ಶ್ರೀಧರ್ ಭಟ್ ತಲಗೇರಿಯವರ ಚೊಚ್ಚಲ ಇ - ಕವನಸಂಕಲನ. ಈ ಕೊರೋನಾ ಗಲಾಟೆ ಇಲ್ಲವಾಗಿದ್ದರೆ "ಹರಿದ ಜೇಬಿನ ಹೂವು" ಇವರ ಮೊದಲ ಕವನಸಂಕಲನವಾಗಿ ನಮ್ಮ ಕೈಸೇರುತ್ತಿತ್ತು. ಇರಲಿ, ಈಗ ಮೊಬೈಲ್ ನಲ್ಲೇ "ಒಂಟಿ ಟೊಂಗೆಯ ಲಾಂದ್ರ"ದ ಬೆಳಕ ನೋಡುವ ಸಂಭ್ರಮ...
ಕವಿತೆಗಳ ಕುರಿತು ಹೇಳುವ ಮೊದಲು ಕವಿಯ ಬಗ್ಗೆ ಒಂದಿಷ್ಟು :
"ಕಣ್ಣಿನಲ್ಲೇ ಕಣ್ಣ ತೀಡಿ ಕವಿತೆ ಹೆಕ್ಕಿ, ಬಣ್ಣ ಅದ್ದಿದ ಕುಂಚಕಿಲ್ಲಿ ಫ್ರೇಮ್ ಹಾಕಿ, ಎಲ್ಲ ಋತುವಿಗೂ ಇರಬಹುದಾದವ..." ಫೇಸ್ಬುಕ್ಕಿನ ಬಯೋ ಓದುವಾಗಲೇ ಇವನ ಪರಿಚಯ ಹಲವರಿಗೆ ಆಗಿರಬಹುದು. ಭಾವನೆಗಳನ್ನು ಪದಗಳಲ್ಲಿ ಹಿಡಿದಿಡುವುದು ಜಾಗರೂಕತೆಯಿಂದ ಕಸೂತಿ ನೇಯ್ದಂತೆಯೇ... ಅದರಲ್ಲಿ ಈತ ಪರಿಣಿತ. ಅದ್ಭುತ ಮಾತುಗಾರ. ಕುಂಚ ಹಿಡಿದರೆ ಸುಂದರ ಚಿತ್ರಗಳ ಸುರಿಮಳೆ ಸುರಿಸುವವ. ಇನ್ನು ಈತನ ಫೋಟೋಗ್ರಫಿಯ ಬಗ್ಗೆ ನಾನು ವಿವರಿಸುವುದಕ್ಕಿಂತ ಒಮ್ಮೆ ನೀವೇ "Stories in a Frame" ಪುಟಕ್ಕೆ ಭೇಟಿ ಕೊಟ್ಟರೆ ಒಳಿತು.
"ಹೊಂಬಣ್ಣ"ದ ಕನಸ ನನಸಾಗಿಸಲು ಹೊರಟಿರುವ "ಯಾತ್ರಿಕ"ನೀತ... ಭಾವಗಳ ಉಸಿರ ಬಣ್ಣದ ಬಲೂನುಗಳಲ್ಲಿ ತುಂಬಿ ಓದುಗರತ್ತ ಅಕ್ಕರೆಯಿಂದ ಹಾರಿಬಿಡುವವ... ಯಾವಾಗಲೂ ಲವಲವಿಕೆಯಿಂದ ಹೊಸದೇನಾದರೂ ಓದುತ್ತ, ಬರೆಯುತ್ತ, ಒಳ್ಳೆಯ ಚಲನಚಿತ್ರಗಳ ಕಣ್ತುಂಬಿಸಿಕೊಳ್ಳುತ್ತ, ಹಳ್ಳಿಯ ಹಳೆಯ ನೆನಪುಗಳ ಜೊತೆಗೆ ಬೆಂಗಳೂರಿನ ಪ್ರತೀ ಮಳೆಯನ್ನು, ಬಿಸಿಲನ್ನು, ಮತ್ತೆ ಮತ್ತೆ ಕಾಡುವ ಸಂಜೆಗಳನ್ನು ಆಪ್ತವಾಗಿ ಅನುಭವಿಸುತ್ತ ಖುಷಿಯಿಂದ ಬದುಕುವವ...
