ಸೋಮವಾರ, ಜನವರಿ 22, 2018

ಅನಾವರಣ

                      ಮನಸ್ಸು ಅನ್ನೋದು ಒಂಥರಾ ಊಸರವಳ್ಳಿ ಇದ್ದ ಹಾಗೆ. ಎಲ್ಲಿ, ಯಾವಾಗ ಯಾವ ಬಣ್ಣವೋ ಯಾವ ಭಾವವೋ! ಕೆಲವೊಮ್ಮೆ ನಮ್ಮ ನಡವಳಿಕೆ ನಮಗೇ ಅಚ್ಚರಿ ಆಗತ್ತೆ. ಅದರಲ್ಲೂ ನನ್ನಂಥ ಭಾವುಕರಿಗಂತೂ ಕ್ಷಣಕ್ಷಣವೂ ಭಾವಗಳಲಿ ವರ್ಣಬದಲಾವಣೆ... ಮಹಾನಗರಿಯ ಈ ಬದುಕು ಕಲಾವಿದ ರಚಿಸಿದ ಚಿತ್ತಾರಭರಿತ ವರ್ಣಚಿತ್ರದಂತೆ. ಒಂದೊಂದು ಬಣ್ಣದಲ್ಲಿ ಕುಂಚ ಅದ್ದುವಾಗಲೂ ಕಲಾವಿದ ಎಚ್ಚರ ವಹಿಸುತ್ತಾನೆ. ನಾವೂ ಹಾಗೆ ಎಚ್ಚರ ವಹಿಸಿದರೆ ಬದುಕು ಸುಂದರ ಬಣ್ಣಗಳ ಸೊಗಸಿನ ಚಿತ್ತಾರ ! ಆದರೆ ಈ ಮನಮರ್ಕಟ ಯಾವಾಗ ಯಾವ ಮರ ಏರುವುದೋ ಬಲ್ಲವರಾರು??...

                     ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಮನಕೆ ಬೇಸರದ ಪೊರೆಯ ಆವರಣ. ಆಗ ಪ್ರತಿಯೊಂದೂ ಸಮಸ್ಯೆಗಾಳಾಗಿ ಗೋಚರಿಸುತ್ತವೆ. ಚಳಿಗಾಲದ ಮುಂಜಾನೆ ಏಳುವುದೇ ಒಂದು ಬೇಜಾರು. ಎದ್ದು ಕಷ್ಟಪಟ್ಟು ತಯಾರಾದರೆ ಆಫೀಸಿಗೆ ತಡವಾಯ್ತು ಎಂಬ ಕಳವಳ. ಬಸ್ ನಿಲ್ದಾಣದಲ್ಲಿ ಎಷ್ಟು ಕಾದರೂ ಬಸ್ ಸಿಗದಿದ್ದರೆ ತಳಮಳ. ಕಡೆಗೂ ಬಸ್ಸೇರುವಷ್ಟರಲ್ಲಿ "ಫುಲ್ ರಶ್" ಎಂಬ ಸಿಟ್ಟು. ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ಬಿ.ಎಂ.ಟಿ.ಸಿ.ಯ ನೂಕುನುಗ್ಗಲಿನಲ್ಲಿ ತನ್ನ ಕಳೆ ಕಳೆದುಕೊಂಡು ಕೊಳೆ ಆಯ್ತೆಂದು ಕಸಿವಿಸಿ. ಬಸ್ಸಿಳಿದು ಆಫೀಸಿಗೆ ಕಾಲಿಡುವವರೆಗೂ "Boss" ಬೈದರೆ ಏನುತ್ತರ ಕೊಡಬೇಕೆಂಬ ತಯಾರಿ. ಆಫೀಸಲ್ಲಿ ಕುಳಿತರೆ ಮಾಡಬೇಕಾದ ಕೆಲಸಗಳ ಪಟ್ಟಿಯೋ ಹನುಮಂತನ ಬಾಲವೇ ಸರಿ! ಜೊತೆಗೆ ಯಾರದೋ ತಪ್ಪಿಗೆ ಮೇಲಧಿಕಾರಿಯಿಂದ ಬೈಸಿಕೊಳ್ಳುವ ಭಾಗ್ಯ! ತಪ್ಪು ತನ್ನದಲ್ಲವೆಂದು ಸರಿಪಡಿಸಿಕೊಳ್ಳಲು ಯತ್ನಿಸಿದರೆ "ನನಗೇ ಎದುರುತ್ತರ ಕೊಡ್ತೀಯಾ?" ಎಂಬ ಬೈಗುಳ ಬೋನಸ್ ! ಮನಸ್ಸು ಕೆಡಿಸಿಕೊಂಡು ಹೇಗೋ ಕೆಲಸ ಮುಗಿಸುವಷ್ಟರಲ್ಲಿ ಸಾಕು ಸಾಕಾಗಿರತ್ತೆ....ಇನ್ನು ಬಸ್ಸಿಗೆ ಕಾಯುವ ಗೋಜಲೇ ಬೇಡವೆಂದು ಕ್ಯಾಬ್ ಬುಕ್ ಮಾಡಲು ಹೋದರೆ ಹತ್ತಿರದಲ್ಲೆಲ್ಲೂ ಕ್ಯಾಬ್ ಇಲ್ಲವೆಂಬ ಸಿಟ್ಟು. ಆಟೋ ಹಿಡಿಯೋಣವೆಂದರೆ "ಒಂದು ಆಟೋನೂ ಸಿಕ್ತಾ ಇಲ್ಲ"ವೆಂಬ ಕೋಪ. ಆಟೋ ಸಿಕ್ಕ ಮೇಲೆ "ಅಬ್ಬ!.." ಎಂದು ನಿಟ್ಟುಸಿರು ಬಿಟ್ರೆ ಆಟೋದವನು ಟ್ರಾಫಿಕ್ ಅಂತ ಅರ್ಧ ಬೆಂಗಳೂರು ಸುತ್ತಿಸಿ ನಂತ್ರ ಇಳಿಸಬೇಕಾದಲ್ಲಿ ಇಳಿಸ್ತಾನೆ. ಗೊಣಗುತ್ತಾ ದುಡ್ಡು ಕೊಟ್ರೆ ಚಿಲ್ಲರೆ ಇಲ್ಲವೆಂಬ ಸಮಸ್ಯೆ. ಹೇಗೋ ಸರಿಯಾದ ಮೊತ್ತ ಕೊಟ್ಟು ರೂಂ ಸೇರುವಷ್ಟರಲ್ಲಿ ತಲೆ ಕಾರ್ಪೋರೇಷನ್ ತೊಟ್ಟಿ !.. 

