ಚುಮು ಚುಮು ಚಳಿಯ ಮುಂಜಾನೆ. ಸೂರ್ಯದೇವನಿಗೆ ಹಾಸಿಗೆ ಬಿಟ್ಟೇಳಲು ಮನಸ್ಸಾಗದೇ ತನ್ನ ದೈನಂದಿನ ಕಾಯಕಕ್ಕೆ ಚಕ್ಕರ್ ಹಾಕಿ, ಮೋಡಗಳ ಹೊದಿಕೆಯೊಳಗೆ ಅಡಗಿದ್ದ. ರಾತ್ರಿ ಸುಳಿದ ಜಡಿಮಳೆಗೆ ಸಾಕ್ಷಿ ಎಂಬಂತೆ ಅಂಗಳದ ತುಂಬೆಲ್ಲ ಕೆಂಪು ನೀರು. ಎಲೆಗಳಿಂದ ತೊಟ್ಟಿಕ್ಕುವ ಸಿಹಿ ಹನಿಗಳು. ಇನ್ನೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ತಿಳಿಸಿದ ಕಾರ್ಮೋಡಗಳ ಸಾಲು... ಆರಾಧನಾ ಕೈಯಲ್ಲಿ ಬಿಸಿ ಬಿಸಿ ಕಾಫಿಯ ಕಪ್ ಹಿಡಿದು ಕಿಟಕಿಯಾಚೆ ನೋಡುತ್ತ ನಿಂತಿದ್ದಳು. ಹೊರಗಿನ ಆಹ್ಲಾದಕರ ವಾತಾವರಣ ಮನಸ್ಸಿಗೆ ಹಿತವೆನಿಸಿತ್ತು. ವಾಸ್ತವದ ಸವಿ ಸಮಯ ಹಳೆಯ ಕಹಿ ನೆನಪುಗಳನ್ನು ಮರೆಸುವಲ್ಲಿ ಯಶಸ್ವಿಯಾಗಿತ್ತು !!
ಗಂಟೆ ಅದಾಗಲೇ ಎಂಟೂವರೆ. ಬಿರಬಿರನೆ ರೆಡಿಯಾಗಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ "ಅಮ್ಮಾ, ಕೆಲ್ಸ ಜಾಸ್ತಿ ಇದೆ. ಬರೋವಾಗ ಲೇಟಾಗ್ಬೋದು... " ಅಂತ ಉಸುರಿ ಮನೆಯಿಂದ ಹೊರಟಳು. ಆಫೀಸು ತಲುಪುವಾಗಲೇ ಗಂಟೆ ಹತ್ತರ ಗಡಿ ದಾಟಿತ್ತು. ಬೆಳಿಗ್ಗೆ ಬೆಳಿಗ್ಗೆ ಬೈಸಿಕೊಳ್ಳಬೇಕೇನೋ ಎಂದು ಗಡಿಬಿಡಿಯಿಂದ ಒಳ ಹೋಗಿ ಕುಳಿತಳು. ಪುಣ್ಯಕ್ಕೆ ಯಾರೂ ಅವಳನ್ನು ಗಮನಿಸದಾಗ ನಿರಾಳವೆನಿಸಿತು. ತಿಂಗಳ ಕೊನೆ ಬಂದಾಗೆಲ್ಲ ರಾಶಿ ರಾಶಿ ಫೈಲುಗಳು ಆರಾಧನಾಳ ಟೇಬಲ್ ಮೇಲೆ ತಮ್ಮ ಇರುವಿಕೆ ಪ್ರದರ್ಶಿಸುತ್ತಿದ್ದವು. ಅದರೆಡೆಗೆ ಒಮ್ಮೆ ನಿರ್ಭಾವುಕ ನೋಟ ಹರಿಸಿ ಪಟಪಟನೆ ಕೆಲಸ ಮಾಡತೊಡಗಿದಳು. ಒಂದೊಂದೇ ಫೈಲು ಮುಗಿಸಿ ಪಕ್ಕಕ್ಕಿಡುವಾಗ ಒಂಥರಾ ಸಮಾಧಾನ - ದೇವಸ್ಥಾನದ ಒಂದೊಂದೇ ಮೆಟ್ಟಿಲು ಹತ್ತಿದಂತೆ, ಬದುಕಿನ ಒಂದೊಂದೇ ಪುಟ್ಟ ಕಷ್ಟವನ್ನು ದಾಟಿ ಮುಂದೆ ಸಾಗಿದಂತೆ... ಕೆಲಸದ ಒತ್ತಡದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ ಅವಳಿಗೆ. ಮಧ್ಯಾಹ್ನ ಎಲ್ಲ ಊಟಕ್ಕೆ ಹೊರಟಾಗ ಥಟ್ಟನೆ ಕಂಪ್ಯೂಟರ್ ಪರದೆಯ ಮೇಲೆ ಸಮಯ ನೋಡಿದಳು. ಗಂಟೆ ಒಂದೂವರೆ. ಗಡಿಬಿಡಿಯಲ್ಲಿ ಟಿಫಿನ್ ಬಾಕ್ಸ್ ಬಿಟ್ಟು ಬಂದಿದ್ದು ಆಗಲೇ ನೆನಪಾಗಿದ್ದು ಅವಳಿಗೆ. "ಛೇ.." ಅಂತ ತಲೆಕೊಡವಿಕೊಂಡಳು. ಅಷ್ಟರಲ್ಲಿ ಭುವನ್ ಅವಳ ಪಕ್ಕವೇ ಬಂದು ನಿಂತಿದ್ದ. "ಊಟ ತರೋದು ಮರ್ತೋಯ್ತಾ? ನಾನು ಕ್ಯಾಂಟೀನ್ ಗೆ ಹೋಗ್ತಾ ಇದೀನಿ. ನಿಮಗೇನೂ ಅಭ್ಯಂತರ ಇಲ್ಲ ಅಂದ್ರೆ ನನ್ ಜೊತೆ ಬನ್ನಿ... ಒಟ್ಟಿಗೇ ಊಟ ಮಾಡಿ ಬರೋಣ ಆರಾಧನಾ ಅವ್ರೆ.." ಎಂದು ಮುಗುಳ್ನಕ್ಕ. ಆರಾಧನಾ "ಹಾ.. ಬರ್ತೀನಿ. ನಡೀರಿ..." ಎಂದು ಭುವನ್ ಜೊತೆ ಕ್ಯಾಂಟೀನ್ ಕಡೆ ಹೆಜ್ಜೆ ಹಾಕಿದಳು. ಅಷ್ಟಾಗಿ ಯಾರ ಜೊತೆಯೂ ಬೆರೆಯದ ಆರಾಧನಾಗೆ ಭುವನ್ ಅಂದ್ರೆ ಇಷ್ಟ. ಎಲ್ಲರೊಡನೆ ಬೆರೆಯುತ್ತ, ಯಾವಾಗಲೂ ನಗೆಚಟಾಕಿ ಸಿಡಿಸುತ್ತ ಖುಷಿ ಖುಷಿಯಾಗಿರುವ ಹುಡುಗ. ಒಂಥರಾ ಪಾಸಿಟಿವ್ ವೈಬ್ ಅವನ ಜೊತೆ ಇದ್ರೆ ಅಂತ ಅನಿಸುತ್ತಿತ್ತು.
