ಜಿಟಿ ಜಿಟಿ ಜಿಟಿ... ಎಂದು ನಿಲ್ಲದೆ ಸುರಿಯುವ ಸೋನೆ. ಸೂರ್ಯತೇಜ ಎಲ್ಲೋ ಮರೆಯಾಗಿ ವಾರಗಳೇ ಕಳೆದಿತ್ತು. ಇಳೆ - ಮಳೆಯ ಸಮಾಗಮದಿಂದ ರಸ್ತೆಯ ಇಕ್ಕೆಲವೂ ಹಸಿರ ರಾಶಿಯಿಂದ ತುಂಬಿತ್ತು. ಬಣ್ಣ ಬಣ್ಣದ ಕೊಡೆ ಹಿಡಿದ ಅನುಷ್ಕಾ ತನ್ನ ಸೀರೆಯ ನೆರಿಗೆಗಳನ್ನು ಒದ್ದೆಯಾಗಲು ಬಿಡದೇ ಹಿಡಿದು, ನಿಧಾನವಾಗಿ ಮನೆಯತ್ತ ಬರುತ್ತಿದ್ದಳು. ವಾತಾವರಣ ಬಲು ಸುಂದರವಾಗಿದ್ದರೂ ನಡೆದು ಬರುತ್ತಿದ್ದ ಸುಂದರಿಯ ತಲೆಯಲ್ಲಿ ಮಾತ್ರ ಗೊಂದಲಗಳ ಗೂಡು....
ಅನುಷ್ಕಾ ಸರ್ಕಾರಿ ಹೈಸ್ಕೂಲ್ ಟೀಚರ್ ಆಗಿ ಕೆಲಸಕ್ಕೆ ಸೇರಿ ಎರಡು ವರ್ಷಗಳೇ ಕಳೆದಿತ್ತು. ಹರೆಯದ ಮಕ್ಕಳ ತುಂಟಾಟ, "ಟೀಚರ್ ಟೀಚರ್ ಅದು ಹೇಗೆ? ಇದು ಯಾಕೆ ಹೀಗಾಗಲ್ಲ? ಟೀಚರ್ ಅವನು ಸುಳ್ಳು ಹೇಳ್ತಿದಾನೆ...." ಈ ಥರಹದ ಮಾತುಗಳು ಅವಳಿಗೆ ಬರೀ ಅಭ್ಯಾಸವಷ್ಟೇ ಅಲ್ಲ, ಅಮೂಲ್ಯವೂ ಆಗಿತ್ತು. ಅನುಷ್ಕಾ ಚಿಕ್ಕವಳಿಂದ ಆಸೆ ಪಟ್ಟು, ಕನಸು ಕಂಡು ಸೇರಿದ ಮೊದಲ ಕೆಲಸ ಅದು... ಜೊತೆಗೆ ಮಲೆನಾಡ ಪ್ರಕೃತಿ ಸೌಂದರ್ಯ, ಕನ್ನಡ ಮಾಧ್ಯಮದ ಮಕ್ಕಳ ಅತಿಯಾದ ಮುಗ್ಧತೆ, ಸರಳತೆ ಎಲ್ಲವೂ ಅವಳಿಗೆ ಅತಿ ಅಪ್ಯಾಯಮಾನ !!
ಶಿಕ್ಷಕರ ವೃತ್ತಿ ಒಂದು ಶ್ರೇಷ್ಠ ವೃತ್ತಿ. ಜೊತೆಗೆ ಸವಾಲಿನ ಕೆಲಸ ಕೂಡಾ... ಹಸಿಗೋಡೆಯ ಮೇಲೆ ಏನೇ ಬರೆದರೂ ಒಣಗಿದ ಮೇಲೆ ಅದೇ ಶಾಶ್ವತ, ಹಾಗೇ ಮಕ್ಕಳ ಮನಸ್ಸು ಕೂಡಾ... ತಾನು ಸಾಯುವವರೆಗೂ ಮಲೆನಾಡ ಮಡಿಲಲ್ಲಿ ಮುಗ್ಧ ಮಕ್ಕಳಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂಬ ಮಹದಾಸೆ ಅನುಷ್ಕಾಳಿಗೆ. ಎಲ್ಲವೂ ಸರಿಯಾಗೇ ನಡೆಯುತ್ತಿದೆ ಎನ್ನುವಾಗ ಅನುಷ್ಕಾ ಜೀವನದಲ್ಲೊಂದು ಸಮಸ್ಯೆ ಎದುರಾಗಿತ್ತು. ಅವಳು ಇಷ್ಟ ಪಟ್ಟ, ಮನೆಯವರೆಲ್ಲ "ಇವನೇ ನಮ್ಮ ಅಳಿಯ" ಎಂದು ಆರಿಸಿದ್ದ ಸಿದ್ದಾರ್ಥ್ ತನ್ನ ಹಳೆಯ ತತ್ತ್ವಗಳನ್ನೆಲ್ಲ ಬದಿಗೊತ್ತಿ, ಹಣಕ್ಕಾಗಿ ಸ್ವೀಡನ್ ಹೋಗುವ ಮನಸ್ಸು ಮಾಡಿದ್ದ. ಅಲ್ಲೇ ಸೆಟಲ್ ಆಗುವ ಯೋಚನೆ ತಿಳಿಸಿದ್ದ. ಆರ್ಥಿಕವಾಗಿ ಅದು ಒಳ್ಳೆಯ ನಿರ್ಧಾರವೇ ಆಗಿದ್ದರೂ, ಭಾವುಕ ಅನುಷ್ಕಾಳಿಗೆ ತನ್ನೂರು, ತನ್ನ ದೇಶ ಬಿಟ್ಟು ಬೇರೆಲ್ಲೋ ಅಪರಿಚಿತರಾಗಿ ಜೀವನ ನಡೆಸುವುದು ಸುತರಾಂ ಇಷ್ಟವಿಲ್ಲ....
