ಶನಿವಾರ, ಜುಲೈ 22, 2017

ನೆನಪುಗಳ ಬುತ್ತಿಯಿಂದ..

                                   ಸ್ಮೃತಿಪಟಲದಲಿ ನವಿರಾದ ಛಾಪು ಮೂಡಿಸಿದ ಕಾಲವದು. ಕಪಟತೆಯ ವಾಸನೆಯೂ ಸೋಕದ ಮುಗ್ಧ ಮನಗಳ ಕಾಲ. ಜೀವನದ ಪ್ರತಿ ಕ್ಷಣವನ್ನೂ ಕುತೂಹಲದಿಂದ ಎದೆಗಪ್ಪಿ ಸಂಭ್ರಮಿಸುತ್ತಿದ್ದ ಕಾಲ..ಅಂಬೆಗಾಲಿಡಲು ಆರಂಭಿಸಿದಾಗಿನಿಂದ ' ಪ್ರೌಢತೆ'ಯ ಮೆಟ್ಟಿಲು ಹತ್ತುವವರೆಗಿನ ಕಾಲ.... 

                ಯಾವ ನೋವು - ಚಿಂತೆಗಳಿಲ್ಲದೇ ಅಮ್ಮನ ಮಡಿಲಲ್ಲಿ ಹಾಯಾಗಿ ನಿದ್ರಿಸುತ್ತಿದ್ದ ದಿನಗಳು, ನಿಧಾನವಾಗಿ ತೆವಳುತ್ತ ಅಕ್ಕನದೋ ಇಲ್ಲಾ ಅಣ್ಣನದೋ ಪುಸ್ತಕದ ಹಾಳೆ ಹರಿದು ಕಿಲಕಿಲನೆ ನಗುತ್ತಿದ್ದ ಘಳಿಗೆ, ಮನೆಯಂಗಳದಲ್ಲಿ ಹೊರಳಾಡಿ, ಮಣ್ಣಿನ ಘಮ ಹೀರುತ್ತ ತುಸು ತುಸುವೇ ಬಾಯಿಗೆ ಹಾಕಿಕೊಂಡ ಸಮಯ, ಮೂರು ಗಾಲಿಗಳ ಸೈಕಲ್ ಓಡಿಸುವಾಗ ಏನೋ ಸಾಧಿಸಿದ ಸಂಭ್ರಮ, ಕೆಲದಿನಗಳ ಬಳಿಕ ಅಂಗನವಾಡಿಗೆ ಹೋಗುವ ಹಬ್ಬ, ಅಲ್ಲಿ ದಿನವಿಡೀ ಆಟವಾಡಿ ನೆಪಮಾತ್ರಕ್ಕೆ ಒಂದೆರಡು ಹಾಡು ಕಲಿತು, ಕೊಡುವ ಚಿತ್ರಾನ್ನವನ್ನೋ, ಉಂಡೆಯನ್ನೋ ತಿಂದು, ಕುಣಿಯುತ್ತ ಮನೆಗೆ ಬರುವುದು, ಮನೆಯಲ್ಲಿ ಅಜ್ಜ ಅಜ್ಜಿಯರ ಪ್ರೀತಿಯ ಕಡಲಲ್ಲಿ ತೇಲಿಹೋಗುವ ಅನುಭವ, ಕತೆ ಕೇಳುವ ಪರ್ವ, ಪ್ರಥಮ ಬಾರಿಗೆ ಶಾಲೆಯ ಮೆಟ್ಟಿಲು ಹತ್ತಿದ ವಿಭಿನ್ನ, ವಿಶಿಷ್ಟ, ವಿನೂತನ ಕ್ಷಣ , ಮೊದಲ ಗುರುಗಳು, ಮೊದಲ ಪಾಠ, ಮೊದಲ ಸ್ನೇಹದ ಸವಿ... 
         
