ಬುಧವಾರ, ಜುಲೈ 15, 2020

ಆರ್ಟಿಕಲ್ ಶಿಪ್ ಎಂಬ ಯಾತ್ರೆ

ಬದುಕಿನ ಮೂರೇ ಮೂರು ವರ್ಷ
ಆದರೆ ಕಲಿಸಿದ ಪಾಠಗಳು ಸಹಸ್ರ...

ಆಫೀಸು, ಕ್ಲೈಂಟ್ ಪ್ಲೇಸಿನ ಓಡಾಟದಿ
ಬಿಸಿಲು- ಮಳೆ - ಚಳಿಗಳು ಯಾವ ಲೆಕ್ಕ?
ಬ್ಯಾಂಕ್ ಆಡಿಟ್ಟು, ಸ್ಟಾಚುಟರಿ ಆಡಿಟ್ಟು
ಜಿ ಎಸ್ಟಿ, ವ್ಯಾಟು - ಮಾಡಿಲ್ಲ ವಾಟ್ ನಾಟು? 

ಆಗಾಗ್ಗೆ ಬಯ್ಯುವ ಬಾಸ್ ನಮಗೆ ಕಾಟವಾದರೆ
ಆಫೀಸಿನ ಮೂಲೆಯಲ್ಲಿ ಕುಳಿತ ಪ್ರಿಂಟರಿಗೆ ನಾವು ?
ತೆಗೆಯುವಾಗ ನೂರಾರು ಪೇಜು ಸ್ಟಡಿಮೆಟಿರಿಯಲ್ ಪ್ರಿಂಟು....!

ಕಲಿತದ್ದು, ಮರೆತದ್ದು, ಬೈಸಿಕೊಂಡದ್ದು
ಎಲ್ಲದಕ್ಕೂ ಕಿವಿ ಕಾನ್ಫರೆನ್ಸ್ ಹಾಲಿನ ಗೋಡೆ
ತಟಕ್ಕನೆ ಕೇಳಿದರೆ ಬಾಸ್ ನಮಗೆ ಕ್ವಸ್ಚನ್
ಮಾತಿಲ್ಲ, ಬರೀ ವಿಚಿತ್ರ ಎಕ್ಸಪ್ರೆಷನ್ !!

ಟೀಂ ಲಂಚ್ ಎಂದಾಗ ಮೂಡುವ ಮುಗುಳ್ನಗು
"ಸೆಮಿನಾರ್ ಮಾಡಿ" ಎಂದಾಗ ಮಾಯ !
ತಪ್ಪಿಗೆ ದೊರೆತ ಬೈಗುಳದ ನೋವು
ಪುಟ್ಟದೊಂದು ಅಪ್ರಿಸಿಯೇಷನ್ ಗೆ ಮಾಯ !

ಹೇಗಾದರೂ ಮುಗಿದರೆ ಸಾಕೆಂಬ ಧಾವಂತದಲಿ
ಕೂಡಿದ ಖುಷಿಗಳೆಷ್ಟೋ, ಕಳೆದ ದುಃಖಗಳೆಷ್ಟೋ
ಲೆಕ್ಕ ತಪ್ಪುತ್ತದೆ - ಭವಿಷ್ಯದ ಲೆಕ್ಕ ಪರಿಶೋಧಕರಿಗೂ
ಆರ್ಟಿಕಲ್ ಶಿಪ್ ಮುಗಿಸಿ ಹೊರಡುವಾಗ
ಮುದ್ದಾದ ಬದುಕ ಪುಟವ ತಿರುವುವಾಗ... !!

- R. R. B.

ಮಂಗಳವಾರ, ಜುಲೈ 14, 2020

ಕಾಮರ್ಸ್_ಕವಿತೆಗಳು_28

ಶೇರುಬೆಲೆ - ಕೊರೊನಾ ವೈರಸ್ ನಂತಿರಬೇಕಿತ್ತು
ಪ್ರತಿದಿನ ಸಂಖ್ಯೆಯಲ್ಲಿ ಏರಿಕೆ ಮಾತ್ರ
ಇಳಿಯುವ ಸಂಭವ ಬಹು ಕಡಿಮೆ
ಹೂಡಿಕೆ ಮಾಡಿದವರಿಗೆ ಕೈತುಂಬ ಲಾಭ !!

