Some Lines ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Some Lines ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಆಗಸ್ಟ್ 16, 2020

ಹಾಸ್ಟೆಲ್ ಕತೆಗಳು

ರೂಮಿನ ಎಲ್ಲ ಹುಡುಗರು ಸೇರಿ ರಾತ್ರಿ ಹನ್ನೆರಡು ಗಂಟೆಗೆ ಬರ್ತಡೇ ಪಾರ್ಟಿ ಮಾಡುತ್ತಿದ್ದರು. ಖುಷಿಯಲ್ಲಿ ಗದ್ದಲ ಹೆಚ್ಚಿದ್ದು ಅವರ ಅರಿವಿಗೆ ಬರುವಷ್ಟರಲ್ಲಿ ಬಂದ ಸಿಡುಕು ಮೂತಿಯ ವಾರ್ಡನ್ ಚೆನ್ನಾಗಿ ಬೈದು, "ಅಪಾಲಜಿ ಲೆಟರ್ ಬರೆಯದಿದ್ದರೆ ಹಾಸ್ಟೆಲ್ನಿಂದ ಹೊರಹಾಕ್ತೇನೆ" ಎಂದು ರೂಮಿಂದ ಹೋಗುವಾಗ ಹುಡುಗರ ಖುಷಿಯೂ, ಉತ್ಸಾಹವೂ ವಾರ್ಡನ್ ಹಿಂದೆಯೇ ಹೋಗಿಬಿಟ್ಟಿತ್ತು !
*****************************

ರಾತ್ರಿ ಹತ್ತುಗಂಟೆ. ಹಾಸ್ಟೆಲ್ನಲ್ಲಿ ಅಚಾನಕ್ಕಾಗಿ ಕರೆಂಟ್ ಹೋಯಿತು. ಇದಕ್ಕಾಗೇ ಕಾದಿದ್ದರೇನೋ ಎಂಬಂತೆ ವಾರ್ಡನ್ ನಿಂದ ತುಂಬಾ ಸಲ ಬೈಸಿಕೊಂಡಿದ್ದ ಹುಡುಗರು ವಾರ್ಡನ್ ಮುಖಕ್ಕೆ ಬೆಡ್ಶೀಟ್ ಮುಚ್ಚಿ ಯರ್ರಾಬಿರ್ರಿ ಹೊಡೆದರು. ಕರೆಂಟ್ ಬರುವಷ್ಟರಲ್ಲಿ ಕತ್ತಲೆಯ ಜೊತೆಗೆ ಹುಡುಗರೂ ಮಾಯ !
*****************************

ಊರಿಗೆ ಮೊಟ್ಟ ಮೊದಲು ವಾಷಿಂಗ್ ಮಷೀನ್ ಅಂತ ಬಂದಿದ್ದು ಅವಳ ಮನೆಗೆ. ಅದನ್ನೇ ಖುಷಿಯಿಂದ ರೂಮ್ ಮೇಟ್ಸಿಗೆಲ್ಲಾ ಹೇಳುವ ಅವಳು ಹಾಸ್ಟೆಲ್ ನಲ್ಲಿ ಕೈಯ್ಯಾರೆ ಬಟ್ಟೆ ಒಗೆಯುವ ಕೆಲಸಕ್ಕೆ ಒಗ್ಗಿಹೋಗಿದ್ದಳು !
*****************************

"ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ.." ಎಂದು ಪಾಠ ಮಾಡುತ್ತಿದ್ದ ಟೀಚರ್ ನ ಮಗಳು ಹಾಸ್ಟೆಲ್ ನ ಸಪ್ಪೆ ಊಟ ತಿನ್ನಲಾಗದೇ  ಗೆಳತಿಯರೊಡನೆ ಮೆಸ್ ನಲ್ಲಿ ಹಸಿಮೆಣಸಿನ ಕಾಯಿ ಕದ್ದಿದ್ದಳು !
*****************************
- R. R. B.