ಇಬ್ಬರೂ ಕ್ಯಾಂಟೀನ್ ತಲುಪಿ ಒಂದು ಕಡೆ ಕುಳಿತರು. ದಾರಿಯುದ್ದಕ್ಕೂ ಸುಮ್ಮನೇ ಇದ್ದ ಆರಾಧನಾಳನ್ನು ಮಾತನಾಡಿಸುವ ತವಕದಲ್ಲಿದ್ದ ಭುವನ್. "ಅಲ್ಲಾ ಆರಾಧನಾ ಅವ್ರೇ, ನೋಡಿ ನನ್ನ ಹೆಸರು ಭುವನ್. ಅದನ್ನು ಬೇಕಿದ್ರೆ ಇನ್ನೂ ಶಾರ್ಟ್ ಅಂಡ್ ಸ್ವೀಟಾಗಿ 'ಭುವು' ಅಂತ ಕರೀತಾರೆ. ನಿಮ್ಮ ಹೆಸ್ರೇ ಮಾರುದ್ದ ಇದೆ. ಅಲ್ದೇ ಅದನ್ನ ಶಾರ್ಟ್ ಮಾಡಿ 'ಆರು' ಅಂತ ಕರದ್ರೆ ನೀವು ಹೊಡದೇ ಬಿಡ್ತೀರೇನೋ... ಮತ್ತೆ ಏನಂತ ಕರೀಬೇಕು ನಿಮ್ಮನ್ನ? " ಎಂದು ಆರಾಧನಾಳ ಮುಖ ನೋಡುತ್ತ ಕುಳಿತ. ಈ ಪ್ರಶ್ನೆಯನ್ನು ನಿರೀಕ್ಷಿಸದ ಆರಾಧನಾ ಏನು ಹೇಳಬೇಕೆಂದು ತೋಚದೇ ಸುಮ್ಮನೆ ನಕ್ಕಳು. ಹಾಗೇ ಊಟ ಮಾಡುತ್ತ ಭುವನ್ ಏನೇನೋ ಕತೆ ಹೇಳಿ ನಗಿಸುತ್ತಿದ್ದ. ಆರಾಧನಾ ಮನ ಬಿಚ್ಚಿ ನಕ್ಕಿದ್ದಳು. ವಾಪಸ್ ಹೋಗುವಾಗ "ತುಂಬಾ ಥ್ಯಾಂಕ್ಸ್ ಭುವನ್ ಅವ್ರೇ.. ತುಂಬ ದಿನಗಳ ಬಳಿಕ ನಿಮ್ಮಿಂದಾಗಿ ಖುಷಿಯಲ್ಲಿ ನಗುವಂತಾಯ್ತು." ಎಂದಳು. ಭುವನ್ ಆಶ್ಚರ್ಯದಿಂದ "ವಾಟ್ ? ನೀವು ನಗದೇ ತುಂಬ ದಿನ ಆಗಿತ್ತಾ? ಯಾಕೆ?" ಎಂದು ಕೇಳಿದ. ಆರಾಧನಾಗೆ ತಾನು ಏನು ಹೇಳಿದೆ ಎಂಬುದರ ಅರಿವಾಗಿ ನಾಲಿಗೆ ಕಚ್ಚಿ, "ಏನಿಲ್ಲ...ಸುಮ್ನೆ ಏನೋ ಅಂದೆ..." ಅಂತ ಹೇಳಿ ತನ್ನ ಡೆಸ್ಕಿನತ್ತ ನಡೆದಳು. ಮತ್ತದೇ ಕೆಲಸದ ಗಡಿಬಿಡಿಯಲ್ಲಿ ಮುಳುಗಿದಳು. ಅವತ್ತಿನ ಎಲ್ಲ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವಾಗ ನೆಮ್ಮದಿ ಎನಿಸಿತ್ತು.
