ಭಾನುವಾರ, ಜನವರಿ 14, 2018

ಹುಚ್ಚು ಹುಡುಗಿಯ ಬಿಚ್ಚು ಮಾತುಗಳು...

               ಇನಿಯಾ, ನಂಗೆ ಗೊತ್ತು - ಈ ಓಲೆ ಓದಿದ್ಮೇಲೆ ನೀನು ತುಂಬಾ ಅಳ್ತೀಯ ಅಂತ. ಆದ್ರೆ ಕೆಲ ವಿಷ್ಯಗಳು ನೇರವಾಗಿದ್ರೇನೇ ಒಳ್ಳೇದು ಅಂತ ನನ್ನ ಅನಿಸಿಕೆ. ನಿನ್ನ ಪ್ರೀತಿಯ ಮಳೆಯಿಂದ ನಾನೀಗ ಪರಿಶುದ್ಧ. ನಿನ್ನ ಭರವಸೆಯ ನುಡಿಗಳೇ ನನ್ನೀ ಬದುಕಿಗೆ ಆಧಾರಸ್ತಂಭ. ನಿನ್ನೊಂದಿಗೆ ಕಳೆದ ಕ್ಷಣಗಳು ನನ್ನ ಬಾಳಿನ ಅತ್ಯಂತ ಸುಂದರ ಘಳಿಗೆಗಳು.....

                    "ನೀನೇ ನನ್ನ ಜೀವ" ಅನ್ನೋ ದೊಡ್ಡ ಮಾತು ನಾ ಹೇಳಲಾರೆ ಗೆಳೆಯಾ. ಯಾಕಂದ್ರೆ ನಿನ್ನ ಆಗಮನದ ಮೊದಲೂ ನಾನು ಬದುಕುತ್ತಿದೆ ನನಗಾಗಿ... ಆದರೆ ನೀ ಬಂದ ಮೇಲೆ ನನ್ನ ಬಾಳಪುಟದಲ್ಲಿ ಸಾವಿರಾರು ಸವಿನೆನಪುಗಳ ದಾಖಲೀಕರಣ...ಖಾಲಿ ಹಾಳೆಯಲ್ಲಿ ಬಣ್ಣ ಬಣ್ಣದ ಚೆಂದದ ಚಿತ್ತಾರ ಬರೆದವ ನೀನು! ನನ್ನಂತರಂಗದ ಮೌನಕ್ಕೆ ಮಾತಿನ ರೂಪ ಕೊಟ್ಟವ ನೀನು! ನಾ ಕಾಣೋ ಕನಸಿಗೆ ಒಂದೊಳ್ಳೆ ಅರ್ಥ ಕಲ್ಪಿಸಿದವ ನೀನು! ಏಕತಾನತೆಯ ವೇಳೆಯಲಿ ನವಿರಾದ ಏರಿಳಿತ ತಂದವ ನೀನು! ಹುಚ್ಚು ಹುಡುಗಿಯಂತವಳನ್ನು ಆಗಾಗ ಹೆಣ್ಣಾಗಿಸಿದ್ದು ನೀನು! ಜೀವನದ ಗಮ್ಯಗಳತ್ತ ಗಮನ ತಂದವ ನೀನು! ಪ್ರೀತಿ ಬೊಗಸೆಯೊಳಗಣ ನೀರಲ್ಲ, ಅದು ಸಾಗರದಂತೆ ವಿಶಾಲ ಎಂದು ಕಲಿಸಿದ್ದು ನೀನು! ಒಮ್ಮೊಮ್ಮೆ ತಿಳಿಯದೇ ಮೂಡುವ ನನ್ನ ಮುಗುಳ್ನಗೆ ನೀನು.....!! 