ಭಾನುವಾರ, ಆಗಸ್ಟ್ 2, 2020

ಸ್ನೇಹ ದಿನದ ಶುಭಾಶಯ

"ರಕ್ತ ಸಂಬಂಧಗಳಾ ಮೀರಿದಾ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು...." ಕವಿರಾಜ್ ಸರ್ ಬರೆದ ಈ ಹಾಡು ಒಂಥರಾ ಕನ್ನಡದ ಸಾರ್ವಕಾಲಿಕ ಸ್ನೇಹಗೀತೆ !... ಪ್ರತೀ ಬಾರಿ ಕೇಳಿದಾಗ ಹಳೆಯ ಸ್ನೇಹಿತ/ತೆಯರ ನೆನಪು, ನಾವು ಸಾಗಿ ಬಂದ ಕ್ಷಣಗಳ ಖುಷಿ, ಆ ತುಂಟಾಟ, ಒಡನಾಟ ಎಲ್ಲವೂ ಒಮ್ಮೆ ನೆನಪಾಗಿ ತುಟಿಯಂಚಿನಲ್ಲಿ ಕಿರು ನಗೆ ಮೂಡುತ್ತದೆ.
ಗೆಳೆತನ ಎಂಬುದೇ ಹಾಗೆ... ಸುಖ ದುಃಖಗಳ ಹಂಚಿಕೊಳ್ಳುತ್ತ ಸವಿನೆನಪುಗಳಲ್ಲಿ ಜಾಗ ಪಡೆಯುವ ದಿವ್ಯ ಭಾವ ! 

               ಹುಟ್ಟಿನಿಂದ ಸಾವಿನತ್ತ ಸಾಗುವ ಪಯಣದಲ್ಲಿ ಮಧ್ಯೆ ಜೊತೆಯಾಗಿ ಪ್ರೀತಿಯ ಸೋನೆ ಸುರಿಸುವ ಸ್ನೇಹಿತರು ಸಾವಿರಾರು... ಅಚಾನಕ್ಕಾಗಿ ಸಿಕ್ಕ ಕೆಲವರು ಮನದಂಗಳದಲ್ಲಿ ಖಾಯಂ ಅಂಗಡಿ ಹಾಕಿದರೆ, ವರ್ಷಗಟ್ಟಲೇ ನಮ್ಮ ಜೊತೆಗಿದ್ದ ಕೆಲವರು ಸದ್ದಿಲ್ಲದೇ ಜಾಗ ಖಾಲಿ ಮಾಡಿರುತ್ತಾರೆ. ಮತ್ತೆ ಹೊಸ ಗೆಳೆಯರು ಆ ಜಾಗ ತುಂಬುತ್ತಾರೆ... ಇದೊಂಥರಾ ಆವರ್ತ. ವಯಸ್ಸು, ಸ್ಥಳ, ಪರಿಸರ ಬದಲಾದಂತೆ ಸ್ನೇಹಿತರು ಬದಲಾಗುತ್ತಾರೆ. ಮೊಬೈಲಿನಲ್ಲಿ ಕಾಂಟ್ಯಾಕ್ಟ್ ನಂಬರುಗಳ ಪಟ್ಟಿ ಬೆಳೆಯುತ್ತದೆ. ಆದರೆ ಕೆಲವೇ ಕೆಲವು ಆಪ್ತರು ಮಾತ್ರ ಆರಂಭದಿಂದ ಕೊನೆವರೆಗೆ ನಮ್ಮ ಕಿತಾಪತಿಗಳಿಗೆ ಜೊತೆಯಾಗಿ ಬದುಕ ಹಾಳೆಗೆ ಭಾವಗಳ ಬಣ್ಣ ತುಂಬಿ,  ನಗುತ್ತಿರುತ್ತಾರೆ. 