ದಿನಗಳು ಕ್ಷಣಗಳಂತೆ ಉರುಳುತ್ತಿದ್ದವು. ಆರಾಧನಾಳಿಗೆ ಪದೇ ಪದೇ ಕಾಡುವ ಹಳೆಯ ನೆನಪುಗಳು ತಮಗೆ ತಾವೇ ರಜೆ ಘೋಷಿಸಿಕೊಂಡಿದ್ದವು. ಈ ಮಧ್ಯೆ ಭುವನ್ ಇನ್ನಷ್ಟು ಹತ್ತಿರವಾಗಿದ್ದ. ಅವಳಲ್ಲಾದ ಬದಲಾವಣೆ ಅಪ್ಪ - ಅಮ್ಮನಿಗೂ ಸಂತಸ ನೀಡಿತ್ತು. "ಹೇಗಾದರೂ ಮಗಳು ಹಳೆಯ ಸಾಲು ಸಾಲು ಕಹಿನೆನಪುಗಳನ್ನು ಮರೆತು, ಹೊಸ ಜೀವನ ಶುರು ಮಾಡಲಿ" ಎಂಬ ಬಯಕೆ ಅವರದು. ಈ ನಡುವೆ ಭುವನ್ ಗೂ ಆತನಲ್ಲಾದ ಬದಲಾವಣೆಗಳು ಅರಿವಿಗೆ ಬಂದಿತ್ತು. ಹೇಳದೇ ಕೇಳದೇ, ಸಣ್ಣ ಗ್ಯಾಪಲ್ಲಿ ಹುಟ್ಟಿಕೊಂಡ ನವಿರಾದ ಪ್ರೀತಿಗೆ, ಅದರ ರೀತಿಗೆ ಆಶ್ಚರ್ಯವೂ ಆಗಿತ್ತು. "ಬೇಗ ಮದುವೆ ಮಾಡ್ಕೊಳೋ.. ಆಮೇಲೆ ಹುಡುಗಿ ಸಿಗಲ್ಲ.." ಅಂತ ಮನೆಯಲ್ಲಿ ಹೇಳಿದಾಗೆಲ್ಲ ನಯವಾಗಿ ಮುಂದೂಡುತ್ತ ಬಂದಿದ್ದ. ಎಷ್ಟೇ ಚಂದದ ಹುಡುಗಿಯರೂ ಇಷ್ಟವಾಗದ ಅವನಿಗೆ, ತನ್ನ ಪಾಡಿಗೆ ತಾನಿರುತ್ತಿದ್ದ ಆರಾಧನಾ ತುಂಬ ಹಿಡಿಸಿದ್ದಳು. ಅವಳ ಅಚ್ಚುಕಟ್ಟುತನ, ಸೌಮ್ಯ ಸ್ವಭಾವ, ಮುತ್ತು ಪೋಣಿಸಿದಂತಹ ಮಾತು..ಎಲ್ಲವೂ ಇಷ್ಟ ಅವನಿಗೆ. ಮನೆಯಲ್ಲಿ ವಿಷಯ ತಿಳಿಸಿ, ಒಪ್ಪಿಗೆ ಪಡೆದೂ ಆಗಿತ್ತು. ಆದರೆ ಆರಾಧನಾಳಿಗೆ ಹೇಳಲು ಭಯ... ಹೇಗೆ ಹೇಳಬೇಕೆಂದು ತಳಮಳ. ಹೇಗಾದರೂ ನಾಳೆ ಮನಸ್ಸಿನಲ್ಲಿದ್ದದ್ದೆಲ್ಲ ಹೇಳಿಬಿಡಬೇಕೆಂದು ನಿರ್ಧಾರ ಮಾಡಿ ನಿರಾಳನಾಗಿದ್ದ.
