ಅಮ್ಮ ನೆಟ್ಟ ಬೇವಿನಗಿಡ
ಸರಸರನೆ ಬೆಳೆಯಿತು -
ಹೆಚ್ಚು ಪೋಷಣೆ ಬೇಡದೇ...
ನೋಡನೋಡುತ್ತ ಗಿಡ ಮರವಾಗಿ
ಟೊಂಗೆಗಳಲ್ಲಿ ಹಸಿರೆಲೆ ತುಂಬಿ
ತಂಗಾಳಿಗೆ ಜೋಕಾಲಿಯ ಹಾಡು
ಅಮ್ಮನ ಜೋಗುಳದ ಪದದಂತೆ...
ಬಿಸಿಲಿಗೆ ಬೆವರಲಿಲ್ಲ,
ಮಳೆ - ಚಳಿಗೆ ಕುಗ್ಗಲಿಲ್ಲ
ಆದರೂ ಶಿಶಿರದಲಿ
ಎಲೆ ಉದುರಿಸಿ ಬೋಳಾಯಿತು -
ಹೊಸ ಚಿಗುರ ಹಡೆಯಲು
ಅಚ್ಚ ಹಸಿರ ಸೀರೆಯುಡಲು...
ಸ್ವಚ್ಛಂದ ಗಾಳಿ ಕೊಟ್ಟರೂ ಸಹ
ಬೇವು ಥೇಟ್ ಸತ್ಯದ ಹಾಗೆ
ಬರೀ ಕಹಿ ಕಹಿ... !!
ಯಾರಿಗೂ ಹಿಡಿಸುವುದಿಲ್ಲ
ನಾಲಿಗೆಗಂತೂ ಬಲು ದೂರ
ಆದರೂ ಬೇವು ಬೇವೇ
ಕಟು ಸತ್ಯದ ಸತ್ವ ಸತ್ಯವೇ...
ನೇರ ನಿಂತ ಬೇವಿನ ಮರಕ್ಕೆ
ಸ್ವಾಭಿಮಾನದ ಹಕ್ಕಿಯ ಸ್ನೇಹ
ಆಳ ತಲುಪಿದ ಬೇರಿಗೆ ಆಗಾಗ
ತನ್ನೊಡಲ ಸೇರುವ ಮಳೆನೀರು
ಜೊತೆಗೆ ಹಣ್ಣೆಲೆಗಳ ಗೊಬ್ಬರದ ಪ್ರೀತಿ
ಕುಂಡದಲಿ ಬೆಳೆಸಿದ ಹೂಗಿಡಗಳಂತಲ್ಲ,
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಪ್ರತಿ ವರ್ಷ ಯುಗಾದಿ ಬಂತೆಂದರೆ ಸಾಕು
ಇಷ್ಟು ದಿನ ಕ್ಯಾರೇ ಮಾಡದ,
ಇದ್ದರೂ ಇಲ್ಲದಂತಿದ್ದ ಬಡವೆ
ಕಹಿ ಬೇವಿಗೂ ತುಂಬಾ ಬೆಲೆ
ಅಪರೂಪಕ್ಕೆ, ಅನಿವಾರ್ಯಕ್ಕೆ
ಆಪ್ತವಾಗುವ ಗೆಳೆಯರಂತೆ...!!
- R. R. B.
2 ಕಾಮೆಂಟ್‌ಗಳು:
ಇಷ್ಟವಾಯಿತು... ಬರೆಯುತ್ತಿರಿ...
ಇಷ್ಟವಾಯಿತು.... ಬರೆಯುತ್ತಿರಿ...
ಕಾಮೆಂಟ್ ಪೋಸ್ಟ್ ಮಾಡಿ