                " ಈ ಜೀವನ ಅಂದ್ರೆ ಇಷ್ಟೇನಾ? ಏನೋ ದೊಡ್ಡ ಸಾಧನೆ ಮಾಡ್ತೀನಿ ಅಂತ ಹುಟ್ಟಿ ಬೆಳೆದ ಊರು, ತಂದೆ - ತಾಯಿಯರನ್ನು ಬಿಟ್ಟು ಮಹಾನಗರಿಯ ಮಡಿಲೇರಿದ್ದು ಇದಕ್ಕೇನಾ? ಕೇವಲ ತಿಂಗಳ ಕೊನೆಯಲ್ಲಿ ಬರುವ ಸಂಬಳವೇ ಈಗೀಗ ನನ್ನ ಖುಷಿಯಾ? ಇದು ನಿಜಕ್ಕೂ ನಾ ಬಯಸಿದ ಬದುಕಾ?.... ಛೇ, ನನ್ನ ಆಯ್ಕೆ ತಪ್ಪಾಗಿ ಹೋಯ್ತಾ????......" ಅಂತೆಲ್ಲ ಪ್ರಶ್ನೆಗಳು ಮೆದುಳನ್ನು ಇಲಿಯಾಗಿ ಬಿಲಕೊರೆದ ಭಾಸ !.. "ಯಾಕೋ ಈ ದಿನವೇ ಸರಿಯಿಲ್ಲ.." ಎಂದು ರಾತ್ರಿ ಊಟ ಮುಗಿಸಿ ಮೊಬೈಲ್ ಹಿಡಿದರೆ ಸದ್ದಿಲ್ಲದೇ ಗಂಟೆ ಹನ್ನೆರಡು ದಾಟಿರುತ್ತದೆ. ಮರುದಿನ ಏಳುವಾಗ ಮತ್ತೆ ಲೇಟ್ ! ಮತ್ತದೇ ಚಕ್ರದ ಪುನರಾವರ್ತನೆ!!.... 

                    ಇದನ್ನು ನೋಡಿ ಬದುಕಂದ್ರೆ ಬರಿ ಇಷ್ಟೇ...ಅಂತ ಅಂದ್ಕೊಳ್ಳೋದು ತಪ್ಪಾಗತ್ತೆ! ಕೆಲವೊಮ್ಮೆ ಈ ಮನಸ್ಸು ಸುಮ್ನೆ ಸುಮ್ನೆ ಖುಷಿ ಪಡೋದನ್ನ ಕಲಿಸುತ್ತೆ. ಎಷ್ಟೇ ಬೇಜಾರಲ್ಲಿದ್ದರೂ ಸ್ವಲ್ಪ ಹೊತ್ತಿಗೆ ಸುಮ್ಮನೆ ನಗುವ ಮಗುವಿನಂತಾಗಿರುತ್ತೇವೆ. ಪುಟ್ಟ ಹುಡುಗಿ ಮೊದಲ ಬಾರಿ ಕಾಲ್ಗೆಜ್ಜೆ ತೊಟ್ಟಾಗ ಹೇಗೆ ನಲಿಯುತ್ತದೋ ಹಾಗೆ ಕುಣಿಯುತ್ತದೆ ಈ ಮನ! ಸಂತಸಕ್ಕೆ ನಿರ್ದಿಷ್ಟ ಕಾರಣಗಳು ಬೇಕೆಂದೇನಿಲ್ಲ! ಸುರಿವ ಸೋನೆಗೆ, ಹರಿವ ಝರಿಗೆ, ತಂಬೆಲರ ಆಲಿಂಗನಕೆ, ಇಬ್ಬನಿಯ ಚುಂಬನಕೆ ಕಾರಣ ಹುಡುಕುವುದನ್ನು ಬಿಡಿ...