ಅಂದು ಮುಂಜಾನೆ ಭಾಸ್ಕರ ಮೋಡದ ಮರೆಯಿಂದ ತುಸು ತುಸುವೇ ಇಣುಕಿ ತನ್ನ ಹಾಜರಿ ಹಾಕಿದ್ದ. ಆರಾಧನಾ ಖುಷಿಯಲ್ಲಿ ರೆಡಿಯಾಗಿ ಆಫೀಸಿಗೆ ಹೋದಳು. ಈ ನಡುವೆ ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಿತ್ತು. ಭುವನ್ ಜೊತೆಗಿನ ಒಡನಾಟ ಹೊಸ ಚೈತನ್ಯ ತಂದಿತ್ತು. "ಇವತ್ತು ಮಧ್ಯಾಹ್ನ ನನ್ ಜೊತೆನೇ ಊಟ ಮಾಡ್ಬೇಕು ಪ್ಲೀಸ್.." ಅಂತ ಭುವನ್ ಬೇಡಿಕೆ ಇಟ್ಟಿದ್ದ. "ಸರಿ" ಎಂದು ಒಪ್ಪಿದ್ದಳು. ಕೆಲಸದ ಮಧ್ಯೆ ಅವಳಿಗದು ಮರೆತೇ ಹೋಗಿತ್ತು ಸರಿಯಾಗಿ ಒಂದೂವರೆಗೆ ಭುವನ್ ಅವಳ ಡೆಸ್ಕ್ ಬಳಿ ಬಂದು ನಿಂತಾಗಲೇ ನೆನಪಾಗಿದ್ದು. "ಓಹ್.. ಸಾರಿ ಮರ್ತೋಗಿತ್ತು. ಒಂದೇ ನಿಮಿಷ.." ಎಂದು ಪಟಪಟನೆ ಸಿಸ್ಟಂ ಲಾಗೌಟ್ ಮಾಡಿ ಅವನೊಂದಿಗೆ ಹೆಜ್ಜೆ ಹಾಕಿದಳು. ಊಟ ಮಾಡುವಾಗ ಭುವನ್ ಕಷ್ಟಪಟ್ಟು ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದರಿತ ಆರಾಧನಾ "ಹೇಳಿ.. ಏನೋ ಹೇಳ್ಬೇಕಂದ್ಕೊಂಡ್ರಾ?" ಎಂದಳು. ಭುವನ್ ಗಾಢವಾಗಿ ಒಮ್ಮೆ ಉಸಿರೆಳೆದುಕೊಂಡು ಹೇಳಲು ಶುರು ಮಾಡಿದ. " ಅದು ಆರಾಧನಾ.. ಸುತ್ತಿ ಬಳಸಿ ಮಾತಾಡಕ್ಕೆ ಬರಲ್ಲ ನಂಗೆ. ನೇರವಾಗಿ ವಿಷಯಕ್ಕೇ ಬರ್ತೀನಿ. ತಪ್ಪು ತಿಳ್ಕೋಬೇಡಿ... ನೀವಂದ್ರೆ ನಂಗೆ ತುಂಬಾ ಇಷ್ಟ. ಮನೆಯಲ್ಲಿ ಮದುವೆಯಾಗು ಅಂತ ಹತ್ತಾರು ಹುಡುಗಿಯರ ಫೋಟೋ ತೋರಿಸಿದಾಗಲೂ ಯಾರೂ ಹಿಡಿಸಿರಲಿಲ್ಲ. ಆದ್ರೆ ನೀವು..... ಗೊತ್ತಾಗದಂತೆ ನನ್ನ ಮನದಾಳದಲ್ಲಿ ಪ್ರೀತಿಯ ಬೀಜ ಬಿತ್ತಿ, ಇವಾಗ ಅದು ಪುಟ್ಟ ಸಸಿಯಾಗಿದೆ. ಮುದ್ದಿಸಿ ಅದಕ್ಕೆ ನೀರೆರೆಯುತ್ತೀರೋ, ಅಥವಾ ಚಿವುಟಿ ಹಾಕ್ತೀರೋ ಗೊತ್ತಿಲ್ಲ. ಆದರೆ ನನ್ನ ಭಾವನೆಗಳನ್ನು ಹೇಳದೇ ಮುಚ್ಚಿಡುವುದು ಯಾಕೋ ತಪ್ಪು ಅಂತ ಅನಿಸ್ತು. ಅದ್ಕೆ ಎಲ್ಲ ಹೇಳ್ದೆ... ನೀವು ಏನೇ ತೀರ್ಮಾನ ಮಾಡಿದರೂ ನಾನದಕ್ಕೆ ಬದ್ಧ... " ಎಂದು ಸುಮ್ಮನಾದ. ಆರಾಧನಾಳಿಗೆ ಸಡನ್ನಾಗಿ ಏನು ಉತ್ತರಿಸಬೇಕೋ ಎಂದು ತಿಳಿಯಲಿಲ್ಲ. ಆದರೆ ಭುವನ್ ಅಂದ್ರೆ ಇಷ್ಟ ಎಂದು ಅವಳ ಒಳಮನ ಹೇಳುತ್ತಿತ್ತು. "ಭುವನ್ ನಿಮ್ಮ ಮನಸ್ಸಲ್ಲಿರೋದನ್ನ ನೀವು ಹೇಳಿದ್ರಿ. ಆದ್ರೆ ನಾನು? ನನ್ನ ಹಳೆಯ ಜೀವನದ ತಿರುವುಗಳ ಬಗ್ಗೆ ನಿಮಗೇನು ಗೊತ್ತು?.... ಮುಂಚೆ ನಾನು ಅನಿಕೇತ್ ಮದುವೆಯಾಗಿದ್ದು, ಅವನ ಜೊತೆ ಕಳೆದ ಸಿಹಿಕ್ಷಣಗಳು, ಕೊನೆಗೆ ಆತ ಸಡನ್ನಾಗಿ ನನ್ನೊಬ್ಬಳನ್ನೇ ಬಿಟ್ಟು ಬಾರದ ಲೋಕಕ್ಕೆ..." ಮುಂದೆ ಹೇಳಲಾಗದೇ ಆರಾಧನಾಳ ಕಣ್ತುಂಬಿತು. "ಅಯ್ಯೋ.. ಅಳ್ಬೇಡಿ.. ಆಗಿದ್ದೆಲ್ಲಾ ಆಗಿಹೋಯ್ತು. ಮತ್ತೆ ಅದನ್ನೇ ನೆನೆಸಿಕೊಂಡು ಕೊರಗುವುದರಲ್ಲಿ ಯಾವ ಅರ್ಥನೂ ಇಲ್ಲ. ಇವತ್ತು, ಈ ಕ್ಷಣ ನಾವಿಲ್ಲಿ ಕ್ಯಾಂಟೀನ್ ನಲ್ಲಿ ಕುಳಿತು ಮಾತಾಡ್ತಿದೀವಿ ಅಂದ್ರೆ ಇದು ಮಾತ್ರ ಸತ್ಯ. ಅದರ ಹಿಂದಿನದು, ಮುಂದಿನದೆಲ್ಲ ನಮ್ಮ ಕೈಯಲ್ಲಿಲ್ಲ. ಅದ್ಕೇ ವರ್ತಮಾನವನ್ನು ದೇವರು ಕೊಟ್ಟ 'ಪ್ರೆಸೆಂಟ್' ಅನ್ನೋದು ಅಲ್ವಾ... ನೋಡಿ ನಿಧಾನವಾಗಿ ಯೋಚನೆ ಮಾಡಿ.. ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇರ್ತೀನಿ..." ಎಂದು ಮಾತು ಮುಗಿಸಿದ.
"ಮರೆತೆ ಹೋದೆನು
ಹೊರಟ ಕಾರಣ
ನಿನ್ನಯ ಮಿಂಚಿನ ಗಾಳಿಯಲಿ..." ಎಂದು ಕ್ಯಾಂಟೀನ್ ನಲ್ಲಿ ಹಾಕಿದ್ದ ಹಾಡು ತನಗಾಗಿಯೇ ಎಂದು ಅವಳಿಗೆ ಅನಿಸಿತು.
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