ಶನಿವಾರ, ಮೇ 30, 2020

ನನ್ನ ಕನ್ನಡಕದ ಕಣ್ಣಲ್ಲಿ - ಕುಂಜಾಲು ಕಣಿವೆಯ ಕೆಂಪು ಹೂವು...


                      ನಾ. ಡಿಸೋಜ ಅವರು ಬರೆದ "ಕುಂಜಾಲು‌ಕಣಿವೆಯ ಕೆಂಪು ಹೂವು" 1987ರಲ್ಲಿ ಪ್ರಕಟವಾದ ಕೃತಿ. ಅರಣ್ಯ ನಾಶ, ನಗರೀಕರಣ, ಜಲ ಮಾಲಿನ್ಯ ಎಂದು ಪರಿಸರ ನಾಶ ಹೆಚ್ಚಾಗುತ್ತಿದ್ದ ಕಾಲದಲ್ಲಿ, ಪ್ರಕೃತಿ ಮಾತೆಯ ಬಗ್ಗೆ ಕಾಳಜಿವಹಿಸಿ ಬರೆದ ಒಂದು ವಿಭಿನ್ನ ಕೃತಿ ಇದು...

                       ಮಹಾನಗರದ ಯಾಂತ್ರಿಕ ಬದುಕು, ಮುಗಿಯದ ಸಂಸಾರದ ಜಂಜಡದಲ್ಲಿ ಕಳೆದುಹೋಗಿದ್ದ ವ್ಯಕ್ತಿಯೋರ್ವ ಮನಃಶಾಂತಿ ಬಯಸಿ ಕಛೇರಿಗೆ ರಜೆ ಹಾಕಿ, ತನ್ನ ಹುಟ್ಟೂರಿಗೆ ತೆರಳಿದಾಗ ಅಲ್ಲಿ ನಡೆಯುವ ಸಾಲು ಸಾಲು ಘಟನೆಗಳೇ ಈ ಕಾದಂಬರಿಯ ಜೀವಾಳ.
      
                    ಸಂಪರ್ಕ ಸಾಧನಗಳು ಕಡಿಮೆಯಿದ್ದ ಆ ಕಾಲಕ್ಕೆ ಜನರಲ್ಲಿದ್ದ ಪ್ರೀತಿ, ವಿಶ್ವಾಸ, ಸಹಾಯಹಸ್ತ ನೀಡುವ ಮುಗ್ಧ ಮನ - ಇವೆಲ್ಲವೂ ಕಾಲಚಕ್ರದ ಗತಿಗೆ ಕಡಿಮೆಯಾದ ಪರಿ, ಕಣ್ಮನ ಸೆಳೆಯುತ್ತಿದ್ದ ಬೆಟ್ಟ ಗುಡ್ಡಗಳು ರಸ್ತೆ, ಸೇತುವೆ ಎಂಬ ಹೆಸರಿನಲ್ಲಿ ವಿರೂಪಗೊಂಡ ಕತೆ, ಅಷ್ಟೇ ಏಕೆ ಬೆಲೆ ಕಳೆದುಕೊಳ್ಳುತ್ತಿರುವ ಸಂಬಂಧಗಳ ಮೌಲ್ಯ ಎಲ್ಲವೂ ಓದುಗರಿಗೆ ಈರುಳ್ಳಿಯ ಪೊರೆಯಂತೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ತೀರಿ ಹೋದ ಅಪ್ಪನ ಹಳೆಯ ಅನುಭವಗಳ ಸರಮಾಲೆಯ ಸವಿಯುತ್ತ, ಹೊಸ ಅನುಭವಗಳ ಜಾಡು ಹಿಡಿದು ಭಾವುಕನೊಬ್ಬ ಕುಂಜಾಲು ಕಣಿವೆ ತಲುಪುವ ಕತೆ ಎಲ್ಲಿಯೂ ಒಂದರೆ ಕ್ಷಣವೂ ಬೇಸರ ತರುವುದಿಲ್ಲ. ಪ್ರತಿ ನಿಮಿಷವೂ ಕುತೂಹಲ ಗರಿಗೆದರಿದ ಹಕ್ಕಿಯಂತೆ... ಪಟ್ಟಣದ ಬದುಕಿಗೆ ಅತಿಯಾಗಿ ಒಗ್ಗಿಕೊಂಡ ನಮ್ಮ ನಿಮ್ಮಂಥ ಸಾಮಾನ್ಯನೊಬ್ಬ ಹಳೆಯ ನೆನಪುಗಳ ಮತ್ತೆ ಹೆಕ್ಕಿ ಬಗಲಿಗೇರಿಸಲು ಸಾಗುವ ಕಾಲುದಾರಿಯ ಪಯಣದ ಕತೆ ಇದು...

