ಸೋಮವಾರ, ಆಗಸ್ಟ್ 7, 2017

ಅಂತರಾಳಕ್ಕಿಳಿದ "ಅಕ್ಕು"...

                    ರೆಕ್ಕೆ ಬಲಿತ ಹಕ್ಕಿ ಸ್ವಚ್ಛಂದವಾಗಿ ಹಾರಿದರೇನೆ ಚೆಂದ. ಸುಂದರ ಮೊಗ್ಗು ಅರಳಿ ಹೂವಾಗಿ ಸುವಾಸನೆ ಬೀರಿದರೇನೇ ಅಂದ... ಅವುಗಳ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದು ತರವಲ್ಲ, ಜೊತೆಗೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಕಳೆದುಕೊಂಡರೆ ಜೀವನ ಬದುಕಾಗಲಾರದು...ಆಗ ಅದು ಬಹುಶಃ ಕೇವಲ ಉಸಿರಾಡುವ, ಭಾವಗಳನೇ ಮರೆತ ಗೊಂದಲದ ಗೂಡಾಗಬಹುದು... ಅರ್ಥವಿಲ್ಲದ ಪದಗಳ ಹಾಡಾಗಬಹುದು... ತಂತಿ ಮುರಿದ ವೀಣೆಯಾಗಬಹುದು.... 

                ಜೀವನದ ಕೆಲ ಮಜಲುಗಳಲ್ಲಿ ಅನಿವಾರ್ಯವಾಗಿ ತಮ್ಮತನವನ್ನು ಕಳೆದುಕೊಂಡು ಸಂದರ್ಭಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುವ ಮೂರು ಪಾತ್ರಗಳ ಕಥೆ ನಾಟಕದ ಜೀವಾಳ. ಬಲು ಭಾವುಕ ಸನ್ನಿವೇಶಗಳನ್ನೂ ಹಾಸ್ಯದ ತುಸು ಲೇಪನ ಮಾಡಿ ಹೇಳುವ ಪುಟ್ಟಮ್ಮಜ್ಜಿ, ಅರೆಹುಚ್ಚಿಯಾದರೂ ತನ್ನ ಮಾತಿನಲ್ಲೇ ಇತರರಿಗೆ ಉತ್ತಮ ಸಲಹೆ ನೀಡುವ ಅಕ್ಕು, ಪ್ರತಿ ವಿಷಯದಲ್ಲೂ ತನಗೆ ಸರಿ ಕಂಡಿದ್ದನ್ನೇ ಮಾಡುವ ದಿಟ್ಟ ಅಮ್ಮಚ್ಚಿಯ ಪಾತ್ರಗಳು ವೀಕ್ಷಕರ ಸ್ಮೃತಿಪಟಲದಲ್ಲಿ ಅಚ್ಚಾಗುವುದಂತೂ ನಿಜ!...ತುಂಬಿದ ಕುಟುಂಬದಲ್ಲಿ ಸಾಮಾನ್ಯವಾಗಿ ನಡೆಯುವ ಸಂಭಾಷಣೆಗಳು, ವಿಭಿನ್ನ ವ್ಯಕ್ತಿಗಳ ವಿಭಿನ್ನ ಆಲೋಚನೆಗಳು, ಎಳೆಯರ ಮುಗ್ಧತೆ, ಹರೆಯದ ಹುಡುಗಿಯರ ಭಾವನೆಗಳು, ಅಲ್ಲಲ್ಲೇ ಕಂಡೂ ಕಾಣದಂತೆ ಮನೆ ಮಾಡಿರುವ ದೊಡ್ಡವರ (?) ಸ್ವಾರ್ಥ...ಹೀಗೆ ಹತ್ತು ಹಲವು ವಿಷಯಗಳನ್ನು ನಾಟಕ ಪರಿಣಾಮಕಾರಿಯಾಗಿ, ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಬ್ಬರ ಅಭಿನಯವೂ ಸಹಜವೆನ್ನುವಷ್ಟರ ಮಟ್ಟಿಗೆ ಪಕ್ವ. ಹಿನ್ನೆಲೆಯಲ್ಲಿ ಬರುವ ಸಾಲುಗಳಂತೂ ಅದ್ಭುತ !... ಕೆಲ ಹೂಗಳು ಅರಳುವುದೇ ಬಾಡಲೆಂದು... ಕೆಲ ಹೂಗಳು ಶವದ ಮೇಲೆ ಹಾಕಲೆಂದು... ಸನ್ನಿವೇಶಕ್ಕೆ ಮನ ಕಲಕುವಂತಹ ಸಾಲುಗಳು... 

                     ನಮ್ಮ ಮನೆಯ ಘಟನೆಗಳೇ ಏನೋ ಎಂಬಷ್ಟು ಮನಕ್ಕೆ ತಾಕುವ ಕುಂದಾಪುರ ಕನ್ನಡದ ಸೊಗಡು "ಅಕ್ಕು" ವಿನ ಮೆರುಗನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ...ಪ್ರತಿ ಸನ್ನಿವೇಶ ಪೂರ್ಣಗೊಂಡಾಗಲೂ ಮನದಲಿ ಹತ್ತು ಹಲವು ಅಪೂರ್ಣ ಭಾವನೆಗಳ ಜನನ...ಕೆಲ ವಾಕ್ಯಗಳ ಮನನ...ಅರೆಕ್ಷಣದ ಕತ್ತಲೆಯಲ್ಲಿ ಕಳೆದುಹೋಗುವ ಭೂತದ (ಭೂತಕಾಲದ) ಮರಣ... ನೋಡುತ್ತಾ ಹೋದಂತೆ ಕುತೂಹಲ ಕೆರಳಿಸುವ "ಅಕ್ಕು" ನಾಟಕದ ಅಂತ್ಯ ವಿಭಿನ್ನ ಹಾಗೂ ವಿಶಿಷ್ಟ...ಅಂತಿಮವಾಗಿ ಹೇಳುವ ಸಾಲುಗಳಂತೂ ಅದ್ಭುತ !... ಒಟ್ಟಿನಲ್ಲಿ ವೈದೇಹಿಯವರ ಕಥೆಯ ಪಾತ್ರಗಳು ರಂಗಭೂಮಿಯ ಮೇಲೆ ಪ್ರಭಾವಶಾಲಿಯಾಗಿ ಮೂಡಿಬಂದಿದ್ದು ನೋಡುಗರ ಕಣ್ಮನ ತಂಪಾಗುವಂತೆ ಮಾಡಿದೆ. ನಾಟಕದ ಬಗ್ಗೆ ಕೇಳುವುದಕ್ಕಿಂತ ಹೋಗಿ ನೋಡಿದರೇನೇ ಚೆನ್ನ. ಮತ್ಯಾಕೆ ತಡ?... ಬೇಗನೇ ಹೋಗಿ ನೋಡ್ಕೊಂಡು ಬನ್ನಿ.... :) :) 

 - R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...