ರೈಲುಹಳಿಗಳ ನಡುವಿಟ್ಟು ಉಬ್ಬಿಸಿದ ಆ ನಾಣ್ಯ
ಉಯ್ಯಾಲೆಯೇ ನೆಪವಾಗಿ ನಡೆಯುತ್ತಿದ್ದ ಜಗಳ
ತಪ್ಪು ತಿದ್ದುವ ಅಜ್ಜಿಯ ಪ್ರೀತಿಯಾ ಬೈಗುಳ
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ !
ತೋಟದ ಕಾಲುದಾರಿಯ ತುದಿಯ ಜಾರು
ಮರುಕಳಿಸುವ ಸವಿನೆನಪುಗಳ ಪಟ್ಟಿ ನೂರು
ದಿನವಿಡೀ ಗದ್ದೆಯಲಿ ದುಡಿವ ಹಳೆ ಜೀವ
ಕೂಡಿಬಾಳುವ ಹಿರಿಯರ ಸುಮಧುರ ಭಾವ
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ !
ಅಂಗಳದಿ ತಂಗಿಯ ಅಕ್ಕರೆಯ ಗುಲಾಬಿಗಿಡ
ಅಟ್ಟದ ಮೇಲಿನ ಗೋಣಿಯ ಕೆಳಗಿನ ತುಂಡು ಹಾಳೆ
ಪ್ರೀತಿಯ ಗೆಳತಿ ಕೊಟ್ಟ ಮೊದಲ ನವಿಲುಗರಿ
ಅತ್ತುಕರೆದು ಜಾತ್ರೆಯಲಿ ಕೊಂಡ ಬಣ್ಣದ ಬುಗುರಿ
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ !
ಖಾಲಿ ವರಾಂಡದಲಿ ಗೋಡೆಗಡಿಯಾರದ ಸದ್ದು
ಮನೆ ಮುಂದೆ ಮಕ್ಕಳ ಕುಂಟೆಬಿಲ್ಲೆಯ ಆಟ
ಹಿತ್ತಲಲಿ ಹೆಂಗಸರ ಮುಗಿಯದ ಮಾತುಕತೆ
ಅದ್ಯಾರದೋ ಮಗಳು ದೊಡ್ಡವಳಾದಳೆಂಬ ಸುದ್ದಿ
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ !
ಊರ ಕೆರೆಯಂಚಲಿ ಗಂಡಸರ ಗುಸುಗುಸು
ನೆರಳಾಗುತ್ತಿದ್ದ ರಸ್ತೆಯಂಚಿನ ಮಾವಿನ ಮರ
ಬದುಕಮೆನೆಗೆ ತಂದ ನೆನಪ ಹೊಯ್ಗೆ ರಾಶಿ
ನನ್ನಾಕೆಯ ಮುಖದಿ ಮಾಸದ ಮುಗುಳ್ನಗು
ಎಲ್ಲವೂ ಮೊದಲಿದ್ದ ಹಾಗೆಯೇ.....
ಬದಲಾಗಿದ್ದು 'ನಾನು' ಮಾತ್ರ !
- R. R. B.
5 ಕಾಮೆಂಟ್ಗಳು:
ಹೌದು, ನಾನೂ ಕೂಡ ಬದಲಾದೆ
ನಿಜಕ್ಕೂ ಜಗತ್ತಿನಲ್ಲಿ ಪರಿವರ್ತನೆಯೊಂದೇ ನಿರಂತರ ಸತ್ಯ.
ಪ್ರತಿಕ್ರಿಯೆಗೆ ಧನ್ಯವಾದಗಳು
ನಿಜ... ಧನ್ಯವಾದಗಳು
ಚೆನಾಗಿದೆ...ಬರೆಯುತ್ತಿರಿ
ಕಾಮೆಂಟ್ ಪೋಸ್ಟ್ ಮಾಡಿ