ಮುಸ್ಸಂಜೆಯ ಸಮಯ. ಭಾಸ್ಕರ ತನ್ನ ಕೆಲಸ ಮುಗಿಸಿ, ಬಾನಿನ ಕೆನ್ನೆ ಕೆಂಪೇರಿಸುತ್ತ ಪಡುವಣದಲ್ಲಿ ಮರೆಯಾಗುತ್ತಿದ್ದ. ಗಮ್ಯದೆಡೆಗೆ ಸಾಗುತ್ತಿದ್ದ ಹಕ್ಕಿಗಳ ಗುಂಪು, ಹಿತವಾಗಿ ಬೀಸುತ್ತಿದ್ದ ತಂಗಾಳಿ, ತೀರದ ಮರಳ ಸವರುವ ಕಡಲ ಅಲೆಗಳ ಸಾಲು, ದಡದತ್ತ ಬರುತ್ತಿರುವ ಪುಟ್ಟ ದೋಣಿ... ಇವೆಲ್ಲದರ ಮಧ್ಯೆ ವಿಶಾಖಾ ತನ್ನ ಯೋಚನಾ ಲಹರಿಯಲ್ಲೇ ಮುಳುಗಿದ್ದಳು. ಕಡಲು ಅವಳಿಗೆ ಹೊಸತಲ್ಲ, ಹಾಗಂತ ದಿನಾಲೂ ಸಮುದ್ರ ತೀರಕ್ಕೆ ಬರುವ ಅವಳಿಗೆ ಅದು ಎಂದೂ ಹಳೆತು ಎನಿಸಿಲ್ಲ. ಪ್ರತಿ ದಿನ, ಪ್ರತಿ ಸಂಜೆ, ಪ್ರತಿ ಅಲೆಗಳು ಅವಳಿಗೆ ಹೊಚ್ಚ ಹೊಸದೇ - ಥೇಟ್ ಜೀವನದ ಅನುಭವಗಳಂತೆ !! ಸಾಗರ ಎಂದೂ ಅವಳಿಗೆ ಅಚ್ಚರಿಯ ವಿಷಯ. ಒಳಿತು - ಕೆಡುಕು ಎಲ್ಲವನ್ನು ತನ್ನ ಒಡಲಲ್ಲಿರಿಸಿ, ನಿರಂತರ ಭೋರ್ಗರೆವ ಸಮುದ್ರ ತನ್ನ ತೀರಕ್ಕೆ ಬಂದವರಿಗೆ ನೀಡುವ ದಿವ್ಯ ಸಾನ್ನಿಧ್ಯ, ಪ್ರಶಾಂತತೆ, ನಿರಾಳತೆ ಎಲ್ಲವೂ ವಿಶಾಖಾಳಿಗೆ ಕುತೂಹಲ ಹುಟ್ಟಿಸುವ ಸರಕು. ಆದರೆ ಇಂದು ಇದ್ಯಾವುದೂ ಅವಳ ಗಮನದಲ್ಲಿಲ್ಲ.. ವಿಶಾಖಾಳ ಮನ ಗತಕಾಲದ ನೆನಪುಗಳ ರಾಶಿಯಿಂದ ನಿಧಾನವಾಗಿ ಒಂದೊಂದೇ ಹರಳನ್ನು ಹೆಕ್ಕುತ್ತಿತ್ತು....
