ಬುಧವಾರ, ಜುಲೈ 29, 2020

ಕಾಮರ್ಸ್_ಕವಿತೆಗಳು_31

ಹೊರಗೆ ಜಡಿಮಳೆ ಸುರಿಯುತ್ತಿದ್ದರೂ
ಆಫೀಸಿನೊಳಗೆ ಸದಾ ಏಸಿಯ ತಂಗಾಳಿ 
ಚಿಂತೆಗೆ ಬಿಸಿಯಾದ ತಲೆಯ ತಣಿಸಲೋ?
ಅಥವಾ ಕ್ಲೈಂಟುಗಳ ಫೀಸ್ ಏರಿಸಲೋ? 

- R. R. B.

ಶನಿವಾರ, ಜುಲೈ 25, 2020

ಕಳೆದುಹೋದ ಕವಿತೆ...

ಈಗೀಗ ಆಸಕ್ತಿಯೇ ಇಲ್ಲ ಯಾವುದರಲ್ಲೂ 
ಸ್ವಾತಂತ್ರ್ಯದಿ ರೆಕ್ಕೆಬಿಚ್ಚಿ ಹಾರದ ಕನಸು
ಖುಷಿಯ ಗರಿ ಸಿಕ್ಕಿಸಿಕೊಳ್ಳದ ಮನಸು
ಭಾವಗಳ ಬಣ್ಣದಲೂ ಬರೀ ಪೇಲವತೆ
ಹೈವೇಯಲಿ ಕಳೆದುಹೋಗಿದೆ ನನ್ನ ಕವಿತೆ !

ಸುರಿವ ಮಳೆ, ಹಸಿರ ಹೊಳೆ
ಮುಂಜಾವಿನ ಹಕ್ಕಿ ಹಾಡು
ಹರಿವ ಝರಿ, ನವಿಲುಗರಿ
ಫೂಟ್ಪಾತಲಿ ಬಿದ್ದ ಪಾರಿಜಾತ
ಎಲ್ಲಕೂ ಮೌನ ಗೌರಿಯ ವ್ರತ... !

ಆಫೀಸಿನ ಕಿಟಕಿಗಳೋ ಕಿವಿಮುಚ್ಚಿ ಕುಳಿತಿವೆ
ಕೀಬೋರ್ಡಿನ ಕಟಕಟ ಸದ್ದೇ ತಲೆನೋವಾಗಿ...
ಪೌರ್ಣಮಿ ಚಂದ್ರ ಶಾಪಿಂಗ್ ಮಾಲಿಗೆ
ಮಧ್ಯಾಹ್ನದ ಸೂರ್ಯ ತಾರಾಲಯಕ್ಕೆ
ಪಾದ ಬೆಳೆಸಿದ್ದಾರೆ - ಖುಷಿಯ ಹೆಕ್ಕಿ ತರಲು...!

ಹಳೆಯ ನೆನಪುಗಳು ಗುಳೇ ಹೊರಟಿವೆ
ನನ್ನೆದೆಯಿಂದ ಅವನ ಹೃದಯದ ಕಡೆಗೆ..
ನಾನಂತೂ ನೆನಪುಗಳ ಹಿಡಿದು ಬರಿದೇ ಕೂರುತ್ತೇನೆ
ಅವನಾದರೂ ಕವಿತೆ ಗೀಚುತ್ತಾನೆಂಬ‌ ಹಂಬಲದಲ್ಲಿ...!!

- R. R. B.

ಶುಕ್ರವಾರ, ಜುಲೈ 24, 2020

ಕಾಮರ್ಸ್_ಕವಿತೆಗಳು_30

ಕ್ಲೈಂಟುಗಳ ಪ್ರಾಜೆಕ್ಟ್ ರಿಪೋರ್ಟ್ ನ್ನು
ಖುಷಿಯಲ್ಲಿ ಸಿದ್ಧಪಡಿಸುತ್ತಿದ್ದ ಅವನು
ಹಿಂದಿನ ಕಹಿ ನೆನಪ ಮರೆಯಲಾಗದೇ
ಭವಿಷ್ಯದ ಬಗ್ಗೆ ತೀರ ಭಯಪಡುತ್ತಿದ್ದ !

-  R. R. B.

