ಬೇಕು - ಬೇಡಗಳನು ಹುಡುಕುತ್ತ
ಕಾಲಿಗೆ ಸಿಗುವವರನ್ನು ತಡಕುತ್ತ...
ಯಾವುದೋ ಮಂಪರಿಗೆ ಸಿಕ್ಕವರಂತೆ
ಹುಡುಕಾಟ ಮುಂದುವರಿಸಿದ್ದೇವೆ
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!!
ಸುಡುತ್ತಿದೆ ಅಪರಾಹ್ನದ ಉರಿಬಿಸಿಲು
ತಲೆಯೊಳಗೆ ಯೋಚನೆಗಳೋ ಗೋಜಲು
ಸುಮ್ಮನೇ ನಡೆಯುತ್ತೇವೆ - ಏನೊಂದೂ ಖರೀದಿಸದೇ...
"ಅಕ್ಕಾ, ಟೊಮ್ಯಾಟೋ ಚೆನ್ನಾಗಿದೆ ಬನ್ನಿ ತಗೊಳ್ಳಿ...."
ಎಂಬ ಕರೆತ ಕಿವಿಗಪ್ಪಳಿಸುತ್ತದೆ ಅಷ್ಟೇ
ಸ್ಪಂದಿಸುವ ಮನಕೀಗ ತುಂಬ ಬರಗಾಲ...
ಆದರೂ ಹುಡುಕಾಟ ಮುಂದುವರಿಸಿದ್ದೇವೆ
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!!
ಸಂತೆಪೂರ್ತಿ ಸುತ್ತಿ ಸುಸ್ತಾದ ಮೇಲೆ
ಅನಿಸುತ್ತದೆ
"ರಿಲಾಯನ್ಸ್ ಫ್ರೆಶೇ ಬೆಟರು.."
ಸುರಿಸಬೇಕಿಲ್ಲ ಸುಡು ಬಿಸಿಲಿಗೆ ಬೆವರು...
"ಸರಿ, ಬನ್ನಿ ಅಲ್ಲಿಗೇ ಹೊರಡೋಣ...."
ಇತ್ತ ಪಕ್ಕದಲಿದ್ದ ತಾಜಾ ತರಕಾರಿಗಳತ್ತ
ಸರಿಯಾಗಿ ಕಣ್ಣು ಹಾಯಿಸಲೂ ಇಲ್ಲ...
ಕರೆಯುತ್ತಿದ್ದ ಪುಟ್ಟ ಹುಡುಗ ಸುಮ್ಮನಾದ...
ಸದ್ದಿಲ್ಲದೇ ಪಯಣ ಅತ್ತ ಸಾಗುತ್ತದೆ
ಮನದಲೇ ಕೊಳ್ಳಬೇಕಾದ ವಸ್ತುಗಳ ಪಟ್ಟಿ ಎಲ್ಲವೂ ಇವೆ -
ಹವಾನಿಯಂತ್ರಿತ ಹಾಲೊಂದರಲ್ಲಿ ...
ಆಯ್ದುಕೊಳ್ಳುವಾಗ ನೋಡಿದರೆ ಅಷ್ಟಕ್ಕಷ್ಟೇ
ತಾಜಾತನವಿನಿತೂ ಇಲ್ಲ ಕೂಡಿಟ್ಟ ತರಕಾರಿಗಳಲಿ
ಮುಗುಳ್ನಗೆಯಿಲ್ಲ ಚಿಲ್ಲರೆ ಕೊಡುವವನ ಮೊಗದಲ್ಲಿ....
ಹೊರಬರುವಾಗ ಸಂಪೂರ್ಣ ನಿಶ್ಯಬ್ಧ
ಅನಿಸುತ್ತದೆ ಒಮ್ಮೆಲೇ ಪ್ರಪಂಚವೇ ಸ್ತಬ್ಧ...
ಮನಕಿಲ್ಲ ಕಿಂಚಿತ್ತೂ ಸಮಾಧಾನ...
ಅದಕೇ
ಮತ್ತೆ ಹುಡುಕಾಟ ಮುಂದುವರಿಸಿದ್ದೇವೆ
ಎಂದು ಸುಮ್ಮನಾಗುತ್ತೇವೋ ಗೊತ್ತಿಲ್ಲ....!!
- R. R. B
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