ಭಾನುವಾರ, ಆಗಸ್ಟ್ 16, 2020

ಹಾಸ್ಟೆಲ್ ಕತೆಗಳು

ರೂಮಿನ ಎಲ್ಲ ಹುಡುಗರು ಸೇರಿ ರಾತ್ರಿ ಹನ್ನೆರಡು ಗಂಟೆಗೆ ಬರ್ತಡೇ ಪಾರ್ಟಿ ಮಾಡುತ್ತಿದ್ದರು. ಖುಷಿಯಲ್ಲಿ ಗದ್ದಲ ಹೆಚ್ಚಿದ್ದು ಅವರ ಅರಿವಿಗೆ ಬರುವಷ್ಟರಲ್ಲಿ ಬಂದ ಸಿಡುಕು ಮೂತಿಯ ವಾರ್ಡನ್ ಚೆನ್ನಾಗಿ ಬೈದು, "ಅಪಾಲಜಿ ಲೆಟರ್ ಬರೆಯದಿದ್ದರೆ ಹಾಸ್ಟೆಲ್ನಿಂದ ಹೊರಹಾಕ್ತೇನೆ" ಎಂದು ರೂಮಿಂದ ಹೋಗುವಾಗ ಹುಡುಗರ ಖುಷಿಯೂ, ಉತ್ಸಾಹವೂ ವಾರ್ಡನ್ ಹಿಂದೆಯೇ ಹೋಗಿಬಿಟ್ಟಿತ್ತು !
*****************************

ರಾತ್ರಿ ಹತ್ತುಗಂಟೆ. ಹಾಸ್ಟೆಲ್ನಲ್ಲಿ ಅಚಾನಕ್ಕಾಗಿ ಕರೆಂಟ್ ಹೋಯಿತು. ಇದಕ್ಕಾಗೇ ಕಾದಿದ್ದರೇನೋ ಎಂಬಂತೆ ವಾರ್ಡನ್ ನಿಂದ ತುಂಬಾ ಸಲ ಬೈಸಿಕೊಂಡಿದ್ದ ಹುಡುಗರು ವಾರ್ಡನ್ ಮುಖಕ್ಕೆ ಬೆಡ್ಶೀಟ್ ಮುಚ್ಚಿ ಯರ್ರಾಬಿರ್ರಿ ಹೊಡೆದರು. ಕರೆಂಟ್ ಬರುವಷ್ಟರಲ್ಲಿ ಕತ್ತಲೆಯ ಜೊತೆಗೆ ಹುಡುಗರೂ ಮಾಯ !
*****************************

ಊರಿಗೆ ಮೊಟ್ಟ ಮೊದಲು ವಾಷಿಂಗ್ ಮಷೀನ್ ಅಂತ ಬಂದಿದ್ದು ಅವಳ ಮನೆಗೆ. ಅದನ್ನೇ ಖುಷಿಯಿಂದ ರೂಮ್ ಮೇಟ್ಸಿಗೆಲ್ಲಾ ಹೇಳುವ ಅವಳು ಹಾಸ್ಟೆಲ್ ನಲ್ಲಿ ಕೈಯ್ಯಾರೆ ಬಟ್ಟೆ ಒಗೆಯುವ ಕೆಲಸಕ್ಕೆ ಒಗ್ಗಿಹೋಗಿದ್ದಳು !
*****************************

"ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ.." ಎಂದು ಪಾಠ ಮಾಡುತ್ತಿದ್ದ ಟೀಚರ್ ನ ಮಗಳು ಹಾಸ್ಟೆಲ್ ನ ಸಪ್ಪೆ ಊಟ ತಿನ್ನಲಾಗದೇ  ಗೆಳತಿಯರೊಡನೆ ಮೆಸ್ ನಲ್ಲಿ ಹಸಿಮೆಣಸಿನ ಕಾಯಿ ಕದ್ದಿದ್ದಳು !
*****************************
- R. R. B.

ಬುಧವಾರ, ಆಗಸ್ಟ್ 12, 2020

ಕಾಮರ್ಸ್_ಕವಿತೆಗಳು_35

ಕ್ಲೈಂಟುಗಳ ಅಕೌಂಟ್ಸಿನ ಗೋಲ್ಮಾಲ್ ಗಳ
ಸುಲಭವಾಗಿ ಕಂಡುಹಿಡಿಯವ ಆಡಿಟರ್ ಗೆ
ಬೇರೆಯವರು ತನ್ನ ತಪ್ಪು ಎತ್ತಿಹಿಡಿದಾಗ
ಒಪ್ಪಿಕೊಳ್ಳಲು ಬಲು ಇರಿಸುಮುರುಸಾಗಿತ್ತು !