'ಒಂಟಿ ಟೊಂಗೆಯ ಲಾಂದ್ರ'ದಲ್ಲಿ :
ಒಟ್ಟೂ ಮೂವತ್ತನಾಲ್ಕು ಕವನಗಳಿವೆ. ಒಂದಕ್ಕಿಂತ ಒಂದು ಚೆನ್ನ. ಒಮ್ಮೆ ಹಳ್ಳಿಯ ಸೊಬಗು ಕಣ್ಮುಂದೆ ಬಂದರೆ ಮುಂದಿನ ಕವಿತೆಯಲ್ಲಿ ನಗರದ ಬೃಹತ್ ಕಟ್ಟಡಗಳಲ್ಲಿ ಕಾಣೆಯಾಗುವ ಮನಸ್ಸುಗಳ ಹುಡುಕಾಟವಿದೆ. "ನಿನ್ನ ಬಗ್ಗೆಯೇ ಬರೆದೆ
ನನ್ನ ಒಳಗೆಲ್ಲೂ ಇಳಿಯದೇ..." ಎಂದು ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ, ಭಾವುಕರಾಗಿ 'ಕವಿಯಾಗಬಾರದಿತ್ತು ನಾನು' ಎನ್ನುತ್ತಾರೆ ಕವಿ. ನಾಗರಿಕ ಬದುಕಿನ ಸೂಕ್ಷ್ಮಗಳ ನಡುವಿನ ಗೆರೆಯ ಬಗ್ಗೆ ಸೂಚ್ಯವಾಗಿ ಹೇಳುತ್ತ "ರಾವಣ ಮಾರುವೇಷದಲ್ಲಿದ್ದಾನೆ" ಎಂದು ಇಂದಿನ ವಾಸ್ತವದ ಚಿತ್ರಣ ನೀಡುತ್ತಾರೆ. ಮಹಾನಗರದಲ್ಲಿ ಸಿಕ್ಕ ಸಿಕ್ಕಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತುವಾಗ "ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ" ಎಂದು ಖುಷಿ(?) ಪಡುತ್ತಾರೆ. ಯಾಂತ್ರಿಕ ಬದುಕಿಗೆ ಬೇಸತ್ತು "ಮತ್ತೆ ಎಲ್ಲರೂ ಒಮ್ಮೆ ಬಾಲ್ಯಕ್ಕೆ ಮಗುಚಿಕೊಳ್ಳುವಂಥ ಒಂದು ಮಳೆ ಬರಬೇಕು" ಎನ್ನುತ್ತಾರೆ. ಓದುತ್ತ ಓದುತ್ತ ನಿಜಕ್ಕೂ ಅಂಥಾ ಮಳೆಯೊಂದು ಬಂದಿದ್ದರೆ ಎಷ್ಟು ಒಳ್ಳೆಯದಿತ್ತು ಎನಿಸಿಬಿಡುತ್ತದೆ ! "ಅದು ನನ್ನದೇ ತಿಥಿ ಯಾಕೆಂದರೆ ನಾನು ಮಾತ್ರ ಸತ್ತಿದ್ದು ಅವನ ಪಾಲಿಗೆ..." ಎಂಬ ಸಾಲುಗಳಲ್ಲಿ ಅದೆಷ್ಟು ಭಾವ ತೀವ್ರತೆಯಿದೆಯೋ... ನನಗಂತೂ ಅಚಾನಕ್ಕಾಗಿ ಹುಟ್ಟಿ ವಿಚಿತ್ರವಾಗಿ ಕೊನೆಗೊಂಡ ಕೆಲವು ಸ್ನೇಹಗಳ, ಸ್ನೇಹಿತರ/ತೆಯರ ನೆನಪಾಯಿತು...
"ನಾಗರಿಕತೆ ಬೆಳೆಯುತ್ತದೆ ಅವಳ ಬೆವರಿನಲಿ, ಎದೆಯ ಬಿಸಿಯಲಿ, ಮೃದು ಉಸಿರಲಿ, ಅವಳೇ ಕೊಂದ ಕನಸಿನಲಿ" ಎಂಬ ಸಾಲುಗಳ ಓದುವಾಗ ವಿಷಾದವೊಂದು ಮೂಡುತ್ತದೆ. ಜೊತೆಗೆ ಎದೆಯಲ್ಲಿ ಬೆಳೆಯುವ ಕವಿತೆಗೆ ಇಂಥದ್ದೇ ವಿಷಯವಾಗಬೇಕೆಂಬ ಹಂಗಿಲ್ಲ ಎನಿಸುತ್ತದೆ... "ಮತ್ತೆ ಅಪರಿಚಿತರಾದೆವು ಅದೇ ರಸ್ತೆಯಲ್ಲಿ... ಒಂದು ಸಣ್ಣ ವಿದಾಯದ ಮಾತೂ ಇಲ್ಲದಂತೆ..." ಎಂಬ ಕವಿಯ ಸಾಲುಗಳು ಜೀವನದ ಪಯಣದಲ್ಲಿ ಸಿಕ್ಕೂ ಸಿಕ್ಕದಂತಿರುವವರ, ಅತಿ ಕಡಿಮೆ ಅವಧಿಯಲ್ಲಿ ಮಾತಿಲ್ಲದೇ ಹತ್ತಿರವಾದವರ ನೆನಪು ಮಾಡಿಸುತ್ತದೆ.
ಇವರ ಎಲ್ಲ ಕವಿತೆಯಲ್ಲಿ ಪದಗಳ ಬಳಕೆ ಬಲು ಚಂದ... ಸಂದೇಶವೊಂದನ್ನು ಸೂಕ್ಷ್ಮವಾಗಿ ಹೇಳುತ್ತ, ಏನೂ ಹೇಳೇ ಇಲ್ಲವೇನೋ ಎನ್ನಿಸುವಂತೆ ಹೇಳಿ ಮುಗಿಸುವ ಛಾತಿ ಅದ್ಭುತ... ಒಮ್ಮೆ ಓದಿದ ಕವಿತೆ ಇನ್ನೊಮ್ಮೆ ಓದುವಾಗ ಹೊಸ ಆಯಾಮ ಪಡೆಯುವ ರೀತಿ ಅಚ್ಚರಿ ತರಿಸುವಂತಿದೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ ಇವರ ಕೆಲವು ಕವನಗಳು ನನಗೆ ಕೈಗೆಟುಕದ ನಕ್ಷತ್ರ. ಎರಡು ಬಾರಿ ಓದಿದರೂ ಪಕ್ಕನೆ ಭಾವಾರ್ಥ ತಲೆಗೆ ಹೋಗುವುದಿಲ್ಲ... ಅಥವಾ ಅರ್ಥವಾಗದ ಇನ್ನೂ ಏನೋ ಇದೆಯೆಂಬ ಭಾವ ನನ್ನಲ್ಲಿ ಉಳಿದುಬಿಟ್ಟಿರುತ್ತದೆ. ಅಷ್ಟಕ್ಕೂ 2+2=4 ಎಂದು ಓದಿ ಮುಗಿಸಲು ಕವಿತೆ ಗಣಿತವಲ್ಲ !! ಅದನ್ನು ಆಸ್ವಾದಿಸುವ ರೀತಿಯೇ ಬೇರೆ... !
ಇನ್ನು ಈಗಾಗಲೇ ಹಲವರು ಫೇಸ್ಬುಕ್ ನಲ್ಲಿ ಇವರ ಕವಿತೆಗಳನ್ನು ಓದಿಯೇ ಇರುತ್ತೀರಾ.. ಅವರಿಗೆಲ್ಲ ನಾನು ಹೇಳುವುದೇನೆಂದರೆ 'ಒಂಟಿ ಟೊಂಗೆಯ ಲಾಂದ್ರ'ದಲ್ಲಿನ ಕವಿತೆಗಳು ಅವೆಲ್ಲಕ್ಕಿಂತ ಬಹಳ ವಿಭಿನ್ನ. ಸಂಜೆ ಐದರ ಮಳೆಯ ವಿಳಾಸದಲ್ಲಿ ಕವಿತೆಗಳು ನಿಮಗಾಗಿ ಕಾದು ಕುಳಿತಿದೆ. ಒಮ್ಮೆ MyLang ಗೆ ಹೋಗಿ ಓದಿಬಿಡಿ 😍😍
(ಇವಳೇನು ಒಮ್ಮೆ ಏಕವಚನದಲ್ಲಿ, ಒಮ್ಮೆ ಬಹುವಚನದಲ್ಲಿ ಬರೆದಿದ್ದಾಳೆ ಎಂದು ಯಾರೂ ತಲೆಕೆರೆದುಕೊಳ್ಳಬೇಡಿ... ಕವಿಯ ಬಗ್ಗೆ ಹೇಳುವಾಗ ಸ್ನೇಹಿತನೆಂಬ ಸಲುಗೆಯಿಂದ ಏಕವಚನ ಬಳಸಿ, ಕವಿತೆಗಳ ಬಗ್ಗೆ ಹೇಳುವಾಗ ಕವಿ/ಸಾಹಿತಿಯೆಂದು ಗೌರವಸೂಚಕವಾಗಿ ಬಹುವಚನ ಬಳಸಿದ್ದೇನೆ... 😀)