"ಅನು...ನನ್ನ ಲಂಚ್ ಬಾಕ್ಸ್ ಎಲ್ಲೆ? ಬೇಗ ತಂದ್ಕೊಡು, ಟೈಮಾಯ್ತು" ಎಂದು ಸಿಡುಕುತ್ತ ಕೈ ಗಡಿಯಾರ ನೋಡಿಕೊಂಡ ವೈಭವ್.
"ಬಂದೆ ರೀ... ತಗೊಳ್ಳಿ" ಎಂದು, ಊಟದ ಡಬ್ಬಿಯನ್ನು ಗಂಡನ ಕೈಗಿಟ್ಟು ಮುಗುಳ್ನಕ್ಕಳು ಅನಘಾ.
ವೈಭವ್ ಅದಕ್ಕೆ ಪ್ರತಿಯಾಗಿ ನಗದೇ ಬಿರಬಿರನೆ ಹೊರಟಾಗ ಅನಘಾಳ ಕಣ್ಣಂಚಲ್ಲಿ ನೀರು ಜಿನುಗಿತ್ತು. ಉಕ್ಕಿಬರುತ್ತಿದ್ದ ಅಳುವನ್ನು ನಿಯಂತ್ರಿಸುತ್ತ ಸೋಫಾದ ಮೇಲೆ ಕುಸಿದಳು. ಮನಸ್ಸು ಹತೋಟಿಗೆ ಸಿಗದ ಗಾಳಿಪಟದಂತಾಗಿತ್ತು. "ವೈಭವ್ ಗೆ ಯಾಕಿಷ್ಟು ಕೋಪ ನನ್ನ ಮೇಲೆ ?..." ಅಂತ ಜೋರಾಗಿಯೇ ಕೇಳಿಕೊಂಡಳು. ಆಲೋಚನೆಗಳ ನಾಗಾಲೋಟ ಅದಾಗಲೇ ಆರಂಭವಾಗಿತ್ತು....
ಬೆಂಗಳೂರಿಗೆ ಬಂದು ಎರಡು ವರ್ಷಗಳಾಗಿದ್ದಷ್ಟೇ. ಆದರೆ ವೈಭವ್ ನಲ್ಲಿ ಆಗಿದ್ದ ಪ್ರೀತಿ, ಕಾಳಜಿ ಈಗ ಇಲ್ಲ. ಕೆಲಸದ ಒತ್ತಡದಲ್ಲಿ ವೈಯಕ್ತಿಕ ಜೀವನವನ್ನೇ ಮರೆತರೆ ಹೇಗೆ? ನಾನಾದರೂ ಏನು ಮಾಡಲಿ? ಇಡೀ ದಿನ ಈ ಪುಟ್ಟ ಮನೆಯಲ್ಲಿದ್ದು ಬೋರಾಗತ್ತೆ. ಮೊದಲು ರವಿವಾರವಾದರೂ ಎಲ್ಲಾದರೂ ಸುತ್ತಾಡಿಕೊಂಡು ಬರುತ್ತಿದ್ದೆವು. ಈಗೀಗ ಎರಡು ತಿಂಗಳಿಂದ ಅದೂ ಇಲ್ಲ. ಕೇಳಿದರೆ ಡೆಡ್ಲೈನ್, ವರ್ಕ್ ಲೋಡ್ ಅದು ಇದು ಅಂತ ಮನೆಯಲ್ಲೇ ಲ್ಯಾಪಟಾಪ್ ಕುಟ್ಟುತ್ತಿರುತ್ತಾರೆ. ನಾನೂ ಎಷ್ಟು ಹೊತ್ತು ಅಂತ ಮೊಬೈಲ್ ನೋಡ್ಲಿ? ಈಗೀಗ ಅದೂ ಬೇಜಾರು. ಮನೆಕೆಲಸ ಬಿಟ್ಟು ಬೇರೆನೂ ಕೆಲಸ ಇಲ್ಲ. ಇದ್ದದ್ದೊಂದು ವೀಣೆ ಊರಲ್ಲೇ ಉಳಿದುಕೊಂಡುಬಿಟ್ಟಿದೆ. ಈ ಸಲ ಹೋದಾಗ ತರಬೇಕು... ಹಾಗೋ ಹೀಗೋ ಪಕ್ಕದ ಮನೆಯವರನ್ನ ಫ್ರೆಂಡ್ ಮಾಡ್ಕೊಂಡೆ. ಆದ್ರೆ ಅವರ್ಯಾರೂ ಜಾಸ್ತಿ ಮಾತಾಡುವವರಲ್ಲ... ಸುಮಾರು ದಿನ ಒಬ್ಬಳೇ ಪಾರ್ಕಿಗೆ ಹೋಗಿ ಬರೋಕೂ ಟ್ರೈ ಮಾಡಿದೆ. ಈಗೀಗ ಅಲ್ಲಿಗೆ ಹೋಗಲೂ ಮನಸಿಲ್ಲ. ಇವರು ನೋಡಿದ್ರೆ ಪ್ರೀತಿಯಿಂದ ಮಾತಾಡೋದನ್ನೇ ಮರೆತ ಹಾಗಿದೆ. ಸಣ್ಣ ಪುಟ್ಟ ವಿಷಯಕ್ಕೆಲ್ಲ ಕೂಗಾಡಿ ಆಫೀಸಿನ ಫ್ರಸ್ಟ್ರೇಷನ್ ಎಲ್ಲ ನನ್ನ ಮೇಲೆ ತೋರಿಸ್ತಾರೆ. ಹೆಂಡ್ತಿ ಮೇಲೆ ಒಂಚೂರೂ ಕಾಳಜಿ ಇಲ್ಲ. ನಂಗೂ ಸಾಕಾಗಿ ಹೋಗಿದೆ. ಒಂದ್ಸಲ ಊರಿಗೆ ಹೋಗಿ ಅಮ್ಮನ ಹತ್ರ ಎಲ್ಲ ಹೇಳ್ಕೋಬೇಕು...ಯೋಚನೆಗಳು ಒಂದು ದಡ ತಲುಪಿದಾಗ ಅನಘಾಳಿಗೆ ತುಸು ಸಮಾಧಾನವಾಯ್ತು.
ಮನೆಕೆಲಸ ಎಲ್ಲ ಮುಗಿಸಿ ಸಂಜೆ ವೈಭವ್ ಗೆ ವಿಷಯ ಹೇಳಬೇಕೆಂದು ಕಾಯುತ್ತಿದ್ದಳು. ವೈಭವ್ ಬಂದಾಗ ರಾತ್ರಿ ಒಂಭತ್ತೂವರೆ. ಅನಘಾ ಊಟ ಬಡಿಸಲು ಹೋದಳು. "ನಂದಾಗ್ಲೇ ಊಟ ಆಗಿದೆ. ನೀನು ಊಟ ಮಾಡಿ ಮಲ್ಕೋ" ಎಂದ ವೈಭವ್. "ಅಲ್ಲ ರೀ ಅದು..." ಅಂತ ಏನೋ ಹೇಳಲಿದ್ದಳು ಅನಘಾ. ಅವಳ ಮಾತನ್ನು ಮೊಟಕುಗೊಳಿಸಿ "ನಾನು ತುಂಬಾ ಟೈರಡ್ ಆಗಿದೀನಿ. ನಿನ್ನ ಹರಿಕತೆ ಎಲ್ಲ ಇವಾಗ ಬೇಡ" ಎಂದು ವೈಭವ್ ರೂಮಿಗೆ ಹೋದ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿದ್ದರೂ ಅನಘಾ ಊಟ ಮಾಡಲಿಲ್ಲ. ಎಲ್ಲವನ್ನು ಅಲ್ಲೇ ಮುಚ್ಚಿಟ್ಟು, ಸ್ವಲ ನೀರು ಕುಡಿದು, ನಿಟ್ಟುಸಿರು ಬಿಡುತ್ತ ರೂಮಿನ ಕಡೆ ನಡೆದಳು. ಮಲಗಿ ಸುಮಾರು ಹೊತ್ತಾದರೂ ನಿದ್ದೆ ಕೈಗೆಟುಕದ ನಕ್ಷತ್ರವಾಗಿತ್ತು. ಮನಸ್ಸು ಗತಕಾಲಕ್ಕೆ ವಾಲಿತ್ತು. ನೆನಪುಗಳ ಸರಮಾಲೆಯಿಂದ ಒಂದೊಂದೇ ನೆನಪುಗಳನ್ನು ಬಿಡಿಸುತ್ತ ಹೋದಳು ಅನಘಾ...
