'ಆಫೀಸ್ ಟ್ರಿಪ್' ಇದು ಬರೀ ಶಬ್ದವಷ್ಟೇ ಅಲ್ಲ, ಸಾವಿರಾರು ಸುಂದರ ನೆನಪುಗಳ, ನೂರಾರು ಸಿಹಿ ಭಾವಗಳ, ಹಲವು ಸಂಭ್ರಮದ ಘಳಿಗೆಗಳ, ಕೆಲವು ಹೊಸತನದ ಕ್ಷಣಗಳ ಒಟ್ಟೂ ಮೊತ್ತವೇನೋ!... 'ಕೆಲವೊಮ್ಮೆ ತಲುಪುವ ಗಮ್ಯಕ್ಕಿಂತ ಅದರೆಡೆಗಿನ ಪಯಣವೇ ಹೆಚ್ಚು ಮುಖ್ಯವೆನಿಸುತ್ತದೆ' ಈ ಮಾತಿಗೆ ಆಫೀಸ್ ಟ್ರಿಪ್ ಒಂದು ಒಳ್ಳೆಯ ದೃಷ್ಟಾಂತ! ಈ ಪ್ರವಾಸದಲ್ಲಿ ಹೊಸ ಜಾಗವೊಂದನ್ನು 'ಎಕ್ಸ್ಪೋರ್' ಮಾಡ್ತೀವಿ ಅಂತ ಅಂದ್ಕೊಂಡ್ರೆ ಮಾತ್ರ ನಮ್ಮಷ್ಟು ಮೂರ್ಖರು ಯಾರೂ ಇರಲ್ಲ ಬಿಡಿ...ನಾವು ಅಂದ್ಕೊಳ್ಳೋದೇ ಒಂದು, ಟ್ರಿಪ್ಪಲ್ಲಿ ಆಗೋದೇ ಇನ್ನೊಂದು... ಆದ್ರೆ ಖುಷಿ ಪಡೋದಕ್ಕೆ, ಸಹೋದ್ಯೋಗಿಗಳ ಜೊತೆ ಮನರಂಜನೆ ಪಡೆಯೋದಕ್ಕಂತೂ ಯಾವುದೇ ಲಿಮಿಟ್ಸ್ ಇಲ್ಲ ಬಿಡಿ !! ...
ತಿಂಗಳಾನುಗಟ್ಲೆ ಕೂತು ಪ್ಲ್ಯಾನ್ ಮಾಡಿ ಹೊರಡುವ ಕಛೇರಿ ಪ್ರವಾಸಕ್ಕಿಂತ ಧಿಡೀರ್ ಅಂತ ತೀರ್ಮಾನವಾಗೋ 'ಆಫೀಸ್ ಟ್ರಿಪ್'ಗಳೇ ಬಹಳ ಖುಷಿ ಕೊಡೋದು... 'ನಾಡಿದ್ದು ಟ್ರಿಪ್' ಎಂದು ಥಟ್ಟನೆ ಹೇಳಿದಾಗ ಆಗೋ ಖುಷಿ, ಇದು 100% ಪಕ್ಕಾನಾ? ಎಂಬ ಸಣ್ಣದೊಂದು ಗುಮಾನಿ, ಛೇ, ಹೊಸಬಟ್ಟೆ ತಗೊಳ್ಳೋದ್ಯಾವಾಗ? ಎಂಬ ಚಿಂತೆ(ಹುಡುಗಿಯರಿಗೆ ಮಾತ್ರ) - ಇವೆಲ್ಲ ಒಟ್ಟೊಟ್ಟಿಗೇ ಮನಸ್ಸಲ್ಲಿ ದಾಂಧಲೆ ಎಬ್ಬಿಸುವಾಗಿನ ಆ ಸ್ಥಿತಿ... ಅನುಭವಿಸಿದವರಿಗೇ ಗೊತ್ತು! ಇರೋ ಕೆಲ್ಸಾನೆಲ್ಲ ಹೆಂಗೆಂಗೋ ಮುಗ್ಸಿ, ಟ್ರಿಪ್ ದಿನ ಇಷ್ಟ ಇಲ್ಲ ಅಂದ್ರೂ ಕಷ್ಟಪಟ್ಟು ಐದು ಗಂಟೆಗೆ ಅಲಾರಾಂ ಇಟ್ಟು, ಆರು ಗಂಟೆಗೆ ಎದ್ದು