ಶನಿವಾರ, ಜುಲೈ 22, 2017

ಗಾಂಧೀಬಜಾರಿನಲ್ಲೊಂದು ಸುತ್ತು...

                        ಗಾಂಧೀಬಜಾರ್ ಎಂದಾಕ್ಷಣ ಕಣ್ಮುಂದೆ ಬರುವುದು ಸಾಲು ಸಾಲು ಅಂಗಡಿಗಳ ಚಿತ್ರಣ. ಈಗಂತೂ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಸ್ವಾತಂತ್ರ್ಯೋತ್ಸವ ಮುಂತಾದ ಹಬ್ಬಗಳ ಪ್ರಯುಕ್ತ ಅಂಗಡಿಗಳು ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿವೆ. ವರ್ತಕರು ಗಿರಾಕಿಗಳ ಆಗಮನಕ್ಕೆ ಕಾದು ಕುಳಿತಿದ್ದಾರೆ. ಎಲ್ಲಿ ನೋಡಿದರೂ ವೈವಿಧ್ಯಮಯ ರಾಖಿಗಳು, ಕೇಸರಿ, ಬಿಳಿ, ಹಸಿರು ಬಣ್ಣದ ಉಡುಪುಗಳು, ವೈವಿಧ್ಯಮಯ ಪೂಜಾ ಮತ್ತು ಅಲಂಕಾರಿಕ ಸಾಮಗ್ರಿಗಳಿಂದ ಡಿ.ವಿ.ಜಿ. ರಸ್ತೆಯ ಇಕ್ಕೆಲಗಳೂ ಕಂಗೊಳಿಸುತ್ತಿವೆ. ಅದನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಮನಕೆ ಏನೋ ಆನಂದ. 

             ಯಯಒಮ್ಮೆ ಸುತ್ತ ಕಣ್ಣಾಡಿಸಿದರೆ ಸಾಕು. ಒಂದಕ್ಕಿಂತ ಒಂದು ಅಂದದ, ವೈವಿದ್ಯಮಯ ರಾಶಿ ರಾಶಿ ರಾಖಿಗಳು, ಕಣ್ಣು ಕುಕ್ಕುವ ಬಟ್ಟೆಗಳು, ಅಲ್ಲಲ್ಲಿ ಗೋಲಗಪ್ಪಾ ಮಾರುವ ಹುಡುಗ, ಮಲ್ಲಿಗೆಯ ಮಾಲೆ ಮಾಡಿ ಮಾರುವ ಹುಡುಗಿ, ಬಲೂನಿನ ಮಾರಾಟಕ್ಕೆ ಕಾದು ನಿಂತಿಹ ಬಾಲಕ, ಬೇಯಿಸಿದ ಮೆಕ್ಕೆಜೋಳ, ಶೇಂಗಾ ಅಥವಾ ಕಡಲೆಕಾಯಿ ಗಾಡಿಗಳೊಡನೆ ಗ್ರಾಹಕರ ನಿರೀಕ್ಷೆಯಲ್ಲಿರುವವರು, ಅಮೇರಿಕನ್ ಸ್ವೀಟ್ಕಾರ್ನ್, ಎಳನೀರು ಮಾರುತ್ತಿರುವವರು, ತಳ್ಳುಗಾಡಿಯಲ್ಲಿ ತಾಜಾ ತಾಜಾ ಹೂವು, ಹಣ್ಣು, ತರಕಾರಿಯ ಮಾರಿ ಜೀವನ ತಳ್ಳುತ್ತಿರುವವರು, ರಸ್ತೆಯಲ್ಲಿ ಓಡಾಡುವ ಬೈಕು, ಸ್ಕೂಟಿ, ಕಾರು, ರಿಕ್ಷಾಗಳು, ಸಣ್ಣ ಪುಟ್ಟ ಸೌಂದರ್ಯವರ್ಧಕಗಳಿಂದ ಆರಂಭಿಸಿ ಚಿನ್ನಾಭರಣಗಳ ಶೋರೂಂ ಗಳವರೆಗೆ ಎಲ್ಲ ದೈನಂದಿನ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳ ಅಂಗಡಿಗಳು, ಯಾವಾಗಲೂ ಜನರಿಂದ ತುಂಬಿ ತುಳುಕುವ ವಿದ್ಯಾರ್ಥಿಭವನ್, ರೋಟಿಘರ್ ನಂತಹ ಹೋಟೆಲ್ಗಳು, ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿ, ಚಾಟ್ ಸೆಂಟರ್ ಗಳು, ಅಂಕಿತ ಪ್ರಕಾಶನದಂತಹ ಪುಸ್ತಕದಂಗಡಿಗಳು, ಪರಿಮಳ ಬೀರುವ ಹೂವು, ಹಣ್ಣುಗಳ ಅಂಗಡಿಯ ಸಾಲು...ಒಂದು ಹೊಸ ಲೋಕವೇ ಅನಾವರಣಗೊಂಡ ಅನುಭವ..... 

