ಭಾನುವಾರ, ನವೆಂಬರ್ 11, 2018

ನಿವೃತ್ತಿ

                       ಏಪ್ರಿಲ್ 1, 2017. ಶನಿವಾರ. ಕೃಷ್ಣರಾಯರು ಎಂದಿಗಿಂತ ಅರ್ಧ ಗಂಟೆ ಮುಂಚೆಯೇ ಎದ್ದು ಕುಳಿತರು. ಎದೆಯಲ್ಲಿ ಏನೋ ಕಸಿವಿಸಿ, ಹೇಳಿಕೊಳ್ಳಲಾಗದ ತಳಮಳ. ಅಂದು ರಾಯರ ನಿವೃತ್ತಿಯ ದಿನ. ಮೂವತ್ನಾಲ್ಕು ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಮುಕ್ತಾಯ ಹಾಡುವ ಸಮಯ. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹೊಸದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣಗೊಳ್ಳುವ ದಿನ.... ಎದ್ದು ಕುಳಿತ ರಾಯರು ಒಮ್ಮೆ ನಿಟ್ಟುಸಿರು ಬಿಟ್ಟು ದೈನಂದಿನ ಕಾರ್ಯಗಳಲ್ಲಿ ತೊಡಗಿದರು. ಆದರೆ ಸ್ನಾನ ಮಾಡುವಾಗ ಮನಸ್ಸಲ್ಲಿ ವಿಚಿತ್ರ ಭಾವನೆಗಳು, ತಿಂಡಿ ತಿನ್ನುವಾಗಲೂ ಅದೇ ಅನ್ಯಮನಸ್ಕತೆ. ಅದನ್ನು ಗಮನಿಸಿದ ಪತ್ನಿ ಸುಶೀಲೆ ಏನೂ ಮಾತನಾಡದೇ ಸುಮ್ಮನಾದಳು. ರಾಯರು ಗಡಿಬಿಡಿಯಲ್ಲಿ ತಿಂಡಿ ತಿಂದು ಬ್ಯಾಂಕಿಗೆ ಹೊರಡಲು ಅನುವಾದರು. ಇಸ್ತ್ರಿಯಾದ ಗರಿಗರಿ ಶರ್ಟು, ಪ್ಯಾಂಟು,ಕೈಗೆ ಚಂದದ ಸೊನಾಟಾ ವಾಚು, ಗಾಂಭೀರ್ಯ ಹೆಚ್ಚಿಸುವ ಆ ಬೆಲ್ಟು, ಹೀಗೆ ಶಿಸ್ತಾಗಿ ಬ್ಯಾಂಕಿಗೆ ಹೊರಡುವ ಗಂಡನನ್ನು ಕಂಡರೆ ಐವತ್ತರ ಆಸುಪಾಸಿನ ಸುಶೀಲೆಗೆ ಏನೋ ಹೆಮ್ಮೆ, ಅಭಿವ್ಯಕ್ತಿಗೆ ಬಾರದ ಖುಷಿ.. ಪ್ರತಿದಿನ ಗೇಟಿಗೆ ತಾಗಿ ನಿಂತು ಅವರನ್ನು ಕಳುಹಿಸಿದ ಮೇಲೆಯೇ ಅವಳ ಮುಂದಿನ ಕೆಲಸ ಶುರು. ಆದರೆ ಇವತ್ತೇಕೋ ಅವಳ ಮುಖದಲ್ಲೂ ಬೇಸರದ ಛಾಯೆ.... ನಾಳೆ ಹೇಗಿರುತ್ತದೋ ಎಂಬ ಗೊಂದಲದ ನೆರಳು… 