- R. R. B.

ಗುರುವಾರ, ಜುಲೈ 9, 2020

ಕಾಮರ್ಸ್_ಕವಿತೆಗಳು_27

ಟ್ಯಾಲಿಯ ಡೆಬಿಟ್ಟು ಕ್ರೆಡಿಟ್ಟುಗಳನೆಲ್ಲ
ನೀಟಾಗಿ ಅರೆದು ಕುಡಿದಿದ್ದ ಜಾಣನಿಗೆ
ಪ್ರೀತಿಯಲ್ಲಿ ಕೊಟ್ಟಿದ್ದೇನು, ಪಡೆದಿದ್ದೇನು
ಎಂಬ ಲೆಕ್ಕಾಚಾರ ಬೇಡವೆಂದು‌ ತಿಳಿದಿಲ್ಲ !..

- R. R. B.

ಬುಧವಾರ, ಜುಲೈ 8, 2020

ಕಾಮರ್ಸ್_ಕವಿತೆಗಳು_26

ಬೇರೆಯವರ ವ್ಯಾಪಾರದ ಲಾಭ ಎಷ್ಟು‌ ತೋರಿಸಿದರೆ
ಆದಾಯ ತೆರಿಗೆ ಕಡಿಮೆ ಕಟ್ಟಬಹುದು ಎಂದು 
ದಿನಪೂರ್ತಿ ಯೋಚಿಸುವವನ ಬಳಿ
ತನ್ನ ಸಂಬಳ ಸಾಲುತ್ತಿಲ್ಲವೆಂಬ ಸಮಸ್ಯೆಗೆ  ಪರಿಹಾರ ಇಲ್ಲ !

- R. R. B.

ಸೋಮವಾರ, ಜುಲೈ 6, 2020

ಕಾಮರ್ಸ್_ಕವಿತೆಗಳು_25

ನೂರಾರು ಪುಸ್ತಕಗಳನ್ನು ಚೆನ್ನಾಗಿ ಓದಿ
ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದವಳು
ಬದುಕಿನ ಪರೀಕ್ಷೆ ಎದುರಿಸಲಾಗದೇ
ಆತ್ಮಹತ್ಯೆಗೆ ಶರಣಾಗಿದ್ದು ಮೊನ್ನೆ ಬಿಸಿ ಸುದ್ದಿಯಾಗಿತ್ತು !..

- R. R. B.

ಭಾನುವಾರ, ಜುಲೈ 5, 2020

ಕಾಮರ್ಸ್_ಕವಿತೆಗಳು_24

ಅಗತ್ಯ‌ ವೇಳೆಗೆ ವೃತ್ತ ಸುತ್ತುವ ವೆಬ್ಸೈಟಿನಲ್ಲಿ
ತಿಂಗಳಿಗೆ ನೂರಾರು ಜಿಎಸ್ಟಿ ರಿಟರ್ನ್ 
ಗಳನ್ನು ತಪ್ಪಿಲ್ಲದೇ ಫೈಲ್ ಮಾಡುವವನಿಗೆ
ಕಾಯುವಿಕೆ ಎಂದರೆ ಇಷ್ಟವೇ ಇಲ್ಲವಂತೆ !!

- R. R. B.

ಶುಕ್ರವಾರ, ಜುಲೈ 3, 2020

ಕಾಮರ್ಸ್_ಕವಿತೆಗಳು_23

ಕಂಪೆನಿ ಲಾ, ಟ್ಯಾಕ್ಸೇಷನ್ ಗಳ ಸೆಕ್ಷನ್ - ಗಳನ್ನೆಲ್ಲ ನೆನಪಿಡುವ ಬುದ್ಧಿವಂತ
ಪ್ರೀತಿಪಾತ್ರರ ಹುಟ್ಟಿದ ದಿನ ನೆನಪಿಡಲು
ಫೇಸ್ಬುಕ್, ಕ್ಯಾಲೆಂಡರ್ ಗಳ ಮೊರೆ ಹೋಗುತ್ತಾನಂತೆ !!