                     ಶನಿವಾರ, ರವಿವಾರಗಳಲ್ಲಂತೂ ಫುಟ್ಪಾತಿನಲ್ಲಿ ಓಡಾಡುವುದೇ ಕಷ್ಟ. ವೀಕೆಂಡ್ ಎಂದು ಸುತ್ತಾಡಲು, ಖರೀದಿ ಮಾಡಲು ಬರುವ ಜನರಿಂದ ನಮ್ಮ ಗಾಂಧೀಬಜಾರು ಮತ್ತಷ್ಟು ಸೊಬಗನ್ನು ಪಡೆಯುತ್ತದೆ. ಸಂಧ್ಯಾಕಾಲದಲ್ಲಿ ಹೊಸ ರಂಗೇರುತ್ತದೆ. ' ಅದು ಬೇಕು, ಇದು ಬೇಕು ' ಎಂದು ಹಠ ಹಿಡಿಯುವ ಮುದ್ದು ಮಕ್ಕಳನ್ನು ನೋಡುವುದೇ ಖುಷಿ. ಅವರನ್ನು ಸಮಾಧಾನಗೊಳಿಸಲು ಯತ್ನಿಸುವ ಅಪ್ಪ ಅಮ್ಮಂದಿರು, ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಬರುವ ಹಿರಿಯರು, ಚೌಕಾಶಿ ಮಾಡುವುದರಲ್ಲಿ ಬ್ಯುಸಿಯಾಗಿರುವ ಕಾಲೇಜು ಹುಡುಗಿಯರು, ಕಣ್ತಂಪು ಮಾಡಿಕೊಳ್ಳಲು ಬರುವ ಹುಡುಗರು, ಇದ್ಯಾವುದೂ ಸಂಬಂಧವೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಆಫೀಸಿನಿಂದ ಬಿರಬಿರನೆ ಕಾರಿನತ್ತ ಹೆಜ್ಜೆ ಹಾಕುವ ಸೂಟುಬೂಟುಧಾರಿಗಳು, ಯಾವ ಗೊಡವೆಯೂ ಇಲ್ಲದೇ ಫುಟಪಾತಿನ ಮೇಲೇ ಆಟವಾಡಿಕೊಂಡು ನಗುವ ಹೂ ಮಾರುವವಳ ಪುಟ್ಟ ಮಗು, ಅದರ ಮುದ್ದಾದ ನಗು...