                  ಬಿರಬಿರನೆ ಬ್ಯಾಂಕಿಗೆ ಹೊರಟ ರಾಯರ ಮನಸಲ್ಲಿ ಏನೋ ಕಳೆದುಕೊಂಡಂಥ ಅನುಭವ. ಎದೆಯಲ್ಲಿ ಖಾಲಿ ಖಾಲಿ ಭಾವ!... ಮುದ್ದಿನ ಮಗಳ ಮದುವೆಯ ದಿನವೂ ಇಷ್ಟು ಭಾವುಕನಾಗಿರಲಿಲ್ಲವೇನೋ ಎನ್ನಿಸುವಷ್ಟು! ಅಂದು ಬ್ಯಾಂಕು ಮಾತ್ರ ಥೇಟ್ ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿತ್ತು ! ಚೊಕ್ಕವಾಗಿ ಗುಡಿಸಿದ ಅಂಗಳ, ಗೇಟಿಗೆ ಮಾವಿನ ಎಲೆಯ ತೋರಣ, ಬಾಗಿಲಿಗೆ ಚಂದದ ಹೂವಿನ ಹಾರ, ಹಾಲಿನಲ್ಲಿ ನೀಟಾಗಿ ಜೋಡಿಸಿಟ್ಟ ಕುರ್ಚಿಯ ಸಾಲು, ಹೂದಾನಿಗೆ ಜೀವತುಂಬಿದ ಬಣ್ಣದ ಹೂವು, ಚೊಕ್ಕಟವಾದ ಕೆಲಸದ ಮೇಜು, ಅಲ್ಲಲ್ಲಿ ಜರಿ ಹೂಗಳ ಮಾಲೆ, ಮತ್ತು ಹಳೆಯದ್ದನ್ನು ಅಳಿಸದೇ ಅದರ ಮೇಲೇ ಹೊಸದಾಗಿ ಹಾಕಿದ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ಬೋರ್ಡು !…. ಒಳಹೊಕ್ಕ ರಾಯರಿಗೆ ಎಲ್ಲರೂ ಎಂದಿನಂತೆ ನಾರ್ಮಲ್ ಆಗಿ ಇರುವುದನ್ನು ಕಂಡು " ಛೇ...ನಾನೇ ಓವರ್ ಆಗಿ ಥಿಂಕ್ ಮಾಡ್ತಿದೀನಾ?..." ಎಂಬ ಪ್ರಶ್ನೆ. ಆದರೆ ನಿರೀಕ್ಷಿತ ಅತಿಥಿ ಆಡಿಟರ್ ಗಳಿಂದ ಅವರ ಯೋಚನಾಲಹರಿಗೊಂದು ಬ್ರೇಕ್ ಬಿತ್ತು. ಸ್ಟ್ಯಾಚುಟರಿ ಆಡಿಟ್ ಆದ ಕಾರಣ ಎಲ್ಲರಿಗೂ ಕೆಲಸ ತುಸು ಹೆಚ್ಚಾಗಿಯೇ ಇತ್ತು. ಫಿಸಿಕಲ್ ಕ್ಯಾಷ್ ವೇರಿಫಿಕೇಷನ್, ಲೋಕರ್ ರೆಂಟ್ ವೇರಿಫಿಕೇಷನ್, ಅದು ಇದು ಅಂತ ಆಡಿಟರುಗಳು ಗಡಿಬಿಡಿಯಲ್ಲಿ ಓಡಾಡುತ್ತ ಬ್ಯಾಂಕಿನ ಸಿಬ್ಬಂದಿಗಳಲ್ಲೂ ಗಂಭೀರತೆ ಮೂಡಿಸಿದ್ದರು. ಸಮಯ ಸರಿದದ್ದೇ ತಿಳಿಯಲಿಲ್ಲ. 