          ಸುಮ್ಮನೆ ಆ ಮಧುರ ಅನುಭೂತಿಯನ್ನು ಅನುಭವಿಸುವುದರಲ್ಲೇ ಅಪಾರ ಖುಷಿ ಅಡಗಿದೆ. ಅಗಾಧ ಆನಂದದ ಅಲೆಯಿದೆ...! ಕೆಲವೊಮ್ಮೆ ಮನಮರ್ಕಟದ ಕೈಯಲ್ಲಿ ಖುಷಿಯ ಹಣ್ಣುಗಳ ಗೊಂಚಲೇ ಇರುತ್ತವೆ! ಆಗ ಎಲ್ಲಕ್ಕೂ ನಗು, ಮುಂಜಾನೆ ಏಳುವಾಗಲೇ ನವೋತ್ಸಾಹ, ಇವತ್ತೇನೋ ಒಳಿತಾಗುತ್ತದೆಂಬ ಭಾವ! ಬೇಗನೆ ತಯಾರಾಗಿ ಆಫೀಸಿಗೆ ಹೊರಟಾಗ ರೂಂಮೇಟ್ "ಬಾಯ್, ಹುಷಾರು..." ಎಂದರೆ ಅವರ ಕಾಳಜಿ ನೆನೆದು ಪುಟ್ಟ ಮನಕೆ ಸಂತಸ. ತುಟಿಯಂಚಿನಲಿ ಕಿರುನಗೆ. ಬೇಗ ಬಸ್ ಸಿಕ್ಕರೆ ಖುಷಿ, ಸೀಟು ಸಿಕ್ಕರಂತೂ ಮನದಲಿ ಸದ್ದಿಲ್ಲದ ದೀಪಾವಳಿ ಹಬ್ಬ! ಆಫೀಸಿಗೆ ಬೇಗನೆ ತಲುಪಿದ್ದಕ್ಕೆ ಆನಂದ. ಎಷ್ಟೇ ಗಡಿಬಿಡಿಯಲ್ಲಿರಲಿ, ತಲೆಬಿಸಿಯಿರಲಿ, ಅದೇ ಸಮಾಧಾನದ ಮೊಗ ಹೊತ್ತು "ಗುಡ್ಮಾರ್ನಿಂಗ್.." ಎನ್ನುವ ವಾಚ್ ಮೆನ್ ಗೆ ಮುಗುಳ್ನಕ್ಕು "ವೆರಿ ಗುಡ್ಮಾರ್ನಿಂಗ್" ಎಂದು ಒಳಹೋಗುವ ಕ್ಷಣದ ಭಾವಗಳನ್ನು ವಿವರಿಸುವುದು ಕಷ್ಟವೇ! ಎಸಿ ರೂಮಿನಲ್ಲಿ ಸಮಯದ ಪರಿವಿಲ್ಲದಂತೆ ದುಡಿವ ಮನಕೆ ಆಫೀಸಿನಿಂದ ಹೊರಬಂದ ತಕ್ಷಣ ಸಿನೆಮಾ ಥಿಯೇಟರಿನಿಂದ ಹೊರಬಂದ ಭಾಸ! ನಿಜ ಜೀವನದ ಪ್ರಾರಂಭ ಆಫೀಸಿನ ಗೇಟಿನಿಂದಾಚೆಯೇ ಎಂಬ ತುಂಬು ಭಾವ... ಫುಟ್ಪಾತಿನಲ್ಲಿ ಕುಳಿತು ಹೂಮಾರುವ ಹೆಂಗಸಿನ ಪುಟ್ಟ ಮಗುವಿನ ಕಣ್ಣಲ್ಲಿನ ಹೊಳಪು ಬೇಸರದ ಮನಕೊಂದು ಪವರ್ ಫುಲ್ ಟಾನಿಕ್!!.. ಪಾರ್ಕಿನಲಿ ಕೇಳಿಬರುವ ಹಿರಿಯರ ಮುಗಿಯದ ಹರಟೆಯಿಂದ ಮನದಲೊಂದು ಪುಟ್ಟ ನಗು, ಬಲೂನು ಮಾರುವ ಹುಡುಗನ ತಾಳ್ಮೆ ನೆನೆದು ಅಂತರಾಳದಲ್ಲೆಲ್ಲೋ ಉತ್ಸಾಹಕಾರಂಜಿಯ ಚಿಲುಮೆ! ಇರುವ ಸಣ್ಣ ಟೆರೇಸಿನಲ್ಲೇ ಮಡಿಕೆಯಲಿ ಹೂಗಿಡ ಬೆಳೆದು, ಪ್ರತಿದಿನವೂ ನೀರೆರೆಯುವ ನೀರೆಯ ಕಂಡಾಗ ಬದುಕಿನ ಅರ್ಥ ಅರಿವ ಕುತೂಹಲ, ಎಲ್ಲ ಮರೆತು ಕೂಡಿ ಆಡುವ ಚಿಣ್ಣರ ಕಂಡಾಗ ಬಾಲ್ಯವ ನೆನೆದು ನವಿರಾದ ಕಂಪನ, ದಿನವೂ ಓಡಾಡುವ ಹಾದಿಯ ಕಲ್ಲು ಕಲ್ಲಿಗೂ ಕಿವಿಯಿದ್ದರೆ ನನ್ನೀ ತರಹೇವಾರಿ ಭಾವನೆಗಳಿಗೆ ಸ್ಪಂದನೆ ಸಿಗುತ್ತಿತ್ತೇನೋ...ಎಂಬ ಕಲ್ಪನೆ.... 