- R. R. B.

ಮಂಗಳವಾರ, ಆಗಸ್ಟ್ 11, 2020

ಕಾಮರ್ಸ್_ಕವಿತೆಗಳು_34

ನೈಪುಣ್ಯತೆಯಿಂದ ಜಿಎಸ್ಟಿ ಅನಾಲಿಸಿಸ್,
2A - 3B ಯ ಪ್ರತಿ ಬಿಲ್ ಮ್ಯಾಚ್ ಮಾಡುವವ
ಹಬ್ಬ ಹರಿದಿನಗಳಲ್ಲಿ, ಸಮಾರಂಭಗಳಲಿ
ಗುಂಪಿಗೆ ಸೇರದ ಪದ ಎಂದರೆ ನಂಬಲು ಕಷ್ಟ !!

- R. R. B.

ಸೋಮವಾರ, ಆಗಸ್ಟ್ 10, 2020

ಕಾಮರ್ಸ್_ಕವಿತೆಗಳು_33

ಕೆಲವರು ವಿನ್‌ಮ್ಯಾನ್ ಸಾಫ್ಟವೇರಿದ್ದ ಹಾಗೆ
ಜುಲೈ - ಸಪ್ಟೆಂಬರ್ ತಿಂಗಳಲ್ಲಿ ಭಾರೀ ಬೇಡಿಕೆ
ಟ್ಯಾಕ್ಸ್ ಆಡಿಟ್ ಸೀಸನ್ ಮುಗಿದ ಮೇಲೆ 
ಸೈಡಲ್ಲಿ ನಿಲ್ಲುವ ಎಕ್ಸಟ್ರಾ ಪ್ಲೇಯರಿನಂತೆ !!

- R. R. B.

ಭಾನುವಾರ, ಆಗಸ್ಟ್ 2, 2020

ಸ್ನೇಹ ದಿನದ ಶುಭಾಶಯ

"ರಕ್ತ ಸಂಬಂಧಗಳಾ ಮೀರಿದಾ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು...." ಕವಿರಾಜ್ ಸರ್ ಬರೆದ ಈ ಹಾಡು ಒಂಥರಾ ಕನ್ನಡದ ಸಾರ್ವಕಾಲಿಕ ಸ್ನೇಹಗೀತೆ !... ಪ್ರತೀ ಬಾರಿ ಕೇಳಿದಾಗ ಹಳೆಯ ಸ್ನೇಹಿತ/ತೆಯರ ನೆನಪು, ನಾವು ಸಾಗಿ ಬಂದ ಕ್ಷಣಗಳ ಖುಷಿ, ಆ ತುಂಟಾಟ, ಒಡನಾಟ ಎಲ್ಲವೂ ಒಮ್ಮೆ ನೆನಪಾಗಿ ತುಟಿಯಂಚಿನಲ್ಲಿ ಕಿರು ನಗೆ ಮೂಡುತ್ತದೆ.
ಗೆಳೆತನ ಎಂಬುದೇ ಹಾಗೆ... ಸುಖ ದುಃಖಗಳ ಹಂಚಿಕೊಳ್ಳುತ್ತ ಸವಿನೆನಪುಗಳಲ್ಲಿ ಜಾಗ ಪಡೆಯುವ ದಿವ್ಯ ಭಾವ ! 