ಮಂಗಳವಾರ, ಜುಲೈ 21, 2020

ಕಾಮರ್ಸ_ಕವಿತೆಗಳು_29

ಕಂಪೆನಿಯ ಕ್ಯಾಷ್ ಫ್ಲೋ ಸ್ಟೇಟ್ಮೆಂಟುಗಳ  ತಯಾರಿಸುವುದರಲ್ಲಿ ಮುಳುಗಿದ್ದ ಅವನಿಗೆ
ಮಗನ ಫೀಸು ಕಟ್ಟಲು ನಾಳೆ ಕೊನೆಯ ದಿನ
ಎಂದು ನೆನಪಾಗಿ ಅಕೌಂಟ್ ಬ್ಯಾಲೆನ್ಸ್ ನೋಡತೊಡಗಿದ  !!

- R. R. B.

ಗುರುವಾರ, ಜುಲೈ 16, 2020

ನಿಹಾರಿಕಾ !

                     "ರೀ ಕಾಫಿ" ಲ್ಯಾಪ್ಟ್ ಟಾಪಿನಲ್ಲಿ ಮುಳುಗಿದ್ದ ಗಂಡನಿಗೆ ನಿಹಾರಿಕಾ ಕಾಫಿ ಕಪ್ಪನ್ನು ಕೊಟ್ಟಳು. ಮೊದಲೇ ಕೆಲಸದ ಕಿರಿಕಿರಿಯಲ್ಲಿದ್ದ ಕ್ಷಿತಿಜ್ ಒಂದು ಸಿಪ್ ಕುಡಿದು ಮುಖ ಕಿವುಚಿ, "ಅಡುಗೆ ಮಾಡೋವಾಗ ಮೈಮೇಲೆ ಪ್ರಜ್ಞೆ ಇರಲ್ವಾ ನಿಂಗೆ? ಕಾಫಿಗೆ ಶುಗರ್ ತುಂಬಾ ಕಮ್ಮಿ ಹಾಕಿದ್ಯಲ್ಲ... ಕೆಲ್ಸದ ತಲೆಬಿಸಿನೇ ತಡ್ಕೊಳ್ಳಕ್ಕಾಗ್ತಿಲ್ಲ. ಅದರ ಮಧ್ಯೆ ನೀನು ಬೇರೇ..." ಎಂದು ಬೈದು ಮತ್ತೆ ಕೀಬೋರ್ಡ್ ಕುಟ್ಟಲಾರಂಭಿಸಿದ. ನಿಹಾರಿಕಾ ಪೆಚ್ಚಾಗಿ ಅಡುಗೆ ಮನೆಗೆ ಬಂದಳು. ತನ್ನ ಪಾಲಿನ ಕಾಫಿ ಕುಡಿಯುತ್ತಿರುವಾಗ ಅವಳಿಗೆ ಸಕ್ಕರೆ ಸರಿಯಾದ ಪ್ರಮಾಣದಲ್ಲೇ ಇದೆ ಎಂದು ಅರಿವಾಯಿತು. ಕ್ಷಿತಿಜನ ಕೊನೆಯ ಮಾತು ಅವಳ ಮನಸ್ಸಲ್ಲಿ ಹಲವು ಅಲೆಗಳನ್ನು ಸೃಷ್ಟಿಸಿತ್ತು‌...

