ಮಂಗಳವಾರ, ಜೂನ್ 30, 2020

ಕಾಮರ್ಸ್_ಕವಿತೆಗಳು_20

ನೂರಾರು ಪೇಜುಗಳ ಬ್ಯಾಂಕ್ ಆಡಿಟ್ ರಿಪೋರ್ಟ್ ಗೆ
ಸಮಾಧಾನದಿಂದಲೇ ಪ್ರತಿ ಪೇಜಿಗೆ ಸಹಿ ಹಾಕುವ
ನುರಿತ ಲೆಕ್ಕ ಪರಿಶೋಧಕರೊಬ್ಬರಿಗೆ
ಮನೆಯಲ್ಲಿ ಮಕ್ಕಳು "ಚಿತ್ರ ಬಿಡಿಸಿಕೊಡಿ"
ಎಂದು ಪದೇ ಪದೇ ಕೇಳಿದಾಗ ತಾಳ್ಮೆ ತಪ್ಪುತ್ತದಂತೆ !

- R. R. B.

ಕಾಮರ್ಸ್_ಕವಿತೆಗಳು_19

ದಿನಾಲೂ ಷೇರು ವಹಿವಾಟು ಮಾಡುವ ಆತ
ಸಮಯದ ಮಹತ್ವ ಬಲುಚೆನ್ನಾಗಿ ಅರಿತ ಚಾಣಾಕ್ಷ 
ಆದರೆ ಮನೆಯಲ್ಲಿನ ಆಗು-ಹೋಗುಗಳ
ನೋಡಿಕೊಳ್ಳುವಲ್ಲಿ ಮಡದಿಗಿಂತ ತುಸು ದಡ್ಡ !!

- R. R. B.

ಸೋಮವಾರ, ಜೂನ್ 29, 2020

ಮತ್ತೆ ಮನಕೆ ವಸಂತ...

                     ಚುಮು ಚುಮು ಚಳಿಯ ಮುಂಜಾನೆ. ಸೂರ್ಯದೇವನಿಗೆ ಹಾಸಿಗೆ ಬಿಟ್ಟೇಳಲು ಮನಸ್ಸಾಗದೇ ತನ್ನ ದೈನಂದಿನ ಕಾಯಕಕ್ಕೆ ಚಕ್ಕರ್ ಹಾಕಿ, ಮೋಡಗಳ ಹೊದಿಕೆಯೊಳಗೆ ಅಡಗಿದ್ದ. ರಾತ್ರಿ ಸುಳಿದ ಜಡಿಮಳೆಗೆ ಸಾಕ್ಷಿ ಎಂಬಂತೆ ಅಂಗಳದ ತುಂಬೆಲ್ಲ ಕೆಂಪು ನೀರು. ಎಲೆಗಳಿಂದ ತೊಟ್ಟಿಕ್ಕುವ ಸಿಹಿ ಹನಿಗಳು. ಇನ್ನೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ತಿಳಿಸಿದ ಕಾರ್ಮೋಡಗಳ ಸಾಲು... ಆರಾಧನಾ ಕೈಯಲ್ಲಿ ಬಿಸಿ ಬಿಸಿ ಕಾಫಿಯ ಕಪ್ ಹಿಡಿದು ಕಿಟಕಿಯಾಚೆ ನೋಡುತ್ತ ನಿಂತಿದ್ದಳು. ಹೊರಗಿನ ಆಹ್ಲಾದಕರ ವಾತಾವರಣ ಮನಸ್ಸಿಗೆ ಹಿತವೆನಿಸಿತ್ತು. ವಾಸ್ತವದ ಸವಿ ಸಮಯ ಹಳೆಯ ಕಹಿ ನೆನಪುಗಳನ್ನು ಮರೆಸುವಲ್ಲಿ ಯಶಸ್ವಿಯಾಗಿತ್ತು !!

             ಗಂಟೆ ಅದಾಗಲೇ ಎಂಟೂವರೆ.  ಬಿರಬಿರನೆ ರೆಡಿಯಾಗಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ "ಅಮ್ಮಾ, ಕೆಲ್ಸ ಜಾಸ್ತಿ ಇದೆ.  ಬರೋವಾಗ ಲೇಟಾಗ್ಬೋದು... " ಅಂತ ಉಸುರಿ ಮನೆಯಿಂದ ಹೊರಟಳು. ಆಫೀಸು ತಲುಪುವಾಗಲೇ ಗಂಟೆ ಹತ್ತರ ಗಡಿ ದಾಟಿತ್ತು. ಬೆಳಿಗ್ಗೆ ಬೆಳಿಗ್ಗೆ  ಬೈಸಿಕೊಳ್ಳಬೇಕೇನೋ ಎಂದು ಗಡಿಬಿಡಿಯಿಂದ ಒಳ ಹೋಗಿ ಕುಳಿತಳು. ಪುಣ್ಯಕ್ಕೆ ಯಾರೂ ಅವಳನ್ನು ಗಮನಿಸದಾಗ ನಿರಾಳವೆನಿಸಿತು. ತಿಂಗಳ ಕೊನೆ ಬಂದಾಗೆಲ್ಲ ರಾಶಿ ರಾಶಿ ಫೈಲುಗಳು ಆರಾಧನಾಳ ಟೇಬಲ್ ಮೇಲೆ ತಮ್ಮ ಇರುವಿಕೆ ಪ್ರದರ್ಶಿಸುತ್ತಿದ್ದವು. ಅದರೆಡೆಗೆ ಒಮ್ಮೆ ನಿರ್ಭಾವುಕ ನೋಟ ಹರಿಸಿ ಪಟಪಟನೆ ಕೆಲಸ ಮಾಡತೊಡಗಿದಳು. ಒಂದೊಂದೇ ಫೈಲು ಮುಗಿಸಿ ಪಕ್ಕಕ್ಕಿಡುವಾಗ ಒಂಥರಾ ಸಮಾಧಾನ - ದೇವಸ್ಥಾನದ ಒಂದೊಂದೇ ಮೆಟ್ಟಿಲು ಹತ್ತಿದಂತೆ, ಬದುಕಿನ ಒಂದೊಂದೇ ಪುಟ್ಟ ಕಷ್ಟವನ್ನು ದಾಟಿ ಮುಂದೆ ಸಾಗಿದಂತೆ... ಕೆಲಸದ ಒತ್ತಡದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ ಅವಳಿಗೆ. ಮಧ್ಯಾಹ್ನ ಎಲ್ಲ ಊಟಕ್ಕೆ ಹೊರಟಾಗ ಥಟ್ಟನೆ ಕಂಪ್ಯೂಟರ್ ಪರದೆಯ ಮೇಲೆ ಸಮಯ ನೋಡಿದಳು. ಗಂಟೆ ಒಂದೂವರೆ. ಗಡಿಬಿಡಿಯಲ್ಲಿ ಟಿಫಿನ್ ಬಾಕ್ಸ್ ಬಿಟ್ಟು ಬಂದಿದ್ದು ಆಗಲೇ ನೆನಪಾಗಿದ್ದು ಅವಳಿಗೆ. "ಛೇ.." ಅಂತ ತಲೆಕೊಡವಿಕೊಂಡಳು. ಅಷ್ಟರಲ್ಲಿ ಭುವನ್ ಅವಳ ಪಕ್ಕವೇ ಬಂದು ನಿಂತಿದ್ದ. "ಊಟ ತರೋದು ಮರ್ತೋಯ್ತಾ? ನಾನು ಕ್ಯಾಂಟೀನ್ ಗೆ ಹೋಗ್ತಾ ಇದೀನಿ. ನಿಮಗೇನೂ ಅಭ್ಯಂತರ ಇಲ್ಲ ಅಂದ್ರೆ ನನ್ ಜೊತೆ ಬನ್ನಿ... ಒಟ್ಟಿಗೇ ಊಟ ಮಾಡಿ ಬರೋಣ ಆರಾಧನಾ ಅವ್ರೆ.." ಎಂದು ಮುಗುಳ್ನಕ್ಕ. ಆರಾಧನಾ "ಹಾ.. ಬರ್ತೀನಿ.‌ ನಡೀರಿ..." ಎಂದು ಭುವನ್ ಜೊತೆ ಕ್ಯಾಂಟೀನ್ ಕಡೆ ಹೆಜ್ಜೆ ಹಾಕಿದಳು. ಅಷ್ಟಾಗಿ ಯಾರ ಜೊತೆಯೂ ಬೆರೆಯದ ಆರಾಧನಾಗೆ ಭುವನ್ ಅಂದ್ರೆ ಇಷ್ಟ. ಎಲ್ಲರೊಡನೆ ಬೆರೆಯುತ್ತ, ಯಾವಾಗಲೂ ನಗೆ‌ಚಟಾಕಿ ಸಿಡಿಸುತ್ತ ಖುಷಿ ಖುಷಿಯಾಗಿರುವ ಹುಡುಗ. ಒಂಥರಾ ಪಾಸಿಟಿವ್ ವೈಬ್ ಅವನ ಜೊತೆ ಇದ್ರೆ ಅಂತ ಅನಿಸುತ್ತಿತ್ತು. 

               ಇಬ್ಬರೂ ಕ್ಯಾಂಟೀನ್ ತಲುಪಿ ಒಂದು‌ ಕಡೆ ಕುಳಿತರು. ದಾರಿಯುದ್ದಕ್ಕೂ ಸುಮ್ಮನೇ ಇದ್ದ ಆರಾಧನಾಳನ್ನು ಮಾತನಾಡಿಸುವ ತವಕದಲ್ಲಿದ್ದ ಭುವನ್. "ಅಲ್ಲಾ ಆರಾಧನಾ ಅವ್ರೇ, ನೋಡಿ ನನ್ನ ಹೆಸರು ಭುವನ್. ಅದನ್ನು ಬೇಕಿದ್ರೆ ಇನ್ನೂ ಶಾರ್ಟ್ ಅಂಡ್ ಸ್ವೀಟಾಗಿ 'ಭುವು' ಅಂತ ಕರೀತಾರೆ. ನಿಮ್ಮ ಹೆಸ್ರೇ ಮಾರುದ್ದ ಇದೆ. ಅಲ್ದೇ ಅದನ್ನ ಶಾರ್ಟ್ ಮಾಡಿ 'ಆರು' ಅಂತ ಕರದ್ರೆ ನೀವು ಹೊಡದೇ ಬಿಡ್ತೀರೇನೋ... ಮತ್ತೆ ಏನಂತ ಕರೀಬೇಕು ನಿಮ್ಮನ್ನ? " ಎಂದು ಆರಾಧನಾಳ ಮುಖ ನೋಡುತ್ತ ಕುಳಿತ. ಈ ಪ್ರಶ್ನೆಯನ್ನು ನಿರೀಕ್ಷಿಸದ ಆರಾಧನಾ ಏನು ಹೇಳಬೇಕೆಂದು ತೋಚದೇ ಸುಮ್ಮನೆ ನಕ್ಕಳು. ಹಾಗೇ ಊಟ ಮಾಡುತ್ತ ಭುವನ್ ಏನೇನೋ ಕತೆ ಹೇಳಿ ನಗಿಸುತ್ತಿದ್ದ. ಆರಾಧನಾ ಮನ ಬಿಚ್ಚಿ ನಕ್ಕಿದ್ದಳು. ವಾಪಸ್ ಹೋಗುವಾಗ "ತುಂಬಾ ಥ್ಯಾಂಕ್ಸ್ ಭುವನ್ ಅವ್ರೇ.. ತುಂಬ ದಿನಗಳ ಬಳಿಕ ನಿಮ್ಮಿಂದಾಗಿ  ಖುಷಿಯಲ್ಲಿ ನಗುವಂತಾಯ್ತು." ಎಂದಳು. ಭುವನ್ ಆಶ್ಚರ್ಯದಿಂದ "ವಾಟ್ ? ನೀವು ನಗದೇ ತುಂಬ ದಿನ ಆಗಿತ್ತಾ? ಯಾಕೆ?" ಎಂದು ಕೇಳಿದ. ಆರಾಧನಾಗೆ ತಾನು ಏನು ಹೇಳಿದೆ ಎಂಬುದರ ಅರಿವಾಗಿ ನಾಲಿಗೆ ಕಚ್ಚಿ, "ಏನಿಲ್ಲ..‌.‌ಸುಮ್ನೆ ಏನೋ ಅಂದೆ..." ಅಂತ ಹೇಳಿ ತನ್ನ ಡೆಸ್ಕಿನತ್ತ ನಡೆದಳು. ಮತ್ತದೇ ಕೆಲಸದ ಗಡಿಬಿಡಿಯಲ್ಲಿ ಮುಳುಗಿದಳು. ಅವತ್ತಿನ ಎಲ್ಲ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವಾಗ ನೆಮ್ಮದಿ ಎನಿಸಿತ್ತು.

