ಅಂಗಳದ ಅಂಚಿನಲಿ
ಹಾರುತಿದೆ ಕೆಂಪು ಬಿಂಬಿ
ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ
ಗಾಳಿಯಲಿ ತೇಲುತ್ತ
ರೆಕ್ಕೆಗಳ ಹಗುರಾಗಿಸಿ
ಹಾರುತಿದೆ ಖುಷಿಯಲಿ...
ಆಹಾರದ ಶೋಧವೇ?
ಇರಬಹುದು, ಗೊತ್ತಿಲ್ಲ...
ಆ ಪುಟ್ಟ ಚಂದದ ರೆಕ್ಕೆಗಳಿಂದ
ಬಾಲ್ಯದ ನೆನಪುಗಳ ಹಾರಾಟ
ಪಾಪದ ಬಿಂಬಿಗಳ ಬಾಲಕ್ಕೆ
ದಾರ ಕಟ್ಟಿ ಖುಷಿಪಟ್ಟಿದ್ದು
ನೆನಪಾದರೀಗ ಬಲು ಬೇಸರ
ಆಗ ಅಂಗಳದ ತುಂಬೆಲ್ಲ
ಭತ್ತದ ರಾಶಿಯ ಅಕ್ಕ ಪಕ್ಕ
ಪಟಪಟನೆ ಹಾರುತ್ತಿತ್ತು
ಆರಾಮಾಗಿ ಕೈಗೆಟುಕುವಂತೆ..
ಬಾಲಕ್ಕೆ ದಾರ ಕಟ್ಟಿದಾಗಲೂ
ಹಾರುತ್ತಿತ್ತು - ಕಳೆದ ಸ್ವಾತಂತ್ರ್ಯ
ಹುಡುಕುವ ಹುಚ್ಚು ಯತ್ನದಲ್ಲಿ...
ನಮಗೆ ಆಟ ಬೇಸರವಾಗಿ
ಬಾಲಕ್ಕೆ ಕಟ್ಟಿದ ದಾರ ಬಿಚ್ಚಿದಾಗ
ಪುರ್ರನೆ ಆಕಾಶದಲ್ಲಿ ಮಾಯ
ಮತ್ತೆ ನಮ್ಮ ಕೈಗೆ ಸಿಗದಂತೆ...!!
ಬಿಂಬಿ ಈಗ ಬಲು ಅಪರೂಪ
ಅಲ್ಲೊಂದು ಇಲ್ಲೊಂದು ಕಂಡರೆ ಹೆಚ್ಚು
ಆದರೂ ಕೆಂಪು ಬಿಂಬಿ ಕಂಡಾಗ
ಅದೇನೋ ಹೇಳಲಾರದ ಖುಷಿ
ಬಾಲ್ಯದ ಸವಿ ನೆನಪಿಗೇ ?
ರೆಕ್ಕೆ ಬಿಚ್ಚಿ ಹಾರುವ ಸ್ವಾತಂತ್ರ್ಯಕ್ಕೇ?
ಅಥವಾ ಅದರ ಸುಂದರ
ಕೆಂಪು ಬಣ್ಣದ ರೆಕ್ಕೆಗಳಿಗೇ?
ಕೆಂಪು ಬಿಂಬಿಯೊಂದು
ಖುಷಿಯ ರೂವಾರಿ...!!
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