                    ಮಧ್ಯಾಹ್ನ ಹನ್ನೆರಡು ಗಂಟೆ. ಬ್ಯಾಂಕಿನವರೆಲ್ಲ ಒಬ್ಬೊಬ್ಬರಾಗಿ ಎದ್ದು, ಬೀಳ್ಕೊಡುಗೆ ಸಮಾರಂಭಕ್ಕೆಂದು ಜೋಡಿಸಿಟ್ಟ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತಿದ್ದರೆ ರಾಯರಲ್ಲಿ ಹೇಳಿಕೊಳ್ಳಲಾಗದ ಚಡಪಡಿಕೆ. ಸ್ವಲ್ಪ ಹೊತ್ತಲ್ಲೇ ಕಾರ್ಯಕ್ರಮ ಆರಂಭವಾಯಿತು. ಒಬ್ಬೊಬ್ಬರೇ ಸ್ಟೇಜಿಗೆ ಬಂದು ಕೃಷ್ಣರಾಯರ ಬಗ್ಗೆ ತಮಗಿರುವ ಪ್ರೀತಿ, ಗೌರವ, ಸದ್ದಿಲ್ಲದೇ ಬೆಳೆದ ಬಾಂಧವ್ಯದ ಕುರಿತು ಹೇಳುವಾಗ ರಾಯರ ಕಣ್ಣಂಚಲ್ಲಿ ನೀರು… “ಹೌದಲ್ಲವಾ, ಈ ಬ್ಯಾಂಕೇ ನನಗೆ ಎಲ್ಲವೂ ಆಗಿತ್ತು… ತಿನ್ನಲು ಅನ್ನ ಕೊಟ್ಟ, ಬದುಕಿಗೆ ಬಣ್ಣ ಕೊಟ್ಟ, ವ್ಯಕ್ತಿತ್ವಕ್ಕೊಂದು ಅಸ್ತಿತ್ವ ಕೊಟ್ಟ, ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ಪ್ರೀತಿಸುವ ಸಹೋದ್ಯೋಗಿಗಳ ಸಾಂಗತ್ಯ ಕೊಟ್ಟ ಸ್ಥಳವಿದು. ಮನೆಗಿಂತ ಹೆಚ್ಚು ಆಪ್ತವಾಗಿದ್ದ ಜಾಗ… ಆದರೆ ನಾಳೆಯಿಂದ ಇದಕ್ಕೂ ನನಗೂ ಸಂಬಂಧವಿಲ್ಲ…” ಎಂಬುದು ನೆನಪಾಗಿ ನಿಟ್ಟುಸಿರು. ಕೊನೆಯಲ್ಲಿ “ಕೃಷ್ಣರಾಯರು ತಮ್ಮ ಅನುಭವ ಹಂಚಿಕೊಳ್ಳಬೇಕು” ಎಂದಾಗ ನಡುಗುವ ದನಿಯಲ್ಲೇ ತಮ್ಮ ಮಾತು ಮುಗಿಸಿದ್ದರು. ಉಕ್ಕಿ ಬರುತ್ತಿದ್ದ ನೋವನ್ನು ತಡೆಯಲು ಕಣ್ಣುಗಳು ಅಸಮರ್ಥವಾಗಿದ್ದವು. ನೆನಪಿನ ಕಾಣಿಕೆ ಸ್ವೀಕರಿಸುವಾಗ ಕಣ್ಣಂಚಲ್ಲಿದ್ದ ನೀರು ಕೆನ್ನೆ ತಲುಪಿತ್ತು. ಅಳುತ್ತಿರುವುದು ಯಾರಿಗೂ ತಿಳಿಯದ ಹಾಗೆ ಸಂಭಾಳಿಸುವಷ್ಟರಲ್ಲಿ ರಾಯರಿಗೆ ಸಾಕು ಸಾಕಾಗಿತ್ತು. ಎಲ್ಲರಿಗೂ ವಿದಾಯ ಹೇಳಿ ಮನೆಯತ್ತ ಹೊರಟವರಿಗೆ ಮನಸ್ಸು ಸ್ಥಿಮಿತದಲ್ಲಿಲ್ಲವೆನಿಸಿ ಪಾರ್ಕಿಗೆ ಹೋಗಿ ಕುಳಿತರು. ನೆನಪಿನ ಗುಚ್ಛ ನಿಧಾನವಾಗಿ ತೆರೆದುಕೊಳ್ಳತೊಡಗಿತು……