                   ದಿನಗಳು ಕ್ಷಣಗಳಂತೆ ಉರುಳುತ್ತಿದ್ದವು. ಆರಾಧನಾಳಿಗೆ ಪದೇ ಪದೇ ಕಾಡುವ ಹಳೆಯ ನೆನಪುಗಳು ತಮಗೆ ತಾವೇ ರಜೆ ಘೋಷಿಸಿಕೊಂಡಿದ್ದವು. ಈ ಮಧ್ಯೆ ಭುವನ್ ಇನ್ನಷ್ಟು ಹತ್ತಿರವಾಗಿದ್ದ. ಅವಳಲ್ಲಾದ ಬದಲಾವಣೆ ಅಪ್ಪ - ಅಮ್ಮನಿಗೂ ಸಂತಸ ನೀಡಿತ್ತು. "ಹೇಗಾದರೂ ಮಗಳು ಹಳೆಯ ಸಾಲು ಸಾಲು ಕಹಿನೆನಪುಗಳನ್ನು ಮರೆತು, ಹೊಸ ಜೀವನ ಶುರು ಮಾಡಲಿ" ಎಂಬ ಬಯಕೆ ಅವರದು. ಈ ನಡುವೆ ಭುವನ್ ಗೂ ಆತನಲ್ಲಾದ ಬದಲಾವಣೆಗಳು ಅರಿವಿಗೆ ಬಂದಿತ್ತು. ಹೇಳದೇ ಕೇಳದೇ, ಸಣ್ಣ ಗ್ಯಾಪಲ್ಲಿ ಹುಟ್ಟಿಕೊಂಡ ನವಿರಾದ ಪ್ರೀತಿಗೆ, ಅದರ ರೀತಿಗೆ ಆಶ್ಚರ್ಯವೂ ಆಗಿತ್ತು. "ಬೇಗ ಮದುವೆ ಮಾಡ್ಕೊಳೋ.. ಆಮೇಲೆ ಹುಡುಗಿ ಸಿಗಲ್ಲ.." ಅಂತ ಮನೆಯಲ್ಲಿ ಹೇಳಿದಾಗೆಲ್ಲ ನಯವಾಗಿ ಮುಂದೂಡುತ್ತ ಬಂದಿದ್ದ. ಎಷ್ಟೇ ಚಂದದ ಹುಡುಗಿಯರೂ ಇಷ್ಟವಾಗದ ಅವನಿಗೆ, ತನ್ನ ಪಾಡಿಗೆ ತಾನಿರುತ್ತಿದ್ದ ಆರಾಧನಾ ತುಂಬ ಹಿಡಿಸಿದ್ದಳು. ಅವಳ ಅಚ್ಚುಕಟ್ಟುತನ, ಸೌಮ್ಯ ಸ್ವಭಾವ, ಮುತ್ತು ಪೋಣಿಸಿದಂತಹ ಮಾತು..‌ಎಲ್ಲವೂ ಇಷ್ಟ ಅವನಿಗೆ. ಮನೆಯಲ್ಲಿ ವಿಷಯ ತಿಳಿಸಿ, ಒಪ್ಪಿಗೆ ಪಡೆದೂ ಆಗಿತ್ತು. ಆದರೆ ಆರಾಧನಾಳಿಗೆ ಹೇಳಲು ಭಯ... ಹೇಗೆ ಹೇಳಬೇಕೆಂದು ತಳಮಳ. ಹೇಗಾದರೂ ನಾಳೆ ಮನಸ್ಸಿನಲ್ಲಿದ್ದದ್ದೆಲ್ಲ ಹೇಳಿಬಿಡಬೇಕೆಂದು ನಿರ್ಧಾರ ಮಾಡಿ ನಿರಾಳನಾಗಿದ್ದ.

               ಅಂದು ಮುಂಜಾನೆ ಭಾಸ್ಕರ ಮೋಡದ ಮರೆಯಿಂದ ತುಸು ತುಸುವೇ ಇಣುಕಿ ತನ್ನ ಹಾಜರಿ ಹಾಕಿದ್ದ. ಆರಾಧನಾ ಖುಷಿಯಲ್ಲಿ ರೆಡಿಯಾಗಿ ಆಫೀಸಿಗೆ ಹೋದಳು. ಈ ನಡುವೆ ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಿತ್ತು. ಭುವನ್ ಜೊತೆಗಿನ ಒಡನಾಟ ಹೊಸ ಚೈತನ್ಯ ತಂದಿತ್ತು. "ಇವತ್ತು ಮಧ್ಯಾಹ್ನ ನನ್ ಜೊತೆನೇ ಊಟ ಮಾಡ್ಬೇಕು ಪ್ಲೀಸ್.." ಅಂತ ಭುವನ್ ಬೇಡಿಕೆ ಇಟ್ಟಿದ್ದ. "ಸರಿ" ಎಂದು ಒಪ್ಪಿದ್ದಳು. ಕೆಲಸದ ಮಧ್ಯೆ ಅವಳಿಗದು ಮರೆತೇ ಹೋಗಿತ್ತು‌ ಸರಿಯಾಗಿ ಒಂದೂವರೆಗೆ ಭುವನ್ ಅವಳ ಡೆಸ್ಕ್ ಬಳಿ ಬಂದು ನಿಂತಾಗಲೇ ನೆನಪಾಗಿದ್ದು. "ಓಹ್.. ಸಾರಿ ಮರ್ತೋಗಿತ್ತು. ಒಂದೇ ನಿಮಿಷ.." ಎಂದು ಪಟಪಟನೆ ಸಿಸ್ಟಂ ಲಾಗೌಟ್ ಮಾಡಿ ಅವನೊಂದಿಗೆ ಹೆಜ್ಜೆ ಹಾಕಿದಳು. ಊಟ ಮಾಡುವಾಗ ಭುವನ್ ಕಷ್ಟಪಟ್ಟು ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದರಿತ ಆರಾಧನಾ "ಹೇಳಿ.. ಏನೋ ಹೇಳ್ಬೇಕಂದ್ಕೊಂಡ್ರಾ?" ಎಂದಳು. ಭುವನ್ ಗಾಢವಾಗಿ ಒಮ್ಮೆ ಉಸಿರೆಳೆದುಕೊಂಡು ಹೇಳಲು ಶುರು ಮಾಡಿದ. " ಅದು ಆರಾಧನಾ.. ಸುತ್ತಿ ಬಳಸಿ ಮಾತಾಡಕ್ಕೆ ಬರಲ್ಲ ನಂಗೆ. ನೇರವಾಗಿ ವಿಷಯಕ್ಕೇ ಬರ್ತೀನಿ. ತಪ್ಪು ತಿಳ್ಕೋಬೇಡಿ... ನೀವಂದ್ರೆ ನಂಗೆ ತುಂಬಾ ಇಷ್ಟ. ಮನೆಯಲ್ಲಿ ಮದುವೆಯಾಗು ಅಂತ ಹತ್ತಾರು ಹುಡುಗಿಯರ ಫೋಟೋ ತೋರಿಸಿದಾಗಲೂ ಯಾರೂ ಹಿಡಿಸಿರಲಿಲ್ಲ.‌ ಆದ್ರೆ ನೀವು..‌... ಗೊತ್ತಾಗದಂತೆ ನನ್ನ ಮನದಾಳದಲ್ಲಿ ಪ್ರೀತಿಯ ಬೀಜ ಬಿತ್ತಿ, ಇವಾಗ ಅದು ಪುಟ್ಟ ಸಸಿಯಾಗಿದೆ. ಮುದ್ದಿಸಿ  ಅದಕ್ಕೆ ನೀರೆರೆಯುತ್ತೀರೋ, ಅಥವಾ ಚಿವುಟಿ ಹಾಕ್ತೀರೋ ಗೊತ್ತಿಲ್ಲ. ಆದರೆ ನನ್ನ ಭಾವನೆಗಳನ್ನು ಹೇಳದೇ ಮುಚ್ಚಿಡುವುದು ಯಾಕೋ ತಪ್ಪು ಅಂತ ಅನಿಸ್ತು. ಅದ್ಕೆ ಎಲ್ಲ ಹೇಳ್ದೆ..‌. ನೀವು ಏನೇ ತೀರ್ಮಾನ ಮಾಡಿದರೂ ನಾನದಕ್ಕೆ ಬದ್ಧ... " ಎಂದು ಸುಮ್ಮನಾದ. ಆರಾಧನಾಳಿಗೆ ಸಡನ್ನಾಗಿ ಏನು ಉತ್ತರಿಸಬೇಕೋ‌ ಎಂದು ತಿಳಿಯಲಿಲ್ಲ. ಆದರೆ ಭುವನ್ ಅಂದ್ರೆ ಇಷ್ಟ ಎಂದು ಅವಳ ಒಳಮನ ಹೇಳುತ್ತಿತ್ತು. "ಭುವನ್ ನಿಮ್ಮ ಮನಸ್ಸಲ್ಲಿರೋದನ್ನ ನೀವು ಹೇಳಿದ್ರಿ. ಆದ್ರೆ ನಾನು? ನನ್ನ ಹಳೆಯ ಜೀವನದ ತಿರುವುಗಳ‌ ಬಗ್ಗೆ ನಿಮಗೇನು ಗೊತ್ತು?.... ಮುಂಚೆ ನಾನು ಅನಿಕೇತ್‌ ಮದುವೆಯಾಗಿದ್ದು, ಅವನ ಜೊತೆ ಕಳೆದ ಸಿಹಿಕ್ಷಣಗಳು, ಕೊನೆಗೆ ಆತ ಸಡನ್ನಾಗಿ ನನ್ನೊಬ್ಬಳನ್ನೇ‌ ಬಿಟ್ಟು ಬಾರದ ಲೋಕಕ್ಕೆ..." ಮುಂದೆ ಹೇಳಲಾಗದೇ ಆರಾಧನಾಳ ಕಣ್ತುಂಬಿತು. "ಅಯ್ಯೋ.. ‌ಅಳ್ಬೇಡಿ.. ಆಗಿದ್ದೆಲ್ಲಾ ಆಗಿಹೋಯ್ತು. ಮತ್ತೆ ಅದನ್ನೇ ನೆನೆಸಿಕೊಂಡು ಕೊರಗುವುದರಲ್ಲಿ ಯಾವ ಅರ್ಥನೂ ಇಲ್ಲ. ಇವತ್ತು, ಈ ಕ್ಷಣ ನಾವಿಲ್ಲಿ ಕ್ಯಾಂಟೀನ್ ನಲ್ಲಿ ಕುಳಿತು ಮಾತಾಡ್ತಿದೀವಿ ಅಂದ್ರೆ ಇದು ಮಾತ್ರ ಸತ್ಯ. ಅದರ ಹಿಂದಿನದು, ಮುಂದಿನದೆಲ್ಲ ನಮ್ಮ ಕೈಯಲ್ಲಿಲ್ಲ. ಅದ್ಕೇ ವರ್ತಮಾನವನ್ನು ದೇವರು ಕೊಟ್ಟ 'ಪ್ರೆಸೆಂಟ್' ಅನ್ನೋದು ಅಲ್ವಾ... ನೋಡಿ ನಿಧಾನವಾಗಿ ಯೋಚನೆ ಮಾಡಿ.. ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇರ್ತೀನಿ..." ಎಂದು ಮಾತು ಮುಗಿಸಿದ. 
"ಮರೆತೆ ಹೋದೆನು
ಹೊರಟ ಕಾರಣ
ನಿನ್ನಯ ಮಿಂಚಿನ ಗಾಳಿಯಲಿ..."  ಎಂದು ಕ್ಯಾಂಟೀನ್ ನಲ್ಲಿ ಹಾಕಿದ್ದ ಹಾಡು ತನಗಾಗಿಯೇ ಎಂದು ಅವಳಿಗೆ ಅನಿಸಿತು.