            ಮತ್ತೆ ಬೈಸಿಕೊಳ್ಳುವ ಇರಾದೆಯಿಲ್ಲದೇ, ಮಧ್ಯಾಹ್ನದ ಊಟಕ್ಕೆ ರುಚಿಯಾದ ಸ್ಪೆಷಲ್ ಅಡಿಗೆ ಮಾಡಿ, ನಿಹಾರಿಕಾ ರೂಮಿಗೆ ಬಂದು ಕುಳಿತಳು. " ಈ ಹಾಳು ಕೊರೋನಾ ರೋಗ ಬಂದು ಎಲ್ಲರ ನೆಮ್ಮದಿನೂ ಕಿತ್ತುಕೊಂಡಿತು...‌ ಆಫೀಸಿಗೆ ಹೋಗಿ ಬರುವಾಗಲೇ ಚೆನ್ನಾಗಿತ್ತು. ಕ್ಷಿತಿಜ ನನ್ನನ್ನು ಆಫೀಸಿಗೆ ಡ್ರಾಪ್ ಮಾಡಿ ಖುಷಿಯಲ್ಲಿ ಹೋಗುತ್ತಿದ್ದ. ಸಂಜೆ ಬರುವುದು ತಡವಾದರೂ ಕೆಲಸ ಮುಗಿಸಿಯೇ ಬರುತ್ತಿದ್ದ. ಟೆನ್ಶನ್ ಕಮ್ಮಿ ಇತ್ತು. ನಾನೂ ಸಂಜೆ ಬೇಗ ಬಂದು ಒಂದರ್ಧ ಗಂಟೆ ಭರತನಾಟ್ಯ ಮಾಡುವಾಗ ತಲೆಬಿಸಿಯೆಲ್ಲ ಮಾಯವಾಗುತ್ತಿತ್ತು. ಜೊತೆಗೆ ಬದುಕಿನ ಬಗ್ಗೆ ವಿಚಿತ್ರ ಪ್ರೀತಿ ಉಕ್ಕುವ ಸಮಯವದು... ಈಗ 'ವರ್ಕ್ ಫ್ರೊಮ್ ಹೋಂ' ಎನ್ನುವ ಹೆಸರಲ್ಲಿ ನೆಮ್ಮದಿಯನ್ನೂ ಎಮ್ಮೆನ್ಸಿಗಳಿಗೆ ಮಾರಿಕೊಂಡುಬಿಟ್ಟಿದ್ದೇವೆ....." ನಿಟ್ಟುಸಿರೊಂದು ಅವಳಿಗರಿವಿಲ್ಲದೆಯೇ ಹೊರಬಂತು. ಆಗಿನ್ನೂ ಸಮಯ ಹನ್ನೊಂದು ಗಂಟೆ. ಊಟಕ್ಕೆ ಇನ್ನೂ ತಡವಿದೆ. ಏನು ಮಾಡಲಿ? ಎಂದು ಯೋಚಿಸುತ್ತ ನಿಹಾರಿಕಾ ಹಾಲ್ ಕಡೆ ಬಂದಳು. ಕ್ಷಿತಿಜ್ ಸೀರಿಯಸ್ಸಾಗಿ ಕೆಲಸ ಮಾಡುತ್ತಿದ್ದ. ಹಣೆ ಮೇಲೆ ಚಿಂತೆಯ ಗೆರೆಗಳು. ಇವನನ್ನು ಮಾತಾಡಿಸಿದ್ರೆ ಇರೋ ಮೂಡ್ ಕೂಡ ಹಾಳಾಗತ್ತೆ‌ ಎಂದನಿಸಿ ಟೆರೇಸಿಗೆ ಹೋದಳು.