                    ಅಪ್ಪನನ್ನೇ ಕಾಣದ ರಾಯರಿಗೆ‌ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೇಗೋ ಕಷ್ಟಪಟ್ಟು ಮಗನನ್ನು ಓದಿಸಿದ ಅಮ್ಮ. ವಯಸ್ಸಿಗೆ ಮೀರಿದ ಜಾಣ್ಮೆ, ತಾಳ್ಮೆ ಹೊಂದಿದ್ದ ಕೃಷ್ಣ ಮೊದಲ ಬಾರಿಗೇ ಬ್ಯಾಂಕಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕೆಲಸ ಗಿಟ್ಟಿಸಿಕೊಂಡಿದ್ದ. ಅಚ್ಚುಕಟ್ಟಾಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಲ್ಲದೇ ಪ್ರಮೋಷನ್ ಕೂಡ ಪಡೆದಿದ್ದ. ನಂತರ ಸುಶೀಲೆಯೊಂದಿಗೆ ಮದುವೆ, ಮಕ್ಕಳು ಎಲ್ಲಾ…. ರಾಯರ ಬದುಕಿನ‌ ಬಹುಪಾಲು ಕಳೆದದ್ದು ಅದೇ ಜಯನಗರದ ಬ್ಯಾಂಕಿನಲ್ಲಿ. ಮೂವತ್ತೈದು ವರ್ಷಗಳ ಸರ್ವಿಸ್ ನಲ್ಲಿ ಒಮ್ಮೆಯೂ ರಾಯರು ಕೋಪಗೊಂಡ ದಾಖಲೆಯೇ ಇಲ್ಲ. ಬದುಕನ್ನು ಪ್ರೀತಿಸುವ ಬಗೆ ಬಹುಶಃ ಎಲ್ಲರಿಗೂ ತಿಳಿದಿರುವುದಿಲ್ಲ. ಆದರೆ ರಾಯರು ತಾವಿದ್ದ ಬ್ಯಾಂಕಿನ ವಾಚ್ ಮೆನ್ ನಿಂದ ಹಿಡಿದು ಬರೆಯುವ ಪೆನ್ನನ್ನೂ, ಟೇಬಲ್ ಮೇಲಿರುವ ಪೇಪರ್ ವೇಟನ್ನೂ ಒಂದೇ ಸಮನಾಗಿ ಪ್ರೀತಿಯಿಂದ ಕಂಡವರು. ಅಲ್ಲಿನ ಇಂಚಿಂಚೂ ಅವರಿಗೆ ಆಪ್ತ… ಕುಳಿತುಕೊಳ್ಳುವ ಕುರ್ಚಿ, ಟೇಬಲ್ಲಿನಿಂದ ಹಿಡಿದು ಬ್ಯಾಂಕಿನ ಕಿಟಕಿ, ಬಾಗಿಲುಗಳ ಮೇಲೂ ಅದೇನೋ ಅಕ್ಕರೆ ಅವರಿಗೆ… ಎಲ್ಲರಿಗೂ ‘ಗುಡ್ ಮಾರ್ನಿಂಗ್’ ಹೇಳಿಯೇ ಕೆಲಸ ಆರಂಭಿಸುವ ಅಭ್ಯಾಸ.. ಅದೊಂಥರಾ ಹೇಳಲಾಗದ ಬಾಂಧವ್ಯ ರಾಯರಿಗೆ ಬ್ಯಾಂಕಿನ ಮೇಲೆ ಬೆಳೆದುಬಿಟ್ಟಿತ್ತು. ಈಗ ಒಮ್ಮೆಲೇ ನಾಳೆಯಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಇರುವ ಜೀವನವನ್ನು ಊಹಿಸಿಕೊಳ್ಳುವುದೂ ರಾಯರಿಗೆ ಕಷ್ಟವಾಗಿತ್ತು… ಹೃದಯ ಗೊಂದಲದ ಅಲೆಗಳಿಂದ ಹೊಯ್ದಾಡತೊಡಗಿತ್ತು… ಇನ್ನು ಮೇಲೆಯೂ ಕನಿಷ್ಟ ಪಕ್ಷ ಗ್ರಾಹಕನಾಗಿಯಾದರೂ ಈ ಬ್ಯಾಂಕಿಗೆ ಬರುತ್ತೇನೆ, ಇಲ್ಲವಾದರೆ ಹುಚ್ಚು ಹಿಡಿಯಬಹುದೇನೋ ಎನಿಸುತ್ತಿತ್ತು… “ಇಪ್ಪತ್ತೈದು ವರ್ಷ ಪ್ರೀತಿಯಿಂದ ಬೆಳೆಸಿದ ಸ್ವಂತ ಮಗಳೇ ಈಗ ಅಪರಿಚಿತಳಂತೆ ವರ್ತಿಸುತ್ತಾಳೆ. ಇನ್ನು ಇಷ್ಟು ದೊಡ್ಡ ಬ್ಯಾಂಕಿಗೆ ನನ್ನಂಥ ಕೆಲಸಗಾರರು ಲಕ್ಷಾಂತರ ಮಂದಿ ಇರುತ್ತಾರೆ. ನಾನು ನಿವೃತ್ತಿಯಾದೆ ಅಂತ ಯಾರು ಕೊರಗ್ತಾರೆ? ನಿವೃತ್ತಿ ಎಲ್ಲರಿಗೂ ಅನಿವಾರ್ಯ… ಅಗತ್ಯ ಕೂಡ !! 


