ಭಾನುವಾರ, ಸೆಪ್ಟೆಂಬರ್ 16, 2018

ಸಾಯುತ್ತಿರುತ್ತೇನೆ ನಾನು...

                       ಸಾಯುತ್ತಿರುತ್ತೇನೆ ನಾನು - ಮನಸ್ಸಿಲ್ಲದ ಮನಸ್ಸಲ್ಲಿ ಅದ್ಯಾರದೋ ಧೂಳುಹಿಡಿದ ಫೈಲುಗಳ ತಲೆಬಿಸಿ ಹಚ್ಚಿಕೊಳ್ಳುವಾಗ, ಕೆಲಸಕ್ಕೆ ಬಾರದ ಅದ್ಯಾವುದೋ ಯೋಚನೆಯಲ್ಲಿ ಮುಳುಗುವಾಗ, ತಟ್ಟೆಯ ಬದಲು ಮೊಬೈಲ್ ನೋಡುತ್ತಾ ಊಟದ ಶಾಸ್ತ್ರ ಮಾಡುವಾಗ, ನಿಂತಲ್ಲೇ ಗಾಢ ಆಲೋಚನೆಯಲ್ಲಿ ಮುಳುಗಿ ಪಕ್ಕದವರ ಮಾತು ಕೇಳಿಸದೇ ಇದ್ದಾಗ....


                      ನಾನು ಮತ್ತೆ ಮತ್ತೆ ಸಾಯುತ್ತಿರುತ್ತೇನೆ - ಗೊಂದಲಗಳ ಬಲೆಯಲ್ಲಿ ಸಿಕ್ಕ ಜೇಡವಾಗಿ ಚೆಂದದ ಕ್ಷಣಗಳ ಅನುಭವಿಸಲಾರದಾಗ, ಆಫೀಸಿನ ಕೆಲಸದ ಗಡಿಬಿಡಿಯಲ್ಲಿ ಪದೇ ಪದೇ ಬಂದ ಅಮ್ಮನ ಕರೆಯನ್ನು ನೋಡಿಯೂ ನೋಡದಂತಾಗುವಾಗ, ಬದುಕಿನ ಓಟದಲ್ಲಿ ತುಂಬಾ ಪ್ರೀತಿಸುವ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನೇ ಮರೆತಾಗ, ಕೊನೆಗೆ ನನ್ನ ಸಣ್ಣ ಸಣ್ಣ ಖುಷಿಗಳನ್ನೆಲ್ಲವನ್ನೂ ಮರೆತು ನಾನೇ ಕಳೆದುಹೋದಾಗ.....
               

              ನಾನು ಸಾಯುತ್ತಲೇ ಇರುತ್ತೇನೆ ಪ್ರತಿದಿನವೂ... ಜೀವವಿದ್ದೂ ಜೀವವಿಲ್ಲದಂತಾಗುತ್ತೇನೆ, ಇನ್ನೇನು ನಾನು ಪೂರ್ತಿಯಾಗಿ ಸಾಯುತ್ತಿದ್ದೇನೆ ಎನ್ನುವಾಗ ಅದು ಹೇಗೋ ಬದುಕಿಬಿಡುತ್ತೇನೆ.... 

                ಬದುಕಿಬಿಡುತ್ತೇನೆ ನಾನು - ಪುಟ್ಟ ಕಂದಮ್ಮನ ಮುಗ್ಧ ನಗುವನ್ನು ಕಂಡಾಗ, ಜೀವನದ ಸಣ್ಣ ಪುಟ್ಟ ಆಸೆಗಳು ನೆರವೇರಿದಾಗ, ಪ್ರೀತಿ ಪಾತ್ರರೊಂದಿಗೆ ಸಮಯ ವಿನಿಯೋಗಿಸುವಾಗ, ಬೇರೆಯವರ ದುಃಖಕ್ಕೆ ಸ್ಪಂದಿಸಿದಾಗ... ಬದುಕಿಬಿಡುತ್ತೇನೆ ನಾನು - ಪುಟಾಣಿಗಳ ಮುದ್ದು ನೃತ್ಯ ನೋಡುವಾಗ, ಒಂದೊಳ್ಳೆ ನಾಟಕ ನೋಡುವಾಗ, ಆಪ್ತ ಗೆಳತಿಯೊಡನೆ ಮನ ಬಿಚ್ಚಿ ಮಾತನಾಡುವಾಗ, ಬೇರೆಯವರ ಪರಿವಿಲ್ಲದೇ ಖುಷಿಯಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವಾಗ, ನನಗೆ ಇಷ್ಟವಾದ ಪುಸ್ತಕ ಓದುವಾಗ..... ಹೀಗೆಯೇ... ಹೇಗೋ ಬದುಕಿಬಿಡುತ್ತೇನೆ ಪೂರ್ತಿ ಸಾಯುವ ಮುನ್ನ. ಹುಡುಕಲು ಶುರುವಿಡುತ್ತೇನೆ ಕಳೆದು ಹೋದ ನನ್ನ...  


- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...