           ಆಗಸ ಮಳೆ ಬರುವ ಸೂಚನೆ ನೀಡಿತ್ತು. ನಿಹಾರಿಕಾ ತೂಗುಯ್ಯಾಲೆಯಲಿ ಕೂತು ಬದುಕ ಉಯ್ಯಾಲೆಯ ಕುರಿತು ಯೋಚಿಸಲಾರಂಭಿಸಿದಳು...  "ಲವ್ ಮ್ಯಾರೇಜ್ ಅಲ್ಲದೇ ಇದ್ರೂ ಕ್ಷಿತಿಜ್ ನಂತ ಒಳ್ಳೆ ಹುಡುಗ ಸಿಕ್ಕಿದ್ದು ನನ್ನ ಪುಣ್ಯ. ಯಾವ ಚಟಗಳಿಲ್ಲ, ಪಾರ್ಟಿ ಅಂದ್ರೇನೇ ಆಗಲ್ಲ, ಇರುವ ಕೆಲವೇ ಕೆಲವು ಗೆಳೆಯರೂ ಒಳ್ಳೆಯವರು, ನನ್ನನ್ನು ತುಂಬಾ ಇಷ್ಟ ಪಡೋರು.... ಬದುಕಲು ಇನ್ನೇನು ಬೇಕು? - ಹೀಗೆಂದೇ ಎಷ್ಟು ದಿನ ಸಮಾಧಾನ ಮಾಡಿಕೊಂಡಿರ್ಲಿ? ಹೆಂಡತಿ ಮೇಲೆ ಕಾಳಜಿ ಇರವುದು ಒಳ್ಳೆದೇ.. ಆದ್ರೆ ಅತಿಯಾದ್ರೆ ಸಿಹಿಯೂ ಮುಖಗಟ್ಟಿಸತ್ತೆ. ನಾನೂ ಇವನ‌ ಮನಸ್ಸಿಗೆ ಡಿಸ್ಟರ್ಬ್ ಆಗತ್ತೆ ಅಂತ ಭರತನಾಟ್ಯ ನಿಲ್ಲಿಸಿ ನಾಲ್ಕೈದು ತಿಂಗಳೇ ಆಯ್ತು. ಅವನಿಗೆ ಆಫೀಸ್ ಟೆನ್ಶನ್ ಆದ್ರೆ ನನ್ಮೇಲೆ ಕೂಗಾಡಿ ಫ್ರಸ್ಟ್ರೇಷನ್ ಹೊರಹಾಕ್ತಾನೆ. ಆದ್ರೆ ನಾನು? ನಾನೇನ್ ಮಾಡ್ಲಿ? ನಾನೇ ಅವನಿಗಿಂತ ಹೆಚ್ಚು ಫ್ರಸ್ಟ್ರೇಷನ್ ನಲ್ಲಿದೀನಿ. ಕೊರೊನಾ ಅಂತ ಇದ್ದ ಒಂದು ಕೆಲಸಕ್ಕೂ ಕಲ್ಲು ಬಿತ್ತು. ಅದೆಷ್ಟು ಈಸಿಯಾಗಿ ಟರ್ಮಿನೇಟ್ ಮಾಡಿಬಿಟ್ರು ನಮ್ಮನ್ನ... 😪  ಆ ಕಡೆ ಕೆಲಸವಿಲ್ಲ, ಈ ಕಡೆ ಮನೆಯಿಂದ ಹೊರಗೇ ಹೋಗುವ ಹಾಗೂ ಇಲ್ಲ. ನಾಲ್ಕು ಗೋಡೆಗಳ ನೋಡಿ ನೋಡಿ ಸಾಕಾಗಿದೆ... ಈ ಮನೆಯೊಳಗೇ ಇರುವಂತೆ ಮಾಡಿದ ಕೊರೊನಾದ ಬಂಧನಕ್ಕೆ ಯಾವಾಗ ಕೊನೆ? ವಾಯುವಿಹಾರಕ್ಕೆ ಅಂತ ಪಾರ್ಕಿಗಾದ್ರೂ ಹೋಗೋಣ ಅಂದ್ರೆ ಕೊರೊನಾಗೆ ಆಹಾರ ಆಗ್ಬಿಟ್ರೆ ಎಂಬ ಭಯ ! ದಿನಾ ಮನೆಗೆ ಫೋನ್ ಮಾಡಿ ಎಷ್ಟು ಅಂತ ಮಾತಾಡ್ಲಿ ? ಅದೆಲ್ಲದರ ಜೊತೆ ನನ್ನ ಫೇವರಿಟ್ ಹಾಬಿ ಅಂತ ಕುಣಿಯಲೂ ಆಗ್ತಿಲ್ಲ. ವಿದುಷಿ ನಿಹಾರಿಕಾ ಈಗ ಬರೀ ಬೇಸರದ ನಿಹಾರಿಕಾ ಆಗಿದಾಳೆ. ಒಂದ್ಸಲ ಗಟ್ಟಿಯಾಗಿ ಹಾಡು ಹಾಕಿ ಡ್ಯಾನ್ಸ್ ಮಾಡಬೇಕು ಅನಿಸತ್ತೆ. ಆದ್ರೆ ಅವತ್ತು ಸಂಜೆ ಭರತನಾಟ್ಯದ ಗೆಜ್ಜೆ ಸದ್ದು ಕೇಳಿ ಕ್ಷಿತಿಜ್ ಸಿಕ್ಕಾಪಟ್ಟೆ ಸಿಟ್ಟಾಗಿ ಕೆನ್ನೆಗೆ ಹೊಡೆದಿದ್ದು... ಓಹ್..." ನಿಹಾರಿಕಾಳ ಕೈ ಅಪ್ರಯತ್ನವಾಗಿ ಬಲಗೆನ್ನೆ ನೇವರಿಸಿತು.