                   ಇದಕ್ಕೆ ನಾನು ಎಂದೆಂದೂ ಚಿರ ಋಣಿ... ಗೆಳೆಯಾ, ನಿನ್ನೊಂದಿಗೆ ಕಳೆದ ಪ್ರತಿ ನಿಮಿಷವೂ ನನ್ನ ಮನದಂಗಳದಿ ಹಚ್ಚ ಹಸಿರು...ಅತಿಯಾದರೆ ಅಮೃತವೂ ವಿಷವಂತೆ. ನಿನ್ನ ಪ್ರೀತಿ ಅಷ್ಟೆತ್ತರ ತಲುಪಿದೆ. "ಈ ಮಟ್ಟದ ಅನುರಾಗಕ್ಕೆ ನಾನು ಅರ್ಹಳೇ?" ಅನ್ನೋ ಪ್ರಶ್ನೆ ನನ್ನ ಕಾಡುತ್ತಿದೆ ಮಿತ್ರಾ... ನೀನಿಲ್ಲದೇ ಬದುಕೇ ಇಲ್ಲವೇನೋ ಎಂಬಷ್ಟು ಗೀಳು ನಿನ್ನ ಬಗ್ಗೆ... ಆದರೆ ಬಾಲ್ಯದ ಕನಸುಗಳ ನನಸಾಗಿಸೋ ಜವಾಬ್ದಾರಿ ಇನ್ನೂ ಬಾಕಿಯಿದೆ. ನಿನ್ನ ಪ್ರೀತಿಯ ಮಡದಿಯಾಗೋ ಮುನ್ನ ಅಪ್ಪ - ಅಮ್ಮನಿಗೆ ಸಾರ್ಥಕ ಮಗಳಾಗಬೇಕು ನಾನು... ಕಂಡ ವರ್ಣರಂಜಿತ ಸ್ವಪ್ನಗಳಿಗೆ ಅರ್ಥ ತುಂಬಿ ಸಾಕಾರ ರೂಪ ಕೊಟ್ಟು ಸಾರ್ಥಕ್ಯ ಪಡೆಯಬೇಕು ನಾನು... ಅದಕ್ಕಾಗಿ ನಿನ್ನಿಂದ ನನ್ನ, ನನ್ನಿಂದ ನಿನ್ನ ಬಿಟುಗಡೆ ಅನಿವಾರ್ಯ ಗೆಳೆಯಾ... 

                   ನಿನಗೆ ಗೊತ್ತಿದೆಯೋ ಇಲ್ಲವೋ - ಪ್ರೀತಿಯನ್ನು ಮತ್ತಷ್ಟು ಗಾಢವಾಗಿಸುವ ಶಕ್ತಿ ವಿರಹಕ್ಕಿದೆಯೆಂದು ! ನಿನ್ನೀ ಕಪ್ಪು ಕಂಗಳ ಚೆಲುವೆ ನಿನ್ನ ಬಿಟ್ಟು ಓಡಿಹೋದಳೆಂದು ಎಂದೂ ಭಾವಿಸ್ಬೇಡ... ತುಸು ವಿರಾಮಬೇಕಿದೆ ಸಿಹಿನೆನಪುಗಳ ಸವಿಯಲು. ಖಾಲಿಯಾಗಬೇಕಿದೆ ಹೊಸತನವ ತುಂಬಿಕೊಳಲು. ಏಕಾಂಗಿಯಾಗಬೇಕಿದೆ ಯೋಚನೆಗಳ ಬಂಡಿ ಏರಲು..... 

               ನಾನು ಮತ್ತೆ ಬರುತ್ತೇನೆ - ಇನ್ನಷ್ಟು ಸಂತಸದ ಘಳಿಗೆ ಹೊತ್ತು. ಆಗ ನೆನಪಿನ ಬುತ್ತಿ ಬಿಚ್ಚಿ ಸವಿಯೋಣ..ಬೆಳದಿಂಗಳ ಬೆಳಕಲಿ ಒಬ್ಬರಿಗೊಬ್ಬರು ಪ್ರೀತಿಯ ತುತ್ತು ತಿನಿಸೋಣ..ಮನ ಬಂದಷ್ಟು ಹೊತ್ತು ಹರಟೋಣ..ಕತ್ತಲೂ ನಾಚುವಂತೆ ಕೂಡೋಣ... ಅಲ್ಲಿಯವರೆಗೆ ಈ ಗೆಳತಿ ನಿನ್ನ ನೆನಪಿನಲ್ಲುಳಿಯುತ್ತಾಳೆಂಬುದು ನನ್ನ ನಂಬಿಕೆ. ಅದು ಹುಸಿಯಾಗದಿರಲೆಂದು ಆಶಿಸುತ್ತಾ... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...