ಬುಧವಾರ, ಜೂನ್ 10, 2020

ಗೆಳತಿಯ ನೆನಪುಗಳಲಿ

ಗೆಳತಿ ಹೊರಟುಬಿಟ್ಟೆ ನೀನು 
ಏನೂ ಆಗೇ ಇಲ್ಲ ಎಂಬಂತೆ...
ನನ್ನೆದೆಯ ಗೋಡೆಯ ಮೇಲೆ
ರಂಗು ರಂಗಿನ ಚಿತ್ತಾರ ಬಿಡಿಸಿ
ನವ ಭಾವಗಳ ಬಸಿರು ಮಾಡಿ
ಪ್ರೀತಿಯ ಪ್ರಸವಕ್ಕೂ ನಿಲ್ಲದೇ
ಹೊರಟುಬಿಟ್ಟೆ ನೀನು ....

ನನ್ನ ಬಣ್ಣ ಬಣ್ಣದ ಕನಸುಗಳೀಗ
ದಾರಿಯಲ್ಲಿ ಒದ್ದೆ ಮುದ್ದೆಯಾಗಿ ಬಿದ್ದಿವೆ 
ಮನದೊಡತಿಯ ಸುಳಿವಿಲ್ಲದೇ...
ನಿನಗೋ ಒಂಚೂರೂ ತಾಳ್ಮೆಯಿಲ್ಲ
ಹೋಗುವ ಮುನ್ನ ತಿಪ್ಪೆಗೆಸೆಯಬೇಕಿತ್ತಲ್ಲವೇ?
ಪಾಪ ಅವುಗಳಿಗೂ ಕಷ್ಟ ನನ್ನಂತೆ !!

ನೀ ಹೃದಯದಲಿ ಬಿಡಿಸಿದ ರಂಗೋಲಿಯ
ಚುಕ್ಕಿಗಳೆಲ್ಲ ಗುಳೇ ಹೊರಟಿವೆಯಂತೆ
ವಿರಹದ ಬಿಸಿಗಾಳಿಯ ಝಳ ತಾಳಲಾರದೇ..
ಕನಸಿನ ಕೆರೆಗೆ ಪಟಪಟ ಕಲ್ಲೆಸೆದು 
ಮಾಯವಾದೆ ನೀನು ಸದ್ದಿಲ್ಲದೇ..
ಅಲೆಗಳ ಸಂಭಾಳಿಸಬೇಕು ನಾನೀಗ 
ಏಕಾಂಗಿಯಾಗಿ, ನಿನ್ನ ನೆನಪಿನಲ್ಲಿ..

ಬಾವಿಕಟ್ಟೆ ಬಳಿ ಗಿಡಕೆ ಈಗೀಗ ಬಲು ಬೇಸರ
ನಮ್ಮಿಬ್ಬರ ಪಿಸುಮಾತುಗಳ ತರಲೆಯಿಲ್ಲವಲ್ಲಾ
ಕೋಣೆಯ ಮಂಚಕೂ ಎಲ್ಲಿಲ್ಲದ ಸಿಟ್ಟು
ನಿದ್ದೆಯಿಲ್ಲದೇ ನಾನು ಹೊರಳಾಡುವಾಗ...
ನೀ ನೀರೆರೆದ ಅಂಗಳದ ಗಿಡದಲ್ಲಿ
ಚಂದದ ಮಲ್ಲಿಗೆ ಹೂವಾಗಿದೆ ಗೆಳತಿ
ನೋಡಿ ಖುಷಿಪಡಲು ನೀನೊಬ್ಬಳಿಲ್ಲ ಅಷ್ಟೇ...
ಸುರಿವ ಮಳೆಗೆ ಮತ್ತೆ ಮತ್ತೆ ಕಾಡುವೆ ನೀನು
ನಮ್ಮಿಬ್ಬರ ಮೊದಲ ಮಿಲನದ ನೆನಪಾಗಿ !!

ಸಖಿ, ಹೊರಟುಬಿಟ್ಟೆ ನೀನು ಸದ್ದಿಲ್ಲದಂತೆ
ನೀನಿಲ್ಲದ ನನ್ನ ಬಗ್ಗೆ ಕಲ್ಪನೆಯೂ ಇಲ್ಲದೇ...
ನಾನೋ? ಪಾಪಿಗಳು ಚಿರಾಯುವಂತೆ 
ಎಂದು ಹಳಿಯುತ್ತಲೇ ನಿನ್ನ ಸಮಾಧಿಗೆ ಹೂವಿಡುತ್ತೇನೆ...

- R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...