- R. R. B.

ಬುಧವಾರ, ಜುಲೈ 1, 2020

ಕಾಮರ್ಸ್_ಕವಿತೆಗಳು_22

ವರ್ಷಕ್ಕೊಮ್ಮೆ ಬರೋ ಸ್ಟಾಚುಟರಿ ಆಡಿಟರ್ ಗೆ
ಬ್ಯಾಂಕಿನವರಿಂದ ಎಂದೂ ರಾಜ ಮರ್ಯಾದೆ 
ಆದರೆ ಪ್ರತಿದಿನ ಸರಿ ತಪ್ಪು ಗುರುತಿಸುವ
ಕನ್ಕರೆಂಟ್ ಆಡಿಟರ್ ಗಳೆಂದರೆ ಬರೀ ಅಸಡ್ಡೆ
ಬದುಕಲ್ಲೂ - ಕರೆದಾಗ ಸಹಾಯಕ್ಕೆ ಬಂದರೆ
ದೊರೆವ ಉಡುಗೊರೆ ಆಲಸ್ಯ, ಅಲಕ್ಷ್ಯವೇ !?

- R. R. B.

ಮೆಟ್ಟಿಲುಗಳು

ಮೆಟ್ಟಿಲು - ಆರೋಹಣ, ಅವರೋಹಣ
ಎರಡನ್ನೂ ಕಲಿಸುವ ಮೌನ ಗುರು
ಪಟಪಟನೆ ಮನೆಯ ಮೆಟ್ಟಿಲೇರಲು
ಕಲಿತ ಮಗು - ಮುಖ ಮಾಡುತ್ತದೆ
ಶಾಲೆಯ ಮೆಟ್ಟಿಲುಗಳ ಕಡೆಗೆ...
ಮನೆಯಲ್ಲಿ ಅಮ್ಮನಿಗೆ ಸಾವಿರ ನೆನಪ
ರಂಗೋಲಿ - ಪಾವಟಿಗೆಯ ಜೊತೆ ಬಿಟ್ಟು...

ಏರಲಾರದೇ ಢುಮ್ಮನೆ ಬಿದ್ದಾಗಿನ ಅಳು
ಅಳುವ ಕಂದಮ್ಮನ ಸಮಾಧಾನಕೆಂದೇ
ಸಿದ್ಧಾಪುರದಿಂದ ಹಾದಿತಪ್ಪಿಬಂದ ಆನೆ
ಮೆಟ್ಟಿಲ ಬಳಿ ಕತೆ ಹೇಳಿ ತಿನಿಸಿದ್ದ ಅಕ್ಕರೆಯ ತುತ್ತು
ನಗುವ ಮಗುವ ಕಿಲಕಿಲ ಸದ್ದು - ಎಲ್ಲವೂ
ಲಭಿಸಿದ್ದು ಮನೆಯ ಮೆಟ್ಟಿಲುಗಳ ಮೇಲೆ...!!

ಶಾಲೆಯ ಚಂದದ ಮೆಟ್ಟಿಲುಗಳಿಗೋ
ಸಹಸ್ರಾರು ಮೃದು ಪಾದಗಳ ಸ್ಪರ್ಷ
ಕಪಟವರಿಯದ ಮುಗ್ಧತೆಯ ಹರ್ಷ
ಬದುಕ ಪಾಠ ಕಲಿಸೋ ಮೇಷ್ಟ್ರುಗಳ
ಗಂಭೀರ ಅಂಗಾಲಿನ ಹೆಜ್ಜೆ ಗುರುತು...
ಬಿದ್ದದ್ದು, ಎದ್ದದ್ದು, ತಲೆಗೆ ಏಟಾಗಿ ಅತ್ತಿದ್ದು - ಎಲ್ಲ ನೆನಪುಗಳ ಕಾಪಿಟ್ಟಿದೆಯಂತೆ... !!