           ಹುಡುಗ - ಹುಡುಗಿ ಎಂಬ ಭೇದವಿಲ್ಲದೇ ಸಣ್ಣ ಬಳಪಕ್ಕೋ, ಇನ್ನೊಂದಕ್ಕೋ ಕಿತ್ತಾಡುತ್ತಿದ್ದ ಬಾಲ್ಯದ ರಸನಿಮಿಷಗಳು, ವಾರಕ್ಕೊಮ್ಮೆ ಮಾತ್ರವಿದ್ದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಯೋಗ, ವ್ಯಾಯಾಮದ ತರಗತಿಗಳು, ಚಾತಕಪಕ್ಷಿಯಂತೆ ಸಂಜೆ ಆಟಕ್ಕೆ ಬಿಡುವುದನ್ನೇ ಕಾಯುತ್ತಿದ್ದ ಪುಟ್ಟ ಜೀವಗಳು, ಶಾಲೆಯ ಪುಟ್ಟ ಅಂಗಳದಲ್ಲೇ ಲಗೋರಿಯೋ, ಖೋಖೋವೋ ಆಡಿ ನಲಿದಾಡುವ ಖುಷಿ, ಪ್ರತಿವರ್ಷ ಅಗಸ್ಟ್ 15ಕ್ಕೋ, ಜನವರಿ 26ಕ್ಕೋ ಕಾಯುವುದು, ಊರ ತುಂಬ ಘೋಷಣೆ ಕೂಗುತ್ತ ಜಾಥಾ ಹೋಗಿ, ಧೂಳೆಬ್ಬಿಸಿ ಬರುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೊನೆಯಲ್ಲಿ ಕೊಡುವ ಚಾಕಲೇಟಿಗಾಗಿ ಕಾಯುತ್ತ ಕುಳಿತುಕೊಳ್ಳುವ ಸರಳ ಮನಗಳು... 

                      ಸಂಜೆ ಶಾಲೆ ಮುಗಿಸಿ ನೇರವಾಗಿ ಮನೆಗೆ ಹೋದ ದಿನಗಳೇ ಇಲ್ಲವೇನೋ. ಅಲ್ಲೇ ಪಕ್ಕದಲ್ಲಿದ್ದ ಹುಣಸೇಮರದಿಂದ ಹುಣಸೇಕಾಯಿ ಕಿತ್ತುಕೊಡಲು ಹುಡುಗರನ್ನು ಪೀಡಿಸುವುದು, ಅತ್ತ ಅವರು ಮರಕ್ಕೆ ಕಲ್ಲು ಹೊಡೆಯುತ್ತ ನಿಂತರೆ ಇತ್ತ ನಮ್ಮದು ಪಕ್ಕದ ಬೆಟ್ಟಕ್ಕೆ ಹೋಗಿ ಬಿಳಿ ಮುಳ್ಳೇಹಣ್ಣು, ಕುಸುಮಾಲೆ ಹಣ್ಣು, ಕರಿಸೂಜಿ ಹಣ್ಣುಗಳ ಕೊಯ್ದು ತರುವ ಸಾಧನಾ ಕಾರ್ಯ, ಎಲ್ಲವನ್ನು ಹಂಚಿ ತಿನ್ನುವ ಸುಸಮಯ, ಸೈಲೆಂಟಾಗಿ ಯಾರ್ಯಾರದೋ ಮನೆಯ ತೋಟಕ್ಕೆ ಹೋಗಿ ಮಾವಿನಹಣ್ಣು ಕದಿಯುವ ತುಂಟತನ, ಸಂಜೆ ಗದ್ದೆಯಂಚಿಗೆ ಹೋಗಿ ರೈಲು ಹಳಿಗಳ ಮೇಲೆ ಒಂದು ರೂಪಾಯಿ ನಾಣ್ಯವನ್ನಿಟ್ಟು, ರೈಲು ಹೋದಮೇಲೆ ದೊಡ್ಡದಾಗಿ ಬಿದ್ದಿರುವ ಆ ನಾಣ್ಯವನ್ನು ಹೆಕ್ಕಿ ತರುತ್ತಿದ್ದ ಕ್ಷಣ... 