ಅದೊಂದು ಸುಂದರವಾದ ಹಳ್ಳಿ. ಅಪ್ಪ - ಅಮ್ಮನ ಮುದ್ದು ಮಗಳು ಅನಘಾ. ಚಿಕ್ಕಂದಿನಿಂದ ಓದುವುದರಲ್ಲಿ ಜಾಣೆ. ವೀಣೆ ತರಗತಿಗೆ ಸೇರಿದಾಗಿನಿಂದ ವೀಣೆ ನುಡಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಸುಮಧುರ ಕಂಠವೂ ಇದ್ದದ್ದು ಅವಳ ಇನ್ನೊಂದು ಅದೃಷ್ಟ. ವೈಭವ್ ಒಂದನೇ ಕ್ಲಾಸಿಂದ ಅವಳ ಕ್ಲಾಸ ಮೇಟ್. ಅದೇ ಊರಿನವ. ಅನಘಾಳ ತಂದೆಯ ಗೆಳೆಯನ ಮಗ. ಅವನೂ ಹಾಡುತ್ತಿದ್ದರಿಂದ ಇವರಿಬ್ಬರ ನಡುವೆ ಬಹುಬೇಗ ಗೆಳೆತನ ಶುರುವಾಗಿತ್ತು. ಶಾಲೆ ಮುಗಿದ ತಕ್ಷಣ ಊರ ನಡುವಿನ ಅರಳೀಮರದ ಚಡಿಯ ಮೇಲೆ ಕುಳಿತು ಹರಟೆ ಹೊಡೆದೇ ಮನೆಗೆ ಹೋಗುವ ವಾಡಿಕೆ. ಶಾಲೆ ಮುಗಿದು ಹೈಸ್ಕೂಲ್, ಕಾಲೇಜಿಗೆ ಹೋದಾಗಲೂ ಅದೇ ಸ್ನೇಹ, ಅದೇ ಮುಗಿಯದ ಮಾತುಕತೆ, ಅದೇ ಅರಳೀಮರದ ಚಡಿ... ಡಿಗ್ರಿ ಓದುವಷ್ಟರಲ್ಲಿ ನಿಧಾನವಾಗಿ ಸ್ನೇಹ ಪ್ರೇಮವಾಗಿ ಪ್ರಮೋಷನ್ ಗಳಿಸಿತ್ತು. ಕಾಲೇಜಿನ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಯುಗಳ ಗೀತೆ ಹಾಡಿದರೆ ಸಾಕು, ಇಡೀ ಕಾಲೇಜೇ ಹುಚ್ಚೆದ್ದು ಕುಣಿಯುತ್ತಿತ್ತು. ವೈಭವ್ ಎಂ.ಬಿ.ಎ. ಮಾಡಲು ಬೆಂಗಳೂರಿಗೆ ಹೋದಾಗ ಅನಘಾ ಚಡಪಡಿಸಿದ್ದಳು. ಆಗಲೂ ಬೇಜಾರಾದಾಗ ಅದೇ ಅರಳೀಮರದ ಕಟ್ಟೆಯ ಮೇಲೆ ಕುಳಿತು ಸವಿ ಕ್ಷಣಗಳ ಮೆಲುಕುಹಾಕಿ ಹಗುರಾಗುತ್ತಿದ್ದಳು. ವೈಭವ್ ಎಂ.ಬಿ.