               ಹುಟ್ಟಿನಿಂದ ಸಾವಿನತ್ತ ಸಾಗುವ ಪಯಣದಲ್ಲಿ ಮಧ್ಯೆ ಜೊತೆಯಾಗಿ ಪ್ರೀತಿಯ ಸೋನೆ ಸುರಿಸುವ ಸ್ನೇಹಿತರು ಸಾವಿರಾರು... ಅಚಾನಕ್ಕಾಗಿ ಸಿಕ್ಕ ಕೆಲವರು ಮನದಂಗಳದಲ್ಲಿ ಖಾಯಂ ಅಂಗಡಿ ಹಾಕಿದರೆ, ವರ್ಷಗಟ್ಟಲೇ ನಮ್ಮ ಜೊತೆಗಿದ್ದ ಕೆಲವರು ಸದ್ದಿಲ್ಲದೇ ಜಾಗ ಖಾಲಿ ಮಾಡಿರುತ್ತಾರೆ. ಮತ್ತೆ ಹೊಸ ಗೆಳೆಯರು ಆ ಜಾಗ ತುಂಬುತ್ತಾರೆ... ಇದೊಂಥರಾ ಆವರ್ತ. ವಯಸ್ಸು, ಸ್ಥಳ, ಪರಿಸರ ಬದಲಾದಂತೆ ಸ್ನೇಹಿತರು ಬದಲಾಗುತ್ತಾರೆ. ಮೊಬೈಲಿನಲ್ಲಿ ಕಾಂಟ್ಯಾಕ್ಟ್ ನಂಬರುಗಳ ಪಟ್ಟಿ ಬೆಳೆಯುತ್ತದೆ. ಆದರೆ ಕೆಲವೇ ಕೆಲವು ಆಪ್ತರು ಮಾತ್ರ ಆರಂಭದಿಂದ ಕೊನೆವರೆಗೆ ನಮ್ಮ ಕಿತಾಪತಿಗಳಿಗೆ ಜೊತೆಯಾಗಿ ಬದುಕ ಹಾಳೆಗೆ ಭಾವಗಳ ಬಣ್ಣ ತುಂಬಿ,  ನಗುತ್ತಿರುತ್ತಾರೆ. 

             ಸ್ನೇಹ ಎಂಬ ಎರಡಕ್ಷರದ ಪದವೇ ಅಸಂಖ್ಯಾತ ಕವನಗಳ ಸಂಕಲನ. ಎಷ್ಟು ಬರೆದರೂ ಎಷ್ಟು ಮಾತನಾಡಿದರೂ ಮುಗಿಯದ ಸರಕು ಪ್ರೀತಿಯನ್ನು ಬಿಟ್ಟರೆ ಇದೇ ಇರಬೇಕು...! ಜೀವನದ ಕಷ್ಟಗಳಿಗೆ ಜೊತೆಯಾಗಿ, ಸಂಭ್ರಮದಲ್ಲಿ ಭಾಗಿಯಾಗಿ, ಮುಖದಲ್ಲೊಂದು ಮುಗುಳುನಗೆ ಸದಾ ಇರುವಂತೆ ನೋಡಿಕೊಳ್ಳುವ ನನ್ನೆಲ್ಲಾ ಸ್ನೇಹಿತ/ಸ್ನೇಹಿತೆಯರಿಗೆ ಪ್ರೀತಿಯಿಂದ ಧನ್ಯವಾದ ಹೇಳುತ್ತಾ, ಈ ಖುಷಿ ಹೀಗೇ ಇರಲಿ ಎಂಬ ಸಣ್ಣ ಬೇಡಿಕೆಯೊಂದಿಗೆ,

Happy Happy Friendship Day !! 😍😍

ಶನಿವಾರ, ಆಗಸ್ಟ್ 1, 2020

ಕಾಮರ್ಸ್_ಕವಿತೆಗಳು_32

ಬಹುಶಃ ಕೆಲವು ವಿಷಯಗಳೇ ಹಾಗೆ
ಹೊರನೋಟಕೆ ಸರಳ ಎನಿಸಿದರೂ 
ಬಹಳ ಕ್ಲಿಷ್ಟ - ಬೇರೆಯವರ ಬದುಕು 
ಹಾಗೇ ಅಕೌಂಟೆನ್ಸಿಯ ಡಿಪ್ರಿಸಿಯೇಷನ್ !

- R. R. B.

ಬುಧವಾರ, ಜುಲೈ 29, 2020

ಕಾಮರ್ಸ್_ಕವಿತೆಗಳು_31

ಹೊರಗೆ ಜಡಿಮಳೆ ಸುರಿಯುತ್ತಿದ್ದರೂ
ಆಫೀಸಿನೊಳಗೆ ಸದಾ ಏಸಿಯ ತಂಗಾಳಿ 
ಚಿಂತೆಗೆ ಬಿಸಿಯಾದ ತಲೆಯ ತಣಿಸಲೋ?
ಅಥವಾ ಕ್ಲೈಂಟುಗಳ ಫೀಸ್ ಏರಿಸಲೋ? 

