಿದೆ. ಗಾರ್ಡನ್ ನಲ್ಲಿರುವ ಕಾರಂಜಿಯಿಂದ ಸೆಮಿನಾರ್ ಹಾಲಿನಲ್ಲಿರುವ ಕುರ್ಚಿಗಳೂ ತಮ್ಮ ಮೌನದಲ್ಲೇ ಅಸಂಖ್ಯಾತ ಕತೆ ಹೇಳುತ್ತವೆ. ಹರೆಯದ ಭಾವಗಳ ಹರಿವಿಗೆ ಅನುವು ಮಾಡಿಕೊಡುತ್ತವೆ. ಇವೆಲ್ಲದರ ನಡುವೆ ಕಾಲೇಜ್ ಕ್ಯಾಂಟೀನ್ ತನ್ನ ಮಡಿಲಲ್ಲಿ ಸದ್ದಿಲ್ಲದೆ ಅನುಭಾವಗಳಿಗೆ ಹೊಸಭಾಷ್ಯ ಬರೆಯುತ್ತ ಕೂತಿದೆ. ಬರೆಯುತ್ತಲೇ ಇರುತ್ತದೆ - ವರ್ಷ ವರ್ಷ ವಿದ್ಯಾರ್ಥಿಗಳು, ಅಧ್ಯಾಪಕರು ಬದಲಾದರೂ, ಆಧುನಿಕತೆಯ ಗಾಳಿ ಬೀಸುತ್ತಿದ್ದರೂ, ಕಾಲಚಕ್ರ ಉರುಳುತ್ತಲೇ ಇದ್ದರೂ...... 

                         ಕಾಲೇಜ್ ಕ್ಯಾಂಟೀನ್ ಹಲವು ಭಾವದ ಹೊಂಬಾಳೆಗಳ ಆಗರ, ಸಾವಿರಾರು ಸವಿ ಕನಸುಗಳ ಸಾಗರ.. ಕಾಲೇಜು ಸೇರಿದ ಮೊದಲ ದಿನದ ವಿನೂತನ ಅನುಭವ, ಕ್ಲಾಸ್ ಮುಗಿದ ನಂತರ ಬಂದು ಕುಡಿದ ಬೈಟು ಕಾಫಿ / ಟೀ, ನಾಲ್ಕೈದು ಜನರ ನಡುವೆ ಶೇರ್ ಆಗುವ ಒಂದು ಪ್ಲೇಟ್ ಪಾನಿಪುರಿ, ಮಸಾಲಪುರಿ, ಮಧ್ಯಾಹ್ನದ ಊಟ, ಬಿಡುವಿದ್ದಾಗ ಗಂಟೆಗಟ್ಟಲೇ ಕುಳಿತು ಹೊಡೆದ ಹರಟೆ, ಆಗಾಗ ನಡೆಸುವ ಬರ್ತಡೇ ಪಾರ್ಟಿ - ಇವೆಲ್ಲಕ್ಕೂ ಕ್ಯಾಂಟೀನ್ ನ ಕುರ್ಚಿ, ಟೇಬಲ್ಲುಗಳು ಸಾಕ್ಷಿಯಾಗುತ್ತವೆ. ಪ್ಲೇಟು, ಲೋಟಗಳೇ ವೀಕ್ಷಕರಾಗುತ್ತವೆ. ಸ್ವಲ್ಪ ಸ್ಟ್ರಿಕ್ಟಾಗಿರೋ ಕಾಲೇಜುಗಳಲ್ಲಾದರೆ ಹುಡುಗ ಹುಡುಗಿಯರ ಭೇಟಿಗೆ, ಪ್ರೇಮ ನಿವೇದನೆಗೆ ಕ್ಯಾಂಟೀನೇ ಮಧ್ಯವರ್ತಿ. ಮೊಬೈಲ್ ಬಳಕೆ ಕಡಿಮೆ ಇದ್ದ ಹಿಂದಿನ ಕಾಲದಲ್ಲಿ ಪತ್ರಗಳ ವ್ಯವಹಾರ ನಡೆಯುತ್ತಿದ್ದುದು ಕ್ಯಾಂಟೀನ್ ನ ಮೂಲೆಗಳಲ್ಲಿಯೇ ! ಈಗಾದರೋ ಒಂದು ವಾಟ್ಸಪ್ ಸಂದೇಶದಲ್ಲೇ ಕ್ಯಾಂಟೀನ್ ನಲ್ಲಿ ಭೇಟಿಯಾಗುವ ಕಾರ್ಯಕ್ರಮ ಫಿಕ್ಸ್ ಆಗಿಬಿಟ್ಟಿರುತ್ತದೆ... ಕ್ಲಾಸಿನಲ್ಲಿ ನಡೆದ ' ಬೋರಿಂಗ್ ' ಎನಿಸುವ ತರಗತಿಗಳು, ಲೆಕ್ಚರರ್ ಗಳ ಬಗ್ಗೆ ಸವಿಸ್ತಾರವಾದ ವಿಮರ್ಷೆ ನಡೆಯುವುದು ಇಲ್ಲೇ ! ಯಾವುದೋ ಕಾಂಪಿಟೇಷನ್ನೋ, ಸೆಮಿನಾರೋ ಇದ್ದರೆ ಅದರ ಸಂಪೂರ್ಣ ನೀಲಿ ನಕ್ಷೆ ತಯಾರಾಗುವುದು ಕ್ಯಾಂಟೀನ್ ನ ಮೂಲೆಯ ಯಾವುದೋ ಮೇಜಿನ ಮುಂದೆಯೇ ! ಪರೀಕ್ಷೆಗಳ ಸಮಯದಲ್ಲಿ ಅರ್ಥವಾಗಿರದ ವಿಷಯಗಳನ್ನು ಸ್ನೇಹಿತರು ಎರಡೇ ನಿಮಿಷದಲ್ಲಿ ಅರ್ಥ ಮಾಡಿಸುವುದೂ ಇಲ್ಲೇ !.. ಮಳೆಗಾಲದಲ್ಲಿ ತುಂತುರು ಹನಿಗಳು ಇಳೆಗಿಳಿಯುವಾಗ ಐಸ್ ಕ್ರೀಂ ತಿನ್ನುವ ಮನಸಾದಾಗ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ಕರೆದಂತೆ ಭಾಸ.. ಬರೀ ವಿದ್ಯಾರ್ಥಿಗಳಷ್ಟೇ ತುಂಬಿರುವಾಗ ಗೆಜ್ಜೆ ಕಟ್ಟಿದ ಪುಟ್ಟ ಹುಡುಗಿಯಂತೆ ಸದ್ದು ಮಾಡುವ ಕ್ಯಾಂಟೀನ್ ಲೆಕ್ಚರರ್ ಗಳ ಸಮ್ಮುಖದಲ್ಲಿ ಮೌನಗೌರಿಯ ಮಾರುವೇಷ ಧರಿಸುತ್ತದೆ. ಪ್ರನ್ಸಿಪಾಲರು ಬಂದರಂತೂ ಪ್ಲೇಟು ಲೋಟಗಳೂ ಬಾಯ್ಮುಚ್ಚಿ ಕುಳಿತಿರುತ್ತವೆ. ಬಹುಶಃ ತಮ್ಮ ಯಾವ ಗುಟ್ಟೂ ರಟ್ಟಾಗದಿರಲಿ ಎಂದಿರಬಹುದೇನೋ..... 

                       ಕಾಲೇಜ್ ಕ್ಯಾಂಟೀನನ್ನು ಬೇರೆ ಹೋಟೆಲ್ ಗಳಂತೆ ಕೇವಲ ಉಪಹಾರ ಗೃಹದಂತೆ ಕಾಣುವುದು ಒಂಥರಾ ಅಪರಾಧವೇನೋ ಎನಿಸುವಷ್ಟು ಅದು ಯುವ ಮನಗಳಿಗೆ ಹತ್ತಿರವಾಗಿರುತ್ತದೆ. ' ಬಿಡುವಿನ ಸಮಯದಲ್ಲಿ ಇತ್ತ ಬಾ..' ಎಂದು ತನ್ನ ಮೌನದ ಮಾತಿನಲ್ಲೇ ಕರೆಯುತ್ತಿರುತ್ತದೆ. ಹುಡುಗಿಯರ ತರಹೇವಾರಿ ಹರಟೆಗಳು, ಹುಡುಗರ ತರಲೆ ತುಂಟಾಟಗಳು ಎಂದರೆ ಕ್ಯಾಂಟೀನ್ ನಲ್ಲಿ ಕುಳಿತ ಬಿಲ್ ಕೊಡುವ ವ್ಯಕ್ತಿಗೂ ಅಚ್ಚುಮೆಚ್ಚೇ.. ಕೆಲವು ಖಾಯಂ ಗಿರಾಕಿಗಳಿಗಂತೂ ಆತ ರಕ್ತ ಸಂಬಂಧ ಇಲ್ಲದೆಯೇ ಅಣ್ಣನಾಗಿರುತ್ತಾನೆ. ಅಷ್ಟೊಂದು ಬಾಂಧವ್ಯ ಅರಿವಿಲ್ಲದೆಯೇ ಬೆಳೆದು ಬಿಟ್ಟಿರುತ್ತದೆ. " ಆ ಮ್ಯಾಮ್ ಅಂತೂ ಯಾವಾಗ್ಲೂ ಬೈತಾನೇ ಇರ್ತಾರೆ ಕಣೇ. ಕೇಳಿ ಕೇಳಿ ಸಾಕಾಯ್ತು. " , " ಹೋಗ್ಲಿಬಿಡೇ, ಅವ್ರು ಬೈತಾರೆ ಅಂತ ಯಾರಾದ್ರೂ ಕ್ಲಾಸಲ್ಲಿ ಮಾತಾಡ್ದೇ ಸೈಲೆಂಟಾಗಿ ಕೂರ್ತಾರಾ? " , " ಇವತ್ತು ಇಂಡಿಯಾ - ಪಾಕಿಸ್ತಾನ ಮ್ಯಚ್ ಇದೆ ಮಗಾ.. ಮಿಸ್ ಮಾಡ್ದೇ ನೋಡ್ಬೇಕು. " , " ಹೌದು. ಇವತ್ತಿಡೀ ನಮ್ಮನೆ ಟಿ.