ಶನಿವಾರ, ಜನವರಿ 28, 2023

ಕಾರ್ಪೊರೇಟ್ ಲೋಕದಲ್ಲಿ ಕನ್ನಡ

                    ಪ್ರತೀವರ್ಷ ನವೆಂಬರ್ ೧ ಬಂತೆಂದರೆ ಸಾಕು. ಕನ್ನಡ ರಾಜ್ಯೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡುತ್ತದೆ. ನವೆಂಬರ್ ತಿಂಗಳು ಪೂರ್ತಿ ಹಲವೆಡೆ, ವಿವಿಧ ರೀತಿಯಲ್ಲಿ ನಮ್ಮ ಕನ್ನಡ ನಾಡಿನ ಏಕೀಕರಣದ ದಿನವನ್ನು ಆಚರಿಸುತ್ತಾರೆ. ಬೆಂಗಳೂರಿನ ಮಲ್ಟಿ ನ್ಯಾಷನಲ್ ಕಂಪನಿಗಳೂ ಸಹ 'ಒಂದು ದಿನ' ತಮ್ಮ ಕನ್ನಡ ಪ್ರೇಮನ್ನು ತೋರಿಸಿ, ಉದ್ಯೋಗಿಗಳನ್ನು ಸಮಾಧಾನ ಪಡಿಸಿ, ಇನ್ನಷ್ಟು ಕೆಲಸ ಹಂಚಲು ಮುಂದಾಗುತ್ತವೆ. ಬೆಳಿಗ್ಗೆ ಕಛೇರಿಯ ಮುಂದೆ ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಡೊಳ್ಳುಕುಣಿತ, ಯಕ್ಷಗಾನ, ವೀರಗಾಸೆಗಳ ಪ್ರದರ್ಶನದಿಂದ ಆರಂಭವಾಗುವ ಕಾರ್ಯಕ್ರಮವು ಭಾವಗೀತೆ, ಭರತನಾಟ್ಯ, ಕನ್ನಡ ಪ್ರೇಮ ಬಿತ್ತರಿಸುವ ಸೊಗಸಾದ ಹಾಡುಗಳಿಂದ ಮನಕ್ಕೆ ರಸದೌತಣ ಬಡಿಸುವುದಲ್ಲದೇ, ನಮ್ಮ ರಾಜ್ಯದ ಪ್ರಸಿದ್ಧ ಖಾದ್ಯಗಳ ಸವಿಯನ್ನು ರಸನಕ್ಕೆ ಒದಗಿಸುವ ಮೂಲಕ ಅದ್ದೂರಿಯ ಕನ್ನಡಹಬ್ಬ ನೆರವೇರುತ್ತದೆ. ಈ ಕಂಪೆನಿಗಳು ನಡೆಸುವ ಕನ್ನಡ ರಾಜ್ಯೋತ್ಸವವು ಕೇವಲ ತೋರಿಕೆಗಷ್ಟೇ ಆದರೂ, ಆ ದಿನ - ಆ ಕ್ಷಣದ ವಾತಾವರಣವು ಕನ್ನಡ ಮನಸ್ಸುಗಳಲ್ಲಿ ಒಂದು ಆಪ್ತಭಾವವನ್ನು ಹುಟ್ಟುಹಾಕುತ್ತದೆ. "A sense of Belonging" ಎಂಬುದನ್ನು ಉದ್ಯೋಗಿಗಳಲ್ಲಿ ಹುಟ್ಟುಹಾಕುವ ಪ್ರಯತ್ನಗಳಲ್ಲಿ ನಮ್ಮ ರಾಜ್ಯೋತ್ಸವ ಆಚರಣೆಯೂ ಒಂದು ಎಂದರೆ ಅತಿಶಯೋಕ್ತಿಯಾಗಲಾರದು. 