ಹೈಸ್ಕೂಲು, ಕಾಲೇಜಿನ ಮೆಟ್ಟಿಲುಗಳಿಗೆ
ಚಂಚಲತೆ, ತುಂಟತನದ ನವಿರು ಲೇಪನ...
ಹರೆಯದ ಸಾವಿರ ಹುಚ್ಚು ಕಲ್ಪನೆಗಳಿಗೆ
ಕೊನೆಯಿಲ್ಲದ ಆಸೆಗಳಿಗೆ, ಕಾಡು ಹರಟೆಗೆ
ಸಂಗಾತಿಯಾದ ಖುಷಿಯಂತೆ ಅದಕೆ...!!

ಇನ್ನು ಆಫೀಸಿನ ಸ್ಟೇರ್ಸುಗಳು ಗಂಭೀರವಾಗಿ
ಬಾಯ್ಮುಚ್ಚಿ ತಣ್ಣಗೆ ಕುಳಿತಿರುತ್ತವೆ -
ಎಲ್ಲರ ತರಲೆ, ತಲೆಬಿಸಿಗಳ ನೋಡಿ,
ಆಗಾಗ ಏಸಿಯ ತಂಗಾಳಿ ಹಿತವಾಗಿ ಸೋಕಿ..
ಅತ್ತರಿನಲ್ಲಿ ಮಿಂದ ಬ್ಯಾಚುಲರ್ ಗಳು
ವಿಶ್ವಾಮಿತ್ರರ ವಂಶದ ಮ್ಯಾನೇಜರ್ ಗಳು
ಸಂಬಳ ಖರ್ಚಾಗುತ್ತಿದ್ದಂತೆ ಜರ್ರನೆ ಇಳಿವ
ಆಫೀಸ್ ಕೆಲಸದ ಮೇಲಿನ ಹುಮ್ಮಸ್ಸು...
ಎಲ್ಲಕೂ ಮೆಟ್ಟಿಲು - ಮೂಕಸಾಕ್ಷಿಯಂತೆ... !!

ಬರೀ ಇವಷ್ಟೇ ಅಲ್ಲ,
ವಾರಾಂತ್ಯದಿ ತುಳುಕುವ ಅಂಗಡಿ, ಮಾಲು
ಸಿನಿಪ್ರಿಯರ ಫೇವರಿಟ್ ಚಿತ್ರಮಂದಿರ
ಲಿಫ್ಟ್ ಹಾಳಾಗಿ ನಿಂತ ಅಪಾರ್ಟ್ ಮೆಂಟು
ಕ್ರಿಕೆಟ್ ಗ್ರೌಂಡಿನ ಸುತ್ತ ಕನಸು ಕಟ್ಟುವ
ಅದೆಷ್ಟೋ ಮೆಟ್ಟಿಲುಗಳು ನೀರವವಾಗಿ
ಕುಳಿತಿವೆ - ಜೊತೆಗೆ ಜೀವನದ ಏಣಿಯಾಗಿ
ಹಲವರ ಗುರಿ ತಲುಪಿಸಲು ಸಹಾಯಹಸ್ತ
ಚಾಚುವ ಹಿರಿಯರ ಕೈಗಳೂ ಕೂಡಾ...!!

- R. R. B.

ಕಾಮರ್ಸ್_ಕವಿತೆಗಳು_21

ವಾಣಿಜ್ಯದಲ್ಲಿ ಪದವಿ ಪಡೆದವನೊಬ್ಬ
ಮೊದಲ ಬಾರಿ ಪ್ರೇಮ ನಿವೇದನೆಗೆ
ಹೊರಟ - "ಎಷ್ಟು ಪ್ರೀತಿಸುವೆ ನನ್ನ ?"
ಎಂಬ ಪ್ರಶ್ನೆಗೆ ಚೂರೂ ತಡವರಿಸದೇ "ಅಕೌಂಟೆನ್ಸಿ ಪರೀಕ್ಷೆಗೆ ಒಯ್ಯುವ ಕ್ಯಾಲ್ಕುಲೇಟರ್ ನಷ್ಟು" ಎಂದ.
ಅವರಿಗೀಗ ಇಬ್ಬರು ಮಕ್ಕಳಂತೆ !...

- R. R. B.

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...