- R. R. B.

ಶನಿವಾರ, ಜೂನ್ 27, 2020

ಬೇವಿನ‌ ಮರ

ಅಮ್ಮ ನೆಟ್ಟ ಬೇವಿನಗಿಡ
ಸರಸರನೆ ಬೆಳೆಯಿತು -
ಹೆಚ್ಚು ಪೋಷಣೆ ಬೇಡದೇ...
ನೋಡನೋಡುತ್ತ ಗಿಡ ಮರವಾಗಿ
ಟೊಂಗೆಗಳಲ್ಲಿ ಹಸಿರೆಲೆ ತುಂಬಿ
ತಂಗಾಳಿಗೆ ಜೋಕಾಲಿಯ ಹಾಡು
ಅಮ್ಮನ ಜೋಗುಳದ ಪದದಂತೆ...

ಬಿಸಿಲಿಗೆ ಬೆವರಲಿಲ್ಲ, 
ಮಳೆ - ಚಳಿಗೆ ಕುಗ್ಗಲಿಲ್ಲ
ಆದರೂ  ಶಿಶಿರದಲಿ
ಎಲೆ ಉದುರಿಸಿ ಬೋಳಾಯಿತು -
ಹೊಸ ಚಿಗುರ ಹಡೆಯಲು
ಅಚ್ಚ ಹಸಿರ ಸೀರೆಯುಡಲು...

ಸ್ವಚ್ಛಂದ ಗಾಳಿ ಕೊಟ್ಟರೂ ಸಹ
ಬೇವು ಥೇಟ್ ಸತ್ಯದ ಹಾಗೆ
ಬರೀ ಕಹಿ ಕಹಿ... !!
ಯಾರಿಗೂ ಹಿಡಿಸುವುದಿಲ್ಲ
ನಾಲಿಗೆಗಂತೂ ಬಲು ದೂರ
ಆದರೂ ಬೇವು ಬೇವೇ
ಕಟು ಸತ್ಯದ ಸತ್ವ ಸತ್ಯವೇ...

ನೇರ ನಿಂತ ಬೇವಿನ ಮರಕ್ಕೆ
ಸ್ವಾಭಿಮಾನದ ಹಕ್ಕಿಯ ಸ್ನೇಹ
ಆಳ ತಲುಪಿದ ಬೇರಿಗೆ ಆಗಾಗ
ತನ್ನೊಡಲ ಸೇರುವ ಮಳೆನೀರು
ಜೊತೆಗೆ ಹಣ್ಣೆಲೆಗಳ ಗೊಬ್ಬರದ ಪ್ರೀತಿ‌
ಕುಂಡದಲಿ ಬೆಳೆಸಿದ ಹೂಗಿಡಗಳಂತಲ್ಲ,
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...

ಪ್ರತಿ ವರ್ಷ ಯುಗಾದಿ ಬಂತೆಂದರೆ ಸಾಕು
ಇಷ್ಟು ದಿನ ಕ್ಯಾರೇ ಮಾಡದ,
ಇದ್ದರೂ ಇಲ್ಲದಂತಿದ್ದ ಬಡವೆ
ಕಹಿ ಬೇವಿಗೂ ತುಂಬಾ ಬೆಲೆ
ಅಪರೂಪಕ್ಕೆ, ಅನಿವಾರ್ಯಕ್ಕೆ
ಆಪ್ತವಾಗುವ ಗೆಳೆಯರಂತೆ...!!

- R. R. B.

ಕಾಮರ್ಸ್_ಕವಿತೆಗಳು_18

ದಿನವಿಡೀ ದುಡ್ಡಿನ ಜೊತೆ ವ್ಯವಹರಿಸುವ
ಬ್ಯಾಂಕಿನ ಕ್ಯಾಷಿಯರ್‌ನ ‌ಬರಿದಾದ ಜೇಬು
ತಿಂಗಳ ಕೊನೆ ಬರುವಾಗ ನೆನಪಿಸುತ್ತಿತ್ತು -
ನಗದೂ ಖಾಲಿ ಜೊತೆಗೆ ಖಾತೆಯೂ ಖಾಲಿ ಎಂದು !...  

- R. R. B.

ಗುರುವಾರ, ಜೂನ್ 25, 2020

ಕಾಮರ್ಸ್_ಕವಿತೆಗಳು_17

ಹಲವರು ಪಡೆದ ಸಾಲ ತೀರಿಸಲಾಗದೇ
ಜೀವನದ ತಕ್ಕಡಿ ತೂಗಲು ಕಷ್ಟಪಡುವಾಗ
ಅಲ್ಲೊಬ್ಬ ಕಂಪನಿಯ ಷೇರುಗಳ ರೈಟ್ ಇಶ್ಯೂ ಮಾಡಿ
ಸದ್ದಿಲ್ಲದೇ ಲಕ್ಷ ಕೋಟಿ ಸಾಲವ ತೀರಿಸಿ ಮುಗುಳ್ನಕ್ಕಿದ್ದ !!

- R. R. B.

ಬುಧವಾರ, ಜೂನ್ 24, 2020

ಕಾಮರ್ಸ್_ಕವಿತೆಗಳು_16

ಸ್ಟಾರ್ಟಪ್ ಗಳಿಗೆ ನೀಟಾಗಿ ತಪ್ಪಿಲ್ಲದಂತೆ 
ಲೆಕ್ಕ ಬರೆಯುವ ಯುವಕನೋರ್ವನ
ಹೊಸ ಬ್ಯುಸಿನೆಸ್ ನೆಲಕಚ್ಚಿ ಅದಾಗಲೇ
ಸಾಲದ ಹೊರೆ ಹೆಗಲೇರಿ ಕುಳಿತಿತ್ತು..!

- R. R. B.

ಸೋಮವಾರ, ಜೂನ್ 22, 2020

ಕಾಮರ್ಸ್_ಕವಿತೆಗಳು_15

ಆಫೀಸಲ್ಲಿ ಯಾರದೋ ಕೋಟಿ ಕೋಟಿ
ಬಂಡವಾಳದಲಾಭವನ್ನು ಲೆಕ್ಕಿಸುತ್ತಿದ್ದವನಿಗೆ
ಕಳೆದ ವರ್ಷವಷ್ಟೇ ಸಾಲಗಾರರ ಕಾಟಕ್ಕೆ
ಅಪ್ಪ ಕಟ್ಟಿದ ಮನೆಯನ್ನು ಅರ್ಧ ಬೆಲೆಗೆ ಮಾರಿದ್ದು ನೆನಪಾಗಿ ಗಂಟಲು ಕಟ್ಟಿತು... !!

- R. R. B.

ಭಾನುವಾರ, ಜೂನ್ 21, 2020

ಕಾಮರ್ಸ್_ಕವಿತೆಗಳು_14

ಆಫೀಸಿನಲ್ಲಿ ಬ್ಯಾಲೆನ್ಸ್ ಶೀಟ್ ಟ್ಯಾಲಿ ಮಾಡುವುದರಲ್ಲಿ ಪಳಗಿದ ಅವಳು
ಮನೆಯಲ್ಲಿ ಗಂಡ - ಮಕ್ಕಳನ್ನು
ಸಂಭಾಳಿಸಲು ಕಷ್ಟ ಪಡುವಾಗ
ಎಕ್ಸೆಲ್ ಫೈಲ್ ಗಳು ತಮ್ಮಷ್ಟಕ್ಕೆ ತಾವೇ ನಗುತ್ತಿದ್ದವಂತೆ !!

- R. R. B.

ಕಾಮರ್ಸ್_ಕವಿತೆಗಳು_13

ಈರುಳ್ಳಿ, ಟೊಮ್ಯಾಟೊದಂತೆ ಬೆಲೆ
ಒಮ್ಮೆ ಗಗನಕ್ಕೇರಿ, ಕುಸಿಯುವ ಬದಲು
ಆರಕ್ಕೇರದ ಮೂರಕ್ಕಿಳಿಯದ ಬೀನ್ಸ್ ನಂತೆ 
ಸಮತೆಯಿರಲಿ ಕಂಪೆನಿಯ ಶೇರು ಬೆಲೆಯಲ್ಲಿ
ಬಹುಮುಖ್ಯವಾಗಿ ನಿಮ್ಮ ಬದುಕಿನಲ್ಲಿ !!

- R. R. B.

ಗುರುವಾರ, ಜೂನ್ 18, 2020

ಕಾಮರ್ಸ್_ಕವಿತೆಗಳು_12

ತಿಂಗಳ ಸಂಬಳದ ಸಂಖ್ಯೆ
ಹೆಚ್ಚಾದಷ್ಟು ಖುಷಿ - ಅವನಿಗೆ
ತಪ್ಪಿಹೋಗುವ ದಾಂಪತ್ಯದ 
ಸವಿಘಳಿಗೆಗಳ ನೆನೆದು ವಿಷಾದ - ಅವಳಿಗೆ...

- R. R. B.

ಕಾಮರ್ಸ್_ಕವಿತೆಗಳು_11

ಪರೋಕ್ಷ ತೆರಿಗೆಗಳೆಲ್ಲ ಒಂಥರಾ
ಅರ್ಥವಾಗದ, ಬೇಕಿಲ್ಲದ ತಲೆಬಿಸಿ
ಆದರೂ ನೆನಪಿರಲಿ ಪರೋಟಾಗೆ ಈಗ
ಹದಿನೆಂಟು ಪರ್ಸೆಂಟ್ ಜಿಎಸ್ಟಿ...

- R. R. B.