                  ನೋಡುವ ಮನಸ್ಸಿದ್ದರೆ ಸಾಕು, ಸುತ್ತಲಿನ ವಾತಾವರಣ ಅದರದ್ದೇ ಆದ ಸೌಂದರ್ಯವನ್ನು ಪಡೆಯುತ್ತಾ ಹೋಗುತ್ತದೆ. ಮನಪಟಲದಲ್ಲಿ ನವಿರಾದ ಪದರಗಳು ತೆರೆದು ಕೊಳ್ಳುತ್ತಾ ಹೋಗುತ್ತವೆ..... ಹೀಗೆ ಸುಮ್ಮನೆ ಫುಟ್ ಪಾತಿನಲ್ಲಿ ನಡೆಯುತ್ತಿದ್ದರೆ ಕಣ್ಣುಗಳಂತೂ ಅಂಗಡಿಗಳ ಮುಂದೆ ಗೊಂಬೆಗೆ ತೊಡಿಸಿರುವ ಸುಂದರ ವಿನ್ಯಾಸದ ಉಡುಪುಗಳನ್ನು ಇಣುಕಿ ನೋಡದೇ ಸುಮ್ಮನಿರುವುದಿಲ್ಲ. ಕೈಯಲ್ಲಿ ದುಡ್ಡಿದ್ದರೆ ಅದು ಖಾಲಿಯಾಗುವವರೆಗೆ ನೆಮ್ಮದಿಯೇ ಇಲ್ಲ. ಹಾಗೇ ನಡೆದು ಹೋಗುವಾಗಲೆಲ್ಲ ತಲೆ ಹಲವು ಯೋಚನೆಗಳಲ್ಲಿ ಮುಳುಗುತ್ತದೆ. ರಸ್ತೆಯಲ್ಲಿ ಹೋಗುವ ಆಡಿ, ಬೆಂಜ್ ನಂತಹ ದುಬಾರಿ ಬೆಲೆಯ ಕಾರನ್ನು ನೋಡಿದಾಗ ಒಂದು ಕ್ಷಣ ಕಾಲ್ನಡಿಗೆಯಲ್ಲಿ ಸಾಗುವ ನಾವು ಅವರಂತಿಲ್ಲವಲ್ಲಾ ಎನ್ನಿಸಬಹುದು. ಅದೇ ಫುಟ್ಪಾತಿನಲ್ಲಿ ಕುಳಿತು ಆಡುತ್ತಿರುವ ಮುಗ್ಧ ಮಗುವನ್ನು ಕಂಡಾಗ ಅವರಿಗಿಂತ ನಾವು ಅನುಕೂಲಕರ ಸ್ಥಿತಿಯಲ್ಲಿದ್ದೇವೆ ಎಂದೂ ಅನ್ನಿಸದೇ ಇರದು. ವಯಸ್ಸಾದ ಮುದುಕಿಯೂ ಮಂಡಕ್ಕಿ ಮಾರುವುದನ್ನು ಕಂಡಾಗ ದುಡಿದು ತಿನ್ನಬೇಕೆಂಬ ಅವರ ಛಲ ಮಾದರಿ ಎನಿಸುವುದು. ಸ್ವಲ್ಪವೂ ಅತ್ತಿತ್ತ ನೋಡದೇ ಮದನಾರಿಯ ಕೈಯಲ್ಲಿ ಮದರಂಗಿಯ ಚಿತ್ತಾರ ಮೂಡಿಸುವ ಹುಡುಗರನ್ನು ಕಂಡಾಗ ತಾಳ್ಮೆ, ಏಕಾಗ್ರತೆಯ ಅರ್ಥದ ಅರಿವಾಗುವುದು. ಚಿಕ್ಕ ಚಿಕ್ಕ ಮಕ್ಕಳೂ ಬಲೂನು, ಗೋಲಗಪ್ಪಾ ಮಾರುವುದನ್ನು ಕಂಡಾಗೆಲ್ಲ ಈ ವಯಸ್ಸಿನಲ್ಲೇ ಅವರಲ್ಲಿ ಸಂಚಯನಗೊಂಡ ಅತೀವ ಜೀವನೋತ್ಸಾಹ, ಬದುಕಲೇಬೇಕೆಂಬ ಹಂಬಲ ಎದ್ದು ಕಾಣುತ್ತದೆ. ಈ ಗೌಜಿ ಗದ್ದಲದ ನಡುವೆಯೂ ಪ್ರಶಾಂತವಾಗಿ ಮನೆಯ ಟೆರೆಸಿನ ಮೇಲೆ ಪ್ರತಿದಿನ ಎರಡು ಬಾರಿ ನೀರು ಹಾಕಿ ಹೂವಿನ ಗಿಡಗಳನ್ನು ಬೆಳೆಸುವ ಗೃಹಿಣಿಯನ್ನು ಕಂಡಾಗೆಲ್ಲ ಜೀವನದ ಹೊಸ ಭಾಷ್ಯ ಓದಿದ ಸಂತಸ...... 