                  ಮಳೆಗಾಲದಲ್ಲಂತೂ ನಮ್ಮ ತರಲೆ - ತುಂಟಾಟಗಳು ತುಸು ಹೆಚ್ಚೇ !!... ಬೇಕೆಂದೇ ಮಳೆ ಬರುವಾಗ ಛತ್ರಿ ಇದ್ದರೂ ಬೀಳುವ ಹನಿಗಳೊಡನೆ ಪುಟ್ಟ ಜೀವಗಳ ಸಂಭಾಷಣೆ, ಪೂರ್ತಿ ಒದ್ದೆಯಾಗಿ ಮನೆ ತಲುಪುವ ತವಕ, ಮನೆಯಲ್ಲಿ ಎಲ್ಲ ಬೈಯ್ಯುವಾಗ ತಲೆ ತಗ್ಗಿಸಿ ನಿಂತು, ಅವರು ಅತ್ತ ಹೋದಾಕ್ಷಣ ಮುಖದಲ್ಲಿ ತಟ್ಟನೆ ಮೂಡುವ ಮುಗುಳ್ನಗೆ..., ಪುಸ್ತಕದ ಹಾಳೆಗಳಿಗಂತೂ ಆಗ ಕಾಗದದ ದೋಣಿಯ ರೂಪ... ಮಳೆ ನಿಂತ ಮೇಲೆ ರಸ್ತೆಯ ಹೊಂಡಗಳಲ್ಲೆಲ್ಲ ನಾವು ಬಿಟ್ಟ ಕಾಗದದ ದೋಣಿಯ ಅವಶೇಷಗಳು... (ನಮ್ಮೂರ ರಸ್ತೆಯ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳುವುದು ಇಲ್ಲಿ ಅಪ್ರಸ್ತುತ). ಕೆರೆಯ ನೀರಿಗೆ ಕಲ್ಲೆಸೆದು ಅದು ಒಂದೆರಡು ಬಾರಿ ನೀರಮೇಲ್ಮೈಯನ್ನು ಸ್ಪರ್ಷಿಸಿ ಕಡೆಗೆ ಮುಳುಗಿದರೆ ಅದನ್ನೇ ದೊಡ್ಡ ಚಾಕಚಕ್ಯತೆ ಎಂಬಂತೆ ಮೆರೆಯುವ ಆ ಘಳಿಗೆಗಳು, ಐಸ್ ಕ್ರೀಮ್ ತಿನ್ನಲೆಂದೇ ಜಾತ್ರೆಗೆ ಹೋಗಲು ಪರಿತಪಿಸುವ ಆ ಪುಟ್ಟ ಮನಗಳು, ಹಬ್ಬಗಳಲ್ಲಿ ಹೊಸ ಅಂಗಿ ಹಾಕಿ ಕುಣಿದು ಕುಪ್ಪಳಿಸುತ್ತಿದ್ದ ಆ ಕ್ಷಣ.. 

            ಪ್ರತಿ ಕ್ಷಣಗಳೂ ಪ್ರತಿ ನಿಮಿಷಗಳೂ, ಪ್ರತಿ ಅನುಭವಗಳೂ ಅಮೋಘ, ಅದ್ಭುತ, ಅವರ್ಣನೀಯ... ಆ ಸುಂದರ ಅನುಭೂತಿಯನ್ನು ಹೇಳಲು ಪದಗಳೇ ಸಾಲದು...ಕೆಲವು ಸುಮಧುರ ಅನುಭವಗಳನ್ನು ವಿವರಿಸುವ ಗೋಜಿಗೆ ಹೋಗಬಾರದು. ಸುಮ್ಮನೆ ಹೃದಯ ತುಂಬಿ ಅನುಭವಿಸಬೇಕಷ್ಟೇ, ಆಸ್ವಾದಿಸಬೇಕಷ್ಟೇ...! 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...