ನಾವು ಸಾಕಷ್ಟೇ ಬೆಳೆದಿದ್ದೇವೆ...
ಬಾಲ್ಯದ ಹಾಗೆ ಬರೀ ಮುಗ್ಧತೆಯಿಲ್ಲ. ಸ್ವಾರ್ಥದ ಪರದೆಯಿದೆ. ಆಗ ಯಾವುದನ್ನೂ ಲೆಕ್ಕಿಸದ ನಾವು ಈಗ ಪ್ರತಿಯೊಂದನ್ನೂ "ಲೆಕ್ಕಿಸುತ್ತೇವೆ". ಕೂಡುವ, ಕಳೆಯುವ, ಗುಣಿಸಿ ಭಾಗಿಸುವ ಲೆಕ್ಕಾಚಾರದಲ್ಲಿ ಮುಳುಗಿ ಹೋಗುತ್ತೇವೆ...ಅಯ್ಯೋ, ನಾವು ವಾಣಿಜ್ಯ ಪದವೀಧರರು ಸ್ವಾಮಿ!! ಲೆಕ್ಕಾಚಾರವೇ ನಮ್ಮ ಧರ್ಮ. ಅದೇ ನಮ್ಮ ಕರ್ಮ !!!
ನಾವು ತುಂಬಾ ಬದಲಾಗಿದ್ದೇವೆ...
ಸುಮ್ಮನೆ ದಾರಿಯಲ್ಲಿ ಸಿಗುವ ಯಾರನ್ನೋ ಕಂಡು ಮುಗುಳ್ನಗುವುದಿಲ್ಲ. ಅಳತೆ - ಅಂದಾಜು ಮಾಡಿ, ಕೆಲಸ ಆಗಬೇಕೆಂದರೆ ತುಸು ನಕ್ಕ ಹಾಗೆ ನಟಿಸುತ್ತೇವೆ...ಆಗೆಲ್ಲಾ ಮಳೆ ಬಂದರೆ ಮನೆಯಿಂದ ಹೊರಬಂದು ಕಾಗದದ ದೋಣಿ ಮಾಡಿ ಸಂಭ್ರಮಿಸುತ್ತಿದ್ದ ಮನ ಈಗ ಮಹಾನಗರದ ಆಫೀಸೊಂದರಲ್ಲಿ ಕುಳಿತು " ಥೂ...ಈ ಮಳೆ ಯಾಕಾದ್ರೂ ಬರತ್ತೋ.." ಅಂತ ಕಸಿವಿಸಿಗೊಳ್ಳುತ್ತೆ...ಕೆಲವೇ ನಿಮಿಷಗಳಲ್ಲಿ ಪರಿಚಯವಾಗಿ ಸ್ನೇಹ ಗಟ್ಟಿಯಾಗುತ್ತಿದ್ದ ಕಾಲ ಈಗ ಹಳೇಯದಾಯ್ತು. ಈಗೇನಿದ್ರೂ ದಿನವಿಡೀ ಒಂದೇ ಸೂರಿನಡಿ ಕೆಲಸ ಮಾಡಿದರೂ, ಒಂದೇ ಕಾಲೇಜಲ್ಲೇ ಕಲಿತರೂ ಅಲ್ಲಿಂದ ಹೊರಗೆ ಕಳಿಡುತ್ತಲೇ ಎಲ್ಲರೂ "ಅಪರಿಚಿತ" ರಾಗಿಬಿಡ್ತಾರೆ...
ನಾವು ಬಲು ಚುರುಕಾಗಿದ್ದೇವೆ...
ಯಾವ ಸಂದರ್ಭದಲ್ಲಿ ಹೇಗೆ ಲಾಭ ಮಾಡಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಕಲಿತಿದ್ದೇವೆ. ಮಾನವೀಯತೆ? ಅಯ್ಯೋ, ಅದಕ್ಕೆ ಯಾವ ಮಾರ್ಕೆಟ್ಟಿನಲ್ಲೂ ಬೆಲೆ ಇಲ್ಲ ಬಿಡಿ. ಹೀಗಾಗಿ ನಾವು ಅದನ್ನ ಮರೆತೇ ಬಿಟ್ಟಿದ್ದೇವೆ...ಇನ್ನೂ ಏನೇನೋ ಹೇಳಬೇಕು ಅಂತ ಉದ್ದದ ಕವನ ಬರೆಯೋಣ ಅಂತ ಅಂದ್ಕೊಂಡಿದ್ದೆ... ರಸ್ತೆಯಲ್ಲಿ ಹೋಗುವಾಗ ಕಣ್ಮುಂದೇ ಅಪಘಾತವಾದ್ರೂ ನೋಡದೇ ಗಡಿಬಿಡಿಯಿಂದ ಓಡುವ ನಮ್ಮಂಥವರಿಗೆ ಕಥೆ - ಕವನ ಓದಲು ಪುರ್ಸೊತ್ತೆಲ್ಲಿರತ್ತೆ?... ಅಂತ ಸುಮ್ಮನಾದೆ....
#ಮಾತೀಗ_ಮೌನದ_ಮಡಿಲಲ್ಲಿ....
-R.R.B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