ಕೆಂಪು ಬಿಂಬಿ

ಅಂಗಳದ ಅಂಚಿನಲಿ
ಹಾರುತಿದೆ ಕೆಂಪು ಬಿಂಬಿ
ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ
ಗಾಳಿಯಲಿ ತೇಲುತ್ತ
ರೆಕ್ಕೆಗಳ ಹಗುರಾಗಿಸಿ
ಹಾರುತಿದೆ ಖುಷಿಯಲಿ...
ಆಹಾರದ ಶೋಧವೇ?
ಇರಬಹುದು, ಗೊತ್ತಿಲ್ಲ... 
ಆ ಪುಟ್ಟ ಚಂದದ ರೆಕ್ಕೆಗಳಿಂದ
ಬಾಲ್ಯದ ನೆನಪುಗಳ ಹಾರಾಟ
ಪಾಪದ ಬಿಂಬಿಗಳ ಬಾಲಕ್ಕೆ
ದಾರ ಕಟ್ಟಿ ಖುಷಿಪಟ್ಟಿದ್ದು
ನೆನಪಾದರೀಗ ಬಲು ಬೇಸರ
ಆಗ ಅಂಗಳದ ತುಂಬೆಲ್ಲ
ಭತ್ತದ ರಾಶಿಯ ಅಕ್ಕ ಪಕ್ಕ
ಪಟಪಟನೆ ಹಾರುತ್ತಿತ್ತು
ಆರಾಮಾಗಿ ಕೈಗೆಟುಕುವಂತೆ..
ಬಾಲಕ್ಕೆ ದಾರ ಕಟ್ಟಿದಾಗಲೂ
ಹಾರುತ್ತಿತ್ತು - ಕಳೆದ ಸ್ವಾತಂತ್ರ್ಯ
ಹುಡುಕುವ ಹುಚ್ಚು ಯತ್ನದಲ್ಲಿ...
ನಮಗೆ ಆಟ ಬೇಸರವಾಗಿ  
ಬಾಲಕ್ಕೆ ಕಟ್ಟಿದ ದಾರ ಬಿಚ್ಚಿದಾಗ 
ಪುರ್ರನೆ ಆಕಾಶದಲ್ಲಿ ಮಾಯ
ಮತ್ತೆ ನಮ್ಮ ಕೈಗೆ ಸಿಗದಂತೆ...!!
ಬಿಂಬಿ ಈಗ ಬಲು ಅಪರೂಪ
ಅಲ್ಲೊಂದು ಇಲ್ಲೊಂದು ಕಂಡರೆ ಹೆಚ್ಚು
ಆದರೂ ಕೆಂಪು ಬಿಂಬಿ ಕಂಡಾಗ 
ಅದೇನೋ ಹೇಳಲಾರದ ಖುಷಿ
ಬಾಲ್ಯದ ಸವಿ ನೆನಪಿಗೇ ?
ರೆಕ್ಕೆ ಬಿಚ್ಚಿ ಹಾರುವ ಸ್ವಾತಂತ್ರ್ಯಕ್ಕೇ?
ಅಥವಾ ಅದರ ಸುಂದರ
ಕೆಂಪು ಬಣ್ಣದ ರೆಕ್ಕೆಗಳಿಗೇ?
ಕೆಂಪು ಬಿಂಬಿಯೊಂದು 
ಖುಷಿಯ ರೂವಾರಿ...!!

- R. R. B.

ಮಂಗಳವಾರ, ಜೂನ್ 16, 2020

ಕಾಮರ್ಸ್_ಕವಿತೆಗಳು_10

ಎಲ್ಲರೂ ದಿನವಿಡೀ ಮನೆಯ ಕಾರ್ಯಕ್ರಮದಲ್ಲಿ ಖುಷಿಪಡುತ್ತಿದ್ದರೆ
ಅಲ್ಯಾರೋ - ಯಾರದೋ ಚೆಕ್ಕಿನಲ್ಲಿ
ದಿನಾಂಕ, ಸಹಿ ಸರಿಯಿದೆಯೇ ಅಂತ
ಕಣ್ಣು ಪಿಳಿ ಪಿಳಿ ಮಾಡಿ ಪರೀಕ್ಷಿಸುತ್ತಿದ್ದರಂತೆ....

- R. R. B.

ಭಾನುವಾರ, ಜೂನ್ 14, 2020

ಕಾಮರ್ಸ್_ಕವಿತೆಗಳು_9


ರಿಸರ್ಚ್ ಫೇಸಿನ ಖರ್ಚುಗಳೆಲ್ಲ
ಸ್ಥಿರಾಸ್ತಿಯ ಮೌಲ್ಯ ಹೆಚ್ಚಿಸದು
ಅವು ಬರೀ ವರ್ಷದ ವೆಚ್ಚಗಳಷ್ಟೇ -
ಅರ್ಧಕ್ಕೆ ನಿಂತ ಲೇಖಕನೊಬ್ಬನ
ಕತೆ, ಕವಿತೆ, ಚುಟುಕುಗಳಂತೆ....

- R. R. B.

ಶನಿವಾರ, ಜೂನ್ 13, 2020

ಊರ ನಡುವಣ ಅರಳೀಮರ



               "ಅನು...‌ನನ್ನ ಲಂಚ್ ಬಾಕ್ಸ್ ಎಲ್ಲೆ? ಬೇಗ ತಂದ್ಕೊಡು, ಟೈಮಾಯ್ತು" ಎಂದು ಸಿಡುಕುತ್ತ ಕೈ ಗಡಿಯಾರ ನೋಡಿಕೊಂಡ ವೈಭವ್.
"ಬಂದೆ ರೀ... ತಗೊಳ್ಳಿ" ಎಂದು, ಊಟದ ಡಬ್ಬಿಯನ್ನು ಗಂಡನ ಕೈಗಿಟ್ಟು ಮುಗುಳ್ನಕ್ಕಳು ಅನಘಾ.
ವೈಭವ್ ಅದಕ್ಕೆ ಪ್ರತಿಯಾಗಿ ನಗದೇ ಬಿರಬಿರನೆ ಹೊರಟಾಗ ಅನಘಾಳ ಕಣ್ಣಂಚಲ್ಲಿ ನೀರು ಜಿನುಗಿತ್ತು. ಉಕ್ಕಿಬರುತ್ತಿದ್ದ ಅಳುವನ್ನು ನಿಯಂತ್ರಿಸುತ್ತ  ಸೋಫಾದ ಮೇಲೆ ಕುಸಿದಳು. ಮನಸ್ಸು ಹತೋಟಿಗೆ ಸಿಗದ ಗಾಳಿಪಟದಂತಾಗಿತ್ತು. "ವೈಭವ್ ಗೆ ಯಾಕಿಷ್ಟು ಕೋಪ ನನ್ನ ಮೇಲೆ ?..." ಅಂತ ಜೋರಾಗಿಯೇ ಕೇಳಿಕೊಂಡಳು. ಆಲೋಚನೆಗಳ ನಾಗಾಲೋಟ ಅದಾಗಲೇ ಆರಂಭವಾಗಿತ್ತು....

                ಬೆಂಗಳೂರಿಗೆ ಬಂದು ಎರಡು ವರ್ಷಗಳಾಗಿದ್ದಷ್ಟೇ. ಆದರೆ ವೈಭವ್ ನಲ್ಲಿ ಆಗಿದ್ದ ಪ್ರೀತಿ, ಕಾಳಜಿ ಈಗ ಇಲ್ಲ. ಕೆಲಸದ ಒತ್ತಡದಲ್ಲಿ ವೈಯಕ್ತಿಕ ಜೀವನವನ್ನೇ ಮರೆತರೆ ಹೇಗೆ? ನಾನಾದರೂ ಏನು ಮಾಡಲಿ? ಇಡೀ ದಿನ ಈ ಪುಟ್ಟ ಮನೆಯಲ್ಲಿದ್ದು ಬೋರಾಗತ್ತೆ. ಮೊದಲು ರವಿವಾರವಾದರೂ ಎಲ್ಲಾದರೂ ಸುತ್ತಾಡಿಕೊಂಡು ಬರುತ್ತಿದ್ದೆವು. ಈಗೀಗ ಎರಡು ತಿಂಗಳಿಂದ ಅದೂ ಇಲ್ಲ. ಕೇಳಿದರೆ ಡೆಡ್ಲೈನ್, ವರ್ಕ್ ಲೋಡ್ ಅದು‌ ಇದು ಅಂತ ಮನೆಯಲ್ಲೇ ಲ್ಯಾಪಟಾಪ್ ಕುಟ್ಟುತ್ತಿರುತ್ತಾರೆ. ನಾನೂ ಎಷ್ಟು ಹೊತ್ತು ಅಂತ ಮೊಬೈಲ್ ನೋಡ್ಲಿ? ಈಗೀಗ ಅದೂ ಬೇಜಾರು. ಮನೆಕೆಲಸ ಬಿಟ್ಟು ಬೇರೆನೂ ಕೆಲಸ ಇಲ್ಲ. ಇದ್ದದ್ದೊಂದು ವೀಣೆ ಊರಲ್ಲೇ ಉಳಿದುಕೊಂಡುಬಿಟ್ಟಿದೆ. ಈ ಸಲ ಹೋದಾಗ ತರಬೇಕು... ಹಾಗೋ ಹೀಗೋ ಪಕ್ಕದ ಮನೆಯವರನ್ನ ಫ್ರೆಂಡ್ ಮಾಡ್ಕೊಂಡೆ. ಆದ್ರೆ ಅವರ್ಯಾರೂ ಜಾಸ್ತಿ ಮಾತಾಡುವವರಲ್ಲ... ಸುಮಾರು ದಿನ ಒಬ್ಬಳೇ ಪಾರ್ಕಿಗೆ ಹೋಗಿ ಬರೋಕೂ ಟ್ರೈ ಮಾಡಿದೆ. ಈಗೀಗ ಅಲ್ಲಿಗೆ ಹೋಗಲೂ ಮನಸಿಲ್ಲ. ಇವರು ನೋಡಿದ್ರೆ ಪ್ರೀತಿಯಿಂದ ಮಾತಾಡೋದನ್ನೇ ಮರೆತ ಹಾಗಿದೆ. ಸಣ್ಣ ಪುಟ್ಟ ವಿಷಯಕ್ಕೆಲ್ಲ ಕೂಗಾಡಿ ಆಫೀಸಿನ ಫ್ರಸ್ಟ್ರೇಷನ್ ಎಲ್ಲ ನನ್ನ ಮೇಲೆ ತೋರಿಸ್ತಾರೆ. ಹೆಂಡ್ತಿ ಮೇಲೆ‌ ಒಂಚೂರೂ ಕಾಳಜಿ ಇಲ್ಲ. ನಂಗೂ ಸಾಕಾಗಿ ಹೋಗಿದೆ. ಒಂದ್ಸಲ ಊರಿಗೆ ಹೋಗಿ ಅಮ್ಮನ ಹತ್ರ ಎಲ್ಲ ಹೇಳ್ಕೋಬೇಕು...ಯೋಚನೆಗಳು ಒಂದು ದಡ ತಲುಪಿದಾಗ ಅನಘಾಳಿಗೆ ತುಸು ಸಮಾಧಾನವಾಯ್ತು.