ವಿಶಾಖಾ ಚಿಕ್ಕವಳಿರುವಾಗಿನಿಂದ ಕಡಲ ನಂಟು ಗಟ್ಟಿಯಾಗಿ ಬೆಳೆದಿತ್ತು. ಪ್ರತಿ ಭಾನುವಾರ ಅಪ್ಪ - ಅಮ್ಮನ ಜೊತೆ ಸಮುದ್ರ ತೀರಕ್ಕೆ ಬಂದು ಒಂದಿಷ್ಟು ಹೊತ್ತು ಆಟವಾಡಿ, ಮರಳ ಮೇಲೆಲ್ಲ ಚಿತ್ರ ಬರೆದು ಖುಷಿ ಪಡುತ್ತಿದ್ದ ಹುಡುಗಿ, ಬೆಳೆದು ಕೆಲಸಕ್ಕೆ ಸೇರಿದರೂ ಕಡಲ ಮೇಲಿನ ಪ್ರೀತಿ ಒಂಚೂರೂ ಕಮ್ಮಿಯಾಗಿರಲಿಲ್ಲ. ದಿನವೂ ಮನೆಯಿಂದ ಸಮುದ್ರ ತೀರಕ್ಕೆ ಬರುವ ಆ ಹಾದಿ, ಅದರ ಅಕ್ಕಪಕ್ಕದ ಗಿಡಗಳು, ಕಡುಗಪ್ಪು ಬಣ್ಣದ ಡಾಂಬರು ರಸ್ತೆ ಎಲ್ಲವೂ ಅವಳಿಗೆ ಆಪ್ತ. ಸಮುದ್ರ ತೀರದಲ್ಲಿ ಹಾರಿಸಿದ ಚಂದದ ನೀಲಿ ಗಾಳಿಪಟ, ವರ್ಷ ವರ್ಷ ಆಡಿದ ಹೋಳಿ, ಗೆಳತಿಯರೊಂದಿಗೆ ಕಿತ್ತಾಟ, ಡಿಗ್ರಿ ಮುಗಿಸಿ ಇನ್ನು ಹೀಗೆ ಎಲ್ಲರೂ ಒಟ್ಟಿಗೆ ಸಿಗುವುದಿಲ್ಲ ಎಂದು ಕಣ್ಣೀರು ಹಾಕಿದ ಭಾವುಕ ದಿನ ಎಲ್ಲವೂ ಅವಳಿಗೆ ನೆನಪಾಗುತ್ತಿತ್ತು. ಅದೆಷ್ಟು ಸುಂದರವಿತ್ತು ಆ ಕ್ಷಣಗಳು... ಆಲೋಚನೆಯಲ್ಲಿ ಮುಳುಗಿದ್ದವಳಿಗೆ ವಾಸ್ತವ ರಪ್ಪನೆ ಕಣ್ಮುಂದೆ ಬಂತು.
ಅಪ್ಪ ತೀರಿ ಹೋಗಿ ಒಂದೂವರೆ ವರ್ಷವಾಯ್ತು. ಅಮ್ಮನಿಗೋ ಈಗೀಗ ಯಾವುದರಲ್ಲೂ ಆಸಕ್ತಿಯಿಲ್ಲ. ನನಗೋ ಕಂಪೆನಿಯ ಬಿಡುವಿಲ್ಲದ ಕೆಲಸಗಳಲ್ಲಿ ಹೇಗೋ ದಿನ ಕಳೆದು ಹೋಗುತ್ತದೆ. ಆದರೆ ಮನೆಗೆ ಬಂದು, ಅಮ್ಮನ ಕುಂಕುಮವಿಲ್ಲದ ಹಣೆ ನೋಡಿದಾಗ ಮತ್ತೆ ಮತ್ತೆ ಅಪ್ಪನ ನೆನಪಾಗುತ್ತದೆ... ಬೇಗ ನನ್ನನ್ನು ಮದುವೆ ಮಾಡಿ ಕಳಿಸಬೇಕೆಂಬ ಕರ್ತವ್ಯದ ಹೊರೆ ಅಮ್ಮನ ಮೇಲೆ. ಅದೆಲ್ಲಿಂದ ಸಿಕ್ಕಿದನೋ ಆ ಪುಣ್ಯಾತ್ಮ... " ಇಲ್ಲಿನ ನಿಮ್ಮ ಮನೆ ಮಾರಿ ನನ್ನೊಂದಿಗೆ ಮುಂಬೈಗೆ ಬನ್ನಿ ಆಂಟಿ..ನಾವೆಲ್ರೂ ಅಲ್ಲೇ ಆರಾಮಾಗಿರ್ಬೋದು..." ಅಂತ ಅಮ್ಮನ ಕಿವಿ ಹಿಂಡಿ, ನನ್ನ ಕೈ ಹಿಡಿಯುವ ಆಸೆಯಲ್ಲಿದ್ದಾನೆ. ಈ ಊರು, ಅಪ್ಪ ಪ್ರೀತಿಯಿಂದ ಕಟ್ಟಿಸಿದ, ನಾನು ಹುಟ್ಟಿ ಬೆಳೆದ, ಸಾವಿರ ನೆನಪುಗಳ ಮೂರ್ತ ರೂಪವಾದ ಮನೆ, ಈ ಕಡಲು ಎಲ್ಲವನ್ನು ಬಿಟ್ಟು ಹೋಗುವುದಾದರೂ ಹೇಗೆ?...