             ಸ್ನೇಹ ಎಂಬ ಎರಡಕ್ಷರದ ಪದವೇ ಅಸಂಖ್ಯಾತ ಕವನಗಳ ಸಂಕಲನ. ಎಷ್ಟು ಬರೆದರೂ ಎಷ್ಟು ಮಾತನಾಡಿದರೂ ಮುಗಿಯದ ಸರಕು ಪ್ರೀತಿಯನ್ನು ಬಿಟ್ಟರೆ ಇದೇ ಇರಬೇಕು...! ಜೀವನದ ಕಷ್ಟಗಳಿಗೆ ಜೊತೆಯಾಗಿ, ಸಂಭ್ರಮದಲ್ಲಿ ಭಾಗಿಯಾಗಿ, ಮುಖದಲ್ಲೊಂದು ಮುಗುಳುನಗೆ ಸದಾ ಇರುವಂತೆ ನೋಡಿಕೊಳ್ಳುವ ನನ್ನೆಲ್ಲಾ ಸ್ನೇಹಿತ/ಸ್ನೇಹಿತೆಯರಿಗೆ ಪ್ರೀತಿಯಿಂದ ಧನ್ಯವಾದ ಹೇಳುತ್ತಾ, ಈ ಖುಷಿ ಹೀಗೇ ಇರಲಿ ಎಂಬ ಸಣ್ಣ ಬೇಡಿಕೆಯೊಂದಿಗೆ,

Happy Happy Friendship Day !! 😍😍

ಶನಿವಾರ, ಜೂನ್ 6, 2020

ಹನಿಗವನ

ನಿಲ್ಲದೇ ಸುರಿಯುವ ಮಳೆ
ಮೋಡದ ಅಳುವೆಂದರೆ
ಭೂಮಿಗೆ ತುಂಬ ಖುಷಿ !
*************************

ನನ್ನ ಕನಸಿನ ಹೊಂಬಾಳೆ
ಕಳಚಿ ಬೀಳುತ್ತಿದೆ - ಅದಕೂ
ಮಣ್ಣ ಸೇರೋ ತವಕವೇ?
*************************

ಹೂದಾನಿಯ ಕಾಗದದ ಹೂವಿಗೆ
ಅರಳುವುದಕೆ ಹೊತ್ತಿಲ್ಲ ಗೊತ್ತಿಲ್ಲ 
ಸುವಾಸನೆಯಂತೂ ದೂರದ ಮಾತು !!
************************

ಅವಳ ಬಣ್ಣ ಬಣ್ಣದ ಕೊಡೆಗೆ
ಮಳೆನೀರ ಸ್ನಾನದ ಬಯಕೆ
ಆಕೆ ಕಾಲು ಕಳೆದುಕೊಂಡು ವರುಷವೀಗ !!
************************
- R. R. B.

ಭಾನುವಾರ, ಸೆಪ್ಟೆಂಬರ್ 22, 2019

ಅನಿಸಿದ್ದು ಅನಿಸಿದ ಹಾಗೆ..!!

ಕಂಡ ಕನಸುಗಳೆಲ್ಲ ಹಾಯಾಗಿ ನನಸಾಗುವಂತಿದ್ದರೆ 
ಕನಸಿಗೆ ಬೆಲೆಯೇ ಇರುತ್ತಿರಲಿಲ್ಲ, 
ಮಳೆಗಾಲದಲಿ ಕಾಣದಾಗುವ 
ಕೆರೆದಂಡೆಯ ಮಣ್ಣ ಮೇಲಿನ ಹೆಜ್ಜೆ ಗುರುತಿನ ಹಾಗೆ !! 

ಜೀವನದಲ್ಲಿ ಎಷ್ಟೇ ಮುಂದೆ ಹೋದರೂ
ಒಮ್ಮೆಯಾದರೂ ಹಿಂದೆ ತಿರುಗಲೇಬೇಕು, 
ಬಂದ ದಾರಿಯ ನೆನೆಯಲೇಬೇಕು, 
ಭೋರ್ಗರೆದು ದಡಕ್ಕಪ್ಪಳಿಸುವ ಶರಧಿಯ
ಅಲೆ ಮರಳ ತೊರೆದು ಮರಳಿ ಹೋಗುವ ಹಾಗೆ !! 

ಕಳೆದ ಸವಿ ಕ್ಷಣಗಳ ಮೆಲುಕು ಹಾಕುವುದು 
ಕೇವಲ ಕಹಿ ವಾಸ್ತವವನ್ನು ಮರೆಯಲಷ್ಟೇ ಅಲ್ಲ, 
ಸಿಹಿನೆನಪುಗಳ ಅಂಗಳವ ಹಸಿರಾಗಿಡಲು ಕೂಡಾ!! 

ಬದುಕೆಂಬ ಗುರು, ನಾವು ತಪ್ಪು ಮಾಡಿದಂತೆಲ್ಲ 
ಕಬ್ಬಿಣದ ಸ್ಕೇಲಿನ ಹೊಡೆತ ನೀಡುತ್ತಲೇ
ಇರುತ್ತಾನೆ - ಪಾಠ ಕಲಿವವರೆಗೆ, ಮೌಲ್ಯಗಳ ಅರಿವವರೆಗೆ‌...
ಏಕೆಂದರೆ ಜೀವನ ಕಾನ್ವೆಂಟ್ ಶಾಲೆಯಲ್ಲವಲ್ಲ !! 

-R.R.B. 

ಶನಿವಾರ, ಜುಲೈ 22, 2017

ನೀನಾಗಬೇಕು...

              ಇನ್ನೂ ಚಿತ್ತಾರಗಳೇ ಮೂಡಿರದ ಖಾಲಿ ಹಾಳೆ ನಾನು. ಅದರಲಿ ಬರೆವ ಲೇಖನಿ ನೀನಾಗಬೇಕು. ನನ್ನಲ್ಲಿರುವ ಭಾವನೆಗಳು ಬತ್ತಿ ಬಾಡಿಹೋಗುವ ಮುನ್ನ ನವಭಾವ ಪಲ್ಲವಿಸುವಂತೆ ಮಾಡುವ ಜೀವಜಲ ನೀನಾಗಬೇಕು. ತಲೆಬುಡವೇ ಇಲ್ಲದಂತಹ ನನ್ನ ಹುಚ್ಚು ಮಾತಿಗೆ ಅರ್ಥ ನೀನಾಗಬೇಕು. ನನ್ನಲ್ಲಿನ 'ನ'ಕಾರಗಳ ಅಳಿಸಿ ಆತ್ಮವಿಶ್ವಾಸ ತುಂಬುವ ಚೇತನ ನೀನಾಗಬೇಕು. 
                ನನ್ನೆಲ್ಲ ಕನಸುಗಳ ಸಾಕಾರರೂಪ ನೀನಾಗಬೇಕು. ನಾ ಮಾಡುವ ತರಲೆ - ತುಂಟಾಟಗಳಿಗೆ ಜೊತೆಗಾರ ನೀನಾಗಬೇಕು. ಹರೆಯದ ಧುಮ್ಮಿಕ್ಕುವ ಭಾವಗಳಿಗೆ ಹರಿವಿನ ಮಾರ್ಗ ನೀನಾಗಬೇಕು. ನನ್ನೆಲ್ಲಾ ಬಯಕೆಗಳ ಮೂರ್ತ ರೂಪ ನೀನಾಗಬೇಕು. ಮಾತುಗಳೇ ಇಲ್ಲದ ನೀರವ ಮೌನದಲ್ಲಿ ಅನುರಕ್ತಿಯ ಅಭಿವ್ಯಕ್ತಿ ನೀನಾಗಬೇಕು. ನನ್ನ ಕಾಲುದಾರಿಯ ಪಯಣಕೆ ಗಮ್ಯ ನೀನಾಗಬೇಕು. ನೋಡುವ ಕಣ್ಣುಗಳು ನನ್ನದಾದರೆ ನೋಟ ನೀನಾಗಬೇಕು. ಹಾಡು ನಾನಾದರೆ ರಾಗ ನೀನಾಗಬೇಕು. ಅನುರಾಗದ ಭಾವ ನೀನಾಗಬೇಕು. ನನ್ನಲ್ಲಿನ ' ನಾನು ' ಕಳೆದು ನೀನಾಗಬೇಕು. ಕೇವಲ ನೀನಾಗಬೇಕು... 

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...