ವಿ. ರಿಮೋಟ್ ಗೆ ನಾನೇ ವಾರಸ್ದಾರ..." ಎಂಬಂತಹ ಲಕ್ಷಾಂತರ ಮಾತುಗಳಿಗೆ ಕ್ಯಾಂಟೀನ್ ನ ಗೋಡೆಗಳು, ಸೂರುಗಳು ಕದ್ದು ಕೇಳುವ ಕಿವಿಯಾಗಿರುತ್ತವೆ. ಗುಟ್ಟನ್ನು ಬಿಟ್ಟುಕೊಡದ ಆಪ್ತರಾಗುತ್ತವೆ. ಕ್ಯಾಂಟೀನ್ ನಲ್ಲಿ ಹಸಿದ ಹೊಟ್ಟೆ ತಣಿಸಲು ಹೇಗೆ ತಿಂಡಿ ತಿನಿಸುಗಳಿವೆಯೋ ಹಾಗೇ ಮನದ ಭಾವಗಳ ಅಬ್ಬರವನ್ನಿಳಿಸಲು ಜಾಗವಿದೆ. ಯಾಕೋ ಮನಸಿಗೆ ತುಂಬಾ ಬೇಜಾರಾಗಿದ್ದರೆ ಏಕಾಂಗಿಯಾಗಿ ಕೂತು ನಿಟ್ಟುಸಿರುಬಿಡಲೂ ಸಾಧ್ಯವಿದೆ. ಹಾಗಂತ ಗಂಟೆಗಟ್ಟಲೇ ಒಬ್ಬರೇ ಕುಳಿತರೆ ಗೆಳೆಯರು ಬಂದು ಕಾಡಿಸುವ ಸವಿಯಾದ ಅಪಾಯವೂ ಇದೆ..ಕ್ಲಾಸ್ ರೂಮಿನಲ್ಲಿ ಹಂಚಿಕೊಳ್ಳದೇ ಉಳಿದ ಭಾವಜೇನಿನ ಹಂಚಿಕೆಗೆ ಕ್ಯಾಂಟೀನ್ ಅತಿ ಪ್ರಶಸ್ತ ತಾಣ !.... 

                           ವರ್ಷ ಮುಗಿದು ಪರೀಕ್ಷೆಗಳು ಬಂದಾಗ ಕ್ಯಾಂಟೀನ್ ನ ಹವಾ ತುಸು ಕಡಿಮೆಯಾದರೂ ಪರೀಕ್ಷೆ ಬರೆದು ಹೊರಬಂದ ನಂತರ ಕ್ಯಾಂಟೀನ್ ತುಸು ಹೆಚ್ಚೇ ಗದ್ದಲವನ್ನು ಹೊದ್ದುಕೊಳ್ಳುತ್ತದೆ. ಆಡುವ ಯಾವ ಮಾತುಗಳಿಗೂ ಅಲ್ಲಿ ಲೆಕ್ಕದ ಲೇಪನವಿಲ್ಲ, ಸರಿ - ತಪ್ಪುಗಳ ಅನುಪಾತವಿಲ್ಲ, ಯಾರೇನು ಅಂದುಕೊಳ್ಳುತ್ತಾರೆಯೋ ಎಂಬ ಮುಜುಗರದ ಮುಖವಾಡವಿಲ್ಲ... ಮನದೊಳಗೆ ಹುದುಗಿರುವ ಭಾವಗಳ ಪ್ರಸವಕ್ಕೆ ಮುಕ್ತ ವೇದಿಕೆ ಕಾಲೇಜ್ ಕ್ಯಾಂಟೀನ್... ಅಲ್ಲಿರುವ ವಸ್ತುಗಳು ನಿರ್ಜೀವವಾದರೂ ಅಲ್ಲಿನ ಜೀವಂತಿಕೆಗೆ ಬಹುಕಾಲ ಬಾಳುವ ಅಗಾಧ ಶಕ್ತಿಯಿದೆ. ಕಾಲೇಜ್ ಕ್ಯಾಂಟೀನ್ ನಲ್ಲಿ ಎಲ್ಲವೂ ಇಲ್ಲ, ಆದರೆ ವರ್ಣನೆಗೆ ಸಿಗದ ಏನೋ ಇದೆ. ಮತ್ತದು ಯುವಮನಗಳಿಗೆ ತುಂಬ ಸನಿಹ.. ಕಾಲೇಜು ಲೈಫಿನ ನೆನಪಿನ ಪುಸ್ತಕ ಬಿಚ್ಚಿಟ್ಟು ಓದಲು ಕುಳಿತರೆ ಕಾಲೇಜ್ ಕ್ಯಾಂಟೀನ್ ಅದರಲ್ಲೊಂದು ಮುದ್ದಾದ ಅಧ್ಯಾಯ !.... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...