              ಭಾವಗಳ ಬಂಡಿ ಏರಿ ಹೊರಟರೆ ತಲುಪುವ ಗಮ್ಯಕ್ಕಿಂತ ಆ ಯಾತ್ರೆಯ ಅನುಭವಗಳ ಗೊಂಚಲು ಹಾಗೂ ಅದರಿಂದಾದ ಅರಿವೇ ಮುಖ್ಯವೆನಿಸುತ್ತವೆ...ಬಹುಶಃ ಬದುಕು ಬಣ್ಣ ಪಡೆವ ಕಾಲ ಅದೇ ಇರಬಹುದು....!! ಮಳೆಗಾಲದಲಿ ತೋಡಿನಲ್ಲಿ ಕಾಗದದ ದೋಣಿ ಬಿಡುವಾಗಲೇ "ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ...." ಎಂದು ಕುವೆಂಪುರವರ ಗೀತೆಯನ್ನು ಭಾವತುಂಬಿ ಹಾಡುತ್ತಿದ್ದ ಬಾಲ್ಯವನು ದಾಟಿ ಇದೀಗ ಯಾಂತ್ರಿಕ ಬದುಕಿಗೆ ಕಾಲಿಟ್ಟಾಗಿದೆ. ಆದರೆ ಹಳೆಯ ಮುಗ್ಧತೆ ನಮ್ಮಲ್ಲಿ ತುಸುವಾದರೂ ಜೀವಂತವಾಗಿದ್ದರೆ ಬದುಕು ಬಲು ಸುಂದರ....! 

                ಖುಷಿ ಅನ್ನೋದು ಕೆ.ಆರ್.ಮಾರ್ಕೆಟ್ಟಿನಿಂದ ಕೊಂಡು ತರುವ ತರಕಾರಿಯಲ್ಲ, ನೋವು ಅನ್ನೋದು ಇದ್ದಕ್ಕಿದ್ದಂತೆ ಆಕಾಶದಿಂದ ಉದುರೋ ಉಲ್ಕೆಯೂ ಅಲ್ಲ.... ಎಲ್ಲವೂ ಇರುವುದು ನಮ್ಮೊಳಗೆ. ಕೇವಲ ನಮ್ಮೊಳಗೆ ಮಾತ್ರ ...!

- R.R.B.

ಭಾನುವಾರ, ಜನವರಿ 14, 2018

ಶೀರ್ಷಿಕೆ ಇಲ್ಲದ ಸಾಲುಗಳು

ಮುಂಜಾನೆಯ ಈ ಸವಿ ಸಮಯಕೆ 
ಹೊಂಬಿಸಿಲಿನ ಸಿಹಿ ಸ್ಪರ್ಷ ಇಳೆಗೆ 
ಆಲಂಗಿಸೋ ತಂಬೆಲರ ಮೌನರಾಗಕೆ 
ತಲೆದೂಗೋ ಆನಂದ ಚಿಗುರೆಲೆಗೆ... 

ಎತ್ತರಕೆ ಬೆಳೆದುನಿಂತ ಕಲ್ಪವೃಕ್ಷಕೋ 
ನೀಲಾಕಾಶವ ಚುಂಬಿಸುವ ಬಯಕೆ 
ಗಿಡಗಳ ತಬ್ಬಿಕೊಂಡ ಮುಳ್ಳುಬೇಲಿಗೋ 
ಆಗಾಗ ಬರುವ ಯಜಮಾನನದೇ ಸ್ಮರಿಕೆ... 

ಗದ್ದೆಯಂಚಲಿನ್ನೂ ನಿದ್ದೆಮಂಪರಿನ ರಸ್ತೆ 
ಕಾಲುದಾರಿಯ ಪಯಣದಲಿಹ ಯಾತ್ರಿಕ 
ತಿಳಿಸದೇ ಸಂಗಾತಿಯಾಗಿವೆ ಹೆಜ್ಜೆ ಸದ್ದು 
ಇನ್ನೆಲ್ಲೋ ಸದ್ದಿಲ್ಲದೆ ಕಾಯುತಿದೆ ನೆರಳು...  