                       ಇತಿಹಾಸದ ಹಲವು ಕತೆ, ಗಿರಿಜನರ ಜೀವನಗಳಲ್ಲಿ ಬೆಸೆದುಕೊಂಡ ಅದ್ಭುತ ಕೆಂಪು ಹೂವನ್ನು ನೋಡಲು ಕುಂಜಾಲು ಕಣಿವೆಯ ತುದಿ ತಲುಪಿದಾಗ ಆತನಲ್ಲಿದ್ದ ಆ ವಿಚಿತ್ರ ಭಾವ, ಜೀವನದ ಅತಿ ದೊಡ್ಡ ಸಾಧನೆಯಿದು ಎಂಬ ಅತ್ಯಾನಂದದಿಂದ ಕಣಿವೆಯ ಕೆಳಗೆ ಇಣುಕಿದಾಗ ಆತ ಕಂಡಿದ್ದಾದರೂ ಏನು?... ಇದನ್ನೆಲ್ಲ ನಾನು ಹೇಳಬಾರದು !! ಕಾದಂಬರಿಯನ್ನು ಅದಾಗಲೇ ಓದಿದ್ದವರು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ. ಇನ್ನೂ ತನಕ ಓದದೇ ಇರುವವರು ದಯಮಾಡಿ ಓದಿ !!

ವಿಷಯ ಸೂಚಿ : ಕೆಲವು ತಿಂಗಳುಗಳ ಹಿಂದೆ ಓದಿದ ಕತೆಯಿದು.. ಸದ್ಯಕ್ಕೆ ನನ್ನ ಬಳಿ ಪುಸ್ತಕ ಇಲ್ಲದೇ ಇರುವುದರಿಂದ ನೆನಪಲ್ಲಿ ಉಳಿದ ಒಂದಿಷ್ಟನ್ನು ಪದಕ್ಕಿಳಿಸುವ ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ.

ಬುಧವಾರ, ಮೇ 27, 2020

ಕಾಮರ್ಸ್_ಕವಿತೆಗಳು_8

ಮೂಲತತ್ತ್ವಗಳೆಂದೂ ಎಲ್ಲಕೂ ಅನ್ವಯ
ಬರೀ ಕಾಸ್ಟಿಂಗ್ ಪುಸ್ತಕದಲ್ಲಷ್ಟೇ ಅಲ್ಲ
ಜೀವನಕ್ಕೂ ಬಳಸಿದರೆ 5S, ಕೈಝನ್
ಇರೋದಿಲ್ಲ ಯಾವುದೇ ಟೆನ್ಶನ್ !!

- R. R. B.

ಕಾಮರ್ಸ್_ಕವಿತೆಗಳು_7

 ರಿಸ್ಕ್ ತಪ್ಪಿಸಲು ಕಂಪನಿಗಳಲ್ಲಿ ಕೂಡ
ಎಂಪ್ಲಾಯಿಗೆ ಡಿಫೈನ್ಡ್ ಕಾಂಟ್ರಿಬ್ಯೂಷನ್ ಪ್ಲ್ಯಾನ್
ಬದುಕ ದೋಣಿಯ ಅನಿಶ್ಚಿತ ಪಯಣದಲ್ಲಿ  
ಭವಿಷ್ಯವೂ ಸುಂದರ ಇದ್ದರೆ ಫ್ಯೂಚರ್ ಪ್ಲ್ಯಾನ್

- R. R. B.

ಹೀಗೊಂದು ಕವಿತೆ...

ಕವಿತೆ ಬರೆಯಬೇಕೆಂದಿದ್ದೆ ನಾನು -
ಹಲವು ಭಾವಗಳ ತೊಟ್ಟಿಲ ತೂಗಿ
ಪದಗಳ ಮಡಿಲಿಗೆ ಮೊರೆ ಹೋಗಿ
ಅಂತರಾಳದ ಎಳೆಯ ಹಾಳೆಗಿಳಿಸುವ
ವಿಭಿನ್ನ ಹುಚ್ಚು ಪ್ರಯತ್ನದಲ್ಲಿ....

