ಪ್ರೀತಿಯ ಗೆಳೆಯನಿಗೆ, ನಿನ್ನ ನೋಡದೇ ತುಂಬಾ ದಿನ ಆಯ್ತು. ಹೇಗಿದೀಯಾ? ಯಾವಾಗ ಸಿಗ್ತೀಯಾ?... ನೀನಿಲ್ಲದ ಬದುಕು ಒಂಥರಾ ಬೋರಿಂಗ್ ಕಣೋ - ಇಂಟರ್ನೆಟ್ ಇಲ್ಲದ ಮೊಬೈಲ್ ಹಾಗೆ. ಯಾವಾಗ ನಿನ್ನ ನೋಡ್ತೀನೋ, ಪಟಪಟ ಅಂತ ಮಾತಾಡ್ತೀನೋ ಅಂತನಿಸ್ತಿದೆ. ಜೀವನ ಪೂರ್ತಿ ನಿನ್ನ ಜೊತೆನೇ ಇದ್ದರೂ ಸಾಕಾಗಲ್ಲ ನಂಗೆ. ಉರುಳೋ ಕಾಲಚಕ್ರವನ್ನು ತಡೆದು ನಿಲ್ಲಿಸೋ ಹಾಗಿದ್ದಿದ್ರೆ...!!
ಬದುಕೊಂದು ಚಂದದ ಪುಸ್ತಕವಾದ್ರೆ ಅದರಲ್ಲಿ ಮುದ್ದಾದ ಅಧ್ಯಾಯ ನೀನು. ಅದರ ಪ್ರತಿ ಪುಟದಲ್ಲೂ ನಿನ್ನ ಹೆಸರಿರಲಿ ಎಂಬ ಹೆಬ್ಬಯಕೆ ನನ್ನದು. ಗೆಳೆಯಾ, ನಾನು ವಾಣಿಜ್ಯಶಾಸ್ತ್ರ ಓದಿದ್ದೇ ವೇಸ್ಟು. ನನಗೆ ಅಂಥ ತುಟ್ಟಿಯಾದ ಆಸೆಗಳೇನಿಲ್ಲ ಬಿಡು, ಸುಂದರ ಸಂಜೆಗಳಲಿ ಇಬ್ಬರೇ ಕೈಕೈ ಬೆಸೆದು ಗಮ್ಯವಿಲ್ಲದೇ ಸಂಚರಿಸಬೇಕು, ಬದುಕು ಸಾಗಿಬಂದ ಹಾದಿಯಲ್ಲಿನ ಚೆಂದದ ನೆನಪುಗಳ ಕಲ್ಲನ್ನು ಪರಸ್ಪರ ಹಂಚಿಕೊಳ್ಳಬೇಕು. ಸಿಹಿಯಾದ ನಾಳೆಗಳ ಬಗ್ಗೆ ಕನಸುಗಳ ಮೂಟೆ ಕಟ್ಟಬೇಕು. ಅದನ್ನು ನನಸು ಮಾಡುವ ಬಗ್ಗೆ ತುಸು ಗಂಭೀರ ಮಾತುಕತೆಯೂ ಬೇಕು. ಕಡಲ ಕಿನಾರೆಯ ಮರಳಿನಲಿ ಮತ್ತೆ ಮತ್ತೆ ನಮ್ಮ ಹೆಸರು ಬರೆಯಬೇಕು. ಅಲೆಗಳು ಆಟವಾಡುವುದ ನೋಡುತ್ತಾ ನಿನ್ನ ಹೆಗಲ ಮೇಲೆ ತಲೆಯಿಟ್ಟು ಒಂದರೆ ಘಳಿಗೆ ಪ್ರಪಂಚವನ್ನೇ ಮರೆಯಬೇಕು. ನನ್ನ ಅರ್ಥವಿಲ್ಲದ ಮಾತುಗಳನ್ನೆಲ್ಲ ಮುಗುಳುನಗೆಯಿಂದ ಕೇಳಿಸಿಕೊ ಸಾಕು. ನಿನ್ನ ಅಕ್ಕರೆಯ ಮುತ್ತಿರುವಾಗ ಸಾಗರದ ಮುತ್ತೇನೂ ನನಗೆ ಬೇಕಾಗಿಲ್ಲ. ಆದರೆ ಮರಳಿನಲ್ಲಿ ಆಟವಾಡುವಾಗ ಮುದ್ದಾದ ಕಪ್ಪೆಚಿಪ್ಪು ಸಿಕ್ಕರೆ ಅದರ ಒಡತಿ ಮಾತ್ರ ನಾನು ಎಂಬುದು ನೆನಪಿರಲಿ.
ಗಂಜಿಯಾದರೂ ಸರಿ, ಬೆಳದಿಂಗಳ ರಾತ್ರಿಯಲ್ಲಿ ಟೆರೇಸ್ ಮೇಲೆ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನಿಸಬೇಕು. ಅದು - ಇದು ಅಂತ ಗಂಟೆಗಟ್ಟಲೇ ಹರಟಬೇಕು. ಕಣ್ಣಲ್ಲಿ ಕಣ್ಣಿಟ್ಟು ಮೌನದಲ್ಲೇ ಯುಗಳಗೀತೆ ಹಾಡಬೇಕು. ಕೊನೆಗೆ ಚಂದ್ರನೂ ನಾಚುವಂತೆ ಒಂದಾಗಬೇಕು. ನಮ್ಮಿಬ್ಬರ ನಡುವಿನ ಹೊಂದಾಣಿಕೆ ನೋಡಿ ಪಕ್ಕದ ಮನೆಯ ಆಂಟಿ ಅಸೂಯೆ ಪಡಬೇಕು..... ಅಷ್ಟಾದರೆ ಬಾಳಿಗೊಂದು ಸಾರ್ಥಕತೆಯ ಸ್ಪರ್ಷ.
ಹೇ... ಇಷ್ಟಕ್ಕೇ ಕಥೆ ಮುಗಿದಿಲ್ಲ, ನಮ್ಮ ಮಗು ಓದಿ, ಅದು ಮದುವೆಯಾಗುವವರೆಗಿನ ಆಲೋಚನೆಗಳ ನೀಲಿನಕ್ಷೆ ಅದ್ಯಾವಾಗಲೋ ತಯಾರಾಗಿದೆ!! ಸದ್ಯಕ್ಕಿಷ್ಟು ಸಾಕು.
ನಿನ್ನ ಕರೆಗಾಗಿ ಕಾಯುತ್ತಿರುವ,
ಇಂತಿ ನಿನ್ನ ಗೆಳತಿ
- R. R. B.
Note : ಈ ಸಾಲುಗಳು ಕೇವಲ ಕಾಲ್ಪನಿಕ ಮಾತ್ರ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