ಮದುವೆ ಬೇಡವೆಂದು ಸುಲಭವಾಗಿ ಹೇಳಬಹುದಲ್ಲವೇ? ಎಂದು ನೀವು ಕೇಳಬಹುದು. ಆದರೆ ಚಿಕ್ಕಂದಿನಿಂದ ಸಿದ್ಧಾರ್ಥನ ಬಗ್ಗೆ ಅನುಷ್ಕಾ ಬೆಳೆಸಿಕೊಂಡ ಭಾವನೆ, ಜೊತೆಯಾಗಿ ಕಂಡ ಕನಸುಗಳ ಮೂಟೆ, ಇಬ್ಬರ ಭವಿಷ್ಯದ ಬಗ್ಗೆ ಇದ್ದ ಆಸೆಗಳನ್ನು ಮನದಾಳದಿಂದ ಕಿತ್ತೆಸೆಯುವುದೂ ಅಷ್ಟು ಸುಲಭವೇನಿಲ್ಲ... ಅತ್ತ ಹೋಗಲೂ ಆಗದೇ ಇತ್ತ ಸಿದ್ದಾರ್ಥ್ ನ ಬಿಟ್ಟು ಇಲ್ಲಿರಲೂ ಆಗದೇ ಬೆಂಕಿಗೆ ಬಿದ್ದ ಪತಂಗದಂತಾಗಿದ್ದಳು ಅನುಷ್ಕಾ... ಅದಕ್ಕೆ ಸರಿಯಾಗಿ ಅವರಿಬ್ಬರವ ನಿಶ್ಚಿತಾರ್ಥಕ್ಕೆಂದು ಕೈಗೆ ಹಚ್ಚಿದ ಗೋರಂಟಿ ಮಾಸಿದ್ದರೂ ಕಲೆಯಾಗಿ ತನ್ನಿರುವನ್ನು ನೆನಪಿಸುತ್ತ ಅನುಷ್ಕಾಳನ್ನು ಅಣಕಿಸುತ್ತಿತ್ತು...
ಇಷ್ಟೆಲ್ಲಾ ಗೊಂದಲಗಳು ತಲೆಯಲ್ಲಿದ್ದರೂ ಅನುಷ್ಕಾಳ ಲಯಭರಿತ ಹೆಜ್ಜೆ ಮನೆಯನ್ನು ಸಮೀಪಿಸುತ್ತಿತ್ತು. ಇದೇ ಥರ ಇವತ್ತೂ ಟೆನ್ಶನ್ ನಲ್ಲಿದ್ರೆ ಅಪ್ಪ-ಅಮ್ಮಂಗೂ ಬೇಜಾರಾಗುತ್ತೆ. ಮನೆ ತಲುಪುವುದರೊಳಗೆ ಎರಡರಲ್ಲೊಂದು ನಿರ್ಧಾರ ಮಾಡಿಯೇ ತೀರಬೇಕೆಂದು ಅವಳ ಮನ ಹೇಳುತ್ತಿತ್ತು. ವಾಸ್ತವ - ಭವಿಷ್ಯದ ನಡುವಣ ಯುದ್ಧದಲ್ಲಿ ವಾಸ್ತವ ಗೆದ್ದಿತ್ತು. ಪ್ರೀತಿಯಿಂದ ಕಟ್ಟಿಕೊಂಡ ಬದುಕನ್ನು ಪ್ರೀತಿಗಾಗಿ ತ್ಯಾಗ ಮಾಡುವುದರಲ್ಲಿ ಹಿರಿಮೆ ಇದೆಯಾದರೂ ಅದು ನೀಡುವ ಪರಿಣಾಮ, ಭಾವನೆಗಳ ಕಲಹ ಎಷ್ಟು ಕಷ್ಟವಾಗಿರುತ್ತದೆಂದು ಅವಳು ಭೈರಪ್ಪನವರ "ಧರ್ಮಶ್ರೀ" ಕಾದಂಬರಿಯಲ್ಲಿ ಓದಿದ್ದ ಸ್ಪಷ್ಟ ನೆನಪಿತ್ತು. ಸಿದ್ದಾರ್ಥ್ ಸ್ವೀಡನ್ ಹೋಗಿ ಅಲ್ಲೇ ತನ್ನ ಮುಂದಿನ ಬದುಕು ಕಟ್ಟಿಕೊಳ್ಳುವುದಾದರೆ, ನಾನು ಈ ಮದುವೆಯಾಗುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದಳು.
ಅನುಷ್ಕಾ ಮನೆ ತಲುಪುವ ವೇಳೆಗೆ ಮಳೆ ನಿಂತಿತ್ತು. ಆಕಾಶ ತಿಳಿಯಾಗಿತ್ತು. ಇತ್ತ ಮನೆಯಲ್ಲಿ ಅನುಷ್ಕಾಳ ತಂದೆ - ತಾಯಿಯೂ ಮಗಳ ಜೀವನದ ಬಗ್ಗೆ ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು. ಅನುಷ್ಕಾ ಒಳ ಬರುತ್ತಿದ್ದಂತೆ ಅವಳ ತಂದೆ ರಾಘವೇಂದ್ರ ರಾಯರು "ಫ್ರೆಷ್ ಅಪ್ ಆಗಿ ಬಾ ಅನು. ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು." ಎಂದರು. ಅನುಷ್ಕಾ ಬಂದ ಮೇಲೆ ಮದುವೆಯ ಬಗ್ಗೆ ಅವಳ ನಿರ್ಧಾರವೇನೆಂದು ಕೇಳಿದರು. ಅನುಷ್ಕಾ ಚೂರೂ ಗೊಂದಲವಿಲ್ಲದೇ ತನ್ನ ನಿರ್ಧಾರ ತಿಳಿಸಿದಾಗ ರಾಯರ ಕಣ್ಣಲ್ಲಿ ಖುಷಿಯ ಮಿಂಚಿತ್ತು. "ನನ್ನ ಮತ್ತೆ ನಿನ್ನ ಅಮ್ಮನದೂ ಇದೇ ತೀರ್ಮಾನವಾಗಿತ್ತು ಮಗಳೇ... ಕೊನೆಗಾಲದಲ್ಲಿ ಒಬ್ಬಳೇ ಒಬ್ಬಳು ಮಗಳನ್ನು ನೋಡಬೇಕೆನಿಸಿದರೆ, ಬೇಗ ನೋಡಲಾದರೂ ನೀನು ಇಲ್ಲೇ ಇರಬೇಕು. ನಿನ್ನ ಕನಸುಗಳನ್ನ ಸಾಕಾರಗೊಳಿಸಲಾದರೂ ನೀನು ಇಲ್ಲಿರಬೇಕು. ಸಾವಿರಾರು ಮಕ್ಕಳಲ್ಲಿ ಸಾಧಿಸುವ ಪ್ರೇರಣೆ ಹುಟ್ಟು ಹಾಕಲಾದರೂ ನೀನು ಇಲ್ಲಿರಬೇಕು...." ಎಂದು ಭಾವ ಪೂರ್ಣರಾಗಿ ನುಡಿದರು. ಅನುಷ್ಕಾಳಿಗೆ ಗೊಂದಲದ ಗಿಜಿಗಿಜಿ ಸಂತೆಯಿಂದ ಹೊರಬಂದ ಅನುಭವ ! ದೈವೇಚ್ಛೆ ಇದ್ದ ಹಾಗೇ ಆಗುವುದೆಂಬ ಸಮಾಧಾನ. ಮೋಡ ಸರಿದ ಆಕಾಶ ಇನ್ನೂ ತಿಳಿಯಾಗಿತ್ತು. ಅನುಷ್ಕಾಳ ಗೊಂದಲದ ಕಾರ್ಮೋಡಗಳು ಕೂಡಾ... ಆ ಕ್ಷಣಕ್ಕೆ ಜೀವ ಹೂವಾಗಿತ್ತು. ನೆಮ್ಮದಿಯ ಬೀಡಾಗಿತ್ತು. ಸುಂದರ ನಾಳೆಗೆ ಅಣಿಯಾಗಿತ್ತು !!
- R.R.B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