ಜೀರಿಗೆ, ಸಾಸಿವೆ, ಮೆಂತ್ಯ ಡಬ್ಬಗಳಲಿ 
ಕಾಪಿಡುವ, ಮುಗಿಯದ ಅಮ್ಮನ ಪ್ರೀತಿ
ಎಂದೋ ಆಡಿದ ಹಾಳೆಬಂಡಿಯ ಆಟ
ಸಂಜೆಯ ಸೂರ್ಯನ ಮರೆತ ಚೆನ್ನೆ ಮಣೆ
ಬೋಗಿಗಳ ನಡುವೆ ಅಂತರ ಮರೆತ ರೈಲಾಟ
ಸಮಯದ ಪರಿವೆಗೆ ಸಿಗದ ಆ ತುಂಟಾಟ
- ಎಲ್ಲವನೂ ಕವಿತೆಯಾಗಿಸಬೇಕೆಂದಿದ್ದೆ...

ಬೇಕೆಂದೇ ಮರೆತು ಬಿಟ್ಟುಹೋದ ಜೋಡುಗೆರೆ ಪಟ್ಟಿ
ಸುಖಾ ಸುಮ್ಮನೆ ಹೋಗಿ ಕೆಡಿಸಿದ ಸಂಗೀತ ಕ್ಲಾಸು
ಮಳೆಗಾಲದಲಿ ರಸ್ತೆಯ ಗುಂಡಿಯಲಿ ಬಿಟ್ಟ ದೋಣಿ 
ಚಳಿಗಾಲದ ಅಂತ್ಯಕೆ ಹುಣಸೇಬೆಟ್ಟೆಯ ಹುಚ್ಚು
ವರ್ಷ ವರ್ಷ ಪ್ರಭಾತಪೇರಿಗೆ ಶಾಲೆ ಮುಂದಣ ಚರ್ಚು
- ಎಲ್ಲವೂ ನೆನಪ ಮೂಟೆಯಲಿ
ತನ್ನದೊಂದು ಸ್ಥಾನವಿದೆಯೆಂದವು...

ನಾನೋ, ಬರೆಯುವ 
ಅತೀವ ಬಯಕೆಯಲಿದ್ದೆ
ಆದರೆ ಜಿದ್ದಿಗೆ ಬಿದ್ದಂತೆ 
ಕವಿತೆ ಬಳಿ ಬರಲೇ ಇಲ್ಲ,
ನನ್ನತ್ತ ಸುಳಿಯಲೂ ಇಲ್ಲ,
ಬೇಜಾರಲ್ಲಿ ಸುಮ್ಮನೆ ಕುಳಿತರೆ
ಮನಸೀಗ ರಾತ್ರಿ ಮಸಣದಂತೆ
ಸದ್ದಿಲ್ಲ, ಬರೀ ಖಾಲಿ ಖಾಲಿ...

- R. R. B.

ಕಾಮರ್ಸ್_ಕವಿತೆಗಳು_6

ಅರ್ಧಕ್ಕೆ ನಿಲ್ಲಿಸಿದ ಚಲನಚಿತ್ರವೊಂದರ
ಖರ್ಚುಗಳನ್ನು ಟ್ಯಾಕ್ಸ್ ನಿಂದಾದರೂ
ಸುಲಭವಾಗಿ ಕಳೆದುಬಿಡಬಹುದು
ಆದರೆ ಅದಕ್ಕೆ ಪಟ್ಟ ಕಲಾವಿದರ ಪರಿಶ್ರಮ?
ಅದು ಬರೀ ಅನುಭವದ ಕೂಡಿಕೆಯಷ್ಟೇ...

- R. R. B.

ಕಾಮರ್ಸ್_ಕವಿತೆಗಳು_5

ಅದೊಂದು ಕಾಲವಿತ್ತು
ಹಿರಿಯರಿಗೆ ನಮಸ್ಕರಿಸಿದರೆ 
ಸಿಗುತ್ತಿದ್ದ ಆಶೀರ್ವಚನ -
"ಸಕಲೈಶ್ವರ್ಯ ಪ್ರಾಪ್ತಿರಸ್ತು"

ಇನ್ನು ಮುಂದೊಂದು ಕಾಲ
ನಮ್ಮಂಥವರೆಲ್ಲ ಮುದುಕಾದಾಗ
"ಬೇಗ ಸರ್ಚಾರ್ಜ್ ಕಟ್ಟುವಂತಾಗ್ಲಿ"
ಅಂತ ಡಿಫರೆಂಟಾಗಿ ಹರಸಬಹುದೇನೋ...