ಎ. ಮುಗಿಸಿ, ಒಂದು ಕೆಲಸ ಹಿಡಿದು ಊರಿಗೆ ಬಂದಾಗ ಎಲ್ಲರಿಗಿಂತ ಹೆಚ್ಚು ಅನಘಾ ಖುಷಿ ಪಟ್ಟಿದ್ದಳು. ಇವರಿಬ್ಬರ ಭಾವನೆ ಅರಿತವರಂತೆ, ಮನೆಯಲ್ಲಿ ಮದುವೆಗೆ ಸಮ್ಮತಿ ಸೂಚಿಸಿ ಆಗಿತ್ತು. ಜೋಡಿ ಹಕ್ಕಿಗಳು ಮದುವೆ ಎಂಬ ಸಂಭ್ರಮ ಮುಗಿಸಿ, ಗೂಡಿಂದ ಹಾರಿ ಬೆಂದಕಾಳೂರೆಂಬ ಮಹಾನಗರ ಸೇರಿದ್ದರು. ಮೊದ ಮೊದಲು ಖುಷಿಯಾಗೇ ಇದ್ದರೂ, ವೈಭವ್ ಗೆ ಪ್ರಮೋಷನ್ ಆದಾಗಿನಿಂದ ಕೆಲಸದ ಹೊರೆ ಜಾಸ್ತಿಯಾಗಿತ್ತು. ಅನಘಾಳ ಮೇಲಿನ ಪ್ರೀತಿ ಕಡಿಮೆಯಾಯ್ತು ಎನ್ನುವುದಕ್ಕಿಂತ ಅವಳತ್ತ ಗಮನ ಕೊಡಲಾಗಲಿಲ್ಲ ಎಂದರೆ ಹೆಚ್ಚು ಸೂಕ್ತ...
ಹಳೆಯ ಘಟನೆಗಳೆಲ್ಲ ನೆನಪಾದಾಗ ನಿಟ್ಟುಸಿರೊಂದು ಹೊರಬಂತು. ಹಾಗೇ ತವರು ಮನೆಗೆ ಹೋಗದೇ ಆರು ತಿಂಗಳೇ ಕಳೆದಿದೆ ಎಂದು ನೆನಪಾಗಿ, ಊರಿಗೆ ಹೋಗುವ ಬಯಕೆ ಹೆಚ್ಚಾಯಿತು. ಊರು ಎಂದಕೂಡಲೇ ಮತ್ತೆ ನೆನಪುಗಳ ಬಂಡಿ...
ತಾನಿದ್ದ ಹಳೆಯ ಕಾಲದ ತೊಟ್ಟಿ ಮನೆ, ಅಂಗಳದಲ್ಲಿ ಸಾಲು ಸಾಲು ಹೂವಿನ ಗಿಡ, ಹಿತ್ತಲ ಬದಿ ಅಮ್ಮ ನೆಟ್ಟ ಮಲ್ಲಿಗೆ ಗಿಡ, ಮನೆಯ ಕಾಂಪೌಂಡಿನ ಬಳಿಯ ಪಾರಿಜಾತ, ಸ್ವಲ್ಪ ದೂರದವರೆಗೆ ಮಣ್ಣಿನ ಕಚ್ಚಾ ರಸ್ತೆ, ಊರ ಮಧ್ಯದ ಆ ಅರಳೀಮರ...ಓಹ್ ಅದೊಂದು ಅಚ್ಚರಿ... ಸಾವಿರ ಕತೆಗಳ ತನ್ನೊಳಗೆ ಬಚ್ಚಿಟ್ಟು, ತಂಪಾದ ಗಾಳಿ ನೀಡುವ ಅದ್ಭುತ !! ಆ ಎಲೆಗಳನ್ನು ಎಷ್ಟು ಚಂದವಾಗಿ ಜೋಪಾನ ಮಾಡುತ್ತಿದ್ದೆ ನಾನು... ಎಲೆಯ ಮೇಲ್ಪದರವೆಲ್ಲಾ ಕಿತ್ತುಹೋಗಿ ಬಲೆಯಂತಾದಾಗ ಎಷ್ಟು ಚಂದ ಕಾಣುತ್ತಿತ್ತು ಅದು... ನನ್ನ ಚಿತ್ರಕಲೆ ಪಟ್ಟಿಯಲ್ಲಿ ಯಾವತ್ತೂ ಒಂದು ಪೇಜು ಆ ಎಲೆಗೇ ಮೀಸಲಿತ್ತು... ವೈಭವ್ ಕೂಡ ನನ್ನ ಹುಚ್ಚಾಟ ನೋಡಿ ಎಲೆಯನ್ನು ಒಣಗಿಸಿ, ಅದರ ಮೇಲೆ ಚಿತ್ರ ಬಿಡಿಸಿ ನನಗೆ ಕೊಡುತ್ತಿದ್ದ... ಆ ದಿನಗಳು ಎಷ್ಟು ಸುಂದರವಿತ್ತು.... ನಮ್ಮಿಬ್ಬರ ಸ್ನೇಹಕ್ಕೆ, ಪ್ರೀತಿಗೆ ಆ ಅರಳೀಮರವೇ ಸಾಕ್ಷಿಯಾಗಿತ್ತು... ಮಳೆಗಾಲದಲ್ಲಿ ದಾರಿಯ ಇಕ್ಕೆಲಗಳಲೂ ಹಚ್ಚ ಹಸುರಿನ ಸಾಲು, ಹೊಲದಲ್ಲಿ ಬೆಳೆಯುತ್ತಿದ್ದ ಭತ್ತ - ಕಬ್ಬು - ಶೇಂಗಾ, ತೋಟದಲ್ಲಿ ನಳ ನಳಿಸುವ ಅಡಕೆ, ಬಾಳೆ, ತೆಂಗಿನ ಮರಗಳು, ಶಿಲೆಯಿಂದಲೇ ಕಟ್ಟಿದ್ದ ಊರಿನ ಪುಟ್ಟ ದೇವಾಲಯ, ಅಲ್ಲಿ ಕೊಡುತ್ತಿದ್ದ ರುಚಿಯಾದ ಪ್ರಸಾದ... ಪ್ರಸಾದ ಅಂದಾಕ್ಷಣ ಅಮ್ಮನ ಅಡುಗೆಗಳ ನೆನಪು - ಬಾಳೆಕಾಯಿ ಚಿಪ್ಸ, ಹಲಸಿನ ಕಾಯಿ ಚಿಪ್ಸ್, ಅದರ ಹಪ್ಪಳ, ಮಾವಿನ ಹಣ್ಣಿನ ಹಪ್ಪಳ, ಸಂಡಿಗೆ, ಹಲಸಿನ ಬೇಳೆಯ ಸಾಂಬಾರ್.... ಅಯ್ಯೋ ಇನ್ನು ನೆನಸಿಕೊಂಡ್ರೆ ತಡೆಯಲಾರೆ ಎನ್ನುತ್ತ ಅನಘಾ ವಾಸ್ತವಕ್ಕೆ ಬಂದಳು. ಗಡಿಯಾರ 11 ಗಂಟೆ ಎಂದು ತೋರಿಸುತ್ತಿತ್ತು. ತಿಂಡಿಗಳ ನೆನಪಿನಿಂದ ಹೊಟ್ಟೆ ಹಸಿವು ಹೆಚ್ಚಾಗಿ, ಒಂದು ಲೋಟ ನೀರು ಕುಡಿದು "ಎಷ್ಟಂದ್ರೂ ಹಳ್ಳಿ ಜೀವನವೇ ಚಂದ.. ವೈಭವ್ ಗೆ ಒಂದೆರಡು ದಿನ ಅಡ್ಜಸ್ಟ್ ಮಾಡ್ಕೋ ಅಂತ ಹೇಳಿ, ನಾಳೇನೇ ಊರಿಗೆ ಹೋಗ್ಬೇಕು..." ಎಂದುಕೊಂಡವಳಿಗೆ ಒಳ್ಳೆಯ ನಿದ್ರೆ ಬಂತು.
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