ಬುಧವಾರ, ಜುಲೈ 1, 2020

ಮೆಟ್ಟಿಲುಗಳು

ಮೆಟ್ಟಿಲು - ಆರೋಹಣ, ಅವರೋಹಣ
ಎರಡನ್ನೂ ಕಲಿಸುವ ಮೌನ ಗುರು
ಪಟಪಟನೆ ಮನೆಯ ಮೆಟ್ಟಿಲೇರಲು
ಕಲಿತ ಮಗು - ಮುಖ ಮಾಡುತ್ತದೆ
ಶಾಲೆಯ ಮೆಟ್ಟಿಲುಗಳ ಕಡೆಗೆ...
ಮನೆಯಲ್ಲಿ ಅಮ್ಮನಿಗೆ ಸಾವಿರ ನೆನಪ
ರಂಗೋಲಿ - ಪಾವಟಿಗೆಯ ಜೊತೆ ಬಿಟ್ಟು...

ಏರಲಾರದೇ ಢುಮ್ಮನೆ ಬಿದ್ದಾಗಿನ ಅಳು
ಅಳುವ ಕಂದಮ್ಮನ ಸಮಾಧಾನಕೆಂದೇ
ಸಿದ್ಧಾಪುರದಿಂದ ಹಾದಿತಪ್ಪಿಬಂದ ಆನೆ
ಮೆಟ್ಟಿಲ ಬಳಿ ಕತೆ ಹೇಳಿ ತಿನಿಸಿದ್ದ ಅಕ್ಕರೆಯ ತುತ್ತು
ನಗುವ ಮಗುವ ಕಿಲಕಿಲ ಸದ್ದು - ಎಲ್ಲವೂ
ಲಭಿಸಿದ್ದು ಮನೆಯ ಮೆಟ್ಟಿಲುಗಳ ಮೇಲೆ...!!

ಶಾಲೆಯ ಚಂದದ ಮೆಟ್ಟಿಲುಗಳಿಗೋ
ಸಹಸ್ರಾರು ಮೃದು ಪಾದಗಳ ಸ್ಪರ್ಷ
ಕಪಟವರಿಯದ ಮುಗ್ಧತೆಯ ಹರ್ಷ
ಬದುಕ ಪಾಠ ಕಲಿಸೋ ಮೇಷ್ಟ್ರುಗಳ
ಗಂಭೀರ ಅಂಗಾಲಿನ ಹೆಜ್ಜೆ ಗುರುತು...
ಬಿದ್ದದ್ದು, ಎದ್ದದ್ದು, ತಲೆಗೆ ಏಟಾಗಿ ಅತ್ತಿದ್ದು - ಎಲ್ಲ ನೆನಪುಗಳ ಕಾಪಿಟ್ಟಿದೆಯಂತೆ... !!

ಹೈಸ್ಕೂಲು, ಕಾಲೇಜಿನ ಮೆಟ್ಟಿಲುಗಳಿಗೆ
ಚಂಚಲತೆ, ತುಂಟತನದ ನವಿರು ಲೇಪನ...
ಹರೆಯದ ಸಾವಿರ ಹುಚ್ಚು ಕಲ್ಪನೆಗಳಿಗೆ
ಕೊನೆಯಿಲ್ಲದ ಆಸೆಗಳಿಗೆ, ಕಾಡು ಹರಟೆಗೆ
ಸಂಗಾತಿಯಾದ ಖುಷಿಯಂತೆ ಅದಕೆ...!!

ಇನ್ನು ಆಫೀಸಿನ ಸ್ಟೇರ್ಸುಗಳು ಗಂಭೀರವಾಗಿ
ಬಾಯ್ಮುಚ್ಚಿ ತಣ್ಣಗೆ ಕುಳಿತಿರುತ್ತವೆ -
ಎಲ್ಲರ ತರಲೆ, ತಲೆಬಿಸಿಗಳ ನೋಡಿ,
ಆಗಾಗ ಏಸಿಯ ತಂಗಾಳಿ ಹಿತವಾಗಿ ಸೋಕಿ..
ಅತ್ತರಿನಲ್ಲಿ ಮಿಂದ ಬ್ಯಾಚುಲರ್ ಗಳು
ವಿಶ್ವಾಮಿತ್ರರ ವಂಶದ ಮ್ಯಾನೇಜರ್ ಗಳು
ಸಂಬಳ ಖರ್ಚಾಗುತ್ತಿದ್ದಂತೆ ಜರ್ರನೆ ಇಳಿವ
ಆಫೀಸ್ ಕೆಲಸದ ಮೇಲಿನ ಹುಮ್ಮಸ್ಸು...
ಎಲ್ಲಕೂ ಮೆಟ್ಟಿಲು - ಮೂಕಸಾಕ್ಷಿಯಂತೆ... !!

ಬರೀ ಇವಷ್ಟೇ ಅಲ್ಲ,
ವಾರಾಂತ್ಯದಿ ತುಳುಕುವ ಅಂಗಡಿ, ಮಾಲು
ಸಿನಿಪ್ರಿಯರ ಫೇವರಿಟ್ ಚಿತ್ರಮಂದಿರ
ಲಿಫ್ಟ್ ಹಾಳಾಗಿ ನಿಂತ ಅಪಾರ್ಟ್ ಮೆಂಟು
ಕ್ರಿಕೆಟ್ ಗ್ರೌಂಡಿನ ಸುತ್ತ ಕನಸು ಕಟ್ಟುವ
ಅದೆಷ್ಟೋ ಮೆಟ್ಟಿಲುಗಳು ನೀರವವಾಗಿ
ಕುಳಿತಿವೆ - ಜೊತೆಗೆ ಜೀವನದ ಏಣಿಯಾಗಿ
ಹಲವರ ಗುರಿ ತಲುಪಿಸಲು ಸಹಾಯಹಸ್ತ
ಚಾಚುವ ಹಿರಿಯರ ಕೈಗಳೂ ಕೂಡಾ...!!

- R. R. B.

2 ಕಾಮೆಂಟ್‌ಗಳು:

ಶ್ರೀವತ್ಸ ಕಂಚೀಮನೆ. ಹೇಳಿದರು...

ಹತ್ತಿ ಬಂದ, ಹತ್ತುತ್ತಲೇ ಇರಬೇಕಾದ ಸಾಲು ಸಾಲು ಮೆಟ್ಟಿಲುಗಳು - ಬದುಕಿನ ಅಂಗಾಲಿಗೆ ವಿಧ ವಿಧ ಅನುಭವಗಳ ಬಣ್ಣಗಳು...
ಚಂದ ಭಾವ ಲಹರಿ...

Ranjana Bhat ಹೇಳಿದರು...

Thank You so much !!

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...