- R. R. B.

ಶನಿವಾರ, ಜುಲೈ 25, 2020

ಕಳೆದುಹೋದ ಕವಿತೆ...

ಈಗೀಗ ಆಸಕ್ತಿಯೇ ಇಲ್ಲ ಯಾವುದರಲ್ಲೂ 
ಸ್ವಾತಂತ್ರ್ಯದಿ ರೆಕ್ಕೆಬಿಚ್ಚಿ ಹಾರದ ಕನಸು
ಖುಷಿಯ ಗರಿ ಸಿಕ್ಕಿಸಿಕೊಳ್ಳದ ಮನಸು
ಭಾವಗಳ ಬಣ್ಣದಲೂ ಬರೀ ಪೇಲವತೆ
ಹೈವೇಯಲಿ ಕಳೆದುಹೋಗಿದೆ ನನ್ನ ಕವಿತೆ !

ಸುರಿವ ಮಳೆ, ಹಸಿರ ಹೊಳೆ
ಮುಂಜಾವಿನ ಹಕ್ಕಿ ಹಾಡು
ಹರಿವ ಝರಿ, ನವಿಲುಗರಿ
ಫೂಟ್ಪಾತಲಿ ಬಿದ್ದ ಪಾರಿಜಾತ
ಎಲ್ಲಕೂ ಮೌನ ಗೌರಿಯ ವ್ರತ... !

ಆಫೀಸಿನ ಕಿಟಕಿಗಳೋ ಕಿವಿಮುಚ್ಚಿ ಕುಳಿತಿವೆ
ಕೀಬೋರ್ಡಿನ ಕಟಕಟ ಸದ್ದೇ ತಲೆನೋವಾಗಿ...
ಪೌರ್ಣಮಿ ಚಂದ್ರ ಶಾಪಿಂಗ್ ಮಾಲಿಗೆ
ಮಧ್ಯಾಹ್ನದ ಸೂರ್ಯ ತಾರಾಲಯಕ್ಕೆ
ಪಾದ ಬೆಳೆಸಿದ್ದಾರೆ - ಖುಷಿಯ ಹೆಕ್ಕಿ ತರಲು...!

ಹಳೆಯ ನೆನಪುಗಳು ಗುಳೇ ಹೊರಟಿವೆ
ನನ್ನೆದೆಯಿಂದ ಅವನ ಹೃದಯದ ಕಡೆಗೆ..
ನಾನಂತೂ ನೆನಪುಗಳ ಹಿಡಿದು ಬರಿದೇ ಕೂರುತ್ತೇನೆ
ಅವನಾದರೂ ಕವಿತೆ ಗೀಚುತ್ತಾನೆಂಬ‌ ಹಂಬಲದಲ್ಲಿ...!!

- R. R. B.

ಶುಕ್ರವಾರ, ಜುಲೈ 24, 2020

ಕಾಮರ್ಸ್_ಕವಿತೆಗಳು_30

ಕ್ಲೈಂಟುಗಳ ಪ್ರಾಜೆಕ್ಟ್ ರಿಪೋರ್ಟ್ ನ್ನು
ಖುಷಿಯಲ್ಲಿ ಸಿದ್ಧಪಡಿಸುತ್ತಿದ್ದ ಅವನು
ಹಿಂದಿನ ಕಹಿ ನೆನಪ ಮರೆಯಲಾಗದೇ
ಭವಿಷ್ಯದ ಬಗ್ಗೆ ತೀರ ಭಯಪಡುತ್ತಿದ್ದ !

-  R. R. B.

ಮಂಗಳವಾರ, ಜುಲೈ 21, 2020

ಕಾಮರ್ಸ_ಕವಿತೆಗಳು_29

ಕಂಪೆನಿಯ ಕ್ಯಾಷ್ ಫ್ಲೋ ಸ್ಟೇಟ್ಮೆಂಟುಗಳ  ತಯಾರಿಸುವುದರಲ್ಲಿ ಮುಳುಗಿದ್ದ ಅವನಿಗೆ
ಮಗನ ಫೀಸು ಕಟ್ಟಲು ನಾಳೆ ಕೊನೆಯ ದಿನ
ಎಂದು ನೆನಪಾಗಿ ಅಕೌಂಟ್ ಬ್ಯಾಲೆನ್ಸ್ ನೋಡತೊಡಗಿದ  !!

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...