"ರೀ ಕಾಫಿ" ಲ್ಯಾಪ್ಟ್ ಟಾಪಿನಲ್ಲಿ ಮುಳುಗಿದ್ದ ಗಂಡನಿಗೆ ನಿಹಾರಿಕಾ ಕಾಫಿ ಕಪ್ಪನ್ನು ಕೊಟ್ಟಳು. ಮೊದಲೇ ಕೆಲಸದ ಕಿರಿಕಿರಿಯಲ್ಲಿದ್ದ ಕ್ಷಿತಿಜ್ ಒಂದು ಸಿಪ್ ಕುಡಿದು ಮುಖ ಕಿವುಚಿ, "ಅಡುಗೆ ಮಾಡೋವಾಗ ಮೈಮೇಲೆ ಪ್ರಜ್ಞೆ ಇರಲ್ವಾ ನಿಂಗೆ? ಕಾಫಿಗೆ ಶುಗರ್ ತುಂಬಾ ಕಮ್ಮಿ ಹಾಕಿದ್ಯಲ್ಲ... ಕೆಲ್ಸದ ತಲೆಬಿಸಿನೇ ತಡ್ಕೊಳ್ಳಕ್ಕಾಗ್ತಿಲ್ಲ. ಅದರ ಮಧ್ಯೆ ನೀನು ಬೇರೇ..." ಎಂದು ಬೈದು ಮತ್ತೆ ಕೀಬೋರ್ಡ್ ಕುಟ್ಟಲಾರಂಭಿಸಿದ. ನಿಹಾರಿಕಾ ಪೆಚ್ಚಾಗಿ ಅಡುಗೆ ಮನೆಗೆ ಬಂದಳು. ತನ್ನ ಪಾಲಿನ ಕಾಫಿ ಕುಡಿಯುತ್ತಿರುವಾಗ ಅವಳಿಗೆ ಸಕ್ಕರೆ ಸರಿಯಾದ ಪ್ರಮಾಣದಲ್ಲೇ ಇದೆ ಎಂದು ಅರಿವಾಯಿತು. ಕ್ಷಿತಿಜನ ಕೊನೆಯ ಮಾತು ಅವಳ ಮನಸ್ಸಲ್ಲಿ ಹಲವು ಅಲೆಗಳನ್ನು ಸೃಷ್ಟಿಸಿತ್ತು...
ಮತ್ತೆ ಬೈಸಿಕೊಳ್ಳುವ ಇರಾದೆಯಿಲ್ಲದೇ, ಮಧ್ಯಾಹ್ನದ ಊಟಕ್ಕೆ ರುಚಿಯಾದ ಸ್ಪೆಷಲ್ ಅಡಿಗೆ ಮಾಡಿ, ನಿಹಾರಿಕಾ ರೂಮಿಗೆ ಬಂದು ಕುಳಿತಳು. " ಈ ಹಾಳು ಕೊರೋನಾ ರೋಗ ಬಂದು ಎಲ್ಲರ ನೆಮ್ಮದಿನೂ ಕಿತ್ತುಕೊಂಡಿತು... ಆಫೀಸಿಗೆ ಹೋಗಿ ಬರುವಾಗಲೇ ಚೆನ್ನಾಗಿತ್ತು. ಕ್ಷಿತಿಜ ನನ್ನನ್ನು ಆಫೀಸಿಗೆ ಡ್ರಾಪ್ ಮಾಡಿ ಖುಷಿಯಲ್ಲಿ ಹೋಗುತ್ತಿದ್ದ. ಸಂಜೆ ಬರುವುದು ತಡವಾದರೂ ಕೆಲಸ ಮುಗಿಸಿಯೇ ಬರುತ್ತಿದ್ದ. ಟೆನ್ಶನ್ ಕಮ್ಮಿ ಇತ್ತು. ನಾನೂ ಸಂಜೆ ಬೇಗ ಬಂದು ಒಂದರ್ಧ ಗಂಟೆ ಭರತನಾಟ್ಯ ಮಾಡುವಾಗ ತಲೆಬಿಸಿಯೆಲ್ಲ ಮಾಯವಾಗುತ್ತಿತ್ತು. ಜೊತೆಗೆ ಬದುಕಿನ ಬಗ್ಗೆ ವಿಚಿತ್ರ ಪ್ರೀತಿ ಉಕ್ಕುವ ಸಮಯವದು... ಈಗ 'ವರ್ಕ್ ಫ್ರೊಮ್ ಹೋಂ' ಎನ್ನುವ ಹೆಸರಲ್ಲಿ ನೆಮ್ಮದಿಯನ್ನೂ ಎಮ್ಮೆನ್ಸಿಗಳಿಗೆ ಮಾರಿಕೊಂಡುಬಿಟ್ಟಿದ್ದೇವೆ....." ನಿಟ್ಟುಸಿರೊಂದು ಅವಳಿಗರಿವಿಲ್ಲದೆಯೇ ಹೊರಬಂತು. ಆಗಿನ್ನೂ ಸಮಯ ಹನ್ನೊಂದು ಗಂಟೆ. ಊಟಕ್ಕೆ ಇನ್ನೂ ತಡವಿದೆ. ಏನು ಮಾಡಲಿ? ಎಂದು ಯೋಚಿಸುತ್ತ ನಿಹಾರಿಕಾ ಹಾಲ್ ಕಡೆ ಬಂದಳು. ಕ್ಷಿತಿಜ್ ಸೀರಿಯಸ್ಸಾಗಿ ಕೆಲಸ ಮಾಡುತ್ತಿದ್ದ. ಹಣೆ ಮೇಲೆ ಚಿಂತೆಯ ಗೆರೆಗಳು. ಇವನನ್ನು ಮಾತಾಡಿಸಿದ್ರೆ ಇರೋ ಮೂಡ್ ಕೂಡ ಹಾಳಾಗತ್ತೆ ಎಂದನಿಸಿ ಟೆರೇಸಿಗೆ ಹೋದಳು.