                ಇನ್ನು ಮೇಲೆಯಾದರೂ ಅತಿಯಾಗಿ ಭಾವುಕನಾಗುವುದನ್ನು ಬಿಟ್ಟು ನನ್ನ, ಸುಶೀಲೆಯ ಆರೋಗ್ಯ ನೋಡಿಕೊಳ್ಳಬೇಕು. ಇಳಿಸಂಜೆಯಲ್ಲಿ ಅವಳೊಂದಿಗೆ ವಾಕಿಂಗ್ ಹೋಗಬೇಕು. ಇಷ್ಟು ದಿನವಂತೂ ಬ್ಯಾಂಕಿನ ವ್ಯವಹಾರಗಳಲ್ಲಿ ಮುಳುಗಿ, ಅವಳಿಗೆ ಸರಿಯಾಗಿ ಸಮಯವೇ ಕೊಟ್ಟಿಲ್ಲ. ಇನ್ನಾದರೂ ಸುಶೀಲೆಯ ಪಕ್ಕ ಕುಳಿತು ಗಂಟೆಗಟ್ಟಲೆ ಹರಟಬೇಕು. ಅವಳು ಮಾಡಿದ ಅಡುಗೆಗೆ ಪದೇ ಪದೇ ಹೊಗಳಬೇಕು. ಮಗಳ ನೆನಪಾಗಿ ಆಕೆ ನಿಟ್ಟುಸಿರು ಬಿಡುವಾಗ ಪ್ರೀತಿಯಿಂದ ಅವಳನ್ನು ಎದೆಗಪ್ಪಿಕೊಳ್ಳಬೇಕು……..” ಎಂದುಕೊಂಡ ರಾಯರು ಮನೆ ಕಡೆ ಹೊರಟರು. ಸುಶೀಲೆಯ ಬಳಿ ಚೆನ್ನಾಗಿ ಮಾತನಾಡಿದರು. ಆದರೆ ರಾತ್ರಿ ಮಾತ್ರ ರಾಯರಿಗೆ ನಿದ್ದೆ ಸುಳಿಯಲೇ ಇಲ್ಲ. ನಾಳೆ ಏನು ಮಾಡಬೇಕೆಂಬ ಗೊಂದಲ… ಬ್ಯಾಂಕಿನ ನೆನಪುಗಳು ಮತ್ತೆ ಮರುಕಳಿಸಲಾರಂಭಿಸಿತ್ತು. ಮತ್ತೆ ಬ್ಯಾಂಕಿಗೆ ಹೋಗಬೇಕೆನಿಸತೊಡಗಿತ್ತು. ಮರುದಿನ ಎಂದಿನಂತೆ ಎದ್ದು ನೀಟಾಗಿ ರೆಡಿಯಾದ ಗಂಡನನ್ನು ಕಂಡು ಸುಶೀಲೆಗೆ ಆಶ್ಚರ್ಯ !! “ಎಲ್ಲಿಗೆ ಹೋಗ್ತಿದೀರಾ?” ಎಂಬ ಪ್ರಶ್ನೆಗೆ ಗಡಿಬಿಡಿಯಲ್ಲಿ ಮನೆಯ ಹೊಸಿಲು ದಾಟುತ್ತಿದ್ದ ರಾಯರಿಂದ ಬಂದ ಒಂದೇ ಉತ್ತರ ಬ್ಯಾಂಕಿಗೆ!!


- R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...