ಮನೆಯನ್ನಾದರೂ ಬಿಡಬಹುದು.. ಆದರೆ ನೆಚ್ಚಿನ ಸಮುದ್ರ ತೀರ? ತುಂಬಾ ಕಷ್ಟ... ಅದು ಹೇಗೆ ಅಮ್ಮ ನನ್ನ ಕೇಳದೆಯೇ, ಹುಡುಗಿ ನೋಡುವ ಶಾಸ್ತ್ರವೂ ಮುಗಿಸದೇ ನಿಶ್ಚಿತಾರ್ಥ ಇಟ್ಟುಕೊಂಡಳು? ಈಗ ವಾಟ್ಸಾಪ್, ಫೇಸ್ಬುಕ್ ಕಾಲ ಅಂತ ಅದ್ರಲ್ಲೇ ಪಟ ಕಳಿಸಿದೀನಿ ಎಂಬ ಸಬೂಬು ಬೇರೆ... ಹುಡುಗ ನೋಡಲೇನೋ ಚೆನ್ನಾಗಿದ್ದಾನೆ. ಆದರೆ ಹೇಗೋ ಏನೋ...
ವಿಶಾಖಾ ಯೋಚನೆಯ ಸುಳಿಯಲ್ಲಿ ಸಿಲುಕಿದ್ದಳು.
"ಅಯ್ಯೋ" ಎಂಬ ಶಬ್ದ ವಿಶಾಖಾಳನ್ನು ವಾಸ್ತವಕ್ಕೆ ಕರೆತಂದಿತು. ಅವಳ ಪಕ್ಕದಲ್ಲೇ ಒಂದು ಪುಟ್ಟ ಹೆಣ್ಣು ಮಗು ಆಟವಾಡುತ್ತಿತ್ತು. ಅಲೆಗಳ ಅಬ್ಬರದಲ್ಲಿ ಕಾಲ್ಗೆಜ್ಜೆ ಸಮುದ್ರ ಸೇರಿದ್ದೂ ಪುಟ್ಟಿಗೆ ಗೊತ್ತಿಲ್ಲ. ಸ್ವಲ್ಪ ಹೊತ್ತಿನ ನಂತರ ಅದನ್ನು ಗಮನಿಸಿದ ಮಗುವಿನ ತಾಯಿ ಬೇಸರದಿಂದ ಉಸುರಿದ್ದರು. ಅವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಪುಟ್ಟಿಯ ಅಪ್ಪ ದುಬೈ ಹೋಗುವ ಮುನ್ನ ಪ್ರೀತಿಯಿಂದ ಕೊಡಿಸಿದ ಗೆಜ್ಜೆ ಸಾಗರದ ಒಡಲು ಸೇರಿತ್ತು. ವಿಷಯ ತಿಳಿದ ವಿಶಾಖಾ ಮಗುವಿನ ತಾಯಿಗೆ ತೋಚಿದಷ್ಟು ಸಮಾಧಾನ ಮಾಡಿ ಕಳುಹಿಸಿ,
ಮತ್ತೆ ತನ್ನ ಆಲೋಚನಾ ಲಹರಿಗೆ ಚಾಲ್ತಿ ನೀಡಿದಳು. ಈ ಬಾರಿ ಧನಾತ್ಮಕವಾಗಿ ಯೋಚಿಸಲಾರಂಭಿಸಿದಳು.