- R. R. B.

ಕಾಮರ್ಸ್_ಕವಿತೆಗಳು_4

ಅಕೌಂಟಿಂಗ್‌ನಲ್ಲಿ ಎಂದೂ ಇಲ್ಲ
ಲ್ಯಾಂಡಿಗೆ ಡಿಪ್ರಿಸಿಯೇಷನ್ 
ಏಕೆಂದರೆ ಎಲ್ಲರಿಗೂ ಗೊತ್ತು
ಭೂಮಿ ತಾಯಿಯ ಪ್ರೀತಿಗೆ ಇಲ್ಲ
ಯಾವತ್ತೂ ಎಕ್ಸಪೈರೇಷನ್...

- R. R. B.

ಕಾಮರ್ಸ್_ಕವಿತೆಗಳು_3

ತೋಚಿದ್ದು ಗೀಚುವ ಹಸ್ತಾಕ್ಷರಕ್ಕೆ ಬೆಲೆ ಬರುವುದು -
ಬ್ಯಾಂಕ್ ಆಡಿಟ್ ಗೆ ಎಲ್ಲೆಡೆ ಸಹಿ ಹಾಕಿ
ಎಂಟೋ ಒಂಭತ್ತೋ ಲಕ್ಷ ಪಡೆದಾಗಲ್ಲ,
ಕಪಟವಿಲ್ಲದ ಸರ್ಕಾರಿ ಶಾಲೆಯ ಪುಟ್ಟಿ
"ಅಕ್ಕಾ ಆಟೋಗ್ರಾಫ್ ಹಾಕಿ.." ಅಂದಾಗ...

- R. R. B.

ಕಾಮರ್ಸ್_ಕವಿತೆಗಳು_2

ಬೆಳಗಿಂದ ರಾತ್ರಿಯ ತನಕ ಯೋಚಿಸಿ,
ನಿರ್ಜೀವ ಲ್ಯಾಪ್‌ಟಾಪ್ ಕುಟ್ಟಿ ಕುಟ್ಟಿ
ಉಳಿಸಿದ್ದು - ಯಾರೋ ಕಟ್ಟಬೇಕಾದ ತೆರಿಗೆ
ಕೆಲಸ ಮುಗಿಸಿ ಹಿಂತಿರುಗಿ ನೋಡಿದರೆ
ಕಳೆದೇ ಹೋಗಿತ್ತು - ಜೀವನದ ಸಿಹಿ ಘಳಿಗೆ...

- R. R. B.

ಕಾಮರ್ಸ್_ಕವಿತೆಗಳು_1

ದಿನವಿಡೀ ಎಸಿ ರೂಮಲ್ಲಿ ಕುಳಿತು
ಹೊರಜಗತ್ತಿನ ಇರುವಿಕೆ ಮರೆತು
ವೌಚಿಂಗ್ ಮಾಡುವವರ ಮನದಾಳದ ಪ್ರಶ್ನೆ -
ನನ್ನ ಹಸ್ತಾಕ್ಷರ ಮೂಡಬೇಕಾಗಿದ್ದು
ಪ್ರೀತಿಸಿದವರ ಅಂತರಾಳದಲ್ಲೋ
ಅಭಿಮಾನಿಗಳ ನೋಟ್ ಬುಕ್ಕಿನಲ್ಲೋ
ಇಲ್ಲಾ ಯಾರೋ ಯಾವಾಗಲೋ ತಂದ,
ಅಂತಿಮ ಸ್ಥಿತಿಯಲ್ಲಿರೋ ಅಕ್ಷರ ಮಾಸಿದ ಹಳೆ ಬಿಲ್ಲಿನಲ್ಲೋ ?...
                                      
 - R. R. B.

ಭಾನುವಾರ, ಮೇ 24, 2020

ರಾತ್ರಿ...