                "ಪಾಪ ಅವನು.. ಐ ಆ್ಯಮ್ ಸಾರಿ ನಿಹಾರಿಕಾ. ಬಟ್ ಗೆಜ್ಜೆ ಸದ್ದು ಕೇಳಿದ್ರೆ ಯಾಕೋ ತುಂಬಾ ಸಿಟ್ಟು ಬರತ್ತೆ ಅಂತ ಅವತ್ತೊಂದು ದಿನ ಹೇಳಿ ಮಡಿಲಲ್ಲಿ ಮಲಗಿ  ಬಿಕ್ಕಿದ್ದ... ಆದ್ರೆ ನಾನಾದರೂ ಏನು ಮಾಡಲಿ? ಮನೆಯಲ್ಲೇ ಇದ್ದು ಇದ್ದು ತಲೆ ಚಿಟ್ಟುಹಿಡಿದಿದೆ. ಯಾವುದಕ್ಕೂ ಮನಸ್ಸಿಲ್ಲ. ನನ್ನ ಮನಸ್ಸೇ ಸರಿಯಿರದಿದ್ದರೆ ಕ್ಷಿತಿಜ್ ನ ಸಮಾಧಾನ ಮಾಡೋರು ಯಾರು? ಪಾಪಚ್ಚಿ ಅವನು ಜಾಸ್ತಿ ಟೆನ್ಶನ್ ತಡೆಯಲಾರ. ಪ್ರೀತಿ ಎಂಬುದು ಮನಕೆ ತಂಗಾಳಿ‌ಸೂಸುವ ಮರಗಳಾಗಬೇಕೇ ಹೊರತೂ‌ ಚುಚ್ಚುವ  ಪಾಪಾಸುಕಳ್ಳಿಯಾಗಬಾರದು... ಅವನ ಕಾರಣವಿಲ್ಲದ ಸಿಟ್ಟಿಗೆ ನನ್ನ ಅಭಿರುಚಿಯೊಂದು ಕಳೆದು ಹೋದರೆ ನನ್ನತನವನ್ನೇ ಕೊಂದುಕೊಂಡಂತೆ... ಹೀಗನಿಸಿದ್ದೇ ತಡ, ಪಟಪಟನೆ ಕೆಳಗಿಳಿದು ಹೋದಳು. ರೂಮಿಗೆ ಹೋಗಿ ಡೋರ್ ಲಾಕ್ ಮಾಡಿ, ತನ್ನ ಗೆಜ್ಜೆಯನ್ನೊಮ್ಮೆ ಪ್ರೀತಿಯಿಂದ ಮುಟ್ಟಿ, ಕಾಲಿಗೆ ಧರಿಸಿದಳು.
ರೂಮಿನೊಳಗಿಂದ ಆದಿತಾಳದಲ್ಲಿ
ಆನಂದ ನರ್ತನ ಗಣಪತಿಂ ಭಾವಯೇ... ಎಂದು ಹಾಡು ಕೇಳಿ ಬರುವಾಗ ಮಳೆ ನಿಂತು ಬಾನು ತಿಳಿಯಾಗಿತ್ತು !!

- R. R. B.


ಬುಧವಾರ, ಜುಲೈ 15, 2020

ಆರ್ಟಿಕಲ್ ಶಿಪ್ ಎಂಬ ಯಾತ್ರೆ

ಬದುಕಿನ ಮೂರೇ ಮೂರು ವರ್ಷ
ಆದರೆ ಕಲಿಸಿದ ಪಾಠಗಳು ಸಹಸ್ರ...

ಆಫೀಸು, ಕ್ಲೈಂಟ್ ಪ್ಲೇಸಿನ ಓಡಾಟದಿ
ಬಿಸಿಲು- ಮಳೆ - ಚಳಿಗಳು ಯಾವ ಲೆಕ್ಕ?
ಬ್ಯಾಂಕ್ ಆಡಿಟ್ಟು, ಸ್ಟಾಚುಟರಿ ಆಡಿಟ್ಟು
ಜಿ ಎಸ್ಟಿ, ವ್ಯಾಟು - ಮಾಡಿಲ್ಲ ವಾಟ್ ನಾಟು? 

ಆಗಾಗ್ಗೆ ಬಯ್ಯುವ ಬಾಸ್ ನಮಗೆ ಕಾಟವಾದರೆ
ಆಫೀಸಿನ ಮೂಲೆಯಲ್ಲಿ ಕುಳಿತ ಪ್ರಿಂಟರಿಗೆ ನಾವು ?
ತೆಗೆಯುವಾಗ ನೂರಾರು ಪೇಜು ಸ್ಟಡಿಮೆಟಿರಿಯಲ್ ಪ್ರಿಂಟು....!

ಕಲಿತದ್ದು, ಮರೆತದ್ದು, ಬೈಸಿಕೊಂಡದ್ದು
ಎಲ್ಲದಕ್ಕೂ ಕಿವಿ ಕಾನ್ಫರೆನ್ಸ್ ಹಾಲಿನ ಗೋಡೆ
ತಟಕ್ಕನೆ ಕೇಳಿದರೆ ಬಾಸ್ ನಮಗೆ ಕ್ವಸ್ಚನ್
ಮಾತಿಲ್ಲ, ಬರೀ ವಿಚಿತ್ರ ಎಕ್ಸಪ್ರೆಷನ್ !!

ಟೀಂ ಲಂಚ್ ಎಂದಾಗ ಮೂಡುವ ಮುಗುಳ್ನಗು
"ಸೆಮಿನಾರ್ ಮಾಡಿ" ಎಂದಾಗ ಮಾಯ !
ತಪ್ಪಿಗೆ ದೊರೆತ ಬೈಗುಳದ ನೋವು
ಪುಟ್ಟದೊಂದು ಅಪ್ರಿಸಿಯೇಷನ್ ಗೆ ಮಾಯ !

