ಭಾನುವಾರ, ಮಾರ್ಚ್ 3, 2019

ಬದುಕು ಚಿಕ್ಕದು, ಬದುಕಿಬಿಡಿ ಸಾಯುವ ಮುನ್ನ !!

                                ಜೀವನ ಅನ್ನೋದು ಚ್ಯೂಯಿಂಗ್ ಗಮ್ ನ ಗುಳ್ಳೆಯ ಥರಾ. ಅವಧಿ ಕಡಿಮೆ. ಇವತ್ತು ಆರಾಮಾಗಿರೋ ನಾನು ಅರ್ಧ ರಾತ್ರಿಯಲ್ಲಿ ಹೃದಯಾಘಾತವಾಗಿ ಸಾಯಬಹುದು, ದಿನಾಲೂ ಓಡಾಡುವ ಅದೇ ರಸ್ತೆಯಲ್ಲಿ ನಾಳೆ ಅಪಘಾತವಾಗಬಹುದು, ಇದ್ದಕ್ಕಿದ್ದಂತೆ ಬಿ.ಪಿ. ಕಮ್ಮಿಯಾಗಿ ಉಸಿರು ನಿಲ್ಲಬಹುದು... ಅಂತ್ಯ ಯಾರಿಗೂ ತಿಳಿದಿಲ್ಲ, ಆದ್ರೆ ಒಂದು ಒಳ್ಳೆಯ ಆರಂಭಕ್ಕೆ ಯಾವತ್ತೂ ತಡವಾಗಿಲ್ಲ. "It's never too late to start something new..."

                     "ಈಗ ನಾವು ಬದುಕುತ್ತಿಲ್ಲವಾ?" ಎಂಬುದು ಕಾಡುವ ಪ್ರಶ್ನೆ. ಉಸಿರಾಡುತ್ತಿದ್ದೇವೆ ಅಂದ್ರೆ ಜೀವ ಇದೆ ಅಂತ ಅರ್ಥ. ಆದ್ರೆ ನಮಗಿಷ್ಟವಾಗುವ, ನಮ್ಮ ಆಯ್ಕೆಯ ಬದುಕು ನಮ್ಮದಾ? ಒಮ್ಮೆ ಆಲೋಚಿಸಿ ಸಂಪೂರ್ಣ ಯಾಂತ್ರಿಕರಾಗುವ ಮುನ್ನ !! "ನಂಗೆ ಹಾಡೋದು(ಸಾಹಿತ್ಯ, ನೃತ್ಯ, ನಾಟಕ, ಯೋಗ, ಭಾಷಣ ಏನಾದ್ರೂ ಅಂದ್ಕೊಳ್ಳಿ) ಅಂದ್ರೆ ಇಷ್ಟ. ಆದ್ರೆ ಅದನ್ನೇ ನೆಚ್ಕೊಂಡಿದ್ರೆ ಹೊಟ್ಟೆಗೆ ಏನ್ ಗತಿ?" ಅನ್ನೋ ಪ್ರಶ್ನೆಗೆ ಉತ್ತರ ನಾವೇ ಹುಡುಕಬೇಕು. ಬೆಳಿಗ್ಗೆಯಿಂದ ಸಂಜೆತನಕ ಬ್ಯಾಂಕಲ್ಲೋ, ಆಫೀಸಲ್ಲೋ ದುಡಿದು ಸಂಜೆ ಸಂಗೀತ, ನಾಟಕ, ಭರತನಾಟ್ಯ, ಯಕ್ಷಗಾನ ಕಲಿಯುವ, ಕಲಿಸುವ ಜನರು ನಮ್ಮ ನಡುವೆಯೇ ಎಷ್ಟಿಲ್ಲ? ಎಲ್ಲವೂ ಸಾಧ್ಯ - ಕಠಿಣ ಪರಿಶ್ರಮ ಮತ್ತು ಗಟ್ಟಿ ಮನಸ್ಸಿದ್ದಲ್ಲಿ... ವೃತ್ತಿ - ಪ್ರವೃತ್ತಿ ಬೇರೆಯಾದರೂ ಸಾಧಿಸುವ ಛಲವೊಂದಿದ್ದರೆ ಸಾಕು ಅದ್ಭುತಗಳ ಸೃಷ್ಟಿಗೆ, ನವ ಜೀವನದ ಪುಷ್ಟಿಗೆ !! ಏನು ಇಷ್ಟವೋ (ಒಳ್ಳೆಯ ಕೆಲಸ, ಹವ್ಯಾಸ) ಅದನ್ನೇ ಮಾಡಿದರೆ "ಬದುಕು" ಬದುಕಾಗುವುದು, ಕನಸು ನನಸಾಗುವುದು, ಸಂತಸದ ಹೊಳೆ ಹರಿಯುವುದು...

