ಶನಿವಾರ, ಮೇ 30, 2020

ನನ್ನ ಕನ್ನಡಕದ ಕಣ್ಣಲ್ಲಿ - ಕುಂಜಾಲು ಕಣಿವೆಯ ಕೆಂಪು ಹೂವು...


                      ನಾ. ಡಿಸೋಜ ಅವರು ಬರೆದ "ಕುಂಜಾಲು‌ಕಣಿವೆಯ ಕೆಂಪು ಹೂವು" 1987ರಲ್ಲಿ ಪ್ರಕಟವಾದ ಕೃತಿ. ಅರಣ್ಯ ನಾಶ, ನಗರೀಕರಣ, ಜಲ ಮಾಲಿನ್ಯ ಎಂದು ಪರಿಸರ ನಾಶ ಹೆಚ್ಚಾಗುತ್ತಿದ್ದ ಕಾಲದಲ್ಲಿ, ಪ್ರಕೃತಿ ಮಾತೆಯ ಬಗ್ಗೆ ಕಾಳಜಿವಹಿಸಿ ಬರೆದ ಒಂದು ವಿಭಿನ್ನ ಕೃತಿ ಇದು...

                       ಮಹಾನಗರದ ಯಾಂತ್ರಿಕ ಬದುಕು, ಮುಗಿಯದ ಸಂಸಾರದ ಜಂಜಡದಲ್ಲಿ ಕಳೆದುಹೋಗಿದ್ದ ವ್ಯಕ್ತಿಯೋರ್ವ ಮನಃಶಾಂತಿ ಬಯಸಿ ಕಛೇರಿಗೆ ರಜೆ ಹಾಕಿ, ತನ್ನ ಹುಟ್ಟೂರಿಗೆ ತೆರಳಿದಾಗ ಅಲ್ಲಿ ನಡೆಯುವ ಸಾಲು ಸಾಲು ಘಟನೆಗಳೇ ಈ ಕಾದಂಬರಿಯ ಜೀವಾಳ.
      
                    ಸಂಪರ್ಕ ಸಾಧನಗಳು ಕಡಿಮೆಯಿದ್ದ ಆ ಕಾಲಕ್ಕೆ ಜನರಲ್ಲಿದ್ದ ಪ್ರೀತಿ, ವಿಶ್ವಾಸ, ಸಹಾಯಹಸ್ತ ನೀಡುವ ಮುಗ್ಧ ಮನ - ಇವೆಲ್ಲವೂ ಕಾಲಚಕ್ರದ ಗತಿಗೆ ಕಡಿಮೆಯಾದ ಪರಿ, ಕಣ್ಮನ ಸೆಳೆಯುತ್ತಿದ್ದ ಬೆಟ್ಟ ಗುಡ್ಡಗಳು ರಸ್ತೆ, ಸೇತುವೆ ಎಂಬ ಹೆಸರಿನಲ್ಲಿ ವಿರೂಪಗೊಂಡ ಕತೆ, ಅಷ್ಟೇ ಏಕೆ ಬೆಲೆ ಕಳೆದುಕೊಳ್ಳುತ್ತಿರುವ ಸಂಬಂಧಗಳ ಮೌಲ್ಯ ಎಲ್ಲವೂ ಓದುಗರಿಗೆ ಈರುಳ್ಳಿಯ ಪೊರೆಯಂತೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ತೀರಿ ಹೋದ ಅಪ್ಪನ ಹಳೆಯ ಅನುಭವಗಳ ಸರಮಾಲೆಯ ಸವಿಯುತ್ತ, ಹೊಸ ಅನುಭವಗಳ ಜಾಡು ಹಿಡಿದು ಭಾವುಕನೊಬ್ಬ ಕುಂಜಾಲು ಕಣಿವೆ ತಲುಪುವ ಕತೆ ಎಲ್ಲಿಯೂ ಒಂದರೆ ಕ್ಷಣವೂ ಬೇಸರ ತರುವುದಿಲ್ಲ. ಪ್ರತಿ ನಿಮಿಷವೂ ಕುತೂಹಲ ಗರಿಗೆದರಿದ ಹಕ್ಕಿಯಂತೆ... ಪಟ್ಟಣದ ಬದುಕಿಗೆ ಅತಿಯಾಗಿ ಒಗ್ಗಿಕೊಂಡ ನಮ್ಮ ನಿಮ್ಮಂಥ ಸಾಮಾನ್ಯನೊಬ್ಬ ಹಳೆಯ ನೆನಪುಗಳ ಮತ್ತೆ ಹೆಕ್ಕಿ ಬಗಲಿಗೇರಿಸಲು ಸಾಗುವ ಕಾಲುದಾರಿಯ ಪಯಣದ ಕತೆ ಇದು...

                       ಇತಿಹಾಸದ ಹಲವು ಕತೆ, ಗಿರಿಜನರ ಜೀವನಗಳಲ್ಲಿ ಬೆಸೆದುಕೊಂಡ ಅದ್ಭುತ ಕೆಂಪು ಹೂವನ್ನು ನೋಡಲು ಕುಂಜಾಲು ಕಣಿವೆಯ ತುದಿ ತಲುಪಿದಾಗ ಆತನಲ್ಲಿದ್ದ ಆ ವಿಚಿತ್ರ ಭಾವ, ಜೀವನದ ಅತಿ ದೊಡ್ಡ ಸಾಧನೆಯಿದು ಎಂಬ ಅತ್ಯಾನಂದದಿಂದ ಕಣಿವೆಯ ಕೆಳಗೆ ಇಣುಕಿದಾಗ ಆತ ಕಂಡಿದ್ದಾದರೂ ಏನು?... ಇದನ್ನೆಲ್ಲ ನಾನು ಹೇಳಬಾರದು !! ಕಾದಂಬರಿಯನ್ನು ಅದಾಗಲೇ ಓದಿದ್ದವರು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ. ಇನ್ನೂ ತನಕ ಓದದೇ ಇರುವವರು ದಯಮಾಡಿ ಓದಿ !!

ವಿಷಯ ಸೂಚಿ : ಕೆಲವು ತಿಂಗಳುಗಳ ಹಿಂದೆ ಓದಿದ ಕತೆಯಿದು.. ಸದ್ಯಕ್ಕೆ ನನ್ನ ಬಳಿ ಪುಸ್ತಕ ಇಲ್ಲದೇ ಇರುವುದರಿಂದ ನೆನಪಲ್ಲಿ ಉಳಿದ ಒಂದಿಷ್ಟನ್ನು ಪದಕ್ಕಿಳಿಸುವ ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...