ಹೇಗಾದರೂ ಮುಗಿದರೆ ಸಾಕೆಂಬ ಧಾವಂತದಲಿ
ಕೂಡಿದ ಖುಷಿಗಳೆಷ್ಟೋ, ಕಳೆದ ದುಃಖಗಳೆಷ್ಟೋ
ಲೆಕ್ಕ ತಪ್ಪುತ್ತದೆ - ಭವಿಷ್ಯದ ಲೆಕ್ಕ ಪರಿಶೋಧಕರಿಗೂ
ಆರ್ಟಿಕಲ್ ಶಿಪ್ ಮುಗಿಸಿ ಹೊರಡುವಾಗ
ಮುದ್ದಾದ ಬದುಕ ಪುಟವ ತಿರುವುವಾಗ... !!

- R. R. B.

ಮಂಗಳವಾರ, ಜುಲೈ 14, 2020

ಕಾಮರ್ಸ್_ಕವಿತೆಗಳು_28

ಶೇರುಬೆಲೆ - ಕೊರೊನಾ ವೈರಸ್ ನಂತಿರಬೇಕಿತ್ತು
ಪ್ರತಿದಿನ ಸಂಖ್ಯೆಯಲ್ಲಿ ಏರಿಕೆ ಮಾತ್ರ
ಇಳಿಯುವ ಸಂಭವ ಬಹು ಕಡಿಮೆ
ಹೂಡಿಕೆ ಮಾಡಿದವರಿಗೆ ಕೈತುಂಬ ಲಾಭ !!

- R. R. B.

ಗುರುವಾರ, ಜುಲೈ 9, 2020

ಕಾಮರ್ಸ್_ಕವಿತೆಗಳು_27

ಟ್ಯಾಲಿಯ ಡೆಬಿಟ್ಟು ಕ್ರೆಡಿಟ್ಟುಗಳನೆಲ್ಲ
ನೀಟಾಗಿ ಅರೆದು ಕುಡಿದಿದ್ದ ಜಾಣನಿಗೆ
ಪ್ರೀತಿಯಲ್ಲಿ ಕೊಟ್ಟಿದ್ದೇನು, ಪಡೆದಿದ್ದೇನು
ಎಂಬ ಲೆಕ್ಕಾಚಾರ ಬೇಡವೆಂದು‌ ತಿಳಿದಿಲ್ಲ !..

- R. R. B.

ಬುಧವಾರ, ಜುಲೈ 8, 2020

ಕಾಮರ್ಸ್_ಕವಿತೆಗಳು_26

ಬೇರೆಯವರ ವ್ಯಾಪಾರದ ಲಾಭ ಎಷ್ಟು‌ ತೋರಿಸಿದರೆ
ಆದಾಯ ತೆರಿಗೆ ಕಡಿಮೆ ಕಟ್ಟಬಹುದು ಎಂದು 
ದಿನಪೂರ್ತಿ ಯೋಚಿಸುವವನ ಬಳಿ
ತನ್ನ ಸಂಬಳ ಸಾಲುತ್ತಿಲ್ಲವೆಂಬ ಸಮಸ್ಯೆಗೆ  ಪರಿಹಾರ ಇಲ್ಲ !

- R. R. B.

ಸೋಮವಾರ, ಜುಲೈ 6, 2020

ಕಾಮರ್ಸ್_ಕವಿತೆಗಳು_25

ನೂರಾರು ಪುಸ್ತಕಗಳನ್ನು ಚೆನ್ನಾಗಿ ಓದಿ
ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದವಳು
ಬದುಕಿನ ಪರೀಕ್ಷೆ ಎದುರಿಸಲಾಗದೇ
ಆತ್ಮಹತ್ಯೆಗೆ ಶರಣಾಗಿದ್ದು ಮೊನ್ನೆ ಬಿಸಿ ಸುದ್ದಿಯಾಗಿತ್ತು !..

- R. R. B.

ಭಾನುವಾರ, ಜುಲೈ 5, 2020

ಕಾಮರ್ಸ್_ಕವಿತೆಗಳು_24

ಅಗತ್ಯ‌ ವೇಳೆಗೆ ವೃತ್ತ ಸುತ್ತುವ ವೆಬ್ಸೈಟಿನಲ್ಲಿ
ತಿಂಗಳಿಗೆ ನೂರಾರು ಜಿಎಸ್ಟಿ ರಿಟರ್ನ್ 
ಗಳನ್ನು ತಪ್ಪಿಲ್ಲದೇ ಫೈಲ್ ಮಾಡುವವನಿಗೆ
ಕಾಯುವಿಕೆ ಎಂದರೆ ಇಷ್ಟವೇ ಇಲ್ಲವಂತೆ !!

