"ರಕ್ತ ಸಂಬಂಧಗಳಾ ಮೀರಿದಾ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು...." ಕವಿರಾಜ್ ಸರ್ ಬರೆದ ಈ ಹಾಡು ಒಂಥರಾ ಕನ್ನಡದ ಸಾರ್ವಕಾಲಿಕ ಸ್ನೇಹಗೀತೆ !... ಪ್ರತೀ ಬಾರಿ ಕೇಳಿದಾಗ ಹಳೆಯ ಸ್ನೇಹಿತ/ತೆಯರ ನೆನಪು, ನಾವು ಸಾಗಿ ಬಂದ ಕ್ಷಣಗಳ ಖುಷಿ, ಆ ತುಂಟಾಟ, ಒಡನಾಟ ಎಲ್ಲವೂ ಒಮ್ಮೆ ನೆನಪಾಗಿ ತುಟಿಯಂಚಿನಲ್ಲಿ ಕಿರು ನಗೆ ಮೂಡುತ್ತದೆ.
ಗೆಳೆತನ ಎಂಬುದೇ ಹಾಗೆ... ಸುಖ ದುಃಖಗಳ ಹಂಚಿಕೊಳ್ಳುತ್ತ ಸವಿನೆನಪುಗಳಲ್ಲಿ ಜಾಗ ಪಡೆಯುವ ದಿವ್ಯ ಭಾವ !
ಹುಟ್ಟಿನಿಂದ ಸಾವಿನತ್ತ ಸಾಗುವ ಪಯಣದಲ್ಲಿ ಮಧ್ಯೆ ಜೊತೆಯಾಗಿ ಪ್ರೀತಿಯ ಸೋನೆ ಸುರಿಸುವ ಸ್ನೇಹಿತರು ಸಾವಿರಾರು... ಅಚಾನಕ್ಕಾಗಿ ಸಿಕ್ಕ ಕೆಲವರು ಮನದಂಗಳದಲ್ಲಿ ಖಾಯಂ ಅಂಗಡಿ ಹಾಕಿದರೆ, ವರ್ಷಗಟ್ಟಲೇ ನಮ್ಮ ಜೊತೆಗಿದ್ದ ಕೆಲವರು ಸದ್ದಿಲ್ಲದೇ ಜಾಗ ಖಾಲಿ ಮಾಡಿರುತ್ತಾರೆ. ಮತ್ತೆ ಹೊಸ ಗೆಳೆಯರು ಆ ಜಾಗ ತುಂಬುತ್ತಾರೆ... ಇದೊಂಥರಾ ಆವರ್ತ. ವಯಸ್ಸು, ಸ್ಥಳ, ಪರಿಸರ ಬದಲಾದಂತೆ ಸ್ನೇಹಿತರು ಬದಲಾಗುತ್ತಾರೆ. ಮೊಬೈಲಿನಲ್ಲಿ ಕಾಂಟ್ಯಾಕ್ಟ್ ನಂಬರುಗಳ ಪಟ್ಟಿ ಬೆಳೆಯುತ್ತದೆ. ಆದರೆ ಕೆಲವೇ ಕೆಲವು ಆಪ್ತರು ಮಾತ್ರ ಆರಂಭದಿಂದ ಕೊನೆವರೆಗೆ ನಮ್ಮ ಕಿತಾಪತಿಗಳಿಗೆ ಜೊತೆಯಾಗಿ ಬದುಕ ಹಾಳೆಗೆ ಭಾವಗಳ ಬಣ್ಣ ತುಂಬಿ, ನಗುತ್ತಿರುತ್ತಾರೆ.
ಸ್ನೇಹ ಎಂಬ ಎರಡಕ್ಷರದ ಪದವೇ ಅಸಂಖ್ಯಾತ ಕವನಗಳ ಸಂಕಲನ. ಎಷ್ಟು ಬರೆದರೂ ಎಷ್ಟು ಮಾತನಾಡಿದರೂ ಮುಗಿಯದ ಸರಕು ಪ್ರೀತಿಯನ್ನು ಬಿಟ್ಟರೆ ಇದೇ ಇರಬೇಕು...! ಜೀವನದ ಕಷ್ಟಗಳಿಗೆ ಜೊತೆಯಾಗಿ, ಸಂಭ್ರಮದಲ್ಲಿ ಭಾಗಿಯಾಗಿ, ಮುಖದಲ್ಲೊಂದು ಮುಗುಳುನಗೆ ಸದಾ ಇರುವಂತೆ ನೋಡಿಕೊಳ್ಳುವ ನನ್ನೆಲ್ಲಾ ಸ್ನೇಹಿತ/ಸ್ನೇಹಿತೆಯರಿಗೆ ಪ್ರೀತಿಯಿಂದ ಧನ್ಯವಾದ ಹೇಳುತ್ತಾ, ಈ ಖುಷಿ ಹೀಗೇ ಇರಲಿ ಎಂಬ ಸಣ್ಣ ಬೇಡಿಕೆಯೊಂದಿಗೆ,
Happy Happy Friendship Day !! 😍😍
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