ಜಗದಲ್ಲಿ ಸ್ವಾರ್ಥತೆಯೇ ತುಂಬಿರುವಾಗ ಅವನ್ಯಾರೋ ಪುಣ್ಯಾತ್ಮ ನನ್ನ ಮದುವೆಯಾಗುವುದರ ಜೊತೆ, ಖುಷಿಯಿಂದ ಅಮ್ಮನಿಗೂ ಅವರ ಮನೆಯಲ್ಲೇ ಇರಲು ಹೇಳುತ್ತಿದ್ದಾನೆಂದರೆ ಖಂಡಿತ ಆತ ಒಳ್ಳೆಯವನೇ.. ನಾನೇ ಏನೇನೋ ಅಂದುಕೊಳ್ಳುವುದರ ಬದಲು ನೇರವಾಗಿ ಅವನೊಂದಿಗೆ ಮಾತನಾಡಬೇಕು. ಅವನನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೇ ಮದುವೆಯಾದರೂ ಈ ಮನೆಯನ್ನಂತೂ ಬಿಡಲೇಬೇಕು. ಇನ್ನು ಸಮುದ್ರ? ಇಲ್ಲಿಯ ತೀರಕ್ಕೆ ಮುದ್ದಿಸುವ ಅಲೆಗಳೇ ಅಲ್ಲವಾ ಮುಂಬೈಯ ಕರಾವಳಿಯನ್ನೂ ಚುಂಬಿಸುವುದು? ವಿಶಾಲ ಕಡಲು ಕಡಲೇ... ತೀರ ಬದಲಾಗಬಹುದಷ್ಟೇ. ಬದುಕಿನ ದೋಣಿಯಲ್ಲಿ ಕುಳಿತು ಎಲ್ಲೂ ಹೋಗಬಾರದೆಂದು ದಡವ ಕಚ್ಚಿಕೊಂಡರೆ ಹೇಗೆ? ಎಲ್ಲವೂ ಬದಲಾಗುತ್ತದೆ. ಮುಂದಿನ ಜೀವನ ಕೂಡಾ. ಅಮ್ಮ ಹೇಳಿದ ಹುಡುಗನನ್ನೊಮ್ಮೆ ಭೇಟಿಯಾಗಿ ಮನಕ್ಕೆ ತೃಪ್ತಿಯಾಗುವಷ್ಟು ಮಾತನಾಡಬೇಕು. ಅವನ ಅಭಿಪ್ರಾಯ ಕೇಳಬೇಕು. ಇಷ್ಟವಾದರೆ ಮುಗೀತು. ಇಲ್ಲಾ ಅಂದ್ರೆ ಅಮ್ಮನಿಗೆ ನೇರವಾಗಿ ಹೇಳಬೇಕು. ಸಮಯ ತುಂಬಾ ಇದೆ. ಸದುಪಯೋಗ ಮಾಡುವ ಮನಸ್ಸು ಬೇಕಷ್ಟೇ.. ಹೀಗೆ ಇನ್ನೂ ಯೋಚಿಸುತ್ತ ಕುಳಿತವಳಿಗೆ ಯಾರೋ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಅವಳ ಹುಡುಗ ಮುಗುಳ್ನಗುತ್ತ ನಿಂತಿದ್ದ. ಅವಳ ಕೊನೆಯಿಲ್ಲದ ಆಲೋಚನೆಗಳಿಗೆ ಅವನೇ ಗಮ್ಯವಾಗಿದ್ದ !!
- R. R. B.
"ಶ್ರೀಸುತ" ಜಾಲತಾಣದಲ್ಲಿ ಪ್ರಕಟವಾದ ಕತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