ಹಸಿರಸೀರೆಯ ಸೆರಗಿಗೆ ಸೊಬಗ ಚಿತ್ತಾರ 
ಮನದ ಕಡಲಲಿ ಈಗೀಗ ಬರೀ ಉಬ್ಬರ... 
ಬೀಸೋ ಗಾಳಿಯಲೆಗೆ ಹಾಯಿ ಬಿಸಿಲಕೋಲು 
ಗೊತ್ತಾಗದಂತೆ ಪ್ರಸವಿಸಿದ ಭಾವಗಳು ಸಾಲು ಸಾಲು...

- R.R. B.

ಹುಚ್ಚು ಹುಡುಗಿಯ ಬಿಚ್ಚು ಮಾತುಗಳು...

               ಇನಿಯಾ, ನಂಗೆ ಗೊತ್ತು - ಈ ಓಲೆ ಓದಿದ್ಮೇಲೆ ನೀನು ತುಂಬಾ ಅಳ್ತೀಯ ಅಂತ. ಆದ್ರೆ ಕೆಲ ವಿಷ್ಯಗಳು ನೇರವಾಗಿದ್ರೇನೇ ಒಳ್ಳೇದು ಅಂತ ನನ್ನ ಅನಿಸಿಕೆ. ನಿನ್ನ ಪ್ರೀತಿಯ ಮಳೆಯಿಂದ ನಾನೀಗ ಪರಿಶುದ್ಧ. ನಿನ್ನ ಭರವಸೆಯ ನುಡಿಗಳೇ ನನ್ನೀ ಬದುಕಿಗೆ ಆಧಾರಸ್ತಂಭ. ನಿನ್ನೊಂದಿಗೆ ಕಳೆದ ಕ್ಷಣಗಳು ನನ್ನ ಬಾಳಿನ ಅತ್ಯಂತ ಸುಂದರ ಘಳಿಗೆಗಳು.....

                    "ನೀನೇ ನನ್ನ ಜೀವ" ಅನ್ನೋ ದೊಡ್ಡ ಮಾತು ನಾ ಹೇಳಲಾರೆ ಗೆಳೆಯಾ. ಯಾಕಂದ್ರೆ ನಿನ್ನ ಆಗಮನದ ಮೊದಲೂ ನಾನು ಬದುಕುತ್ತಿದೆ ನನಗಾಗಿ... ಆದರೆ ನೀ ಬಂದ ಮೇಲೆ ನನ್ನ ಬಾಳಪುಟದಲ್ಲಿ ಸಾವಿರಾರು ಸವಿನೆನಪುಗಳ ದಾಖಲೀಕರಣ...ಖಾಲಿ ಹಾಳೆಯಲ್ಲಿ ಬಣ್ಣ ಬಣ್ಣದ ಚೆಂದದ ಚಿತ್ತಾರ ಬರೆದವ ನೀನು! ನನ್ನಂತರಂಗದ ಮೌನಕ್ಕೆ ಮಾತಿನ ರೂಪ ಕೊಟ್ಟವ ನೀನು! ನಾ ಕಾಣೋ ಕನಸಿಗೆ ಒಂದೊಳ್ಳೆ ಅರ್ಥ ಕಲ್ಪಿಸಿದವ ನೀನು! ಏಕತಾನತೆಯ ವೇಳೆಯಲಿ ನವಿರಾದ ಏರಿಳಿತ ತಂದವ ನೀನು! ಹುಚ್ಚು ಹುಡುಗಿಯಂತವಳನ್ನು ಆಗಾಗ ಹೆಣ್ಣಾಗಿಸಿದ್ದು ನೀನು! ಜೀವನದ ಗಮ್ಯಗಳತ್ತ ಗಮನ ತಂದವ ನೀನು! ಪ್ರೀತಿ ಬೊಗಸೆಯೊಳಗಣ ನೀರಲ್ಲ, ಅದು ಸಾಗರದಂತೆ ವಿಶಾಲ ಎಂದು ಕಲಿಸಿದ್ದು ನೀನು! ಒಮ್ಮೊಮ್ಮೆ ತಿಳಿಯದೇ ಮೂಡುವ ನನ್ನ ಮುಗುಳ್ನಗೆ ನೀನು.....!! 