- R. R. B.

ಶುಕ್ರವಾರ, ಜುಲೈ 3, 2020

ಕಾಮರ್ಸ್_ಕವಿತೆಗಳು_23

ಕಂಪೆನಿ ಲಾ, ಟ್ಯಾಕ್ಸೇಷನ್ ಗಳ ಸೆಕ್ಷನ್ - ಗಳನ್ನೆಲ್ಲ ನೆನಪಿಡುವ ಬುದ್ಧಿವಂತ
ಪ್ರೀತಿಪಾತ್ರರ ಹುಟ್ಟಿದ ದಿನ ನೆನಪಿಡಲು
ಫೇಸ್ಬುಕ್, ಕ್ಯಾಲೆಂಡರ್ ಗಳ ಮೊರೆ ಹೋಗುತ್ತಾನಂತೆ !!

- R. R. B.

ಬುಧವಾರ, ಜುಲೈ 1, 2020

ಕಾಮರ್ಸ್_ಕವಿತೆಗಳು_22

ವರ್ಷಕ್ಕೊಮ್ಮೆ ಬರೋ ಸ್ಟಾಚುಟರಿ ಆಡಿಟರ್ ಗೆ
ಬ್ಯಾಂಕಿನವರಿಂದ ಎಂದೂ ರಾಜ ಮರ್ಯಾದೆ 
ಆದರೆ ಪ್ರತಿದಿನ ಸರಿ ತಪ್ಪು ಗುರುತಿಸುವ
ಕನ್ಕರೆಂಟ್ ಆಡಿಟರ್ ಗಳೆಂದರೆ ಬರೀ ಅಸಡ್ಡೆ
ಬದುಕಲ್ಲೂ - ಕರೆದಾಗ ಸಹಾಯಕ್ಕೆ ಬಂದರೆ
ದೊರೆವ ಉಡುಗೊರೆ ಆಲಸ್ಯ, ಅಲಕ್ಷ್ಯವೇ !?

- R. R. B.

ಮೆಟ್ಟಿಲುಗಳು

ಮೆಟ್ಟಿಲು - ಆರೋಹಣ, ಅವರೋಹಣ
ಎರಡನ್ನೂ ಕಲಿಸುವ ಮೌನ ಗುರು
ಪಟಪಟನೆ ಮನೆಯ ಮೆಟ್ಟಿಲೇರಲು
ಕಲಿತ ಮಗು - ಮುಖ ಮಾಡುತ್ತದೆ
ಶಾಲೆಯ ಮೆಟ್ಟಿಲುಗಳ ಕಡೆಗೆ...
ಮನೆಯಲ್ಲಿ ಅಮ್ಮನಿಗೆ ಸಾವಿರ ನೆನಪ
ರಂಗೋಲಿ - ಪಾವಟಿಗೆಯ ಜೊತೆ ಬಿಟ್ಟು...

ಏರಲಾರದೇ ಢುಮ್ಮನೆ ಬಿದ್ದಾಗಿನ ಅಳು
ಅಳುವ ಕಂದಮ್ಮನ ಸಮಾಧಾನಕೆಂದೇ
ಸಿದ್ಧಾಪುರದಿಂದ ಹಾದಿತಪ್ಪಿಬಂದ ಆನೆ
ಮೆಟ್ಟಿಲ ಬಳಿ ಕತೆ ಹೇಳಿ ತಿನಿಸಿದ್ದ ಅಕ್ಕರೆಯ ತುತ್ತು
ನಗುವ ಮಗುವ ಕಿಲಕಿಲ ಸದ್ದು - ಎಲ್ಲವೂ
ಲಭಿಸಿದ್ದು ಮನೆಯ ಮೆಟ್ಟಿಲುಗಳ ಮೇಲೆ...!!

ಶಾಲೆಯ ಚಂದದ ಮೆಟ್ಟಿಲುಗಳಿಗೋ
ಸಹಸ್ರಾರು ಮೃದು ಪಾದಗಳ ಸ್ಪರ್ಷ
ಕಪಟವರಿಯದ ಮುಗ್ಧತೆಯ ಹರ್ಷ
ಬದುಕ ಪಾಠ ಕಲಿಸೋ ಮೇಷ್ಟ್ರುಗಳ
ಗಂಭೀರ ಅಂಗಾಲಿನ ಹೆಜ್ಜೆ ಗುರುತು...
ಬಿದ್ದದ್ದು, ಎದ್ದದ್ದು, ತಲೆಗೆ ಏಟಾಗಿ ಅತ್ತಿದ್ದು - ಎಲ್ಲ ನೆನಪುಗಳ ಕಾಪಿಟ್ಟಿದೆಯಂತೆ... !!