                     ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ನಮ್ಮ ನಾಡಭಾಷೆ ಹೇಳ ಹೆಸರಿಲ್ಲದಂತೆ ಮರೆಯಾಗುತ್ತಿದೆ. ಅದರಲ್ಲೂ ಈ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕನ್ನಡವು ಮೂಲೆಗುಂಪಾಗುತ್ತಿದೆ. ನಾವು ಸಂವಹನ ನಡೆಸುತ್ತಿರುವಾಗ ಎದುರಿನ ವ್ಯಕ್ತಿಗೆ ಕನ್ನಡ ಬರುತ್ತದೆ ಎಂದು ತಿಳಿದಿದ್ದರೂ ಸಹ, ಇಲ್ಲಿ ಕನ್ನಡದಲ್ಲಿ ಮಾತನಾಡಲು ಹಲವರಿಗೆ "ಅಹಂ" ಅಡ್ಡ ಬರುತ್ತದೆ. ಇನ್ನು ಕೆಲವರಿಗೆ ಕೀಳರಿಮೆ ಕಾಡುತ್ತದೆ. ಮತ್ತಷ್ಟು ಜನರಿಗೆ ಕನ್ನಡ ಮಾತನಾಡಿದರೆ ತಮ್ಮ "ಪ್ರೊಫೆಷನಲಿಸಂ" ಕಳೆದುಹೋಗುತ್ತದೆಂಬ ಭಯ. ಬಹುಶಃ ಈ ಭಯ ಹಲವರನ್ನು ಕಾಡುತ್ತಿದೆ. ಹೀಗಾಗಿ ಬೆಂಗಳೂರಿನ ಹೆಚ್ಚಿನ ಆಫೀಸುಗಳಲ್ಲಿ, ವೈಯಕ್ತಿಕ ಮಾತುಕತೆಗೂ ಸಹ ಕನ್ನಡಕ್ಕಿಂತ ಬೇರೆ ಭಾಷೆಗಳೇ ಹೆಚ್ಚು ಬಳಸಲ್ಪಡುತ್ತವೆ. ನಾನು ಗಮನಿಸಿದ ಪ್ರಕಾರ, ಒಂದೇ ಕಂಪೆನಿಯಲ್ಲಿ, ಹೈದರಾಬಾದ್ ಶಾಖೆಯ ಉದ್ಯೋಗಿಗಳು ಧೈರ್ಯವಾಗಿ ತೆಲುಗುವಿನಲ್ಲೇ ವ್ಯವಹರಿಸುತ್ತಾರೆ, ಇನ್ನು ತಮಿಳರ ಭಾಷಾಪ್ರೇಮದ ಬಗ್ಗೆ ನಾನು ಹೇಳುವ ಅಗತ್ಯವಿಲ್ಲ. ಆದರೆ ಬೆಂಗಳೂರಿನ ಶಾಖೆಯ ಉದ್ಯೋಗಿಗಳು ಮಾತ್ರ ಇಂಗ್ಲೀಷ್ ಜೊತೆಗೆ ಹಿಂದಿಯಲ್ಲೇ ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಕನ್ನಡದಲ್ಲಿ ಮಾತನಾಡುವುದು ಅವಿದ್ಯಾವಂತರ ಲಕ್ಷಣ ಎಂದು ಭಾವಿಸುವ ಮೂರ್ಖರೂ ಇದ್ದಾರೆ. ಹೀಗಾಗಿ, ಅನೇಕ ಬಾರಿ, ಆಫೀಸಿನಲ್ಲಿ ಹಿಂದಿಯಲ್ಲಿ "ಶಾಯರಿ" ಬರೆದವ "ಕೂಲ್ ಗಾಯ್" ಎನಿಸಿಕೊಂಡರೆ, ಕನ್ನಡದಲ್ಲಿ ಕವಿತೆ ಬರೆಯುವವ "ಔಟ್ ಡೇಟೆಡ್" ಆಗುತ್ತಾನೆ. ಇನ್ನು ಕೆಲವೇ ಕಛೇರಿಗಳಲ್ಲಿ ಕನ್ನಡ ಪ್ರಮುಖ ಸ್ಥಾನ ಹೊಂದಿರುವ ಉದಾಹರಣೆಗಳಿವೆ. ಸದ್ಯದ ಮಟ್ಟಿಗೆ, ಅದೇ ಕನ್ನಡಿಗರಿಗೆ ಖುಷಿಪಡುವ ವಿಚಾರ ಬಿಡಿ. 

                        ಪ್ರಸ್ತುತ ಕಾರ್ಪೊರೇಟ್ ಲೋಕದಲ್ಲಿ ನಮ್ಮ ಕನ್ನಡದ ಪರಿಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ಒಳಹೊಕ್ಕು ನೋಡಿದರೆ ಮಾತ್ರ ಅರ್ಥವಾಗುತ್ತದೆ. ದಿನೇ ದಿನೇ ಬದುಕು ಯಾಂತ್ರಿಕವಾಗುತ್ತಿರುವ ಈ ಕಾಲದಲ್ಲಿ ಭಾವನೆಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ಹಾಗೆಯೇ, ಹಲವರಲ್ಲಿ ಭಾಷಾಪ್ರೇಮ ಕೂಡ ಕಡಿಮೆಯಾಗುತ್ತಿದೆ. ಮೊದಲೆಲ್ಲ ಕನ್ನಡ ಬರೀ ಸಂವಹನದ ಮಾಧ್ಯಮವಷ್ಟೇ ಆಗಿರಲಿಲ್ಲ. ಕನ್ನಡ ಕರುನಾಡಿನ ಉಸಿರಾಗಿತ್ತು. ಕನ್ನಡಮ್ಮನ ಮನೆಯಂಗಳ ಹಸಿರಾಗಿತ್ತು. ಕನ್ನಡ - ಕನ್ನಡಿಗರ ತಾಯಿ. ಹಲವು ಬಂಧಗಳ ಬೆಸೆಯುವ ಕೊಂಡಿ. ಮಮತೆಯ ಸೆಲೆ, ಭಾವಗಳ ಉಕ್ಕಿಸೋ ಅಲೆ, ಸವಿನೆನಪುಗಳನ್ನು ಅಕ್ಷರದ ದಾರದಲಿ ಪೋಣಿಸೋ ಮಾಲೆ, ನಮ್ಮ ಕಲೆ- ಸಂಸ್ಕೃತಿಯನ್ನುಳಿಸುವ ಚೇತನ.... ಮನಮುಟ್ಟುವ ಚಲನಚಿತ್ರಗಳು, ಎದೆತಟ್ಟುವ ಗೀತೆಗಳು, ಅದ್ಭುತವಾದ ಸಾಹಿತ್ಯಕೃತಿಗಳು, ಜನತೆಯಲ್ಲಿ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸುವ ನಾಟಕಗಳು, ಪೌರಾಣಿಕ ಕಥೆಗಳ ಬಿತ್ತರಿಸೋ ಯಕ್ಷಗಾನ ಪ್ರಸಂಗಗಳು‌... ಹೀಗೆ ಇವೆಲ್ಲವೂ ಸೇರಿ "ಕನ್ನಡ" ವೆಂಬುದು ನಮ್ಮೊಳಗೆ ಸೇರಿ, ಬಿಡಿಸಲಾರದ ಒಂದು ನಂಟಾಗಿತ್ತು… ಆದರೆ ಈಗ? ಓಟದ ಬದುಕಿನ ಜಂಜಡದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ?... 