                    ಮೇಲ್ನೋಟಕ್ಕೆ ಗಾಂಧೀಬಜಾರ್ ಬೆಂಗಳೂರಿನ ಒಂದು ಸಣ್ಣ ವಾಣಿಜ್ಯ ಬೀದಿಯಷ್ಟೇ. ಆದರೆ ಅಕ್ಕಪಕ್ಕದಲ್ಲೇ ಹಲವಾರು ಪ್ರವಾಸೀಯೋಗ್ಯ ತಾಣಗಳನ್ನು ಹೊಂದಿರುವುದರಿಂದ ಆಕರ್ಷಣೆಯ ಕೇಂದ್ರವಾಗಿದೆ. ಪ್ರಸಿದ್ಧವಾದ ಬಿ.ಎಂಎಂ.ಎಸ್ ಇಂಜಿನಿಯರಿಂಗ್ ಕಾಲೇಜು, ಐತಿಹಾಸಿಕ ಕಡಲೇಕಾಯಿ ಪರಿಷೆಯಿಂದ ಹೆಸರಾದ ಬಸವನಗುಡಿ, ದೊಡ್ಡ ಗಣಪತಿ ದೇವಸ್ಥಾನ, ಕಹಳೆ ಬಂಡೆ ಉದ್ಯಾನವನ ( ಬ್ಯೂಗಲ್ ರಾಕ್ ಗಾರ್ಡನ್), ಲಾಲ್ ಬಾಗ್ ಉದ್ಯಾನವನ, ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಗಿರಿನಗರದ ಪ್ರಸಿದ್ಧ ಕಾರ್ಯಸಿದ್ಧಿ ಆಂಜನೇಯನ ದೇವಸ್ಥಾನ....ಹೀಗೆ ಹಲವಾರು ನೋಡುವಂತಹ ಸ್ಥಳಗಳು ಇದರ ಸನಿಹದಲ್ಲೇ ಇವೆ. ಇದು ಕೂಡ ಗಾಂಧೀಬಜಾರ್ ನ ಒಂದು ವೈಶಿಷ್ಟ್ಯತೆ. ಕೇವಲ ಕಣ್ಣಿಗೆ ತೃಪ್ತಿ ನೀಡುವ ಅಂಗಡಿ, ಹೋಟೆಲ್ ಗಳಷ್ಟೇ ಅಲ್ಲ, ನೊಂದ ಮನಕ್ಕೆ ಸಾಂತ್ವನ ನೀಡುವ ಅಬಲಾಶ್ರಮ, ಸಾಯಿ ವೃದ್ಧಾಶ್ರಮಗಳೂ ಇಲ್ಲಿವೆ. ಇನ್ನು ಅದರೊಳಗೆ ಪ್ರವೇಶಿಸಿ, ಅವರ ಬದುಕು - ಬವಣೆಗಳನ್ನು ಗಮನಿಸಿದರೆ ಅಲ್ಲೂ ಒಂದು ಹೊಸಲೋಕ ಪ್ರತ್ಯಕ್ಷ....
               ಯಈ ಪುಟ್ಟ ಗಾಂಧೀಬಜಾರೇ ಪ್ರಪಂಚವಲ್ಲ ನಿಜ. ಆದರೆ ಇಲ್ಲೂ ಒಂದು ಸುಂದರ ಜಗತ್ತಿದೆ. ಇದೇ ಗಾಂಧೀಬಜಾರ್ ಸಾವಿರಾರು ಜನಕ್ಕೆ ಜೀವನಾಧಾರವಾಗಿದೆ. ಇಲ್ಲಿ ನಗುವ, ಅಳುವ ಮನೆ - ಮನಗಳಿವೆ. ಉಲ್ಲಾಸ - ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ವಾತಾವರಣವಿದೆ. ಹಲವರ ಸಂತೃಪ್ತಿಯ ಮುಗುಳ್ನಗು ಇದೆ. ಸಾರ್ಥಕ್ಯದ ಭಾವವಿದೆ. ಮನೆಯ ಮನಸಿನ ನವಭಾವಗಳಿವೆ, ತುಡಿತ - ಮಿಡಿತಗಳಿವೆ, ಬದುಕಿನ ಏರಿಳಿತಗಳಿವೆ, ನಿರೀಕ್ಷೆಯಿದೆ, ನಿರಾಸೆಯಿದೆ, ಆಸೆ - ಆಕಾಂಕ್ಷೆಗಳಿವೆ, ಗುರಿ ಸಾಧಿಸುವ ದೃಢವಿಶ್ವಾಸವಿದೆ, ಆಕರ್ಷಣೆಯಿದೆ, ನವರಾಗದ ಆಲಾಪವಿದೆ ಇನ್ನೂ ಏನೇನೋ... ಪ್ರತಿನಿತ್ಯ ಸಾವಿರಾರು ಜನರ ಪಾದಧೂಳಿಯನ್ನು ತನ್ನ ಮೈಗಂಟಿಸಿಕೊಳ್ಳುವ ಪಾದಚಾರಿಗಳ ಮಾರ್ಗವಂತೂ ಲಕ್ಷಾಂತರ ಕಥೆ - ವ್ಯಥೆಗಳನ್ನು ಬಿಚ್ಚಿಡದೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಹೊಸ ತಲೆಮಾರಿಗೆ ಹೊಸ ಕತೆಗಳ ಸೃಷ್ಟಿಗೆ ಕಾದು ಕುಳಿತಿದೆ... ನಮ್ಮ ಸುತ್ತಲಿನ ಪರಿಸರ, ವಾತಾವರಣ ಯಾವಾಗಲೂ ಅದರದ್ದೇ ಆದ ಸೌಂದರ್ಯ, ಧನಾತ್ಮಕ ಅಂಶಗಳನ್ನು ಹೊಂದಿರುತ್ತದೆ. ಆದರೆ ನಾವು ನಮ್ಮ ಪೂರ್ವಾಗ್ರಹವನ್ನು ಕಿತ್ತೆಸೆದು ನಿತ್ಯನೂತನವೆನಿಸುವ ಪ್ರಪಂಚವನ್ನು ಕಣ್ತೆರೆದು ನೋಡಿ ಆಸ್ವಾದಿಸಬೇಕಷ್ಟೆ.... 

 - R. R. B.

2 ಕಾಮೆಂಟ್‌ಗಳು:

sandeepraju ಹೇಳಿದರು...

ಅಲ್ಲಿ ಸಿಗುವ ಮನೆ ಹೋಳಿಗೆ ನನ್ನ ನೆಚ್ಚಿನದು.

Ranjana Bhat ಹೇಳಿದರು...

ನಂಗೂ ಇಷ್ಟ. ಧನ್ಯವಾದಗಳು

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...