ಹೈಸ್ಕೂಲು, ಕಾಲೇಜಿನ ಮೆಟ್ಟಿಲುಗಳಿಗೆ
ಚಂಚಲತೆ, ತುಂಟತನದ ನವಿರು ಲೇಪನ...
ಹರೆಯದ ಸಾವಿರ ಹುಚ್ಚು ಕಲ್ಪನೆಗಳಿಗೆ
ಕೊನೆಯಿಲ್ಲದ ಆಸೆಗಳಿಗೆ, ಕಾಡು ಹರಟೆಗೆ
ಸಂಗಾತಿಯಾದ ಖುಷಿಯಂತೆ ಅದಕೆ...!!

ಇನ್ನು ಆಫೀಸಿನ ಸ್ಟೇರ್ಸುಗಳು ಗಂಭೀರವಾಗಿ
ಬಾಯ್ಮುಚ್ಚಿ ತಣ್ಣಗೆ ಕುಳಿತಿರುತ್ತವೆ -
ಎಲ್ಲರ ತರಲೆ, ತಲೆಬಿಸಿಗಳ ನೋಡಿ,
ಆಗಾಗ ಏಸಿಯ ತಂಗಾಳಿ ಹಿತವಾಗಿ ಸೋಕಿ..
ಅತ್ತರಿನಲ್ಲಿ ಮಿಂದ ಬ್ಯಾಚುಲರ್ ಗಳು
ವಿಶ್ವಾಮಿತ್ರರ ವಂಶದ ಮ್ಯಾನೇಜರ್ ಗಳು
ಸಂಬಳ ಖರ್ಚಾಗುತ್ತಿದ್ದಂತೆ ಜರ್ರನೆ ಇಳಿವ
ಆಫೀಸ್ ಕೆಲಸದ ಮೇಲಿನ ಹುಮ್ಮಸ್ಸು...
ಎಲ್ಲಕೂ ಮೆಟ್ಟಿಲು - ಮೂಕಸಾಕ್ಷಿಯಂತೆ... !!

ಬರೀ ಇವಷ್ಟೇ ಅಲ್ಲ,
ವಾರಾಂತ್ಯದಿ ತುಳುಕುವ ಅಂಗಡಿ, ಮಾಲು
ಸಿನಿಪ್ರಿಯರ ಫೇವರಿಟ್ ಚಿತ್ರಮಂದಿರ
ಲಿಫ್ಟ್ ಹಾಳಾಗಿ ನಿಂತ ಅಪಾರ್ಟ್ ಮೆಂಟು
ಕ್ರಿಕೆಟ್ ಗ್ರೌಂಡಿನ ಸುತ್ತ ಕನಸು ಕಟ್ಟುವ
ಅದೆಷ್ಟೋ ಮೆಟ್ಟಿಲುಗಳು ನೀರವವಾಗಿ
ಕುಳಿತಿವೆ - ಜೊತೆಗೆ ಜೀವನದ ಏಣಿಯಾಗಿ
ಹಲವರ ಗುರಿ ತಲುಪಿಸಲು ಸಹಾಯಹಸ್ತ
ಚಾಚುವ ಹಿರಿಯರ ಕೈಗಳೂ ಕೂಡಾ...!!

- R. R. B.

ಕಾಮರ್ಸ್_ಕವಿತೆಗಳು_21

ವಾಣಿಜ್ಯದಲ್ಲಿ ಪದವಿ ಪಡೆದವನೊಬ್ಬ
ಮೊದಲ ಬಾರಿ ಪ್ರೇಮ ನಿವೇದನೆಗೆ
ಹೊರಟ - "ಎಷ್ಟು ಪ್ರೀತಿಸುವೆ ನನ್ನ ?"
ಎಂಬ ಪ್ರಶ್ನೆಗೆ ಚೂರೂ ತಡವರಿಸದೇ "ಅಕೌಂಟೆನ್ಸಿ ಪರೀಕ್ಷೆಗೆ ಒಯ್ಯುವ ಕ್ಯಾಲ್ಕುಲೇಟರ್ ನಷ್ಟು" ಎಂದ.
ಅವರಿಗೀಗ ಇಬ್ಬರು ಮಕ್ಕಳಂತೆ !...

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...