ಶ್ರೀಕಾರ್ ಇಂಜಿನಿಯರ್ ಮುಗಿಸಿ ಮಲ್ಟಿ ನ್ಯಾಷನಲ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಂದೆ - ತಾಯಿಯ ಮುದ್ದಿನ ಏಕೈಕ ಮಗ. ಬಾಲ್ಯದಿಂದಲೂ ಚೂಟಿ ಹುಡುಗ. ಓದಿನಲ್ಲಿ, ಆಟೋಟದಲ್ಲಿ ಬಲು ಚುರುಕು. ಕಂಪೆನಿ ಸೇರಿ ಎರಡು ವರ್ಷವಾಗುತ್ತ ಬಂತು. ಪ್ರತಿ ತಿಂಗಳೂ ಮನೆಗೆ ಸ್ವಲ್ಪ ಹಣ ಕಳುಹಿಸುತ್ತಿದ್ದ. ಎಲ್ಲರೂ "ಹುಡುಗ ಆರಾಮಾಗಿದಾನೆ" ಅಂತ ಅಂದುಕೊಂಡಿದ್ದರು. ಆದರೆ ಮಲೆನಾಡಿನ ಹಳ್ಳಿಯ ಸುಂದರ ಬಾಲ್ಯವನ್ನು ಅನುಭವಿಸಿದ್ದ ಶ್ರೀಕಾರ್ ಗೆ ಕಂಪೆನಿಯ ಏಕತಾನತೆಯ ಕೆಲಸಗಳು ಬೇಸರ ತರಿಸಿದ್ದವು. ಅದೇ ಕ್ಯಾಬಿನ್, ಚಳಿಯಿದ್ದರೂ ಹಾಕುವ ಏಸಿ, ಇಷ್ಟವಿಲ್ಲದಿದ್ದರೂ ಧರಿಸುವ ಫಾರ್ಮಲ್ ಬಟ್ಟೆ, ಆ ಉದ್ದಮೂತಿಯ ಶೂ... ಎಲ್ಲವೂ ಅವನಿಗೆ ಯಾಂತ್ರಿಕ ಬದುಕಿನ ಮೆಟ್ಟಿಲುಗಳಂತೆ ಅನಿಸುತ್ತಿತ್ತು....
ಪ್ರಕೃತಿಯಲ್ಲಿ ಒಂದಾಗಿ, ಹೊಸ ಹೊಸ ಸ್ಥಳಗಳ ಸೊಬಗು ನೋಡುತ್ತ, ವಿಭಿನ್ನ ಪ್ರದೇಶದ ವಿಭಿನ್ನ ಜೀವನ ಶೈಲಿಯನ್ನು ಅರಿತು ಪದಕ್ಕಿಳಿಸುವ ಬಯಕೆ ಶ್ರೀಕಾರನಲ್ಲಿ ಮೂಡಿತ್ತು. ಮನೆಯಲ್ಲಿ ಹೇಳಿದರೆ - " ಅಷ್ಟ್ ಚೊಲೋ ಕಂಪನಿ, ಚೊಲೋ ಸಂಬಳ ಬತ್ತು, ಅದ್ನ ಬಿಟ್ಟಿಕೆ ಎಂತ ಅಲೆಮಾರಿ ಆಗ್ತ್ಯನ ಮಾಣಿ? ನಿಂಗೊಂಚೂರೂ ಜವಾಬ್ದಾರಿನೇ ಇಲ್ಲೆ.. ಒಂದು ಮದ್ವೆ ಮಾಡ್ಸಕಾತು ಬೇಗ..." ಅಂತ ಅಪ್ಪ ಅಮ್ಮನ ವರಸೆ. ಶ್ರೀಕಾರ್ ಗೊಂದಲದ ಗೂಡಾಗಿದ್ದ. ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗಿ, ಟೀಂ ಲೀಡ್ ನಿಂದ ಒಂದೆರಡು ಸಲ ಬೈಸಿಕೊಂಡ. ಕೊನೆಗೂ "ಆದದ್ದಾಗಲಿ" ನೋಡೇಬಿಡೋಣ ಅಂತ ಮನೆಯಲ್ಲಿ ತಿಳಿಸದೇ ಕಂಪನಿಯ ಉದ್ಯೋಗ ಬಿಟ್ಟ. ನೋಟೀಸ್ ಪೀರಿಯಡ್ ನಲ್ಲಿ ಪ್ರತಿದಿನ ರೂಮಿಗೆ ಬಂದವನೇ ತನ್ನ ಮುಂದಿನ ಬದುಕಿನ ಬಗ್ಗೆ ರೂಪು - ರೇಷೆ ತಯಾರಿಸುತ್ತಿದ್ದ. ಕೊನೆಗೂ ಕಂಪೆನಿಯ ಸ್ನೇಹಿತರಿಗೆಲ್ಲಾ ವಿದಾಯ ಹೇಳಿ ಬಂದ ದಿನ ಮನಸ್ಸಲ್ಲಿ ಏನೋ ಒಂಥರಾ ನೆಮ್ಮದಿ...