                    ಕಾರ್ಪೋರೇಟ್ ಕಾಲದಲ್ಲಿ ಕಾಣೆಯಾಗುತ್ತಿರುವ ನಮ್ಮ ಕನ್ನಡವನ್ನು ಉಳಿಸಲು ನಾವೇನು ಮಾಡಬಹುದು? ಎಂಬ ಪ್ರಶ್ನೆಗೆ ನಮ್ಮ ಬಳಿ ಎಷ್ಟು ಸಮರ್ಪಕವಾದ ಉತ್ತರವಿದೆಯೋ ಗೊತ್ತಿಲ್ಲ. ಆದರೆ ಯೋಚಿಸಿದಷ್ಟೂ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ‌ಮೊದಲು ನಾವು ನಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆಯನ್ನು ಬಿಡಬೇಕು. ಕಚೇರಿಯಲ್ಲಿ ವೈಯಕ್ತಿಕ ಮಾತುಕತೆಗೆ ಕನ್ನಡವನ್ನು ಬಳಸಲು ಆರಂಭಿಸಬೇಕು. ಯಾರಾದರೂ ಆಫೀಸಿನಲ್ಲಿ ಅನಾವಶ್ಯಕವಾಗಿ ನಮ್ಮ ಭಾಷೆಯನ್ನು ಹೀಯಾಳಿಸುತ್ತಿದ್ದರೆ, "ನಂಗ್ಯಾಕೆ ಬಿಡು? ಅವರೇನು ನಂಗೆ ಬೈತಾ ಇಲ್ವಲ್ಲಾ..." ಎನ್ನುವ ಧೋರಣೆ ಬಿಟ್ಟು, ಮೃದುವಾಗಿ ತಿಳಿಸಿ ಹೇಳಬೇಕು. ಸಾಹಿತ್ಯದ ಬಗ್ಗೆ ಅಲ್ಪಸ್ವಲ್ಪವಾದರೂ ತಿಳಿವಳಿಕೆ ನೀಡಬೇಕು. ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ "ಕಾಂತಾರ" ದಂತಹ ಹಲವಾರು ಒಳ್ಳೆಯ ಚಲನಚಿತ್ರಗಳು, ನಾಟಕಗಳನ್ನು ನಮ್ಮ ಕೈಲಾದಷ್ಟು ಪ್ರೋತ್ಸಾಹಿಸಬೇಕು. ಇಲ್ಲವಾದರೆ, ಕನಿಷ್ಠ ಪಕ್ಷ ಅದರ ಬಗ್ಗೆ ಹೀಯಾಳಿಸುವುದನ್ನು ನಿಲ್ಲಿಸಬೇಕು. ಆಫೀಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಟೀಂ ಬಿಲ್ಡಿಂಗ್ ನಂತಹ ಚಟುವಟಿಕೆಗಳಲ್ಲಿ ಸಾಧ್ಯವಾದರೆ ಕನ್ನಡವನ್ನೇ ಬಳಸಬೇಕು. ವ್ಯಾವಹಾರಿಕವಾಗಿ ಇಂಗ್ಲೀಷ್ ಅನಿವಾರ್ಯ. ಆದರೆ, ಅದರಾಚೆಗೆ ಕಚೇರಿಯಲ್ಲಿ ಕನ್ನಡ ಬಳಸಬಾರದು ಎಂಬ ಯಾವ ಲಿಖಿತ ನಿಯಮವೂ ಇಲ್ಲವಲ್ಲ! - ಇದನ್ನೊಂದು ಗಮನದಲ್ಲಿಟ್ಟುಕೊಂಡರೆ ಸಾಕು. ಕಾರ್ಪೊರೇಟ್ ಕ್ಯೂಬಿಕಲ್ ಗಳಲ್ಲಿ ಕನ್ನಡದ ಬಾವುಟವಷ್ಟೇ ಅಲ್ಲ, ಕನ್ನಡ ಭಾಷೆಯೂ ಮೆರೆಯುತ್ತದೆ. ತನ್ನದೇ ಆದ ಸ್ಥಾನ ಪಡೆಯುತ್ತದೆ. ಲಕ್ಷಾಂತರ ಕನ್ನಡಿಗರ ಭಾವನೆಗಳ ಹಂಚಿಕೆಗೆ ರೂವಾರಿಯಾಗುತ್ತದೆ. 