                       ಎಲ್ರೂ ಬಿ.ಕಾಂ ಮಾಡ್ತಾರೆ ಅಂತ ನಾವೂ ಅದನ್ನೇ ಮಾಡಿದ್ರೆ, ಯಾರೋ ಇಂಗ್ಲೀಷ್ ಸಾಂಗ್ ಕೇಳ್ತಾರೆ ಅಂತ ನಾವೂ ಕಷ್ಟಪಟ್ಟು ಅದನ್ನೇ ಕೇಳಿದ್ರೆ, ಜೊತೆಗೆ ಯಾರೂ ಇಲ್ಲ ಅಂತ ನಿಮಗಿಷ್ಟವಾದ ಸಿನಿಮಾಗೋ, ನೆಮ್ಮದಿ ತರೋ ಪಾರ್ಕಿಗೋ, ಹೊಸ ಜಾಗಕ್ಕೋ ಹೋಗದೇ ಇದ್ರೆ ಬದುಕು ಬೇಸರದ ಗೂಡಾಗತ್ತೆ. ಹೊರಗೆ ನಗ್ತಾ ಇದ್ರೂ ಮನಸ್ಸಾಕ್ಷಿ ಅನ್ನೋದು ಸೂಜಿ ಥರಾ ಚುಚ್ತಾ ಇರತ್ತೆ. ಎಲ್ಲೋ ಒಂದು ಕಡೆ "ನಾನು ಅವರಂತಿಲ್ಲ.." ಅನ್ನೋ ಕೀಳರಿಮೆ ಶುರುವಾಗತ್ತೆ... ಒಪ್ಪಿಕೊಳ್ಳಿ - ನಾನು ಅವರಂತಿಲ್ಲ, ನಾನು ನಾನೇ ಎಂಬ ಸತ್ಯವನ್ನು.. ಆದ್ರೆ ನೆನಪಿಡಿ, ಜಗತ್ತಿನ ಏಳುನೂರಾ ಎಪ್ಪತ್ತು ಕೋಟಿ ಜನರಲ್ಲಿ ನೀವೂ ಒಬ್ಬರು. ಆದ್ರೆ ನಿಮ್ಮಂಥದ್ದೇ ಇನ್ನೊಂದು ಜೀವ ಇಲ್ಲ!!

                              ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಸಿ.ಎ. ಹತ್ರ ಹೋಗಿ 'ಎಪಿಜೆನೆಟಿಕ್ಸ್ ಬಗ್ಗೆ ಹೇಳಿ' ಅನ್ನೋದು, ಪ್ರೈಮರಿ ಟೀಚರ್ ಹತ್ರ ಹೋಗಿ 'ಡಿ.ಟಿ.ಎ.ಎ. ಬಗ್ಗೆ ವಿವರವಾಗಿ ಹೇಳಿ' ಅನ್ನೋದು ಎರಡೂ ಒಂದೇ.. ಫಲಿತಾಂಶ ಒಂದೇ... ಅದರ ಅರ್ಥ ಅವರಲ್ಲಿ ಜ್ಞಾನ, ಪ್ರತಿಭೆ ಇಲ್ಲಾ ಅಂತ ಅಲ್ಲ, ಅದರ ವ್ಯಾಪ್ತಿ ಬೇರೆ ಬೇರೆ ಅಷ್ಟೇ !! ಹೀಗಾಗಿ ನಮ್ಮಲ್ಲಿರೋ, ನಮಗಿಷ್ಟವಾಗಿರೋ ಕೆಲಸ, ಹವ್ಯಾಸಗಳನ್ನ ಮುಂದುವರಿಸಿಕೊಂಡು ಹೋದ್ರೆ ಸಾಕು. ಖುಷಿ ತಾನಾಗೇ ನಮ್ಮನ್ನು ಹುಡುಕಿಕೊಂಡು ಬರುತ್ತೆ. ಸಂತಸ ಮನದಲ್ಲಿ ಮನೆ ಮಾಡುತ್ತೆ. ನೆಮ್ಮದಿಯ ಗುಬ್ಬಚ್ಚಿ ಮನೆಯೊಳಗೆ ಗೂಡು ಕಟ್ಟುತ್ತೆ... ಬದುಕೊಂದು ಖಾಲಿ ಹಾಳೆ. ಕುಂಚ, ಬಣ್ಣ ಎರಡೂ ನಮ್ಮ ಕೈಯಲ್ಲೇ ಇದೆ. ಚೆಂದದ ಚಿತ್ರವಾಗಿಸುವ ಸಂಕಲ್ಪ ನಮ್ಮಲ್ಲಿರಬೇಕಷ್ಟೇ... ಅಮ್ಮ ಹಚ್ಚಿದ ಹಣತೆ ಆರಿಹೋಗುವ ಮುನ್ನ ನೋಡಿಬಿಡಿ ಬೆಳಕನ್ನು. ಬದುಕು ಚಿಕ್ಕದು, ಬದುಕಿಬಿಡಿ ಸಾಯುವ ಮುನ್ನ !!

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...