                ಮನೆಕೆಲಸ ಎಲ್ಲ‌ ಮುಗಿಸಿ ಸಂಜೆ ವೈಭವ್ ಗೆ ವಿಷಯ ಹೇಳಬೇಕೆಂದು ಕಾಯುತ್ತಿದ್ದಳು. ವೈಭವ್ ಬಂದಾಗ ರಾತ್ರಿ ಒಂಭತ್ತೂವರೆ. ಅನಘಾ ಊಟ ಬಡಿಸಲು ಹೋದಳು. "ನಂದಾಗ್ಲೇ ಊಟ ಆಗಿದೆ. ನೀನು ಊಟ ಮಾಡಿ ಮಲ್ಕೋ" ಎಂದ ವೈಭವ್. "ಅಲ್ಲ ರೀ ಅದು..." ಅಂತ ಏನೋ ಹೇಳಲಿದ್ದಳು ಅನಘಾ. ಅವಳ ಮಾತನ್ನು ಮೊಟಕುಗೊಳಿಸಿ "ನಾನು ತುಂಬಾ ಟೈರಡ್ ಆಗಿದೀನಿ. ನಿನ್ನ ಹರಿಕತೆ ಎಲ್ಲ ಇವಾಗ ಬೇಡ" ಎಂದು ವೈಭವ್ ರೂಮಿಗೆ ಹೋದ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿದ್ದರೂ ಅನಘಾ ಊಟ ಮಾಡಲಿಲ್ಲ.‌ ಎಲ್ಲವನ್ನು ಅಲ್ಲೇ ಮುಚ್ಚಿಟ್ಟು, ಸ್ವಲ ನೀರು ಕುಡಿದು, ನಿಟ್ಟುಸಿರು ಬಿಡುತ್ತ ರೂಮಿನ ಕಡೆ ನಡೆದಳು. ಮಲಗಿ ಸುಮಾರು ಹೊತ್ತಾದರೂ ನಿದ್ದೆ ಕೈಗೆಟುಕದ ನಕ್ಷತ್ರವಾಗಿತ್ತು. ಮನಸ್ಸು ಗತಕಾಲಕ್ಕೆ ವಾಲಿತ್ತು. ನೆನಪುಗಳ ಸರಮಾಲೆಯಿಂದ ಒಂದೊಂದೇ ನೆನಪುಗಳನ್ನು ಬಿಡಿಸುತ್ತ ಹೋದಳು ಅನಘಾ...

                ಅದೊಂದು ಸುಂದರವಾದ ಹಳ್ಳಿ. ಅಪ್ಪ - ಅಮ್ಮನ ಮುದ್ದು ಮಗಳು ಅನಘಾ. ಚಿಕ್ಕಂದಿನಿಂದ ಓದುವುದರಲ್ಲಿ‌ ಜಾಣೆ. ವೀಣೆ ತರಗತಿಗೆ ಸೇರಿದಾಗಿನಿಂದ ವೀಣೆ ನುಡಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಸುಮಧುರ ಕಂಠವೂ ಇದ್ದದ್ದು ಅವಳ ಇನ್ನೊಂದು ಅದೃಷ್ಟ. ವೈಭವ್ ಒಂದನೇ ಕ್ಲಾಸಿಂದ ಅವಳ ಕ್ಲಾಸ ಮೇಟ್. ಅದೇ ಊರಿನವ. ಅನಘಾಳ ತಂದೆಯ ಗೆಳೆಯನ ಮಗ. ಅವನೂ ಹಾಡುತ್ತಿದ್ದರಿಂದ  ಇವರಿಬ್ಬರ ನಡುವೆ ಬಹುಬೇಗ ಗೆಳೆತನ ಶುರುವಾಗಿತ್ತು. ಶಾಲೆ ಮುಗಿದ ತಕ್ಷಣ ಊರ ನಡುವಿನ ಅರಳೀಮರದ ಚಡಿಯ ಮೇಲೆ ಕುಳಿತು ಹರಟೆ ಹೊಡೆದೇ ಮನೆಗೆ ಹೋಗುವ ವಾಡಿಕೆ. ಶಾಲೆ ಮುಗಿದು ಹೈಸ್ಕೂಲ್, ಕಾಲೇಜಿಗೆ ಹೋದಾಗಲೂ ಅದೇ ಸ್ನೇಹ, ಅದೇ ಮುಗಿಯದ ಮಾತುಕತೆ, ಅದೇ ಅರಳೀಮರದ ಚಡಿ... ಡಿಗ್ರಿ ಓದುವಷ್ಟರಲ್ಲಿ ನಿಧಾನವಾಗಿ ಸ್ನೇಹ ಪ್ರೇಮವಾಗಿ ಪ್ರಮೋಷನ್ ಗಳಿಸಿತ್ತು. ಕಾಲೇಜಿನ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಯುಗಳ ಗೀತೆ ಹಾಡಿದರೆ ಸಾಕು, ಇಡೀ ಕಾಲೇಜೇ ಹುಚ್ಚೆದ್ದು ಕುಣಿಯುತ್ತಿತ್ತು.  ವೈಭವ್ ಎಂ.ಬಿ.ಎ. ಮಾಡಲು ಬೆಂಗಳೂರಿಗೆ ಹೋದಾಗ ಅನಘಾ ಚಡಪಡಿಸಿದ್ದಳು. ಆಗಲೂ ಬೇಜಾರಾದಾಗ ಅದೇ ಅರಳೀಮರದ ಕಟ್ಟೆಯ ಮೇಲೆ ಕುಳಿತು ಸವಿ ಕ್ಷಣಗಳ ಮೆಲುಕುಹಾಕಿ ಹಗುರಾಗುತ್ತಿದ್ದಳು. ವೈಭವ್ ಎಂ.ಬಿ.ಎ. ಮುಗಿಸಿ, ಒಂದು ಕೆಲಸ ಹಿಡಿದು ಊರಿಗೆ ಬಂದಾಗ ಎಲ್ಲರಿಗಿಂತ ಹೆಚ್ಚು ಅನಘಾ ಖುಷಿ ಪಟ್ಟಿದ್ದಳು. ಇವರಿಬ್ಬರ ಭಾವನೆ ಅರಿತವರಂತೆ, ಮನೆಯಲ್ಲಿ ಮದುವೆಗೆ ಸಮ್ಮತಿ ಸೂಚಿಸಿ ಆಗಿತ್ತು. ಜೋಡಿ ಹಕ್ಕಿಗಳು ಮದುವೆ ಎಂಬ ಸಂಭ್ರಮ ಮುಗಿಸಿ, ಗೂಡಿಂದ ಹಾರಿ ಬೆಂದಕಾಳೂರೆಂಬ ಮಹಾನಗರ ಸೇರಿದ್ದರು. ಮೊದ ಮೊದಲು ಖುಷಿಯಾಗೇ ಇದ್ದರೂ, ವೈಭವ್ ಗೆ ಪ್ರಮೋಷನ್ ಆದಾಗಿನಿಂದ ಕೆಲಸದ ಹೊರೆ ಜಾಸ್ತಿಯಾಗಿತ್ತು. ಅನಘಾಳ ಮೇಲಿನ ಪ್ರೀತಿ ಕಡಿಮೆಯಾಯ್ತು ಎನ್ನುವುದಕ್ಕಿಂತ ಅವಳತ್ತ ಗಮನ ಕೊಡಲಾಗಲಿಲ್ಲ ಎಂದರೆ ಹೆಚ್ಚು ಸೂಕ್ತ...
ಹಳೆಯ ಘಟನೆಗಳೆಲ್ಲ ನೆನಪಾದಾಗ ನಿಟ್ಟುಸಿರೊಂದು ಹೊರಬಂತು. ಹಾಗೇ ತವರು ಮನೆಗೆ ಹೋಗದೇ ಆರು ತಿಂಗಳೇ ಕಳೆದಿದೆ ಎಂದು ನೆನಪಾಗಿ, ಊರಿಗೆ ಹೋಗುವ ಬಯಕೆ ಹೆಚ್ಚಾಯಿತು. ಊರು ಎಂದಕೂಡಲೇ ಮತ್ತೆ ನೆನಪುಗಳ ಬಂಡಿ...

               ‌‌ತಾನಿದ್ದ ಹಳೆಯ ಕಾಲದ ತೊಟ್ಟಿ ಮನೆ, ಅಂಗಳದಲ್ಲಿ ಸಾಲು ಸಾಲು ಹೂವಿನ ಗಿಡ, ಹಿತ್ತಲ ಬದಿ ಅಮ್ಮ ನೆಟ್ಟ ಮಲ್ಲಿಗೆ ಗಿಡ, ಮನೆಯ ಕಾಂಪೌಂಡಿನ ಬಳಿಯ ಪಾರಿಜಾತ, ಸ್ವಲ್ಪ ದೂರದವರೆಗೆ ಮಣ್ಣಿನ ಕಚ್ಚಾ ರಸ್ತೆ, ಊರ ಮಧ್ಯದ ಆ ಅರಳೀಮರ...ಓಹ್ ಅದೊಂದು ಅಚ್ಚರಿ... ಸಾವಿರ ಕತೆಗಳ ತನ್ನೊಳಗೆ ಬಚ್ಚಿಟ್ಟು, ತಂಪಾದ ಗಾಳಿ ನೀಡುವ ಅದ್ಭುತ !! ಆ ಎಲೆಗಳನ್ನು ಎಷ್ಟು ಚಂದವಾಗಿ ಜೋಪಾನ ಮಾಡುತ್ತಿದ್ದೆ ನಾನು... ಎಲೆಯ ಮೇಲ್ಪದರವೆಲ್ಲಾ ಕಿತ್ತುಹೋಗಿ ಬಲೆಯಂತಾದಾಗ ಎಷ್ಟು ಚಂದ ಕಾಣುತ್ತಿತ್ತು ಅದು... ನನ್ನ ಚಿತ್ರಕಲೆ ಪಟ್ಟಿಯಲ್ಲಿ ಯಾವತ್ತೂ ಒಂದು ಪೇಜು ಆ ಎಲೆಗೇ ಮೀಸಲಿತ್ತು... ವೈಭವ್ ಕೂಡ ನನ್ನ ಹುಚ್ಚಾಟ ನೋಡಿ ಎಲೆಯನ್ನು ಒಣಗಿಸಿ, ಅದರ ಮೇಲೆ ಚಿತ್ರ ಬಿಡಿಸಿ ನನಗೆ ಕೊಡುತ್ತಿದ್ದ... ಆ ದಿನಗಳು ಎಷ್ಟು ಸುಂದರವಿತ್ತು.... ನಮ್ಮಿಬ್ಬರ ಸ್ನೇಹಕ್ಕೆ, ಪ್ರೀತಿಗೆ ಆ ಅರಳೀಮರವೇ ಸಾಕ್ಷಿಯಾಗಿತ್ತು... ಮಳೆಗಾಲದಲ್ಲಿ ದಾರಿಯ ಇಕ್ಕೆಲಗಳಲೂ ಹಚ್ಚ ಹಸುರಿನ ಸಾಲು, ಹೊಲದಲ್ಲಿ ಬೆಳೆಯುತ್ತಿದ್ದ ಭತ್ತ - ಕಬ್ಬು - ಶೇಂಗಾ, ತೋಟದಲ್ಲಿ ನಳ ನಳಿಸುವ ಅಡಕೆ, ಬಾಳೆ, ತೆಂಗಿನ ಮರಗಳು, ಶಿಲೆಯಿಂದಲೇ ಕಟ್ಟಿದ್ದ ಊರಿನ ಪುಟ್ಟ ದೇವಾಲಯ, ಅಲ್ಲಿ ಕೊಡುತ್ತಿದ್ದ ರುಚಿಯಾದ ಪ್ರಸಾದ... ಪ್ರಸಾದ ಅಂದಾಕ್ಷಣ ಅಮ್ಮನ ಅಡುಗೆಗಳ ನೆನಪು - ಬಾಳೆಕಾಯಿ ಚಿಪ್ಸ, ಹಲಸಿನ ಕಾಯಿ ಚಿಪ್ಸ್, ಅದರ ಹಪ್ಪಳ, ಮಾವಿನ ಹಣ್ಣಿನ ಹಪ್ಪಳ, ಸಂಡಿಗೆ, ಹಲಸಿನ ಬೇಳೆಯ ಸಾಂಬಾರ್.... ಅಯ್ಯೋ ಇನ್ನು ನೆನಸಿಕೊಂಡ್ರೆ ತಡೆಯಲಾರೆ ಎನ್ನುತ್ತ ಅನಘಾ ವಾಸ್ತವಕ್ಕೆ ಬಂದಳು. ಗಡಿಯಾರ 11 ಗಂಟೆ ಎಂದು ತೋರಿಸುತ್ತಿತ್ತು. ತಿಂಡಿಗಳ ನೆನಪಿನಿಂದ ಹೊಟ್ಟೆ ಹಸಿವು ಹೆಚ್ಚಾಗಿ, ಒಂದು ಲೋಟ ನೀರು ಕುಡಿದು "ಎಷ್ಟಂದ್ರೂ ಹಳ್ಳಿ ಜೀವನವೇ ಚಂದ.. ವೈಭವ್ ಗೆ ಒಂದೆರಡು ದಿನ ಅಡ್ಜಸ್ಟ್ ಮಾಡ್ಕೋ ಅಂತ ಹೇಳಿ, ನಾಳೇನೇ ಊರಿಗೆ ಹೋಗ್ಬೇಕು..." ಎಂದುಕೊಂಡವಳಿಗೆ ಒಳ್ಳೆಯ ನಿದ್ರೆ ಬಂತು.