ಶ್ರೀಕಾರ್ ಟ್ರಾವೆಲ್ ಬ್ಲಾಗರ್ ಆದ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಧ್ಯವಾದಲ್ಲೆಲ್ಲ ಪಯಣಿಸಿದ. ತಾನು ಕಂಡ, ಕೇಳಿದ ಅನುಭವಗಳ ಸರಣಿ ಬರೆದ. ಸದ್ದಿಲ್ಲದಂತೆ ನಿಧಾನವಾಗಿ ಪ್ರಖ್ಯಾತಿ ಕೂಡ ಗಳಿಸಿದ. ಅದೆಲ್ಲದರ ನಡುವೆ ಮನೆಗೆ ಹಣ ಕಳಿಸುವುದನ್ನು, ಆಗಾಗ ಮನೆಗೆ ಹೋಗುವುದನ್ನೂ ಮರೆಯಲಿಲ್ಲ. ಇತ್ತ ಮನೆಯಲ್ಲಿ ಮಗನಿಗೆ ಹುಡುಗಿ ನೋಡಲು ಶುರು ಮಾಡಿದ್ದರು. ಅದು ತಿಳಿದ ಕೂಡಲೇ, ಇನ್ನು ತಡಮಾಡುವುದು ಸರಿಯಲ್ಲ ಎಂದು ಶ್ರೀಕಾರ್ ನಡೆದಿದ್ದೆಲ್ಲವನ್ನೂ ಮನೆಯಲ್ಲಿ ಹೇಳಿದ. ಮೊದಲಿಗೆ ಅಪ್ಪ - ಅಮ್ಮ ಸ್ವಲ್ಪ ಟೆನ್ಶನ್ ಮಾಡಿಕೊಂಡರೂ ಆಮೇಲೆ, ಮಗ ಇಷ್ಟವಿಲ್ಲದ ಕೆಲಸ ಮಾಡುವುದಕ್ಕಿಂತ ಹೀಗೆ ಬದುಕುವುದೇ ಸರಿ ಎಂದು ಒಪ್ಪಿಗೆ ಕೊಟ್ಟರು. ಮುಂದೆ ಆಗಿದ್ದೆಲ್ಲ ಇತಿಹಾಸ...
ಶ್ರೀಕಾರ್ ಬ್ಲಾಗಿಂಗ್ ಜೊತೆ ಕತೆ, ಕವನಗಳ ಪುಸ್ತಕ ಬಿಡುಗಡೆಮಾಡಿದ್ದ. ಚಲನಚಿತ್ರ ಗೀತೆಗಳನ್ನೂ ಬರೆದಿದ್ದ. ಯುವ ಜನತೆಯ ಕಣ್ಣಲ್ಲಿ ಹೀರೋ ಆಗಿದ್ದ.ಶ್ರೀಕಾರ್ ತನ್ನ ಬದುಕಿನ ಅನುಭವಗಳನ್ನು ಪುಸ್ತಕ ರೂಪಕ್ಕೆ ತಂದ. ಅದರ ಬಿಡುಗಡೆ ಸಮಾರಂಭ. ಶ್ರೀಕಾರ್ ನ ಭಾವಪೂರ್ಣ ಮಾತುಗಳಿಗೆ ಕಿವಿಯಾಗಲು ನೂರಾರು ಜನ ಸೇರಿದ್ದರು. "ನನ್ನ ಬದುಕೊಂದು ತೆರೆದ ಪುಸ್ತಕ..." ಅಂತ ಶ್ರೀಕಾರ್ ಮಾತು ಆರಂಭಿಸಿದ ಕೂಡಲೇ ಚಪ್ಪಾಳೆಗಳ ಸುರಿಮಳೆ !!
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