ಸೋಮವಾರ, ಏಪ್ರಿಲ್ 8, 2019

ಹಾಗೇ ಸುಮ್ಮನೇ...

ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ
ನಿನ್ನ ಸೇರದೇ ಚಡಪಡಿಸೋ ನಾನೀಗ ನಿರುಪಾಯ
ಕನಸ ಜಾತ್ರೆಯಲಿ ನೀ ಮಾಯಕದ ಗಡಿಯಾರ
ಸಮಯ ಸರಿಯೋ ಮುನ್ನ ಓಡದಿರು ಬಲು ದೂರ...

ನನ್ನೀ ಬದುಕಲ್ಲಿ ನೀನೊಂದು ಮುದ್ದಾದ‌ ಅಧ್ಯಾಯ.....

ನಾ ಅಲೆವಾ ನೆನಪ ಬೀದಿಗಳಲಿ ನಿನ್ನದೇ ಗುಣಗಾನ
ನಿನಗೇಕೆ ಕೇಳುತಿಲ್ಲ ಈ ಅನುರಾಗದ ಸಂಧಾನ
ಕಾರಣವ ಹೇಳದೇ ಸುಮ್ಮನೆ ನೀ ದೂರಾದರೆ ಹೀಗೆ
ನನ್ನ ಪರಿಧಿಯ ಮೀರಿ ಹೇಗಂತ ನಾ ಬದುಕಿರಲಿ ಹೇಳೆ...

ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ....

ಬದುಕಿಗೆ ಬಣ್ಣ ತಂದೋಳು ನೀನೇ
ಮಧ್ಯ ದಾರಿಲಿ ಕೈ ಬಿಟ್ಟೋಳು ನೀನೇ
ಹುಚ್ಚು ಆಸೆಗೆ ಹಕ್ಕಿ ಪುಕ್ಕ ಕೊಟ್ಟೋಳು ನೀನೇ
ಕೊಟ್ಟ ಮಾತನು ಆರಾಮಾಗಿ ಮರೆತೋಳು ನೀನೇ
ನನ್ನೆಲ್ಲಾ ಹಸಿ ಕನವರಿಕೆಗಳ ರೂವಾರಿಯು ನೀನೇ
ಸತ್ತ ಕನಸುಗಳ ಸಮಾಧಿಗೆ ಒಡತಿಯೂ ನೀನೇ
ಹೋಗುವ ಮುನ್ನ ನೀನಿಲ್ಲದೇ ಬದುಕೋ ದಾರಿಯ ಹೇಳೇ....

ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ....

ಈ ಹೃದಯಕೆ ನೀಡದೆ ಬಂದೆಯಾ ಪ್ರೀತಿಯ ತೆರಿಗೆ
ಹೋಗೋ ಮುನ್ನ ಅದರಲಿ ಬರೀ ನೋವುಗಳ ಹೆರಿಗೆ
ಮೂರ್ಖ ಮನಸು ಮತ್ತೆ ಓಡಿದೆ ನಿನ್ನದೇ ಊರಿಗೆ
ಹಿಂತಿರುಗಿ ಬಂದುಬಿಡು ಒಮ್ಮೆ ಈ ಪ್ರೇಮಿಯ ಕರೆಗೆ...

ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ...

-R.R.B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...