                   ಇದಕ್ಕೆ ನಾನು ಎಂದೆಂದೂ ಚಿರ ಋಣಿ... ಗೆಳೆಯಾ, ನಿನ್ನೊಂದಿಗೆ ಕಳೆದ ಪ್ರತಿ ನಿಮಿಷವೂ ನನ್ನ ಮನದಂಗಳದಿ ಹಚ್ಚ ಹಸಿರು...ಅತಿಯಾದರೆ ಅಮೃತವೂ ವಿಷವಂತೆ. ನಿನ್ನ ಪ್ರೀತಿ ಅಷ್ಟೆತ್ತರ ತಲುಪಿದೆ. "ಈ ಮಟ್ಟದ ಅನುರಾಗಕ್ಕೆ ನಾನು ಅರ್ಹಳೇ?" ಅನ್ನೋ ಪ್ರಶ್ನೆ ನನ್ನ ಕಾಡುತ್ತಿದೆ ಮಿತ್ರಾ... ನೀನಿಲ್ಲದೇ ಬದುಕೇ ಇಲ್ಲವೇನೋ ಎಂಬಷ್ಟು ಗೀಳು ನಿನ್ನ ಬಗ್ಗೆ... ಆದರೆ ಬಾಲ್ಯದ ಕನಸುಗಳ ನನಸಾಗಿಸೋ ಜವಾಬ್ದಾರಿ ಇನ್ನೂ ಬಾಕಿಯಿದೆ. ನಿನ್ನ ಪ್ರೀತಿಯ ಮಡದಿಯಾಗೋ ಮುನ್ನ ಅಪ್ಪ - ಅಮ್ಮನಿಗೆ ಸಾರ್ಥಕ ಮಗಳಾಗಬೇಕು ನಾನು... ಕಂಡ ವರ್ಣರಂಜಿತ ಸ್ವಪ್ನಗಳಿಗೆ ಅರ್ಥ ತುಂಬಿ ಸಾಕಾರ ರೂಪ ಕೊಟ್ಟು ಸಾರ್ಥಕ್ಯ ಪಡೆಯಬೇಕು ನಾನು... ಅದಕ್ಕಾಗಿ ನಿನ್ನಿಂದ ನನ್ನ, ನನ್ನಿಂದ ನಿನ್ನ ಬಿಟುಗಡೆ ಅನಿವಾರ್ಯ ಗೆಳೆಯಾ... 

                   ನಿನಗೆ ಗೊತ್ತಿದೆಯೋ ಇಲ್ಲವೋ - ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುವ ಶಕ್ತಿ ವಿರಹಕ್ಕಿದೆಯೆಂದು ! ನಿನ್ನೀ ಕಪ್ಪು ಕಂಗಳ ಚೆಲುವೆ ನಿನ್ನ ಬಿಟ್ಟು ಓಡಿಹೋದಳೆಂದು ಎಂದೂ ಭಾವಿಸ್ಬೇಡ... ತುಸು ವಿರಾಮಬೇಕಿದೆ ಸಿಹಿನೆನಪುಗಳ ಸವಿಯಲು. ಖಾಲಿಯಾಗಬೇಕಿದೆ ಹೊಸತನವ ತುಂಬಿಕೊಳಲು. ಏಕಾಂಗಿಯಾಗಬೇಕಿದೆ ಯೋಚನೆಗಳ ಬಂಡಿ ಏರಲು..... 

               ನಾನು ಮತ್ತೆ ಬರುತ್ತೇನೆ - ಇನ್ನಷ್ಟು ಸಂತಸದ ಘಳಿಗೆ ಹೊತ್ತು. ಆಗ ನೆನಪಿನ ಬುತ್ತಿ ಬಿಚ್ಚಿ ಸವಿಯೋಣ..ಬೆಳದಿಂಗಳ ಬೆಳಕಲಿ ಒಬ್ಬರಿಗೊಬ್ಬರು ಪ್ರೀತಿಯ ತುತ್ತು ತಿನಿಸೋಣ..ಮನ ಬಂದಷ್ಟು ಹೊತ್ತು ಹರಟೋಣ..ಕತ್ತಲೂ ನಾಚುವಂತೆ ಕೂಡೋಣ... ಅಲ್ಲಿಯವರೆಗೆ ಈ ಗೆಳತಿ ನಿನ್ನ ನೆನಪಿನಲ್ಲುಳಿಯುತ್ತಾಳೆಂಬುದು ನನ್ನ ನಂಬಿಕೆ. ಅದು ಹುಸಿಯಾಗದಿರಲೆಂದು ಆಶಿಸುತ್ತಾ... 

 - R. R. B.

ಬದುಕ ಸಂತೆಯಲಿ...

ಓಡಾಡುತ್ತೇವೆ ತುಂಬಿದ ಸಂತೆಯೊಳಗೆ 
ಬೇಕು - ಬೇಡಗಳನು ಹುಡುಕುತ್ತ 
ಕಾಲಿಗೆ ಸಿಗುವವರನ್ನು ತಡಕುತ್ತ... 
ಯಾವುದೋ ಮಂಪರಿಗೆ ಸಿಕ್ಕವರಂತೆ 
ಹುಡುಕಾಟ ಮುಂದುವರಿಸಿದ್ದೇವೆ 
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!! 

ಸುಡುತ್ತಿದೆ ಅಪರಾಹ್ನದ ಉರಿಬಿಸಿಲು 
ತಲೆಯೊಳಗೆ ಯೋಚನೆಗಳೋ ಗೋಜಲು 
ಸುಮ್ಮನೇ ನಡೆಯುತ್ತೇವೆ - ಏನೊಂದೂ ಖರೀದಿಸದೇ... 