ತೆಂಗಿನ ಗರಿಯೊಂದು
ತಯಾರಿ ನಡೆಸುತ್ತಿದೆ
ಚಂದಿರನ ಹಣೆ ಮುಟ್ಟಲು
ಆಗಸದ ಅಂಚ ಸೇರಲು...

ಕೆರೆಬದಿಯಣ ಹೂವು
ಕನಸ ಕಾಣುತಲಿದೆ
ತಿಳಿನೀರ ಇಣುಕಲು
ಸಿಹಿಮೀನು ಹಿಡಿಯಲು...

ರಾತ್ರಿಯ ತಂಬೆಲರು
ಹೊಂಚು ಹಾಕುತಿದೆ
ಅರಳುವ ಹೂಗಳ ಸವರಲು
ಸುಗಂಧವ ಹರಡಲು...

ನಕ್ಷತ್ರಗಳ ಜೋಡಿಸಬೇಕಿದೆ
ಕಡುಗಪ್ಪು ಆಕಾಶದ ತುಂಬೆಲ್ಲ
ಶಶಿಯ ಏಕಾಂಗಿತನ ನೀಗಲು
ಹೊಸ ಕನಸುಗಳ ಹೆಣೆಯಲು...

- R. R. B.

ಶುಕ್ರವಾರ, ಮೇ 15, 2020

ಕಾರ್ಮೋಡ



              ಜಿಟಿ ಜಿಟಿ ಜಿಟಿ... ಎಂದು ನಿಲ್ಲದೆ ಸುರಿಯುವ ಸೋನೆ. ಸೂರ್ಯತೇಜ ಎಲ್ಲೋ ಮರೆಯಾಗಿ ವಾರಗಳೇ ಕಳೆದಿತ್ತು. ಇಳೆ - ಮಳೆಯ ಸಮಾಗಮದಿಂದ ರಸ್ತೆಯ ಇಕ್ಕೆಲವೂ ಹಸಿರ ರಾಶಿಯಿಂದ ತುಂಬಿತ್ತು. ಬಣ್ಣ ಬಣ್ಣದ ಕೊಡೆ ಹಿಡಿದ ಅನುಷ್ಕಾ ತನ್ನ ಸೀರೆಯ ನೆರಿಗೆಗಳನ್ನು ಒದ್ದೆಯಾಗಲು ಬಿಡದೇ ಹಿಡಿದು, ನಿಧಾನವಾಗಿ ಮನೆಯತ್ತ ಬರುತ್ತಿದ್ದಳು. ವಾತಾವರಣ ಬಲು ಸುಂದರವಾಗಿದ್ದರೂ ನಡೆದು ಬರುತ್ತಿದ್ದ ಸುಂದರಿಯ ತಲೆಯಲ್ಲಿ ಮಾತ್ರ ಗೊಂದಲಗಳ ಗೂಡು....

                  ಅನುಷ್ಕಾ ಸರ್ಕಾರಿ ಹೈಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿತ್ತು. ಹರೆಯದ ಮಕ್ಕಳ ತುಂಟಾಟ, "ಟೀಚರ್ ಟೀಚರ್ ಅದು ಹೇಗೆ? ಇದು ಯಾಕೆ ಹೀಗಾಗಲ್ಲ? ಟೀಚರ್ ಅವನು ಸುಳ್ಳು ಹೇಳ್ತಿದಾನೆ...." ಈ ಥರಹದ ಮಾತುಗಳು ಅವಳಿಗೆ ಬರೀ ಅಭ್ಯಾಸವಷ್ಟೇ ಅಲ್ಲ, ಅಮೂಲ್ಯವೂ ಆಗಿತ್ತು. ಅನುಷ್ಕಾ ಚಿಕ್ಕವಳಿಂದ ಆಸೆ ಪಟ್ಟು, ಕನಸು ಕಂಡು ಸೇರಿದ ಮೊದಲ ಕೆಲಸ ಅದು... ಜೊತೆಗೆ ಮಲೆನಾಡ ಪ್ರಕೃತಿ ಸೌಂದರ್ಯ, ಕನ್ನಡ ಮಾಧ್ಯಮದ ಮಕ್ಕಳ ಅತಿಯಾದ ಮುಗ್ಧತೆ, ಸರಳತೆ ಎಲ್ಲವೂ ಅವಳಿಗೆ ಅತಿ ಅಪ್ಯಾಯಮಾನ !! 