ಬೇಗನೆ ರೆಡಿಯಾಗಿ, ಕೈಗೆ ಸಿಕ್ಕಿದ್ದನ್ನೆಲ್ಲ ಬ್ಯಾಗಿಗೆ ತುರುಕಿ ಓಡೋವಾಗ ತಲೆಯೆಲ್ಲಾ ಖಾಲಿ ಖಾಲಿ - ಮುಂದಿನ ಸವಿ ಕ್ಷಣಗಳ ದಾಖಲೀಕರಣಕ್ಕೆ !! ಎಲ್ಲರೂ ಬೇಗನೇ ಹೊರಟಿದ್ರೂ ಕೊನೆಗೆ ಬಸ್ಸೇ ಲೇಟಾಗಿಯೋ ಅಥವಾ ಅದ್ಯಾವುದೋ ಮಹಾಶಯ/ಯಿ ಬರೋದು ತಡ ಆಗಿಯೋ ಇಲ್ಲಾ ಇನ್ನೊಂದೇನೋ ಆಗಿಯೋ, ಒಟ್ನಲ್ಲಿ ಹೊರಡೋದು ಲೇಟಾಗಿಲ್ಲ ಅಂದ್ರೆ ಆ ಟ್ರಿಪ್ಪಿಗೆ ಮಜಾ ಬರೋದಿಲ್ವೇನೋ... ಅಂತೂ ಕೊನೆಗೂ ಬಸ್ಸು ಹೊರಡತ್ತೆ. ಟ್ರಿಪ್ ಅನ್ನೋ ಕನಸು ನನಸಾಗುವ ಸಮಯ ಬರತ್ತೆ....
ಮನೆಯಲ್ಲಿ ತುಂಬಾ ಗಲಾಟೆ ಮಾಡೋ ಮಗು ಹೊರಗೆ ಬಂದಾಗ "ಸ್ವಲ್ಪ" ಹೊತ್ತು ತುಟಿಪಿಟಿಕ್ಕೆನ್ನದೇ ಕೂತಿರುತ್ತೆ. ಆಮೇಲೆ ಒಮ್ಮೆ ರಗಳೆ ಶುರು ಮಾಡಿದ್ರೆ ಮುಗೀತು!! ಸುಮ್ಮನಿರಿಸಲು ಅಮ್ಮ ಬಹಳ ಕಷ್ಟ ಪಡಬೇಕು. ಹಾಗೇ ಟ್ರಿಪ್ಪಲ್ಲೂ ಅಷ್ಟೇ... ಬಸ್ಸು ಹತ್ತಿದ ಒಂದು ಗಂಟೆ ಹೇಗೋ ಎಲ್ಲರೂ ಮಾತಿನಲ್ಲೇ ಕಾಲ ಕಳೆಯುತ್ತಾರೆ. ಆಮೇಲೆ ಶುರುವಾಗತ್ತೆ ಆಫೀಸ್ ಟ್ರಿಪ್ಪಿನ ನಿಜವಾದ ಗಮ್ಮತ್ತು!! ಕೂತಲ್ಲೇ ಅಂತ್ಯಾಕ್ಷರಿ, ಮಧ್ಯ ಮಧ್ಯೆ ಟೀಂಗಳ ನಡುವೆ ಸುಮ್ಮ ಸುಮ್ಮನೆ ಹುಸಿ ಜಗಳ, ಯಾರೋ ಒಬ್ಬರ ಕಾಲೆಳೆದು ಎಲ್ರೂ ಮಜಾ ತಗೊಳ್ಳೋದು, ಇರೋ ಬರೋ ಹಾಡಿನ ಧಾಟಿಯೆಲ್ಲಾ ಕೆಡಿಸಿ, ಜೋರಾಗಿ ಕಿರುಚೋದು, ದಮ್ ಶರದ್ ನಲ್ಲಿ ಒಬ್ಬೊಬ್ಬರ ಅಭಿನಯ ನೋಡಿ ನಗೋದು, ಇವೆಲ್ಲ ಮುಗಿದು ಒಂದು ಸಲ ಸಾಂಗ್ ಹಾಕಿ ಕುಣಿಯಲು ಶುರು ಮಾಡಿದ್ರೆ ಸಾಕು, ಇಳಿಯೋ ಜಾಗ ಬಂದಾಗಲೇ ಎಲ್ಲ ವಾಪಸ್ಸು ಈ ಲೋಕಕ್ಕೆ ಬರೋದು....
