ಬುಧವಾರ, ಮೇ 27, 2020

ಹೀಗೊಂದು ಕವಿತೆ...

ಕವಿತೆ ಬರೆಯಬೇಕೆಂದಿದ್ದೆ ನಾನು -
ಹಲವು ಭಾವಗಳ ತೊಟ್ಟಿಲ ತೂಗಿ
ಪದಗಳ ಮಡಿಲಿಗೆ ಮೊರೆ ಹೋಗಿ
ಅಂತರಾಳದ ಎಳೆಯ ಹಾಳೆಗಿಳಿಸುವ
ವಿಭಿನ್ನ ಹುಚ್ಚು ಪ್ರಯತ್ನದಲ್ಲಿ....

ಜೀರಿಗೆ, ಸಾಸಿವೆ, ಮೆಂತ್ಯ ಡಬ್ಬಗಳಲಿ 
ಕಾಪಿಡುವ, ಮುಗಿಯದ ಅಮ್ಮನ ಪ್ರೀತಿ
ಎಂದೋ ಆಡಿದ ಹಾಳೆಬಂಡಿಯ ಆಟ
ಸಂಜೆಯ ಸೂರ್ಯನ ಮರೆತ ಚೆನ್ನೆ ಮಣೆ
ಬೋಗಿಗಳ ನಡುವೆ ಅಂತರ ಮರೆತ ರೈಲಾಟ
ಸಮಯದ ಪರಿವೆಗೆ ಸಿಗದ ಆ ತುಂಟಾಟ
- ಎಲ್ಲವನೂ ಕವಿತೆಯಾಗಿಸಬೇಕೆಂದಿದ್ದೆ...

ಬೇಕೆಂದೇ ಮರೆತು ಬಿಟ್ಟುಹೋದ ಜೋಡುಗೆರೆ ಪಟ್ಟಿ
ಸುಖಾ ಸುಮ್ಮನೆ ಹೋಗಿ ಕೆಡಿಸಿದ ಸಂಗೀತ ಕ್ಲಾಸು
ಮಳೆಗಾಲದಲಿ ರಸ್ತೆಯ ಗುಂಡಿಯಲಿ ಬಿಟ್ಟ ದೋಣಿ 
ಚಳಿಗಾಲದ ಅಂತ್ಯಕೆ ಹುಣಸೇಬೆಟ್ಟೆಯ ಹುಚ್ಚು
ವರ್ಷ ವರ್ಷ ಪ್ರಭಾತಪೇರಿಗೆ ಶಾಲೆ ಮುಂದಣ ಚರ್ಚು
- ಎಲ್ಲವೂ ನೆನಪ ಮೂಟೆಯಲಿ
ತನ್ನದೊಂದು ಸ್ಥಾನವಿದೆಯೆಂದವು...

ನಾನೋ, ಬರೆಯುವ 
ಅತೀವ ಬಯಕೆಯಲಿದ್ದೆ
ಆದರೆ ಜಿದ್ದಿಗೆ ಬಿದ್ದಂತೆ 
ಕವಿತೆ ಬಳಿ ಬರಲೇ ಇಲ್ಲ,
ನನ್ನತ್ತ ಸುಳಿಯಲೂ ಇಲ್ಲ,
ಬೇಜಾರಲ್ಲಿ ಸುಮ್ಮನೆ ಕುಳಿತರೆ
ಮನಸೀಗ ರಾತ್ರಿ ಮಸಣದಂತೆ
ಸದ್ದಿಲ್ಲ, ಬರೀ ಖಾಲಿ ಖಾಲಿ...

- R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...