            ಶಿಕ್ಷಕರ ವೃತ್ತಿ ಒಂದು ಶ್ರೇಷ್ಠ ವೃತ್ತಿ. ಜೊತೆಗೆ ಸವಾಲಿನ ಕೆಲಸ ಕೂಡಾ... ಹಸಿಗೋಡೆಯ ಮೇಲೆ ಏನೇ ಬರೆದರೂ ಒಣಗಿದ ಮೇಲೆ ಅದೇ ಶಾಶ್ವತ, ಹಾಗೇ ಮಕ್ಕಳ ಮನಸ್ಸು ಕೂಡಾ... ತಾನು ಸಾಯುವವರೆಗೂ ಮಲೆನಾಡ ಮಡಿಲಲ್ಲಿ ಮುಗ್ಧ ಮಕ್ಕಳಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂಬ ಮಹದಾಸೆ ಅನುಷ್ಕಾಳಿಗೆ. ಎಲ್ಲವೂ ಸರಿಯಾಗೇ ನಡೆಯುತ್ತಿದೆ ಎನ್ನುವಾಗ ಅನುಷ್ಕಾ ಜೀವನದಲ್ಲೊಂದು ಸಮಸ್ಯೆ ಎದುರಾಗಿತ್ತು. ಅವಳು ಇಷ್ಟ ಪಟ್ಟ, ಮನೆಯವರೆಲ್ಲ "ಇವನೇ ನಮ್ಮ ಅಳಿಯ" ಎಂದು ಆರಿಸಿದ್ದ ಸಿದ್ದಾರ್ಥ್ ತನ್ನ ಹಳೆಯ ತತ್ತ್ವಗಳನ್ನೆಲ್ಲ ಬದಿಗೊತ್ತಿ, ಹಣಕ್ಕಾಗಿ ಸ್ವೀಡನ್ ಹೋಗುವ ಮನಸ್ಸು ಮಾಡಿದ್ದ. ಅಲ್ಲೇ ಸೆಟಲ್ ಆಗುವ ಯೋಚನೆ ತಿಳಿಸಿದ್ದ. ಆರ್ಥಿಕವಾಗಿ ಅದು ಒಳ್ಳೆಯ ನಿರ್ಧಾರವೇ ಆಗಿದ್ದರೂ, ಭಾವುಕ ಅನುಷ್ಕಾಳಿಗೆ ತನ್ನೂರು, ತನ್ನ ದೇಶ ಬಿಟ್ಟು ಬೇರೆಲ್ಲೋ ಅಪರಿಚಿತರಾಗಿ ಜೀವನ ನಡೆಸುವುದು ಸುತರಾಂ ಇಷ್ಟವಿಲ್ಲ....

                 ಮದುವೆ ಬೇಡವೆಂದು ಸುಲಭವಾಗಿ ಹೇಳಬಹುದಲ್ಲವೇ? ಎಂದು ನೀವು ಕೇಳಬಹುದು. ಆದರೆ  ಚಿಕ್ಕಂದಿನಿಂದ ಸಿದ್ಧಾರ್ಥನ ಬಗ್ಗೆ ಅನುಷ್ಕಾ ಬೆಳೆಸಿಕೊಂಡ ಭಾವನೆ, ಜೊತೆಯಾಗಿ ಕಂಡ ಕನಸುಗಳ ಮೂಟೆ, ಇಬ್ಬರ ಭವಿಷ್ಯದ ಬಗ್ಗೆ ಇದ್ದ ಆಸೆಗಳನ್ನು ಮನದಾಳದಿಂದ ಕಿತ್ತೆಸೆಯುವುದೂ ಅಷ್ಟು ಸುಲಭವೇನಿಲ್ಲ... ಅತ್ತ ಹೋಗಲೂ ಆಗದೇ ಇತ್ತ ಸಿದ್ದಾರ್ಥ್ ನ ಬಿಟ್ಟು ಇಲ್ಲಿರಲೂ ಆಗದೇ ಬೆಂಕಿಗೆ ಬಿದ್ದ ಪತಂಗದಂತಾಗಿದ್ದಳು ಅನುಷ್ಕಾ... ಅದಕ್ಕೆ ಸರಿಯಾಗಿ ಅವರಿಬ್ಬರವ ನಿಶ್ಚಿತಾರ್ಥಕ್ಕೆಂದು ಕೈಗೆ ಹಚ್ಚಿದ ಗೋರಂಟಿ ಮಾಸಿದ್ದರೂ ಕಲೆಯಾಗಿ ತನ್ನಿರುವನ್ನು ನೆನಪಿಸುತ್ತ ಅನುಷ್ಕಾಳನ್ನು ಅಣಕಿಸುತ್ತಿತ್ತು... 