- R. R. B.


ಬುಧವಾರ, ಜೂನ್ 10, 2020

ಗೆಳತಿಯ ನೆನಪುಗಳಲಿ

ಗೆಳತಿ ಹೊರಟುಬಿಟ್ಟೆ ನೀನು 
ಏನೂ ಆಗೇ ಇಲ್ಲ ಎಂಬಂತೆ...
ನನ್ನೆದೆಯ ಗೋಡೆಯ ಮೇಲೆ
ರಂಗು ರಂಗಿನ ಚಿತ್ತಾರ ಬಿಡಿಸಿ
ನವ ಭಾವಗಳ ಬಸಿರು ಮಾಡಿ
ಪ್ರೀತಿಯ ಪ್ರಸವಕ್ಕೂ ನಿಲ್ಲದೇ
ಹೊರಟುಬಿಟ್ಟೆ ನೀನು ....

ನನ್ನ ಬಣ್ಣ ಬಣ್ಣದ ಕನಸುಗಳೀಗ
ದಾರಿಯಲ್ಲಿ ಒದ್ದೆ ಮುದ್ದೆಯಾಗಿ ಬಿದ್ದಿವೆ 
ಮನದೊಡತಿಯ ಸುಳಿವಿಲ್ಲದೇ...
ನಿನಗೋ ಒಂಚೂರೂ ತಾಳ್ಮೆಯಿಲ್ಲ
ಹೋಗುವ ಮುನ್ನ ತಿಪ್ಪೆಗೆಸೆಯಬೇಕಿತ್ತಲ್ಲವೇ?
ಪಾಪ ಅವುಗಳಿಗೂ ಕಷ್ಟ ನನ್ನಂತೆ !!

ನೀ ಹೃದಯದಲಿ ಬಿಡಿಸಿದ ರಂಗೋಲಿಯ
ಚುಕ್ಕಿಗಳೆಲ್ಲ ಗುಳೇ ಹೊರಟಿವೆಯಂತೆ
ವಿರಹದ ಬಿಸಿಗಾಳಿಯ ಝಳ ತಾಳಲಾರದೇ..
ಕನಸಿನ ಕೆರೆಗೆ ಪಟಪಟ ಕಲ್ಲೆಸೆದು 
ಮಾಯವಾದೆ ನೀನು ಸದ್ದಿಲ್ಲದೇ..
ಅಲೆಗಳ ಸಂಭಾಳಿಸಬೇಕು ನಾನೀಗ 
ಏಕಾಂಗಿಯಾಗಿ, ನಿನ್ನ ನೆನಪಿನಲ್ಲಿ..

ಬಾವಿಕಟ್ಟೆ ಬಳಿ ಗಿಡಕೆ ಈಗೀಗ ಬಲು ಬೇಸರ
ನಮ್ಮಿಬ್ಬರ ಪಿಸುಮಾತುಗಳ ತರಲೆಯಿಲ್ಲವಲ್ಲಾ
ಕೋಣೆಯ ಮಂಚಕೂ ಎಲ್ಲಿಲ್ಲದ ಸಿಟ್ಟು
ನಿದ್ದೆಯಿಲ್ಲದೇ ನಾನು ಹೊರಳಾಡುವಾಗ...
ನೀ ನೀರೆರೆದ ಅಂಗಳದ ಗಿಡದಲ್ಲಿ
ಚಂದದ ಮಲ್ಲಿಗೆ ಹೂವಾಗಿದೆ ಗೆಳತಿ
ನೋಡಿ ಖುಷಿಪಡಲು ನೀನೊಬ್ಬಳಿಲ್ಲ ಅಷ್ಟೇ...
ಸುರಿವ ಮಳೆಗೆ ಮತ್ತೆ ಮತ್ತೆ ಕಾಡುವೆ ನೀನು
ನಮ್ಮಿಬ್ಬರ ಮೊದಲ ಮಿಲನದ ನೆನಪಾಗಿ !!

ಸಖಿ, ಹೊರಟುಬಿಟ್ಟೆ ನೀನು ಸದ್ದಿಲ್ಲದಂತೆ
ನೀನಿಲ್ಲದ ನನ್ನ ಬಗ್ಗೆ ಕಲ್ಪನೆಯೂ ಇಲ್ಲದೇ...
ನಾನೋ? ಪಾಪಿಗಳು ಚಿರಾಯುವಂತೆ 
ಎಂದು ಹಳಿಯುತ್ತಲೇ ನಿನ್ನ ಸಮಾಧಿಗೆ ಹೂವಿಡುತ್ತೇನೆ...

- R. R. B.

ಸೋಮವಾರ, ಜೂನ್ 8, 2020

ನಿಯತಿ


                 ಮುಸ್ಸಂಜೆಯ ಸಮಯ. ಭಾಸ್ಕರ ತನ್ನ ಕೆಲಸ ಮುಗಿಸಿ, ಬಾನಿನ ಕೆನ್ನೆ ಕೆಂಪೇರಿಸುತ್ತ ಪಡುವಣದಲ್ಲಿ ಮರೆಯಾಗುತ್ತಿದ್ದ. ಗಮ್ಯದೆಡೆಗೆ ಸಾಗುತ್ತಿದ್ದ ಹಕ್ಕಿಗಳ ಗುಂಪು, ಹಿತವಾಗಿ ಬೀಸುತ್ತಿದ್ದ ತಂಗಾಳಿ, ತೀರದ ಮರಳ ಸವರುವ ಕಡಲ ಅಲೆಗಳ ಸಾಲು, ದಡದತ್ತ ಬರುತ್ತಿರುವ ಪುಟ್ಟ ದೋಣಿ... ಇವೆಲ್ಲದರ ಮಧ್ಯೆ ವಿಶಾಖಾ ತನ್ನ ಯೋಚನಾ ಲಹರಿಯಲ್ಲೇ ಮುಳುಗಿದ್ದಳು. ಕಡಲು ಅವಳಿಗೆ ಹೊಸತಲ್ಲ, ಹಾಗಂತ ದಿನಾಲೂ ಸಮುದ್ರ ತೀರಕ್ಕೆ ಬರುವ ಅವಳಿಗೆ ಅದು ಎಂದೂ ಹಳೆತು ಎನಿಸಿಲ್ಲ. ಪ್ರತಿ ದಿನ, ಪ್ರತಿ ಸಂಜೆ, ಪ್ರತಿ ಅಲೆಗಳು ಅವಳಿಗೆ ಹೊಚ್ಚ ಹೊಸದೇ - ಥೇಟ್ ಜೀವನದ ಅನುಭವಗಳಂತೆ !! ಸಾಗರ ಎಂದೂ ಅವಳಿಗೆ ಅಚ್ಚರಿಯ ವಿಷಯ. ಒಳಿತು - ಕೆಡುಕು ಎಲ್ಲವನ್ನು ತನ್ನ ಒಡಲಲ್ಲಿರಿಸಿ, ನಿರಂತರ ಭೋರ್ಗರೆವ ಸಮುದ್ರ ತನ್ನ ತೀರಕ್ಕೆ ಬಂದವರಿಗೆ ನೀಡುವ ದಿವ್ಯ ಸಾನ್ನಿಧ್ಯ, ಪ್ರಶಾಂತತೆ, ನಿರಾಳತೆ ಎಲ್ಲವೂ ವಿಶಾಖಾಳಿಗೆ ಕುತೂಹಲ ಹುಟ್ಟಿಸುವ ಸರಕು. ಆದರೆ ಇಂದು ಇದ್ಯಾವುದೂ ಅವಳ ಗಮನದಲ್ಲಿಲ್ಲ.. ವಿಶಾಖಾಳ ಮನ ಗತಕಾಲದ ನೆನಪುಗಳ ರಾಶಿಯಿಂದ ನಿಧಾನವಾಗಿ ಒಂದೊಂದೇ ಹರಳನ್ನು ಹೆಕ್ಕುತ್ತಿತ್ತು....

                            ವಿಶಾಖಾ ಚಿಕ್ಕವಳಿರುವಾಗಿನಿಂದ  ಕಡಲ ನಂಟು ಗಟ್ಟಿಯಾಗಿ ಬೆಳೆದಿತ್ತು. ಪ್ರತಿ ಭಾನುವಾರ ಅಪ್ಪ - ಅಮ್ಮನ ಜೊತೆ ಸಮುದ್ರ ತೀರಕ್ಕೆ ಬಂದು ಒಂದಿಷ್ಟು ಹೊತ್ತು ಆಟವಾಡಿ, ಮರಳ ಮೇಲೆಲ್ಲ ಚಿತ್ರ ಬರೆದು ಖುಷಿ ಪಡುತ್ತಿದ್ದ ಹುಡುಗಿ, ಬೆಳೆದು ಕೆಲಸಕ್ಕೆ ಸೇರಿದರೂ ಕಡಲ ಮೇಲಿನ ಪ್ರೀತಿ ಒಂಚೂರೂ ಕಮ್ಮಿಯಾಗಿರಲಿಲ್ಲ. ದಿನವೂ ಮನೆಯಿಂದ ಸಮುದ್ರ ತೀರಕ್ಕೆ ಬರುವ ಆ ಹಾದಿ, ಅದರ ಅಕ್ಕಪಕ್ಕದ ಗಿಡಗಳು, ಕಡುಗಪ್ಪು ಬಣ್ಣದ ಡಾಂಬರು ರಸ್ತೆ ಎಲ್ಲವೂ ಅವಳಿಗೆ ಆಪ್ತ. ಸಮುದ್ರ ತೀರದಲ್ಲಿ ಹಾರಿಸಿದ ಚಂದದ ನೀಲಿ ಗಾಳಿಪಟ, ವರ್ಷ ವರ್ಷ ಆಡಿದ ಹೋಳಿ, ಗೆಳತಿಯರೊಂದಿಗೆ ಕಿತ್ತಾಟ, ಡಿಗ್ರಿ ಮುಗಿಸಿ ಇನ್ನು ಹೀಗೆ ಎಲ್ಲರೂ ಒಟ್ಟಿಗೆ ಸಿಗುವುದಿಲ್ಲ ಎಂದು ಕಣ್ಣೀರು ಹಾಕಿದ ಭಾವುಕ ದಿನ ಎಲ್ಲವೂ ಅವಳಿಗೆ ನೆನಪಾಗುತ್ತಿತ್ತು. ಅದೆಷ್ಟು ಸುಂದರವಿತ್ತು ಆ ಕ್ಷಣಗಳು...‌ ಆಲೋಚನೆಯಲ್ಲಿ ಮುಳುಗಿದ್ದವಳಿಗೆ ವಾಸ್ತವ ರಪ್ಪನೆ ಕಣ್ಮುಂದೆ ಬಂತು.