                   ಇತ್ತೀಚಿಗೆ ಕನ್ನಡದ ಬಗ್ಗೆ ಕೆಲವರಿಗೆ ಒಲವು ಕಡಿಮೆಯಾಗಿದ್ದರೆ, ಇನ್ನೂ ಕೆಲವು ಯುವಜನತೆಗೆ ಕನ್ನಡ ಅಂದು ಎಷ್ಟು ಆಪ್ತವಾಗಿತ್ತೋ, ಇಂದಿಗೂ ಅಷ್ಟೇ ಆಪ್ತ, ಅಷ್ಟೇ ಪ್ರಸ್ತುತ ! ಕನ್ನಡ ಬರೀ ಭಾಷೆಯಷ್ಟೇ ಅಲ್ಲ, ಅದು ಕನ್ನಡಿಗರ ವ್ಯಕ್ತಿತ್ವದ ಒಂದು ಅವಿಭಾಜ್ಯ ಅಂಗ… "ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು" ಎಂಬ ಡಿವಿಜಿ ಯವರ ಮಾತಿನಂತೆ, ಹಿರಿಯ ಕನ್ನಡಾಭಿಮಾನಿಗಳ ಮಾರ್ಗದರ್ಶನ ಮತ್ತು ಯುವ ಜನತೆಯ ಉತ್ಸಾಹ ಎರಡೂ ಸೇರಿ ಕನ್ನಡದಲ್ಲಿ ಹೊಸಹೊಸ ಪ್ರಯತ್ನಗಳು ನಡೆದರೆ, ನವೀನ ಭಾಷ್ಯವೊಂದಕ್ಕೆ ಮುನ್ನುಡಿಯಾದರೆ, ಅದಕ್ಕಿಂತ ಖುಷಿಪಡುವ ವಿಚಾರ ಇನ್ನೊಂದಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಭದ್ರ ಬುನಾದಿ ಇದೆ. ಶತಮಾನಗಳ ಇತಿಹಾಸವಿದೆ. ಒಂದು ಭಾಷೆ ಒಳಗೊಳ್ಳಬೇಕಾದ ಸಾರಾಸಾರಗಳುಳ್ಳ ಸಕಲ ಅಂಶಗಳೂ ಇದರಲ್ಲಿ ಅಡಕವಾಗಿದೆ. ಇಂಥಹ ಕನ್ನಡ ನಮ್ಮ ಎದೆಯ ಭಾಷೆಯಾಗಬೇಕು. ಕನ್ನಡ 'ಬದುಕಿನ' ಭಾಷೆಯೂ ಆಗಬೇಕು. ಕವಲುದಾರಿಯಲ್ಲಿ ನಿಂತ ಸಂಕರದ ಈ ಸ್ಥಿತಿಯಲ್ಲಿ ಕನ್ನಡ ಉಳಿಯಲು ಬೆಳೆಯಲು ಆಧುನಿಕ ಬದುಕಿನ ಸಕಲವೂ ಪೂರಕವಾಗಬೇಕು, ಪ್ರೇರಕವೂ ಆಗಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಕಾರ್ಪೋರೇಟ್ ಜಗತ್ತಿನಲ್ಲೂ ಕನ್ನಡದ ಕಲರವ ಕೇಳಿ ಬಂದರೆ ಅದಕ್ಕಿಂತ ಮಿಗಿಲಾದ ಸಾಧನೆ ಇನ್ನೇನಿದೆ?... ಹೀಗೆ ಎಲ್ಲ ಚಿಂತನೆಗಳು ಮನದಲ್ಲಿ ಭಾವ ತರಂಗಗಳನ್ನು ಸೃಷ್ಟಿಸಿದಾಗ, ನನಗೆ ಡಿ.ಎಸ್‌. ಕರ್ಕಿಯವರ ಈ ಗೀತೆ ನೆನಪಾಗುತ್ತದೆ… 
 "ಹಚ್ಚೇವು ಕನ್ನಡದ ದೀಪ, 
 ಕರುನಾಡ ದೀಪ ಸಿರಿನುಡಿಯ ದೀಪ
 ಒಲವೆತ್ತಿ ತೋರುವ ದೀಪ...." 
ಈ ಸಾಲುಗಳು ಮನದಲ್ಲಿ ಸದಾ ಅನುರಣಿಸುತ್ತದೆ. ಕನ್ನಡದ ಒಲವೆತ್ತಿ ತೋರುವ ದೀಪವನ್ನು ಇನ್ನಾದರೂ ಬೆಳಗಿಸಬೇಕಿದೆ… 

 - R.R.B.

* ಫೇಸ್‌ಬುಕ್‌ ನಲ್ಲಿರುವ "ಸೌರಭ" ಪುಟದ "ನಾವು-ನೀವು-ಕನ್ನಡ" ಮಾಲಿಕೆ - ೧ ಕ್ಕಾಗಿ ಬರೆದ ಲೇಖನ.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...