                ಇಷ್ಟೆಲ್ಲಾ ಗೊಂದಲಗಳು ತಲೆಯಲ್ಲಿದ್ದರೂ ಅನುಷ್ಕಾಳ ಲಯಭರಿತ ಹೆಜ್ಜೆ ಮನೆಯನ್ನು ಸಮೀಪಿಸುತ್ತಿತ್ತು. ಇದೇ ಥರ ಇವತ್ತೂ ಟೆನ್ಶನ್ ನಲ್ಲಿದ್ರೆ ಅಪ್ಪ-ಅಮ್ಮಂಗೂ ಬೇಜಾರಾಗುತ್ತೆ. ಮನೆ ತಲುಪುವುದರೊಳಗೆ ಎರಡರಲ್ಲೊಂದು ನಿರ್ಧಾರ ಮಾಡಿಯೇ ತೀರಬೇಕೆಂದು ಅವಳ ಮನ ಹೇಳುತ್ತಿತ್ತು. ವಾಸ್ತವ - ಭವಿಷ್ಯದ ನಡುವಣ ಯುದ್ಧದಲ್ಲಿ ವಾಸ್ತವ ಗೆದ್ದಿತ್ತು. ಪ್ರೀತಿಯಿಂದ ಕಟ್ಟಿಕೊಂಡ ಬದುಕನ್ನು ಪ್ರೀತಿಗಾಗಿ ತ್ಯಾಗ ಮಾಡುವುದರಲ್ಲಿ ಹಿರಿಮೆ ಇದೆಯಾದರೂ ಅದು ನೀಡುವ ಪರಿಣಾಮ, ಭಾವನೆಗಳ ಕಲಹ ಎಷ್ಟು ಕಷ್ಟವಾಗಿರುತ್ತದೆಂದು ಅವಳು ಭೈರಪ್ಪನವರ "ಧರ್ಮಶ್ರೀ" ಕಾದಂಬರಿಯಲ್ಲಿ ಓದಿದ್ದ ಸ್ಪಷ್ಟ ನೆನಪಿತ್ತು. ಸಿದ್ದಾರ್ಥ್ ಸ್ವೀಡನ್ ಹೋಗಿ ಅಲ್ಲೇ ತನ್ನ ಮುಂದಿನ ಬದುಕು ಕಟ್ಟಿಕೊಳ್ಳುವುದಾದರೆ, ನಾನು ಈ ಮದುವೆಯಾಗುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದಳು.