    ‌‌          ಅಪ್ಪ ತೀರಿ ಹೋಗಿ ಒಂದೂವರೆ ವರ್ಷವಾಯ್ತು. ಅಮ್ಮನಿಗೋ ಈಗೀಗ ಯಾವುದರಲ್ಲೂ ಆಸಕ್ತಿಯಿಲ್ಲ. ನನಗೋ ಕಂಪೆನಿಯ ಬಿಡುವಿಲ್ಲದ ಕೆಲಸಗಳಲ್ಲಿ  ಹೇಗೋ ದಿನ ಕಳೆದು ಹೋಗುತ್ತದೆ‌. ಆದರೆ ಮನೆಗೆ ಬಂದು, ಅಮ್ಮನ ಕುಂಕುಮವಿಲ್ಲದ ಹಣೆ ನೋಡಿದಾಗ ಮತ್ತೆ ಮತ್ತೆ ಅಪ್ಪನ ನೆನಪಾಗುತ್ತದೆ... ಬೇಗ ನನ್ನನ್ನು ಮದುವೆ ಮಾಡಿ ಕಳಿಸಬೇಕೆಂಬ ಕರ್ತವ್ಯದ ಹೊರೆ ಅಮ್ಮನ ಮೇಲೆ. ಅದೆಲ್ಲಿಂದ ಸಿಕ್ಕಿದನೋ ಆ ಪುಣ್ಯಾತ್ಮ...‌ " ಇಲ್ಲಿನ ನಿಮ್ಮ ಮನೆ ಮಾರಿ ನನ್ನೊಂದಿಗೆ ಮುಂಬೈಗೆ ಬನ್ನಿ ಆಂಟಿ..‌ನಾವೆಲ್ರೂ ಅಲ್ಲೇ ಆರಾಮಾಗಿರ್ಬೋದು..." ಅಂತ ಅಮ್ಮನ ಕಿವಿ ಹಿಂಡಿ, ನನ್ನ ಕೈ ಹಿಡಿಯುವ ಆಸೆಯಲ್ಲಿದ್ದಾನೆ.  ಈ ಊರು, ಅಪ್ಪ ಪ್ರೀತಿಯಿಂದ ಕಟ್ಟಿಸಿದ, ನಾನು ಹುಟ್ಟಿ ಬೆಳೆದ, ಸಾವಿರ ನೆನಪುಗಳ ಮೂರ್ತ ರೂಪವಾದ ಮನೆ, ಈ ಕಡಲು ಎಲ್ಲವನ್ನು ಬಿಟ್ಟು ಹೋಗುವುದಾದರೂ ಹೇಗೆ?...
ಮನೆಯನ್ನಾದರೂ ಬಿಡಬಹುದು.. ಆದರೆ ನೆಚ್ಚಿನ ಸಮುದ್ರ ತೀರ? ತುಂಬಾ ಕಷ್ಟ... ಅದು ಹೇಗೆ ಅಮ್ಮ ನನ್ನ ಕೇಳದೆಯೇ, ಹುಡುಗಿ ನೋಡುವ ಶಾಸ್ತ್ರವೂ ಮುಗಿಸದೇ ನಿಶ್ಚಿತಾರ್ಥ ಇಟ್ಟುಕೊಂಡಳು? ಈಗ ವಾಟ್ಸಾಪ್, ಫೇಸ್ಬುಕ್ ಕಾಲ ಅಂತ ಅದ್ರಲ್ಲೇ ಪಟ ಕಳಿಸಿದೀನಿ ಎಂಬ ಸಬೂಬು ಬೇರೆ... ಹುಡುಗ ನೋಡಲೇನೋ ಚೆನ್ನಾಗಿದ್ದಾನೆ. ಆದರೆ ಹೇಗೋ ಏನೋ...
ವಿಶಾಖಾ ಯೋಚನೆಯ ಸುಳಿಯಲ್ಲಿ ಸಿಲುಕಿದ್ದಳು.

                "ಅಯ್ಯೋ" ಎಂಬ ಶಬ್ದ ವಿಶಾಖಾಳನ್ನು ವಾಸ್ತವಕ್ಕೆ ಕರೆತಂದಿತು. ಅವಳ ಪಕ್ಕದಲ್ಲೇ ಒಂದು ಪುಟ್ಟ ಹೆಣ್ಣು ಮಗು  ಆಟವಾಡುತ್ತಿತ್ತು. ಅಲೆಗಳ ಅಬ್ಬರದಲ್ಲಿ ಕಾಲ್ಗೆಜ್ಜೆ ಸಮುದ್ರ ಸೇರಿದ್ದೂ ಪುಟ್ಟಿಗೆ ಗೊತ್ತಿಲ್ಲ. ಸ್ವಲ್ಪ ಹೊತ್ತಿನ ನಂತರ ಅದನ್ನು ಗಮನಿಸಿದ ಮಗುವಿನ ತಾಯಿ ಬೇಸರದಿಂದ ಉಸುರಿದ್ದರು. ಅವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಪುಟ್ಟಿಯ ಅಪ್ಪ ದುಬೈ ಹೋಗುವ ಮುನ್ನ ಪ್ರೀತಿಯಿಂದ ಕೊಡಿಸಿದ ಗೆಜ್ಜೆ ಸಾಗರದ ಒಡಲು ಸೇರಿತ್ತು. ವಿಷಯ ತಿಳಿದ ವಿಶಾಖಾ ಮಗುವಿನ ತಾಯಿಗೆ ತೋಚಿದಷ್ಟು ಸಮಾಧಾನ ಮಾಡಿ ಕಳುಹಿಸಿ, 
ಮತ್ತೆ ತನ್ನ ಆಲೋಚನಾ ಲಹರಿಗೆ ಚಾಲ್ತಿ ನೀಡಿದಳು. ಈ ಬಾರಿ ಧನಾತ್ಮಕವಾಗಿ ಯೋಚಿಸಲಾರಂಭಿಸಿದಳು.

 ಜಗದಲ್ಲಿ ಸ್ವಾರ್ಥತೆಯೇ ತುಂಬಿರುವಾಗ ಅವನ್ಯಾರೋ ಪುಣ್ಯಾತ್ಮ ನನ್ನ ಮದುವೆಯಾಗುವುದರ ಜೊತೆ,  ಖುಷಿಯಿಂದ ಅಮ್ಮನಿಗೂ ಅವರ ಮನೆಯಲ್ಲೇ ಇರಲು ಹೇಳುತ್ತಿದ್ದಾನೆಂದರೆ ಖಂಡಿತ ಆತ ಒಳ್ಳೆಯವನೇ.. ನಾನೇ ಏನೇನೋ ಅಂದುಕೊಳ್ಳುವುದರ ಬದಲು ನೇರವಾಗಿ ಅವನೊಂದಿಗೆ ಮಾತನಾಡಬೇಕು. ಅವನನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೇ ಮದುವೆಯಾದರೂ ಈ  ಮನೆಯನ್ನಂತೂ ಬಿಡಲೇಬೇಕು. ಇನ್ನು ಸಮುದ್ರ? ಇಲ್ಲಿಯ ತೀರಕ್ಕೆ ಮುದ್ದಿಸುವ ಅಲೆಗಳೇ ಅಲ್ಲವಾ ಮುಂಬೈಯ ಕರಾವಳಿಯನ್ನೂ ಚುಂಬಿಸುವುದು? ವಿಶಾಲ ಕಡಲು ಕಡಲೇ... ತೀರ ಬದಲಾಗಬಹುದಷ್ಟೇ. ಬದುಕಿನ ದೋಣಿಯಲ್ಲಿ ಕುಳಿತು ಎಲ್ಲೂ ಹೋಗಬಾರದೆಂದು ದಡವ ಕಚ್ಚಿಕೊಂಡರೆ ಹೇಗೆ? ಎಲ್ಲವೂ ಬದಲಾಗುತ್ತದೆ. ಮುಂದಿನ ಜೀವನ ಕೂಡಾ. ಅಮ್ಮ ಹೇಳಿದ ಹುಡುಗನನ್ನೊಮ್ಮೆ ಭೇಟಿಯಾಗಿ ಮನಕ್ಕೆ ತೃಪ್ತಿಯಾಗುವಷ್ಟು ಮಾತನಾಡಬೇಕು. ಅವನ ಅಭಿಪ್ರಾಯ ಕೇಳಬೇಕು. ಇಷ್ಟವಾದರೆ ಮುಗೀತು. ಇಲ್ಲಾ ಅಂದ್ರೆ ಅಮ್ಮನಿಗೆ ನೇರವಾಗಿ ಹೇಳಬೇಕು. ಸಮಯ ತುಂಬಾ ಇದೆ. ಸದುಪಯೋಗ ಮಾಡುವ ಮನಸ್ಸು ಬೇಕಷ್ಟೇ.. ಹೀಗೆ ಇನ್ನೂ ಯೋಚಿಸುತ್ತ ಕುಳಿತವಳಿಗೆ ಯಾರೋ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಅವಳ ಹುಡುಗ ಮುಗುಳ್ನಗುತ್ತ ನಿಂತಿದ್ದ.  ಅವಳ ಕೊನೆಯಿಲ್ಲದ ಆಲೋಚನೆಗಳಿಗೆ ಅವನೇ ಗಮ್ಯವಾಗಿದ್ದ !! 

- R. R. B.

"ಶ್ರೀಸುತ" ಜಾಲತಾಣದಲ್ಲಿ‌ ಪ್ರಕಟವಾದ ಕತೆ 

ಶನಿವಾರ, ಜೂನ್ 6, 2020

ಹನಿಗವನ

ನಿಲ್ಲದೇ ಸುರಿಯುವ ಮಳೆ
ಮೋಡದ ಅಳುವೆಂದರೆ
ಭೂಮಿಗೆ ತುಂಬ ಖುಷಿ !
*************************

ನನ್ನ ಕನಸಿನ ಹೊಂಬಾಳೆ
ಕಳಚಿ ಬೀಳುತ್ತಿದೆ - ಅದಕೂ
ಮಣ್ಣ ಸೇರೋ ತವಕವೇ?
*************************

ಹೂದಾನಿಯ ಕಾಗದದ ಹೂವಿಗೆ
ಅರಳುವುದಕೆ ಹೊತ್ತಿಲ್ಲ ಗೊತ್ತಿಲ್ಲ 
ಸುವಾಸನೆಯಂತೂ ದೂರದ ಮಾತು !!
************************

ಅವಳ ಬಣ್ಣ ಬಣ್ಣದ ಕೊಡೆಗೆ
ಮಳೆನೀರ ಸ್ನಾನದ ಬಯಕೆ
ಆಕೆ ಕಾಲು ಕಳೆದುಕೊಂಡು ವರುಷವೀಗ !!
************************
- R. R. B.