"ಅಕ್ಕಾ, ಟೊಮ್ಯಾಟೋ ಚೆನ್ನಾಗಿದೆ ಬನ್ನಿ ತಗೊಳ್ಳಿ...." 
ಎಂಬ ಕರೆತ ಕಿವಿಗಪ್ಪಳಿಸುತ್ತದೆ ಅಷ್ಟೇ 
ಸ್ಪಂದಿಸುವ ಮನಕೀಗ ತುಂಬ ಬರಗಾಲ... 
ಆದರೂ ಹುಡುಕಾಟ ಮುಂದುವರಿಸಿದ್ದೇವೆ 
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!! 

ಸಂತೆಪೂರ್ತಿ ಸುತ್ತಿ ಸುಸ್ತಾದ ಮೇಲೆ ಅನಿಸುತ್ತದೆ 
"ರಿಲಾಯನ್ಸ್ ಫ್ರೆಶೇ ಬೆಟರು.." 
ಸುರಿಸಬೇಕಿಲ್ಲ ಸುಡು ಬಿಸಿಲಿಗೆ ಬೆವರು... 

"ಸರಿ, ಬನ್ನಿ ಅಲ್ಲಿಗೇ ಹೊರಡೋಣ...." 
ಇತ್ತ ಪಕ್ಕದಲಿದ್ದ ತಾಜಾ ತರಕಾರಿಗಳತ್ತ 
ಸರಿಯಾಗಿ ಕಣ್ಣು ಹಾಯಿಸಲೂ ಇಲ್ಲ... 
ಕರೆಯುತ್ತಿದ್ದ ಪುಟ್ಟ ಹುಡುಗ ಸುಮ್ಮನಾದ... 

ಸದ್ದಿಲ್ಲದೇ ಪಯಣ ಅತ್ತ ಸಾಗುತ್ತದೆ 
ಮನದಲೇ ಕೊಳ್ಳಬೇಕಾದ ವಸ್ತುಗಳ ಪಟ್ಟಿ ಎಲ್ಲವೂ ಇವೆ - 
ಹವಾನಿಯಂತ್ರಿತ ಹಾಲೊಂದರಲ್ಲಿ ... 

ಆಯ್ದುಕೊಳ್ಳುವಾಗ ನೋಡಿದರೆ ಅಷ್ಟಕ್ಕಷ್ಟೇ 
ತಾಜಾತನವಿನಿತೂ ಇಲ್ಲ ಕೂಡಿಟ್ಟ ತರಕಾರಿಗಳಲಿ 
ಮುಗುಳ್ನಗೆಯಿಲ್ಲ ಚಿಲ್ಲರೆ ಕೊಡುವವನ ಮೊಗದಲ್ಲಿ.... 

ಹೊರಬರುವಾಗ ಸಂಪೂರ್ಣ ನಿಶ್ಯಬ್ಧ 
ಅನಿಸುತ್ತದೆ ಒಮ್ಮೆಲೇ ಪ್ರಪಂಚವೇ ಸ್ತಬ್ಧ... 
ಮನಕಿಲ್ಲ ಕಿಂಚಿತ್ತೂ ಸಮಾಧಾನ...
ಅದಕೇ ಮತ್ತೆ ಹುಡುಕಾಟ ಮುಂದುವರಿಸಿದ್ದೇವೆ 
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!! 

- R. R. B

ಒಡಲ ದನಿ..

                    ನಾವೀಗ ಬಹಳ ಪ್ರಗತಿ ಸಾಧಿಸಿದ್ದೇವೆ. ಯಾವ ತಂತ್ರಜ್ಞಾನದಲ್ಲೂ ಯಾರಿಗೂ ಕಮ್ಮಿಯಿಲ್ಲ... ತುಂಬಾ ಮಾತನಾಡುತ್ತೇವೆ - ಪಕ್ಕ ಇರುವವರೊಂದಿಗಲ್ಲ, ಕಂಪ್ಯೂಟರ್ ಸ್ಕ್ರೀನಿನ ಜೊತೆ, ಕೈಯಲ್ಲಿ ಬೆಚ್ಚಗೆ ಕುಳಿತು ಜಗತ್ತನ್ನೇ ಅಂಗೈಯಲ್ಲಿಡುವ so called "ಮೊಬೈಲ್" ಎಂಬ ಸಾಧನದ ಜೊತೆಗೆ..... ಕಳೆದು ಹೋಗುತ್ತೇವೆ - ಜೀವನದ ಸುಂದರ ಅನುಭೂತಿಗಳಲ್ಲಲ್ಲ, ಸ್ನೇಹ - ಬಾಂಧವ್ಯಗಳ ಮಡಿಲಲ್ಲೂ ಅಲ್ಲ, ಆಫೀಸಿನ ಯಾವುದೋ ಮೂಲೆಯಲ್ಲಿ ಕುಳಿತು ಕೆಲಸ ಮುಗಿಸುವ ಧಾವಂತದಲ್ಲಿ...ಒಮ್ಮೊಮ್ಮೆ ಸಾಕೆನ್ನಿಸಿಬಿಡುವ ನಮ್ಮದಲ್ಲದ ವೃತ್ತಿಜೀವನದಲ್ಲಿ.... 