ಟ್ರಿಪ್ಪಿನ ಎರಡು ಮೂರು ದಿನದ ಸಣ್ಣ ಅವಧಿಯಲ್ಲೇ ನಾವು ಎಲ್ಲರೊಂದಿಗೆ ಬೆರೆಯೋದು, ಸಹೋದ್ಯೋಗಿಗಳು ಇನ್ನಷ್ಟು ಮನಸ್ಸಿಗೆ ಹತ್ತಿರವಾಗೋದು. ಕಂಪ್ಯೂಟರಿನ ಪರದೆ ನೋಡಿ ಕೀಬೋರ್ಡ್ ಕುಟ್ಟುವುದನ್ನು ಬಿಟ್ಟು, ಆಫೀಸಿನ ನಾಲ್ಕು ಗೋಡೆಗಳಾಚೆಗೆ ಒಬ್ಬರು ಹೇಗಿರುತ್ತಾರೆ, ಅವರ ಪ್ರತಿಭೆ, ಅಭಿರುಚಿ, ಆಸಕ್ತಿಗಳೇನು ಎಂದು ಅರ್ಥವಾಗೋದು... ಆಫೀಸಲ್ಲಿ ಜನ ಹೆಚ್ಚಾದಂತೆ ವಿಭಿನ್ನತೆಗಳು ಕೂಡಾ ಜಾಸ್ತಿಯಾಗುತ್ತವೆ. ನಮ್ಮಲ್ಲೇ ಒಬ್ಬರು ತುಂಬಾ ಚೆನ್ನಾಗಿ ಹಾಡಬಹುದು, ಒಳ್ಳೆಯ ಡ್ಯಾನ್ಸರ್ ಆಗಿರಬಹುದು, ಯಾರೋ ಅತ್ಯುತ್ತಮ ಫೋಟೋ ಕ್ಲಿಕ್ಕಿಸಬಹುದು, ಒಳ್ಳೆಯ ಹಾಸ್ಯ ಮಾಡಬಹುದು, ಇನ್ಯಾರೋ ಗೂಗಲ್ ಮ್ಯಾಪ್ ನೋಡಿ ಡ್ರೈವರ್ ಗೆ ದಾರಿ ಹೇಳಬಹುದು, ಒಬ್ಬರು ಎಲ್ಲರ, ಎಲ್ಲ ಕಾರ್ಯಕ್ರಮಗಳ ಸಮರ್ಪಕ ಮೇಲ್ವಿಚಾರಣೆ ಮಾಡಬಹುದು, ಮತ್ಯಾರೋ ಸುಮ್ಮನೆ ಕಿಟಕಿಯಾಚೆ ನೋಡುತ್ತಾ ಸದ್ದಿಲ್ಲದೆ ಅವರದೇ ಕಲ್ಪನಾಲೋಕದಲ್ಲಿ ವಿಹರಿಸಬಹುದು....
ಕೊನೆಗೂ ನೋಡಲು ಕಾತರಿಸಿದ್ದ ಆ "ಸ್ಥಳ" ಬಂದೇ ಬಿಡುತ್ತದೆ. ಕನಸಿನ ಹಕ್ಕಿಗೆ ರೆಕ್ಕೆ ಬಲಿಯುತ್ತದೆ, ಮನ ಮರ್ಕಟವು ಕುಣಿಯಲಾರಂಭಿಸುತ್ತದೆ... ಹಲವು ಚಿಂತೆ, ಮನಸ್ತಾಪಗಳ ಬದಿಗೊತ್ತಿ ಪ್ರಕೃತಿಯ ಮಡಿಲಲ್ಲಿ ಮಗುವಾಗುವ ಸಮಯವದು - ವಿವರಿಸಲು ಕಷ್ಟ... ಇನ್ನು ಹೋದಲ್ಲಿ, ಬಂದಲ್ಲಿ, ಕುಂತಲ್ಲಿ, ನಿಂತಲ್ಲಿ, ತಿನ್ನುವಾಗ, ಮಲಗುವಾಗ ಎಲ್ಲೆಂದರಲ್ಲಿ ನಮ್ಮ ಗ್ರೂಪ್ ಸೆಲ್ಫಿಗಳ ಹಾವಳಿ ಇದ್ದಿದ್ದೇ !! ಫೋಟೋಗೆ ಪೋಸ್ ಕೊಡಲು ಹುಚ್ಚರಂತಾಡುವ ನನ್ನಂಥ ಹುಡುಗಿ, ಹುಡುಗರ ದರ್ಶನವಾಗೋದು ಈ ಟ್ರಿಪ್ಪಿನ ಸಮಯದಲ್ಲೇ... ಹಾಗೇ ಪ್ರಕೃತಿಮಾತೆಯ ಸೊಬಗನ್ನು ಕ್ಯಾಮೆರಾ ಕಣ್ಣಲ್ಲಿ ಚಂದದ ಫ್ರೇಮಿನಲ್ಲಿ ಕಾಪಿಡುವ ಛಾಯಾಗ್ರಾಹಕರ "ಕ್ರಿಯೇಟಿವಿಟಿ"ಯ ಆಳ ತಿಳಿಯುವುದೂ ಅವಾಗಲೇ !!