ಆಗಸ ಮಳೆ ಬರುವ ಸೂಚನೆ ನೀಡಿತ್ತು. ನಿಹಾರಿಕಾ ತೂಗುಯ್ಯಾಲೆಯಲಿ ಕೂತು ಬದುಕ ಉಯ್ಯಾಲೆಯ ಕುರಿತು ಯೋಚಿಸಲಾರಂಭಿಸಿದಳು... "ಲವ್ ಮ್ಯಾರೇಜ್ ಅಲ್ಲದೇ ಇದ್ರೂ ಕ್ಷಿತಿಜ್ ನಂತ ಒಳ್ಳೆ ಹುಡುಗ ಸಿಕ್ಕಿದ್ದು ನನ್ನ ಪುಣ್ಯ. ಯಾವ ಚಟಗಳಿಲ್ಲ, ಪಾರ್ಟಿ ಅಂದ್ರೇನೇ ಆಗಲ್ಲ, ಇರುವ ಕೆಲವೇ ಕೆಲವು ಗೆಳೆಯರೂ ಒಳ್ಳೆಯವರು, ನನ್ನನ್ನು ತುಂಬಾ ಇಷ್ಟ ಪಡೋರು.... ಬದುಕಲು ಇನ್ನೇನು ಬೇಕು? - ಹೀಗೆಂದೇ ಎಷ್ಟು ದಿನ ಸಮಾಧಾನ ಮಾಡಿಕೊಂಡಿರ್ಲಿ? ಹೆಂಡತಿ ಮೇಲೆ ಕಾಳಜಿ ಇರವುದು ಒಳ್ಳೆದೇ.. ಆದ್ರೆ ಅತಿಯಾದ್ರೆ ಸಿಹಿಯೂ ಮುಖಗಟ್ಟಿಸತ್ತೆ. ನಾನೂ ಇವನ ಮನಸ್ಸಿಗೆ ಡಿಸ್ಟರ್ಬ್ ಆಗತ್ತೆ ಅಂತ ಭರತನಾಟ್ಯ ನಿಲ್ಲಿಸಿ ನಾಲ್ಕೈದು ತಿಂಗಳೇ ಆಯ್ತು. ಅವನಿಗೆ ಆಫೀಸ್ ಟೆನ್ಶನ್ ಆದ್ರೆ ನನ್ಮೇಲೆ ಕೂಗಾಡಿ ಫ್ರಸ್ಟ್ರೇಷನ್ ಹೊರಹಾಕ್ತಾನೆ. ಆದ್ರೆ ನಾನು? ನಾನೇನ್ ಮಾಡ್ಲಿ? ನಾನೇ ಅವನಿಗಿಂತ ಹೆಚ್ಚು ಫ್ರಸ್ಟ್ರೇಷನ್ ನಲ್ಲಿದೀನಿ. ಕೊರೊನಾ ಅಂತ ಇದ್ದ ಒಂದು ಕೆಲಸಕ್ಕೂ ಕಲ್ಲು ಬಿತ್ತು. ಅದೆಷ್ಟು ಈಸಿಯಾಗಿ ಟರ್ಮಿನೇಟ್ ಮಾಡಿಬಿಟ್ರು ನಮ್ಮನ್ನ... 😪 ಆ ಕಡೆ ಕೆಲಸವಿಲ್ಲ, ಈ ಕಡೆ ಮನೆಯಿಂದ ಹೊರಗೇ ಹೋಗುವ ಹಾಗೂ ಇಲ್ಲ. ನಾಲ್ಕು ಗೋಡೆಗಳ ನೋಡಿ ನೋಡಿ ಸಾಕಾಗಿದೆ... ಈ ಮನೆಯೊಳಗೇ ಇರುವಂತೆ ಮಾಡಿದ ಕೊರೊನಾದ ಬಂಧನಕ್ಕೆ ಯಾವಾಗ ಕೊನೆ? ವಾಯುವಿಹಾರಕ್ಕೆ ಅಂತ ಪಾರ್ಕಿಗಾದ್ರೂ ಹೋಗೋಣ ಅಂದ್ರೆ ಕೊರೊನಾಗೆ ಆಹಾರ ಆಗ್ಬಿಟ್ರೆ ಎಂಬ ಭಯ ! ದಿನಾ ಮನೆಗೆ ಫೋನ್ ಮಾಡಿ ಎಷ್ಟು ಅಂತ ಮಾತಾಡ್ಲಿ ? ಅದೆಲ್ಲದರ ಜೊತೆ ನನ್ನ ಫೇವರಿಟ್ ಹಾಬಿ ಅಂತ ಕುಣಿಯಲೂ ಆಗ್ತಿಲ್ಲ. ವಿದುಷಿ ನಿಹಾರಿಕಾ ಈಗ ಬರೀ ಬೇಸರದ ನಿಹಾರಿಕಾ ಆಗಿದಾಳೆ. ಒಂದ್ಸಲ ಗಟ್ಟಿಯಾಗಿ ಹಾಡು ಹಾಕಿ ಡ್ಯಾನ್ಸ್ ಮಾಡಬೇಕು ಅನಿಸತ್ತೆ. ಆದ್ರೆ ಅವತ್ತು ಸಂಜೆ ಭರತನಾಟ್ಯದ ಗೆಜ್ಜೆ ಸದ್ದು ಕೇಳಿ ಕ್ಷಿತಿಜ್ ಸಿಕ್ಕಾಪಟ್ಟೆ ಸಿಟ್ಟಾಗಿ ಕೆನ್ನೆಗೆ ಹೊಡೆದಿದ್ದು... ಓಹ್..." ನಿಹಾರಿಕಾಳ ಕೈ ಅಪ್ರಯತ್ನವಾಗಿ ಬಲಗೆನ್ನೆ ನೇವರಿಸಿತು.
"ಪಾಪ ಅವನು.. ಐ ಆ್ಯಮ್ ಸಾರಿ ನಿಹಾರಿಕಾ. ಬಟ್ ಗೆಜ್ಜೆ ಸದ್ದು ಕೇಳಿದ್ರೆ ಯಾಕೋ ತುಂಬಾ ಸಿಟ್ಟು ಬರತ್ತೆ ಅಂತ ಅವತ್ತೊಂದು ದಿನ ಹೇಳಿ ಮಡಿಲಲ್ಲಿ ಮಲಗಿ ಬಿಕ್ಕಿದ್ದ... ಆದ್ರೆ ನಾನಾದರೂ ಏನು ಮಾಡಲಿ? ಮನೆಯಲ್ಲೇ ಇದ್ದು ಇದ್ದು ತಲೆ ಚಿಟ್ಟುಹಿಡಿದಿದೆ. ಯಾವುದಕ್ಕೂ ಮನಸ್ಸಿಲ್ಲ. ನನ್ನ ಮನಸ್ಸೇ ಸರಿಯಿರದಿದ್ದರೆ ಕ್ಷಿತಿಜ್ ನ ಸಮಾಧಾನ ಮಾಡೋರು ಯಾರು? ಪಾಪಚ್ಚಿ ಅವನು ಜಾಸ್ತಿ ಟೆನ್ಶನ್ ತಡೆಯಲಾರ. ಪ್ರೀತಿ ಎಂಬುದು ಮನಕೆ ತಂಗಾಳಿಸೂಸುವ ಮರಗಳಾಗಬೇಕೇ ಹೊರತೂ ಚುಚ್ಚುವ ಪಾಪಾಸುಕಳ್ಳಿಯಾಗಬಾರದು... ಅವನ ಕಾರಣವಿಲ್ಲದ ಸಿಟ್ಟಿಗೆ ನನ್ನ ಅಭಿರುಚಿಯೊಂದು ಕಳೆದು ಹೋದರೆ ನನ್ನತನವನ್ನೇ ಕೊಂದುಕೊಂಡಂತೆ... ಹೀಗನಿಸಿದ್ದೇ ತಡ, ಪಟಪಟನೆ ಕೆಳಗಿಳಿದು ಹೋದಳು. ರೂಮಿಗೆ ಹೋಗಿ ಡೋರ್ ಲಾಕ್ ಮಾಡಿ, ತನ್ನ ಗೆಜ್ಜೆಯನ್ನೊಮ್ಮೆ ಪ್ರೀತಿಯಿಂದ ಮುಟ್ಟಿ, ಕಾಲಿಗೆ ಧರಿಸಿದಳು.
ರೂಮಿನೊಳಗಿಂದ ಆದಿತಾಳದಲ್ಲಿ
ಆನಂದ ನರ್ತನ ಗಣಪತಿಂ ಭಾವಯೇ... ಎಂದು ಹಾಡು ಕೇಳಿ ಬರುವಾಗ ಮಳೆ ನಿಂತು ಬಾನು ತಿಳಿಯಾಗಿತ್ತು !!
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