               ನಾವು ಸಾಕಷ್ಟೇ ಬೆಳೆದಿದ್ದೇವೆ... ಬಾಲ್ಯದ ಹಾಗೆ ಬರೀ ಮುಗ್ಧತೆಯಿಲ್ಲ. ಸ್ವಾರ್ಥದ ಪರದೆಯಿದೆ. ಆಗ ಯಾವುದನ್ನೂ ಲೆಕ್ಕಿಸದ ನಾವು ಈಗ ಪ್ರತಿಯೊಂದನ್ನೂ "ಲೆಕ್ಕಿಸುತ್ತೇವೆ". ಕೂಡುವ, ಕಳೆಯುವ, ಗುಣಿಸಿ ಭಾಗಿಸುವ ಲೆಕ್ಕಾಚಾರದಲ್ಲಿ ಮುಳುಗಿ ಹೋಗುತ್ತೇವೆ...ಅಯ್ಯೋ, ನಾವು ವಾಣಿಜ್ಯ ಪದವೀಧರರು ಸ್ವಾಮಿ!! ಲೆಕ್ಕಾಚಾರವೇ ನಮ್ಮ ಧರ್ಮ. ಅದೇ ನಮ್ಮ ಕರ್ಮ !!! 

                  ನಾವು ತುಂಬಾ ಬದಲಾಗಿದ್ದೇವೆ... ಸುಮ್ಮನೆ ದಾರಿಯಲ್ಲಿ ಸಿಗುವ ಯಾರನ್ನೋ ಕಂಡು ಮುಗುಳ್ನಗುವುದಿಲ್ಲ. ಅಳತೆ - ಅಂದಾಜು ಮಾಡಿ, ಕೆಲಸ ಆಗಬೇಕೆಂದರೆ ತುಸು ನಕ್ಕ ಹಾಗೆ ನಟಿಸುತ್ತೇವೆ...ಆಗೆಲ್ಲಾ ಮಳೆ ಬಂದರೆ ಮನೆಯಿಂದ ಹೊರಬಂದು ಕಾಗದದ ದೋಣಿ ಮಾಡಿ ಸಂಭ್ರಮಿಸುತ್ತಿದ್ದ ಮನ ಈಗ ಮಹಾನಗರದ ಆಫೀಸೊಂದರಲ್ಲಿ ಕುಳಿತು " ಥೂ...ಈ ಮಳೆ ಯಾಕಾದ್ರೂ ಬರತ್ತೋ.." ಅಂತ ಕಸಿವಿಸಿಗೊಳ್ಳುತ್ತೆ...ಕೆಲವೇ ನಿಮಿಷಗಳಲ್ಲಿ ಪರಿಚಯವಾಗಿ ಸ್ನೇಹ ಗಟ್ಟಿಯಾಗುತ್ತಿದ್ದ ಕಾಲ ಈಗ ಹಳೇಯದಾಯ್ತು. ಈಗೇನಿದ್ರೂ ದಿನವಿಡೀ ಒಂದೇ ಸೂರಿನಡಿ ಕೆಲಸ ಮಾಡಿದರೂ, ಒಂದೇ ಕಾಲೇಜಲ್ಲೇ ಕಲಿತರೂ ಅಲ್ಲಿಂದ ಹೊರಗೆ ಕಳಿಡುತ್ತಲೇ ಎಲ್ಲರೂ "ಅಪರಿಚಿತ" ರಾಗಿಬಿಡ್ತಾರೆ... 

                 ನಾವು ಬಲು ಚುರುಕಾಗಿದ್ದೇವೆ... ಯಾವ ಸಂದರ್ಭದಲ್ಲಿ ಹೇಗೆ ಲಾಭ ಮಾಡಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಕಲಿತಿದ್ದೇವೆ. ಮಾನವೀಯತೆ? ಅಯ್ಯೋ, ಅದಕ್ಕೆ ಯಾವ ಮಾರ್ಕೆಟ್ಟಿನಲ್ಲೂ ಬೆಲೆ ಇಲ್ಲ ಬಿಡಿ. ಹೀಗಾಗಿ ನಾವು ಅದನ್ನ ಮರೆತೇ ಬಿಟ್ಟಿದ್ದೇವೆ...ಇನ್ನೂ ಏನೇನೋ ಹೇಳಬೇಕು ಅಂತ ಉದ್ದದ ಕವನ ಬರೆಯೋಣ ಅಂತ ಅಂದ್ಕೊಂಡಿದ್ದೆ... ರಸ್ತೆಯಲ್ಲಿ ಹೋಗುವಾಗ ಕಣ್ಮುಂದೇ ಅಪಘಾತವಾದ್ರೂ ನೋಡದೇ ಗಡಿಬಿಡಿಯಿಂದ ಓಡುವ ನಮ್ಮಂಥವರಿಗೆ ಕಥೆ - ಕವನ ಓದಲು ಪುರ್ಸೊತ್ತೆಲ್ಲಿರತ್ತೆ?... ಅಂತ ಸುಮ್ಮನಾದೆ.... 
#ಮಾತೀಗ_ಮೌನದ_ಮಡಿಲಲ್ಲಿ.... 

 -R.R.B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...