ಗುರುವಾರ, ಜೂನ್ 4, 2020

ಬದುಕ ಪುಟಗಳಲಿ...

              ಶ್ರೀಕಾರ್ ಇಂಜಿನಿಯರ್ ಮುಗಿಸಿ ಮಲ್ಟಿ ನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಂದೆ - ತಾಯಿಯ ಮುದ್ದಿನ ಏಕೈಕ ಮಗ. ಬಾಲ್ಯದಿಂದಲೂ ಚೂಟಿ ಹುಡುಗ. ಓದಿನಲ್ಲಿ, ಆಟೋಟದಲ್ಲಿ ಬಲು ಚುರುಕು. ಕಂಪೆನಿ ಸೇರಿ ಎರಡು ವರ್ಷವಾಗುತ್ತ ಬಂತು. ಪ್ರತಿ‌ ತಿಂಗಳೂ ಮನೆಗೆ ಸ್ವಲ್ಪ ಹಣ ಕಳುಹಿಸುತ್ತಿದ್ದ. ಎಲ್ಲರೂ  "ಹುಡುಗ ಆರಾಮಾಗಿದಾನೆ" ಅಂತ ಅಂದುಕೊಂಡಿದ್ದರು. ಆದರೆ ಮಲೆನಾಡಿನ ಹಳ್ಳಿಯ ಸುಂದರ ಬಾಲ್ಯವನ್ನು ಅನುಭವಿಸಿದ್ದ ಶ್ರೀಕಾರ್ ಗೆ ಕಂಪೆನಿಯ ಏಕತಾನತೆಯ ಕೆಲಸಗಳು‌ ಬೇಸರ  ತರಿಸಿದ್ದವು. ಅದೇ ಕ್ಯಾಬಿನ್, ಚಳಿಯಿದ್ದರೂ ಹಾಕುವ ಏಸಿ, ಇಷ್ಟವಿಲ್ಲದಿದ್ದರೂ ಧರಿಸುವ ಫಾರ್ಮಲ್ ಬಟ್ಟೆ, ಆ ಉದ್ದಮೂತಿಯ ಶೂ... ಎಲ್ಲವೂ ಅವನಿಗೆ ಯಾಂತ್ರಿಕ ಬದುಕಿನ ಮೆಟ್ಟಿಲುಗಳಂತೆ ಅನಿಸುತ್ತಿತ್ತು....

              ಪ್ರಕೃತಿಯಲ್ಲಿ ಒಂದಾಗಿ, ಹೊಸ ಹೊಸ  ಸ್ಥಳಗಳ ಸೊಬಗು ನೋಡುತ್ತ, ವಿಭಿನ್ನ ಪ್ರದೇಶದ ವಿಭಿನ್ನ ಜೀವನ ಶೈಲಿಯನ್ನು ಅರಿತು ಪದಕ್ಕಿಳಿಸುವ ಬಯಕೆ ಶ್ರೀಕಾರನಲ್ಲಿ ಮೂಡಿತ್ತು. ಮನೆಯಲ್ಲಿ ಹೇಳಿದರೆ - " ಅಷ್ಟ್ ಚೊಲೋ‌ ಕಂಪನಿ, ಚೊಲೋ‌ ಸಂಬಳ ಬತ್ತು, ಅದ್ನ ಬಿಟ್ಟಿಕೆ ಎಂತ ಅಲೆಮಾರಿ ಆಗ್ತ್ಯನ ಮಾಣಿ? ನಿಂಗೊಂಚೂರೂ ಜವಾಬ್ದಾರಿನೇ ಇಲ್ಲೆ.. ಒಂದು ಮದ್ವೆ ಮಾಡ್ಸಕಾತು ಬೇಗ..." ಅಂತ ಅಪ್ಪ ಅಮ್ಮನ ವರಸೆ. ಶ್ರೀಕಾರ್ ಗೊಂದಲದ ಗೂಡಾಗಿದ್ದ. ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗಿ, ಟೀಂ ಲೀಡ್ ನಿಂದ ಒಂದೆರಡು ಸಲ ಬೈಸಿಕೊಂಡ. ಕೊನೆಗೂ "ಆದದ್ದಾಗಲಿ‌‌" ನೋಡೇಬಿಡೋಣ ಅಂತ ಮನೆಯಲ್ಲಿ ‌ತಿಳಿಸದೇ ಕಂಪನಿಯ ಉದ್ಯೋಗ ಬಿಟ್ಟ. ನೋಟೀಸ್ ಪೀರಿಯಡ್ ನಲ್ಲಿ ಪ್ರತಿದಿನ ರೂಮಿಗೆ ಬಂದವನೇ ತನ್ನ ಮುಂದಿನ ಬದುಕಿನ‌ ಬಗ್ಗೆ ರೂಪು - ರೇಷೆ ತಯಾರಿಸುತ್ತಿದ್ದ. ಕೊನೆಗೂ‌ ಕಂಪೆನಿಯ ಸ್ನೇಹಿತರಿಗೆಲ್ಲಾ ವಿದಾಯ ಹೇಳಿ ಬಂದ ದಿನ ಮನಸ್ಸಲ್ಲಿ  ಏನೋ ಒಂಥರಾ ನೆಮ್ಮದಿ...

             ಶ್ರೀಕಾರ್ ಟ್ರಾವೆಲ್ ಬ್ಲಾಗರ್ ಆದ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಧ್ಯವಾದಲ್ಲೆಲ್ಲ ಪಯಣಿಸಿದ. ತಾನು ಕಂಡ, ಕೇಳಿದ ಅನುಭವಗಳ ಸರಣಿ ಬರೆದ. ಸದ್ದಿಲ್ಲದಂತೆ ನಿಧಾನವಾಗಿ ಪ್ರಖ್ಯಾತಿ ಕೂಡ ಗಳಿಸಿದ. ಅದೆಲ್ಲದರ ನಡುವೆ ಮನೆಗೆ ಹಣ ಕಳಿಸುವುದನ್ನು, ಆಗಾಗ ಮನೆಗೆ ಹೋಗುವುದನ್ನೂ ಮರೆಯಲಿಲ್ಲ. ಇತ್ತ ಮನೆಯಲ್ಲಿ ಮಗನಿಗೆ ಹುಡುಗಿ ನೋಡಲು ಶುರು ಮಾಡಿದ್ದರು. ಅದು ತಿಳಿದ ಕೂಡಲೇ, ಇನ್ನು ತಡಮಾಡುವುದು‌‌ ಸರಿಯಲ್ಲ ಎಂದು ಶ್ರೀಕಾರ್ ನಡೆದಿದ್ದೆಲ್ಲವನ್ನೂ ಮನೆಯಲ್ಲಿ ಹೇಳಿದ. ಮೊದಲಿಗೆ ಅಪ್ಪ - ಅಮ್ಮ ಸ್ವಲ್ಪ ಟೆನ್ಶನ್ ಮಾಡಿಕೊಂಡರೂ ಆಮೇಲೆ‌, ಮಗ ಇಷ್ಟವಿಲ್ಲದ ಕೆಲಸ ಮಾಡುವುದಕ್ಕಿಂತ ಹೀಗೆ ಬದುಕುವುದೇ ಸರಿ‌‌ ಎಂದು ಒಪ್ಪಿಗೆ ಕೊಟ್ಟರು. ಮುಂದೆ‌ ಆಗಿದ್ದೆಲ್ಲ ಇತಿಹಾಸ...
    
              ಶ್ರೀಕಾರ್ ಬ್ಲಾಗಿಂಗ್ ಜೊತೆ ಕತೆ, ಕವನಗಳ ಪುಸ್ತಕ ಬಿಡುಗಡೆಮಾಡಿದ್ದ. ಚಲನಚಿತ್ರ ಗೀತೆಗಳನ್ನೂ ಬರೆದಿದ್ದ. ಯುವ ಜನತೆಯ ಕಣ್ಣಲ್ಲಿ ಹೀರೋ ಆಗಿದ್ದ.ಶ್ರೀಕಾರ್ ತನ್ನ ಬದುಕಿನ ಅನುಭವಗಳನ್ನು ಪುಸ್ತಕ ರೂಪಕ್ಕೆ ತಂದ. ಅದರ ಬಿಡುಗಡೆ ಸಮಾರಂಭ. ಶ್ರೀಕಾರ್ ನ  ಭಾವಪೂರ್ಣ ಮಾತುಗಳಿಗೆ ಕಿವಿಯಾಗಲು ನೂರಾರು ಜನ ಸೇರಿದ್ದರು. "ನನ್ನ ಬದುಕೊಂದು ತೆರೆದ ಪುಸ್ತಕ..." ಅಂತ ಶ್ರೀಕಾರ್  ಮಾತು ಆರಂಭಿಸಿದ ಕೂಡಲೇ ಚಪ್ಪಾಳೆಗಳ ಸುರಿಮಳೆ !!

- R. R. B.

ಮಂಗಳವಾರ, ಜೂನ್ 2, 2020

ಮರುಭೂಮಿ

ಕಣ್ಣು ಹಾಯಿಸಿದಷ್ಟು ದೂರ
ಮರಳು ಮರಳು ಮರಳು...
ಇಲ್ಲಿಲ್ಲ ಯಾವ ಮರದ ನೆರಳು
ಭೂಮಿಯ ಮೂರನೇ ಒಂದು ಭಾಗ
ಮರುಭೂಮಿಯ ಬಿಸಿಲ ಧಗ ಧಗ
ನಡೆದಷ್ಟು ಮುಗಿಯದ ಹಾದಿ
ಪಡೆದಷ್ಟು ಮುಗಿಯದ ಬೇಗುದಿ
ಕಾಣಬಹುದೇ ಓಯಸಿಸ್ ?
ಕುರುಚಲು ಗಿಡಗಳಲಿ ಸಾವಿರ
ನೆನಪುಗಳ ಗೊಂಚಲಿದೆಯೇ?
ಒಂಟೆಗಳ ಹೆಜ್ಜೆ ಗುರುತೂ ಇಲ್ಲ
ಮನುಷ್ಯರಂತೂ ದೂರದ ಮಾತು...
ಖರ್ಜೂರದ ಸಿಹಿಗೆ ಮಾರುಹೋಗಿ
ಮರುಭೂಮಿಯ ಬಿಸಿ ಮರೆತೆನೇ?
ಬದುಕಿ ತಲುಪಿದರೆ ನಿಗದಿತ ಗಮ್ಯ 
ಮರು ಭೂಮಿಯಲಿ ಮರು ಹುಟ್ಟು
ಗಾಳಿಗೆ ಹಾರುವ ಮರಳ ಕಣ ಕಣದಲೂ
ಅದೆಷ್ಟು ನೋವಿನ ಕತೆಗಳೋ
ಅದೆಷ್ಟು ಪಯಣದ ಗುರುತುಗಳೋ...
ಮರುಭೂಮಿ ಕೇವಲ ಪ್ರದೇಶವಲ್ಲ,
ಅದು ಹಲವರ ಜೀವನದೊಂದು ಭಾಗ !!

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...