ಹಗಲು ಹಾಡಾದರೆ ರಾತ್ರಿ ಕವಿತೆ. ಬೇಕಂತಲೇ ದೆವ್ವದ ಕತೆ ಹೇಳಿ ಹೆದರುವವರನ್ನು ಹೆದರಿಸುವ, ಹೆದರದವರನ್ನು ಎಬ್ಬಿಸಿ ಎಬ್ಬಿಸಿ ನಿದ್ರಿಸಲು ಬಿಡದ ಹುಡುಗಿಯರು ಒಂದು ಕಡೆಯಾದರೆ ಹುಡುಗರದು ಬೇರೆಯೇ ಕತೆ... ರಾತ್ರಿ ಹಚ್ಚಿದ ಕ್ಯಾಂಪ್ ಫೈರಿನ ಬೆಂಕಿ ಆರಿ, ಬೋದಿ ತಂಪಾದರೂ ಅವರ ಲವ್ ಟ್ರ್ಯಾಜೆಡಿಗಳು, ಬೈಕು, ಕಾರು, ಟ್ರೆಕ್ಕಿಂಗ್ ಕತೆಗಳು ಮುಗಿಯುವ ಸುಳಿವೇ ಇಲ್ಲ !!
ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಟ್ರಿಪ್ ಮುಗಿದು ವಾಪಸ್ಸು ಹೊರಡುವ ಸಮಯವಾಗಿರುತ್ತದೆ. ಖುಷಿ, ಬೇಜಾರು ಎರಡೂ ಬೆರೆತ ಸಮ್ಮಿಶ್ರ ಭಾವದಲ್ಲಿ ಪಯಣ ಸಾಗುತ್ತದೆ. ಕಳೆದ ಸವಿ ಕ್ಷಣಗಳು, ಆ ಸುತ್ತಾಟ, ಕುಣಿದಾಟ, ಮಂಗನಾಟಗಳೆಲ್ಲವೂ ಈಗ ನೆನಪ ಬುಟ್ಟಿ ಸೇರಿದ ಕುಸುಮಗಳು !! ಕೊನೆಗೂ ಊರು ಸೇರಿ ಎಲ್ಲರಿಗೂ ವಿದಾಯ ಹೇಳುವ ಘಳಿಗೆಯಲ್ಲಿ ಕಣ್ಣಲ್ಲಿ ತಳಮಳ, ಅದೇನೋ ಕಳೆದುಕೊಂಡಂತಹ ಭಾವ. ನಾಳೆಯಿಂದ ಮತ್ತದೇ ಆಫೀಸ್ ಕೆಲಸ ಎಂಬ ತುಸು ಬೇಸರ.... ಮರುದಿನದಿಂದ ಹಿಡಿದು ಇಡೀ ವಾರ ಆಫೀಸಲ್ಲಿ ಟ್ರಿಪ್ಪಿನಲ್ಲಾದ ಕತೆಗಳ ಮರು ಕ್ರೋಢೀಕರಣ, ಫೋಟೋಗಳ ಹಂಚಿಕೆ, ಜೊತೆಗೆ "ನೆಕ್ಸ್ಟ್ ಟ್ರಿಪ್ ಯಾವಾಗ?" ಎಂಬ ಆಲೋಚನೆಯ ಆರಂಭ !!
- R.R.B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