             ಅನುಷ್ಕಾ ಮನೆ ತಲುಪುವ ವೇಳೆಗೆ ಮಳೆ ನಿಂತಿತ್ತು. ಆಕಾಶ ತಿಳಿಯಾಗಿತ್ತು. ಇತ್ತ ಮನೆಯಲ್ಲಿ ಅನುಷ್ಕಾಳ ತಂದೆ - ತಾಯಿಯೂ ಮಗಳ ಜೀವನದ ಬಗ್ಗೆ ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅನುಷ್ಕಾ ಒಳ ಬರುತ್ತಿದ್ದಂತೆ ಅವಳ ತಂದೆ ರಾಘವೇಂದ್ರ ರಾಯರು "ಫ್ರೆಷ್ ಅಪ್ ಆಗಿ ಬಾ ಅನು. ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು." ಎಂದರು. ಅನುಷ್ಕಾ ಬಂದ ಮೇಲೆ ಮದುವೆಯ ಬಗ್ಗೆ ಅವಳ ನಿರ್ಧಾರವೇನೆಂದು ಕೇಳಿದರು. ಅನುಷ್ಕಾ ಚೂರೂ ಗೊಂದಲವಿಲ್ಲದೇ ತನ್ನ ನಿರ್ಧಾರ ತಿಳಿಸಿದಾಗ ರಾಯರ ಕಣ್ಣಲ್ಲಿ ಖುಷಿಯ ಮಿಂಚಿತ್ತು. "ನನ್ನ ಮತ್ತೆ ನಿನ್ನ ಅಮ್ಮನದೂ ಇದೇ ತೀರ್ಮಾನವಾಗಿತ್ತು ಮಗಳೇ...  ಕೊನೆಗಾಲದಲ್ಲಿ ಒಬ್ಬಳೇ ಒಬ್ಬಳು ಮಗಳನ್ನು ನೋಡಬೇಕೆನಿಸಿದರೆ, ಬೇಗ ನೋಡಲಾದರೂ ನೀನು ಇಲ್ಲೇ ಇರಬೇಕು. ನಿನ್ನ ಕನಸುಗಳನ್ನ ಸಾಕಾರಗೊಳಿಸಲಾದರೂ ನೀನು ಇಲ್ಲಿರಬೇಕು. ಸಾವಿರಾರು ಮಕ್ಕಳಲ್ಲಿ ಸಾಧಿಸುವ ಪ್ರೇರಣೆ ಹುಟ್ಟು ಹಾಕಲಾದರೂ ನೀನು ಇಲ್ಲಿರಬೇಕು...." ಎಂದು ಭಾವ ಪೂರ್ಣರಾಗಿ ನುಡಿದರು. ಅನುಷ್ಕಾಳಿಗೆ  ಗೊಂದಲದ ಗಿಜಿಗಿಜಿ ಸಂತೆಯಿಂದ ಹೊರಬಂದ ಅನುಭವ ! ದೈವೇಚ್ಛೆ ಇದ್ದ ಹಾಗೇ ಆಗುವುದೆಂಬ ಸಮಾಧಾನ. ಮೋಡ ಸರಿದ ಆಕಾಶ ಇನ್ನೂ ತಿಳಿಯಾಗಿತ್ತು. ಅನುಷ್ಕಾಳ ಗೊಂದಲದ ಕಾರ್ಮೋಡಗಳು ಕೂಡಾ... ಆ ಕ್ಷಣಕ್ಕೆ ಜೀವ ಹೂವಾಗಿತ್ತು. ನೆಮ್ಮದಿಯ ಬೀಡಾಗಿತ್ತು. ಸುಂದರ ನಾಳೆಗೆ ಅಣಿಯಾಗಿತ್ತು !!

- R.R.B.

ಭಾನುವಾರ, ಮೇ 10, 2020

ದೀಪ...

ದೀಪ ಉರಿಯುತ್ತದೆ -
ಎಣ್ಣೆ ತೀರುವವರೆಗೆ 
ಬತ್ತಿ ಆರುವವರೆಗೆ 
ಕತ್ತಲ ಲಹರಿ ಸೀಳುತ್ತ 
ಬೆಳಕ ಮಳೆಯ ಚೆಲ್ಲುತ್ತ...

ದೀಪ ಉರಿಯುತ್ತದೆ - 
ಇಟ್ಟಲ್ಲಿಯೇ ಇಟ್ಟಂತೆಯೇ 
ಯಾರ ಹಂಗಿಲ್ಲದಂತೆ 
ಬೇಸರದ ಹೊದಿಕೆ ಸರಿಸುತ್ತ
ಖುಷಿಯಲೆಯ ಅಪ್ಪಳಿಸುತ... 

ದೀಪ ಉರಿಯುತ್ತದೆ - 
ಹಣತೆಯ ಅಪ್ಪಿ, ಬತ್ತಿಗೆ
ತೈಲಕ್ಕೆ ಜೀವ ನೀಡುತ್ತ
ಹೊಸ ಲೋಕಕೆ ಬಾಗಿಲಾಗಿ 
ನೆಮ್ಮದಿಯ ಮೆರುಗು ನೀಡುತ್ತ...

ಕೊನೆಗೊಮ್ಮೆ ದೀಪವಾರುತ್ತದೆ - 
ಕಾಲಚಕ್ರದ ಗತಿಗೆ ತಲೆಬಾಗಿ 
ತಂಗಾಳಿಯ ನಡುವೆ ಇಲ್ಲವಾಗಿ 
ಜಗದ ಸಂತೆಯಿಂದ ದೂರವಾಗಿ 
ಸದ್ದಿಲ್ಲದೇ ಸ್ವರ್ಗ ಸೇರುವ ಆತ್ಮವಾಗಿ...!! 

 - R.R.B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...